ನದಿ ನಾಡಿಗೆ ಜಲಕ್ಷಾಮ
Team Udayavani, Nov 27, 2017, 12:39 PM IST
ಕರಾವಳಿ ಜಿಲ್ಲೆಗಳು ಅಭಿವೃದ್ಧಿಯ ಆವೇಗದಲ್ಲಿ ಓಡುತ್ತಿವೆ. ಬೆಳೆಯುತ್ತಿರುವ ಜನಸಂಖ್ಯೆ, ಉದ್ಯಮಗಳು ಕೃಷಿ ಭೂಮಿ, ಅರಣ್ಯಗಳನ್ನು ನುಂಗುತ್ತಿವೆ. ನದಿಗಳ ನಾಡು ಮಾನವ ನಿರ್ಮಿತ ಕಾಂಕ್ರೀಟ್ ಆವರಣದೊಳಗೆ ಸಿಲುಕಿದೆ. ಊರು ಕಟ್ಟುವ ಉಮೇದಿನಲ್ಲಿ ನೀರಿನ ಬೇರು ಮರೆತ ಪರಿಣಾಮ, ನದಿ ನಾಡಿಗೆ ನೀರಿಲ್ಲದಂತಾಗುತ್ತಿದೆ.
ಶತಮಾನಗಳ ಹಿಂದೆ ದೇಶ ವಿದೇಶದ ಪ್ರವಾಸಿಗರೆಲ್ಲ ನಮ್ಮ ಕರಾವಳಿಯನ್ನು ಮೊದಲು ಕಂಡವರು. ಗ್ರೀಕ್, ಅರಬ್, ಡಚ್, ಪೋರ್ಚುಗೀಸ್, ಇಂಗ್ಲೀಷರೆಲ್ಲ ಸಮುದ್ರಯಾನಿಗಳಾಗಿ ಬಂದವರು. ಜಲಮಾರ್ಗದ ಮೂಲಕ ಬಂದು ನೆಲಮಾರ್ಗ ಹಿಡಿದ ಇವರನ್ನು ನಮ್ಮ ನದಿಗಳು ಆಗ ಹೆದರಿಸಿವೆ. ಸೇತುವೆಗಳಿಲ್ಲದ ಕಾಲದಲ್ಲಿ ಜೀವಭಯದಲ್ಲಿ ಪಾತಿ ದೋಣಿಯಲ್ಲಿ ದಾಟಬೇಕು, ಒಂದು ನದಿ ದಾಟಿದರೆ ಮತ್ತೂಂದು ಎದುರಾಗುತ್ತಿತ್ತು. ಕರಾವಳಿ ಪಯಣವೆಂದರೆ ದೂರ ದೇಶಕ್ಕೆ ಹೋಗುವಂತೆ ಕಷ್ಟವಾಗುತ್ತಿತ್ತೆಂದು ಶತಮಾನದ ಹಿಂದಿನ ಸರ್ವೆ ಸೆಟ್ಲಮೆಂಟ್ ವರದಿಗಳು ಹೇಳುತ್ತವೆ.
ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುತ್ತಿವೆ. ರೈಲು, ವಿಮಾನ ಸಂಚಾರವಿದೆ. ಆದರೆ ಕ್ರಿ,ಶ 1801ರ ಸಮಯದಲ್ಲಿ ಎತ್ತಿನ ಗಾಡಿಯೂ ಕರಾವಳಿಗೆ ಇರಲಿಲ್ಲ! ಆ ಕಾಲಕ್ಕೆ ಮೈಸೂರು ಸೀಮೆಯಲ್ಲಿ ಎತ್ತಿನ ಗಾಡಿ ಸಂಚಾರವಿತ್ತು. ಕರಾವಳಿಯಲ್ಲಿ ನದಿ, ಹಳ್ಳ ,ತೊರೆಗಳ ಕಾರಣ ಚಕ್ಕಡಿಗಳು ಓಡಾಡುವ ಮಾರ್ಗವಿರಲಿಲ್ಲ. ವರ್ಷದ ಮೂರು ನಾಲ್ಕು ತಿಂಗಳು ಮಳೆ , ಮಳೆ ಮಗಿದು ಬೇಸಿಗೆ ಬಂದರೂ ನದಿ ದಾಟಲಾಗದ ಪರಿಸ್ಥಿತಿ. ಸುಮಾರು ಕ್ರಿ,ಶ 1826ರ ನಂತರ ಎತ್ತಿನ ಗಾಡಿಗಳ ಸಂಚಾರ ಶುರುವಾಗಿ ನದಿ ದಾಟಿಸಲು ಜಂಜಾಲು(ಸಾಗಡ)ಗಳ (ಜೋಡು ದೋಣಿ) ಬಳಕೆ ಬಂದಿತು.
