ವಿಕಿಪೀಡಿಯ ಚಂದಾ! ಉಚಿತ ತಾಣದ ಖರ್ಚು ವೆಚ್ಚ


Team Udayavani, Feb 24, 2020, 6:01 AM IST

Wikipedia

ಯಾವುದೇ ವಿಷಯದ ಕುರಿತು ತಿಳಿದುಕೊಳ್ಳಬೇಕೆಂದರೂ ಸರ್ಚ್‌ ಎಂಜಿನ್‌ನಲ್ಲಿ ಧುತ್ತನೆ ಮೊದಲು ಕಾಣಿಸಿಕೊಳ್ಳುವ ಪೇಜು ವಿಕಿಪೀಡಿಯಾದ್ದು. ಅಲ್ಲಿನ ಮಾಹಿತಿ ವಿಶ್ವಾಸಾರ್ಹ ಎನ್ನುವುದು ಅದರ ಹೆಗ್ಗಳಿಕೆ. ಪ್ರಪಂಚದ ಟಾಪ್‌ 10 ಜನಪ್ರಿಯ ಜಾಲತಾಣಗಳ ಪಟ್ಟಿಯಲ್ಲಿ ವಿಕಿಪೀಡಿಯಾ ಇದೆ. ಲಾಭರಹಿತ ಸಂಸ್ಥೆಯಾಗಿರುವ ವಿಕಿಪೀಡಿಯಾ, ಇತ್ತೀಚಿಗೆ ಭಾರತೀಯ ಬಳಕೆದಾರರಿಂದ ಹಣಸಹಾಯ ಕೇಳಿತ್ತು. ನಮಗೆಲ್ಲರಿಗೂ ಉಚಿತವಾಗಿ ಮಾಹಿತಿ ಹಂಚುವ ಕೆಲಸದಲ್ಲಿ ತೊಡಗಿರುವ ವಿಕಿಪೀಡಿಯಾ ಹೇಗೆ ಕಾರ್ಯಾಚರಿಸುತ್ತದೆ, ಅದಕ್ಕೆ ತಗುಲುವ ಖರ್ಚುಗಳು ಏನೇನು ಎಂಬಿತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ…

ವಿವಿಧ ವಿಷಯಗಳ ಬಗ್ಗೆ ಪ್ರಪಂಚದ ಹಲವಾರು ಭಾಷೆಗಳಲ್ಲಿ ಮಾಹಿತಿ ನೀಡುವ ವಿಕಿಪೀಡಿಯ, ತನ್ನನ್ನು ಒಂದು ಸ್ವತಂತ್ರ (“ಫ್ರೀ’) ವಿಶ್ವಕೋಶವೆಂದು ಕರೆದುಕೊಳ್ಳುತ್ತದೆ. ಹಿಂದಿನ ಕಾಲದ ಮುದ್ರಿತ ವಿಶ್ವಕೋಶಗಳಿಗೂ ವಿಕಿಪೀಡಿಯಕ್ಕೂ ಇರುವ ವ್ಯತ್ಯಾಸವೇ ಅದು. ವಿಕಿಪೀಡಿಯ ಮುದ್ರಿತ ರೂಪದಲ್ಲಿಲ್ಲ ಮತ್ತು ಇದನ್ನು ಬಳಸಲು ಹಣ ಕೊಡಬೇಕಿಲ್ಲ ಎನ್ನುವುದು ಈ ವ್ಯತ್ಯಾಸದ ಒಂದು ಮುಖ. ಅದಕ್ಕೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು- ಇರುವ ಮಾಹಿತಿಯನ್ನು ತಿದ್ದಬಹುದು ಎನ್ನುವುದು ಇನ್ನೊಂದು ಪ್ರಮುಖ ಅಂಶ.

