TRACK ಜಾಕ್: ಹೊಸ ಪಥದತ್ತ ಭಾರತೀಯ ರೈಲ್ವೇಸ್
Team Udayavani, Sep 30, 2019, 3:13 AM IST
ಇಂಡಿಯನ್ ರೈಲ್ವೇಸ್‌ನ ರೂಪುರೇಷೆಯನ್ನೇ ಬದಲಿಸಿಬಿಡುವ ಯೋಜನೆಗೆ ಅಂಕಿತ ಹಾಕಲಾಗಿದೆ. ಇನ್ನೊಂದೆರಡು ವರ್ಷದಲ್ಲಿ ಜನರು ಸಮಯಕ್ಕೆ ಸರಿಯಾಗಿ ಬರದ ರೈಲಿಗಾಗಿ ಪ್ಲಾಟ್‌ಫಾರ್ಮ್ನಲ್ಲಿ ಗಂಟೆಗಟ್ಟಲೆ ಕಾಯುವುದರ ಬದಲಿಗೆ, ಸಮಯಕ್ಕೆ ಸರಿಯಾಗಿ ಆಗಮಿಸುವ, ಕ್ಲೀನ್ ಆಗಿರುವ ಶೌಚಾಲಯ ಹೊಂದಿರುವ ರೈಲು ಹತ್ತಬಹುದು. ಸಂಸ್ಥೆ, ಖಾಸಗಿ ಸಹಭಾಗಿತ್ವಕ್ಕೆ ತೆರೆದುಕೊಳ್ಳುತ್ತಿರುವುದೇ ಅದಕ್ಕೆ ಕಾರಣ.
ಭಾರತೀಯ ರೈಲ್ವೆ, ಹೊಸ ಪ್ರಯಾಣಕ್ಕೆ ಅಣಿಯಾಗಿದೆ. ಏಕಸ್ವಾಮ್ಯದಿಂದ ಬಹುಸ್ವಾಮ್ಯಕ್ಕೆ, ಸರ್ಕಾರಿ ಸೇವೆಯಿಂದ ಭಾಗಶಃ ಖಾಸಗಿ ಸೇವೆಗೆ ಟ್ರ್ಯಾಕ್ ಚೇಂಜ್ ಮಾಡಲಿದೆ. ಇದೊಂದು ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ಇಡೀ ರೈಲ್ವೆ ರೂಪುರೇಷೆಯನ್ನೇ ಬದಲಿಸಿಬಿಡುವ ಈ ಹೊಸ ಪಯಣಕ್ಕೆ ಇಂಜಿನ್ ಸ್ಟಾರ್ಟ್ ಮಾಡಲಾಗಿದೆ. ಇನ್ನೊಂದೆರಡು ವರ್ಷದಲ್ಲಿ ಜನರು ಸಮಯಕ್ಕೆ ಸರಿಯಾಗಿ ಬರದ ರೈಲಿಗಾಗಿ ಪ್ಲಾಟ್‌ಫಾರ್ಮ್ನಲ್ಲಿ ಗಂಟೆಗಟ್ಟಲೆ ಕಾಯುವುದರ ಬದಲಿಗೆ, ಸಮಯಕ್ಕೆ ಸರಿಯಾಗಿ ಆಗಮಿಸುವ, ಕ್ಲೀನ್ ಆಗಿರುವ ಟಾಯ್ಲೆಟ್ ಹೊಂದಿರುವ ಹಾಗೂ ನೀಟಾಗಿರುವ ಖಾಸಗಿ ರೈಲು ಹತ್ತಬಹುದು.
