ತುಂಗಭದ್ರೆಯ ಭತ್ತದ  ಕಥನ


Team Udayavani, Oct 30, 2017, 11:16 AM IST

30-12.jpg

ನದಿ ಮೂಲದಿಂದ ಸಾಗರ ಸಂಗಮದವರೆಗೆ ಕೃಷಿ ಬದುಕಿನ ಅಧ್ಯಯನ ನಡೆಸುವವರಿಗೆ ದಕ್ಷಿಣದ ಗಂಗೆ “ತುಂಗಭದ್ರಾ’  ವಿಶೇಷ ನೆಲೆ. ಸಹ್ಯಾದ್ರಿಯ ಬೆಟ್ಟದಿಂದಿಳಿದು ಬಯಲುಸೀಮೆಗೆ ಮುಖಮಾಡಿದ ನದಿಯ ಹಸಿರು ನಡೆ ಹಸಿದವರಿಗೆ ಅನ್ನವಾಗಿದೆ. ಹರಿಯುವ ನದಿ ಅಣೆಕಟ್ಟೆಯಲ್ಲಿ ನಿಲ್ಲಲು ಆರಂಭಿಸಿದ ಬಳಿಕದ ಬೆಳೆ ಬದುಕಿನ ಬದಲಾವಣೆಗಳ ಅವಲೋಕನಕ್ಕೂ ಸೂಕ್ತ ಸ್ಥಳವಿದು. 

ಬ್ರಹ್ಮಾಂಡ ಪುರಾಣದಲ್ಲಿ ನದಿಯ ಕತೆ ಇದೆ. ಭೂಮಿಯನ್ನು ಹಿರಣ್ಯಾಕ್ಷ ಅಪಹರಿಸಿಕೊಂಡು ಪಾತಾಳಕ್ಕೆ ಹೊರಟನು. ಕಂಗಾಲಾದ ಋುಷಿ ಮುನಿಗಳು ಶ್ರೀಮನ್ನಾರಾಯಣನನ್ನು  ಪ್ರಾರ್ಥಿಸಿದರು. ಆಗ ಮಹಾವಿಷ್ಣು ವರಾಹ ರೂಪ ಧರಿಸಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ಪಡೆದನು. ಈ ಮಹಾಕಾರ್ಯದಿಂದ ಆಯಾಸಗೊಂಡ ವರಾಹ  ಪರ್ವತದಲ್ಲಿ ತನ್ನ  ಎರಡು ಕೋರೆಯ ಹಲ್ಲುಗಳನ್ನಿಟ್ಟು ವಿಶ್ರಮಿಸಿದನು. ವರಾಹನ ಕೋರೆಯ ಭಾರಕ್ಕೆ ಪರ್ವತವು ಸೀಳಿತು.  ಎಡಕೋರೆ ಇಟ್ಟ ಜಾಗದಿಂದ ತುಂಗಾ, ಬಲದಿಂದ ಭದ್ರಾ ನದಿ ಜನಿಸಿತು. ನೇತ್ರದಿಂದ ಕರಾವಳಿಗೆ ಪ್ರವಹಿಸುವ ನೇತ್ರಾವತಿಯ ಜನನವಾಯಿತು.  ಶಿವಮೊಗ್ಗ ಜಿಲ್ಲೆಯ ಗಂಗಾಮೂಲದ ವರಾಹ ಪರ್ವತದಿಂದ ಈಶಾನ್ಯಕ್ಕೆ ಮುಖಮಾಡಿದ ತುಂಗೆ ಬಗ್ಗುಂಚಿ, ತೀರ್ಥಹಳ್ಳಿ, ಶಿವಮೊಗ್ಗದ ಮೂಲಕ ಸುತ್ತು ಬಳಸಿ ಬಂದು ಭದ್ರಾವತಿಯ ಕೂಡಲಿಯಲ್ಲಿ ಭದ್ರೆಯನ್ನು ಸೇರುತ್ತಾಳೆ. ಪಶ್ಚಿಮ ಘಟ್ಟದಿಂದ ಉಗಮವಾದ ತುಂಗಭದ್ರೆಯದು  ಸುಮಾರು 650 ಕಿಲೋ ಮೀಟರ್‌ ದೂರದ ಬಂಗಾಳಕೊಲ್ಲಿಗೆ  ಪಯಣ. ಇದು ವರದಾ, ಕುಮುದ್ವತಿ, ಹರಿದ್ರಾ, ವೇದಾವತಿ, ಚಿಕ್ಕಹಗರಿ ನದಿಗಳನ್ನು ಜೊತೆ ಸೇರಿಸಿಕೊಂಡಿದೆ. ಬಳ್ಳಾರಿಯನ್ನು ದಾಟಿ ಆಂಧ್ರದ ಕರ್ನೂಲು ಜಿಲ್ಲೆಯ ಅಲಂಪುರದಲ್ಲಿ ಕೃಷ್ಣಾ ನದಿಯಲ್ಲಿ ಸಂಗಮವಾಗಿದೆ.  

