ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ – ಕೆಲವು ಚಿಂತನೆಗಳು
Team Udayavani, Mar 6, 2017, 1:51 PM IST
ಗ್ರಾಹಕರಿಗೆ ಸುರಕ್ಷತೆಯ ಹಕ್ಕನ್ನು ನೀಡಲಾಗಿದೆ. ಅವರು ಖರೀದಿಸುವ ಯಾವುದೆ ವಸ್ತು, ಸರಕು ಅಥವಾ ಪಡೆಯುವ ಸೇವೆಯು ಸುರಕ್ಷಿತವಾಗಿರಬೇಕೆಂದು ಈ ಹಕ್ಕು ಹೇಳುತ್ತದೆ. ಸುರಕ್ಷತೆಯ ಹಕ್ಕನ್ನು ಕೇವಲ ಗ್ರಾಹಕ ಸಂರಕ್ಷಣಾ ಕಾಯ್ದೆ ಮಾತ್ರವಲ್ಲ ಇನ್ನೂ ಅನೇಕ ಕಾನೂನುಗಳಲ್ಲಿ ನೋಡಬಹುದು. ದೀರ್ಘಬಾಳಿಕೆಯ ವಸ್ತುಗಳು, ಔಷಧ, ಸೌಂದರ್ಯವರ್ಧಕ, ಆಹಾರ, ಪಾನೀಯ ಎಲ್ಲವೂ ಗ್ರಾಹಕರಿಗೆ ಸುರಕ್ಷಿತವಾಗಿರಬೇಕು.
ಇದೇ ವಾರ 15ರಂದು ಬರಲಿರುವ ಮತ್ತೂಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಗೆ ಭಾರತವೂ ಸೇರಿದಂತೆ ಇಡೀ ವಿಶ್ವ ಸಿದ್ದವಾಗುತ್ತಿದೆ. 1962ರಲ್ಲಿ ಅಮೇರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ತನ್ನ ನಾಲ್ಕು ಗ್ರಾಹಕರ ಹಕ್ಕುಗಳನ್ನೊಳಗೊಂಡ ವಿಧೇಯಕವನ್ನು ಪ್ರಕಟಿಸಿದರು. ಬಳಕೆದಾರರಿಗೆ ಆಗುತ್ತಿದ್ದ ಮೋಸ, ವಂಚನೆ ಮತ್ತು ಕಿರುಕುಳವನ್ನು ಗಮನಿಸಿದ ಕೆನಡಿ ಗ್ರಾಹಕರು ತಮ್ಮನ್ನು ರಕ್ಷಿಸಿಕೊಳ್ಳಲು ಹಕ್ಕುಗಳು ಅವಶ್ಯಕ ಎಂದು ಈ ವಿಧೇಯಕವನ್ನು ನೀಡಿದರು. ವಿಧೇಯಕವನ್ನು ಅಂಗೀಕರಿಸುವಾಗ ಅವರು ಮಾಡಿದ ಭಾಷಣ ಐವತ್ತೆ„ದು ವರ್ಷಗಳ ನಂತರವೂ ಪ್ರಸ್ತುತವಾಗಿದೆ. ಕೆನಡಿ ಹೇಳಿದ್ದರು- ಗ್ರಾಹಕರು ಮಾರುಕಟ್ಟೆಯ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಅತಿ ಪ್ರಮುಖರು. ಮಾರುಕಟ್ಟೆಯಲ್ಲಿ ಭಾಗಿಯಾಗುವವರಲ್ಲಿ ಗ್ರಾಹಕರೇ ಹೆಚ್ಚು. ಆದರೆ, ಅವರನ್ನು ಕೇಳುವವರು ಯಾರೂ ಇಲ್ಲ. ಅವರ ಅಗತ್ಯಗಳನ್ನು ಪೂರೈಸುವಲ್ಲಿ ಮಾರುಕಟ್ಟೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಷ್ಟು ಬದಲಾವಣೆ ಆಗಿಲ್ಲ. ಬಳಕೆದಾರರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಾರುಕಟ್ಟೆ ಬೀಸುತ್ತಿರುವ ಬಲೆಯಲ್ಲಿ ಸಿಕ್ಕಿ ನಷ್ಟ, ನೋವು ಅನುಭವಿಸುತ್ತಿದ್ದಾರೆ. ಗ್ರಾಹಕರನ್ನು ರಕ್ಷಿಸಲು ಸಾಕಷ್ಟು ಕಾನೂನುಗಳು ರಚಿತವಾಗಿದ್ದರೂ. ಅದರ ಆಚರಣೆ ಸಮಪರ್ಕವಾಗಿಲ್ಲ. ಗ್ರಾಹಕರ ಯಾವುದೇ ಹಕ್ಕನ್ನು ಪರಿಗಣಿಸಿದರೂ ಇದು ಗೋಚರಿಸುತ್ತದೆ.