ಕಾಡಿನ ಸಂಪತ್ತು ಒಯ್ಯಲು ವ್ಯಾಪಾರಿ ನಾವೆಗಳು ನದಿಗಳ ಮೂಲಕ ಘಟ್ಟದ ಬೆಟ್ಟದ ತಪ್ಪಲವರೆಗೂ ಓಡಾಡಿವೆ. “ಊರಿನ ಸ್ಮಶಾನ, ಪರೂರ ಹೊಳೆ ಯಾವಾಗಲೂ ಹೆದರಿಸುತ್ತದೆ. ದೊರೆಗಂಟ ದೂರು, ಹೊಳೆಗಂಟ ಓಟ’ ಮಾತುಗಳು ನೆಲದ ನೀರಿನ ಒಡನಾಟದಲ್ಲಿ ಜನಿಸಿವೆ. ಮನೆಯಿಂದ ಮತ್ತೂಂದು ಊರಿಗೆ ಹೋಗುವುದೆಂದರೆ ದಾರಿಯಲ್ಲಿ ಸಚೇಲ(ಬಟ್ಟೆ ಹಾಕಿಕೊಂಡು) ಸ್ನಾನವಾಗುತ್ತಿತ್ತು! ಮೈ ಒದ್ದೆಯಾಗುವಷ್ಟು ನೀರು ಹರಿಯುತ್ತಿತ್ತು. “ತಾರಿ’ ದೋಣಿಯಲ್ಲಿ ನದಿ ದಾಟುವ ಜಾಗ , ಹೊಳೆಸಾಲಿನಲ್ಲಿ ನೀರಿಗಿಳಿದು ನಡೆದು ದಾಟುವ ಸ್ಥಳ “ದಾಟ್‌ಸಾಲು’, ಈ ಪದಗಳು 50 ವರ್ಷದ ಜನಕ್ಕೆಲ್ಲ ಚಿರಪರಿಚಿತ. ವರ್ಷದ ಆರೇಳು ತಿಂಗಳು ತುಂಬಿ ಹರಿಯುವ ನದಿಗಳು ಇತಿಹಾಸದ ಉದ್ದಕ್ಕೂ ಎದ್ದು ಕಾಣುವ ರಾಜ್ಯ-ಸೀಮೆಯ ಗಡಿ ಗುರುತುಗಳಾದವು. ಕರಾವಳಿಯ ಕಷ್ಟ-ಸುಖದ ಎರಡಕ್ಕೂ ಕಾರಣ ನೀರು ನೀರು ನೀರು ಮಾತ್ರ! ಇಲ್ಲಿನ ರಸ್ತೆ ಸೇತುವೆಗಳನ್ನು ಗಮನಿಸುತ್ತ ಹೋದರೆ ನದಿ, ಕೊಳ್ಳಗಳು ಸಾರಿಗೆಗೆ ಎಂಥ ಸವಾಲು ಒಡ್ಡಿದ್ದವೆಂದು ತಿಳಿಯುತ್ತದೆ. “ತಾರಿಗೆ ಸಂಕ ಹಾಕಿದರೆ ಸಾರಿಗೆ ಸುಖ, ಸಂಕಕ್ಕೆ ಸುಂಕ ಹಾಕಿದರೆ ಸರಕಾರಕ್ಕೆ ಸುಖ’ ಎಂಬ ಮಾತು ಹೀಗಾಗಿ ಇಲ್ಲಿ ಜನಜನಿತವಾಗಿದೆ.