ನವದೆಹಲಿಯಲ್ಲಿರುವ ರೈಲ್ವೆ ಭವನದಲ್ಲಿ, ಭಾರತೀಯ ರೈಲ್ವೆ ಇಲಾಖೆಯು ಜಗತ್ತಿನ ವಿವಿಧ ಕಂಪನಿಗಳನ್ನು ಆಹ್ವಾನಿಸುವ ಬಿಡ್ಡಿಂಗ್ ದಾಖಲೆಯನ್ನು ಸಿದ್ಧಪಡಿಸುತ್ತಿದೆ. ಸುಮಾರು 150 ಮಾರ್ಗಗಳಲ್ಲಿ ಖಾಸಗಿ ರೈಲುಗಳನ್ನು ಓಡಿಸಲು ಮತ್ತು ಅವುಗಳ ದರಗಳನ್ನು ನಿಗದಿಪಡಿಸಲು ಭಾರತೀಯ ರೈಲ್ವೆ ತಂಡ ಹಗಲಿರುಳೂ ಶ್ರಮಿಸುತ್ತಿದೆ. ಸದ್ಯದ ಅಂದಾಜಿನ ಪ್ರಕಾರ, ಮುಂದಿನ ವರ್ಷ ಗುತ್ತಿಗೆ ನೀಡಲಾಗುತ್ತದೆ ಮತ್ತು 2023- 24ರ ವೇಳೆಗೆ ಖಾಸಗಿ ಕಂಪನಿಗಳು ಭಾರತದ ರೈಲಿನ ಟ್ರ್ಯಾಕ್‌ಗಳ ಮೇಲೆ ತಮ್ಮದೇ ರೈಲುಗಳನ್ನು ಓಡಿಸಲಿವೆ.
ಶುಲ್ಕ ಕೊಡಬೇಕು: ಸದ್ಯ, ಖಾಸಗಿ ಕಂಪನಿಗಳು ಗೂಡ್ಸ್ ರೈಲುಗಳನ್ನು ಹಾಗೂ ಕಂಟೇನರುಗಳನ್ನು ಓಡಿಸುತ್ತಿವೆ. ಆದರೆ ಪ್ರಯಾಣಿಕ ರೈಲುಗಳ ವಿಭಾಗಕ್ಕೆ ಖಾಸಗಿಗೆ ಈಗಲೂ ಅವಕಾಶವಿಲ್ಲ. ಸದ್ಯದ ಯೋಜನೆಯ ಪ್ರಕಾರ, ಇದು ತುಂಡು ಗುತ್ತಿಗೆಯ ರೀತಿ ಅಲ್ಲ. ಒಂದು ರೈಲು ಓಡಿಸುವ ಒಟ್ಟು ಜವಾಬ್ದಾರಿಯನ್ನೇ ಖಾಸಗಿ ಕಂಪನಿಗೆ ಕೊಡುವುದು ರೈಲ್ವೆ ಇಲಾಖೆಯ ಉದ್ದೇಶವಾದಂತಿದೆ. ಈ ಖಾಸಗಿ ಕಂಪನಿಗಳು, ತಮ್ಮದೇ ರೈಲುಗಳು ಹಾಗೂ ಬೋಗಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬಹುದು ಅಥವಾ ಭಾರತೀಯ ರೈಲ್ವೆಯ ಬೋಗಿಗಳನ್ನೇ ಭೋಗ್ಯಕ್ಕೆ ಪಡೆಯಬಹುದು.
ಇದಕ್ಕೆ ಚಾಲಕರನ್ನೂ ಖಾಸಗಿ ಕಂಪನಿಗಳೇ ನೇಮಿಸಿಕೊಳ್ಳಬೇಕಿರುತ್ತದೆ. ಈ ರೈಲು ಚಾಲಕರಿಗೆ ಭದ್ರತೆ ಕಾರಣಕ್ಕೆ ಭಾರತೀಯ ರೈಲ್ವೆ ಇಲಾಖೆಯಿಂದ ಪ್ರಮಾಣೀಕರಣ ಪಡೆಯಬೇಕಿರುತ್ತದೆ. ಅತ್ಯಂತ ಹೆಚ್ಚು ದಟ್ಟಣೆ ಇರುವ ದೆಹಲಿ- ಮುಂಬೈ ಮತ್ತು ದೆಹಲಿ- ಹೌರಾ ಸೇರಿದಂತೆ 150 ಮಾರ್ಗಗಳಲ್ಲಿ ಖಾಸಗಿ ಕಂಪನಿಗಳಿಗೆ ರೈಲು ಓಡಿಸಲು ಅವಕಾಶ ನೀಡಲಾಗುತ್ತದೆ. ಖಾಸಗಿ ಕಂಪನಿಗಳು ಮತ್ತು ಗ್ರಾಹಕರು ಹಾಗೂ ಭಾರತೀಯ ರೈಲ್ವೆ ಇಲಾಖೆಯ ಮಧ್ಯೆ ವಿವಾದ ಎದ್ದರೆ ಇದನ್ನು