ಪ್ರಾದೇಶಿಕ ಭಾಷೆಯಲ್ಲಿ ಚೆಕ್ ಬರೆದರೆ ತಪ್ಪೇನು?
Team Udayavani, Dec 3, 2018, 6:00 AM IST
ಸೆಕ್ಷನ್ 5.7.2 ಪ್ರಕಾರ ಗ್ರಾಹಕ ಚೆಕ್‌ಗಳನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಹೆಸರು, ಮೊತ್ತ ಬಿಡಿ, ಕನ್ನಡದ ಲಿಪಿಯಲ್ಲಿಯೇ ಅಂಕಿಗಳನ್ನು ಬರೆದರೂ ಅದು ಮಾನ್ಯ. ಇಂಥ ಚೆಕ್‌ಗಳನ್ನು ನಿರಾಕರಿಸುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ.
ಕೆಲ ದಿನಗಳ ಹಿಂದೆ ಚೆಕ್ ಕನ್ನಡದಲ್ಲಿ ಬರೆದಿದ್ದಾರೆ ಎಂಬ ಕಾರಣಕ್ಕೆ ಬ್ಯಾಂಕ್‌ನಲ್ಲಿ ನಗದೀಕರಣವಾಗದೆ ತಿರಸ್ಕರಿಸಲ್ಪಟ್ಟ ಘಟನೆ ರಾಜ್ಯ ಮಟ್ಟದಲ್ಲಿ ಸುದ್ದಿ ಆಗಿತ್ತು. ಅವತ್ತು ಸಾಗರದಲ್ಲಿ ನಡೆದ ಘಟನೆ ಒಂದು ನಗರದ ಪ್ರಸಂಗ ಆಗಿರದೆ ಬ್ಯಾಂಕ್‌ಗಳ ಚೌಕಟ್ಟಿನಲ್ಲಿ ಬಗೆಹರಿಸಲೇಬೇಕಾದ ತಾಂತ್ರಿಕ ಪ್ರಕ್ರಿಯೆ ಎಂಬ ಕಾರಣಕ್ಕೆ ಅದರ ಹಲವು ಮಜಲುಗಳನ್ನು ಇಲ್ಲಿ ಚರ್ಚಿಸಬೇಕಾಗಿದೆ.
ಕನ್ನಡವೇ ಕಷ್ಟ!
ಘಟನೆ ಸರಳ. ಬ್ಯಾಂಕ್ ಗ್ರಾಹಕರೊಬ್ಬರು ತಾವು ನೀಡುವ ಚೆಕ್‌ನಲ್ಲಿ ಮೊತ್ತವನ್ನು ಪಡೆಯುವವರ ಹೆಸರು ಹಾಗೂ ಮೊತ್ತವನ್ನು ಕನ್ನಡದ ಅಕ್ಷರದಲ್ಲಿ ಬರೆದಿರುತ್ತಾರೆ. ಅಂಕಿಗಳನ್ನು ಹಿಂದೂ ಅರೇಬಿಕ್‌ನಲ್ಲಿಯೇ ಬರೆದಿದ್ದರು. ಈ ಚೆಕ್‌ನ್ನು ನಗದೀಕರಣಕ್ಕೆ ಹಾಕಿದಾಗ, ಚೆಕ್ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ವ್ಯವಸ್ಥೆಯಡಿ ಮಾತೃ ಬ್ಯಾಂಕ್‌ನ ಚೆನ್ನೈ ಸೆಂಟ್ರಲ್ ಕ್ಲಿಯರಿಂಗ್ ಪೊ›ಸೆಸಿಂಗ್ ಸೆಂಟರ್‌ಗೆ ರವಾನೆಯಾಗಿರುತ್ತದೆ. ಅಲ್ಲಿ ಅದು ಪರಿಶೀಲನೆಗೆ ಒಳಪಡುವಾಗ ಅಲ್ಲಿ ಕನ್ನಡದ ಅರಿವಿರದ ಅಧಿಕಾರಿ ಈ ಚೆಕ್ ತನಗರ್ಥವಾಗದಿರುವುದರಿಂದ ಅದನ್ನು ನಗದೀಕರಿಸಲು