ಬರಕ್ಕೆ ಬೆದರದೇ, ಹೆದರದೇ ತರಕಾರಿ ಕೃಷಿ
Team Udayavani, Mar 13, 2017, 11:42 AM IST
ಜೇಬು ತುಂಬ ದುಡ್ಡು, ಕೈತುಂಬ ಲಾಭ
ಬೋರ್ ವೆಲ್ ಹೊಂದಿದ್ದರೂ ನೀರಿನ ಕೊರತೆಯ ನೆವ ಹೇಳುತ್ತಾ ಕೃಷಿಯಿಂದ ವಿಮುಖರಾಗಿ ಸಮಯ ವ್ಯರ್ಥ ಮಾಡುತ್ತಿರುವ ಹಲವರ ಮಧ್ಯೆ ಮೆಹಬೂಬ್ ಬಾನಿ ಇವರ ಕೃಷಿ ಶ್ರಮ ವಿಭಿನ್ನವಾಗಿ ತೋರುತ್ತದೆ. ವೈವಿಧ್ಯಮಯ ಬೆಳೆಗಳಿಂದ ಕೈ ತುಂಬಾ ಲಾಭ ಮಾಡುತ್ತಿದ್ದಾರೆ.
ಬರದಿಂದ ನೀರು ಕ್ಷೀಣಿಸಿದ ಬೇಸರ ಇವರಿಗಿದೆ. ಜೀವ ಜಲದ ಕೊರತೆಯಿಂದ ಗಿಡಗಳ ಕಳೆ ಕುಂದುತ್ತಿರುವ ಲಕ್ಷಣಗಳನ್ನು ಗಮನಿಸುವಾಗ ಹೊಟ್ಟೆ ಚುರ್ರೆನ್ನುವಷ್ಟು ಸಂಕಟ ಇವರನ್ನೂ ಬಾದಿಸುತ್ತಿದೆ. ಬರ ಒಡ್ಡಿದ ಸವಾಲಿಗೆ ಇವರು ಬೆದರಿಲ್ಲ. ಪ್ರತೀ ಗಿಡಗಳಿಗೆ ಲೆಕ್ಕಾಚಾರದಲ್ಲಿ ನೀರುಣಿಸಿ ಕೃಷಿ ಲಾಭದಾಯಕವಾಗಿಸಿಕೊಂಡಿದ್ದಾರೆ. ಬೆಳೆಗಳಿಗೇ ನೀರಿಲ್ಲ, ಇನ್ನು ಕಳೆ ಬೆಳೆದರೆ ಹೇಗೆ? ಇದು ನೀರಿನ ಅನಾವಶ್ಯಕ ಖರ್ಚಿಗೆ ದಾರಿ ಮಾಡಿಕೊಟ್ಟಂತೆ ಎಂದು ಹುಡುಕಿ ಹುಡುಕಿ ಕಳೆಯ ಹುಟ್ಟಡಗಿಸಿದ್ದಾರೆ. ಇವರ ಜಮೀನಿನ ಸುತ್ತಮುತ್ತಲಿನ ನೂರಾರು ಎಕರೆ ಹೊಲಗಳು ಬಟಾ ಬಯಲಾಗಿ ಬಿಸಿಲಿನಿಂದ ತೋಯ್ದುನಿಂತಿವೆ. ಬರಡು ಭೂಮಿಯಂತೆ ಗೋಚರಿಸುತ್ತಿವೆ. ಮಧ್ಯದಲ್ಲಿರುವ ಇವರ ಒಂದು ಎಕರೆ ಹೊಲದಲ್ಲಿ ಹಸಿರಿನ ಕಳೆಯಿದೆ. ರೈತನ ಮುಖದಲ್ಲಿ ಮಂದಹಾಸದ ಸೆಲೆಯಿದೆ.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಮೆಹಬೂಬ್ ಇಮಾಮ್ ಸಾಬ್ ಬಾನಿ ಇವರ ಕೃಷಿ ಆಸಕ್ತಿಯ ಪರಿಯಿದು. ಬೋರ್ ವೆಲ್ ಹೊಂದಿದ್ದರೂ ನೀರಿನ ಕೊರತೆಯ ನೆವ ಹೇಳುತ್ತಾ ಕೃಷಿಯಿಂದ ವಿಮುಖರಾಗಿ ಸಮಯ ವ್ಯರ್ಥ ಮಾಡುತ್ತಿರುವ ಹಲವರ ಮಧ್ಯೆ ಮೆಹಬೂಬ್ ಬಾನಿ ಇವರ ಕೃಷಿ ಶ್ರಮ ವಿಭಿನ್ನವಾಗಿ ತೋರುತ್ತದೆ.
