ಗುಡೇಕೋಟೆಯ ಜಲ ಚರಿತೆ
ಕರುನಾಡ ಕೆರೆ ಯಾತ್ರೆ- 7
Team Udayavani, Nov 18, 2019, 5:15 AM IST
ಗುಡ್ಡಗಳ ಸಾಲು, ಒಂದು ಪ್ರದೇಶವನ್ನು ಹೇಗೆ ಚೆಂದದ ನೈಸರ್ಗಿಕ ಕೋಟೆಯಾಗಿಸಿದೆ ಎಂದು ಅರಿಯಲು ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಗುಡೇಕೋಟೆ ನೋಡಬೇಕು. ಅತ್ಯಂತ ಕಡಿಮೆ ಮಳೆ ಸುರಿಯುವ ಇಲ್ಲಿ, ಕಲ್ಲು ಬೆಟ್ಟದ ಮೇಲೆ ನೀರು ಹಿಡಿಯುವ ರಚನೆಗಳಿವೆ. ಬೆಟ್ಟದ ಬುಡದಲ್ಲಿ ಕೆರೆಗಳಿವೆ. ದಶಕಗಳಿಂದ ಬರದಿಂದ ತತ್ತರಿಸುತ್ತಿರುವ ಈ ಪ್ರದೇಶದಲ್ಲಿ ಕೋಟೆ ಕಟ್ಟಿದವರು, ನೀರು ಹಿಡಿಯುವ ವಿದ್ಯೆಯನ್ನು ಶತಮಾನಗಳ ಹಿಂದೆಯೇ ಕಲಿಸಿದವರು.
ತಲೆಗೆ ಬಿದ್ದ ನೀರು ಕಾಲಿಗೆ ಬರ್ತದೆ ಎಂಬುದು ಗೊತ್ತಿರುವ ಮಾತು. ಗುಡ್ಡದ ತುದಿಯಲ್ಲಿ ಸುರಿದ ಮಳೆ ನೀರು ಸರಾಗ ಹರಿದು ಕೆಳಗೆ ಬರುವುದು ನಿಸರ್ಗ ನಿಯಮ. ಬಳ್ಳಾರಿಯ ರಾಂಪುರದಿಂದ ಕೊಟ್ಟೂರಿಗೆ ಹೋಗುವಾಗ ಗುಡ್ಡಗಳ ಸಾಲಿನ ಗುಡೇಕೋಟೆ ಎಂಬ ಊರು ಗಮನ ಸೆಳೆಯುತ್ತದೆ. ಬಂಡೆಗಳ ಬೆಟ್ಟದ ಸಾಲು, ಕೋಟೆಯ ನೆಲೆ. ಗಿರಿದುರ್ಗದ ಗುಡೇಕೋಟೆ, ಗುಡ್ಡಗಳ ಕೋಟೆಯೂ ಹೌದು. ಊರಿನ ಸುತ್ತ ಎದ್ದು ನಿಂತ ಕಲ್ಲಿನ ಸಾಲುಗಳಿಗೆ ಒಂದಿಷ್ಟು ಮಾನವ ಶ್ರಮ ಸೇರಿ ಐತಿಹಾಸಿಕ ರೂಪ ಪಡೆದಿದೆ. ಗುಡ್ಡದ ಗುಹೆಗಳಲ್ಲಿ ಬದುಕು ನಡೆಸಿದ್ದಕ್ಕೆ ಸಾಕ್ಷಿಯಾಗಿ ಸಿಡೆಗಲ್ಲಿನ ಸೂಕ್ಷ್ಮ ಶಿಲಾಯುಗ, ಜರಿಮಲೆಯ ಬಾಗೇಶ್ವರ ದೇಗುಲದ ಸನಿಹದಲ್ಲಿ ನವಶಿಲಾಯುಗ, ಚಿನ್ನನಗರಿಯಲ್ಲಿ ಬೃಹತ್ ಶಿಲಾಯುಗದ ಅವಶೇಷಗಳು, ಸಿಕ್ಕಿರುವ ದಾಖಲೆಗಳು ಗುಡ್ಡದ ಆಸುಪಾಸಿನ ಜನಜೀವನದ ಪ್ರಾಚೀನತೆ ಸಾರಿವೆ. ಗುಡೇಕೋಟೆ ಪ್ರದೇಶವು ಮೌರ್ಯ ಸಾಮ್ರಾಜ್ಯದ ಒಂದು ಭಾಗವಾಗಿತ್ತೆಂದು ಶಾಸನಗಳು ಹೇಳಿವೆ. ಕೊಟ್ಟೂರು, ಕೂಡ್ಲಿಗಿ, ಶಿವಪುರ, ಚೋರನೂರು, ಮೊಳಕಾಲ್ಮೂರು, ಅಶೋಕ ಸಿದ್ದಾಪುರ ಊರುಗಳಲ್ಲಿ ಶಾತವಾಹನರ ಕಾಲದ ಅವಶೇಷಗಳು ದೊರಕಿವೆ.
