ಅನ್ನದ ಆತ್ಮ ನದಿಯ ನಾಳೆಗಳು


Team Udayavani, Nov 13, 2017, 11:42 AM IST

annada-aatma.jpg

ತುಂಗಭದ್ರೆಯ ಭತ್ತದ ಸೀಮನೆಯಲ್ಲಿ ಅಣೆಕಟ್ಟೆಯ ಹೂಳುಗಳು, ಕಾಲುವೆಯ ನೀರಿನ ಲಭ್ಯತೆಯ ಮಾತು ಚರ್ಚೆಯಾಗುತ್ತದೆ. ಹೊಲದಲ್ಲಿ ಎಷ್ಟು ಮಳೆ ಸುರಿಯಿತೆಂದು ಅಂದಾಜಿಲ್ಲದಿದ್ದರೂ ನೂರಾರು ಕಿ.ಲೋ ಮೀಟರ್‌ ದೂರದಿಂದ ಹರಿದು ಬರುವ ನೀರು ನಂಬಿದ್ದೇವೆ. ಪಶ್ಚಿಮ ಘಟ್ಟದ ಈ ನದಿ ಮೂಲದ ನೆಲೆಯ ಅರಣ್ಯ, ಕೃಷಿ ಜನಸಂಖ್ಯೆಯಲ್ಲಿ ದೊಡ್ಡ ಬದಲಾವಣೆಯಾಗಿದೆ. ತಾಯಿ ತುಂಗೆ ಅಳುತ್ತಿದ್ದಾಳೆ. ಅನ್ನ ನೀಡುವ ಅರಣ್ಯದ ನೋವು ಇಲ್ಲಿದೆ. 

ಮಳೆಗಾಲ ಶುರುವಾದಾಗ ಪತ್ರಿಕೆಗಳಲ್ಲಿ ರಾಜ್ಯದ ಮಳೆ ಮಾಹಿತಿ ಗಮನಿಸುತ್ತೇವೆ. ದಿನದ ಅತಿಹೆಚ್ಚು ಮಳೆ ಎಲ್ಲಿ ಸುರಿಯಿತೆಂದು ನೋಡುವಾಗ ತೀರ್ಥಹಳ್ಳಿ, ಶೃಂಗೇರಿ, ಕುದುರೆಮುಖ, ಆಗುಂಬೆಯ ಹೆಸರು ಕಾಣಿಸುತ್ತದೆ. ಸಮುದ್ರ ಮಟ್ಟದಿಂದ ಸುಮಾರು 550-800 ಮೀಟರ್‌ ಎತ್ತರಕ್ಕೆ ಹಬ್ಬಿದ ಹಸಿರು ಬೆಟ್ಟದ ಸಾಲಿನ ಪಶ್ಚಿಮ ಘಟ್ಟ ಮಳೆಯ ಮುಖ್ಯ ನೆಲೆ. ಮುಂಗಾರಿನ ಸೂಚನೆಗಳು ಕರಾವಳಿಯಲ್ಲಿ ಶುರುವಾಗಿ ಆರ್ಭಟ ಇಲ್ಲಿ ವಿಜೃಂಬಿಸುತ್ತದೆ. ಬಯಲುಸೀಮೆಯ  ಚಿತ್ರದುರ್ಗ, ರಾಯಚೂರು, ಗದಗಗಳ ವಾರ್ಷಿಕ ವಾಡಿಕೆ ಮಳೆ ಮೂರು ನಾಲ್ಕು ತಾಸುಗಳ ಸೀಮಿತ ಸಮಯದಲ್ಲಿ ಇಲ್ಲಿ ಸುರಿಯುತ್ತದೆ.

