20 ವರ್ಷಗಳ ಹಾದಿಯಲ್ಲಿ ದೂರವಾಣಿ ನಿಯಂತ್ರಣ ವ್ಯವಸ್ಥೆ ಟ್ರಾಯ್
Team Udayavani, Apr 23, 2018, 11:52 AM IST
ಅತ್ಯಂತ ಕಡಿಮೆ ದರದಲ್ಲಿ ಕೇಬಲ್ ಸಂಪರ್ಕ ಕಲ್ಪಿಸುವ ಯೋಜನೆ “ಕ್ಯಾಸ್’ ಟ್ರಾಯ್‌ನ ಇನ್ನೊಂದು ಗುರುತರ ಹೆಜ್ಜೆ. ಪುಟ್ಟ ಡಿಜಿಟಲ್ ಸೆಟ್‌ಟಾಪ್ ಬಾಕ್ಸ್ ಮೂಲಕ ವೀಕ್ಷಕ ತನಗೆ ಬೇಕಾದ ಚಾನೆಲ್ ನೋಡುವ ಈ ವ್ಯವಸ್ಥೆ ಭಷ್ಯದಲ್ಲಿ ಆಕರ್ಷಣೀಯ. ಮುಖ್ಯವಾಗಿ, ದೇಶದಲ್ಲಿ ವ್ಯಾಪಕವಾಗುತ್ತಿರುವ ಕೇಬಲ್ ಮಾಫಿಯಾಗೆ ಇದು ಸಮರ್ಥ ಉತ್ತರವೂ ಹೌದು.
ನೀರು, ವಿದ್ಯುತ್‌ನಂತೆ ದೂರವಾಣಿ ಕೂಡ ಇವತ್ತು. ಮನುಷ್ಯನ ಮೂಲಭೂತ ಅವಶ್ಯಕತೆಯಾಗಿ ಮಾರ್ಪಾಟಾಗಿದೆ. ಕೆಲ ದಿನಗಳ ಹಿಂದೆ ಸ್ಥಿರ ದೂರವಾಣಿ ಇದ್ದರೆ ಎಪಿಎಲ್ ವರ್ಗದವ ಎನ್ನುತ್ತಿದ್ದರು. ಇಂದಿನ ಮೊಬೈಲ್ ಕ್ರಾಂತಿಯಿಂದ ಬಹುತೇಕ ಸ್ಥಿರ ದೂರವಾಣಿಗಳು ಸತ್ತಿವೆ! ಈ ಮಾದರಿಯ ಸಂಪರ್ಕ ಕ್ರಾಂತಿಯ ನಡುವೆ, ಇಡೀ ವ್ಯವಸ್ಥೆಯ ನಿಯಂತ್ರಣ ಹೇರುವ ವ್ಯವಸ್ಥೆಯಾಗಿ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಕಾರ್ಯವ್ಯಾಪ್ತಿ ಹೆಚ್ಚು ವಿಸ್ತೃತ ಜವಾಬ್ದಾರಿಪೂರ್ಣ. 20 ವರ್ಷಗಳ ದೀರ್ಘ ಅವಧಿಯನ್ನು ಪೂರೈಸಿರುವ ಟ್ರಾಯ್ ಕಾರ್ಯವೈಖರಿಯತ್ತ ಒಂದು ನೋಟ ಹರಿಸಲು ಇದು ಸಕಾಲ.
1997ರಿಂದ ಆರಂಭ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆ್ಯಕ್ಟ್ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು 1997ರಲ್ಲಿ. ಅದೇ ವರ್ಷ ನೀತಿ ನಿರೂಪಕ ಸಂಸ್ಥೆಯಾಗಿ ಟ್ರಾಯ್‌ಅನ್ನು ಸ್ಥಾಪಿಸಲಾಯಿತು. ದೂರವಾಣಿ ಕ್ಷೇತ್ರದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತ ಟ್ರಾಯ್ 2004ರ ಜನವರಿ ಒಂಭತ್ತರಲ್ಲಿ ಸರ್ಕಾರ ತಂದ ಇನ್ನೊಂದು ಪ್ರಕಟಣೆಯ ಮೂಲಕ ಕೇಬಲ್ ಟೆಲಿವಿಷನ್ ಕ್ಷೇತ್ರವನ್ನು ನಿರ್ವಹಿಸುವ ಹೆಚ್ಚುವರಿ ಕೆಲಸ ಪಡೆಯಿತು.