ನಿರಾಕರಿಸಿದ್ದಾನೆ. ಒಂದರ್ಥದಲ್ಲಿ ಅದನ್ನು ಕನ್ನಡಕ್ಕಾದ ಅವಮಾನ ಎಂದುಕೊಳ್ಳುವುದು ಭಾವನೆಯನ್ನು ಕೆರಳಿಸುವ ಸಂಗತಿ. ಅದರ ಬದಲು ಇದು ಒಟ್ಟಾರೆ ಭಾರತದ ಪ್ರಾದೇಶಿಕ ಭಾಷೆಗಳಿಗಾದ ಅವಮಾನ ಎಂದುಕೊಳ್ಳಬಹುದು. ಅದಕ್ಕಿಂತ ಮುಖ್ಯವಾಗಿ ಚೆಕ್ ನಗದೀಕರಣಕ್ಕೆ ಬ್ಯಾಂಕ್‌ಗಳು ಹೊಂದಿರುವ ವ್ಯವಸ್ಥೆಯ ದೋಷವನ್ನು ಈ ಘಟನೆ ಎತ್ತಿ ತೋರಿಸಿತು.
ಇತ್ತೀಚಿನವರೆಗೂ ತಾಲೂಕು ಮಟ್ಟದಲ್ಲಿ ಭೌತಿಕ ಕ್ಲಿಯರಿಂಗ್ ಹೌಸ್ ವ್ಯವಸ್ಥೆ ಇತ್ತು. ಇದರಲ್ಲಿ ಚೆಕ್ ಯಾವುದೇ ಬ್ಯಾಂಕ್‌ನಲ್ಲಿ ನಗದೀಕರಣಕ್ಕೆ ಸಲ್ಲಿಕೆಯಾದರೂ ಆಯಾ ಬ್ಯಾಂಕ್‌ನಿಂದ ಚೆಕ್ ಎಂಬ “ಇನ್‌ಸ್ಟ್ರೆಮೆಂಟ್’ಅನ್ನು ಹಿಡಿದುಕೊಂಡು ಆಯಾ ಬ್ಯಾಂಕ್‌ನ ಅಧಿಕೃತ ಉದ್ಯೋಗಿ ಬಂದು ಒಂದು ಕಡೆ ಕುಳಿತು ಪರಸ್ಪರ ಬ್ಯಾಂಕ್ ಚೆಕ್‌ಗಳನ್ನು ಹಸ್ತಾಂತರಿಸಿಕೊಳ್ಳುತ್ತಿದ್ದರು. ನಂತರ ತಮ್ಮ ಶಾಖೆಯಲ್ಲಿ ಇವುಗಳನ್ನು ಪರಿಶೀಲಿಸಿ ನಗದೀಕರಣ ಅಥವಾ ತಿರಸ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು. ದಿನದಲ್ಲಿ ಎರಡು ಬಾರಿ ಈ ಕ್ರಿಯೆ ನಡೆದು ಅವತ್ತು ಸಲ್ಲಿಕೆಯಾದ ಚೆಕ್ ಅವತ್ತೇ ನಗದಾಗುತ್ತಿತ್ತು. ಗಮನಿಸಬೇಕು, ಸಾಮಾನ್ಯವಾಗಿ ಚಿಕ್ಕ ಪುಟ್ಟ ತಪ್ಪುಗಳಿದ್ದರೆ ಸ್ಥಳೀಯವಾಗಿ ಬ್ರಾಂಚ್‌ಗೇ ಚೆಕ್ ಕೊಟ್ಟವರನ್ನು ಕರೆಯಿಸಿ ಸರಿಪಡಿಸುತ್ತಿದ್ದರು. ಇಂಥಹದ್ದನ್ನು ದೊಡ್ಡ ದೊಡ್ಡ ನಗರಗಳಲ್ಲಿ ಈ ರೀತಿ ಮಾಡುವುದು ಕಷ್ಟ. ಆದರೆ, ಇನ್ನು ಮುಂದೆ ತಾಲ್ಲೂಕು ಮಟ್ಟದಲ್ಲಿಯೂ ಈ ಕೆಲಸ ಆಗದು. ಇದರ ಜೊತೆಗೆ ಸ್ಥಳೀಯ ಭಾಷೆಯ ಚೆಕ್ ಸಮಸ್ಯೆ ಇನ್ನು ಮುಂದೆ ಹೆಚ್ಚಬಹುದು ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ.