ತೀರ್ಥಹಳ್ಳಿ- ಕಾರ್ಕಳದ ದಾರಿಯಲ್ಲಿನ ಆಗುಂಬೆ ರಾಜ್ಯದ ಅತ್ಯಧಿಕ ಮಳೆ ನೆಲೆಯಾಗಿದ್ದು ದಕ್ಷಿಣದ ಚಿರಾಪುಂಜಿಯೆಂದು ಚಿರಪರಿಚಿತ. ಸಮುದ್ರ ಮಟ್ಟದಿಂದ  643 ಮೀಟರ್‌ ಎತ್ತರದ ಬೆಟ್ಟದು, ಇದೇ ಸಾಲಿನಲ್ಲಿ 78 ಕಿಲೋ ಮೀಟರ್‌ ದೂರದ ಚಿಕ್ಕಮಗಳೂರಿನ  ಕುದುರೆಮುಖ 1894 ಮೀಟರ್‌ ಎತ್ತರದ ಗಿರಿಧಾಮ. ನೇತ್ರಾವತಿ, ತುಂಗಾ, ಭದ್ರಾ, ಎಣ್ಣೆಹೊಳೆ, ಸೀತಾನದಿಗಳೆಲ್ಲ ಬೆಟ್ಟದ ಅಕ್ಕರೆಯ ಕುವರಿಯರು. “ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿ’ ಎನ್ನುತ್ತೇವೆ. ಒಮ್ಮೆ ಘಟ್ಟದ ಬೆಟ್ಟದ ಸಾಲಿನಲ್ಲಿ ಸಾಗಿದರೆ ನದಿಗಳ ಸತ್ಯ ದರ್ಶನವಾಗುತ್ತದೆ. ಕೋಟ್ಯಂತರ ವರ್ಷಗಳಿಂದ ಕಾಸಗೊಂಡು ಮಳೆ ಕಾಡು ಈಗ ಹೇಗಿದೆಯೆಂದು ಕಾಣಿಸುತ್ತದೆ.

ರಾಜ್ಯದಲ್ಲಿ ಅತಿಹೆಚ್ಚು ಮಳೆ ನೋಡಿದ ಮನುಷ್ಯ ಯಾರು? ಆಗುಂಬೆಯ ಹಿರಿಯರೆಂದು ಈಗ ಥಟ್ಟನೆ ಹೇಳಬಹುದು. ಇಲ್ಲಿ ಮಳೆ ಅಳೆಯುವ ಕೇಂದ್ರವಿದೆ. ಸುರಿಯುವ ಮಳೆಯ ಹನಿ ಹನಿಯ ಲೆಕ್ಕ ಇಡುವ ವಾಮನ ಶೆಣೈ(67) ರಾಜ್ಯದ ಅಧಿಕೃತ ಮಳೆ ಮನುಷ್ಯರಾಗಿ ಕಾಣಿಸುತ್ತಾರೆ. ಇವರದು ಮೂಲತಃ ಚಿಕ್ಕಮಗಳೂರಿನ ಕಳಸ.  ಕ್ರಿ.ಶ 1956ರಲ್ಲಿ ಆಗುಂಬೆಗೆ ಬಂದವರು. ಅಲ್ಲಿನ ಹೈಸ್ಕೂಲ್‌ನಲ್ಲಿ ಕಾರ್ಯನಿರ್ವಸುತ್ತಿದ್ದ ಕೃಷ್ಣಮೂರ್ತಿ ಹೆಬ್ಟಾರರ ಸಹಕಾರದಿಂದ ಶಾಲೆಯಲ್ಲಿ ಅಟೆಂಡರ್‌ ನೌಕರಿ ಪಡೆದರು. ಶಾಲೆಯ ಅಂಗಳದಲ್ಲಿ ಮಳೆ ಮಾಪನ ಕೇಂದ್ರವಿತ್ತು.