ಕಲ್ಲು ಗುಡಿಸಿ ಹಾಕಿದರು
2007ರಲ್ಲಿ ಕೂಡು ಕುಟುಂಬದಿಂದ ಹೊರ ಬಂದಾಗ ಇವರ ಪಾಲಿಗೆ ದೊರಕಿದ್ದು ಮೂರು ಎಕರೆ ಜಮೀನು. ಸಣ್ಣ ಕಲ್ಲುಗಳಿಂದ ಹಿಡಿದು ಗಜಗಾತ್ರದ ಹಲವು ಬಂಡೆಗಳನ್ನು ಹೊಂದಿರುವ ಮಸಾರೆ ಭೂಮಿ ಇವರ ಪಾಲಿಗೆ ಒಲಿದು ಬಂದಿತ್ತು. ಕೃಷಿ ಕೈಗೊಳ್ಳಲು ಸವಾಲು ಎದುರಿಸಬೇಕಾದ ತಾಣವದು. ಜೋಳ ಹತ್ತಿ, ರಾಗಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಮಳೆಯಾಶ್ರಿತ ಕೃಷಿ. ವಿಪರೀತ ಕಲ್ಲುಗಳಿಂದಾಗಿ ಉಳುಮೆಯ ಸಮಯ ತೀರ್ವ ಸಂಕಷ್ಟ ಎದುರಾಗುತ್ತಿತ್ತು. ಕೊಯ್ಲಿನ ಸಮಯದ ತಾಪತ್ರಯ ಬೇರೆಯೇ. ಒಂದು ಹಂತದಲ್ಲಿ ಕೃಷಿಯ ಸಹವಾಸ ಸಾಕೆಂದು ಭೂಮಿಯನ್ನು ಲಾವಣಿಗೆ ನೀಡಿ ಧಾರವಾಡದ ಒಂದು ಮೆಡಿಕಲ್ ಏಜನ್ಸಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಕೃಷಿ ಭೂಮಿಯ ಸೆಳೆತ ಇವರನ್ನು ಹೆಚ್ಚು ಕಾಲ ನಗರದಲ್ಲಿರಲು ಬಿಡಲಿಲ್ಲ. ಕೆಲಸ ಬಿಟ್ಟು ಕೃಷಿ ಭೂಮಿಗೆ ಮರಳಿ ಬೆವರು ಹರಿಸತೊಡಗಿದರು. ವಿಪರೀತ ಕಲ್ಲುಗಳಿದ್ದರಿಂದ ಟ್ರಾಕ್ಟರ್ ಹೊಂದಿರುವವರು ಉಳುಮೆ ಮಾಡಿ ಕೊಡಲು ಹಿಂಜರಿಯುತ್ತಿದ್ದರು. ಕುಂಟೆ ಹೊಡೆಯಲು ಜೋಡೆತ್ತುಗಳು ಏಗುತ್ತಿದ್ದವು. ಕೃಷಿಯಲ್ಲಿ ಗೆಲುವು ಕಾಣಬೇಕಾದರೆ ಜಮೀನನ್ನು ಕಲ್ಲು ಮುಕ್ತಗೊಳಿಸಬೇಕೆಂಬ ನಿರ್ಧಾರ ತಳೆದರು. ಯಂತ್ರಗಳನ್ನು ತಂದು ಎತ್ತಿ ಹಾಕಿಸುವಷ್ಟು ಆರ್ಥಿಕವಾಗಿ ಸಬಲರು ಇವರಲ್ಲ. ತಾವೇ ಸ್ವತಃ ಆರಿಸಿ ತೆಗೆಯಬೇಕೆಂದುಕೊಂಡರು. ಕಾರ್ಯ ಪ್ರವೃತ್ತರಾದರು. ಪಿಕಾಸಿ, ಹಾರೆ ಕೋಲು, ಬುಟ್ಟಿ, ಸುತ್ತಿಗೆ ಜೊತೆಯಾದವು. ಕಲ್ಲಿನ ಎತ್ತಂಗಡಿಗೆ ಏಕಾಂಗಿ ಹೋರಾಟ ಆರಂಭವಾಯಿತು.