ಚೆಕ್ ನಗದೀಕರಣ ಹಾಗೂ ಸಿಸಿಪಿಸಿ
ಈವರೆಗಿನ ಎಲೆಕ್ಟ್ರಾನಿಕ್ ವ್ಯವಸ್ಥೆ ಸಿಸಿಪಿಸಿಯ ಸ್ಥೂಲ ಚಿತ್ರಣವನ್ನು ಸ್ಟೇಟ್ ಬ್ಯಾಂಕ್ ಇಂಡಿಯಾದ ಉದಾಹರಣೆಯೊಂದಿಗೆ ನೀಡಬಹುದು. ಈ ಬ್ಯಾಂಕ್‌ನ ಸಿಸಿಪಿಸಿ ಬೆಂಗಳೂರು, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿದೆ. ಎಲೆಕ್ಟ್ರಾನಿಕ್ ಮಾದರಿಯಲ್ಲಿ ಕ್ಲಿಯರಿಂಗ್‌ಗೆ ರವಾನೆಯಾದ ಚೆಕ್‌ಗಳು ಈ ಸಿಸಿಪಿಸಿಗಳಲ್ಲಿ ಹಂಚಿಕೆಯಾಗುತ್ತದೆ. ಸಾಗರದಲ್ಲಿ ಸ್ಥಳೀಯ ಕ್ಲಿಯರಿಂಗ್ ಇದೆ. ಒಂದೊಮ್ಮೆ ಕ್ಲಿಯರಿಂಗ್ ಹೌಸ್‌ನ ಸದಸ್ಯರಲ್ಲದ ಬ್ಯಾಂಕ್‌ನ ಚೆಕ್ ಆನ್‌ಲೈನ್ ನಗದೀಕರಣಕ್ಕೆ ಹೋದರೂ ಅದು ಬೆಂಗಳೂರಿನ ಸಿಸಿಪಿಸಿಗೆ ಹೋದಾಗ ಸಮಸ್ಯೆ ಇಲ್ಲ. ಅಲ್ಲಿ ಕನ್ನಡ ಅರಿತ ಅಧಿಕಾರಿ ನಿಯಮಗಳಿಗನುಸಾರ ಚೆಕ್ ಇದ್ದರೆ ನಗದೀಕರಿಸುತ್ತಾನೆ. ಸದ್ಯದ ಮಟ್ಟಿಗೆ ಸಾಗರ ಭಾಗದಲ್ಲಿ ಕೆನರಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಮೂಲಕ ಸಲ್ಲಿಕೆಯಾದದ್ದು ಆನ್‌ಲೈನ್‌ನಲ್ಲಿ ಚೆನ್ನೈ ಸಿಸಿಪಿಸಿಗೆ ಹೋಗುತ್ತದೆ. ಇಲ್ಲಿಯೇ ಎಡವಟ್ಟಾಗಿದ್ದು!