ಅಟೆಂಡರ್‌ ಕೆಲಸದ ಜೊತೆ ಮಳೆ ಅಳೆಯುವ ಕೆಲಸವೂ ಜೊತೆಯಾಯಿತು. ವಾಮನ್‌ ಕಳೆದ 40 ವರ್ಷಗಳಿಂದ ಪ್ರತಿದಿನ ಮಳೆ ಅಳೆಯುವಲ್ಲಿ ಮಗ್ನರಾಗಿದ್ದಾರೆ. ದಿನಕ್ಕೆ ನಾಲ್ಕು ಸಾರಿ ಮಾಪಕ ಗಮನಿಸಿ ಕೇಂದ್ರ ಸರಕಾರದ ಹವಾಮಾನ ಇಲಾಖೆಗೆ ವರದಿ ಸಲ್ಲಿಸುವ ಕೆಲಸ. ವರ್ಷದ 365 ದಿನವೂ ಹವಾಮಾನ ವರದಿ ಸಲ್ಲಿಸುವುದು ಕಡ್ಡಾಯವಾದ್ದರಿಂದ ನೆಂಟರ ಮನೆ, ಹಬ್ಬ, ಜಾತ್ರೆಯ ತಿರುಗಾಟ ಅಸಾಧ್ಯ. ಅಷ್ಟೇಕೆ, ಮಗಳ ಮನೆಗೂ ಹೋಗಲು ಬಿಡುವಿಲ್ಲದ ಇವರ ವೈಖರಿ ಕಂಡ ಅಳಿಯ, ಮಳೆ ಅಳೆಯುವ ಕೆಲಸ ಬಿಡಲು ಹೇಳಿದ್ದೂ ಇದೆ. ಆದರೆ ಚಿಕ್ಕಂದಿನಿಂದ ಹಿಡಿದ ಕೆಲಸ ಅಕ್ಕರೆಯಲ್ಲಿ ಮುಂದುವರಿಸಿದ ತಪಸ್ವಿ. 

ಪಕ್ಷಿ ತಜ್ಞ, ಅರಣ್ಯ ತಜ್ಞ, ಉರಗ ತಜ್ಞರೆಂದು ಪರಿಸರ ಪರಿಣಿತರನ್ನು ಗುರುತಿಸುತ್ತೇವೆ. ಒಬ್ಬ ವ್ಯಕ್ತಿ ಒಂದು ವಿಷಯದಲ್ಲಿ ನಿಜವಾದ ನೈಪುಣ್ಯತೆ ಪಡೆಯಲು “10,000 ಸಾವಿರ ಗಂಟೆಗಳ ಕಾಯಕ’ ನಿಯಮವಿದೆ. ಯಾವುದೇ ವಿಷಯದ ಕುರಿತು ಆಸಕ್ತಿಯಿಂದ ಹತ್ತು ವರ್ಷ ಕಾರ್ಯನಿರ್ವಸಿದರೆ ತಜ್ಞತೆ ಮೂಡುತ್ತದೆ. ಪ್ರೌಢಶಾಲಾ ಶಿಕ್ಷಣದವರೆಗೆ ಓದಿದ ವಾಮನ ಶೆಣೈ ಇಂದು ಆಗುಂಬೆಯ ಮಳೆ ವಿಚಾರದಲ್ಲಿ  ಅರಿವಿನ ಬೆಟ್ಟವಾಗಿ ಬೆಳೆದದ್ದು ಹೀಗೆ! ವಾಮನರ ಜಗತ್ತು ಮಳೆ ಮಾಫ‌ಕದಲ್ಲಿದೆ. ನಿತ್ಯವೂ ಮಳೆ ಗಾಳಿಯ ಕಿರಿಕಿರಿ ಅನುಭವಿಸುತ್ತ, ಖಚಿತ ಮಾಹಿತಿ ದಾಖಲಿಸುತ್ತ ಬೆಳೆದ ಇವರಲ್ಲಿ ಮಳೆ ಗುಣಗಳ ಕುರಿತ ಅನುಭವ ಜನ್ಯ ಜ್ಞಾನವಿದೆ.