“ತುಂಗಾ ಪಾನ, ಗಂಗಾ ಸ್ನಾನ’ ಮಾತು ಜನಜನಿತವಾಗಿದೆ. ತುಂಗೆ ಪಶ್ಚಿಮ ಘಟ್ಟದ ಮಳೆಕಾಡಿನ ಶೋಲಾ ಬೆಟ್ಟದಲ್ಲಿ ಜನಿಸಿದವಳು.  ಆನೆ, ಹುಲಿ, ಶ್ರೀಗಂಧ, ಬೀಟೆ, ಆರ್ಕಿಡ್‌ಗಳ ಶ್ರೀಮಂತ ಕಾನನದ ತವರು. ಬಳ್ಳಾರಿಯ ಗಡಿವರೆಗೆ ನದಿ ದಂಡೆಯ ಕೃಷಿಸಿರಿ ನೋಡುತ್ತ ಹೋದರೆ ತುಂಗಭದ್ರೆ ಜನಜೀವನಕ್ಕೆ ನೀಡಿದ ಆಹಾರ, ಆರ್ಥಿಕ ಭದ್ರತೆಯ ಅಗಾದತೆ ಅರ್ಥವಾಗುತ್ತದೆ.  ಕಾಫಿ, ಟೀ, ಅಡಿಕೆ, ಬಾಳೆ, ತೆಂಗು, ಕಾಳುಮೆಣಸು, ಏಲಕ್ಕಿ, ಜೇನು, ಕಬ್ಬು, ಹಡಗಲಿಯ ಮಲ್ಲಿಗೆ, ಬಿಳಿಜೋಳ, ಸಜ್ಜೆ, ಹತ್ತಿ, ತೊಗರಿ, ಮೆಣಸು, ಭತ್ತಗಳ ಬೆರಗು ಕಾಣಿಸುತ್ತದೆ. ರಸ್ತೆ, ವಾಹನಗಳಿಲ್ಲದ ಕಾಲದಲ್ಲಿ ಕಾಡಿನ ಡೌಗಾ ಬಿದಿರು ಕಡಿದು ನದಿಗೆ ಎಸೆದರೆ ಪ್ರವಾಹದಲ್ಲಿ ತೇಲಿ ಬಂದು ನದಿದಂಡೆಯ ಗ್ರಾಮಗಳಿಗೆ ಪೂರೈಕೆಯಾಗುತ್ತಿದ್ದ ಕತೆಗಳಿವೆ. ಬಯಲುಸೀಮೆಯ ಮನೆ ನಿರ್ಮಾಣದಲ್ಲಿ ಬಿದಿರು ಜೊತೆಯಾಗಲು ನದಿಯ ಕೊಡುಗೆ ಇದೆ.  ಹಾಳ್‌ಮಣ್ಣಿನ ಮೇಲುಮುದ್ದೆ ಹಾಕಿ ನಿರ್ಮಿಸಿದ ಎರಡು ಮೂರು ಶತಮಾನಗಳ ಹಿಂದಿನ ಬಿದಿರಿನ ಮನೆಗಳು  ಕೌಶಲದ ಸಾಕ್ಷಿಯಾಗಿ ಇಂದಿಗೂ  ಉಳಿದಿವೆ.  ಆದಿಮಾನವರ ವಾಸಸ್ಥಾನ, ಪಂಪಾಕ್ಷೇತ್ರ, ಕಿಷ್ಕಿಂಧವಾಗಿ ನಂತರದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ನೆಲೆಯಾದ ಹಂಪಿಯನ್ನೆಲ್ಲ ಎಲ್ಲರಿಗಿಂತ ಚೆನ್ನಾಗಿ ಅರಿತವಳು ತುಂಗಭದ್ರೆಯೇ. ಹಡಗಲಿಯ ಮಲ್ಲಿಗೆಯನ್ನು ಹರಿಗೋಲಲ್ಲಿ ತೇಲಿಸಿದರೆ ಪೂಜೆಯ ಸಮಯಕ್ಕೆ  ಹಂಪಿಯ ವಿರೂಪಾಕ್ಷ ದೇಗುಲಕ್ಕೆ ತಲುಪುತ್ತಿತ್ತೆಂಬುದು ನದಿ ನಂಬಿದ ಜನಪದರ ನುಡಿಗಳು. ಕೃಷಿ ಆಯುಧ ರೂಪಿಸುತ್ತಿದ್ದ ಉಂಡೆಕಮ್ಮಾರರು ನದಿ ದಂಡೆಯ ನಿವಾಸಿಗಳು. ಕಣಿವೆಯ ಕಬ್ಬಿಣದ ಅದಿರು ಸಂಗ್ರಹಿಸಿ ಹೊಸಯುಗದ ನಾಗರೀಕತೆಗೆ ನೆರವಾದವರು.