1997ರ ಅವಧಿ ಒಂದು ಪರ್ವ ಕಾಲ. ಸರ್ಕಾರ ದೂರವಾಣಿ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿತ್ತು. ಸರ್ಕಾರದ ಮೇಲೆ ಖಾಸಗಿ ಲಾಬಿ ಚಾಲೂಇದ್ದುದರಿಂದ ಬಳಕೆದಾರರಿಗೆ ಅನ್ಯಾಯವಾಗುತ್ತಿತ್ತು. ಸರ್ಕಾರ ಜಾಣ್ಮೆಯಿಂದ ಜವಾಬ್ದಾರಿಗಳನ್ನು ಟ್ರಾಯ್‌ಗೆ ವಹಿಸಿದ್ದುದರಿಂದ ಬೇಕಾಬಿಟ್ಟಿ ವರ್ತನೆಗಳಿಗೆ ಕಡಿವಾಣ ಹಾಕಿದಂತಾಯಿತು. ಟ್ರಾಯ್ ಕ್ರಮಗಳಿಂದ ಬಳಕೆದಾರರಿಗೆ ವೆಚ್ಚ ತಗ್ಗಿತು ಮತ್ತು ಟೆಲಿಕಾಂ ಕ್ಷೇತ್ರ ಅಬ್ಟಾ ಎನ್ನುವಂತೆ ಬೆಳೆಯಿತು.
ಟೆಲಿಕಾಂ ಸೇವಾದಾತರ ಲಾಬಿ ದೊಡ್ಡ ಮಟ್ಟದ್ದು. ಈ ಕ್ಷೇತ್ರದ ಒಂದೊಂದು ನಿರ್ಧಾರ ಕೂಡ ಕೋಟಿ ಕೋಟಿ ರೂ.ಗಳ ವಹಿವಾಟನ್ನು ಪ್ರಭಾವಿಸುತ್ತದೆ. ಈ ನಿಟ್ಟಿನಲ್ಲಿ ಈ 20 ವರ್ಷಗಳ ಮೊದಲ ಅವಧಿ ಅಥವಾ ಆರಂಭಿಕ 10 ವರ್ಷಗಳಲ್ಲಿ ಟ್ರಾಯ್ ಗ್ರಾಹಕರಿಗೆ ತಳಮಟ್ಟದಲ್ಲಿ ಬಾಧಿಸುವ ವಿಚಾರಗಳಲ್ಲಿ ಹೆಚ್ಚು ಗಮನ ಹರಿಸಿ ಅವುಗಳನ್ನು ನಿರ್ದೇಶಿಸುವ ಕೆಲಸ ಮಾಡಿತ್ತು. ಟ್ರಾಯ್ ರೂಪಿಸಿದ ಮೊಬೈಲ್ ನಂಬರ್ ಪೋರ್ಟಬಿಲಿಟಿ ಅರ್ಥಾತ್ ಎಂಎನ್‌ಪಿ ಭಯ ಇಂದು ಸೇವಾಗುಣಮಟ್ಟವನ್ನು ಗಮನಾರ್ಹವಾಗಿ ವೃದ್ಧಿಸುವಂತೆ ಮಾಡಿದೆ.