ಎರಡನೇ ಬಂಕಿದೇವ ಆಲುಪೇಂದ್ರದೇವನ ಕಾಲದಲ್ಲಿ ಕ್ರಿ.ಶ 1305ರಲ್ಲಿ ಕರಾವಳಿಯಲ್ಲಿ ಭೀಕರ ಬರ ಬಂದಿತ್ತೆಂದು ಶಾಸನದ ದಾಖಲೆಗಳು ಹೇಳುತ್ತವೆ. ಕ್ರಿ.ಶ 1727ರಲ್ಲಿ ಮುಂಗಾರು ಮಳೆಯ ವಿಫಲತೆಯಿಂದ ಕ್ಷಾಮ ಬಂದಾಗ ಹೆತ್ತ ಮಕ್ಕಳನ್ನು ಮಾರಾಟ ಮಾಡಿ ಬದುಕಿದರಂತೆ ! ಕ್ರಿ.ಶ 1872ರಲ್ಲಿ ರಾಜ್ಯದ ಎಲ್ಲೆಡೆ ಬರ ಬಂದಿದ್ದರ ಪರಿಣಾಮ ಕರಾವಳಿಯಲ್ಲಿಯೂ ಕಾಣಿಸಿತು. ಕ್ರಿ,ಶ 1923-24ರಲ್ಲಿ ಜಿಲ್ಲೆಯ ನದಿಗಳೆಲ್ಲ ಪ್ರವಾಹದಿಂದ ಉಕ್ಕಿ ಹರಿದವು. ಕ್ರಿ.ಶ 1959, 1961, 1967, 1970, 1985ರ ನೆರೆ ನಾಡನ್ನು ತಲ್ಲಣಗೊಳಿಸಿದೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕಗಳು ಮಳೆ ಕೊರತೆಯಿಂದ ಸಂಕಷ್ಟದಲ್ಲಿ ಸಿಲುಕಿದರೆ ಕರಾವಳಿ ಅಧಿಕ ಮಳೆಯಿಂದ ತತ್ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳನ್ನು ಮಳೆ ಕೊರತೆಯಿಂದ ಕಳೆದ 2017ರಲ್ಲಿ ಬರಗಾಲ ಪ್ರದೇಶವೆಂದು ಸರಕಾರ ಘೋಸಿತ್ತು.
ನೀರಿನ ನೋಟ ವಿವರಿಸುವಾಗ ಭೂ ಬಳಕೆಯ ಬದಲಾವಣೆಯನ್ನು ತಪ್ಪದೇ ಗಮನಿಸಬೇಕಾಗುತ್ತದೆ. ತಲೆಗೆ ನೀರು ಹೊಯ್ದರೆ ಕಾಲಿಗೆ ಬರುತ್ತದೆಂಬ ಮಾತಿದೆ. ಘಟ್ಟದ ಸಂಪಾಜೆ, ಶಿರಾಡಿ, ಬಿಸಿಲೆ, ಚಾರ್ಮಾಡಿ, ಕೋಗಾರ್, ದೇವಿಮನೆ, ತಿನ್ನೆಘಾಟ್ ಹೀಗೆ ಎಲ್ಲೇ ಮಳೆ ಸುರಿದರೂ ನೀರು ಸರಾಗವಾಗಿ ನದಿ ಮೂಲಕ ಕರಾವಳಿ ತಲುಪುತ್ತದೆ. ಕುಂದಾಪುರ-ಉಡುಪಿ-ಮಂಗಳೂರು-ಪುತ್ತೂರುಗಳಲ್ಲಿಯೂ 3,000-3,500 ಮಿಲಿ ಮೀಟರ್ ಮಳೆ ಸುರಿಯುತ್ತದೆ. ಅಂದರೆ ಇಲ್ಲಿನ ಪ್ರತಿ ಚದರ ಮೀಟರ್ ಜಾಗದಲ್ಲಿ 3,000 ರಿಂದ 7,000 ಲೀಟರ್ ಮಳೆ ನೀರು ಸುಮಾರು 115 ಮಳೆ ದಿನಗಳಲ್ಲಿ ಸುರಿಯುತ್ತದೆ. ಕಡಿದಾದ ಘಟ್ಟದ ಮಳೆಕಾಡಿನ ಪ್ರತಿ ಎಕರೆಯಲ್ಲಿ ವಾರ್ಷಿಕ ಒಂದರಿಂದ ಎರಡು ಕೋಟಿ ಲೀಟರ್ ಮಳೆ ನೀರು ಸುರಿಯುತ್ತದೆ. ಕಾಡಿನಲ್ಲಿ ಸುರಿದ ಮಳೆ ನೀರು ಮರಗಳ ಬೇರಿನಾಳಕ್ಕೆ ಇಳಿದು ಒರತೆ ಜಲವಾಗಿ ಹರಿಯುತ್ತವೆ. ನೇತ್ರಾವತಿ, ಗುರುಪುರ, ಕುಮಾರಧಾರಾ, ಪಯಸ್ವಿನಿ, ಅಘನಾಶಿನಿ, ವೆಂಕಟಾಪುರ, ಗಂಗಾವಳಿ, ಕಾಳಿ ನದಿಗಳು ಕರ್ನಾಟಕ ಕರಾವಳಿಯ ಜೀವನಾಡಿಗಳಾಗಲು ಕಾಡಿನ ಕೊಡುಗೆ ಇದೆ.