ನದಿ ದಂಡೆಗಳು ಪತ್ರ ತೀರ್ಥ, ಪುಣ್ಯಕ್ಷೇತ್ರಗಳ ಬೀಡು. ಶೃಂಗೇರಿ, ಹಂಪಿ, ಹರಿಹರ, ವಿಜಯನಗರ, ಮಂತ್ರಾಲಯ, ಬನವಾಸಿ ಪಟ್ಟಿ ಮಾಡುತ್ತ ಹೋದರೆ ನೀರಿನ ಸುತ್ತ ನಂಬಿಕೆಯ ನೆಲೆಗಳಿವೆ. ಕದಂಬರ ಬನವಾಸಿ ಇರುವುದು ಇದೇ ತಂಗಭದ್ರೆಯ ಸಹೋದರಿ ವರದಾ ನದಿಯ ತೀರದಲ್ಲಿ! ಇದು ನಮ್ಮ ಪ್ರಪ್ರಥಮ ರಾಜಧಾನಿ.  ವಿಜಯನಗರ, ಹೊಯ್ಸಳ, ಇಕ್ಕೇರಿ, ಮೈಸೂರು ಅರಸುಯುಗದ ಆಳ್ವಿಕೆ ಕಂಡ ಕಣಿವೆ ಇದು. ಕವಿಗಳ ಸ್ಪೂರ್ತಿಯ ತಾಣ. ಪಂಪ, ರಾಘವಾಂಕ, ಕನಕದಾಸರು, ಪುರಂದರದಾಸರೆಲ್ಲ ತುಂಗಭದ್ರೆಯನ್ನು ಮೆಚ್ಚಿದವರು. ಎಲ್ಲಕ್ಕಿಂತ ಮುಖ್ಯವಾಗಿ  ರಾಜ್ಯದ ನೀರಾವರಿ ಚರಿತ್ರೆಯಲ್ಲಿ ಪ್ರಮುಖ ಕಾರ್ಯಗಳು ವಿಜಯ ನಗರ ಸಾಮ್ರಾಜ್ಯದಲ್ಲಿ ನಡೆದಿವೆ. ಅಣೆಕಟ್ಟು, ಕೆರೆ, ಕಾಲುವೆ ರಚನೆಗೆ ಅರಸು ಯುಗದ ಹಿರಿಮೆ ಇದೆ. ನದಿಯ ನೀರನ್ನು ದೂರದ ಕೆರೆಗಳಿಗೆ ಕಾಲುವೆಗಳ ಮೂಲಕ ತುಂಬಿಸುವ ‘ಜಲಸೂತ್ರಧಾರಿ’ ತಜ್ಞರನ್ನು ಗುರುತಿಸಿ ಪ್ರೋತ್ಸಾಹಿಸಿದವರು ಇವರು. ಭೂದಾನ, ಗೋದಾನಗಳಂತೆ “ಬಾವಿ ದಾನ’ ಪರಂಪರೆಯೂ ಇತ್ತೆಂದು ಶಾಸನಗಳು ಉಲ್ಲೇಖೀಸಿವೆ. ಕುಡಿಯುವ ನೀರಿನ ವ್ಯವಸ್ಥೆಗೆ “ಚಲಂದ್ರ’ ನಿರ್ಮಾಣ ಪುಣ್ಯದ ಕೆಲಸವಾಗಿತ್ತು.  ನಾಡಬಾವಿ, ಕಪಿಲಬಾವಿಗಳು ಕೃಷಿ ನೀರಾವರಿಗೆ ನೆರವಾಗಿದ್ದವು. ಕಣಿವೆ ನೀರಾವರಿ ಚರಿತ್ರೆ ಶ್ರೀಮಂತವಾಗಿ ರಾಜವೈಭವಕ್ಕೆ ಮೂಲವಾಗಿತ್ತು. ಯಾವುದೇ ರಾಜ್ಯದಲ್ಲಿ ಕಲೆ, ಸಾಹಿತ್ಯ ಸಂಸ್ಕೃತಿ ಉಚ್ಛಾ†ಯಕ್ಕೆ ಬೆಳೆಯಲು ಪ್ರಜೆಗಳ ಕ್ಷೇಮ ಮುಖ್ಯವಿದೆ. ಇದಕ್ಕೆ ನೀರು ಜೀವಾಳ. ಬಯಲು ಸೀಮೆ ಸದಾ ûಾಮದ ತವರಾಗಿದ್ದರೂ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ  ಶಿಲ್ಪ ಕಲಾಸಿರಿ ಅರಳಿದೆ. ಇಲ್ಲಿನ  ನೀರಾವರಿ ವ್ಯವಸ್ಥೆ, ತುಂಗಭದ್ರೆಯ ಶ್ರೀರಕ್ಷೆ ಮುಖ್ಯ ಕಾರಣವಾಗಿದೆ. 