ಗ್ರಾಹಕರಿಗೆ ಕಿರಿಕಿರಿಯೆನ್ನಿಸುವ ಟೆಲಿ ಮಾರ್ಕೆಟಿಂಗ್ ಕರೆಗಳಿಂದ ರಕ್ಷಿಸಲು ಟ್ರಾಯ್ “ನ್ಯಾಷನಲ್ ಡು ನಾಟ್ ಕಾಲ್’ ನೋಂದಣಿಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ ಕ್ರಮ. ನೊಂದಾಯಿತ ಚಂದಾದಾರನಿಗೆ ಅಪ್ಪಿತಪ್ಪಿಯೂ ಟೆಲಿ ಮಾರ್ಕೆಟಿಂಗ್ ಕರೆ, ಸಂದೇಶ ಬರುವಂತಿಲ್ಲ. ಇದು ಒಂದು ಮಟ್ಟಿಗೆ ಉಚಿತವಾಗಿ ವಾಣಿಜ್ಯಿಕ ಜಾಹೀರಾತು ಪ್ರಸಾರ, ಗ್ರಾಹಕ ಕಿರಿಕಿರಿಯನ್ನು ತಹಬಂದಿಗೆ ತಂದಿದೆ.
ವ್ಯಾಲಿಡಿಟಿ ಮೀರಿ ವ್ಯರ್ಥವಾಗುವ ಬಳಕೆದಾರನ ಟಾಕ್‌ಟೈಮ್ ಅನ್ನು “ಟೆಲಿಕಮ್ಯುನಿಕೇಷನ್ ಕನ್ಸೂಮರ್ ಎಜುಕೇಷನ್ ಅಂಡ್ ಪೊ›ಟೆಕ್ಷನ್ ಫಂಡ್’ಗೆ ವರ್ಗಾಯಿಸುವ ನಿಯಮ ಮೊಬೈಲ್ ಕಂಪನಿಗಳ ಲಾಭಿ ಮೀರಿ ಕೈಗೊಂಡ ನಿರ್ಧಾರ. ಈ ಆದಾಯದಿಂದ ಟ್ರಾಯ್ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂಬ ಆಶಯಕ್ಕೆ ಕೆಲ ಮಟ್ಟಿಗಿನ ಧಕ್ಕೆ ಆಗಿದೆ. ಟ್ರಾಯ್ ಟೆಲಿಕಾಂ ಗ್ರಾಹಕರ ಸಂಘಟನೆಗಳನ್ನು ರೂಪಿಸಿ, ಅವುಗಳ ಮೂಲಕ ಜಾಗೃತಿಗೆ ಮುಂದಾಗಬಹುದಿತ್ತು. ಆದರೆ ಅದನ್ನು ಸರಿಪಡಿಸುವ ಅವಕಾಶ ಸದಾ ಜೀವಂತ.
ತಳಮಟ್ಟದ ಗ್ರಾಹಕನ ಪರ: ಅತ್ಯಂತ ಕಡಿಮೆ ದರದಲ್ಲಿ ಕೇಬಲ್ ಸಂಪರ್ಕ ಕಲ್ಪಿಸುವ ಯೋಜನೆ “ಕ್ಯಾಸ್’ ಟ್ರಾಯ್‌ನ ಇನ್ನೊಂದು ಗುರುತರ ಹೆಜ್ಜೆ. ಪುಟ್ಟ ಡಿಜಿಟಲ್ ಸೆಟ್‌ಟಾಪ್ ಬಾಕ್ಸ್ ಮೂಲಕ ವೀಕ್ಷಕ ತನಗೆ ಬೇಕಾದ ಚಾನೆಲ್ ನೋಡುವ ಈ ವ್ಯವಸ್ಥೆ ಭಷ್ಯದಲ್ಲಿ ಆಕರ್ಷಣೀಯ. ಮುಖ್ಯವಾಗಿ, ದೇಶದಲ್ಲಿ ವ್ಯಾಪಕವಾಗುತ್ತಿರುವ ಕೇಬಲ್ ಮಾಫಿಯಾಗೆ ಇದು ಸಮರ್ಥ ಉತ್ತರವೂ ಹೌದು.
