ವಾಟರ್ ಪ್ರೂಫ್ ಮನೆ!
ಮಳೆಗಾಲದಲ್ಲಿ ಮನೆಯ ರಕ್ಷಣೆ
Team Udayavani, Aug 12, 2019, 5:45 AM IST
ಮಳೆ ಯಾರಿಗೆ ತಾನೆ ಬೇಡ ಹೇಳಿ? ಆದರೆ ಅದು ನಮ್ಮ ಮನೆಗೆ ಹಾನಿ ಉಂಟು ಮಾಡುತ್ತದೆ ಎಂದರೆ ಒಂದಷ್ಟು ಗಲಿಬಿಲಿ ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಮೊದಲೇ ಎಚ್ಚೆತ್ತುಕೊಂಡು ಒಂದಷ್ಟು ಎಚ್ಚರ ವಹಿಸಿದರೆ, ಹಾನಿಯನ್ನು ಅತಿ ಕಡಿಮೆ ಮಾಡಿಕೊಳ್ಳಬಹುದು.
ಮನೆಯ ವಿನ್ಯಾಸಗಳು ಆಯಾ ಪ್ರದೇಶದ ಹವಾಮಾನ, ಜೀವನಕ್ರಮ ಇತ್ಯಾದಿಯಿಂದಾಗಿ ನೂರಾರು ವರ್ಷಗಳ ಕಾಲಮಾನದಲ್ಲಿ ರೂಪಗೊಂಡಿದ್ದು, ಯಾವುದು ಸಾಮಾನ್ಯವಾಗಿ “ಆಗುತ್ತದೆ’, ಎನ್ನುವುದರ ಮೇಲೆ ಆಧರಿಸಲಾಗಿರುತ್ತದೆ. ಆದರೆ ಅನೇಕ ವಿಷಯಗಳು ನಾವು ಅಂದುಕೊಂಡಂತೆಯೇ ಆಗುವುದಿಲ್ಲ. ಯಾರೂ ಅಂದುಕೊಂಡಿರದಷ್ಟು ಮಳೆ ಕೆಲವೇ ಗಂಟೆಗಳಲ್ಲಿ ಸುರಿದು ಭಾರೀ ಅನಾಹುತಗಳನ್ನು ಮಾಡಿಬಿಡಬಲ್ಲದು.
ಬರ ಅನುಭವಿಸುವುದು ಸಾಮಾನ್ಯ ಆಗಿರುವ ಪ್ರದೇಶದಲ್ಲಿ ಕುಂಭದ್ರೋಣ ಮಳೆ ಆಗಿ, ಇನ್ನಿಲ್ಲದಂತೆ ಹಾನಿ ಉಂಟು ಮಾಡಬಹುದು. ಒಮ್ಮೆ ಮಳೆ ನಿಂತಮೇಲೆ ಮತ್ತೆ ಎಂದಿನಂತೆ ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಇದ್ದದ್ದೇ! ಆದರೆ ಮಳೆ ನುಗ್ಗಿದ ಮನೆಗಳನ್ನು ಮತ್ತೆ ಪ್ರವೇಶಿಸುವ ಮೊದಲು ಹಾಗೂ ನಂತರ, ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಹಾಗೆಯೇ, ಹೆಚ್ಚೇನೂ ಸೋರಿಲ್ಲ, ಮನೆಗೇನೂ ಆಗುವುದಿಲ್ಲ ಎಂದು ಕೆಲ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತೆಯೂ ಇಲ್ಲ!
ವಿದ್ಯುತ್ ಪ್ರವಾಹದ ಬಗ್ಗೆ ಜಾಗರೂಕತೆ
ನೀವಿರುವ ಪ್ರದೇಶದಲ್ಲಿ ಮನೆ ಮುಳುಗುವಷ್ಟು ಇಲ್ಲವೇ ಆಳೆತ್ತರಕ್ಕೆ ನೀರು ನುಗ್ಗಿದರೆ, ವಿದ್ಯುತ್ ಸರಬರಾಜು ಕಂಪನಿಯವರೇ ಪವರ್ ಕಟ್ ಮಾಡುವುದರಿಂದ ತಕ್ಷಣಕ್ಕೆ ತೊಂದರೆ ಆಗುವುದಿಲ್ಲ. ಆದರೆ, ನಿಮ್ಮ ಮನೆ ಮಾತ್ರ ತಗ್ಗು ಪ್ರದೇಶದಲ್ಲಿದ್ದು, ಅದು ಕೆಇಬಿ ಯವರ ಗಮನಕ್ಕೆ ಬಾರದಿದ್ದರೆ ನೀರಿನಿಂದ ಅತಿ ಹೆಚ್ಚು ತೊಂದರೆ ಆಗುವುದು ತಪ್ಪಿದ್ದಲ್ಲ. ನೀರಿನ ಮಟ್ಟ ಏರುತ್ತಿದೆ, ಅದು ಮನೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದೆನಿಸಿದರೆ, ಮೊದಲ ಹೆಜ್ಜೆಯಾಗಿ ಮೈನ್ ಸ್ವಿಚ್ ಅನ್ನು ಆಫ್ ಮಾಡಬೇಕಾಗುತ್ತದೆ.