40 ವರ್ಷಗಳ ಹಿಂದೆ ಸುರಿಯುತ್ತಿದ್ದ ಮಳೆಗೂ, ಈಗ ಬರುವ ಮಳೆಗೂ ವ್ಯತ್ಯಾಸವನ್ನು ಇವರು ಗುರುತಿಸುತ್ತಾರೆ.  ಕ್ರಿ.ಶ 1962ರಲ್ಲಿ 11,341.5 ಮಿಲಿ ಮೀಟರ್‌ ಅಬ್ಬರದ ಮಳೆ ಸುರಿದ ದಾಖಲೆ ಆಗುಂಬೆಯದಾಗಿದೆ. ಅತ್ಯಂತ ಕಡಿಮೆ ಮಳೆ ಕ್ರಿ.ಶ 1987ರಲ್ಲಿ 5232.8 ಮಿಲಿ ಮೀಟರ್‌ ಸುರಿದಿದೆ. ಒಂದೇ ದಿನದಲ್ಲಿ 24 ಇಂಚು ಸುರಿದ ಕುಂಭದ್ರೋಣದ ಆರ್ಭಟವೂ ನಡೆದಿದೆ. ತೀರ್ಥಹಳ್ಳಿ-ಆಗುಂಬೆಯ ನಡುವೆ ಒಂದು ವಾರ ಸಂಚಾರ ಬಂದ್‌ ಆದ ದಿನಗಳಿವೆ. ವರ್ಷಕ್ಕೆ 380-400 ಇಂಚು ಮಳೆ ಸುರಿಯುತ್ತಿದ್ದ ಇಲ್ಲಿ ಇತ್ತೀಚಿನ ವರ್ಷಗಳಲ್ಲಿ 280 ಇಂಚು ಸುರಿದರೆ ಹೆಚ್ಚು ಎನ್ನುವಂತಾಗಿದೆ.

ದಶಕಗಳ ಹಿಂದೆ ಮಳೆಯ ಜೊತೆ 100-120 ಕಿಲೋ ಮೀಟರ್‌ ವೇಗದ ಬಿರುಗಾಳಿ ಇತ್ತು, ಈಗ ಗಾಳಿಯ ವೇಗ ಗಣನೀಯವಾಗಿ ಕಡಿಮೆಯಾಗಿದೆ, “ದಗಲೆ’ (ಕಂಬಳಿಯ ಅಂಗಿ) ಹಾಕಿಕೊಂಡು ನಾಲ್ಕು ತಿಂಗಳು ಕಾಲ ನೂಕಬೇಕಿದ್ದ ಮಳೆಯ ಚಳಿ ಮಾಯವಾಗಿದೆ. ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 4.5 ಡಿಗ್ರಿಯ ನಡುಗುವ ಚಳಿ. ಆದರೆ ಮಳೆಗಾಲ ಈಗ ಆಗುಂಬೆಯ ಹಿರಿಯ ಪಾಲಿಗೆ ಮಳೆಗಾಲದಂತೆ ಕಾಣಿಸುತ್ತಿಲ್ಲ. ಕರಾವಳಿಯ ಕಾರ್ಕಳದಿಂದ ಆಗುಂಬೆ ಸಂಪರ್ಕಿಸುವ ಕಡಿದಾದ ಘಟ್ಟದ ರಸ್ತೆ 150 ವರ್ಷ ಹಿಂದಿನ ಕಾಲುದಾರಿ.

ಇಲ್ಲಿ ಕುದುರೆ, ಹೇರೆತ್ತುಗಳ ಸಂಚಾರ ಬದಲಾಗಿ ಚಕ್ಕಡಿಗಳು ಓಡಾಡುವ ಹಂತಕ್ಕೇರಿದ್ದು ದೊಡ್ಡ ಸಾಹಸ. ಇಲ್ಲಿನ ಜನಜೀವನ ಪರಿಸ್ಥಿತಿ ಹೇಗಿತ್ತೆಂಬುದಕ್ಕೆ ಮಲ್ಲೇಶ್ವರ(ಕುದುರೆಮುಖ)ದಿಂದ 24 ಕಿಲೋ ಮೀಟರ್‌ ದೂರದ ಕಳಸ ತಲುಪಲು ಮೂರು ಸಾರಿ ಭದ್ರಾ ನದಿ ದಾಟಬೇಕು. ಅಂಕುಡೊಂಕಾದ ಘಟ್ಟದ ರಸ್ತೆ, ಹಳ್ಳಕೊಳ್ಳಗಳಲ್ಲಿ ಬದುಕು ಬೆಳೆದದ್ದೇ ಪವಾಡ. ಮೊನ್ನೆ ಮೊನ್ನೆ ಶಿವಮೊಗ್ಗ -ತೀರ್ಥಹಳ್ಳಿ- ಕರಾವಳಿಯತ್ತ ಮಿನಿಬಸ್‌ ಸಂಚಾರ ಆರಂಭದ ಬಳಿಕ ಓಡಾಟಕ್ಕೆ ವೇಗ ದೊರಕಿದೆ. ದಾರಿಯ ಆಸುಪಾಸುಗಳ ಝರಿ ನೀರಿನ ಮೂಲಗಳಲ್ಲಿ ಕೃಷಿ ಬದುಕು ಹುಟ್ಟಿಕೊಂಡಿದೆ.