ಬಾವಿ ರಚನೆಯ ತಜ್ಞತೆ
ಗುಡೇಕೋಟೆಯ ಕೆರೆ, ರಾಮದುರ್ಗದ ಕೆರೆಗಳು ಈಗ ಇಲ್ಲಿನ ಪ್ರಮುಖ ಜಲನಿಧಿಗಳು. ಕಳೆದ ಎರಡು ಮೂರು ವರ್ಷಗಳಿಂದ ಕೆರೆಗಳು ಒಣಗಿ ತೀವ್ರ ನೀರಿನ ಸಮಸ್ಯೆಯಿಂದ ಪ್ರದೇಶ ಬಳಲಿವೆ. ದನಕರುಗಳಿಗೆ ಕೊಳವೆ ಬಾವಿಯ ನೀರು ಹುಡುಕುತ್ತಾ ಸಂಕಷ್ಟದಲ್ಲಿ ಬದುಕು ಸಾಗಿದೆ. ಈ ವರ್ಷ ಸುರಿದ ಉತ್ತಮ ಮಳೆಯಿಂದ ಕೃಷಿ ಹಸಿರಾಗಿದೆ. ಕೆರೆಗಳಿಗೆ ನೀರು ಬಂದಿದೆ. ಮುಖ್ಯವಾಗಿ, ಸುತ್ತಲಿನ ಕಾಡು ಗುಡ್ಡದ ಸಸ್ಯಗಳು ಚಿಗುರಿ ಮೇಲೆದ್ದಿವೆ. ಗುಡೇಕೋಟೆಯ ಕರಡಿಧಾಮ ಉತ್ತಮ ಮಳೆಯಿಂದ ಮಲೆನಾಡಿನ ಸೊಬಗು ಪಡೆದಿದೆ. ಕಮರಾ, ಕೌಳಿ, ಬಂದರಿಕೆ, ತಾರಿ, ಬೇವು, ಹೊಂಗೆ, ಕಕ್ಕೆ ಸೇರಿದಂತೆ ನೂರಾರು ಸಸ್ಯ ಜಾತಿಗಳಿವೆ. ಒಂದು ಕಾಲದಲ್ಲಿ ಸಹಸ್ರಾರು ಸೈನಿಕರ ನೆಲೆಯಾಗಿದ್ದ ಪ್ರದೇಶದಲ್ಲಿ ಬೇಸಾಯ ನಡೆದಿದೆ.
ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಸ್ಥಳೀಯ ಸಾಧ್ಯ ಪರಿಹಾರ ಹುಡುಕಿದ್ದು ಗುಡೇಕೋಟೆಯಲ್ಲಿ ಕಾಣಿಸುತ್ತದೆ. ಗಿರಿದುರ್ಗದ ನೀರು ಹಿಡಿಯುವ ಪ್ರಯತ್ನಗಳಿಂದ ನಾವು ಕಲಿಯಬೇಕಾದ ಸಂಗತಿಗಳಿವೆ. ಇದೇ ಕೂಡ್ಲಿಗಿ ತಾಲೂಕಿನ ಜರಿಮಲೆ, ಇಂಥದೇ ಇನ್ನೊಂದು ದುರ್ಗ. ಬೆಟ್ಟದ ಬುಡದ ಆನೆಹೊಂಡ, ತುತ್ತ ತುದಿಯ ನೀರಿನ ಹೊಂಡಗಳು ಜಲಸಂರಕ್ಷಣೆಗೆ ಸಾಕ್ಷಿ ಒದಗಿಸುತ್ತದೆ. ಪಾಲಯ್ಯನ ದುರ್ಗ, ವೀರನಕೋಟೆ ಹೀಗೆ ಹುಡುಕುತ್ತಾ ಹೋದರೆ ಅಕ್ಕಪಕ್ಕ ಹಲವು ಗಿರಿದುರ್ಗಗಳು ಸಿಗುತ್ತವೆ. ಎಲ್ಲೆಡೆಯೂ ನೀರಿನ ಸಂರಕ್ಷಣೆಯ ಚರಿತೆಯಿದೆ. ಕೋಟೆ ಕಟ್ಟುವ ಜಾಗ ಆಯ್ಕೆಯ ಜೊತೆಗೆ ಅಲ್ಲಿಗೆ ಯೋಗ್ಯವಾದ ಕೆರೆ, ಬಾವಿ ರಚನೆಯ ತಜ್ಞತೆ ಹಿಂದೆ ಹೇಗೆ ಬೆಳೆದು ಬಂದಿತ್ತೆಂದು ನೋಡಲು ಗಿರಿದುರ್ಗ ಜಲ ಕಾಳಜಿಯುಳ್ಳ ಎಲ್ಲರಿಗೂ ಅಧ್ಯಯನ ಯೋಗ್ಯ ಪ್ರದೇಶ. ಕೊಪ್ಪಳ ಜಿಲ್ಲೆಯ ಕುಮಾರರಾಮನ ಕುಮ್ಮಟದುರ್ಗ, ಹೇಮಗುಡ್ಡ ಕೆರೆ ಸೇರಿದಂತೆ, ಗುಡ್ಡದ ಕೆರೆಗಳು ಕಾಲದ ತಾಂತ್ರಿಕತೆ ಕಲಿಯಲು ಅನುಕೂಲ.