ಪರಿಹರಿಸುವುದಕ್ಕಾಗಿ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸುತ್ತೇವೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ತನ್ನ ಪ್ಲಾಟ್‌ಫಾರಂ, ಟ್ರ್ಯಾಕ್‌ಗಳು, ಸಿಗ್ನಲ್ ವ್ಯವಸ್ಥೆ ಮತ್ತು ಇತರ ಮೂಲ ಸೌಕರ್ಯವನ್ನು ಖಾಸಗಿ ಕಂಪನಿಗಳು ಬಳಸಿದ್ದಕ್ಕೆ ನಿರ್ದಿಷ್ಟ ಶುಲ್ಕವನ್ನು ರೈಲ್ವೆ ಇಲಾಖೆಯು ಖಾಸಗಿ ಕಂಪನಿಗಳಿಗೆ ವಿಧಿಸಲಿದೆ. ಆದರೆ ವಿದ್ಯುತ್ ಶುಲ್ಕವನ್ನು ಮಾತ್ರ ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಯಾಕೆಂದರೆ, ಕಡಿಮೆ ಇಂಧನ ಬಳಸುವ ಆಧುನಿಕ ರೈಲುಗಳನ್ನು ಬಳಸುವ ಕಂಪನಿಗಳಿಗೆ ಪ್ರೋತ್ಸಾಹ ಧನ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಯಾವ ಖಾಸಗಿ ಕಂಪನಿಗಳಿಗೆ ಆಸಕ್ತಿ?: ಸದ್ಯದ ಮಟ್ಟಿಗೆ ಯಾವ ಜಾಗತಿಕ ಕಂಪನಿಗಳು ಈ ವ್ಯವಸ್ಥೆಯ ಆರಂಭಕ್ಕೆ ಆಸಕ್ತಿ ತೋರಿಸಿವೆ ಎಂಬುದರ ಮಾಹಿತಿ ಇಲ್ಲ. ಜರ್ಮನಿಯ ಡಾಯ್ಟ್ ಯಾಹ್ನ್ಜಿ ಫ್ರಾನ್ಸಿನ ಎಸ್‌ಎನ್‌ಎಫ್, ಸಿಂಗಾಪುರದ ಎಂಟಿಆರ್, ಇಂಗ್ಲೆಂಡ್‌ನ ವರ್ಜಿನ್ ಟ್ರೇನ್ಸ್, ಇಂಗ್ಲೆಂಡ್‌ನ ಫರ್ಸ್ಡ್, ಸ್ಪೇನಿನ ರೆನ್ಫೆ ಕಂಪನಿಗಳು ಈಗಾಗಲೇ ಯಶಸ್ವಿಯಾಗಿ ಖಾಸಗಿ ರೈಲುಗಳನ್ನು ಓಡಿಸುತ್ತಿದ್ದು, ಆ ಕ್ಷೇತ್ರದಲ್ಲಿ ಯಶಸ್ಸನ್ನು ಕಂಡಿವೆ.
ಇದರ ಹೊರತಾಗಿ ಭಾರತದಲ್ಲಿ ಟಾಟಾ, ಅದಾನಿ ಮತ್ತು ಎಲ್ ಆ್ಯಂಡ್ ಟಿ ಕಂಪನಿಗಳೂ ಒಂದಲ್ಲ ಒಂದು ರೀತಿಯಲ್ಲಿ ರೈಲ್ವೆ ಇಲಾಖೆ ಜೊತೆ ಸಂಬಂಧ ಹೊಂದಿವೆ. ಹೀಗಾಗಿ, ಈ ಕಂಪನಿಗಳೂ ಬಿಡ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದರ ಜೊತೆಗೆ ಈಗಾಗಲೇ ಹಲವು ವರ್ಷಗಳಿಂದ ಭಾರತದಲ್ಲಿ ರೈಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಸ್ಪೇನ್ ಮೂಲದ ಟಾಲ್ಗೊà ಕೂಡ ಈ ಯೋಜನೆಯಲ್ಲಿ ಭಾಗವಹಿಸಲು ಉತ್ಸಾಹ ತೋರಿಸಿದೆ.
