ಗಾಳಿ ಮಾತಿಗೆ ಬೆಲೆ ಇದೆ!
ಕಾಡು ತೋಟ- 18
Team Udayavani, Apr 22, 2019, 6:00 AM IST
ಗಾಳಿಯು ಗೂಳಿಯಂತೆ ತೋಟಕ್ಕೆ ನುಗ್ಗಿದರೆ ಅಲ್ಲೋಲ ಕಲ್ಲೋಲವಾಗುತ್ತದೆ. ಗಿಡ, ಮರಗಳು ಮುರಿದು ಫಲಗಳು ನೆಲಕಚ್ಚಬಹುದು. ವರ್ಷಗಳ ಪರಿಶ್ರಮ ನಿರ್ನಾಮವಾಗಬಹುದು. ಅಂದ ಮಾತ್ರಕ್ಕೆ ಗಾಳಿಯೇ ಬೇಡ ಎನ್ನುವಂತಿಲ್ಲ. ತೋಟಕ್ಕೆ ಗಾಳಿ ಪಡೆಯುವುದಕ್ಕೆ, ತಡೆಯವುದಕ್ಕೆ ಮರಗಳು ಬೇಕು. ಈಗ ಚುನಾವಣೆಯ ಕಾಲ. ಗಾಳಿ ಮಾತಿಗೆ ರೆಕ್ಕೆಪುಕ್ಕ ಹುಟ್ಟುವ ಸಂದರ್ಭದಲ್ಲಿ ಗಾಳಿಯ ‘ಬ್ರೇಕಿಂಗ್ ನ್ಯೂಸ್’ ಇಲ್ಲಿದೆ.
ಪಂಜ ಎತ್ತಿ ಮುಂದಕ್ಕೆ ಜಿಗಿಯಲು ಸಿದ್ಧವಾದ ಹುಲಿಯ ಆಕಾರದ ಬೆಟ್ಟವೊಂದು ಚೀನಾದಲ್ಲಿದೆಯಂತೆ. ಅದರಡಿ ಬದುಕುವವರ ಜೀವನ ಯಾವತ್ತೂ ಅಭದ್ರವಾಗಿರುತ್ತದೆಂಬ ನಂಬಿಕೆ ಇದೆ. ಆ ಬೆಟ್ಟದ ಕೆಳಗಡೆಯ ಗಾಳಿ, ಬೆಳಕು ಸರಿಯಾಗಿ ದೊರೆಯದೇ ಆರೋಗ್ಯ ಸಂಕಷ್ಟಗಳು ಸಹಜ. ಗಾಳಿ ಮತ್ತು ನೀರಿನ ಲಕ್ಷಣ ಗಮನಿಸುವ ಚೀನಿಯರ ಪೆಂಗ್ ಶೂಯಿಯಲ್ಲಿ ಪ್ರಕೃತಿಗೆ ಹೊಂದಿಕೊಂಡು ಬದುಕಲು ನಿರ್ದೇಶಿಸುವ ತತ್ವಗಳಿವೆ. ಕ್ರಿ.ಪೂ. 3500 ವರ್ಷಗಳ ಹಿಂದೆ ಭತ್ತದ ಬೇಸಾಯ ಅರಿತ ಇವರಿಗೆ ನೀರು, ಗಾಳಿ ನಿಧಾನವಾಗಿ ಸುತ್ತು ಬಳಸಿ ಹರಿದರೆ ಒಳ್ಳೆಯದೆಂಬ ನಂಬಿಕೆ ಇದೆ.
ಒಮ್ಮೆ ಇಲ್ಲಿನ ಕ್ವಾಂಗ್‌ಟುಂಗ್ ಪ್ರಾಂತ್ಯದಲ್ಲಿ ಬರಗಾಲ ಬಂದಿತು. ಇದಕ್ಕೆ ಕಾರಣ ಅಲ್ಲಿದ್ದ ಹೆಗ್ಗಣದಾಕಾರದ ಬೆಟ್ಟವೆಂದು ತಜ್ಞರು ಭೂಮಿ ಲಕ್ಷಣ ಓದಿ ಗುರುತಿಸಿದರು. ಕೃಷಿಕರು ಬೆಳೆದ ಬೆಳೆಯನ್ನು ಹೆಗ್ಗಣದಾಕಾರದ ಬೆಟ್ಟ ಮೇಯುತ್ತಿರುವುದರಿಂದ ಫಸಲು ದೊರೆಯುತ್ತಿಲ್ಲ. ಬರಗಾಲ ಬಂದಿದೆಯೆಂದು ವಿಶ್ಲೇಷಿಸಿದರು. ಹೆಗ್ಗಣದ ಆವಾಸಕ್ಕೆ ಎದುರಿನ ಬೆಟ್ಟದಲ್ಲಿ ದೊಡ್ಡ ಬಿಲ ಕೊರೆದರು. ಅಲ್ಲಿಂದ ನಿಧಾನಕ್ಕೆ ಬೆಳೆ ಬರಲು ಆರಂಭವಾಯ್ತು. ಹೆಗ್ಗಣ ಹೋಗಿ ಬಿಲ ಸೇರಿತು, ಭೂಮಿಯಲ್ಲಿ ಬೆಳೆ ಬಂದಿತೆಂದು ರೈತರು ಸಂತಸಪಟ್ಟರು.