ಸೀತಾನದಿ, ಎಣ್ಣೆಹೊಳೆ, ಪಲ್ಗುಣಿ, ಸೌಪರ್ಣಿಕಾದಂಥ ಉಪ ನದಿಗಳೂ ಜನಜೀವನಕ್ಕೆ ಚಿರಪರಿಚಿತ. ಯಾವ ನದಿಯಲ್ಲಿ ಎಂಥ ಮೀನು, ಮೊಸಳೆ, ನೀರುನಾಯಿಗಳಿವೆಯೆಂದು ತಲೆಮಾರಿನಿಂದ ತಲೆಮಾರಿಗೆ ಜಾnನ ಹರಿದಿದೆ. ಬೇಸಿಗೆ ಆರಂಭದಲ್ಲಿಯೇ ಹಳ್ಳ, ತೋಡುಗಳಿಗೆ ಒಡ್ಡು (ಕಟ್ಟ) ನಿರ್ಮಿಸಿ ಬೇಸಿಗೆಯ ಕೃಷಿ ಬದುಕಿಸಿದ ತಂತ್ರ ಇಲ್ಲಿಯದು. ಕಟ್ಟಿನ ನೀರು ಬಿಟ್ಟರೂ ತೊಂದರೆ ಇಲ್ಲ, ದುಡಿದರೆ ಊಟಕ್ಕೂ ತೊಂದರೆ ಇಲ್ಲ. ಹಳೆಯ ನೀರು ಕೊಚ್ಚಿ ಹೋಗಿ ಹೊಸ ನೀರು ನುಗ್ಗುತ್ತದೆಂಬ ಜನಪದ ನುಡಿಗಳು ಬೆಟ್ಟದಿಂದ ವರ್ಷವಿಡೀ ಹರಿಯುವ ಹಳ್ಳದ ನೀರು ನೋಡಿ ಉದಯಿಸಿವೆ. ನೀರಿದ್ದಲ್ಲಿ “ನೇಮ’ ಜಾಸ್ತಿ ಎಂಬಂತೆ ಪವಿತ್ರ ಕ್ಷೇತ್ರಗಳು ನದಿ ದಂಡೆಯ ಉದ್ದಕ್ಕೂ ಇವೆ. ಕೊಲ್ಲೂರು, ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಉಡುಪಿ, ಗೋಕರ್ಣ, ಇಡಗುಂಜಿ ಮುಂತಾದ ಪವಿತ್ರ ಕ್ಷೇತ್ರಗಳನ್ನು ಪಟ್ಟಿಮಾಡಿದರೆ ನದಿ ತೀರದ ದೇವ ನೆಲೆಯ ದರ್ಶನವಾಗುತ್ತದೆ. ಜಂಗಮ, ಮಾನಸ, ಸ್ಥಾವರವೆಂದು ತೀರ್ಥಗಳನ್ನು ವರ್ಗೀಕರಿಸಲಾಗುತ್ತದೆ. ಸ್ಥಾವರ ತೀರ್ಥದಲ್ಲಿ ಧರ್ಮತೀರ್ಥ, ಅರ್ಥತೀರ್ಥ, ಕಾಮತೀರ್ಥ, ಮೋಕ್ಷತೀರ್ಥವೆಂಬ ಭಾಗವಿದೆ. ಕರಾವಳಿಯ ನದಿ ಹರಿದಲ್ಲೆಲ್ಲ ಸತ್ಯ, ಶಿವ, ಸೌಂದರ್ಯದ ಉಪಾಸನೆ ನಡೆದಿದೆ. ಧರ್ಮ, ವ್ಯಾಪಾರ, ವಿದ್ಯೆ, ಕಲೆ ಎಲ್ಲವೂ ಶ್ರೀಮಂತವಾಗಿ ಅರಳಲು ನದಿ ನೀರಿನ ಕೊಡುಗೆ ಇದೆ.