ಮುಂದಿನ ಎರಡು ಬಿಡಿ ವಿಷಯಗಳು ಮೇಲಿನ ಸಮಸ್ಯೆಯನ್ನು ಹೆಚ್ಚಿಸುವ ಸಂಭಾವ್ಯತೆಯತ್ತ ಬೆಳಕು ಚೆಲ್ಲುತ್ತವೆ. ಕೇಂದ್ರ ಸರ್ಕಾರದ ನಿಲುವು, ಕಾರ್ಯಾಚರಣೆಯ ಅನ್ವಯ ನಗದು ವಹಿವಾಟು ಕಡಿಮೆಯಾಗಬೇಕು. ಸಾಧ್ಯವಾದಷ್ಟೂ ವ್ಯವಹಾರ ನಗದು ರಹಿತವಾಗಿರಬೇಕು. ಎಲೆಕ್ಟ್ರಾನಿಕ್, ಚೆಕ್ ಮಾದರಿಯ ದಾಖಲೆ ಆಧಾರಿತ ವಹಿವಾಟು ನಡೆಯಬೇಕು. ಅದು ಆಕ್ಷೇಪಾರ್ಹವಲ್ಲ. ಇದೇ ಕಾರಣದಿಂದ 20 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಚೆಕ್ ನೀಡುವುದು ಕಡ್ಡಾಯ. ಸಾಗರವನ್ನೇ ಮತ್ತೆ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿನ ಎಪಿಎಂಸಿಯಲ್ಲಿ ಮುಖ್ಯವಾಗಿ ನಡೆಯುವ ಅಡಿಕೆ ವಹಿವಾಟು ಕೃಷಿಕರ ಒಂದೊಂದು ಮಾಲು ಕ್ರಯ ಮೊತ್ತ 20 ಸಾವಿರ ದಾಟಿರುತ್ತದೆ. ಬಹುಪಾಲು ರೈತ ವರ್ಗಕ್ಕೆ ಕನ್ನಡವೇ ನಮ್ಮಮ್ಮ, ಇಂಗ್ಲೀಷ್ ಗುಮ್ಮ. ಈ ನಿಟ್ಟಿನಲ್ಲಿ ಇಲ್ಲಿನ ಕೆಲವು ಅಡಿಕೆ ಮಂಡಿಗಳು ಅವರ ಹೆಸರು, ಮೊತ್ತವನ್ನು ಕನ್ನಡದಲ್ಲಿಯೇ ಬರೆಯುತ್ತಿದ್ದಾರೆ. ಇದರಿಂದ ರೈತರಿಗೆ ಗೊಂದಲ ಆಗುವ ಸಮಸ್ಯೆಗಂತೂ ಪರಿಹಾರ ಸಿಕ್ಕಿದೆ. ನಗದು ರಹಿತ ವ್ಯವಹಾರದ ವಾತಾವರಣವೇ ಸೃಷ್ಟಿಯಾದರೂ ಪ್ರಾದೇಶಿಕ ಭಾಷೆಯನ್ನಷ್ಟೇ ಅರಿತಿರುವ ಸಾಮಾನ್ಯರೇ ಹೆಚ್ಚಿರುವಾಗ ಬಹುಪಾಲು ಚೆಕ್‌ಗಳು ಕನ್ನಡದಲ್ಲಿಯೇ ಬರೆಯಲ್ಪಡುವುದು ನಿರೀಕ್ಷಿತ. ಈ ಹಂತದಲ್ಲಿ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಹೌಸ್ ಅಥವಾ ಸಿಸಿಪಿಸಿಗಳು ಭಾಷೆಯ ಕಾರಣ ಚೆಕ್‌ಗಳನ್ನು ನಗದೀಕರಿಸುವುದಕ್ಕೆ ನಿರಾಕರಿಸಿದರೆ?
ಕನ್ನಡದಲ್ಲಿ ಚೆಕ್; ತಪ್ಪಲ್ಲವೇ ಅಲ್ಲ!