ಗ್ರಾಹಕರಿಗೆ ಸುರಕ್ಷತೆಯ ಹಕ್ಕನ್ನು ನೀಡಲಾಗಿದೆ. ಅವರು ಖರೀದಿಸುವ ಯಾವುದೇ ವಸ್ತು, ಸರಕು ಅಥವಾ ಪಡೆಯುವ ಸೇವೆಯು ಸುರಕ್ಷಿತವಾಗಿರಬೇಕೆಂದು ಈ ಹಕ್ಕು ಹೇಳುತ್ತದೆ. ಸುರಕ್ಷತೆಯ ಹಕ್ಕನ್ನು ಕೇವಲ ಗ್ರಾಹಕ ಸಂರಕ್ಷಣಾ ಕಾಯ್ದೆ ಮಾತ್ರವಲ್ಲ ಇನ್ನೂ ಅನೇಕ ಕಾನೂನುಗಳಲ್ಲಿ ನೋಡಬಹುದು. ದೀರ್ಘ ಬಾಳಿಕೆಯ ವಸ್ತುಗಳು, ಔಷಧ, ಸೌಂದರ್ಯವರ್ಧಕ, ಆಹಾರ, ಪಾನೀಯ ಎಲ್ಲವೂ ಗ್ರಾಹಕರಿಗೆ ಸುರಕ್ಷಿತವಾಗಿರಬೇಕು. ಅಷ್ಟೇಕೆ, ಸೇವಿಸಿದ ನಂತರ ವಸ್ತುಗಳನ್ನು ತ್ಯಾಜ್ಯವೆಂದು ಪರಿಗಣಿಸಿ ಎಸೆಯುವಾಗಲೂ ಅದು ಪರಿಸರಕ್ಕೆ ತೊಂದರೆ ಉಂಟುಮಾಡಬಾರದು. ಆದರೆ, ಪರಿಸ್ಥಿತಿ ಹೇಗಿದೆ? ಆಹಾರ ಕಲಬೆರಕೆಯನ್ನು ತಡೆಗಟ್ಟಲು ಪ್ರತ್ಯೇಕ ಕಾಯ್ದೆ ಮತ್ತು ಅದರ ಆಚರಣೆಗೆ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಲಾಗಿದೆ. ಹತ್ತಾರು ಅಧಿಕಾರಿಗಳು ಮತ್ತು ಪರಿಣಿತರನ್ನು ನೇಮಕ ಮಾಡಿ ಸಂಬಳ, ಸಾರಿಗೆ, ಭತ್ಯೆ. ವಿದೇಶ ಪ್ರವಾಸ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಅಹಾರ ಲ್ಯಾಬೊರೇಟರಿಗಳ ಕಾರ್ಯಾಚರಣೆ ಮತ್ತು ಪತ್ತೆ ಹಚ್ಚಿರುವ ಕಲಬೆರಕೆಯ ಅಂಕಿ-ಅಂಶಗಳನ್ನು ಗಮನಿಸಿದರೆ, ಈ ಕಾಯ್ದೆ ಎಷ್ಟರಮಟ್ಟಿಗೆ ಗ್ರಾಹಕರಿಗೆ ಅನುಕೂಲವಾಗಿದೆ ಎಂದು ತಿಳಿಯುತ್ತದೆ. ಕಾಯ್ದೆ ಅನುಸಾರ ಪ್ರತಿಯೊಂದು ಜಿಲ್ಲೆಗೆ ಅಗತ್ಯಕ್ಕೆ ತಕ್ಕಂತೆ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ. ಆದರೆ, ಕರ್ನಾಟಕದಲ್ಲಿ ಎಷ್ಟು ಆಹಾರ ಸುರಕ್ಷತಾ ಅಧಿಕಾರಿಗಳಿದ್ದಾರೆ? ಹಿಂದೆ ಇದ್ದವರನ್ನೇ ಮರುನಾಮಕರಣ ಮಾಡಿ ನೇಮಕ ಮಾಡಲಾಗಿದೆ. ಅದರಲ್ಲೂ ದೋಷವಿದೆ. ಎರಡು ಅಥವಾ ಮೂರು ಜಿಲ್ಲೆಗಳಿಗೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಪರೀಕ್ಷೆಗೆ ಒಳಪಡಿಸಿರುವ ಆಹಾರ ಪದಾರ್ಥಗಳ ಸ್ಯಾಂಪಲ್‌ಗಳ ಸಂಖ್ಯೆ ಬಗ್ಗೆಯೂ ಮಾಹಿತಿ ಲಭ್ಯವಿಲ್ಲ.