ಎಷ್ಟು ಲಾಭ?: ಈಗಿನ ಅಂದಾಜಿನ ಪ್ರಕಾರ, 150 ಮಾರ್ಗಗಳಲ್ಲಿ ಖಾಸಗಿ ರೈಲು ಓಡಿಸಲು ಅವಕಾಶ ಕೊಟ್ಟರೆ ರೈಲ್ವೆ ಇಲಾಖೆಗೆ ಸುಮಾರು 16 ಸಾವಿರ ಕೋಟಿ ರೂ. ಲಭ್ಯವಾಗಲಿದೆ. ಒಂದು ರೈಲು 16 ಕೋಚ್‌ಗಳನ್ನು ಹೊಂದಿದ್ದು, ತಲಾ ಕೋಚ್‌ಗೆ 6-7 ಕೋಟಿ ರೂ. ಲಾಭ ಬರುತ್ತದೆ ಎಂದು ಅಂದಾಜಿಸಿದರೆ, ಒಟ್ಟು 2400 ಕೋಚ್‌ಗಳಿಗೆ 16 ಸಾವಿರ ಕೋಟಿ ರೂ. ಗಳಿಕೆ ಭಾರತೀಯ ರೈಲ್ವೆಗೆ ಆಗಲಿದೆ.
ಮಾರ್ಗದ ಆಯ್ಕೆಯೇ ಮುಖ್ಯ: ಖಾಸಗಿ ಕಂಪನಿಗಳು ಲಾಭ ಗಳಿಸಲು ಸಮಯ ಮತ್ತು ಮಾರ್ಗಗಳು ಅತ್ಯಂತ ಮುಖ್ಯವಾಗುತ್ತವೆ. ಸಮಯಕ್ಕೆ ಸರಿಯಾಗಿ ರೈಲು ಸಾಗುವುದರ ಜೊತೆಗೆ, ಹೆಚ್ಚು ಪ್ರಯಾಣಿಕ ದಟ್ಟಣೆ ಇರುವ ಮಾರ್ಗಗಳಲ್ಲಿ ರೈಲು ಸಾಗಬೇಕಿರುವುದೂ ಅಷ್ಟೇ ಮುಖ್ಯವಾಗಿರುತ್ತದೆ. ಸದ್ಯ ರೈಲ್ವೆ ಇಲಾಖೆಯ ಪರಿಗಣನೆಯಲ್ಲಿ ಬೆಂಗಳೂರು- ಚೆನ್ನೆç, ಬೆಂಗಳೂರು- ಮೈಸೂರು, ಸಿಕಂದರಾಬಾದ್-ವೈಜಾಗ್, ನಾಗ್ಪುರ-ಸಿಕಂದರಾಬಾದ್ ಮತ್ತು ಹೌರಾ- ವೈಜಾಗ್‌ನಂಥ ಮಾರ್ಗಗಳೂ ಇವೆ. ಯಾವ ಮಾರ್ಗಗಳನ್ನು ಖಾಸಗಿ ಸಂಸ್ಥೆಗೆ ನೀಡಬೇಕು ಎಂಬುದನ್ನು ಅತ್ಯಂತ ವಿಸ್ತೃತವಾಗಿ ಚರ್ಚಿಸಿ ಮತ್ತು ಯೋಚಿಸಿ ನಿರ್ಧರಿಸಲಾಗುತ್ತದೆ.
ಲಾಭ- ನಷ್ಟದ್ದೇ ಚಿಂತೆ: ಖಾಸಗಿ ಕಂಪನಿಗಳಿಗೆ ರೈಲು ಓಡಿಸಲು ಅವಕಾಶ ಕೊಟ್ಟರೆ ರೈಲ್ವೆ ಇಲಾಖೆಯ ಲಾಭವೆಲ್ಲ ಖಾಸಗಿ ಪಾಲಾಗುತ್ತದೆ. ಆಗ ರೈಲ್ವೆ ಇಲಾಖೆ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ವಾದವೂ ಒಂದಿದೆ. ಸದ್ಯ, ರೈಲ್ವೆ ಇಲಾಖೆಯೇನೂ ಭಾರೀ ಲಾಭ ಮಾಡುತ್ತಿಲ್ಲ. ತನ್ನ ಒಟ್ಟು ಬಜೆಟ್‌ನಲ್ಲಿ ಶೇ. 63ರಷ್ಟನ್ನು ನೌಕರರ ಸಂಬಳಕ್ಕೆ ಖರ್ಚು ಮಾಡುತ್ತಿರುವ ಇಲಾಖೆ, ಇಂಧನಕ್ಕೆ ಶೇ. 15ರಷ್ಟನ್ನು ವೆಚ್ಚ ಮಾಡುತ್ತಿದೆ.