60 ವರ್ಷಗಳ ಹಿಂದೆ ಬಳ್ಳಾರಿ, ಗಂಗಾವತಿ, ರಾಯಚೂರು ಸೀಮೆಗಳಲ್ಲಿ ಅಲ್ಲಲ್ಲಿ ಪುರಾತನ ಕಾಲದ ವಿಶಾಲ ಕೆರೆಗಳಿದ್ದರೂ ನೀರಾವರಿ ಬೆಳೆಯ ವಿಸ್ತರಣೆಯಾಗಿರಲಿಲ್ಲ. ಮಳೆ ಆಶ್ರಿತ ಬೇಸಾಯವಿತ್ತು. ಶಿವಮೊಗ್ಗ, ಹರಿಹರ ಪ್ರದೇಶಗಳಲ್ಲಿ  ಭತ್ತದ ಬೆಳೆ ವಿಶೇಷವಾಗಿತ್ತು. ಕ್ರಿ.ಶ 1953ರಲ್ಲಿ ಹೊಸಪೇಟೆಯಲ್ಲಿ ಅಣೆಕಟ್ಟೆ  ನಿರ್ಮಾಣವಾಯಿತು. ಮಳೆ ಆಶ್ರಿತ ಭೂಮಿ ಕಾಲುವೆ ನೀರಾವರಿಗೆ ಬದಲಾಯಿತು. ಬಿಳಿಜೋಳ, ಸಜ್ಜೆ. ನವಣೆ, ಜೈದರ್‌ ಹತ್ತಿ, ಲಕ್ಷಿ ಹತ್ತಿ, ಮೆಣಸು, ತೊಗರಿ, ಹೆಸರು ಬೆಳೆಯುತ್ತಿದ್ದ  ಎರೆಹೊಲಕ್ಕೆ ನೀರಾವರಿಯ ಅವಕಾಶ ತೆರೆಯಿತು. “ಮೈಮ್ಯಾಗಿನ ವಸ್ತ್ರ ಒದ್ದೆಯಾಗುವಷ್ಟು ಮಳೆ ಬಂದ್ರೆ ನಮ್ಗೆ ವರ್ಷದ ರೊಟ್ಟಿàರಿ’ ಗಂಗಾವತಿ, 

