ಜಿಐ ಲಾಭ ಯಾರಿಗೆ?
Team Udayavani, Dec 11, 2017, 12:26 PM IST
ಮೈಸೂರು ಮಲ್ಲಿಗೆ, ಉಡುಪಿಯ ಮಟ್ಟಗುಳ್ಳ ಬದನೆ, ಕಾಂಚಿಪುರಂ ಸೀರೆ, ಕೂರ್ಗ್ ಕಿತ್ತಳೆ, ಗೋವಾದ ಪೆನ್ನಿ, ಕಾಶ್ಮೀರ ಶಾಲು, ಡಾರ್ಜಲಿಂಗ್ ಟೀ, ತಿರುಪತಿ ಲಡ್ಡು, ಸ್ಕಾಟ್‌ಲ್ಯಾಂಡ್‌ನ ಸ್ಕಾಚ್, ವಿಸ್ಕಿ, ಫ್ರಾನ್ಸ್ ದೇಶದ ಶ್ಯಾಂಪೇಂನ್, ಸ್ವಿಜರ್ಲೆಂಡಿನ ವಾಚ್ ಮತ್ತು ಚಾಕೊಲೇಟ್.. ಹೀಗೆ ಪದಾರ್ಥಗಳ ಪಟ್ಟಿ ಮಾಡುತ್ತ ಹೋದಾಗ, ಸಹಜವಾಗಿಯೇ ಭೌಗೋಳಿಕ ಸ್ಥಳಗಳು ಮತ್ತು ಸ್ಥಳೀಯತೆ ವಸ್ತುಗಳಿಗೆ ಅಂಟಿಕೊಂಡಿರುತ್ತದೆ. ಧಾರವಾಡ ಪೇಡವನ್ನೇ ಇಂದು ವಿಜಯವಾಡದಲ್ಲಿ ತಯಾರಿಸಿ, ವಿಜಯವಾಡ ಪೇಡ ಎಂದು ಮಾರಿದರೆ, ಧಾರವಾಡದ ಸಂಪ್ರದಾಯ ಮತ್ತು ಸಂಸ್ಕೃತಿಯ ಜ್ಞಾನ ಪರಂಪರೆಯನ್ನು ಕಸಿದುಕೊಂಡಂತೆ ಆಗುತ್ತದೆಯಲ್ಲವೇ? ವಿಜಯವಾಡದವರು ಧಾರವಾಡ ಪೇಡವನ್ನೇ ಮಾಡಿ, ಧಾರವಾಡ ಪೇಡವೆಂದೇ ಹೇಳಿ, ಮಾರುವುದು ಕೂಡ ಭೌಗೋಳಿಕವಾಗಿ ಅಂಟಿಕೊಂಡಿರುವ ಸಾಂಸ್ಕೃತಿಕ ಹಕ್ಕನ್ನು ಹತ್ತಿಕ್ಕಿದಂತೆಯೇ. ಧಾರವಾಡದಲ್ಲಿರುವ ಜನ, ಸಮುದಾಯ ಅನೇಕ ವರ್ಷಗಳಿಂದ ತಮ್ಮ ಪಾಕ ಸಂಸ್ಕೃತಿಯಲ್ಲಿ ಕಂಡುಕೊಂಡ ವಿಶೇಷತೆಯನ್ನು ಮತ್ತು ವಿಶಿಷ್ಟತೆಯನ್ನು ಅಲ್ಲಿನ ಜನರಿಗೇ ಬಿಟ್ಟು ಕೊಡುವುದು ಮುಖ್ಯ ಮತ್ತು ಅಲ್ಲಿನ ಜನರೇ ಇದು ನಮ್ಮ “ಭೌಗೋಳಿಕ ಹಕ್ಕು’ ಎಂದು ಸ್ಥಾಪಿಸಲು ಮುಂದಾದರೆ, ಅದು ತಪ್ಪಾಗಲಾರದು. ಇಂಥ ವಿಷಯಗಳಿಗೆ ಮನ್ನಣೆ ಕೊಡಲು ವಿಶ್ವ ವ್ಯಾಪಾರ ಒಡಂಬಡಿಕೆಯಲ್ಲಿ ಹಕ್ಕು ಸ್ಥಾಪಿಸಲು ಕಾನೂನಿನ ಅವಕಾಶ ಮಾಡಿಕೊಡಲಾಗಿದೆ.