ಪಾರಂಪರಿಕ ಸಂರಕ್ಷಣಾ ವಿಧಾನಗಳು
ಇತಿಹಾಸ ಎಂದರೆ ರಾಜರ, ಪಾಳೇಗಾರರ ಕಥೆಯೆಂದು ಮಾತ್ರ ನೋಡಬೇಕಾಗಿಲ್ಲ. ನೀರಿನ ನೆಮ್ಮದಿಗೆ ಹಲವು ಸೂತ್ರಗಳು ಇಲ್ಲಿ ಅಡಗಿವೆ. ಪ್ರದೇಶದ ಪರಿಸರ ಪರಿಸ್ಥಿತಿ ಅರ್ಥಮಾಡಿಕೊಂಡು ಕಾಲದ ಬದುಕು ಅರಿಯುತ್ತಾ ಹೊರಟರೆ ಭವಿಷ್ಯದ ನೀರ ದಾರಿಗಳು ಗಿರಿದುರ್ಗಗಳಲ್ಲಿ ಸಿಗುತ್ತವೆ. ಅವತ್ತು ಮಳೆ ಆಶ್ರಿತವಾಗಿ ಕೃಷಿ ನಡೆದಿದ್ದ ನೆಲೆ, ಇವತ್ತು ಆಳದ ಕೊಳವೆ ಬಾವಿಯ ನೀರಾವರಿಯಿಂದ ಬದುಕುವ ಯತ್ನ ಮಾಡುತ್ತಿದೆ. ಬರ ಬಂದರೆ ವಲಸೆ ಅನಿವಾರ್ಯವಾಗಿ ಊರು ಖಾಲಿಯಾಗುವ ನೋಟಗಳನ್ನು ಎರಡು ವರ್ಷಗಳ ಹಿಂದೆ ಗುಡೇಕೋಟೆಯಲ್ಲಿ ಕಂಡಿದ್ದೇವೆ. ನಾವು ಯಾವುದಾದರೂ ವಸ್ತು ಕಳಕೊಂಡರೆ ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಹುಡುಕಬೇಕೆಂಬ ಮಾತಿದೆ. ಜಲಕ್ಷಾಮಕ್ಕೂ ಈ ಮಾತು ಅನ್ವಯವಾಗುತ್ತದೆ. ಪಾರಂಪರಿಕ ಜಲಸಂರಕ್ಷಣಾ ವಿಧಾನಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಹೆಜ್ಜೆಯಿಟ್ಟರೆ ಗೆಲುವು ಸಾಧ್ಯ. ಕಲ್ಲುಗುಡ್ಡದ ನೆಲೆಯಲ್ಲಿ ನೀರು ಗೆದ್ದು ಊರು ಕಟ್ಟಿದ ಮಹಾಚರಿತ್ರೆಯ ನೆಲೆಯಲ್ಲಿ, ಇವತ್ತು ವೈರಿ ಸೈನ್ಯದ ಭಯವಿಲ್ಲ, ನಮ್ಮನ್ನು ನಾವು ಗೆಲ್ಲಲು ನೀರನ್ನು ಹಿಡಿಯಬೇಕಿದೆ. ಚರಿತ್ರೆಯ ಜಲ ಪಾಠಗಳಿಂದ ಸ್ಪೂರ್ತಿ ಪಡೆಯಬೇಕಿದೆ.