ವೇಗವಾದ ಬಿರುಗಾಳಿ ಹೆಗ್ಗಣದ ಮೈಯ ಗುಡ್ಡಕ್ಕೆ ತಗಲಿ ಎದುರಿನ ಇನ್ನೊಂದು ಗುಡ್ಡಕ್ಕೆ ಹೊಡೆದು ಕೆಳಗಡೆಯ ಹೊಲಕ್ಕೆ ಅಪ್ಪಳಿಸುತ್ತಿತ್ತು. ಗಾಳಿಯಿಂದ ಫಲವತ್ತಾದ ಮಣ್ಣಿನ ಸವಕಳಿಯಾಗಿ ಬೆಳೆ ದೊರೆಯುತ್ತಿರಲಿಲ್ಲ. ಗಾಳಿ ತಗಲುವ ಕೇಂದ್ರ ಗುರುತಿಸಿ ಗುಡ್ಡಕ್ಕೆ ಸುರಂಗ ಕೊರೆದ ಬಳಿಕ ಪ್ರತಿಫಲಿಸುವ ವೇಗ ಕಡಿಮೆಯಾಗಿ ಹೊಲ ಬಚಾವಾಯ್ತು. ಹೆಗ್ಗಣ ಹೋಗಿ ಬಿಲ ಸೇರಿತು. ಭೂಮಿಯಲ್ಲಿ ಬೆಳೆ ಬರುತ್ತಿದೆಯೆಂದು ಜನಗಳು ಅರ್ಥಮಾಡಿಕೊಂಡರು. ನಮ್ಮ ಎಷ್ಟೋ ತೋಟ, ಗದ್ದೆಗಳಿಗೆ ಗಾಳಿಯ ಸಮಸ್ಯೆ ತೀವ್ರವಿದೆ. ಮೈಯ್ಯೊಡ್ಡಿದರೆ ಹಿತವೆನಿಸುವ ಗಾಳಿ, ಭೂಮಿಯ ಅನಾರೋಗ್ಯಕ್ಕೆ ಕಾರಣವಾಗುತ್ತದೆಂಬ ಮಾತು ಗಮನಕ್ಕಿಲ್ಲದ ಸಂಗತಿ.
ನಮ್ಮ ರಾಜ್ಯದಲ್ಲಿ ಬೆಟ್ಟದ ಬುಡದಲ್ಲಿ ಕೃಷಿ ಭೂಮಿಗಳಿವೆ. ಕೆಲವೆಡೆ ಉತ್ತಮ ತೋಟ ನೋಡಬಹುದು. ಗಾಳಿಯ ಪರಿಣಾಮದಿಂದ ಭೂಮಿ ಬಡವಾಗುತ್ತಿರುವ ಉದಾಹರಣೆಗಳಿವೆ. ಗುಡ್ಡದಲ್ಲಿ ಮರಗಳ ದಟ್ಟಣೆ ಬದಲಾದಾಗ ಇಂಥ ಪರಿಣಾಮ ನೋಡಬಹುದು. ವರ್ಷದ ವಿವಿಧ ಕಾಲದಲ್ಲಿ ಗುಡ್ಡದ ಗಾಳಿಯ ಸ್ವರೂಪ ನೋಡಿದರೆ ಪರಿಸ್ಥಿತಿ ಅರಿಯಬಹುದು. ಬಳ್ಳಾರಿಯ ಹಗರಿ ಹಳ್ಳದಂಚಿನ ಹೊಲಗಳಲ್ಲಿ ಎಲ್ಲೆಂದರಲ್ಲಿ ಮರಳು ತುಂಬಿದೆ. ಆಷಾಢದ ಗಾಳಿ ಬೀಸಲು ಶುರುವಾದರೆ ಮರಳಿನ ಕಣಗಳು ಗಾಳಿಯಲ್ಲಿ ಹಾರುತ್ತ ಹೊಲದಲ್ಲಿ ಮರಳ ದಿಬ್ಬಗಳು ರಚನೆಯಾಗುತ್ತವೆ. ಹಳ್ಳದಿಂದ 15-20 ಕಿಲೋ ಮೀಟರ್ ದೂರದವರೆಗೂ ಗಾಳಿ ಮರಳಿನ ಪ್ರಹಾರ ವೀಕ್ಷಿಸಬಹುದು.