ಭಾರತ ದೇಶಕ್ಕೆ ಇದಾಗಲೇ ಸುಮಾರು 303 ಇಂತಹ ಭೌಗೋಳಿಕ ಸೂಚ್ಯಾಂಕದ (geographical indication) ಹಕ್ಕನ್ನು ನೀಡಲಾಗಿದೆ. ಈ ಹಕ್ಕು ಸ್ಥಾಪನೆಯ ಸಂದರ್ಭದಲ್ಲಿ ವ್ಯಾಜ್ಯ, ವಿವಾದ ಉಂಟಾಗುವುದು ಸಹಜವೇ. ಕಾರಣ- ಒಂದು ಪದಾರ್ಥ ಇಂಥ ಸ್ಥಳ ಮತ್ತು ಸಮುದಾಯದ್ದೇ ಎಂದು ನ್ಯಾಯ ಸಮ್ಮತವಾಗಿ ಪ್ರಕಟಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಐತಿಹಾಸಿಕ, ಬರಹ, ಒಕ್ಕಣೆ, ದಾಖಲೆಗಳ ಕೊರತೆಯಿದ್ದು, ಸಮುದಾಯದ ಸಂಸ್ಕೃತಿ ಮತ್ತು ಸಂಸ್ಕಾರಗಳಲ್ಲಿ ಕಂಡುಬಂದು, ಅದೇ ಸಂಸ್ಕೃತಿ ಮತ್ತು ಜಾnನ ಪರಂಪರೆ ಇನ್ನೊಂದು ಸಮುದಾಯದಲ್ಲೂ ಕಂಡುಬಂದಾಗ, ಇದರ ಮೂಲ ಸ್ಥಾಪನೆ ಎಲ್ಲಿಯದು ಎಂದು ಗುರುತಿಸುವುದು ಕಷ್ಟದ ವಿಚಾರವೇ. ಇಂಥ ಸಂದರ್ಭದಲ್ಲಿ “ಬುದ್ಧಿವಂತರು, ಜಾಣರು’ ಕಾನೂನಿನ ಒಳ ಸುಳಿಗಳನ್ನು ತಿಳಿದು, ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುವ ಸಾಧ್ಯತೆ ಇದೆ. ಇದರ ಸಾಧ್ಯತೆ ಹೆಚ್ಚಾಗಿ ಕಂಡುಬರುವುದು, ಸ್ಥಳೀಯ ಸ್ಥಳದ ಹೆಸರು ಪದಾರ್ಥಕ್ಕೆ ಅಂಟಿಕೊಳ್ಳದೇ ಇರುವ ಸಂದರ್ಭದಲ್ಲಿ. ಉದಾಹರಣೆಗೆ - ರಸಗುಲ್ಲ. ರಸಗುಲ್ಲ ಒಂದು ಸಿಹಿತಿಂಡಿ. ಇತ್ತೀಚೆಗೆ, ಬುದ್ಧಿವಂತ ಬಂಗಾಳಿಗಳು ರಸಗುಲ್ಲ ನಮ್ಮದೇ ಎಂದು ಭೌಗೋಳಿಕ ಸೂಚ್ಯಾಂಕವನ್ನು ಪಡೆದು ಅದನ್ನು ಹಂಚಿ ಖುಷಿಪಟ್ಟರು. ಇಲ್ಲಿಯೂ ಸಹ ಜಾಣ್ಮೆಯಿಂದ ಬಂಗಾಳದ ರಸಗುಲ್ಲ ಎಂದು ಹೇಳುವ ಮೂಲಕ ತಮ್ಮ ಹಕ್ಕನ್ನು ಸ್ಥಾಪಿಸಿದ್ದಾರೆ. ಆದರೆ, ಒರಿಸ್ಸಾದ ಜನ ಇದು ಮೂಲತಃ ನಮ್ಮ ಸಂಪ್ರದಾಯ. ನಮ್ಮವರೇ ಬಂಗಾಳದ ಕೊಲ್ಕತ್ತಾದತ್ತ ವಲಸೆ ಹೋಗಿ, ಇಲ್ಲಿಯ ಸಂಪ್ರದಾಯವನ್ನು ಹರಡಿದರು. ನಂತರ ಬಂಗಾಳಿಗಳು ಇದನ್ನು ತಮ್ಮದಾಗಿಸಿಕೊಂಡರು ಎನ್ನುತ್ತಾರೆ.