ಗ್ರಾಹಕರ ದೂರು ನಿರ್ವಹಣೆಗೆ ಸ್ಪಷ್ಟ ನಿಯಮಗಳನ್ನು ಟ್ರಾಯ್ ರೂಪಿಸಿದೆ. ಉಚಿತ ಕಾಲ್‌ಸೆಂಟರ್, ನೋಡಲ್ ಆಫೀಸರ್, ಅಪಲೇಟ್ ಅಥಾರಿಟಿಗಳ ಈ ನಿರೂಪಣೆ ಜನಪರವಾಗಿದೆ. ದೇಶದ ಹೆಚ್ಚು ಮಂದಿ ಮೊಬೈಲ್ ಗ್ರಾಹಕರು ಅನಕ್ಷರಸ್ಥರೂ, ಕೂಲಿ ಕಾರ್ಮಿಕರೂ ಆಗಿರುವುದರಿಂದ ಟ್ರಾಯ್ ಅವರ ಪರ ನಿಲ್ಲದಿದ್ದರೆ ಅನಾಹುತವೇ ಆದೀತು. ಖಾಸಗಿ ಮೊಬೈಲ್ ಸೇವಾದಾತರ ಲಾಭಕೋರತನಕ್ಕೆ ಕಡಿವಾಣ ಹಾಕಲೆಂದೇ ಟ್ರಾಯ್ ಕಾಲಕಾಲಕ್ಕೆ ನಿರ್ದೇಶನಗಳನ್ನು ಜಾರಿಗೆ ತಂದಿದೆ.
ಕೆಲವನ್ನು ನೆನಪಿಸುವುದಾದರೆ, ಬಾಕಿ ಉಳಿದಿರುವ ಟಾಕ್‌ಟೈಮ್ ಗ್ರೇಸ್ ಅವಧಿಯವರೆಗೆ ಮರುಭರ್ತಿಗೆ ಇರುವುದು, ಮೌಲ್ಯವರ್ಧಿತ ಸೇವೆಗೆ ಮುಂಚಿತ ಗ್ರಾಹಕ ಒಪ್ಪಿಗೆ ಅತ್ಯಗತ್ಯ, ಪ್ಲಾನ್ ಬದಲಾವಣೆಗೆ ಶುಲ್ಕ ವಿಧಿಸುವಂತಿಲ್ಲ. ಆರು ತಿಂಗಳವರೆಗೆ ಟ್ಯಾರಿಫ್ ದರ ಏರಿಸಲಾಗದು. ಗುಪ್ತ ಶುಲ್ಕ ಹೇರುವಂತಿಲ್ಲ, 20 ರೂ.ಗಿಂತ ಹೆಚ್ಚು ಟಾಕ್‌ಟೈಮ್ ಹೊಂದಿರುವ ಸಿಮ್ ಅನ್ನು ನಿಷ್ಕ್ರಿಯಗೊಳಿಸುವಂತಿಲ್ಲ ಎಂಬಿತ್ಯಾದಿ ನಿರ್ದೇಶನಗಳು ಪ್ರಭಾವಯುತ.
ತನ್ನ ಕಾರ್ಯಾವಧಿಯ ಇತ್ತೀಚಿನ 10 ವರ್ಷಗಳಲ್ಲಿ ಟೆಲಿಕಾಂ ತರಂಗಾಂತರಗಳ ಮಾರಾಟದ ಹಗರಣಗಳು ನೇರ ಸಂಬಂಧ ಹೊಂದಿಲ್ಲದಿದ್ದರೂ ಟ್ರಾಯ್‌ಗೆ ಸಮಸ್ಯೆಯಾಯಿತು. ಖುದ್ದು ಟ್ರಾಯ್ ದೂರವಾಣಿ ಗ್ರಾಹಕರ ಪರವಾಗಿ ಹೋರಾಡುವ ಸರ್ಕಾರೇತರ ಸಂಸ್ಥೆಗಳ ಬಗ್ಗೆ ಬೆಳೆಸಿಕೊಂಡಿರುವ ಅವಜ್ಞೆ ಅಷ್ಟರಮಟ್ಟಿಗೆ ಗ್ರಾಹಕ ಜಾಗೃತಿಯ ವಿಚಾರದಲ್ಲಿ ದೊಡ್ಡ ತಡೆಯಾಗಿದೆ. ಈ ಹಂತದಲ್ಲೂ ಟ್ರಾಯ್, ಹಲವು ಗ್ರಾಹಕ ಪರ ಹೆಜ್ಜೆಗಳನ್ನು ಇಟ್ಟಿರುವುದು ನಿಜ.
