ಏನಿದೆ ಬಜೆಟ್‌ನ ಒಳಮರ್ಮ? 


Team Udayavani, Jan 22, 2018, 1:01 PM IST

budgetdesign.jpg

ನಮ್ದು ಬಜೆಟ್‌ ಇಷ್ಟು ಅಥವಾ ಅದು ನಮ್ ಬಜೆಟ್ಟಿಗೆ ಬರೋದಿಲ್ಲ ಅಂತ ನಾವು ಹೇಳುತ್ತಿರುತ್ತೇವೆ. ಹಾಗೆ ಹೇಳುವಾಗ ಬಜೆಟ್ ಎಂಬ ಪದವನ್ನು ನಮ್ಮ ಖರ್ಚಿನ ಅಂದಾಜು ಮೊತ್ತವಿದು ಎನ್ನುವ ಅರ್ಥದಲ್ಲಿ ಬಳಸುತ್ತೇವೆ. ನಮ್ಮ ಬಜೆಟ್‌ ಒಳಗೆ ಬಂದರೆ ಖುಷಿ ಪಡುತ್ತೇವೆ. ಬಾರದಿದ್ದರೆ ಬಜೆಟ್‌ ಹೊಂದಿಸುವುದು ಹೇಗಪ್ಪಾ ಎಂಬುದಾಗಿ ಯೋಚಿಸಲು ಆರಂಭಿಸುತ್ತೇವೆ.  ನಮ್ಮ ಸರಕಾರಕ್ಕೂ ಬಜೆಟ್‌ ಇದೆ.  

ಪ್ರತಿ ವರ್ಷವೂ ಮುಂದಿನ ವಿತ್ತ ವರ್ಷಕ್ಕೆ (ಏಪ್ರಿಲ್-ಮಾರ್ಚ್‌) ಸಂಬಂಧಪಟ್ಟಂತೆ ಆಯ ಮತ್ತು ವ್ಯಯಗಳ ಅಂದಾಜು ಪಟ್ಟಿಯನ್ನು ಮಾಡಿ ಅದನ್ನು ಫೆಬ್ರವರಿಯಲ್ಲಿಯೇ ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ತೆಗೆದುಕೊಳ್ಳುವುದು ಒಂದು ಸಾಮಾನ್ಯ ಪ್ರಕ್ರಿಯೆ. ಇಲ್ಲಿ ಮುಖ್ಯವಾದ ವಿಚಾರವೇನೆಂದರೆ, ಸರಕಾರವು ತನ್ನ ಆದಾಯ ಮತ್ತು ಖರ್ಚು  ಎರಡನ್ನೂ ಸರಿದೂಗಿಸಿಕೊಳ್ಳಬಲ್ಲದು.

ಸರಕಾರದ ಆದಾಯವೆಂದರೆ ಸಾರ್ವಜನಿಕರ ಮೇಲೆ ಹೇರುವ ಕರ; ಖರ್ಚು ಎಂದರೆ ಸಾರ್ವಜನಿಕರಿಗಾಗಿ ವಿವಿಧ ಯೋಜನೆಗಳಲ್ಲಿ ಮಾಡುವ ಅನುದಾನ. ಒಂದು ಸರಕಾರದ ಬಜೆಟ್ಟಿನಲ್ಲಿ ಇವೆರಡನ್ನೂ ನಿರ್ವಹಿಸಲು ಸಾಧ್ಯ. ನಮ್ಮ ನಿಮ್ಮ ಬಜೆಟ್ಟಿನಲ್ಲಿ ಆದಾಯವನ್ನು ನಿರ್ಣಯ ಮಾಡುವುದು ತುಸು ಕಷ್ಟ ಸಾಧ್ಯ. ಆದಾಯ ಊಹ್ಯವಾಗಿದ್ದು ಖರ್ಚನ್ನು ಮಾತ್ರ ಸರಿ ಹೊಂದಿಸುವುದು ನಮ್ಮ ಗೃಹ ಬಜೆಟ್ಟುಗಳ ಲಕ್ಷಣ. ಆದರೆ ಸರಕಾರ ಎರಡನ್ನೂ ಬೇಕಾದಂತೆ ಹೊಂದಿಸಿಕೊಳ್ಳಬಹುದು. 