ಸಿಂಧನೂರಿನ ಕೃಷಿಕರು ಬಿಳಿ ಜೋಳದ ಗೆಲುವು ಹೇಳುತ್ತಿದ್ದರು. ಎರೆ ಹೊಲದಲ್ಲಿ ಬೆಳೆಯುವ ಮಳೆ ಆಶ್ರಿತ ಬೆಳೆಗೆ 15-20 ಮಿಲಿ ಮೀಟರ್‌ ಮಳೆ ಭೂಮಿ ಹಸಿಯಾಗಲು ಸಾಕಿತ್ತು. ಬೀಜ ಬಿತ್ತಿದ ಬಳಿಕ ಇಂಥ ಇನ್ನೊಂದು ಮಳೆ ಸುರಿದರೆ ಮೂರು ತಿಂಗಳ ಬೆಳೆ ಸುಗ್ಗಿಗೆ ಸಾಕು. ಅಕ್ಕಡಿ ಬೇಸಾಯ ಕ್ರಮ ಅನುಸರಣೆಯಿಂದ ತುಸುಮಳೆ ಹೆಚ್ಚು ಕಡಿಮೆಯಾದರೂ ಯಾವುದಾದರೊಂದು ಬೆಳೆ ಬದುಕಿಸುತ್ತಿತ್ತು. ಬೇಸಾಯಕ್ಕೆ  ದನಕರು ಮುಖ್ಯವಾದ್ದರಿಂದ ಅವುಗಳಿಗೆ ಉತ್ಕೃಷ್ಟ ಮೇವು, ಅಕ್ಕಡಿ ಬೇಸಾಯ ಕ್ರಮದಿಂದ ಸಿಗುತ್ತಿತ್ತು. ಹಿಂಗಾರಿ, ಮುಂಗಾರಿ ಲೆಕ್ಕಹಾಕಿ ಬದುಕಿದ ರೈತರ ಜೀವನದಲ್ಲಿ ನೀರಾವರಿ ಅಣೆಕಟ್ಟೆಗಳು ಈಗ ಬಹುದೊಡ್ಡ ಬದಲಾವಣೆ ಮೂಡಿಸಿವೆ. ತುಂಗಭದ್ರಾ ನದಿಗೆ ರೂಪಿಸಿದ ಎಲ್ಲ ಯೋಜನೆಯಿಂದ 4,81,532 ಹೆಕ್ಟೇರ್‌ ನೀರಾವರಿ ಅವಕಾಶ ದೊರಕಿದೆ. 

ಇಂದು ತುಂಗೆಯ ತೆನೆ ಪ್ರಸಿದ್ಧವಾಗಿದೆ. ಅಧಿಕ ನೀರು ಬಳಸುವ ಭತ್ತಕ್ಕೆ ಎಲ್ಲರ ಮನಸ್ಸು ವಾಲಿದೆ. ಕ್ರಿ.ಶ 1953ರಲ್ಲಿ ಅಣೆಕಟ್ಟೆ ಯೋಜನೆ ಮುಗಿದು ಹೊಲಗಳಿಗೆ ನೀರು ಬಂದಾಗ ಬಹುತೇಕ ರೈತರಿಗೆ ಯಾವ ಬೆಳೆ ಬೆಳೆಯಬೇಕೆಂದು ಗೊತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಭತ್ತದ ಗದ್ದೆಗೆ ಬದು ನಿರ್ಮಿಸುವ ತಂತ್ರವೂ ತಿಳಿದಿರಲಿಲ್ಲ. ಆಗ ಕ್ವಿಂಟಾಲ್‌ ಬಿಳಿಜೋಳಕ್ಕೆ 150-200 ರೂಪಾಯಿ ಬೆಲೆ. ಭತ್ತ ಬೆಳೆದರೆ ಕ್ವಿಂಟಾಲ್‌ಗೆ 400 ರೂಪಾಯಿ ಸಿಗುತ್ತದೆಂಬ ಮಾತು ರೈತರ ಗಮನ ಸೆಳೆಯಿತು. ಹಬ್ಬಕ್ಕೆ ಒಮ್ಮೆ ಅನ್ನ ಊಟ ಮಾಡುತ್ತಿದ್ದ ರಾಯಚೂರು,  ಸಿಂಧನೂರು, ಗಂಗಾವತಿ ಸೀಮೆಯಲ್ಲಿ ಅನ್ನದ ಮೂಲವಾದ “ನೆಲ್ಲಿನ’ ಕೃಷಿ ಬಂದಿತು. 
ಆಂಧ್ರದ ಗೋದಾವರಿ ಕಣಿವೆಯ ರೈತರು ಆ ಕಾಲಕ್ಕೆ ನೆಲ್ಲು ಗೆದ್ದವರು. ಕರ್ನಾಟಕದ ತುಂಗಭದ್ರಾ ತೀರಕ್ಕೆ ಕಾಲಿಟ್ಟರು. ಭತ್ತದ ಬದು ತಯಾರಿ, ಸಸಿ ಮಡಿ ತಯಾರಿ, ನಾಟಿ, ಕಳೆ ತೆಗೆಯುವುದು, ಸಂಸ್ಕರಣೆ ಕಾರ್ಯಗಳಿಗೆ ಆಂಧ್ರದ ಕೂಲಿಗಳ ಆಗಮನವಾಯ್ತು. ಕಣಿವೆಯ ನೀರು ಅಣೆಕಟ್ಟೆಯಲ್ಲಿ ನಿಂತು ಪಕ್ಕದ ಒಣ ಬೇಸಾಯದ ಹೊಲಕ್ಕೆ ಹರಿದ ಪರಿಣಾಮ ಪಾರಂಪರಿಕ ಬೇಸಾಯ ತಂತ್ರ ಪರಕೀಯವಾಯಿತು. ಹತ್ತು ತಲೆಮಾರು ಬದುಕಿಸಿದ ಒಣ ಬೇಸಾಯ ತಂತ್ರಗಳನ್ನು ಜನ ಮರೆತರು.  300-400ಕಿಲೋ ಮೀಟರ್‌ ದೂರದ ಕೂಲಿಗಳನ್ನು ತಂದು ಭತ್ತ ಬೆಳೆಸಲು ಆರಂಭಿಸಿದರು.