ಮೊಬೈಲ್ ನಂಬರ್ ಬದಲಾಯಿಸದೆ ಸೇವಾದಾತರನ್ನು ಬದಲಾಯಿಸುವ ಎಂಎನ್‌ಪಿ, 2012ರಲ್ಲಿ ಜಾರಿಗೊಳಿಸಿದ ಕಡ್ಡಾಯ ಸೆಕೆಂಡ್ ಪಲ್ಸ್ ಪ್ಲಾನ್, ಅಕ್ಸೆಸ್ ಡಿಫಿಸಿಟ್ ಚಾರ್ಜ್‌ನ ರದ್ದು ಮೊದಲಾದವುಗಳ ಮೂಲಕ ದಿನದಿಂದ ದಿನಕ್ಕೆ ಮೊಬೈಲ್ ಸೇವೆಗಳ ದರಗಳನ್ನು ಕಡಿಮೆ ಮಾಡಿದ್ದು ಮತ್ತು ಅವುಗಳ ನಿಯಂತ್ರಣದಲ್ಲಿ ಸಫಲತೆ ಪಡೆದಿದ್ದನ್ನು ಉಲ್ಲೇಖೀಸಬೇಕಾಗುತ್ತದೆ.
ಮೊದಲ ಹತ್ತು ವರ್ಷಗಳ ಸಾಧನೆಯನ್ನು ಹೋಲಿಕೆಗೆ ತೆಗೆದುಕೊಂಡರೆ ಟ್ರಾಯ್‌ನ ಉತ್ತರಾರ್ಧ ಕೆಲ ಮಟ್ಟಿಗೆ ನಿರಾಶೆ ಮೂಡಿಸುತ್ತದೆ. ಮುಖ್ಯವಾಗಿ, ಡೈರೆಕ್ಟ್ ಹೋಂ ಸೇವೆಗಳ ವಿಚಾರದಲ್ಲಿ ಅದು ಅವಶ್ಯವಾಗಿ ಹೆಚ್ಚಿನ ಗಮನ ಕೊಡಬೇಕಿತ್ತು. 2003ರಲ್ಲಿ ಆರಂಭವಾದ ಡಿಟಿಎಚ್ 2009ರ ವೇಳೆಗೆ 80ಮಿಲಿಯನ್ ಗ್ರಾಹಕರನ್ನು ಹೊಂದಿತ್ತು. 2016ರ ಒಂದು ಅವಧಿಯಲ್ಲಿ 100 ಮಿಲಿಯನ್ ಚಂದಾದಾರರ ಮೈಲುಗಲ್ಲು ದಾಟಿದ್ದೂ ಉಂಟು.
ಪ್ರಸ್ತುತ 63 ಮಿಲಿಯನ್ ಡಿಟಿಎಚ್ ಚಾಲ್ತಿ ಬಳಕೆದಾರರನ್ನು ಹೊಂದಿದೆ. ಈಗಿನ ನಿರೀಕ್ಷೆಗಳ ಪ್ರಕಾರ, 2021ಕ್ಕೆ 115 ಮಿಲಿಯನ್ ಕೇಬಲ್ ಗ್ರಾಹಕರ ಜೊತೆಗೆ 84 ಮಿಲಿಯನ್ ಡಿಟಿಎಚ್ ಚಂದಾದಾರರು ದೇಶದಲ್ಲಿರುತ್ತಾರೆ. ಈ ಡಿಟಿಎಚ್ ವ್ಯವಸ್ಥೆಯನ್ನು ನೇರ್ಪುಗೊಳಿಸಲು ಇನ್ನಷ್ಟು ನಿಯಮಗಳು ಬೇಕಾಗಿದೆ.