ಒರಿಸ್ಸಾದ ಜನರ ಪ್ರಕಾರ, ಹನ್ನೆರಡನೆಯ ಶತಮಾನದಿಂದ ಪುರಿಯ ಜಗನ್ನಾಥ ಜಾತ್ರೆಯ ಸಮಯದಲ್ಲಿ, ಅಲ್ಲಿನ ಮಹಾಲಕ್ಷ್ಮೀದೇವಿಗೆ ಹತ್ತಿರದ ಪಹಲ ರಸಗೋಲ ಎಂಬ ಹಳ್ಳಿಯ ಜನರು ಪ್ರತಿವರ್ಷ ಈ ಸಿಹಿತಿಂಡಿಯನ್ನು ಮಾಡಿ ಅರ್ಪಿಸುತ್ತಿದ್ದರು. ಅಲ್ಲದೆ, ಹದಿನಾರನೇ ಶತಮಾನದ ಅಲ್ಲಿನ ದಂಡಿ ರಾಮಾಯಣದಲ್ಲೂ, ಈ ಸಿಹಿತಿಂಡಿಯ ಪ್ರಸ್ತಾವನೆ ಇದೆ ಎನ್ನುವುದು ಒರಿಸ್ಸಾ ಜನರ ಪ್ರತಿಪಾದನೆ. ಈಗ ಈ ಜಗಳ ಸರಿದೂಗಿಸಲು ಒರಿಸ್ಸಾ ಜನರಿಗೆ, ಒರಿಸ್ಸಾ ರಸಗುಲ್ಲ ಎನ್ನುವ ಭೌಗೋಳಿಕ ಚಿಹ್ನೆಯನ್ನು ಕೊಡಬಹುದೆ? ಕೊಟ್ಟರೆ, ಭೌಗೋಳಿಕವಾಗಿ ಯಾರಿಗೂ ಸಲ್ಲದ ತಿನಿಸಾಗಿ, ಭೌಗೋಳಿಕ ಚಿಹ್ನೆಯ ಮೂಲ ಉದ್ದೇಶಕ್ಕೇ ಕೇಡು ಬರಬಹುದು. ಕರ್ನಾಟಕದ ಮಂಗರಸನ ಸೂಪಶಾಸ್ತ್ರ, ಕಲ್ಯಾಣದ ಚಾಲುಕ್ಯ ಚಕ್ರವರ್ತಿಯ ಮಾನಸೋಲ್ಲಾಸದಂಥ ಗ್ರಂಥಗಳು ಕನ್ನಡ ಜನರ ತಿಂಡಿ ತಿನಿಸುಗಳಿಗೆ ಆಕರ ಗ್ರಂಥಗಳಾಗಬಹುದು. ಉದಾಹರಣೆಗೆ, ಇಡ್ಲಿಯ ಪ್ರಸ್ತಾವನೆ ಇಲ್ಲಿ ಕಂಡುಬರುತ್ತದೆ. ಇದೇ ಸಂದರ್ಭದಲ್ಲಿ ಅನೇಕ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು ಜಗತ್ತಿನಾದ್ಯಂತ ಒಂದು ಭೌಗೋಳಿಕ ಪ್ರದೇಶದಿಂದ ಇನ್ನೊಂದು ಭೌಗೋಳಿಕ ಪ್ರದೇಶಕ್ಕೆ ಹರಿದು ಹಂಚಿ ಹೋಗಿವೆ. ಬಿ.ಜಿ.ಎಲ್ ಸ್ವಾಮಿಯವರು ಬರೆದ, “ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’ ಎಂಬ ಪುಸ್ತಕದಲ್ಲಿ ನಾವು ಇಂದು ನಮ್ಮದೇ ಎಂದು ಬಳಸುವ ಮೆಣಸಿನಕಾಯಿ, ಆಲೂಗೆಡ್ಡೆ, ಮೆಕ್ಕೆಜೋಳ, ಶೇಂಗಾ ಹೀಗೆ ಹತ್ತು ಹಲವು ಪದಾರ್ಥಗಳು ದಕ್ಷಿಣ ಅಮೇರಿಕಾದಿಂದ ಬಂದವುಗಳಾಗಿವೆ ಎಂಬ ವಿವರವಿದೆ ! ರಾಗಿ ಕೂಡಾ ಇಥಿಯೋಪಿಯಾದಿಂದ ಬಂದದ್ದಾಗಿದೆ!