ಭೂಮಿಗೆ ಬೆಲೆ ಇಲ್ಲದ ಕಾಲ. ನೀರಾವರಿ ಆರಂಭದಲ್ಲಿ ಎಕರೆಗೆ ಒಂದೆರಡು ಸಾವಿರ ರೂಪಾಯಿ! ಅದರಲ್ಲಿಯೂ ಮಸಾರಿ ಭೂಮಿಗೆ ಯಾವ ಬೆಲೆಯೂ ಇರಲಿಲ್ಲ. ಹೊಲ ತಿದ್ದಿ ಗದ್ದೆಗಳಾಗಿ ಪರಿವರ್ತಿಸುತ್ತ ಭತ್ತ ಸಾಮ್ರಾಜ್ಯ ಶುರುವಾಯಿತು. ಫ‌ಲವತ್ತಾದ ಮಣ್ಣು, ಒಳ್ಳೆಯ ನೀರು, ಬಿಸಿಲಿನಿಂದ ತುಂಗಭದ್ರೆಯ ಕಣಿವೆ ಭತ್ತದ ಕಣಜವಾಗಿ ಬದಲಾಯಿತು. ಎಕರೆಗೆ 50-55 ಚೀಲ ಭತ್ತ ಬೆಳೆದರು. ಬೇಸಾಯಕ್ಕೆ ಪೂರಕವಾಗಿ ಕೂಲಿಗಳ ಆಗಮನ ನಡೆಯಿತು. ರಸಗೊಬ್ಬರ, ಕೀಟನಾಶಕದ ಅಂಗಡಿಗಳು ಬಂದವು. ಟ್ರ್ಯಾಕ್ಟರ್‌ಗಳು ಉಳುಮೆಗೆ ವೇಗ ನೀಡಿದವು. ದೇಶದಲ್ಲಿಯೇ ಅತಿಹೆಚ್ಚು ಟ್ರ್ಯಾಕ್ಟರ್‌ ಮಾರಾಟದ ಕೇಂದ್ರವಾಗಿ ಸಿಂಧನೂರು-ಗಂಗಾವತಿ ಎದ್ದು ನಿಂತಿತು. ಭತ್ತ ಸಂಗ್ರಹಣೆಗೆ ಗೋದಾಮುಗಳು ನಿರ್ಮಾಣವಾದವು.  ನೀರಾವರಿ ಯೋಜನೆ ಜಾರಿಯಾಗಿ ಮೂರು ದಶಕಗಳ ಬಳಿಕ ಬಿಳಿಜೋಳದ ಜವಾರಿ ಭಾಷೆ ಮರೆಯಾಗಿ ಭತ್ತದ ಆರ್ಥಿಕತೆ ಕುಣಿಯಿತು. ಹಳ್ಳಿಗಳು ಪುಟ್ಟ ಪೇಟೆಗಳಾದವು. ಭತ್ತ, ಉಳುಮೆ, ನಾಟಿ, ಕೊಯ್ಲು, ಸಂಸ್ಕರಣೆಗಳಲ್ಲಿ ಯಾಂತ್ರೀಕರಣ ಹೊಸ ಜಗತ್ತನ್ನು ತೋರಿಸಿತು. ಸೋನಾಮಸೂರಿ ಎಂಬ ಒಂದು ಭತ್ತದ ತಳಿಯ ಸುತ್ತ ಲಕ್ಷ ಲಕ್ಷ ಕುಟುಂಬಗಳ ಪಯಣ ಸಾಗಿತು. 