2011-12ರ ಆರ್‌ಬಿಐ ಸುತ್ತೋಲೆ RBI/2011-12/56 DBOD No.Leg.BC.18/09.07.006/2011-12 ರ ಸೆಕ್ಷನ್ 5.7.2 ಪ್ರಕಾರ ಗ್ರಾಹಕ ಚೆಕ್‌ಗಳನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಹೆಸರು, ಮೊತ್ತ ಬಿಡಿ, ಕನ್ನಡದ ಲಿಪಿಯಲ್ಲಿಯೇ ಅಂಕಿಗಳನ್ನು ಬರೆದರೂ ಅದು ಮಾನ್ಯ. ಇಂಥ ಚೆಕ್‌ಗಳನ್ನು ನಿರಾಕರಿಸುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ನಾಳೆ ಎದುರಾಗಬಹುದಾದ ಅಪಾಯಗಳಿಂದ ತಪ್ಪಿಸಿಕೊಳ್ಳಲು ನಾನು ಚೆಕ್ ನೀಡಿದವರನ್ನು ಸಂಪರ್ಕಿಸಿದಾಗ ಸರಿಯಾದ ಉತ್ತರ ಕೊಡಲಿಲ್ಲ. ಸುರಕ್ಷತೆಯ ಕಾರಣ ನಾವು ನಗದೀಕರಣವನ್ನು ನಿರಾಕರಿಸಿದೆವು ಎಂಬ ಪ್ರತಿಪಾದನೆ ಸಾಮಾನ್ಯವಾಗಿ ಈ ತರಹದ ಎಲ್ಲ ಪ್ರಕರಣಗಳಲ್ಲಿ ನೋಡುತ್ತೇವೆ. ಸಾಗರದ ಪ್ರಕರಣದಲ್ಲೂ ಅದು ಮರುಕಳಿಸಿದೆ.
ಚೆಕ್‌ನ್ನು ಪ್ರಾದೇಶಿಕ ಭಾಷೆಯಲ್ಲಿ ಬರೆದಿದ್ದು ಸಮ್ಮತ ಎಂದಾಗ ಮತ್ತು ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತದ್ದು ದಪ್ಪ ಚರ್ಮದ ಬ್ಯಾಂಕ್‌ನ ಕೆನೆಪದರದ ಅಧಿಕಾರಿಗಳು ಪತ್ರಿಕೆಗಳು, ಮಾಧ್ಯಮಗಳು ಬರೆಯುವ ಲೇಖನ, ಸುದ್ದಿಗಳನ್ನು ನೋಡಿ ತಲೆ ಕೆಡಿಸಿಕೊಳ್ಳುವುದು ಇಲ್ಲವೇ ಇಲ್ಲ. ಅದೃಷ್ಟಕ್ಕೆ ಅವರು ಈಗಲೂ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ನಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಮಾತ್ರ ತೀವ್ರ ಎಚ್ಚರಿಕೆ ವಹಿಸುತ್ತಾರೆ. ಇಂತದೊಂದು ಅಭಿಪ್ರಾಯ ಬ್ಯಾಂಕಿಂಗ್ ವಲಯದಲ್ಲಿಯೇ ಇದೆ. ಅದಲ್ಲದೆ, ಒಂಬುಡ್ಸ್‌ಮನ್‌ನಲ್ಲಿ ದಾಖಲಾದ ಪ್ರಕರಣಗಳನ್ನು ಕೂಲಂಕಷವಾಗಿ ಆರ್‌ಬಿಐ ಪರೀಕ್ಷಿಸುತ್ತಿರುತ್ತದೆ. ಇಂತವು ಅದರ ಗಮನಕ್ಕೆ ಬಂದರೆ ಅದು ಆದ್ಯತೆಯ ಮೇಲೆ ಪರಿಹಾರಕ್ಕೆ ಮುಂದಾಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಪರಿಹಾರವೂ ಸುಲಭ ಲಭ್ಯ!