ಅರಣ್ಯ ಸ್ವರೂಪ ಬದಲಾವಣೆಯಲ್ಲಿ ಸ್ಥಳೀಯ ಜನಸಂಖ್ಯೆಯ ಹೆಚ್ಚಳ ಒಂದು ಕಾರಣವಾಗಿದೆ. ಇದಕ್ಕಿಂತ ಮುಖ್ಯವಾಗಿ ಸರಕಾರದ ಮರಕಡಿತದ (ಲಾಗಿಂಗ್‌) ಕಾಮಗಾರಿ, ಗಣಿ ಅಗೆತ ಮುಖ್ಯವಾಗಿದೆ. ಜನಸಂಪತ್ತಿನ ಏಳಗ್ಗೆಗಿಂತ  ವನಸಿರಿಯ ವಾಣಿಜ್ಯಿಕ ಲಾಭದ ಪ್ರಯತ್ನಗಳು ವ್ಯಾಪಕವಾಗಿ ನಡೆದಿವೆ. ಕ್ರಿ.ಶ 1913ರಲ್ಲಿ ಸಂಪತ್‌ ಅಯ್ಯಂಗಾರ್‌ ಭೂಗರ್ಭದ ಅಧ್ಯಯನ ನಡೆಸಿದವರು. ಮಲ್ಲೇಶ್ವರದಲ್ಲಿ 120-200 ಮೀಟರ್‌ ದಪ್ಪ ಹಾಗೂ 50 ಕಿಲೋ ಮೀಟರ್‌ ಉದ್ದದ ಕಬ್ಬಿಣ ಅದಿರು ನಿಕ್ಷೇಪ ಕಂಡವರು. ಕ್ರಿ.ಶ 1965ರಲ್ಲಿ ನ್ಯಾಶನಲ್‌ ಮಿನರಲ್ಸ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಆರಂಭವಾಯಿತು.

ಕುದುರೆಮುಖದಲ್ಲಿ ಕ್ರಿ.ಶ 1970ರ ನಂತರದಲ್ಲಿ ಗಣಿಗಾರಿಕೆ ಶುರುವಾಯ್ತು. 30 ವರ್ಷಗಳ ಗುತ್ತಿಗೆ ಹಿಡಿದ ಕಂಪನಿ ಪಶ್ಚಿಮ ಘಟ್ಟದ ನದಿ ಮೂಲದ ಕುತ್ತಿಗೆ ಹಿಸುಕುವ ಕಾರ್ಯವನ್ನು 32 ವರ್ಷ ಕಣ್ಮುಚ್ಚಿ ಮುಂದುವರಿಸಿತು. ಅಧಿಕೃತ ಅಂಕಿಸಂಖ್ಯೆಯ ಪ್ರಕಾರ ನೇರ ಗಣಿಗಾರಿಕೆ 4.604 ಹೆಕ್ಟೇರ್‌ ಪ್ರದೇಶದಲ್ಲಿ ನಡೆಯಿತು. ಆದರೆ ಜನಸಂಖ್ಯೆ ಹೆಚ್ಚಳ, ಅರಣ್ಯದಲ್ಲಿ ರಸ್ತೆ, ವಿದ್ಯುತ್‌ ಮಾರ್ಗ ನಿರ್ಮಾಣಗಳಿಂದಾಗಿ ಸಾವಿರಾರು ಎಕರೆ ಅರಣ್ಯ ನಾಶವಾಯಿತು. ಗಂಗಡಿಕಲ್ಲು, ನೆಲ್ಲಿ ಬೀಡಿನಲ್ಲಿಯೂ ಅರಣ್ಯ ನೆಲಕಚ್ಚಿತು. 