ಬಹುತೇಕ ಎಲ್ಲರೂ ಫೆಬ್ರವರಿ ಮಾಸದಲ್ಲಿ ಪ್ರಕಟವಾಗುವ ಸರಕಾರಿ ಬಜೆಟ್ಟಿಗಾಗಿ ಕಾದು ಕುಳಿತಿರುತ್ತಾರೆ. ಈ ಬಾರಿ ನಮಗೆ ಕಟ್ಟಿಟ್ಟ ಬುತ್ತಿಯಲ್ಲಿ ಏನೇನು ವಿಶೇಷಗಳಿವೆ ಎನ್ನುವುದು ಎಲ್ಲರ ಕುತೂಹಲ. ಒಂದು ಬಜೆಟ್‌ ಯಾಕೆ ಮುಖ್ಯವಾಗುತ್ತದೆ? ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ಜನ ಸಾಮಾನ್ಯರನ್ನು ಹೇಗೆ ತಟ್ಟುತ್ತದೆ ಎನ್ನುವುದು ಮುಖ್ಯವಾದ ವಿಚಾರ. ಅದರ ಬಗ್ಗೆ ತುಸು ವಿಸ್ತೃತವಾಗಿ ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲ. ಹಾಗಾಗಿ ಇದೀಗ ಬಜೆಟ್‌ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳೋಣ: 

ಒಂದು ಬಜೆಟ್ಟನ್ನು ಮುಖ್ಯವಾಗಿ ಮೂರು ಭಾಗಗಳಲ್ಲಿ ನೋಡಬಹುದು.

1. ಆದಾಯ: ಸರಕಾರ ತನ್ನ ಆದಾಯವನ್ನು ಪ್ರಮುಖವಾಗಿ ಕರಗಳನ್ನು ಹೇರುವುದರ ಮೂಲಕ ಹೊಂದಿಸಿಕೊಳ್ಳುತ್ತದೆ. ಕರಗಳಲ್ಲಿ ಮುಖ್ಯವಾಗಿ ಎರಡು ವಿಧ. ಪ್ರತ್ಯಕ್ಷಕರ ಮತ್ತು ಪರೋಕ್ಷ$ ಕರ. ನಾವು ನೀವು ತೆರುವ ಆದಾಯ ಕರ ಅಥವಾ ಇನ್ಕಂ ಟ್ಯಾಕ್ಸ್‌ ಪ್ರತ್ಯಕ್ಷಕರವಾಗಿದೆ. ಅಂದರೆ ಇದು ನೇರವಾಗಿ ನಮ್ಮ ಆದಾಯದಿಂದಲೇ ಕಡಿತವಾಗಿ ಸರಕಾರದ ಬೊಕ್ಕಸಕ್ಕೆ ಸಲ್ಲುವ ಡೈರೆಕ್ಟ್ ಟ್ಯಾಕ್ಸ್‌.

ಇದು ಸಾರ್ವಜನಿಕರಿಂದ ಮಾತ್ರವಲ್ಲದೆ ಕಂಪೆನಿಗಳಿಂದಲೂ ಸರಕಾರಕ್ಕೆ ಸಲ್ಲುತ್ತದೆ. ಅದು ಬಿಟ್ಟು, ಸರಕುಗಳ ಮೇಲೆ ಹೇರಿದ ಸುಂಕ ಪರೋಕ್ಷವಾಗಿ, ಅಂದರೆ ಇನ್‌ಡೈರೆಕ್ಟ್ ಆಗಿ  ಸರಕಾರದ ಖಜಾನೆಯನ್ನು ಸೇರುತ್ತದೆ. ಇದು ನಮ್ಮ ಆದಾಯದಿಂದ ನೇರವಾಗಿ ಕಡಿತವಾಗದೆ ನಾವು ಸರಕು/ಸೇವೆಗಳನ್ನು ಕೊಂಡಾಗ ಮಾತ್ರ ಕಡಿತವಾಗುವ ಕರ.