ಅದಕ್ಕೂ ಮೀರಿ ಹೇಳುವುದಾದರೆ, ನಾವೆಲ್ಲರೂ ಬಂದದ್ದೇ ಆಫ್ರಿಕಾದಿಂದ. ಭಾರತದ ಕರಿ, ಬ್ರಿಟಿಷ್ ಸಾಮ್ರಾಜ್ಯದ ಜನರ ಮನಸ್ಸನ್ನು ಗೆದ್ದು, ಅಲ್ಲಿನ ‘ರಾಷ್ಟ್ರೀಯ ತಿಂಡಿ’ಯ ಬಿರುದು ಪಡೆದುಕೊಂಡಿದೆ. ತಮಿಳರ ಮೊಳಗು ತಣ್ಣಿ ಎನ್ನುವ ರಸಂ ಇಂಗ್ಲೆಂಡಿಗೆ ಹೋಗಿ, ಮೊಳಗುಟ್ಟಾನಿಯಾಗಿ ಈಗ ಇಂಗ್ಲೆಂಡಿನ ನಿತ್ಯ ಆಹಾರವಾಗಿ ಜನಪ್ರಿಯವಾಗಿದೆ. ಕೆಲವರ ಪ್ರಕಾರ ಇಡ್ಲಿ ಕೂಡ ಇಂಡೋನೇಷ್ಯಾದಿಂದ ಬಂದದ್ದಂತೆ.
ಇದು ಹೇಗೆ?
ಯೂರೋಪಿಯನ್ನರು, ಸ್ಕಾಟ್‌ಲ್ಯಾಂಡಿನ ಸ್ಕಾಚ್ ವಿಸ್ಕಿ, ಸ್ವಿಜ್ಜರ್ಲೆಂಡಿನ ಚಾಕೊಲೇಟ್, ಫ್ರಾನ್ಸ್ ದೇಶದ ಶ್ಯಾಂಪೇನ್‌ಗಳ ಮೇಲೆ ಹಕ್ಕು ಸ್ಥಾಪಿಸಿ, ಬೇರೆ ಯಾರೂ ಆ ಪದಾರ್ಥವನ್ನು ತಯಾರಿಸದಂತೆ ನೋಡಿಕೊಳ್ಳಲೆಂದೇ ಈ ಭೌಗೋಳಿಕ ಸೂಚ್ಯಾಂಕ ಬೌದ್ಧಿಕ ಹಕ್ಕನ್ನು ಸ್ಥಾಪಿಸಿದರು. ಹಾಗಾಗಿ ವಿಶ್ವ ವ್ಯಾಪಾರ ಒಡಂಬಡಿಕೆಯ ಟ್ರಿಪ್ಸ್ (TRIPS- Trade Related Intellectual Property Rights) ನಲ್ಲಿ ಅವರ ಪದಾರ್ಥಗಳಿಗೆ ಹೆಚ್ಚಿನ ಒತ್ತು ಕೊಟ್ಟು, ಅವುಗಳನ್ನು ಉಲ್ಲಂ ಸಿದಲ್ಲಿ ತೀವ್ರ ವಿಷಯವೆಂದು ಪರಿಗಣಿಸಲಾಗಿದೆ. ಹೀಗಾಗಿ, ಭಾರತದ ಸ್ಕಾಚ್, ವಿಸ್ಕಿಯನ್ನು ಹೊರದೇಶಕ್ಕೆ ಕಳುಹಿಸುವಂತಿಲ್ಲ. ಇಲ್ಲಿಯ ವಿಸ್ಕಿ ತಯಾರಿಸುವ ಕಂಪನಿಯ ಮೇಲೆ ಸ್ಕಾಟ್‌ಲ್ಯಾಂಡ್‌ನ ಕಂಪನಿಗಳು ದಾವೆ ಹೂಡಿ, ಗೆದ್ದಿದ್ದಾರೆ. ಅವರ ಪರವಾನಿಗೆ ಪಡೆದು, ಅಲ್ಲಿಂದಲೇ ಮೂಲ ಸಾಮಗ್ರಿಯನ್ನು ತರಿಸಿ, ಸ್ಕಾಚ್,ವಿಸ್ಕಿ ತಯಾರಿಸಬಹುದಾಗಿದೆ. ಈ ವಾದದಲ್ಲಿ ಇಂಗ್ಲೆಂಡ್ ಭಾರತದಲ್ಲಿ ಉತ್ಪಾದಿಸುವ ಪದಾರ್ಥಗಳ ಮೇಲೆಯೂ ಪೊಳ್ಳು ಆಪಾದನೆಯನ್ನೂ ಮಾಡಿ, ಆಮದು ಮಾಡಿಕೊಳ್ಳಲು ನಿರಾಕರಿಸಿದ್ದುಂಟು. ವಿಶ್ವ ವ್ಯಾಪಾರ ಒಡಂಬಡಿಕೆಯಲ್ಲಿ ಎಮ್ಮೆ ಹಾಲನ್ನು ಮೊದಲಿಗೆ ಹಾಲು ಎಂದು ಪರಿಗಣಿಸಿರಲಿಲ್ಲ. ಜಗತ್ತಿನಲ್ಲಿ ಅತಿಹೆಚ್ಚು ಎಮ್ಮೆ ಹಾಲು ಉತ್ಪಾದಿಸುವ ದೇಶ ನಮ್ಮದು. ಅಲ್ಲಿ ಹೋರಾಟ ಮಾಡಿ, ಇದೂ ಕೂಡಾ ಹಾಲೇ ಎಂದು ಸಾಧಿಸಬೇಕಾಯಿತು. ಭೌತಿಕ ಚಿಹ್ನೆಯ ವಿಷಯವಾಗಿ ಯಾವುದೇ ಒಂದು ಕಂಪನಿ, ವ್ಯಕ್ತಿ ಅಥವಾ ಸರ್ಕಾರವು ಹಕ್ಕು ಸ್ಥಾಪನೆಗೆ ಮುಂದಾಗುವಂತಿಲ್ಲ. ವ್ಯಾಪಾರಸ್ಥರ ಸಂಘ, ಸಮುದಾಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಇದರ ಹಕ್ಕು ಸ್ಥಾಪನೆಗೆ ಅವಕಾಶವಿರುವುದು. ಕಂಪನಿಗಳು ಅಥವಾ ವ್ಯಾಪಾರ ಸಂಸ್ಥೆಗಳು ತಮ್ಮ ಸಾಂಸ್ಥಿಕ ಆವಿಷ್ಕಾರವನ್ನು, ತಂತ್ರಜಾnನದ ಹೊಸ ಅನ್ವೇಷಣೆಯನ್ನು ಬೌದ್ಧಿಕ ಹಕ್ಕಿನ ಮೂಲಕ ಕಾಪಾಡಿಕೊಳ್ಳಲು ಬೇರೆಯೇ ದಾರಿಗಳಿವೆ. ಉದಾಹರಣೆಗೆ, ನೀವು ತಯಾರಿಸಿದ ಪದಾರ್ಥದ ಹೆಸರನ್ನು ಬೇರೆಯವರು ಅನುಕರಿಸದಂತೆ ನೋಡಿಕೊಳ್ಳಲು ಟ್ರೇಡ್‌ಮಾರ್ಕ್ ನೋಂದಣಿ ಇದೆ. ನೀವೇ ಕಂಡುಹಿಡಿದ ಆವಿಷ್ಕಾರವಾದರೆ, ಅದು ಹಿಂದೆ ಸಮುದಾಯದಲ್ಲಿ ಇಲ್ಲದ್ದಾಗಿದ್ದು, ಹೊರನೋಟಕ್ಕೇ ಹೊಸತಲ್ಲವೆಂದು ತೋರದೇ ಇದ್ದು, ನವನವೀನವಾಗಿದ್ದಲ್ಲಿ, ಆಗ ಮಾತ್ರ ಪೇಟೆಂಟ್ ಹಕ್ಕನ್ನು ಪಡೆಯಬಹುದು.
ಲಾಭ ಯಾರಿಗೆ?
ಜಿಐ ಸಿಕ್ಕ ನಂತರ ಅದರ ಬೆಲೆ ಏರುತ್ತದೆ. ಬ್ರಾಂಡ್ ಆಗುತ್ತದೆ. ಬೇರೆ ಬೇರೆ ಕಡೆಗಳಿಂದ ಹೆಚ್ಚೆಚ್ಚು ಆರ್ಡರ್‌ಗಳು ಬರುತ್ತವೆ. ಉದಾಹರಣೆಗೆ, ತಿರುಪ್ಪೂರಿನ ಬನಿಯನ್, ಕಾಂಚಿಪುರಂನ ಸೀರೆ ಅಲ್ಲಿನದ್ದೇ ಆಗಿರಬೇಕು. ಅದನ್ನು ಮಂಡ್ಯದಲ್ಲಿ ನೇಯ್ದು ತಂದರೆ ಬೆಲೆ ಇರೋಲ್ಲ. ಜನ ಕೂಡ ಬ್ರಾಂಡೆಡ್ ಕೇಳುತ್ತಾರೆ. ಹೀಗೆ, ನಮ್ಮ ವಸ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಬರುತ್ತದೆ. ಹಾಗೆಯೇ ಬಾಸುಮತಿ ಅಕ್ಕಿಯನ್ನು ಹರಿಯಾಣ, ಪಂಜಾಬ್‌ನಲ್ಲೇ ಬೆಳೀಬೇಕು. ನಮ್ಮ ರಾಯಚೂರಲ್ಲಿ ಬೆಳೆದರೆ ಅದಕ್ಕೆ ಬೆಲೆ ಇರೋಲ್ಲ. ಬೆಲೆ ಸಿಗೋಲ್ಲ.