ವಿಕಿಮೀಡಿಯ ಫೌಂಡೇಶನ್‌ ಎಂಬ ಸ್ವಯಂಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಈ ತಾಣವನ್ನು ರೂಪಿಸಿದವರು ಅಮೆರಿಕಾದ ಜಿಮ್ಮಿ ವೇಲ್ಸ… ಹಾಗೂ ಲ್ಯಾರಿ ಸ್ಯಾಂಗರ್‌. ಈ ತಾಣ ಪ್ರಾರಂಭವಾಗಿದ್ದು 2001ರ ಜನವರಿ 15ರಂದು. ಮೊದಲಿಗೆ ಇಂಗ್ಲಿಷ್‌ ಭಾಷೆಯಲ್ಲಿ (en.wikipedia.org) ಮಾತ್ರವೇ ಮಾಹಿತಿ ನೀಡುತ್ತಿದ್ದ ವಿಕಿಪೀಡಿಯ ಇದೀಗ ಕನ್ನಡ (kn.wikipedia.org), ತುಳು (tcy.wikipedia.org) ಸೇರಿದಂತೆ ಪ್ರಪಂಚದ 300ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಫೆಬ್ರವರಿ 2020ರ ಅಂಕಿಅಂಶಗಳ ಪ್ರಕಾರ, ಇಂಗ್ಲಿಷ್‌ ವಿಕಿಪೀಡಿಯ ಒಂದರಲ್ಲೇ 60 ಲಕ್ಷಕ್ಕೂ ಹೆಚ್ಚು ಬರಹಗಳಿವೆಯಂತೆ!

ವಿಕಿಪೀಡಿಯಕ್ಕೆ ನಾವೂ ಮಾಹಿತಿ ಸೇರಿಸಬಹುದೇ?
ಯಾರು ಬೇಕಾದರೂ ತಮ್ಮ ಆಸಕ್ತಿಯ ವಿಷಯಗಳ ಕುರಿತು ಮಾಹಿತಿ ಸೇರಿಸಲು ಅನುವುಮಾಡಿಕೊಡುವುದು ವಿಕಿಪೀಡಿಯದ ವೈಶಿಷ್ಟ್ಯ. ತಮ್ಮ ಇಷ್ಟದ ವಿಷಯದ ಕುರಿತು ತಮ್ಮ ಆಯ್ಕೆಯ ಭಾಷೆಯಲ್ಲಿ ಮಾಹಿತಿ ಸೇರಿಸಲು ಹೊರಡುವವರಿಗೆ ಬೇಕಾದ ಸಹಾಯ ಮತ್ತು ಮಾರ್ಗದರ್ಶನವೂ ವಿಕಿಪೀಡಿಯದಲ್ಲೇ ದೊರಕುತ್ತದೆ. ಹೊಸ ವಿಷಯಗಳ ಬಗ್ಗೆ ಮಾಹಿತಿ ಸೇರಿಸುವುದಷ್ಟೇ ಅಲ್ಲ, ಯಾವುದಾದರೂ ಬರಹದಲ್ಲಿ ಇರುವ ಮಾಹಿತಿ ತಪ್ಪು ಅಥವಾ ಅಪೂರ್ಣ ಎನಿಸಿದರೆ ಅದನ್ನು ನಾವೇ ಸರಿಪಡಿಸುವುದು ಕೂಡ ಸಾಧ್ಯ. ಪೂರಕ ಚಿತ್ರ ಅಥವಾ ಬೇರೆ ಜಾಲತಾಣಗಳ ಕೊಂಡಿಗಳನ್ನೂ ನಾವೇ ಸೇರಿಸಬಹುದು.
ಹಾಗೆಂದು ನಮಗೆ ತೋಚಿದ್ದನ್ನೆಲ್ಲ ವಿಕಿಪೀಡಿಯಕ್ಕೆ ಸೇರಿಸುವಂತಿಲ್ಲ. ಇಲ್ಲಿ ವಿಶ್ವಕೋಶ ಮಾದರಿಯ ಲೇಖನಗಳನ್ನಷ್ಟೇ ಸೇರಿಸುವುದು ಅಪೇಕ್ಷಣೀಯ. ಕತೆ, ಕವನ ಹಾಗೂ ವೈಯಕ್ತಿಕ ಅಭಿಪ್ರಾಯಗಳಿಗೆ ವಿಕಿಪೀಡಿಯದಲ್ಲಿ ಜಾಗವಿಲ್ಲ. ಬೇರೆಯವರು ಬರೆದದ್ದನ್ನು ಅವರ ಅನುಮತಿಯಿಲ್ಲದೆ ಸೇರಿಸುವುದೂ ತಪ್ಪು. ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವುದು ಸಮುದಾಯದ ಕೆಲಸವೆಂದು ಪರಿಗಣಿಸಲಾಗಿರುವುದರಿಂದ, ಲೇಖನಗಳಿಗೆ ಬೈಲೈನ್‌ ಆಗಲೀ ಸಂಭಾವನೆಯಾಗಲೀ ದೊರಕುವುದಿಲ್ಲ. ಎಲ್ಲ ಲೇಖಕರೂ ಹೀಗೆ ಉಚಿತವಾಗಿ ಕೆಲಸಮಾಡುವುದರಿಂದಲೇ ವಿಕಿಪೀಡಿಯ ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