ದಕ್ಷಿಣದ ಗಂಗೆಯೆಂದು ಗುರುತಿಸುವ ತಂಗಭದ್ರಾ ನದಿಮೂಲದಿಂದ ಕೇವಲ 10 ಕಿ.ಲೋ ಮೀಟರ್‌ ಸನಿಹದಲ್ಲಿ ಆಳ ಅದಿರಿನ ಅಗೆತ ನಡೆಯಿತೆಂದರೆ ಮೂರ್ಖತನಕ್ಕೆ ಬೇರೆ ಉದಾಹರಣೆ ಅಗತ್ಯವಿಲ್ಲ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾದ ನದಿಮೂಲದಲ್ಲಿ ಅರಣ್ಯನಾಶದ ಆಘಾತಕಾರಿ ಘಟನೆಗಳು ನಡೆದವು. ಕಳೆದ 2006ರಲ್ಲಿ ಗಣಿಗಾರಿಕೆ ಪಾರಿಸಾರಿಕ ಹೋರಾಟದ ಕಾರಣಗಳಿಗಾಗಿ ನಿಂತಿತು. ಆದರೆ ಅದಿರಿನ ಅಗೆತದಿಂದ ಎದ್ದ ದೂಳು ಇಂದಿಗೂ ಆರಿಲ್ಲ, ನದಿಪಾತ್ರಗಳಲ್ಲಿ ಅಪಾರ ಪ್ರಮಾಣದಲ್ಲಿ ಶೇಖರಣೆಯಾಗಿ ಜೀವಜಾಲಕ್ಕೆ ಕುತ್ತು ತಂದಿದೆ.

ಲಕ್ಯಾನದಿ ಹೂಳು ತುಂಬಿ ಅಣೆಕಟ್ಟಾಗಿದೆ. ಇದರ ನಿರ್ಮಾಣಕ್ಕಾಗಿ 572 ಹೆಕ್ಟೇರ್‌ ಶ್ರೀಮಂತ ಕಾನನ ಕಣ್ಮರೆಯಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರದ ವಿಜ್ಞಾನಿಗಳು ಕುದುರೆಮುಖ ಅರಣ್ಯ ಪ್ರದೇಶದ ವಿಸ್ತ್ರತ ಅಧ್ಯಯನ ನಡೆಸಿದವರು. ಇಲ್ಲಿ 32 ಸಸ್ಯ ಪ್ರಬೇಧ, 42 ಸಸ್ತನಿ ಪ್ರಬೇಧ, 169 ಪಕ್ಷಿ ಪ್ರಬೇಧ, 34 ಉಭಯವಾಸಿ, 54 ಸರೀಸೃಪ ಹಾಗೂ 149 ಚಿಟ್ಟೆ ಪ್ರಬೇಧಗಳಿರುವುದಾಗಿ ಉಲ್ಲೇಖೀಸಿದ್ದಾರೆ. ಅಪುರೂಪದ ಶೋಲಾ ಅರಣ್ಯ, ಹುಲ್ಲುಗಾವಲುಗಳಲ್ಲಿ  ನಮ್ಮ ಭತ್ತ, ರಾಗಿ, ಜೋಳದಂಥ  ಏಕದಳ, ದ್ವಿದಳ ಧಾನ್ಯಗಳ 20 ಕಾಡು ತಳಿಗಳಿವೆಯಂತೆ.  ಅದಿರು ಬಗೆಯಲು ಹೋದವರು ಇವನ್ನೆಲ್ಲ  ಹೊಸಕಿ ಹಾಕಿದ್ದಾರೆ. 