ಎಗ್ಸೆ„ಸ್, ಸೇಲ್ಸ್ ಟ್ಯಾಕ್ಸ್‌, ವ್ಯಾಟ್‌ ಇತ್ಯಾದಿ ಹೆಸರುಗಳಿಂದ ಸರಕು/ಸೇವೆಗಳ ವಿವಿಧ ಹಂತಗಳಲ್ಲಿ ವಸೂಲಿ ನಡೆಯುತ್ತಿದ್ದ ಕರ ಇದೀಗ ಏಕರೂಪಿಯಾಗಿ ಜಿಎಸ್ಟಿ ಹೆಸರಿನಲ್ಲಿ ಬರುತ್ತಿರುವುದು ನಮಗೆಲ್ಲಾ ತಿಳಿದ ವಿಚಾರ. ಆಮದು ವ್ಯವಹಾರದ ಮೇಲೆ ಕಸ್ಟಮ್ಸ್ ಸುಂಕ ಈಗಲೂ ಲಾಗೂ ಆಗುತ್ತದೆ. ಅದಿನ್ನೂ ಜಿಎಸ್ಟಿ ವ್ಯಾಪ್ತಿಯೊಳಗೆ ಬಂದಿಲ್ಲ.

ಈ ರೀತಿಯ ಸುಂಕ ಆಧಾರಿತ ಆದಾಯ ಬಿಟ್ಟರೆ ಸರಕಾರವು ತನ್ನ ಆಸ್ತಿಯನ್ನು ಮಾರಾಟ ಮಾಡಿಯೂ ತುಸು ದುಡ್ಡನ್ನು ಹೊಂದಿಸಿಕೊಳ್ಳುತ್ತದೆ. ತನ್ನ ಕೈಯಲ್ಲಿರುವ ಪಬ್ಲಿಕ್ ಸೆಕ್ಟರ್‌  (ಸಾರ್ವಜನಿಕ ವಲಯ) ಕಂಪೆನಿಗಳ ಶೇರುಗಳನ್ನು ಮಾರಾಟ ಮಾಡಿಯೂ ಸರಕಾರ ವರ್ಷ ವರ್ಷವೂ ಸ್ವಲ್ಪ ಆದಾಯ ಗಳಿಸುತ್ತದೆ. ಇದರ ಅಂದಾಜು ಮೊತ್ತವನ್ನೂ ಕೂಡಾ ಸರಕಾರ ತನ್ನ ಬಜೆಟ್ಟಿನಲ್ಲಿ ಮಂಡಿಸುತ್ತದೆ.  
  
2. ವ್ಯಯ: ಸರಕಾರದ ಆದಾಯ ಒಂದೆಡೆಯಾದರೆ ಅದರ ಖರ್ಚು ಅಥವಾ ವ್ಯಯ ಇನ್ನೊಂದೆಡೆ. ಸರಕಾರದ ಖರ್ಚು ಕೂಡಾ ಬಜೆಟ್ಟಿನ ಒಂದು ಮುಖ್ಯವಾದ ಭಾಗ. ಸರಕಾರದ ಖರ್ಚೇ ಜನತೆಯ ಆದಾಯ. ಹಾಗಾಗಿ ಸರಕಾರ ಜಾಸ್ತಿ ಖರ್ಚು ಮಾಡಿದಂತೆಲ್ಲಾ ಜನ ಸಾಮಾನ್ಯರಿಗೆ ಜಾಸ್ತಿ ಆದಾಯವಾಗುತ್ತಾ ಹೋಗುತ್ತದೆ. ಆದ್ದರಿಂದ ಒಂದು ವರ್ಷದ ಬಜೆಟ್ಟಿನಲ್ಲಿ ಒಟ್ಟಾರೆ ಖರ್ಚು ಎಷ್ಟು ಎನ್ನುವುದು ಕೂಡಾ  ನಮಗೆ ಮುಖ್ಯವಾಗುತ್ತದೆ.