ಸಣ್ಣ ಸಣ್ಣ ಕಲ್ಲುಗಳು ಕಿರಿ ಕಿರಿ ಮಾಡದೇ ಒಂದೆಡೆ ರಾಶಿಯಾದವು. ದೊಡ್ಡ ಕಲ್ಲುಗಳು ಸುತ್ತಿಗೆಯ ಹೊಡೆತ ತಾಳದೇ ಚೂರಾದವು. ಮಣ್ಣಿನೊಳಗೆ ಹುದುಗಿದ್ದ ಕಲ್ಲುಗಳನ್ನು ಹಾರೆ ಕೋಲು ಹೊರ ತಂದು ಪುಡಿಗಟ್ಟಿಸಿದವು. ಕಲ್ಲು ಕರಗಿಸುವ ಹೋರಾಟಕ್ಕೆ ಪತ್ನಿ ಶಾಜಾನಬಿ ಕೈ ಜೋಡಿಸಿದರು. ಮಳೆಯಾಶ್ರಯದಲ್ಲಿ ಬೇಸಾಯ ಮಾಡ ಮಾಡುತ್ತಲೇ ಕಲ್ಲಿನೊಂದಿಗಿನ ವಿರಸ ಮುಂದುವರೆಸಿದರು. ನಾಲ್ಕು ವರ್ಷಗಳಲ್ಲಿ ಮೂರು ಎಕರೆಯಲ್ಲಿನ ಕಲ್ಲಿನ ಹೊದಿಕೆ ಮೆಹಬೂಬ್ ದಂಪತಿಗೆ ಶರಣಾಯಿತು. ಸ್ವಂತ ಸೂರಿನ ಅಡಿಪಾಯದ ಸರಕಾಯಿತು. ಎಪ್ಪತ್ತು ಲೋಡ್ ಕಲ್ಲುಗಳನ್ನು ಆರಿಸಿ ತೆಗೆದು ಕೃಷಿ ¸ೂಮಿಯನ್ನು ನುಣು ಪಾಗಿಸಿದ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಂಡು ಹಿರಿ ಹಿರಿ ಹಿಗ್ಗಿದರು ಮೆಹಬೂಬ್ ಸಾಬ್.
ತರಹೇವಾರಿ ತರಕಾರಿ ಕೃಷಿ
ಕೇವಲ ಮಳೆಯಾಶ್ರಯದಲ್ಲಿ ಕೃಷಿ ಮಾಡುತ್ತಿದ್ದ ಇವರು ಕಳೆದ ವರ್ಷ ಬೋರ್‌ವೆಲ್ ಅಳವಡಿಸಿಕೊಂಡಿದ್ದಾರೆ. ಮೂರು ಎಕರೆ ಜಮೀನನ್ನು ವಿಭಾಗಿಸಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಾರೆ. ಒಂದು ಎಕರೆ ಸಂಪೂರ್ಣ ತರಕಾರಿಗೆ ಮೀಸಲು. ಕಳೆದ ಮುಂಗಾರಿನಲ್ಲಿ ಎರಡು ಎಕರೆ ಹೆಸರು ಕೃಷಿ ಮಾಡಿದ್ದರು. ಒಂದೆಕರೆಯಲ್ಲಿ ಹಸಿ ಮೆಣಸು, ಟೊಮೆಟೊ, ಚವಳಿ, ಬದನೆ ಬೆಳೆದು ಆದಾಯ ಗಳಿಸಿದ್ದರು.