ಭೌಗೋಳಿಕ ಚಿಹ್ನೆಯ ಹಕ್ಕಿಗೆ ವಸ್ತುವಿನ ಗುಣ, ಶಿಷ್ಟತೆ ಸ್ಥಾಪಿಸುವಂತಿರಬೇಕು. ಉದಾಹರಣೆಗೆ ಬಾಬಾ ಬುಡನ್‌ಗಿರಿ ಬೆಟ್ಟದ ಕಾಫಿ ಎಂದು ಹೇಳಿದಲ್ಲಿ, ಆ ಎತ್ತರದ ಬೆಟ್ಟದಲ್ಲಿ ಬೆಳೆದ ಕಾಫಿಯಲ್ಲಿ ಕೆಫಿನ್ ಅಂಶ ಸ್ವಲ್ಪ ಕಮ್ಮಿ ಇರತಕ್ಕದ್ದು. ಅದರದ್ದೇ ಆದ ಒಂದು ವಿಶಿಷ್ಟ ರುಚಿ ಇರುವಂತದ್ದು. ಇಂತಹ ಗುಣ ವೈಶಿಷ್ಟ್ಯವನ್ನು ಭೌತಿಕವಾಗಿ, ರಾಸಾಯನಿಕವಾಗಿ ಮತ್ತು ರಸರುಚಿಯ ನಕ್ಷೆಯಲ್ಲಿ ಕಾಣುವಂತಾಗಿರಬೇಕು.
ಅನೇಕ ಬಾರಿ, ಉದ್ದೇಶಗಳು ಒಳ್ಳೆಯದೇ ಆಗಿದ್ದರೂ, ಅದು ಕಾನೂನಿನ ಚೌಕಟ್ಟಿಗೆ ಬಂದಾಗ ಅಲ್ಲಿ ನಡೆಯುವ ಹಗ್ಗಜಗ್ಗಾಟ, ಹಣಬಲ ಪ್ರದರ್ಶನ, ತಂತ್ರಗಾರಿಕೆಯಿಂದ ಅನ್ಯಾಯಗಳೂ ಆಗಬಹುದು. ಆದರೆ, ಇವುಗಳಿಂದ ಬಿಡಿಸಿಕೊಂಡು ಹೊರಗೇ ಉಳಿಯುತ್ತೇವೆ ಎನ್ನುವುದು ಇಂದಿನ ಜಾಗತಿಕ ಹಳ್ಳಿಯಲ್ಲಿ ಕಷ್ಟದ ಕೆಲಸವೇ.
ಭಾರತ ದೇಶಕ್ಕೆ ಇದಾಗಲೇ ಸುಮಾರು 303 ಇಂತಹ ಭೌಗೋಳಿಕ ಸೂಚ್ಯಾಂಕದ ಹಕ್ಕನ್ನು ನೀಡಲಾಗಿದೆ. ಈ ಹಕ್ಕು ಸ್ಥಾಪನೆಯ ಸಂದರ್ಭದಲ್ಲಿ ವ್ಯಾಜ್ಯ, ವಿವಾದ ಉಂಟಾಗುವುದು ಸಹಜವೇ. ಕಾರಣ- ಒಂದು ಪದಾರ್ಥ ಇಂಥ ಸ್ಥಳ ಮತ್ತು ಸಮುದಾಯದ್ದೇ ಎಂದು ನ್ಯಾಯ ಸಮ್ಮತವಾಗಿ ಪ್ರಕಟಿಸುವುದು ಸುಲಭದ ಕೆಲಸವಲ್ಲ. ಇಂಥ ಸಂದರ್ಭದಲ್ಲಿ ‘ಬುದ್ಧಿವಂತರು, ಜಾಣರು’ ಕಾನೂನಿನ ಒಳ ಸುಳಿಗಳನ್ನು ತಿಳಿದು, ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುವ ಸಾಧ್ಯತೆ ಇದೆ.
ಡಾ. ಕೆ.ಸಿ ರಘು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.