ಅವ ನಮಗೆ ಮೋಸದ ಪಟಾಕಿ ಹೊಡೆದು ಬಿಟ್ಟ….
Team Udayavani, Oct 23, 2017, 11:58 AM IST
ದೀಪಾವಳಿಗೆ ಪಟಾಕಿ ಹೊಡೆಯುವುದನ್ನು ಬಿಟ್ಟು ಎಷ್ಟೋ ವರ್ಷಗಳೇ ಆಗಿದ್ದವು. ಈ ವರ್ಷ ಹಬ್ಬಕ್ಕೆ ಊರಿಗೂ ಹೋಗಲು ಆಗಲಿಲ್ಲ. ಅಕ್ಕಪಕ್ಕದ ಮನೆಯವರೆಲ್ಲ ಆಗಲೇ ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಹಬ್ಬವನ್ನು ಸ್ವಾಗತಿಸಿದ್ದರು. ಹಾಗಾಗಿ ನಾನು ಮತ್ತು ನನ್ನ ಗೆಳತಿ ನಾವೂ ಪಟಾಕಿ ಹೊಡೆದು ಹಬ್ಬ ಆಚರಿಸೋಣ ಅಂದುಕೊಳ್ತಾ, ಮಲ್ಲೇಶ್ವರದ ಒಂದು ಪಟಾಕಿ ಅಂಗಡಿಗೆ ಹೋದೆವು. ನಮಗೆ ಬೇಕಾಗಿದ್ದು ಒಂದೆರಡು ಪ್ಯಾಕ್ ನಕ್ಷತ್ರಕಡ್ಡಿ ಮತ್ತು ಚಿಕ್ಕ ಮಕ್ಕಳ ಪಿಸ್ತೂಲ್ ಮಾತ್ರ. ಮೊದಲು ನಕ್ಷತ್ರ ಕಡ್ಡಿ ಖರೀದಿಸಿದೆವು. ಆಮೇಲೆ ಅಲ್ಲಿದ್ದ ಬಣ್ಣಬಣ್ಣದ ಪಿಸ್ತೂಲುಗಳನ್ನು ಎತ್ತಿ ಹಿಡಿದು ನೋಡಿ, ಅಭಿನವ್ ಬಿಂದ್ರಾ ರೇಂಜ್‌ಗೆ ಗುರಿ ಇಟ್ಟು, ಸ್ವಲ್ಪ ರಿಯಲ್ ರಿವಾಲ್ವರ್ ಥರ ಕಾಣಿಸಲಿ ಅಂತ ಕಪ್ಪು ಕಲರ್‌ನ ಎರಡು ಪಿಸ್ತೂಲು ಆರಿಸಿಕೊಳ್ಳೋಕೆ ಇಪ್ಪತ್ತು ನಿಮಿಷ ಬೇಕಾಯ್ತು. ಆದರೆ ಅಂಗಡಿಯವನು ಒಂದು ಪಿಸ್ತೂಲ್‌ಗೆ ನಲವತ್ತು ರೂಪಾಯಿ ಹೇಳಿದ.
ನಾವು “ನಲವತ್ತಾದ್ರೆ ಬೇಡ್ವೇ ಬೇಡ. ಮೂವತ್ತಕ್ಕೆ ಕೊಡಿ, ಎರಡು ಪಿಸ್ತೂಲ್ ತಗೋತೀವಿ’ ಅಂದು ಸುಮಾರು ಹೊತ್ತು ಚೌಕಾಸಿ ಮಾಡಿದ್ದಾಯಿತು. “ಅಯ್ಯೋ ಇಪ್ಪತ್ತು ರೂಪಾಯಿ ಕೊಡೋಕೆ ಎಷ್ಟು ಜಿಪುಣತನ ಇವಕ್ಕೆ’ ಅಂತ ಮನಸ್ಸಲ್ಲೇ ಬೈದುಕೊಂಡ ಆತ. ಕೊನೆಗೂ ಅರವತ್ತಕ್ಕೆ ಎರಡು ಪಿಸ್ತೂಲ್ ಕೊಟ್ಟ. ಈ ಚೌಕಾಸಿ ಮಾಡೋದರಲ್ಲಿ ಒಂಥರ ಖುಷಿ. ಬೆಲೆಯನ್ನು ಎಳೆದಾಡಿ ಕೊಂಡಾಗ ನಾವೇ ಗೆದ್ದೆವು ಅನ್ನೋ ಭಾವ ಆತ್ಮವಿಶ್ವಾಸ ಹೆಚ್ಚು ಮಾಡುತ್ತದೆ. ಕೆಲಸ ಇದು ಅಹಂ ಕೂಡ ಆಗಬಹುದು. ಆವತ್ತು ನಮಗೆ ಶೂಟಿಂಗ್‌ನಲ್ಲಿ ಮೆಡಲ್ ಗೆದ್ದಷ್ಟೇ ಖುಷಿಯಾಗಿತ್ತು. ಹಾಗೇ ರೂಮಿಗೆ ತಂದು, ಒಳಗೊಳಗೆ ಖುಷಿ ಪಟ್ಟು ತಂದ ಪಿಸ್ತೂಲ್ ಒಳಗೆ ಪಟಾಕಿ ತುಂಬಿಸೋಕೆ ನೋಡಿದ್ರೆ ಆಗಲೇ ಇಲ್ಲ. ಆಮೇಲೆ ಅದನ್ನು ಬಿಚ್ಚಿ ನೋಡೋವ ಅಂತ ತೆಗೆದರೆ, ಆ ತೆಗೆಯುವ ಭರದಲ್ಲಿ ಒಳಗಿದ್ದ ಸ್ಪ್ರಿಂಗ್‌ನಂಥದ್ದೇನೋ ಕಿತ್ತು ಕೈಗೆ ಬಂದು ಬಿಡೋದಾ. ಇನ್ನೊಂದು ಪಿಸ್ತೂಲ್‌ನ ಹಿಡಿಕೆಯೇ ಮುರಿದುಹೋಯ್ತು. ಕೊಟ್ಟಿದ್ದು ಅರವತ್ತೇ ರೂಪಾಯಿ ಆದ್ರೂ, ಪಿಸ್ತೂಲ್‌ನಲ್ಲಿ ಪಟಾಕಿ ಹೊಡೆಯೋ ಆಸೆ ಟುಸ್ ಆಗಿದ್ದಕ್ಕೆ ಭಾರೀ ಬೇಜಾರಾಯ್ತು. ಆಗಲೇ ಗೊತ್ತಾಗಿದ್ದು ಗೆದ್ದಿದ್ದು ಅಂಗಡಿಯವನು ಅಂತ. ಇಷ್ಟಾದರೂ ಮನಸ್ಸು ಕೇಳಬೇಕಲ್ಲ. “ಚೌಕಾಸಿ ಮಾಡಿದ್ದ$Rಕೆ ಬೇಕಂತಾನೇ ಮುರಿದಿದ್ದನ್ನು ಕೊಟ್ಟಿದ್ದಾನೆ’ ಅಂತ ಅಂಗಡಿಯವನನ್ನು ಬೈದು ಸಮಾಧಾನ ಮಾಡಿಕೊಂಡು ಸುಮ್ಮನಾದೆವು.
ಚೈತ್ರಾ, ಬೆಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.