ಅಷ್ಟೇ ಅಲ್ಲ, 2018- 19ರಲ್ಲಿ ರೈಲ್ವೆ ಕಾರ್ಯ ನಿರ್ವಹಣಾ ವೆಚ್ಚ ಶೇ. 96.2 ರಷ್ಟಾಗಿದೆ. ಅಂದರೆ ಪ್ರತಿ 100 ರೂ. ಗಳಿಸಿದರೆ ಅದರಲ್ಲಿ 96 ರೂ. ಅನ್ನು ದಿನನಿತ್ಯದ ವೆಚ್ಚಕ್ಕೇ ಖಾಲಿ ಮಾಡುತ್ತಿದೆ. ಹೀಗಾಗಿ, ರೈಲ್ವೆ ಇಲಾಖೆ ಯಾವ ಹೊಸ ಹೂಡಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ. ಇಡೀ ಜಗತ್ತಿನಲ್ಲೇ ಬಳಕೆಯಲ್ಲಿಲ್ಲದ ಐಸಿಎಫ್ ಕೋಚ್‌ಗಳನ್ನು ಬಳಸುತ್ತಿರುವ ರೈಲ್ವೆ ಇಲಾಖೆ, ಆದಷ್ಟು ಬೇಗ ಎಲ್‍ಎಚ್‌ಬಿ ಕೋಚ್‌ಗಳನ್ನು ಖರೀದಿಸಬೇಕಿದೆ. ಒಟ್ಟು 43 ಸಾವಿರ ಕೋಚ್‌ಗಳನ್ನು ರೈಲ್ವೆ ಇಲಾಖೆ ಖರೀದಿಸಬೇಕಿದೆ. ಆದರೆ ಅದಕ್ಕೆ ಹಣವಿಲ್ಲ.
ಕಾರ್ಮಿಕರ ವಿರೋಧ: ರೈಲುಗಳನ್ನು ಓಡಿಸಲು ಖಾಸಗಿಗೆ ಅವಕಾಶ ಕೊಡುತ್ತೇವೆ ಎಂದ ಕೂಡಲೇ ಮೊದಲು ವಿರೋಧ ವ್ಯಕ್ತವಾಗುವುದು ರೈಲ್ವೆ ಕಾರ್ಮಿಕರಿಂದ. ಕಳೆದ 13 ವರ್ಷಗಳಿಂದಲೂ ಸರಕು ಸಾಗಣೆ ರೈಲುಗಳನ್ನು ಖಾಸಗಿ ಸಂಸ್ಥೆಗಳು ಓಡಿಸುತ್ತಿದ್ದು, ಪದೇಪದೆ ಈ ಖಾಸಗೀಕರಣದ ಗುಮ್ಮ ರೈಲ್ವೆ ಕಾರ್ಮಿಕರನ್ನು ಬಡಿಯುತ್ತಲೇ ಇದೆ. ಈ ಹಿಂದೆ 15 ಲಕ್ಷ ಇದ್ದ ರೈಲ್ವೆ ನೌಕರರ ಸಂಖ್ಯೆ ಇದೀಗ 12 ಲಕ್ಷಕ್ಕೆ ಕುಸಿದಿದೆ. ಇನ್ನು ಪ್ರಯಾಣಿಕ ರೈಲುಗಳು ಖಾಸಗಿಯವರ ಪಾಲಾದರೆ, ಇನ್ನಷ್ಟು ಉದ್ಯೋಗ ಕಡಿತವಾಗುವ ಭೀತಿ ಹುಟ್ಟುತ್ತದೆ.