ಹಗರಿಹಳ್ಳದ ಗಾಳಿ ಮರಳಿನ ಸಮಸ್ಯೆ ತಡೆಯಲು ದಕ್ಷಿಣ ಹಾಗೂ ಉತ್ತರ ಅಮೇರಿಕಾ ಮೂಲದ ಜಾಲಿ (ಪ್ರೊಸೊಪಿಸ್ ಜ್ಯೂಲಿಫ್ಲೋರಾ) ಗಿಡವನ್ನು ಕ್ರಿ.ಶ.1970 ರ ಸುಮಾರಿಗೆ ನಾಟಿ ಮಾಡಲಾಗಿದೆ. ನಂತರದಲ್ಲಿ ಹೆಲಿಕ್ಯಾಪ್ಟರ್ ಮೂಲಕ ರಾಜ್ಯದ ವಿವಿದೆಡೆ ಜಾಲಿ ಬೀಜಗಳು ಬಿತ್ತನೆಯಾಗಿವೆ. ಅವು ಇಂದು ಕಳೆ ಗಿಡಗಳಾಗಿ ರಾಜ್ಯದ ಹೊಲ, ಕೆರೆ, ಕಾಡುನೆಲೆಯನ್ನು ಆಕ್ರಮಿಸಿಕೊಂಡಿವೆ.
ಕರಾವಳಿಯ ಕಾರವಾರದ ಕಡಲಂಚಿನಲ್ಲಿ ಬಿರುಗಾಳಿ ಜಾಸ್ತಿ ಬೀಸುತ್ತದೆ. ಬ್ರಿಟಿಷ್ ಕಲೆಕ್ಟರ್ ಆದೇಶದ ಮೇರೆಗೆ ಗಾಳಿ ತಡೆಯಲು ಕ್ರಿ.ಶ. 1868ರಲ್ಲಿ ಪ್ರಥಮವಾಗಿ ಕಾರವಾರದಲ್ಲಿ 10 ಎಕರೆ ಕ್ಷೇತ್ರದಲ್ಲಿ ಆಸ್ಟ್ರೇಲಿಯನ್ ದೇಶದ ಕ್ಯಾಸುರಿನಾ ಸಸ್ಯ ಬೆಳೆಸುತ್ತಾರೆ. ಕಡಲ ತೀರದಲ್ಲಿ ಬೆಳೆಸಿದ ಇದು ಮುಂದೆ ಮುಂಬೈ ಮಹಾನಗರಕ್ಕೆ ಉರುವಲು ಒದಗಿಸುವ ಸಸ್ಯವಾಗುತ್ತದೆ. ಶತಮಾನದ ಹಿಂದೆ ಗಾಳಿ ತಡೆಯಲು ಕರಾವಳಿಗೆ ಬಂದ ಸಸ್ಯ ಇಂದು ಘಟ್ಟವೇರಿ ಅರಣ್ಯ, ಕೃಷಿ ಭೂಮಿಗಳಲ್ಲಿಯೂ ಕಾಣಿಸುತ್ತಿದೆ.