ಸಾಮಾನ್ಯವಾಗಿ ರಸ್ತೆ ಕಂಬದಿಂದ ಮನೆಗೆ ಎತ್ತರದ ಮಟ್ಟಗಳಿಂದ, ನೆಲದ ಮೂಲಕ ಸೂಕ್ತ ಇನ್ಸುಲೇಟರ್ ಲೇಪನ ಹೊಂದಿರುವ ಕೇಬಲ್‌ಗಳಲ್ಲಿ ವಿದ್ಯುತ್ ಹರಿಯುವುದರಿಂದ ಹೆಚ್ಚಿನ ತೊಂದರೆ ಏನೂ ಆಗುವುದಿಲ್ಲ. ಆದರೆ ಮನೆಯ ಸಂಪ್, ಬೋರ್‌ವೆಲ್ ಇತ್ಯಾದಿಗಳಿಗೆ ನೆಲ ಮಟ್ಟದಿಂದಲೇ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ ಹಾಗೂ ಇವುಗಳ ಮೂಲಕ ವಿದ್ಯುತ್ ಹರಡಿ “ಗ್ರೌಂಡಿಂಗ್’ ಆಗಬಹುದು. ಅಂದರೆ, ನಡೆದಾಡುವ ಒದ್ದೆ ನೆಲದಲ್ಲೆಲ್ಲ ವಿದ್ಯುತ್‌ಶಕ್ತಿ ಹರಡಿ, ಗಂಭೀರ ಆಘಾತ ಆಗಬಲ್ಲದು. ಹಾಗಾಗಿ ಮನೆಯನ್ನು ಒಮ್ಮೆ ನೀರು ಹೊಕ್ಕಿತೆಂದರೆ, ವಿದ್ಯುತ್ ಪ್ರಸರಣದಬಗ್ಗೆ ಎಚ್ಚರಿಕೆಯಿಂದಿರಬೇಕು.
ಕಿಟಕಿ ಬಾಗಿಲ ಮೂಲಕ ನೀರು ಪ್ರವೇಶಿಸಿದರೆ…
ಮಳೆ ಸಾಮಾನ್ಯವಾಗಿ ನೇರವಾಗಿ ಕೆಳಗೆ ಬೀಳುತ್ತದೆ. ಇಲ್ಲವೇ, ಒಂದಷ್ಟು ಏರು ಕೋನದಲ್ಲಿ ಬೀಳುತ್ತದೆ. ಹಾಗಾಗಿ ಇದಕ್ಕೆಂದು ಒಂದಷ್ಟು ಉದ್ದದ ಸಜ್ಜಾ ಚಾಚು ಇತ್ಯಾದಿಗಳನ್ನು ನೀಡಲಾಗುತ್ತದೆ. ಆದರೆ ಮಳೆ ಜೋರಾಗಿ, ಬಿರುಗಾಳಿಯ ಜೊತೆ ಬೀಳಲು ತೊಡಗಿದರೆ, ಕೆಲವೊಮ್ಮೆ ಅಡ್ಡಡ್ಡ ಸುರಿಯಲೂಬಹುದು. ಆಗ ನಾವು ಅನಿವಾರ್ಯವಾಗಿ ಕಿಟಕಿ ಬಾಗಿಲುಗಳನ್ನು ಮುಚ್ಚಿಡಬೇಕಾಗುತ್ತದೆ. ಹಾಗೇನಾದರೂ ಮಾಡದಿದ್ದರೆ, ನೀರು ಗೋಡೆಗಳ ಮೇಲೆ ಸುರಿದು, ನಂತರ ನೆಲದ ಮೇಲೆ ಹರಿಯಲು ಶುರು ಆಗುತ್ತದೆ.
ಗೋಡೆಗಳಲ್ಲಿ ಸಾಮಾನ್ಯವಾಗಿ ಸ್ವಿಚ್ ಪ್ಲಗ್ ಪಾಯಿಂಟ್ ಇತ್ಯಾದಿಗಳನ್ನು ಕೊಡಲಾಗುತ್ತದೆ. ಇವುಗಳ ಮೇಲೆ ನೀರು ಹರಿದರೆ, ವಿದ್ಯುತ್ ಶಾಕ್ ನೀಡುವುದು ಖಂಡಿತ! ಮಳೆಯ ನಂತರ ವಿದ್ಯುತ್ ಬಳಸುವ ಮೊದಲು, ಅವುಗಳ ಮೂಲ -ಸ್ವಿಚ್ ಹಾಗೂ ಇತರೆ ಸಲಕರಣೆಗಳು ಮಳೆಯಿಂದ ತೋಯ್ದಿದೆಯೇ? ಎಂದು ಪರಿಶೀಲಿಸಿ, ನಂತರವೇ ಬಳಸಬೇಕು.