ಈ ಸಂದರ್ಭದಲ್ಲಿ ಮೈನಾರ್ಡ್‌ ಕೈನ್ಸ್‌ ಎಂಬ ಅರ್ಥಶಾಸ್ತ್ರಜ್ಞನ ತತ್ವಗಳನ್ನು ನೆನಪಿಸಿಕೊಳ್ಳಬೇಕು. ಸಾವಿರದ ಒಂಬೈನೂರ ಮೂವತ್ತರ ದಶಕದಲ್ಲಿ ಜಗತ್ತನ್ನು ಕಾಡಿದ ದ ಗ್ರೇಟ್ ಡಿಪ್ರಶನ್‌ ಅಥವಾ ಜಾಗತಿಕ ಮಹಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಈ ಅರ್ಥಶಾಸ್ತ್ರಜ್ಞ “ಸಾಲ ಮಾಡಿಯಾದರೂ ಜಾಸ್ತಿ ಖರ್ಚು ಮಾಡುವಂತೆ ಅಮೆರಿಕಾ ಸರ್ಕಾರಕ್ಕೆ ಸಲಹೆ ಇತ್ತಿದ್ದನು.

ಸರಕಾರವು ಜಾಸ್ತಿ ಖರ್ಚು ಮಾಡಿದಂತೆಲಾ ಜನತೆಯ ಕೈಯಲ್ಲಿ ಆದಾಯ ಹೆಚ್ಚಿ ಅವರು ಜಾಸ್ತಿ ಸರಕು ಖರೀದಿಸುವಂತಾಯಿತು, ಇದರಿಂದ ಬೇಡಿಕೆ ಹೆಚ್ಚಿ, ಉತ್ಪಾದನೆ ಹೆಚ್ಚಿ, ಆರ್ಥಿಕ ಪ್ರಗತಿಯತ್ತ ದೇಶ ನಡೆದು ಆರ್ಥಿಕ ಹಿಂಜರಿತದಿಂದ ಹೊರ ಬರುವಂತಾಯಿತು. ನೊಬೆಲ್‌ ವಿಜೇತ ಕೈನ್ಸ್‌ನ ತತ್ವಗಳು ಇಂದಿಗೂ ಜಗತ್ತಿನಲ್ಲಿ ಬಳಕೆಯಲ್ಲಿವೆ. ಸರಕಾರ ಜಾಸ್ತಿ ಖರ್ಚು ಮಾಡುವುದು ಆರ್ಥಿಕ ಪ್ರಗತಿಯ ದೃಷ್ಠಿಯಲ್ಲಿ ಒಳ್ಳೆಯದು. 

ಒಟ್ಟಾರೆ ಖರ್ಚಿನ ಕತೆ ಹೀಗಾದರೆ ಸರಕಾರವು ಯಾವ ಯಾವ ಕ್ಷೇತ್ರ ಮತ್ತು ಯೋಜನೆಗಳಲ್ಲಿ ಖರ್ಚು ಮಾಡುತ್ತದೆ ಎನ್ನುವುದೂ ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಕೃಷಿ, ಉದ್ದಿಮೆ, ಮೂಲ ಸೌಕರ್ಯ, ಆರೋಗ್ಯ, ಪಡಿತರ, ವಿದ್ಯಾಭ್ಯಾಸ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಸರಕಾರವು ಬೇರೆ ಬೇರೆ ಮೊತ್ತವನ್ನು ಬಜೆಟ್ ಮೂಲಕ ವ್ಯಯಿಸುತ್ತದೆ. ಶೇರು ಮಾರುಕಟ್ಟೆಯೂ ವಿವಿಧ ಕ್ಷೇತ್ರಗಳ ನಿಪುಣರೂ ಈ ಘೋಷಣೆಗಾಗಿ ಕಾದಿರುತ್ತಾರೆ. ಸರಕಾರ ಘೋಷಿಸುವ ಖರ್ಚಿನ ಪ್ರಮಾಣವನ್ನು ಆಧರಿಸಿ, ಆಯಾ ಕ್ಷೇತ್ರಗಳಿಗೆ ಲಾಭ/ ನಷ್ಟ ಉಂಟಾಗುತ್ತದೆ. 

3. ಕೊರತೆ: ಒಂದು ಬಜೆಟ್ಟಿನಲ್ಲಿ ಆದಾಯ ಮತ್ತು ವ್ಯಯಗಳನ್ನು ಸರಿ ಹೊಂದಿಸುವಲ್ಲಿ ಒಂದೋ ಮಿಗತೆಯಾಗುತ್ತದೆ ಇಲ್ಲಾ ಕೊರತೆ ಉಂಟಾಗುತ್ತದೆ. ಬಹುತೇಕ ವ್ಯಯವು ಆದಾಯಕ್ಕಿಂತ ಜಾಸ್ತಿಯಿದ್ದರೆ ಒಟ್ಟಾರೆ ಬಜೆಟ್‌ ಕೊರತೆಯುಳ್ಳ ಬಜೆಟ್‌ ಆಗುತ್ತದೆ. ಇದನ್ನು ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್‌ ಎನ್ನುತ್ತಾರೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ.

ಕೈನ್ಸ್‌ ಶಾಸ್ತ್ರದ ಪ್ರಕಾರ, ಸಾಲ ಮಾಡಿಯಾದರೂ ಸರಕಾರ ವ್ಯಯ ಮಾಡಿದರೆ ಅದು ದೇಶಕ್ಕೆ ಆದಾಯವಾಗಿ ಪರಿಣಮಿಸಿ ಆರ್ಥಿಕ ಪ್ರಗತಿಗೆ ಕಾರಣವಾದೀತು. ಹಾಗಾಗಿ ವಿತ್ತೀಯ ಕೊರತೆ ತಕ್ಕ ಮಟ್ಟಿಗೆ ಒಳ್ಳೆಯದೇ. ಹಾಗೆ ಹೇಳಿ ಯಾವುದೇ ಕಡಿವಾಣವಿಲ್ಲದೆ ವಿತ್ತೀಯ ಕೊರತೆಯನ್ನು ಹೆಚ್ಚಿಸುತ್ತಾ ಹೋಗಲು ಬರುವುದಿಲ್ಲ. ಯಾಕೆಂದರೆ ಒಂದು ಸರಕಾರವು ತನ್ನ ವಿತ್ತೀಯ ಕೊರತೆಯನ್ನು ಸಾಲದ ಮುಖಾಂತರ ತುಂಬಿಸಿಕೊಳ್ಳುತ್ತದೆ.

ಸರಕಾರ ಸಾಲ ಮಾಡಿದರೆ ಸಧ್ಯದ ಖರ್ಚನ್ನು ಹೇಗೋ ನಿಭಾಯಿಸಬಹುದು. ಆದರೆ ಅಂತಹ ಸಾಲದ ಮೇಲೆ ಬಡ್ಡಿ ತೆರಬೇಕಾಗುತ್ತದೆ. ಈ ಬಡ್ಡಿಯ ಭಾಗವೇ ಸರಕಾರದ ಮೇಲೆ ಒಂದು ದೊಡ್ಡ  ಹೊರೆ. ಸಧ್ಯದ ಪರಿಸ್ಥಿತಿಯಲ್ಲಿ ಭಾರತ ಸರಕಾರವು ತನ್ನ ವಾರ್ಷಿಕ ಆದಾಯದ ಸುಮಾರು ಶೇ.25ರಷ್ಟನ್ನು ಕೇವಲ ಹಿಂದಿನ ಸಾಲದ ಬಡ್ಡಿ ತುಂಬುವುದಕ್ಕೆ ಮಾತ್ರವೇ ವ್ಯಯಿಸುತ್ತದೆ.