ಇಂದು ತುಂಗಭದ್ರಾ ನೀರಾವರಿಯ ನೆಲೆಗೆ 60 ವರ್ಷಗಳಾಗಿವೆ. ವರ್ಷಕ್ಕೆ ಎರಡು ಮೂರು  ಬೆಳೆ ತೆಗೆಯುತ್ತಿದ್ದ ರೈತರಿಗೆ ನೀರಿನ ಲಾಭ ಅರ್ಥವಾಗಿದೆ. ಕಾಲುವೆಯಲ್ಲಿ ನೀರು ಬಿಡುವುದಕ್ಕಿಂತ ಮುಂಚೆ ಅಗೆಮಡಿ ತಯಾರಿಸಬೇಕು.  ಅಗೆಸಸಿ ತಯಾರಿಸಲು ನೀರು ಬೇಕು. ಗದ್ದೆಗಳಲ್ಲಿ ಎಕರೆ ವಿಸ್ತಾರದ ಕೆರೆ ನಿರ್ಮಿಸಿ ಕಾಲುವೆ ನೀರನ್ನು ಸಂಗ್ರಹಿಸಿ ಮುಂದಿನ ವರ್ಷದ ಅಗೆಸಸಿ ತಯಾರಿಗೆ ನೀರುಳಿಸುವ ತಂತ್ರಗಳು  ಕಾಣಿಸುತ್ತವೆ. ಮುಂಚಿತವಾಗಿ ಅಗೆಸಸಿ ತಯಾರಿಸಿದರೆ ಕಾಲುವೆಯಲ್ಲಿ ನೀರು ಬಿಟ್ಟ ತಕ್ಷಣ ಭತ್ತದ ನಾಟಿ ಕೆಲಸ ಮಾಡಬಹುದು. ಎಲ್ಲರಿಗಿಂತ 20-25 ದಿನ ಮುಂಚೆ ಭತ್ತದ ಕೊಯ್ಲು ನಡೆದರೆ ಕ್ವಿಂಟಾಲ್‌ಗೆ 100-150 ರೂಪಾಯಿ ಹೆಚ್ಚಿನ ದರಕ್ಕೆ ಭತ್ತ ಮಾರಬಹುದೆಂಬ ಜಾಣ್ಮೆ ಇದೆ. 20-25 ಲಕ್ಷ ರೂಪಾುಗಳನ್ನು ನಿಯೋಗಿಸಿ ಹೊಲದಲ್ಲಿ ಬೃಹತ್‌  ಖಾಸಗಿ ಕೆರೆಗಳನ್ನು ರೈತರು 20 ವರ್ಷಗಳ ಹಿಂದೆಯೇ ನಿರ್ಮಿಸಿದ್ದಾರೆ. ಹೊಸಪೇಟೆಯ ಅಣೆಕಟ್ಟೆ 49.50 ಮೀಟರ್‌ ಎತ್ತರವಿದೆ. ಸಂಪೂರ್ಣ ತುಂಬಿದರೆ 132 ಟಿ ಎಮ್‌ಸಿ ನೀರು ಶೇಖರಿಸಬಹುದು. ಈಗ ಅಪಾರ ಪ್ರಮಾಣದಲ್ಲಿ ಹೂಳು ತುಂಬಿದ ಪರಿಣಾಮ 104  ಟಿಎಮ್‌ಸಿ ಮಾತ್ರ ಶೇಖರಣೆಯಾಗುತ್ತಿದೆ. ಅಣೆಕಟ್ಟೆಯ ಹೂಳೆತ್ತಲು ರೈತರು ಚಳವಳಿ ನಡೆಸಿದ್ದಾರೆ. ಸ್ವತಃ ಹೂಳೆತ್ತುವ ಕಾರ್ಯ ಆರಂಭಿಸಿದ್ದಾರೆ. ಆದರೆ ಅಣೆಕಟ್ಟೆಯ ಪೂರ್ತಿ ಹೂಳೆತ್ತುವುದು ಅಸಾಧ್ಯದ ಕೆಲಸ, ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ 30-40 ಅಡಿ ಎತ್ತರದಲ್ಲಿ ಗುಡ್ಡೆ ಹಾಕುವಷ್ಟು ಹೂಳು ಇಲ್ಲಿದೆಯೆಂಬುದು ತಜ್ಞರ ಮಾತು. 