ತುಂಗಭದ್ರಾ ನದಿಯ ನೀರು ಬಳಸಿ ಭತ್ತ ಬೆಳೆಯುವ ಸೀಮೆಯವರಿಗೆ ನದಿ ಮೂಲದ ಪರಿಚಯವಿಲ್ಲ. ನದಿಯಲ್ಲಿ ಹರಿಯುವ ಶೇ. 60ರಷ್ಟು ನೀರು ಇಲ್ಲಿನ ಆಗುಂಬೆ, ಕುದುರೆಮುಖದ ಬೆಟ್ಟದಲ್ಲಿ ಸುರಿಯುವ ಮಳೆಯಿಂದ ಮಾತ್ರ ದೊರೆಯುತ್ತದೆ. ಗಣಿಗಾರಿಕೆ ಉಚ್ಚಾಯ ಕಾಲದಲ್ಲಿಯೂ ನದಿ ಮೂಲ ಸಂರಕ್ಷಣೆಯ ಜಾಗೃತಿಯ ಕೂಗು ಭತ್ತದ ದಂಡೆಗಳಲ್ಲಿ ಕೇಳಿಸಲಿಲ್ಲ. ನಮಗೆ ಅಣೆಕಟ್ಟೆ ತುಂಬಿ ಕಾಲುವೆಯಲ್ಲಿ ನೀರು ಬಂದರೆ ಸಾಕೆಂದು ಹಲವರು ವರ್ತಿಸಿದ್ದರು. ಕಳೆದ ವರ್ಷ ಮಳೆ ಕೊರತೆಯಾದಾಗ ಭತ್ತ ಬೆಳೆಯಲಾಗದೇ  ನೀರಾವರಿ ನೆಲದ ಆರ್ಥಿಕತೆ ಸಂಪೂರ್ಣ ಕುಸಿದಿದೆ.

ಅಣೆಕಟ್ಟೆಯ ನೀರನ್ನು ಕುಡಿಯುವುದಕ್ಕೆ ಮಾತ್ರ ಬಳಸಬೇಕು. ಕೃಷಿಗೆ ನೀರು ನೀಡಲು ಸಾಧ್ಯವಿಲ್ಲವೆಂದು ಸರಕಾರ ಘೋಷಿಸಿದಾಗ ಆತಂಕ ಶುರುವಾಗುತ್ತದೆ. ವಿಜ್ಞಾನಿಗಳು, ತಜ್ಞರೆಲ್ಲ ತುಂಬಿದ ನಮ್ಮ ರಾಜ್ಯದಲ್ಲಿ ತುಂಗಭದ್ರೆಗೆ ಹೊಸಪೇಟೆಯಲ್ಲಿ ನೀರಾವರಿಗಾಗಿ ಅಣೆಕಟ್ಟೆ ನಿರ್ಮಾಣ ನಡೆದ ಬಳಿಕ ಇತ್ತ ನದಿ ಮೂಲದಲ್ಲಿ ಅದಿರಿಗಾಗಿ ಅಗೆತ ನಡೆದಿದೆ. ದಿಕ್ಕುದೆಸೆ ಇಲ್ಲದ ಆಡಳಿತ ನೈಸರ್ಗಿಕ ಸಂಪತ್ತನ್ನು ಹಾಳು ಮಾಡಿದೆ.

ಸ್ವಾತಂತ್ರ್ಯ ಬಂದ ಹೊಸತರಲ್ಲಿ ನಮ್ಮ ಅರಣ್ಯಗಳನ್ನು  ಆದಾಯ ಮೂಲವಾಗಿ ನೋಡುತ್ತ ಮರ, ಬಿದಿರು, ಅದಿರಿನ ಲೂಟಿ ನಡೆಯಿತು. ಶಿವಮೊಗ್ಗದ ಭದ್ರಾ ಜಲಾಶಯದಿಂದ 8,300 ಹೆಕ್ಟೇರ್‌ ನೀರಾವರಿಯಾಗಿದೆ. ಕ್ರಿ.ಶ 2001ರ ಅಂದಾಜಿನಂತೆ 727 ಕೋಟಿ ರೂಪಾಯಿ ಕೃಷಿ ಆದಾಯ ಜಲಾಶಯದಿಂದ  ದೊರಕಿದೆಯಂತೆ! ನೀರಿನ ಬೆಲೆ ಹೀಗಿರುವಾಗ ನದಿಯ ಬದುಕನ್ನು ಸುಸ್ಥಿರಗೊಳಿಸಲು ಸರಕಾರದ ಜೊತೆ ಸಮುದಾಯ ಜಾಗೃತಿಯ ಅಗತ್ಯವಿದೆ. ಆದರೆ ಚಿನ್ನದ ತತ್ತಿ ಇಡುವ ಕೋಳಿ ಕೊಯ್ಯುವ ಮೂರ್ಖತನ ನಮ್ಮದಾಗಿದೆ. 