ಹಾಗಾದರೆ ಮುಖ್ಯ ಖರ್ಚಿಗೆ ಉಳಿದದ್ದೇನು ಬಂತು? ಇದು ಅಪಾಯಕಾರಿ. ಆ ಕಾರಣಕ್ಕೆ ವಿತ್ತೀಯ ಕೊರತೆಯನ್ನು ಮಿತವಾಗಿ ಬಳಸಬೇಕು. ಹಾಸಿಗೆ ಇದ್ದುದರಿಂದ ಒಂಚೂರು ಜಾಸ್ತಿ ಮಾತ್ರ ಕಾಲು ಚಾಚಿದರೆ ಸಾಕು. ಮಿತಿ ಮೀರಿ ಕಾಲು ನೀಡಿ ಮಲಗಬಾರದು. 

ಬಜೆಟ್‌ ದಿವಸ ವಿತ್ತ ಮಂತ್ರಿಗಳು ಬಜೆಟ್‌ ಓದಲು ಆರಂಭಿಸಿದ ಕೂಡಲೇ ಈ ಕೆಳಗಿನ ಅಂಶಗಳತ್ತ ಜನರು ಗಮನಹರಿಸುತ್ತಾರೆ:
1. ಒಟ್ಟು ಬಜೆಟ್‌ನ ಮೊತ್ತ. ಇದು ಕಳೆದ ಬಾರಿಗಿಂತ ಎಷ್ಟು ಜಾಸ್ತಿ? 

2. ಈ ಬಾರಿ ವಿತ್ತೀಯ ಕೊರತೆ ಎಷ್ಟು? ಇದು ಮಿತಿಯೊಳಗೆ ಇದೆಯೇ ಅಥವಾ ಮಿತಿ ತಪ್ಪಿ ಹೋಗುತ್ತಿದೆಯೇ? 

3. ವಿವಿಧ ಕ್ಷೇತ್ರಗಳಲ್ಲಿ ಖರ್ಚು ಎಷ್ಟು? ಇವು ಕಳೆದ ವರ್ಷದ ತುಲನೆಯಲ್ಲಿ ಹೇಗೆ ನಿಲ್ಲುತ್ತವೆ? 

4. ಆದಾಯದ ವಿಭಾಗದಲ್ಲಿ ವಿವಿಧ ಕರಗಳು (ಆದಾಯ ತೆರಿಗೆ, ಜಿಎಸ್ಟಿ, ಕಸ್ಟಮ್ಸ್) ಯಾವ ರೀತಿ ಬದಲಾಗಿವೆ? ಯಾವ ಸರಕುಗಳಿಗೆ ಜಾಸ್ತಿಯಾಗಿವೆ? ಯಾವುದಕ್ಕೆ ಕಡಿಮೆಯಾಗಿವೆ? ಆದಾಯ ಕರದಲ್ಲಿ ಮತ್ತದರ ವಿನಾಯಿತಿಗಳಲ್ಲಿ ಯಾವ ರೀತಿ ಬದಲಾವಣೆ ಉಂಟಾಗಿದೆ? 

ಈ ಬಾರಿ ಬಜೆಟ್‌ ಮಂಡನೆಯ ಕುರಿತು ಕೇಳುವಾಗ, ನೋಡುವಾಗ ಹಾಗೂ ಓದುವಾಗ  ಕೇಳುವಾಗ ಈ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಲ್ಲಿ ಬಜೆಟ್‌ ತುಂಬಾ ಸುಲಭವಾಗಿ ಅರ್ಥವಾದೀತು.

* ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.