ಅಡಿಕೆ, ಬಾಳೆ, ತೆಂಗು, ಭತ್ತ, ತರಕಾರಿ ಬೇಸಾಯ ಬಹುತೇಕ ನೈಸರ್ಗಿಕವಾಗಿ ಹರಿಯುವ ನೀರು ಬಳಸಿ ಬೆಳೆದಿದೆ. ಕ್ರಿ.ಶ 1961ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟೂ ನೀರಾವರಿ ಕ್ಷೇತ್ರಗಳಲ್ಲಿ ಶೇ.13ರಷ್ಟು ಪ್ರದೇಶ ಕೆರೆಗಳಿಂದ ನೀರಾವರಿಯಾಗುತ್ತಿತ್ತು. 2001ರಲ್ಲಿದ್ದ ಕೆರೆ ನೀರಾವರಿ ಕ್ಷೇತ್ರ ಪ್ರತಿಶತ 1.67 ಮಾತ್ರ! ಕೆರೆಗಳು ಹೂಳಿನಿಂದ ತುಂಬಿ ಹೋಗಿವೆ. ಸ್ವಾಭಾವಿಕವಾಗಿ ನೀರಿನ ಲಭ್ಯತೆ ಹೆಚ್ಚಿದ್ದ ಕಾರಣ ಇಲ್ಲಿ ಕೆರೆ ನಿರ್ಮಾಣ ಮಹತ್ವ ಪಡೆದಿಲ್ಲ. ಅಣೆಕಟ್ಟು ನಿರ್ಮಿಸಿ ಕೃಷಿಗೆ ನೀರುಣಿಸುವ ಯೋಜನೆಗಳೂ ಇಲ್ಲ. ಮಳೆ ನಂಬಿ ಬದುಕಿದ ಕರಾವಳಿ ಕಂಗಾಲಾಗಿದೆ. ಇಂದು ಕರಾವಳಿಯ ಗುಡ್ಡಗಳೂ ಬದಲಾಗಿವೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಹಲವು ಗುಡ್ಡಗಳನ್ನು ನುಂಗಿದೆ. ಮಂಗಳೂರಿಂದ ಪುತ್ತೂರು, ಮೂಡಬಿದರೆ ಸೇರಿದಂತೆ, ಯಾವುದೇ ರಸ್ತೆಯಲ್ಲಿ ಸಂಚರಿಸಿದರೂ ಗುಡ್ಡದ ಅಗೆತ ಜೋರಾಗಿದೆ. ಯಾಣದ ಭೈರವ ಪುರಾಣದಲ್ಲಿ ಗುಡ್ಡಗಳಿಗೆ ರೆಕ್ಕೆಗಳಿದ್ದ ಕಥೆ ಬರುತ್ತದೆ. ಆಗ ಮನಸೋ ಇಚ್ಚೆ ಗುಡ್ಡಗಳು ಎಲ್ಲೆಂದರಲ್ಲಿ ಹಾರಾಡುತ್ತಿದ್ದವಂತೆ! ಆಗ ವಿಷ್ಣು ಅವುಗಳ ರೆಕ್ಕೆ ಕತ್ತರಿಸಿದನು. ಇದರಿಂದ ಸಹ್ಯರಾಜ ತೊಂದರೆಗೆ ಸಿಲುಕಿದಾಗ ವಿಶ್ವಕರ್ಮರ ನೆರವು ಪಡೆದು ಶಿವ ಯಾಣದಲ್ಲಿ ಕಲ್ಲಿನ ಗುಹೆ ರಚಿಸಿದನೆಂಬ ಮಾತಿದೆ. ಈಗ ಕರಾವಳಿಯ ಉದ್ದಕ್ಕೂ ಗುಡ್ಡಗಳ ರೆಕ್ಕೆ ಕತ್ತರಿಸಲಾಗಿದೆ. ಕತ್ತರಿಸಿದ ನೆಲೆಯಿಂದ ಮಣ್ಣು ಸವಕಳಿಯಾಗಿ ನದಿ ನೆತ್ತರಂತೆ ಹರಿಯುತ್ತಿದೆ.