 ಕುದುರೆಮುಖ ವನ್ಯಜೀವಿ ವಲಯ ಬಹಳ ವಿಶಾಲವಾಗಿದ್ದು 600.32 ಚದರ ಕಿ.ಲೋ ಮೀಟರ್‌ ವಿಸ್ತೀರ್ಣವಿದೆ. ಅರಣ್ಯ ಸಂರಕ್ಷಣೆಯ ಇಂಥ ನಿರ್ಧಾರ ನದಿಮೂಲ ಉಳಿಸಲು ನೆರವಾಗಿದೆ. ಜಾಗತಿಕ ಕಾರಣ ಮುಂದಿಟ್ಟುಕೊಂಡು ಮಳೆಕಾಡನ್ನು ಸಂರಕ್ಷಿಸಲು ಹೆಜ್ಜೆ ಇಡುತ್ತಿದ್ದಂತೆ ಅರಣ್ಯವಾಸಿಗಳಲ್ಲಿ ಪ್ರಶ್ನೆಗಳೆದ್ದಿವೆ. ಕಾಡು ಉಳಿಸಿದ ಊರು, ಕಾನೂನಿನ ಬೋನಿನಲ್ಲಿ ಸಿಲುಕಿದ ಭಯ ಕಾಡಿದೆ. ಕಾಡಿನ ಮೇಲೆ ಸೇಡು ಹುಟ್ಟುತ್ತಿದೆ. ಜನರ ಜೊತೆ ಕುಳಿತು ಅವರ ನೋವುಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ನಿಶ್ಚಿತ ಹೆಜ್ಜೆ ಇಟ್ಟಾಗ ಮಾತ್ರ ವನದ ಪ್ರೀತಿ ಹಬ್ಬಿಸಿ ನದಿ ಸಂರಕ್ಷಣೆಯ ನೀತಿ ಬೆಳೆಸಲು ಸಾಧ್ಯವಿದೆ.

ರಾಜ್ಯದ ಅತಿದೊಡ್ಡ ಜಮೀನಾªರನಾಗಿರುವ ಕರ್ನಾಟಕ ಅರಣ್ಯ ಇಲಾಖೆ ಕಾನೂನು, ಕಾಗದ ಪತ್ರ, ದಾಖಲೆ, ಅರಣ್ಯಭವನದ ಸಭೆಗಳಲ್ಲಿ ನಿದ್ದೆ ಹೋಗಿದೆ. ತೇಗ, ಅಕೇಶಿಯಾ ನೆಡುತೋಪು ಬೆಳೆಸುತ್ತ 40 ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ನಾಟಕವಾಡುತ್ತಿದೆ. ಜಲಕ್ಷಾಮ ಕಾಡುತ್ತಿರುವ ಈ ದಿನಗಳಲ್ಲಿ ಅರಣ್ಯ ಸಂರಕ್ಷಣೆ, ನದಿ ಮೂಲ ರಕ್ಷಣೆಗೆ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ. ಆದರೆ ಆಗುಂಬೆ-ಕುದುರೆಮುಖ ಕಾಡಿನ ಸಸ್ಯಗಳನ್ನು ಗುರುತಿಸುವ ತಾಕತ್ತು ಎಷ್ಟು ಅರಣ್ಯ ಅಧಿಕಾರಿಗಳಿಗೆ ಇದೆ?  

* ಶಿವಾನಂದ ಕಳವೆ, ಜಲ, ಪರಿಸರ ತಜ್ಞರು

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.