ಹೇಗೆ ಕೆಲಸ ಮಾಡುತ್ತೆ?
ಲೇಖಕರಿಗೆ ಸಂಭಾವನೆ ಇಲ್ಲ ಎನ್ನುವುದೇನೋ ಸರಿ, ಆದರೆ ಇಷ್ಟೆಲ್ಲ ಅಗಾಧವಾದ ಮಾಹಿತಿಯ ಸಂಗ್ರಹವನ್ನು ನಿಭಾಯಿಸಲು ಸಾಕಷ್ಟು ಹಣ ವೆಚ್ಚವಾಗುತ್ತದೆ. ಅಗತ್ಯವಾದ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ನಿರ್ವಹಿಸುವುದು, ಸಮುದಾಯದಲ್ಲಿ ಸಕ್ರಿಯರಾಗಿರುವವರಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು, ಒಟ್ಟಾರೆಯಾಗಿ ಎಲ್ಲ ಕೆಲಸಗಳನ್ನು ನಿಭಾಯಿಸುವುದು- ಎಲ್ಲದಕ್ಕೂ ಹಣ ಬೇಕು. ಇತರ ತಾಣಗಳಂತೆ ಜಾಹೀರಾತುಗಳನ್ನು ಪ್ರದರ್ಶಿಸದ, ಮಾಹಿತಿ ನೀಡಲು ಯಾವುದೇ ಶುಲ್ಕ ಪಡೆಯದ ವಿಕಿಪೀಡಿಯ ಇದೆಲ್ಲದಕ್ಕೂ ಸಮುದಾಯದ ನೆರವನ್ನೇ ಅವಲಂಬಿಸಿದೆ.
ವಿಕಿಪೀಡಿಯ ಆಗಿಂದಾಗ್ಗೆ ನಡೆಸುವ ಕೊಡುಗೆ ಸಂಗ್ರಹ ಅಭಿಯಾನದ ಪ್ರಕಟಣೆಗಳನ್ನು ನೀವು ನೋಡಿರಬಹುದು. ಇಂತಹ ಅಭಿಯಾನಗಳಲ್ಲಿ ಸಂಗ್ರಹವಾದ ಹಣವನ್ನು ಬಳಸಿಕೊಂಡು ವಿಕಿಪೀಡಿಯ ಪ್ರಪಂಚದೆಲ್ಲೆಡೆ ತನ್ನ ಚಟುವಟಿಕೆಗಳನ್ನು ನಡೆಸುತ್ತದೆ. ಅಂಚೆಯಲ್ಲಿ ಚೆಕ್‌ ಕಳಿಸುವುದರಿಂದ ಪ್ರಾರಂಭಿಸಿ, ಬಿಟ್‌ಕಾಯಿನ್‌ವರೆಗೆ ಲಭ್ಯವಿರುವ ಅನೇಕ ಮಾರ್ಗಗಳನ್ನು ಬಳಸಿ ನಾವು ವಿಕಿಪೀಡಿಯಕ್ಕೆ ನಮ್ಮ ಕೊಡುಗೆಯನ್ನು ನೀಡಬಹುದು. ಹಣ ನೀಡಲು ಸಾಧ್ಯವಿಲ್ಲದವರು ಮಾಹಿತಿ ಸೇರಿಸುವ, ಇರುವ ಮಾಹಿತಿಯನ್ನು ಉತ್ತಮಪಡಿಸುವ ಮೂಲಕವೂ ನೆರವಾಗಬಹುದು.

ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ
ವಿಕಿಪೀಡಿಯಾ ಚಟುವಟಿಕೆಗಳ ಕುರಿತು ಆಸಕ್ತಿ ಇರುವವರಿಗೆ, ಮಾತ್ರವಲ್ಲದೆ ವಿಕಿ ಸಮುದಾಯದಲ್ಲಿ ಈಗಾಗಲೇ ಸಕ್ರಿಯರಾಗಿರುವವರಿಗೆ ಕೂಡ ವಿಕಿಪೀಡಿಯ ವತಿಯಿಂದ ಆಗಿಂದಾಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ. ಇಂಥ ಕಾರ್ಯಕ್ರಮಗಳ ವಿವರಗಳೂ ವಿಕಿಪೀಡಿಯದಲ್ಲೇ ಪ್ರಕಟವಾಗುತ್ತವೆ (ಉದಾ: ಕನ್ನಡ ವಿಕಿಪೀಡಿಯದಲ್ಲಿ “ಅರಳಿ ಕಟ್ಟೆ’ ಕೊಂಡಿ). ವಿಕಿಪೀಡಿಯದ ಮಾತೃಸಂಸ್ಥೆ ವಿಕಿಮೀಡಿಯ ಫೌಂಡೇಶನ್‌ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ವಿಕ್ಷನರಿ (ನಿಘಂಟು), ವಿಕಿಕೋಟ್‌ (ಹೇಳಿಕೆ ಅಥವಾ ಉದ್ಧರಣಗಳು), ವಿಕಿಸೋರ್ಸ್‌ (ಗ್ರಂಥಾಲಯ) ಮುಂತಾದ ತಾಣಗಳಿಗೂ ನಾವು ನೆರವು ನೀಡಬಹುದು.

ಸೆಂಟರ್‌ ಫಾರ್‌ ಇಂಟರ್ನೆಟ್‌ ಆಂಡ್‌ ಸೊಸೈಟಿ (ಸಿಐಎಸ್‌) ಸಂಸ್ಥೆ, ವಿಕಿಮೀಡಿಯ ಫೌಂಡೇಶನ್‌ ಸಹಯೋಗದಲ್ಲಿ ಭಾರತದ ಹಲವು ವಿಕಿ ಸಮುದಾಯಗಳನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ. ವಿದ್ಯಾಸಂಸ್ಥೆಗಳೊಡನೆ ಸಹಭಾಗಿತ್ವ, ವಿಕಿಪೀಡಿಯಾಗೆ ಲೇಖನ ಸೇರಿಸುವ ಕಾರ್ಯಕ್ರಮಗಳು (ಎಡಿಟಥಾನ್‌) ಹಾಗೂ ತರಬೇತಿಯ ಆಯೋಜನೆಯಂಥ ಚಟುವಟಿಕೆಗಳಲ್ಲಿ ಈ ಸಂಸ್ಥೆ ಸಕ್ರಿಯವಾಗಿದೆ.