ಗ್ರಾಹಕ ಸಂರಕ್ಷಣಾ ಕಾಯ್ದೆಯ ಆಚರಣೆಯಲ್ಲೂ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಹಿಂದೆ ಬಿದ್ದಿವೆ. ಈ ಕಾಯ್ದೆಯ ಪ್ರಕಾರ ಕೈಗೊಳ್ಳಬೇಕಾದ ಕ್ರಮ ಕೈಗೊಂಡಿಲ್ಲ. ಉದಾಹರಣೆಗೆ, ಈ ಕಾಯ್ದೆಯ ಪ್ರಕಾರ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಹಕ ಸಂರಕ್ಷಣಾ ಪರಿಷತ್ತುಗಳನ್ನು ಸ್ಥಾಪಿಸಬೇಕು. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಪರಿಷತ್ತುಗಳ ಸಂರಚನೆ, ಸದಸ್ಯರ ಅರ್ಹತೆ, ಅದರ ಕರ್ತವ್ಯ, ಸಭೆ ನಡೆಸುವ ರೀತಿ ಇತ್ಯಾದಿಗಳ ಬಗ್ಗೆ ಸುತ್ತೋಲೆ ಹೊರಡಿಸಿ ಎಲ್ಲ ರಾಜ್ಯಗಳಿಗೆ ರವಾನಿಸಿ ಎರಡು ವರ್ಷಗಳು ಕಳೆದಿದ್ದರೂ, ಪರಿಷತ್ತು ಸ್ಥಾಪನೆಯಾಗಿಲ್ಲ. ಕರ್ನಾಟಕದಲ್ಲಿ ಪರಿಷತ್ತುಗಳು ಕಳೆದ ಎಂಟು ವರ್ಷಗಳಿಂದ ಸ್ಥಾಪಿಸಿಲ್ಲ. ಇದರಿಂದ ಗ್ರಾಹಕ ಸಂರಕ್ಷಣೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸೂಚಿಸುವ ಅವಕಾಶದಿಂದ ಗ್ರಾಹಕ ಕಾರ್ಯಕರ್ತರು ವಂಚಿತರಾಗಿದ್ದಾರೆ. ಇಲಾಖೆ ಅಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದೇ ಅಂತಿಮವಾಗಿದೆ. ಕೆಳಮಟ್ಟದ ಸಮಸ್ಯೆಗಳು, ಗ್ರಾಮೀಣ ಪ್ರದೇಶದ ಗ್ರಾಹಕರ ಕುಂದು-ಕೊರತೆಗಳು ಇತ್ಯಾದಿ ಬಗ್ಗೆ ಚರ್ಚೆಗೆ, ವಿಚಾರ ವಿನಿಮಯಕ್ಕೆ ಅವಕಾಶವಿಲ್ಲದಂತಾಗಿದೆ. ಜಿಲ್ಲಾ ಮಟ್ಟದಲ್ಲಿ ಪರಿಷತ್ತುಗಳನ್ನು ಸ್ಥಾಪಿಸಲಾಗಿತ್ತಾದರೂ, ಅದರ ಸಭೆಗಳು ನಡೆದಂತೆ ಕಾಣುತ್ತಿಲ್ಲ. ಸಂಬಂಧಪಟ್ಟ ಸಚಿವರು ಇದರ ಬಗ್ಗೆ ಗಮನಹರಿಸುವುದು ಅವಶ್ಯ.