ಸಾವಿರಾರು ಅಪೂರ್ವ ಸಸ್ಯಗಳಿರುವ ಪಶ್ಚಿಮ ಘಟ್ಟದ ನಾಡಿನಲ್ಲಿ ಗಾಳಿ ತಡೆಯಲು ದೇಶಿ ಸಸ್ಯವನ್ನು ಆಮದು ಮಾಡಿಕೊಂಡಿದ್ದು ಅವತ್ತಿನ ಆಡಳಿತದ ಮನಸ್ಥಿತಿಗೆ ಕೈಗನ್ನಡಿಯಾಗಿದೆ. ಅಡಿಕೆ, ಬಾಳೆ, ಪಪಾಯ, ಮಾವು ಮುಂತಾದ ತೋಟಗಳು ಮಳೆಗಾಳಿಯಿಂದ ಹಾನಿಗೆ ಒಳಗಾಗುತ್ತವೆ. ಸುಳಿಗಾಳಿಯ ಪ್ರಹಾರಕ್ಕೆ ಮರಗಳೆಲ್ಲ ನೆಲಸಮವಾದ ಭಯಾನಕ ಘಟನೆಗಳು ನಡೆದಿವೆ. ಆಳಕ್ಕೆ ಬೇರಿಳಿಸುವ, ಮೈತುಂಬ ಹಸಿರೆಲೆ ಹೊದ್ದ ಮರಗಳು ಇಂಥ ಗಾಳಿಯ ವೇಗ ತಡೆಯಲು ನೆರವಾಗುತ್ತವೆ.
ಗಾಳಿಯ ಹಾನಿ, ಗಿಡ ಮುರಿಯುವುದಕ್ಕೆ ಮಾತ್ರವೇ ಸೀಮಿತವಲ್ಲ. ತಿಪಟೂರಿನ ಭೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅರಣ್ಯಾಧಾರಿತ ತೋಟಗಾರಿಕೆ ಕಾರ್ಯಕ್ರಮವನ್ನು 1992 ರಲ್ಲಿ ಆರಂಭಿಸಿತ್ತು. 600 ಮಿಲಿ ಮೀಟರ್ ಮಳೆ ಸುರಿಯುವ ಪ್ರದೇಶದಲ್ಲಿ ಹಣ್ಣು ಹಂಪಲು, ಅರಣ್ಯ ವೃಕ್ಷ, ಮೇವಿನ ಸಸ್ಯ ಬೆಳೆಸುವ ಯೋಜನೆಯನ್ನು ಜಾರಿಗೊಳಿಸಿತು.
ಜಲ ಸಂರಕ್ಷಣೆಗೆ ಮಹತ್ವ ನೀಡಿ ಕೃಷಿ ಹೊಂಡಗಳನ್ನು ರೂಪಿಸಿತು. ಮಾವು, ತೆಂಗು, ಹಲಸು, ಹುಣಸೆ, ನುಗ್ಗೆ, ಚಿಕ್ಕು, ಬಾಳೆ, ಗ್ಲಿರಿಸಿಡಿಯಾ, ನೀಲಗಿರಿ, ಸಿಲ್ವರ್, ಗೇರು, ತೇಗ, ಕತ್ತಾಳೆ ಮುಂತಾದವನ್ನು ರೈತರು ಬೆಳೆಸಿದರು. ತಿಪಟೂರಿನಿಂದ 10 ಕಿಲೋ ಮೀಟರ್ ದೂರದ ಮಂಜುನಾಥಪುರದ ರತ್ನಮ್ಮ ಎಂಬ ಬಡ ಮಹಿಳೆಯ ಸಾಧನೆ ರಾಜ್ಯದ ಗಮನ ಸೆಳೆದಿತ್ತು. ನಾಲ್ಕು ಎಕರೆ ಹೊಲದ ಒಡತಿ ರತ್ನಮ್ಮ ಹೊಲದಲ್ಲಿ ರಾಗಿ ಬೆಳೆಯುತ್ತಿದ್ದಳು. ಎರಡು ಮೂರು ಮೂಟೆ ದೊರೆಯುವುದೂ ಅಸಾಧ್ಯವಾಗಿ ಕೂಲಿಗೆ ಹೋಗುತ್ತಿದ್ದಳು. ನಂತರ ಮಳೆ ಆಶ್ರಿತವಾಗಿ ಅರಣ್ಯ, ತೋಟಗಾರಿಕೆ ಸಸ್ಯ ಬೆಳೆಸಲು ಆರಂಭಿಸಿದಳು. ಮುಂದಿನ ಆರೇಳು ವರ್ಷಗಳಲ್ಲಿ ಐದು ಜನಕ್ಕೆ ಕೆಲಸ ನೀಡುವ ಮಟ್ಟಕ್ಕೆ ಬದಲಾದಳು.