ಬೇಕು ಡಿಟಿಎಚ್ ನಿಯಂತ್ರಣ: ಇವತ್ತಿಗೂ ಅಘೋಷಿತವಾಗಿ ಶುಲ್ಕ ವಿಧಿಸುವುದು, ಅನಗತ್ಯವಾಗಿ ಮೌಲ್ಯವರ್ಧಿತ ಸೇವೆ ಚಾಲನೆಯ ನೆಪದಲ್ಲಿ ಶುಲ್ಕ ಕೀಳುವುದು, ಪ್ಯಾಕೇಜ್‌ಗಳು, ಚಾನೆಲ್‌ಗಳ ಆಯ್ಕೆಯಲ್ಲಿ ಪಾರದರ್ಶಕತೆ ಹೊಂದದಿರುವ ಗ್ರಾಹಕ ವಿರೋಧಿ ತಂತ್ರಗಳನ್ನು ಡಿಟಿಎಚ್ ಸೇವಾದಾತರು ಮಾಡುತ್ತಿದ್ದಾರೆ. ರಾತ್ರೋರಾತ್ರಿ ಗ್ರಾಹಕನ ಖಾತೆಯಲ್ಲಿನ ಸಾರಾರು ರೂ.ಗಳನ್ನು ವ್ಯಾಸ್ ಜಾರಿಯಾಗಿದೆ ಎಂಬ ಕುತ್ಸಿತತನ ತೋರಿ ಗ್ರಾಹಕನ ಜೇಬಿಗೆ ಕತ್ತರಿ ಹಾಕುವ ಪ್ರಕರಣ ನಡೆದಿದೆ.
ಇದಕ್ಕೆ ಡಿಟಿಎಚ್ ಪೋರ್ಟಬಿಲಿಟಿ ಮಾದರಿಯ ನಿಯಮವನ್ನು ಟ್ರಾಯ್ ಆದಷ್ಟು ಕ್ಷಿಪ್ರವಾಗಿ ಜಾರಿಗೆ ತರಬೇಕಿದೆ. ಈ ಕ್ಷೇತ್ರದ ನಿಯಂತ್ರಣಕ್ಕೆ ತನ್ನ ಮೂರನೇ ದಶಕವನ್ನು ಟ್ರಾಯ್ ಪ್ರಮುಖವಾಗಿ ಗುರ್ತಿಸಿಕೊಳ್ಳಬೇಕು. ಈಗಲಾದರೂ ದೂರವಾಣಿ ಒಂಬುಡ್ಸ್‌ಮನ್ ದೇಶದಲ್ಲಿ ಜಾರಿಗೊಳ್ಳಲು ಟ್ರಾಯ್ ದೂರವಾಣಿ ಕ್ಷೇತ್ರದ ಎನ್‌ಜಿಓಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು.
ಸದ್ಯ 1.15 ಬಿಲಿಯನ್ ಗ್ರಾಹಕರನ್ನು ಹೊಂದಿರುವ ಡಿಎನ್‌ಡಿಯನ್ನು ಮತ್ತಷ್ಟು ಬಲಗೊಳಿಸಬೇಕು. ಇನ್ನೂ ಮುಂದುವರೆದಿರುವ ಬ್ಲಾಕ್‌ಔಟ್ ಸೌಲಭ್ಯವನ್ನು ರದ್ದುಗೊಳಿಸಬೇಕು. ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿಷನ್ ಡಿಟಿಟಿ ಜಾರಿಗೊಳ್ಳಲು ಯೋಜನೆ ರೂಪಿಸಬೇಕು. ಮೊಬೈಲ್ ಸೇವೆಗಳ ಗುಣಮಟ್ಟ, ಸೇವಾ ದರ ನಿಯಂತ್ರಣದಲ್ಲಿರಲು ಟ್ರಾಯ್ ನೇರ ಕಾರಣ. ಇಂತಹ ಹಲವು ಅಂಶಗಳಿಗಾಗಿ ಟ್ರಾಯ್‌ಗೊಂದು ಸಲಾಂ.
* ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.