ಗ್ರೌಂಡಿಂಗ್ ಸರಿ ಇದೆಯಾ?
ಕೆಲವೊಮ್ಮೆ ಭಾರೀ ಗಾತ್ರದ ಶಾಕ್ ನೀಡದಿದ್ದರೂ ನಡೆದಾಡಿದಾಗ, ಅದರಲ್ಲೂ ಬರಿ ಕಾಲಿನಲ್ಲಿ ಓಡಾಡಿದಾಗ ಮೆಲ್ಲಗೆ ಶಾಕ್ ಹೊಡೆದ ಅನುಭವ ಆಗಬಹುದು. ಎಲ್ಲೋ ಸ್ವಲ್ಪ ವಿದ್ಯುತ್ ಹರಿದಾಡಿದೆ ಎಂದು ಅದನ್ನೂ ನಿರ್ಲಕ್ಷಿಸುವಂತಿಲ್ಲ. ಕೆಲವೊಮ್ಮೆ ಗ್ರೌಂಡಿಂಗ್ ಹರಿವು ಎಷ್ಟು ಕಡಿಮೆ ಇರುತ್ತದೆ ಎಂದರೆ, ನಮಗದು ಗೊತ್ತೇ ಆಗುವುದಿಲ್ಲ. ಆದುದರಿಂದ ಭಾರೀ ಮಳೆಯ ನಂತರ ನಮಗೇನಾದರೂ ನೀರಿನ ಸೋರಿಕೆಯಿಂದಾಗಿ ಎಲ್ಲೆಡೆ ವಿದ್ಯುತ್ ಹರಡುತ್ತಿದೆ ಎಂದು ಸಂಶಯ ಬಂದರೆ, ಮೊದಲು ಎಲ್ಲ ವಿದ್ಯುತ್ ಸಲಕರಣೆಗಳನ್ನು, ಬಲ್ಬ್, ಟಿ.ವಿ ಇತ್ಯಾದಿಗಳನ್ನು ನಿಲ್ಲಿಸಿ, ಮೀಟರ್ ಓಡುತ್ತಿದೆಯೇ? ಎಂದು ಪರಿಶೀಲಿಸಬೇಕು. ಎಲ್ಲ ಸಲಕರಣೆಗಳೂ ಬಂದ್ ಆದನಂತರವೂ ಮೀಟರ್ ತಿರುಗುತ್ತಿದ್ದರೆ, ಗ್ರೌಂಡಿಂಗ್ ಆಗಿರುವುದು ನಿಖರ ಆಗುತ್ತದೆ.
ವಿದ್ಯುತ್ ಕೊಳವೆಗಳಲ್ಲಿ ನೀರು ನುಗ್ಗದಿರಲಿ
ಮಳೆಯ ರಭಸಕ್ಕೆ ಕೆಲವೊಮ್ಮೆ ವಿದ್ಯುತ್ ವಾಹಕ – ಎಲೆಕ್ಟ್ರಿಕ್ ವಯರ್ ಗಳು ಹರಿದಾಡುವ ಕೊಳವೆಗಳಲ್ಲಿ ನೀರು ಸೋರಿಕೆ ಆಗಿರಬಹುದು. ಇದು ಸಾಮಾನ್ಯವಾಗಿ ಹೆಚ್ಚು ತೊಂದರೆ ಕೊಡದಿದ್ದರೂ ಕೆಲವೊಮ್ಮೆ ಎಲೆಕ್ಟ್ರಿಷಿಯನ್‌ಗಳು ವಯರ್ ಒಂದೇ ಉದ್ದದ್ದು ಸಾಲಲಿಲ್ಲ ಎಂದು ಮಧ್ಯೆ ಬೆಸುಗೆ – ಜಾಯಿಂಟ್ ಮಾಡಿರಬಹುದು. ಇದನ್ನು ಇನ್ಸುಲೇಷನ್ ಟೇಪ್‌ನಿಂದ ಬಿಗಿ ಗೊಳಿಸಿದ್ದರೂ ನೀರು ಒಳಹೊಕ್ಕು ಗ್ರೌಂಡಿಂಗ್ ಆಗುವ ಸಾಧ್ಯತೆ ಇರುತ್ತದೆ.