ಅದರ ಬಳಿ ಎಷ್ಟು ಹಣವಿದೆ?
ನಮ್ಮ ನಿಮ್ಮಂಥ ಸಾಮಾನ್ಯ ಬಳಕೆದಾರರಿಂದ ಹಿಡಿದು ಬೃಹತ್‌ ವಾಣಿಜ್ಯ ಸಂಸ್ಥೆಗಳು, ಶ್ರೀಮಂತರು ಹೆಚ್ಚಿನ ಸಂಖ್ಯೆಯಲ್ಲಿ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡುತ್ತಾರೆ. 2018- 19ನೇ ಸಾಲಿನಲ್ಲಿ ಸಂಸ್ಥೆ ಸುಮಾರು 792 ಕೋಟಿ ರೂ.ಗಳಷ್ಟು ದೇಣಿಗೆ ಸಂಗ್ರಹಿಸಿತ್ತು. ಅದೇ ವರ್ಷ ಸಂಸ್ಥೆಯ ಕಾರ್ಯಾಚರಣೆಗೆ ತಗುಲಿದ ವೆಚ್ಚ ಸುಮಾರು 658 ಕೋಟಿರೂ. ಈ ಪೈಕಿ ವೇತನ, ಪ್ರಯಾಣ, ಕಾರ್ಯಕ್ರಮಗಳ ಆಯೋಜನೆಯಂಥ ಉದ್ದೇಶಗಳಿಗೆ ವೆಚ್ಚವಾದ ಹಣದ್ದೇ ದೊಡ್ಡ ಪಾಲು. ದೇಣಿಗೆ ಸಂಗ್ರಹ ಕಾರ್ಯಕ್ರಮದ ಆಯೋಜನೆ ಹಾಗೂ ದೇಣಿಗೆ ನಿರ್ವಹಣೆಗೆಂದು (ಫ‌ಂಡ್‌-ರೈಸಿಂಗ್‌) ಖರ್ಚಾದ ಮೊತ್ತ ಸುಮಾರು 71 ಕೋಟಿ ರೂ.ಗಳಿಗೂ ಹೆಚ್ಚು.

ಅಂದಹಾಗೆ, ಈ ವೆಚ್ಚಗಳು ವಿಕಿಮೀಡಿಯ ಫೌಂಡೇಶನ್‌ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಯೋಜನೆಗಳನ್ನೂ ಒಳಗೊಂಡಿವೆ. ಅಮೆರಿಕಾ ಸರಕಾರದಿಂದ ಆದಾಯ ತೆರಿಗೆ ವಿನಾಯಿತಿ ಪಡೆದಿರುವ ವಿಕಿಮೀಡಿಯ ಫೌಂಡೇಶನ್‌, ಹಣಕಾಸು ವಹಿವಾಟಿನ ವಿವರಗಳನ್ನು ಮುಕ್ತವಾಗಿ ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತದೆ. ಆ ಮೂಲಕ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಅದರದ್ದು. ತನ್ನೆಲ್ಲಾ ಹಣಕಾಸು ಮಾಹಿತಿಯನ್ನು bit.ly/38HruTf ತಾಣದಲ್ಲಿ ಪ್ರಕಟಿಸುತ್ತದೆ. ಸಂಸ್ಥೆಯ ಆದಾಯ ಹಾಗೂ ವೆಚ್ಚದ ವಿವರಗಳ ಕುರಿತು ನಮ್ಮಲ್ಲಿ ಇರಬಹುದಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನೂ ಆ ತಾಣದಲ್ಲಿ ನೋಡಬಹುದು.

“ವಿಕಿ’ ಎಂದರೇನು?
ವಿಕಿ ಎಂಬ ಶಬ್ದ ಹವಾಯಿ ಭಾಷೆಯದ್ದು. ಆ ಭಾಷೆಯಲ್ಲಿ “ವಿಕಿ ವಿಕಿ’ ಎಂದರೆ “ಬಹಳ ಚುರುಕಾದ’ ಎಂಬ ಅರ್ಥ ಇದೆ. ಸಮುದಾಯದ ನೆರವಿನಿಂದ ರೂಪಿಸಲಾದ, ಮಾಹಿತಿ ಸೇರಿಸುವ ಅಥವಾ ಬದಲಿಸುವ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡುವ ಜಾಲತಾಣಗಳನ್ನು “ವಿಕಿ’ಗಳೆಂದು ಕರೆಯುತ್ತಾರೆ. ಈ ಶಬ್ದಕ್ಕೆ ಎನ್‌ಸೈಕ್ಲೋಪೀಡಿಯ (ವಿಶ್ವಕೋಶ) ಎಂಬ ಇಂಗ್ಲಿಷ್‌ ಪದವನ್ನು ಸೇರಿಸಿ ವಿಕಿಪೀಡಿಯದ ಹೆಸರನ್ನು ರೂಪಿಸಲಾಗಿದೆ.