ರಾಗಿ ಹೊಲದ ರತ್ನಮ್ಮನ ಪರಿವರ್ತನೆಗೆ ಗಾಳಿ ಮಾತು ಕೇಳಿದ್ದು ಮುಖ್ಯ ಕಾರಣವಾಗಿತ್ತು. ನಿರಂತರ ಬಿಸಿಗಾಳಿ ಗುಡ್ಡದ ಇವರ ಭೂಮಿಗೆ ತಾಗುತ್ತಿತ್ತು. ಹೊಲದ ತೇವ ಆರಿ ಹೋಗಿ ರಾಗಿಯೂ ಬೆಳೆಯದ ಪರಿಸ್ಥಿತಿ ಇತ್ತು. ತೋಟಗಾರಿಕೆ ಸಸ್ಯ ಬೆಳೆಸಿದ ಬಳಿಕ ಹಸಿರು ಬೇಲಿಗೆ ಸುಬಾಬುಲ್, ಕ್ಯಾಸಿಯಾ, ಗ್ಲಿರಿಸಿಡಿಯಾ, ಲಕ್ಕಿ ಮುಂತಾದ ಸಸ್ಯಗಳನ್ನು ದಟ್ಟವಾಗಿ ಬೆಳೆಸಿದ್ದಳು. ಗಿಡಗಳು ಹೆಚ್ಚು ಎತ್ತರ ಬೆಳೆಯದಂತೆ ನಾಲ್ಕಡಿಗೆ ಕತ್ತರಿಸುತ್ತಿದ್ದಳು.
ಬಿಸಿಗಾಳಿ ಇವಳ ಬೇಲಿಗೆ ತಗುಲಿ ತೀವ್ರತೆ ತಗ್ಗಿಸಿಕೊಂಡು ತಂಪಾಗಿ ಹೊಲಕ್ಕೆ ನುಸುಳುತ್ತಿತ್ತು. ರತ್ನಮ್ಮನ ಹೊಲ, ಗಾಳಿಯ ಗುಣ ಬದಲಿಸುವ ಸರಳ ತಂತ್ರದಿಂದ ಗೆದ್ದಿತು. 1996-97 ರ ಕಾಲಕ್ಕೆ ತಿಪಟೂರಿಗೆ ಬಂದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು, ಅರಣ್ಯಾಧಿಕಾರಿಗಳು, ರತ್ನಮ್ಮನ ಬದುಕಿನ ಯಶೋಗಾಥೆ ಅರಿಯಲು ಬರುವಂತಾಯ್ತು.
ಗಾಳಿಯ ಪರಿಣಾಮ ಬೇಸಿಗೆಯ ಈ ದಿನಗಳಲ್ಲಿ ಮನೆ ಮನೆಗಳಲ್ಲಿ ಅರ್ಥವಾಗುತ್ತಿದೆ. ಪ್ರತಿ ನಿತ್ಯ ನೀರುಣಿಸಿದರೂ ತೋಟದ ಗಿಡಗಳು ಸೋಲುತ್ತವೆ. ಹಸಿರು ಬೇಲಿಯ ಸರಳ ತಂತ್ರಗಳಿಂದ ಸಮಸ್ಯೆ ಗೆಲ್ಲಬಹುದು. ಒದ್ದೆ ಬಟ್ಟೆ ಫ್ಯಾನ್ ಗಾಳಿಗೆ ಬಹುಬೇಗ ಒಣಗುವುದನ್ನು ಗಮನಿಸಿದ್ದೇವೆ. ರಾತ್ರಿ ಫ್ಯಾನಿನ ಅಡಿಯಲ್ಲಿ ಮಲಗಿದ ನಮ್ಮ ದೇಹವೂ ಹೆಚ್ಚು ನೀರು ಬಯಸುತ್ತದೆ. ಭೂಮಿಯಲ್ಲಿಯೂ ಇದೇ ಪರಿಣಾಮಗಳಿವೆ. ಗುಡ್ಡ ಬೆಟ್ಟಗಳಲ್ಲಿ, ಇಳಿಜಾರಿನಲ್ಲಿ ತೋಟ ರೂಪಿಸುವಾಗ ಗಾಳಿಯ ಗುಣವನ್ನು ಸರಿಯಾಗಿ ಅರಿಯಬೇಕಾಗುತ್ತದೆ.