ಆದುದರಿಂದ ಕೊಳವೆ ಮಾರ್ಗಗಳನ್ನು – ವಿದ್ಯುತ್ ಮಂಡಲ – ಸರ್ಕ್ನೂಟ್ ಗಳನ್ನು ಪರಿಶೀಲಿಸಿ ಖಾತರಿ ಮಾಡಿಕೊಳ್ಳಬೇಕು. ನೀರು ಸಾಮಾನ್ಯವಾಗಿ ಕೊಳವೆಗಳ ಒಳಗೆ ನುಸುಳುವ ಮಾರ್ಗ ಸೂರಿನಲ್ಲಿ ಮುಂದೆ ಕಟ್ಟಬಹುದು ಎಂದು ಬಿಟ್ಟಿರುವ ತೆರೆದ ವಿದ್ಯುತ್ ಕೊಳವೆಗಳೇ ಆಗಿರುತ್ತವೆ. ಆದುದರಿಂದ ಈ ರೀತಿಯಾಗಿ ಸೂರಿನ ಮೇಲೆ ಬಿಟ್ಟಿರುವ ಕೊಳವೆಗಳಿಗೆ ಎರಡು ಬೆಂಡ್‌ಗಳನ್ನು ಹಾಕಿ, ಕೊಳವೆಗಳು ಹಾಗೂ ಅವುಗಳಲ್ಲಿ ಇರುವ ವೈರ್‌ಗಳು ಕೆಳಗೆ ನೋಡುವಂತೆ- ನೀರು ಒಳನುಗ್ಗದ ರೀತಿಯಲ್ಲಿ ಅಳವಡಿಸುವುದು ಸೂಕ್ತ.
ಶಾರ್ಟ್ ಸರ್ಕ್ನೂಟ್ ಬಗ್ಗೆ ಎಚ್ಚರ ವಹಿಸಿ
ಮಳೆಯ ಅನೇಕ ಅವಘಡಗಳನ್ನು ಕೆಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದರ ಮೂಲಕ ತಡೆಯಬಹುದು. ನೀರು ಹಾಗೂ ಎರಚಲು ಬೀಳುವ ಸ್ಥಳಗಳಲ್ಲಿ – ಅವು ಮನೆಯ ಒಳಗೇ ಇದ್ದರೂ ವಿದ್ಯುತ್ ಪಾಯಿಂಟ್ ಗಳನ್ನು ನೀಡಬಾರದು. ಆದಷ್ಟೂ ಕಿಟಕಿ ಹೊರ ಬಾಗಿಲುಗಳ ಸ್ಥಳಗಳಿಂದ ದೂರ ಇಡುವುದು ಒಳ್ಳೆಯದು. ಮಳೆಯ ತೊಂದರೆ ಕೆಳ ಮಟ್ಟದಲ್ಲಿ ಹೆಚ್ಚು ಇರುವುದರಿಂದ, ಮನೆಯ ಹೊರಗಿನ ಸಂಪರ್ಕಗಳನ್ನು- ಸಂಪ್ ಇತ್ಯಾದಿಗಳ ಕಂಟ್ರೋಲ್‌ಗಳನ್ನು ಐದು ಅಡಿ ಎತ್ತರದಲ್ಲಿ ಇಟ್ಟರೆ ನೀರಿನ ಹಾವಳಿ ತಪ್ಪುತ್ತದೆ. ಮನೆಯ ಹೊರಗಿನ ಫಿಟ್ಟಿಂಗ್‌ಗಳು ಕಡ್ಡಾಯವಾಗಿ ನೀರು ನಿರೋಧಕ ಗುಣ ಹೊಂದಿರುವುದನ್ನು ಖಾತರಿ ಪಡಿಸಿಕೊಳ್ಳಿ. ಕೆಲವೊಮ್ಮೆ ಡೂಮ್- ಗಾಜಿನ ಗೋಲ, ಇತರೆ ಫಿಟ್ಟಿಂಗ್‌ಗಳಲ್ಲಿ ನೀರು ಸೇರಿಕೊಳ್ಳುತ್ತದೆ. ಅದು ಕಡಿಮೆ ಇರುವಾಗ ಏನೂ ತೊಂದರೆ ಇರದಿದ್ದರೂ, ಹೆಚ್ಚಿ, ವಿದ್ಯುತ್ ವಾಹಕಗಳ ಸಂಪರ್ಕ ಬಂದಾಗ ಶಾರ್ಟ್‌ಸರ್ಕ್ನೂಟ್ ಆಗಬಹುದು. ಆದುದರಿಂದ ನೀರಿನ ಒಂದು ಹನಿ ಕಂಡುಬಂದರೂ ಅದನ್ನು ತೆಗೆಸುವುದು ಕಡ್ಡಾಯ.
- ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.