ಹಣ ಸಹಾಯ ಕೇಳುವುದು ಏತಕ್ಕೆ?
ಸಂಸ್ಥೆ ಜಾಲತಾಣದಲ್ಲಿ ಬರೆಯುವವರಿಗೆ, ಮಾಹಿತಿ ಒದಗಿಸುವವರಿಗೆ, ಎಡಿಟ್‌ ಮಾಡುವವರಿಗೆ ದುಡ್ಡು ಕೊಡುವ ಪರಿಪಾಠವಿಲ್ಲ. ಆದರೆ ಕಾರ್ಯಕ್ರಮಗಳ ಆಯೋಜನೆ, ದತ್ತಾಂಶ ಸಂಗ್ರಹಿಸುವ ಸರ್ವರ್‌ಗಳ ನಿರ್ವಹಣೆ, ದೇಣಿಗೆ ಸಂಗ್ರಹ ಕಾರ್ಯಕ್ರಮ ಮುಂತಾದ ಆಡಳಿತಾತ್ಮಕ ಕಾರ್ಯಗಳಿಗೆ ಹಣ ವೆಚ್ಚವಾಗುತ್ತದೆ. ವಿಕಿಪೀಡಿಯಾವನ್ನು ನಿರ್ವಹಿಸುವುದು ಅದರ ಮಾಲೀಕ ಸಂಸ್ಥೆ ವಿಕಿಮೀಡಿಯ ಫೌಂಡೇಶನ್‌ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಜೂನ್‌ 30, 2019ಕ್ಕೆ ಅಂತ್ಯವಾದ ವರ್ಷದಲ್ಲಿ ವಿಕಿಮೀಡಿಯ ಫೌಂಡೇಶನ್‌ ಬಳಿ ಇದ್ದ ನಿವ್ವಳ ಆಸ್ತಿಯ ಮೌಲ್ಯ ಸುಮಾರು 1,118 ಕೋಟಿ ರೂ. ಇಷ್ಟೆಲ್ಲ ಹಣ ಇದ್ದರೂ ಆಗಿಂದಾಗ್ಗೆ ದೇಣಿಗೆ ಸಂಗ್ರಹಣೆಯಲ್ಲಿ ತೊಡಗಿಕೊಳ್ಳುವುದೇಕೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜ. ಅದಕ್ಕೆ ಸ್ಪಷ್ಟೀಕರಣವನ್ನು ಸಂಸ್ಥೆಯೇ ನೀಡಿದೆ. ಅನಿರೀಕ್ಷಿತ ಸನ್ನಿವೇಶಗಳನ್ನು, ತುರ್ತು ಸಂದರ್ಭಗಳನ್ನು ಎದುರಿಸಲು ಅನುವಾಗುವಂತೆ ಕನಿಷ್ಠ ಒಂದು ವರ್ಷದ ಕಾರ್ಯನಿರ್ವಹಣೆಗೆ ಬೇಕಾಗುವಷ್ಟು ಹಣವನ್ನು ವಿಕಿಮೀಡಿಯ ಫೌಂಡೇಶನ್‌ ತನ್ನ ಖಾತೆಯಲ್ಲಿ ಇಟ್ಟುಕೊಂಡಿರುತ್ತದೆ. ಈ ಖಾತೆಯಲ್ಲಿ ಹಣದ ಕೊರತೆ ಉಂಟಾದಾಗಲೇ ಅದು, ಬಳಕೆದಾರರ ಸಹಾಯವನ್ನು ಕೋರುವುದು.

– ಟಿ. ಜಿ. ಶ್ರೀನಿಧಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.