ವಿಮಾನ ಓಕೆ, ರೈಲು ಬೇಡ ಯಾಕೆ?: ಬ್ರಿಟಿಷರ ಆಳ್ವಿಕೆಯಲ್ಲಿ ರೈಲ್ವೆಯಲ್ಲಿ ಖಾಸಗಿ ಪಾಲೂ ಇತ್ತು. ಈಸ್ಟ್ ಇಂಡಿಯನ್ ರೈಲ್ವೆ ಕಂಪನಿ, ಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೆ ಮತ್ತು ಬಾಂಬೆ, ಬರೋಡಾ ಆಂಡ್ ಸೆಂಟ್ರಲ್ ಇಂಡಿಯನ್ ರೈಲ್ವೆ ಸೇರಿದಂತೆ ಹಲವು ಕಂಪನಿಗಳಿದ್ದವು. ಆದರೆ ಇವೆಲ್ಲವೂ ಆಗಿನ ಬ್ರಿಟಿಷ್ ಸರ್ಕಾರದ ಅಡಿಯಲ್ಲಿದ್ದವು. 1947ರ ನಂತರ ಪ್ರಯಾಣಿಕರ ರೈಲುಗಳನ್ನು ಖಾಸಗಿಗೆ ನೀಡುವ ಯಾವ ಪ್ರಯತ್ನವೂ ನಡೆದಿರಲಿಲ್ಲ. ಆದರೆ ನಾಗರಿಕ ವಿಮಾನಯಾನ ಸೇವೆ ಒದಗಿಸಲು ಹಲವು ಖಾಸಗಿ ಸಂಸ್ಥೆಗಳಿವೆ. ಅಷ್ಟೇ ಅಲ್ಲ, ರಸ್ತೆ ಸಾರಿಗೆಯಲ್ಲಂತೂ ದೇಶಾದ್ಯಂತ ಲಕ್ಷಾಂತರ ಕಂಪನಿಗಳು ಪ್ರಯಾಣಿಕರಿಗೆ ವೈವಿಧ್ಯಮಯ ಸೇವೆ ಒದಗಿಸುತ್ತಿವೆ. ಹಾಗಾದರೆ ರೈಲ್ವೆಯಲ್ಲಿ ಯಾಕೆ ಈ ಅವಕಾಶ ನೀಡಬಾರದು ಎಂಬ ಪ್ರಶ್ನೆ ಸರ್ಕಾರದ ಮುಂದೆ ಹಲವು ಬಾರಿ ಬಂದುಹೋಗಿದೆ.
13,000 ರೈಲುಗಳಲ್ಲಿ ಕೇವಲ 150 ರೈಲು ಖಾಸಗಿಗೆ: 150 ರೈಲುಗಳನ್ನು ಖಾಸಗಿಗೆ ಕೊಟ್ಟ ಮಾತ್ರಕ್ಕೆ ಇಡೀ ರೈಲ್ವೆ ಇಲಾಖೆಗೆ ಯಾವ ಮಹತ್ವದ ಸಮಸ್ಯೆಯೂ ಆಗುವುದಿಲ್ಲ. ಯಾಕೆಂದರೆ, ದೇಶದ ಅತಿದೊಡ್ಡ ರೈಲ್ವೆ ನೆಟ್‌ವರ್ಕ್‌ಗಳಲ್ಲಿ ಒಂದಾದ ಭಾರತೀಯ ರೈಲ್ವೇಸ್ ದಿನಕ್ಕೆ 13,542 ರೈಲುಗಳನ್ನು ಓಡಿಸುತ್ತದೆ. ಒಟ್ಟು 2.3 ಕೋಟಿ ಪ್ರಯಾಣಿಕರನ್ನು ನಿತ್ಯಸಾಗಿಸುತ್ತದೆ. ಈ ಪೈಕಿ ಖಾಸಗಿ ರೈಲು ದಿನವೊಂದಕ್ಕೆ ಕೇವಲ ಶೇ. 1.1 ರಷ್ಟು ಪ್ರಯಾಣಿಕರನ್ನು ಹೊತ್ತೂಯ್ಯಲಿವೆ. ಆದರೆ 150 ಅತ್ಯಾಧುನಿಕ ಸೂಪರ್ ಫಾಸ್ಟ್ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡಿದರೆ, ಇಡೀ ಭಾರತೀಯ ರೈಲ್ವೆಯ ಬಗ್ಗೆ ಜನರಲ್ಲಿ ಇದ್ದ ಭಾವನೆಯೇ ಬದಲಾಗುತ್ತವೆ. ದೇಶದಲ್ಲೇ ತಯಾರಾದ ಅತ್ಯಾಧುನಿಕ ಹಾಗೂ ವೇಗದ ಟ್ರೇನ್18 ಅಥವಾ “ಒಂದೇ ಭಾರತ್’ ಹೆಸರಿನ ರೈಲು ಇಡೀ ದೇಶದ ಗಮನ ಸೆಳೆದಿತ್ತು. ಹಾಗೆಯೇ 150 ರೈಲುಗಳೂ ಕೂಡ ಇಡೀ ದೇಶದ ಜನರ ಗಮನ ಸೆಳೆಯುತ್ತವೆ.
* ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.