ರಾಣೆಬೆನ್ನೂರಿನ ಕೊನಬೇನ ಚಿಂ.ಸು.ಪಾಟೀಲರ ಭೂಮಿಗೆ ಎರಡು ವರ್ಷ ಹಿಂದೆ ಹೋಗಿದ್ದಾಗ ಬಾಳೆ ಬೆಳೆದಿದ್ದರು. ತೋಟದ ಪಕ್ಕದ ಹೊಲದಲ್ಲಿ ಶೇಂಗಾ, ಊದಲು, ನವಣೆ, ರಾಗಿ ಮುಂತಾದವಿದ್ದವು. ಮೂಡಣಗಾಳಿ ಇವರ ತೋಟಕ್ಕೆ ದೊಡ್ಡ ಸಮಸ್ಯೆ. ಇದರ ತಡೆಗೆ ಮರ ಬೆಳೆಸಬಹುದು. ಆದರೆ ಪಕ್ಕದಲ್ಲಿ ಬೆಳೆಯುವ ಬಿಳಿಜೋಳಕ್ಕೆ ನೆರಳು ಹೆಚ್ಚಾಗಿ ಬೆಳೆ ದೊರೆಯುವುದಿಲ್ಲ. ಹೀಗಾಗಿ, ಬದುವಿಗುಂಟ ಹಸಿರು ಹುಲ್ಲು ಹಚ್ಚಿದ್ದರು. ದನಕರುಗಳ ಮೇವಿನ ಸುಧಾರಿತ ತಳಿಯ ಹುಲ್ಲು ಬೆಳೆಸಿ ಗಾಳಿಗೆ ಮದ್ದರೆದಿದ್ದರು. ತೋಟಕ್ಕೆ ಯಾವ ಗಾಳಿ ಎಂಥ ಸಮಸ್ಯೆ ನೀಡುತ್ತದೆಂದು ಅರಿತು ಇಂಥ ಸ್ಥಳ ಯೋಗ್ಯ ಪರಿಹಾರ ಹುಡುಕಬಹುದು.
ಪಶ್ಚಿಮ ಘಟ್ಟದಲ್ಲಿ…
ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಗುಡ್ಡದ ತುತ್ತ ತುದಿಗಳಲ್ಲಿ ಮರಗಳಿಲ್ಲದ ಬೋಳು ನೆಲೆ ನೋಡಬಹುದು. ಹುಲ್ಲು ಬೆಳೆಯುವ ಇಲ್ಲಿ ಕೆಲವೊಮ್ಮೆ ಕುಬ್ಜ ಗಾತ್ರದ ಮರಗಳಿರುತ್ತವೆ. ಕಾಡು ವೃಕ್ಷಗಳು ಗಾಳಿಯ ಹೊಡೆತಕ್ಕೆ ‘ಬೋನ್ಸಾಯ್’ ರೂಪ ಪಡೆದಿರುತ್ತವೆ. ಇನ್ನೂ ವಿಶೇಷವೆಂದರೆ ಜೂನ್ ತಿಂಗಳ ಜಡಿಮಳೆಯ ಅಬ್ಬರದಲ್ಲಿ ಎಲೆ ಉದುರಿಸಿ ಬದುಕುವ ವೃಕ್ಷ ಜಾತಿಗಳನ್ನು ನೋಡಬಹುದು.
ಗಾಳಿ ಗೆಲ್ಲಲು ನಿಸರ್ಗ ತಂತ್ರಗಳನ್ನು ಓದಿಕೊಂಡು ಕೃಷಿ ಗೆಲ್ಲಿಸುವ ವಿದ್ಯೆಯನ್ನೂ ಕಲಿಯಬೇಕಾಗುತ್ತದೆ. ಮಲೆನಾಡಿನ ಅಡಿಕೆ ತೋಟದಂಚಿನಲ್ಲಿ ಪಶ್ಚಿಮ ದಿಕ್ಕಿನಲ್ಲಿ ನೆರಳು ಮರಗಳ ಸಾಲುಗಳಿರುತ್ತವೆ. ಬಹೂಪಯೋಗಿ ಹಲಸಿನ ನಾಟಿ ಮಾಡಿದರೆ ತೋಟಕ್ಕೆ ನೆರಳು ದೊರೆಯುತ್ತದೆ. ನಾರು ಗುಣದ ಟೊಂಗೆ ಗಾಳಿಗೆ ಮೈಯೊಡ್ಡಿ ತಡೆಯುತ್ತದೆ. ವೃಕ್ಷ ಜಾತಿಗೆ ಆಳಕ್ಕೆ ಬೇರಿಳಿಸುವ ಗುಣವಿದ್ದರೆ ಗಾಳಿ ತಡೆಯುವ ಶಕ್ತಿಯೂ ಇರುತ್ತದೆ.
ಕಾಡು ತೋಟ – 19: ಅಮ್ಮನ ಹಿತ್ತಲಿನಲ್ಲಿ ಕಾಡು ತೋಟದ ಪಾಠ
— ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.