ತುಂಗಭದ್ರೆಗೆ ಹೂಳು ತೆಗೆಯುವುದಕ್ಕಿಂತ ಹೊಸ ಅಣೆಕಟ್ಟೆ ನಿರ್ಮಿಸುವುದು ಸೂಕ್ತವೆಂಬ ಮಾತು ಕೇಳುತ್ತಿದೆ. ಜಾಗ ಆಯ್ಕೆಯಾಗಬೇಕು, ಭೂಮಿ ಕಳೆದು ಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. 60 ವರ್ಷಗಳ ಹಿಂದೆ ಯೋಜನೆ ಜಾರಿಯಾದಾಗ ಭೂಮಿಗೆ ಬೆಲೆ ಇರಲಿಲ್ಲ. ಈಗ ಎಕರೆ ನೀರಾವರಿ ಭೂಮಿ ಬೆಲೆ 25-30 ಲಕ್ಷ ರೂಪಾಯಿ! ಇಷ್ಟು ಪರಿಹಾರ ನೀಡಲು ಹೇಗೆ ಸಾಧ್ಯ? ಬಂಗಾರದ ಭೂಮಿ ಕಳೆದು ಕೊಳ್ಳಲು ರೈತರ ಮನಸ್ಸು ಒಪ್ಪುತ್ತದೆಯೇ? ಪ್ರಶ್ನೆಗಳಿವೆ. ತುಂಗಭದ್ರೆಯ ನೀರು ಬಯಲುಸೀಮೆಯ ಆರ್ಥಿಕತೆಯ ಹೊಸಶಕ್ತಿಯಾಗಿ ಅವತರಿಸಿದೆ. ಇದರ ಜೊತೆಗೆ ಅಧಿಕ ನೀರಾವರಿಯಿಂದಾಗಿ ಭೂಮಿ ಸವುಳು ಜವುಳಾಗಿ ಲಕ್ಷಾಂತರ ಎಕರೆ ಹಾಳಾಗಿದೆ. ಒಂದು ಕಾಲದಲ್ಲಿ 50 ಚೀಲ ಭತ್ತ ಬೆಳೆಯುತ್ತಿದ್ದ ನೆಲೆಯಲ್ಲಿ ಈಗ 20 ಚೀಲವೂ ಸಿಗುತ್ತಿಲ್ಲ. ರೋಗ, ಕೀಟಬಾದೆ ಹೆಚ್ಚುತ್ತಿದ್ದು ನಷ್ಟದ ಬೇಸಾಯ ಹಲವರಿಗೆ ಅರ್ಥವಾಗಿದೆ. ತೀಕ್ಷ್ಣ ವಿಷ ರಾಸಾಯನಿಕಗಳ ಸಿಂಪರಣೆಯಿಂದ ಭೂಮಿ, ಜನರ ಆರೋಗ್ಯಕ್ಕೂ ಅಪಾಯ ತಗುಲಿದೆ. ಕೆರೆ ನೀರಾವರಿ, ಮಳೆ ಆಶ್ರಿತ ಬೇಸಾಯ ನಂಬಿದ್ದ ನೆಲ ಅಣೆಕಟ್ಟೆಯ ಕಾಂಕ್ರೀಟ್‌ ಕಾಲುವೆ ನೀರಾವರಿಗೆ ಪರಿವರ್ತನೆಯಾದ ಬಳಿಕ ಹಿಂಗಾರಿ, ಮುಂಗಾರಿಯ ಬೇಸಾಯ ತಂತ್ರ ಮರೆತು ಹೋಗಿದೆ. ಕಳೆದ ವರ್ಷ ಮಳೆ ಕೊರತೆಯಿಂದ ಅಣೆಕಟ್ಟೆಯಲ್ಲಿ ನೀರಿಲ್ಲದೇ ಸಂಕಷ್ಟ ಅನುಭವಿಸಿ ಒಂದು ಬೆಳೆ ಪಡೆಯುವುದೂ ಕಷ್ಟವಾಗಿತ್ತು. ಬರಗಾಲದಿಂದ ಕಣಿವೆ ಜನರ ಕುಡಿಯುವ ನೀರಿನ ಸಮಸ್ಯೆ ಬೆಳೆಯುತ್ತ ಹೋದಂತೆ ನಾಳಿನ ಕೃಷಿ ಭವಿಷ್ಯ ಇನ್ನಷ್ಟು ಕಹಿಯಾಗಬಹುದು. ಅಣೆಕಟ್ಟೆಯಲ್ಲಿ ನೀರೆಷ್ಟು ಸಂಗ್ರಹವಾಗಿದೆಯೆಂದು ಲೆಕ್ಕ ಹಾಕಿ ಭತ್ತ ಓಟ ನಡೆಸಿದ ಪ್ರದೇಶ ಈಗ ನದಿ ಮೂಲದಲ್ಲಿ ಏನಾಗಿದೆಯೆಂದು ನೋಡುವ ಕಾಲ ಸನ್ನಿತವಾಗಿದೆ.

ಶಿವಾನಂದ ಕಳವೆ

ಟಾಪ್ ನ್ಯೂಸ್

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.