ದೇಶದಲ್ಲಿ ಯಾವುದೇ ರಾಜ್ಯ ಮಾಡದ ಉತ್ತಮ ಕೆಲಸವನ್ನು ಕರ್ನಾಟಕ ರಾಜ್ಯ ಮಾಡಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಗ್ರಾಹಕ ಮಾಹಿತಿ ಕೇಂದ್ರ ಸ್ಥಾಪಿಸಿದೆ. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯನ್ನು ಗುರುತಿಸಿ, ಆರ್ಥಿಕ ಅನುದಾನ ನೀಡಿ, ಮಾಹಿತಿ ಕೇಂದ್ರದ ಉಸ್ತುವಾರಿಯನ್ನು ಅದಕ್ಕೆ ಒಪ್ಪಿಸಿದೆ. ಇದು ಸ್ವಾಗತಾರ್ಹ ಕ್ರಮ. ಅದೆ ರೀತಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 20 ಶಾಲೆಗಳಲ್ಲಿ ಗ್ರಾಹಕ ಕ್ಲಬ್‌ಗಳನ್ನು ರಚಿಸುವ ಯೋಜನೆ ಹಮ್ಮಿಕೊಂಡಿದೆ. ಅದಕ್ಕೂ ಸಹ ಅನುದಾನ ನೀಡಿದೆ. ಆದರೆ, ಅನುದಾನದ ಬಿಡುಗಡೆ ಮತ್ತು ಗ್ರಾಹಕ ಕ್ಲಬ್‌ಗಳ ಚಟುವಟಿಕೆಗಳ ಬಗ್ಗೆ ಸುಧಾರಣೆ ಆಗಬೇಕಿದೆ.
ಸಾಮಾನ್ಯವಾಗಿ ಶಾಲೆಗಳು ಆರಂಭವಾಗುವುದು ಜೂನ್ ತಿಂಗಳಲ್ಲಿ. ಗ್ರಾಹಕ ಕ್ಲಬ್‌ಗಳನ್ನು ಸ್ಥಾಪಿಸಲು ಆಯ್ಕಯಾದ ಸಂಘಗಳಿಗೆ ಜೂನ್ ತಿಂಗಳಲ್ಲಿ ಅನುದಾನ ತಲುಪುವಂತೆ ಕ್ರಮ ಕೈಗೊಂಡರೆ ವರ್ಷಪೂರ್ತಿ ಗ್ರಾಹಕ ಕ್ಲಬ್‌ಗಳಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಯಾವ ಕಾರಣವೋ ತಿಳಿಯದು, ಈ ವರ್ಷ ಅನುದಾನವನ್ನು ಕಳೆದ ತಿಂಗಳು ಫೆಬ್ರವರಿ ಅಂತ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ಈಗಲೂ ಅನುದಾನ ಬಿಡುಗಡೆ ಆಗಿಲ್ಲ. ಶಾಲೆಗಳಲ್ಲಿ ಪರೀಕ್ಷೆ ಆರಂಭವಾಗಿದೆ. ಸದ್ಯದಲ್ಲೆ ಶಾಲೆಗಳು ಬೇಸಿಗೆ ರಜೆಗಾಗಿ ಮುಚ್ಚಲಿದೆ. ಯಾರಿಗೆ, ಯಾವಾಗ ಗ್ರಾಹಕ ಶಿಕ್ಷಣ ನೀಡುವುದು? ರಾಜ್ಯ ಸರ್ಕಾರ ಮತ್ತು ಇಲಾಖೆ ಇದರ ಬಗ್ಗೆ ಗಂಭೀರವಾಗಿ ಯೋಚಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಾದರೂ ಮುಂಚಿತವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮ ಜರುಗಿಸಬೇಕು.
ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಗ್ರಾಹಕ ವ್ಯವಹಾರಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಸಮಸ್ಯೆ ಇರುವುದು ಇಲ್ಲೇ. ಇಲಾಖೆಗೆ ಆಹಾರ ಹಂಚಿಕೆಯ ಜವಾಬ್ದಾರಿಯೇ ಅಧಿಕವಾಗಿದ್ದು ಇರುವ ಸಮಯವೆಲ್ಲಾ ಅದಕ್ಕೆ ವ್ಯಯವಾಗುತ್ತಿದೆ. ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಹಕ ವ್ಯವಹಾರದಲ್ಲಿ ಆಸಕ್ತಿ ವಹಿಸಿರುವುದರಿಂದ ಈಗ ಕೆಲವೊಂದು ಕೆಲಸಗಳು ನಡೆಯುತ್ತಿದೆ. ಗ್ರಾಹಕ ವ್ಯವಹಾರಕ್ಕೆ ಪ್ರತ್ಯೇಕವಾದ ನಿರ್ದೇಶನಾಲಯ ಅತ್ಯಗತ್ಯ. ಇದರ ಬಗ್ಗೆ ಸರ್ಕಾರ ಯೋಚಿಸಬೇಕಿದೆ.
ವೈ.ಜಿ.ಮುರಳೀಧರನ್,
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.