ಮಳೆನೀರಿನ ಜಲಾಗಾರ
ನದಿಯಿಲ್ಲದ ಊರಲ್ಲಿ ಪಾಳೇಗಾರರಾಗಿ ಕೋಟೆ ಕಟ್ಟಿ ಆಳುವುದು ಸುಲಭವಲ್ಲ, ಹಿಂದಿನಿಂದಲೂ 500- 600 ಮಿಲಿಮೀಟರ್ ಮಳೆಯ ಪ್ರದೇಶವಿದು. ದೊರೆಯ ಗುಡ್ಡದ ತುಸು ದೂರ, ಕೋಟೆಯ ಹೊರಭಾಗದಲ್ಲಿರುವ ಬೊಮ್ಮಲಿಂಗನ ದೊಡ್ಡಕೆರೆ, ಪ್ರದೇಶ ಸುರಿವ ಮಳೆ ನೀರನ್ನು ಹಿಡಿಯುವ ಜಲಾಗಾರ. ಕೋಟೆಯ ಎತ್ತರದ ಚಿಕ್ಕ ದೊಡ್ಡ ಕಲ್ಲುಗಳ ನಡುವೆ ಸುಣ್ಣದ ಗಾರೆ ಹಾಕಿ ಮಳೆ ನೀರು ಉಳಿಸಿ ಬದುಕುವ ತಂತ್ರಗಳಿವೆ. ತೊಟ್ಟಿಲುಬಾವಿ, ತಣ್ಣೀರಿನ ಬಾವಿ, ಉಸುಕಿನ ಬಾವಿ, ಅಕ್ಕಮ್ಮನ ಹೊಂಡ, ಓಕುಳಿ ಹೊಂಡ… ಹೀಗೆ, ಅಲ್ಲಲ್ಲಿ ಹಲವು ರಚನೆಗಳನ್ನು ನೋಡಬಹುದು. ಕಲ್ಲು ಬೆಟ್ಟದಲ್ಲಿ ಬದುಕುವವರಿಗೆ ಮಳೆ ನೀರು ಹಿಡಿಯಲು ಅಗತ್ಯವಾದ ವ್ಯವಸ್ಥೆಯನ್ನು ಪಾಳೇಗಾರರು ಮಾಡಿದರು. ಇದರ ಜೊತೆಗೆ ರಾಗಿ ಕಣಜ, ತುಪ್ಪದ ಕಣಜ ನಿರ್ಮಿಸಿದರು. ದಕ್ಷಿಣಭಾರತದಲ್ಲಿಯೇ ಬೃಹದಾಕಾರದ ಕಲ್ಲು ಬಂಡೆ ಬಳಸಿ ನಿರ್ಮಿಸಿದ ಕೋಟೆಗಳಲ್ಲಿ ಇದು ಪ್ರಮುಖವಾದುದೆಂದು ಪ್ರಸಿದ್ಧ ಭೂವಿಜ್ಞಾನಿ ಬ್ರೂಸ್ ಪೂÉಟ್ ಉದ್ಗರಿಸಿದ್ದಾರೆ. ಸುತ್ತೆಲ್ಲ ದಿಕ್ಕುಗಳಿಂದ ದಾಳಿಗೆ ಅವಕಾಶಗಳಿದ್ದವು. ರಾಯದುರ್ಗದವರು, ಹರಪನಹಳ್ಳಿಯವರು, ಹೈದರ್- ಟಿಪ್ಪು, ಚಿತ್ರದುರ್ಗದ ನಾಯಕರ ಆಳ್ವಿಕೆ ನಡುವೆ ಗುಡೇಕೋಟೆಯ ಪಾಳೇಗಾರರ ಆಡಳಿತ ಗುಡ್ಡದ ನಡುವೆಯಿತ್ತು. ಯಾರೇ, ಯಾವುದೇ ರಾಜ್ಯದಲ್ಲಿ ದಂಡೆತ್ತಿ ಹೋಗುವಾಗಲೂ ಗುಡೇಕೋಟೆಯನ್ನು ದಾಟಿಯೇ ಹೋಗಬೇಕು. ವೈರಿಗಳನ್ನು ಎದುರಿಸುವುದು ಒಂದು ಸಹಜ ಕಾರ್ಯವಾದರೆ, ನೀರು ಹಿಡಿದು ಗೆಲ್ಲುವುದು ಮುಖ್ಯ ಸವಾಲು. ಈ ಹಿನ್ನೆಲೆಯಲ್ಲಿ ಗಮನಿಸಿದರೆ ಪಾಳೇಗಾರರ ಪ್ರಯತ್ನ ಅಚ್ಚರಿಯಾದುದು.
ಮುಂದಿನ ಭಾಗ
ಕರುನಾಡ ಕೆರೆ ಯಾತ್ರೆ- 8
ಬಂಡೆ ಬೆಟ್ಟದ ಕೆರೆ ಬೆರಗು
– ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.