ನದಿಯಂಚಿನಲ್ಲಿ ನೀರ ನಿಶ್ಚಿಂತೆಯಲ್ಲಿದ್ದ ಕೃಷಿ ಭೂಮಿಗಳು ಮಣ್ಣು ತುಂಬಿ ಬಡಾವಣೆಗಳಾಗಿವೆ. ಉದ್ಯಮದ ನೆಲೆಯಾಗಿವೆ. ನದಿ ಸಂಗಮದ ಸಮುದ್ರ ತಟದಿಂದ ನೋಡುತ್ತ ಹೋದರೆ ನದಿ ದಂಡೆಯ ಮೂಲ ಕಾಡು ಎಲ್ಲಿಯೂ ಉಳಿದಿಲ್ಲ. ಹತ್ತಿಪ್ಪತ್ತು ಅಡಿ ಆಳದ ಗುಂಡಿಗಳು ನದಿ ಪಾತ್ರದ ನೈಸರ್ಗಿಕ ಕೆರೆಗಳಂತಿದ್ದವು. ಘಟ್ಟದ ತಪ್ಪಲಿನಿಂದ ಸಾಗರ ಸೇರುವವರೆಗೆ 50-60 ಕಿಲೋ ಮೀಟರ್ ಹರಿಯುವ ನದಿಯ ಮಡಿಲಲ್ಲಿ ಇಂಥ ನೂರಾರು ಚೆಂದದ ನಿಸರ್ಗ ನಿರ್ಮಿತ ನೀರ ನಿಲ್ದಾಣಗಳಿದ್ದವು. ವರ್ಷವಿಡೀ ನದಿ ನೀರು ಹಿಡಿದಿಟ್ಟು ಜಲಚರ, ಕೃಷಿ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದವು. ಆದರೆ ಕಳೆದ 40 ವರ್ಷಗಳಲ್ಲಿ ಅರಣ್ಯ ನಾಶ, ಅಭಿವೃದ್ಧಿ ಫಲವಾಗಿ ಆಳದ ಗುಂಡಿಗಳಲ್ಲಿ ಹೂಳು ತುಂಬಿದೆ, ಮೊಸಳೆ ಗುಂಡಿಗಳು ಕಣ್ಮರೆಯಾಗಿ ಬೇಸಿಗೆಯಲ್ಲಿ ಆಟದ ಅಂಗಳದಂತೆ ಕಾಣಿಸುತ್ತಿವೆ. ಶತಮಾನಗಳ ಹಿಂದೆ ನಾವೆಗಳು ಸಂಚರಿಸಿದ ನದಿಯಲ್ಲಿ ಅಪಾರ ಹೂಳು ತುಂಬಿದೆ, ಮರಳು ತೆಗೆಯುವ ಕಾರ್ಯಗಳು ನದಿಗಳನ್ನೇ ನುಂಗಿವೆ.
ಮಂಗಳೂರು, ಉಡುಪಿ, ಕುಂದಾಪುರದ ಯಾವುದೇ ನಗರವನ್ನು ಸುತ್ತಾಡುತ್ತ ಪರಿಸರದ ಲಕ್ಷಣಗಳನ್ನು ಓದಬೇಕು. ಉದ್ಯಮದ ಬೆಳವಣಿಗೆ ಶುರುವಾದ ಆರಂಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಹೊಸ ಜಾಗ ವಿಸ್ತರಣೆಗೆ ಸುತ್ತಮುತ್ತಲಿನ ನೆಲೆಯತ್ತ ನೋಡುತ್ತಿದ್ದರು. ಲ್ಯಾಟ್ರೆ„ಟ್ ಕಲ್ಲುಗುಡ್ಡದಲ್ಲಿ ಮನೆ ಬೆಳೆಸಿದರು. ಅಕ್ಕಪಕ್ಕದ ಭತ್ತದ ಗದ್ದೆಗೆ ಮಣ್ಣುಹಾಕಿದ ಕಾರಣದಿಂದ ಕಟ್ಟಡ ಮೇಲೆದ್ದಿತು, ಹಳ್ಳಿಗಳನ್ನು ನಗರದ ತೆಕ್ಕೆಗೆ ಸೇರಿಸಿಕೊಂಡು ಬಡಾವಣೆಗಳು ಹಬ್ಬಿದವು. ಸೆಂಟ್ಸ್ ಭೂಮಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತ ಹೊರಟಾಗ ಅಗಲಕ್ಕೆ ಬೆಳೆಯುತ್ತಿದ್ದ ಪೇಟೆ ಗಗನಮುಖೀಯಾಯ್ತು. ಮೂರಂತಸ್ತಿನ ಕಟ್ಟಡವನ್ನು ಅಚ್ಚರಿಯಿಂದ ನೋಡುತ್ತ ನಿಲ್ಲುತ್ತಿದ್ದ ನೆಲೆಯಲ್ಲಿ ಹತ್ತಾರು ಅಂತಸ್ತಿನ ಮಹಾಮನೆಗಳೆದ್ದಿವೆ. ಮಂಗಳೂರಿನ ನೆರಳು ಉಡುಪಿಯ ಮೇಲೆ, ಉಡುಪಿಯ ಪ್ರತಿಬಿಂಬ ಕುಂದಾಪುರ, ಭಟ್ಕಳ, ಕಾರವಾರಗಳ ಮೇಲೆ ಬೀಳುತ್ತ ನಿರ್ಮಾಣದ ನೆಗೆತ, ಅಗೆತ ಎದ್ದು ಕಾಣುತ್ತಿದೆ. ಪುಟ್ಟಪುಟ್ಟ ಹಳ್ಳಿಯಲ್ಲೂ ಕಾಂಕ್ರೀಟ್ ಆಕಾಶ ಗೋಪುರ ಕಾಣಿಸುತ್ತಿದೆ. ಯಾವ ಮರವೂ ಬೆಳೆಯದ ಎತ್ತರಕ್ಕೆ ಮನೆಗಳು ಬೆಳೆದಿವೆ, ಕರಾವಳಿಯ ಚಿತ್ರ ಅದಲು ಬದಲಾಗಿದೆ.
‘ನದಿಗಳ ನಾಡು’ ಹೆಸರು ಬಹಳ ಚೆಂದವಿದೆ. ಆದರೆ ಕುಡಿಯುವ ನೀರಿಗೆ ತತ್ತರಿಸುವ ಪರಿಸ್ಥಿತಿ ದಶಕಗಳಿಂದ ಹೆಚ್ಚುತ್ತಿದೆ. ನಡುರಾತ್ರಿ ನೀರಿಗಾಗಿ ಕಾಯುವ ದೃಶ್ಯ ಕಾಣಿಸುತ್ತಿದೆ, ಟ್ಯಾಂಕರ್ ಓಡಾಟ ಮಾಮೂಲಿಯಾಗಿದೆ. ಬೃಹತ್ ನೀರಾವರಿ ಯೋಜನೆಗಳು ಇಲ್ಲಿಲ್ಲ. ನದಿ ನಂಬಿದ ನೆಲೆಯಲ್ಲಿ ಕೆರೆಗಳು ಕಡಿಮೆ ಇವೆ. ಮಳೆ ಮುಗಿದು ನವೆಂಬರ್ ತಿಂಗಳಲ್ಲಿ ಹಳ್ಳಕ್ಕೆ ಒಡ್ಡು ಹಾಕಿ ಕೃಷಿ ಗೆಲ್ಲಿಸಿದ ಹಿರಿಯರ ಪಾರಂಪರಿಕ ವ್ಯವಸ್ಥೆ ಮರೆತುಹೋಗಿದೆ. ಊರು ಕಷ್ಟಕ್ಕೆ ಸಿಲುಕಿದೆ. ಮಳೆನೀರು ಹಿಡಿದಿಟ್ಟು ಬೇಸಿಗೆಯಲ್ಲಿ ನಿರಂತರವಾಗಿ ತೊರೆಯಾಗಿ ಹರಿಸುತ್ತಿದ್ದ ಕಾಡು ಕರಗಿದ ಫಲವಿದು. ಗುಡ್ಡದ ಎಕರೆ ಅಡಿಕೆ, ತೆಂಗಿನ ತೋಟಗಳಿಗೆ ದಿನಕ್ಕೆ 10-15 ಸಾವಿರ ಲೀಟರ್ ನೀರು ಬೇಕು. ಹಳ್ಳ ಒಣಗಿದಾಗ ತೆರೆದ ಬಾವಿಗಳು ಬಂದವು, ಅವು ಕೈಕೊಟ್ಟಾಗ ಕೊಳವೆ ಬಾವಿಗಳು ಹೆಚ್ಚಿದವು. ನಿಯಮದ ಪ್ರಕಾರ ಬಾವಿಯಿಂದ ಬಾವಿಗೆ ಕನಿಷ್ಠ 250 ಮೀಟರ್ ಅಂತರವಿರಬೇಕು. ಅಂದರೆ ಹತ್ತು ಎಕರೆ ಜಮೀನಿಗೆ ಒಂದು ಬಾವಿ ತೆಗೆಯಬಹುದು. ಆದರೆ ಈಗ ಎಕರೆಗೆ ಹತ್ತಾರು ಕೊಳವೆ ಬಾವಿಗಳನ್ನು ಕರಾವಳಿ ನೋಡುತ್ತಿದೆ.