ಒಂದು ಇಂಚು ನೀರು ಹೊರ ಹಾಕುತ್ತಿದ್ದ ಬೋರ್‌ವೆಲ್ ಈಗ ಅರ್ಧ ಇಂಚಿಗಿಳಿದಿದೆ. ಈ ಕಾರಣದಿಂದಾಗಿ ಎರಡು ಎಕರೆಯಲ್ಲಿನ ಕೃಷಿ ನಿಲ್ಲಿಸಿದ್ದಾರೆ. ಒಂದು ಎಕರೆಯಲ್ಲಿ ತರಕಾರಿ ಸಮೃದ್ದವಾಗಿದೆ. ಅರ್ಧ ಎಕರೆ ಬದನೆ ಕೃಷಿ. ಕಾಲೆಕರೆಯಲ್ಲಿ ಮೆಣಸು, ಇನ್ನುಳಿದ ಕಾಲೆಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಮೆಣಸಿನ ಮಧ್ಯೆ ಬೆಂಡೆ ಗಿಡಗಳನ್ನು ಊರಿದ್ದಾರೆ.
ನಾಟಿಗೆ ಬೇಕಾದ ತರಕಾರಿ ಸಸಿಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಹತ್ತು ಅಡಿ ಉದ್ದ, ಮೂರು ಅಡಿ ಅಗಲ, ಒಂದು ಅಡಿ ಎತ್ತರದ ಏರು ಮಡಿಯನ್ನು ತಯಾರಿಸಿ ಮೂರು ಭಾಗಗಳನ್ನಾಗಿ ಮಾಡಿ ಬದನೆ, ಟೊಮೆಟೊ, ಮೆಣಸು ಬೀಜ ಬಿತ್ತುತ್ತಾರೆ. ಸಸಿ ಮಡಿಗೆ ಯತೇಚ್ಚವಾಗಿ ಕಾಂಪೋಸ್ಟ ಗೊಬ್ಬರ ಬಳಸುತ್ತಾರೆ. ಬದನೆ ಮತ್ತು ಮೆಣಸು ಗಿಡಗಳನ್ನು ಬೀಜ ಬಿತ್ತಿದ 45 ದಿನಕ್ಕೆ ನಾಟಿ ಮಾಡಬಹುದು. ಟೊಮೆಟೊ ಗಿಡಗಳು 30 ದಿನಕ್ಕೆ ಕಿತ್ತು ನೆಡಲು ಸಿದ್ದಗೊಳ್ಳುತ್ತದೆ ಎನ್ನುತ್ತಾರೆ.
ಬದನೆ ಗಿಡಗಳನ್ನು ಡಿಸೆಂಬರ್ ಕೊನೆಯ ವಾರ ನಾಟಿ ಮಾಡಿದ್ದರು. ಸಾಲಿನಿಂದ ಸಾಲಿಗೆ ಎರಡುವರೆ ಅಡಿ, ಗಿಡದಿಂದ ಗಿಡಕ್ಕೆ ಮೂರು ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ನಾಟಿ ಮಾಡುವ ಸಂದರ್ಭದಲ್ಲಿ ಪ್ರತೀ ಗಿಡಗಳಿಗೆ ಇಪ್ಪತ್ತು ಗ್ರಾಂ ಯೂರಿಯಾ ಹಾಕಿದ್ದರು. ಪುನಃ ಒಂದು ತಿಂಗಳ ನಂತರ ಪ್ರತಿ ಗಿಡಕ್ಕೆ 30 ಗ್ರಾಂ. ನಷ್ಟು ಡಿ.ಎ.ಪಿ ಗೊಬ್ಬರ ಹಾಕಿದ್ದಾರೆ. ವಾರಕ್ಕೊಮ್ಮೆ ಲೆಕ್ಕಾಚಾರದಲ್ಲಿ ನೀರು ಹಾಯಿಸುತ್ತಾರೆ. ಎಂಟು ದಿನಕ್ಕೊಮ್ಮೆ ಕೊರಾಜೆನ್ ಔಷಧಿ ಸಿಂಪರಣೆ ಮಾಡುತ್ತಾರೆ. ಕಳೆಯ ಮೇಲೆ ವಿಪರೀತ ಕೋಪ ಇವರಿಗಿದೆ. ಸಣ್ಣದಿರುವಾಗಲೇ ಬೇರು ಸಮೇತ ಕಿತ್ತು ಹಾಕುತ್ತಾರೆ. ಗಿಡದಲ್ಲಿನ ಹಳದಿ ಎಲೆಗಳನ್ನು ಕಿತ್ತೂಗೆಯುತ್ತಾರೆ. ಕಾಯಿಗಳ ಮೇಲೆ ಕ್ರಿಮಿಗಳು, ಇರುವೆಗಳು ತಿಂದು ಗುರುತು ಮಾಡಿದ್ದು ಗೋಚರವಾದರೆ ಕಿತ್ತು ಹಾಕುತ್ತಾರೆ.