ಇಷ್ಟಕ್ಕೂ ಈ ಸಮಸ್ಯೆಯನ್ನು ತೀರಾ ಸಂಕೀರ್ಣವಾದುದಲ್ಲ. ಗಮನ ಸೆಳೆದ ಸಾಗರದ ಪ್ರಕರಣದಂತೆ ಪ್ರಾದೇಶಿಕ ಭಾಷೆಯಲ್ಲಿ ಬರೆದ ಚೆಕ್ ಒಂದು ಅನ್ಯ ರಾಜ್ಯದ ಸಿಸಿಪಿಸಿಗೆ ಹೋಗುವ ಬದಲು ಅದು ಅದೇ ರಾಜ್ಯದಲ್ಲಿರುವ ಕ್ಲಿಯರಿಂಗ್ ಕೇಂದ್ರಕ್ಕೆ ಹೋಗಬೇಕಿತ್ತು. ಈವರೆಗೆ ಅಂಥ ವ್ಯವಸ್ಥೆ ಇಲ್ಲದಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕಾದ ಜವಾಬ್ದಾರಿ ಬ್ಯಾಂಕ್‌ಗಳದ್ದು. ಮೇಲಿನ ಪ್ರಕರಣದಲ್ಲಿ ಕೂಡ ಚೆನ್ನೈ ಸಿಸಿಪಿಸಿಗೆ ಹೋದ ಚೆಕ್‌ಗಳನ್ನು ಬೆಂಗಳೂರಿನ ಸಿಸಿಪಿಸಿಗೆ ವರ್ಗಾಯಿಸುವ ವ್ಯವಸ್ಥೆ ಮಾಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಕಾನೂನಿನ ಪ್ರಕಾರವೇ ಚೆಕ್ ಇದ್ದರೂ ಪರಿಸ್ಥಿತಿಯನ್ನು ನಿಭಾಯಿ ಆಗುವುದಿಲ್ಲ ಎಂಬುದನ್ನು ಅರಿಯುವ ಬ್ಯಾಂಕ್‌ಗಳ ಅಧಿಕಾರಿಗಳು ಸಮಸ್ಯೆಯನ್ನು ಅದನ್ನು ತಮ್ಮ ಮೇಲಿನವರಿಗೆ ವರದಿ ಮಾಡುವ ಕ್ರಮ ಬಹುತೇಕ ಇಲ್ಲ. ಹಿಂದೆ ಸ್ವತಂತ್ರ ಪೂರ್ವ ಕಾಲದಲ್ಲಿ ಮೇಲಿನ ಬ್ರಿಟಿಷ್ ಅಧಿಕಾರಿಗಳಿಗೆ ಕೆಳಹಂತದ ನೌಕರರು, ಅದರಲ್ಲೂ ಭಾರತೀಯ ನೌಕರರು ತರಗುಟ್ಟುತ್ತಿದ್ದರಂತೆ. ಕೇಳಿಸಿಕೊಳ್ಳುವ ಕಿವಿ, ಯೆಸ್ ಸರ್‌ಗಿಂತ ಹೆಚ್ಚು ಹೇಳುವಂತಿರಲಿಲ್ಲ. ಸ್ವಾತಂತ ÅÂ ಬಂದ ನಂತರವೂ ಈಗಲೂ ಅದೇ ಸ್ಥಿತಿ ಮುಂದುವರೆದಿದೆ!
ಕೊನೆ ಮಾತು: ಡಿಸೆಂಬರ್ ಒಂದರಿಂದ ಭೌತಿಕ ಕ್ಲಿಯರಿಂಗ್ ಹೌಸ್ ಎಂಬ ವ್ಯವಸ್ಥೆಯನ್ನು ಎಲ್ಲ ಬ್ಯಾಂಕ್‌ಗಳು ಸಂಪೂರ್ಣವಾಗಿ ತೆಗೆದುಹಾಕುತ್ತವೆ. ಇದು ಇಡೀ ದೇಶಾದ್ಯಂತ ಜಾರಿಗೆ ಬರುತ್ತದೆ. ಆಗ ಪ್ರಾದೇಶಿಕ ಭಾಷೆಗಳಲ್ಲಿನ ಚೆಕ್‌ಗಳ ನಗದೀಕರಣ ಇನ್ನಷ್ಟು ಅಡೆತಡೆಗಳನ್ನು ಅನುಭವಿಸಬಹುದು. ಈವರೆಗಂತೂ ಬ್ಯಾಂಕ್‌ಗಳಾಗಲಿ, ಆರ್‌ಬಿಐ ಆಗಲಿ ಈ ಸಮಸ್ಯೆಯತ್ತ ದೃಷ್ಟಿ ಹರಿಸಿಲ್ಲ.
– ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.