ನದಿಗಳು ಬೇಸಿಗೆಯಲ್ಲಿ ಒಣಗಲು ಆರಂಭವಾದರೆ ಉಪ್ಪು ನೀರು ಒಳನುಸುಳುತ್ತದೆ. ಇದು ಬಹುದೊಡ್ಡ ಸಮಸ್ಯೆ. ಜಲಸಂರಕ್ಷಣೆಯ ಕಾರ್ಯ ಇಲ್ಲಿ ವ್ಯಾಪಕವಾಗಿ ನಡೆಯಬೇಕು. ಅರಣ್ಯ ಅಭಿವೃದ್ಧಿ, ಗುಡ್ಡ ಬೆಟ್ಟಗಳಲ್ಲಿ ಜಲಕೊಯ್ಲು, ಖಾಸಗಿ ಕೆರೆಗಳ ನಿರ್ಮಾಣ ಬೇಕು. ಒಂದೆರಡು ಎಕರೆ ಭೂಮಿ ಇದ್ದವರೂ ಸಣ್ಣಪುಟ್ಟ ಕೃಷಿ ಹೊಂಡ ನಿರ್ಮಿಸಬೇಕು. ಬೇಸಿಗೆಯಲ್ಲಿ ಹರಿಯುವ ಹಳ್ಳಗಳಿಗೆ ತಾತ್ಕಾಲಿಕ ಒಡ್ಡು ನಿರ್ಮಿಸಬೇಕು. ನದಿಯಂಚಿನ ಅರಣ್ಯ ಸಂರಕ್ಷಣೆ, ನೀರು ಕಡಿಮೆ ಬಳಸುವ ತಂತ್ರ ಅಳವಡಿಸುವುದರ ಜೊತೆಗೆ ಮುಚ್ಚಿಗೆ ಬೆಳೆಗಳನ್ನು ಅಡಿಕೆ ತೋಟ, ಭತ್ತದ ಗದ್ದೆಗಳಲ್ಲಿ ಬೆಳೆಸುವುದರ ಮೂಲಕ ಮಣ್ಣಿನ ತೇವ ಉಳಿಸಬಹುದು. ಏರುತಗ್ಗಿನ ಭೂ ದೃಶ್ಯಗಳನ್ನು ನಿಸರ್ಗ ರೂಪಿಸಿದೆ. ಕೋಟ್ಯಂತರ ವರ್ಷಗಳಿಂದ ಇರುವ ಇಂಥ ಬೆಟ್ಟ, ಗುಡ್ಡಗಳನ್ನು ಬಗೆಯುವುದು, ನೆಲಸಮ ಮಾಡುವ ಕೃತ್ಯಗಳು ತಲೆಯ ಮೇಲಿನ ನೀರಿನ ಬಿಂದಿಗೆ ಒಡೆದಂತೆ! ಭವಿಷ್ಯದ ನೀರಿನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಕರಾವಳಿ ಪರಿಸ್ಥಿತಿ ಹೇಗಿದೆಯೆಂದರೆ 120 ಕಿಲೋ ಮೀಟರ್ ವೇಗದಲ್ಲಿ ಹೆದ್ದಾರಿಯಲ್ಲಿ ನಾವು ವಾಹನದಲ್ಲಿ ಓಡುತ್ತಿದ್ದೇವೆ. ಅರಣ್ಯ ನಾಶದ ಕಾರಣ ಬೆಟ್ಟದಿಂದ ನದಿಯ ಸಹಿ, ನೀರು ಇಷ್ಟೇ ವೇಗದಲ್ಲಿ ಸಾಗರ ತಲುಪುತ್ತಿದೆ, ನದಿ ನಾಡಿಗೆ ನೀರಿಲ್ಲದಂತಾಗಿದೆ.
ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.