ಬದನೆಯಿಂದ ಇಳುವರಿ ಪಡೆಯುತ್ತಿದ್ದಾರೆ. ಮೊದಲ ಕೊಯ್ಲಿನಲ್ಲಿ ಎಪ್ಪತ್ತು ಕಿಲೋ ಗ್ರಾಂ ಫಸಲು ಸಿಕ್ಕಿತ್ತು. ಎರಡು ತಿಂಗಳ ಅವಧಿಯಲ್ಲಿ ಮೂರು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. 9,000 ರೂಪಾಯಿ ಆದಾಯ ಪಡೆದಿದ್ದಾರೆ. ಕಾಲೆಕರೆಯಲ್ಲಿರುವ ಮೆಣಸು ಇಳುವರಿ ನೀಡುವ ಹಂತದಲ್ಲಿದೆ. ಮೂರು ಕ್ವಿಂಟಾಲ್ ನಷ್ಟು ಟೊಮೆಟೊ ಹಣ್ಣುಗಳನ್ನು ಮಾರಾಟ ಮಾಡಿ 3000 ರೂ. ಆದಾಯ ಗಳಿಸಿದ್ದಾರೆ.
ಮಾರಾಟ ಕೌಶಲ್ಯ
ಕಾಲೇಜು ಶಿಕ್ಷಣ ಓದುತ್ತಿರುವ ಇವರ ಮಗ ಸೋಹಿಲ್ ತರಕಾರಿಗಳ ಮಾರಾಟ ಪ್ರತಿನಿಧಿ. ಕಾಲೇಜು ಮುಗಿಸಿ ಬಂದು ತಂದೆ ಕಟಾವು ಮಾಡಿಟ್ಟ ತರಕಾರಿಗಳನ್ನು ಸಂತೆಯಲ್ಲಿ ಕುಳಿತು ಮಾರಾಟ ಮಾಡಿ ಬರುತ್ತಾನೆ. ಸೋಮವಾರ ಹಾಗೂ ಶುಕ್ರವಾರ ಅಮ್ಮಿನ ಬಾವಿ ಗ್ರಾಮದಲ್ಲಿ ಸಂತೆ ನಡೆಯುತ್ತದೆ.ಯೋಗ್ಯ ದರಕ್ಕೆ ಉತ್ತಮ ತರಕಾರಿಗಳನ್ನು ನೀಡುವುದರಿಂದ ತರಕಾರಿಗಳು ಬಹುಬೇಗ ಬಿಕರಿಯಾಗುತ್ತದೆ.
ನೀರು ಉಳಿಸುವ ಕಾಳಜಿ ಇವರಲ್ಲಿದೆ. ಹೊಲದಲ್ಲಿ ಬಿದ್ದ ನೀರು ಹೊರ ಹೋಗದಂತೆ ಸುತ್ತಲೂ ಒಡ್ಡು ನಿರ್ಮಿಸಿದ್ದಾರೆ. ಜಮೀನಿನ ಮೂಲೆಯಲ್ಲೊಂದು ಕೃಷಿ ಹೊಂಡ ನಿರ್ಮಿಸುವ ಆಲೋಚನೆಯಲ್ಲಿದ್ದಾರೆ. ಬರದ ಭೀಕರತೆಯ ನಡುವೆ ಇವರ ಬುದ್ಧಿವಂತಿಕೆಯ ಕೃಷಿ ಮಾದರಿಯೆನ್ನಿಸುತ್ತದೆ.
ಸಂಪರ್ಕಿಸಲು: 9902154286
– ಕೋಡಕಣಿ ಜೈವಂತ ಪಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.