ಝೀರೋ ಪರ್ಸೆಂಟ್ ವೇಸ್ಟೇಜ್
ದುಂದುವೆಚ್ಚ ತಡೆದರೆ ಶುಭ-ಲಾಭ!
Team Udayavani, Oct 14, 2019, 5:30 AM IST
ಮನೆ ನಿರ್ಮಾಣಕ್ಕೆಂದು ತಂದ ವಸ್ತುಗಳಲ್ಲಿ ಕೆಲ ಬಾರಿ ಅರ್ಧಕ್ಕರ್ಧ ಮರುಬಳಕೆ ಮಾಡಲಾಗದಂತೆ ಉಳಿದುಹೋಗುತ್ತವೆ. ಇದು ಪೋಲಾದಂತೆ. ವಸ್ತುಗಳನ್ನು ತರುವಾಗ ಮತ್ತು ಬಳಸುವಾಗ ಕೊಂಚ ನಿಗಾ ವಹಿಸಿದರೆ ದುಂದು ವೆಚ್ಚವನ್ನು ತಡೆಯಬಹುದು. ದೊಡ್ಡ ಮೊತ್ತದ ಹಣವನ್ನು ಉಳಿಸಬಹುದು.
ಮನೆ ಕಟ್ಟುವಾಗ ಒಂದಷ್ಟು ಮರದ ತುಂಡುಗಳು, ಟೈಲ್ಸ್ ಪೀಸುಗಳು ಇತ್ಯಾದಿ ವಸ್ತುಗಳ ರಾಶಿ ಬೀಳುತ್ತದೆ. ಇದು ಮಿತಿಯಲ್ಲಿದ್ದರೆ ಪರವಾಗಿಲ್ಲ, ಆದರೆ ತಂದದ್ದರಲ್ಲಿ ಬಹುಪಾಲು ವಿನಾಕಾರಣ ತುಂಡು ತುಂಡಾಗಿ ವ್ಯರ್ಥವಾಯಿತು ಎಂದರೆ ಅದು ಹಣದ ಪೋಲಿನ ಜೊತೆಗೆ, ಮಾನಸಿಕವಾಗಿಯೂ ಬೇಸರವನ್ನು ಉಂಟುಮಾಡುತ್ತದೆ. ಪ್ಲೆ„ವುಡ್, ಟೈಲ್ಸ್ ಇತ್ಯಾದಿ ವಸ್ತುಗಳು ನಿರ್ದಿಷ್ಟ ಅಳತೆಯಲ್ಲಿ ಸಿಗುತ್ತವೆ. ನಾವು ಮನೆಯ ವಿನ್ಯಾಸವನ್ನು ನಮ್ಮ ನಿವೇಶನ ಹಾಗೂ ಅಗತ್ಯಕ್ಕೆ ತಕ್ಕಂತೆ ಮಾಡಿಕೊಂಡಿರುತ್ತೇವೆ. ಕೆಲವೊಮ್ಮೆ ಒಂದಕ್ಕೊಂದು ತಾಳೆ ಆದರೆ ಹೆಚ್ಚು ವೇಸ್ಟೇಜ್ ಆಗುವುದಿಲ್ಲ. ಆದರೆ, ಒಂದೊಂದು ಸಾರಿ ಹೆಚ್ಚು ತುಂಡುಗಳಾಗಿ ಬಿಡುತ್ತದೆ. ಹೀಗೆ ತುಂಡುಗಳಾಗುವುದನ್ನು ನಾವು ವಿವಿಧ ಹಂತಗಳಲ್ಲಿ ತಡೆಯಬಹುದು. ಮನೆಯ ವಿನ್ಯಾಸ ಮಾಡುವಾಗಲೇ ಇಂಥ ಕಡೆ ಇದೇ ಬರಬೇಕು ಹಾಗೂ ಇದರ ಅಳತೆ ಇಷ್ಟೇ ಇರಬೇಕು ಎಂದು ನಿರ್ಧರಿಸಿದರೆ, ಹಾಗೂ ಈ ನಿರ್ಧಾರವನ್ನು ನಾವು ಆಯಾ ಘಟ್ಟದ ಸಾಮಗ್ರಿಯ ಅಳತೆಯ ಮೇಲೆ ನಿರ್ಧರಿಸಿದರೆ, ಹೆಚ್ಚು ತುಂಡುಗಳಾಗುವುದನ್ನು ತಡೆಯಬಹುದು. ಕಿಚನ್ ವಿನ್ಯಾಸ ಮಾಡುವಾಗ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಏನೇನು ಬರಬೇಕು ಹಾಗೂ ಅದರ ಅಳತೆಯನ್ನು ಅದನ್ನು ಮಾಡಲು ಉಪಯೋಗಿಸುವ ಪ್ಲೆ„ವುಡ್, ಲ್ಯಾಮಿನೇಟ್ ಗ್ರಾನೈಟ್ ಇತ್ಯಾದಿ ಅಳತೆಯನ್ನು ಆಧರಿಸಿ ನಿರ್ಧರಿಸಿದರೆ, ವೇಸ್ಟೇಜ್ ಕಡಿಮೆ ಆಗುತ್ತದೆ.
ತ್ಯಾಜ್ಯ ಕಡಿಮೆ ಮಾಡುವುದು ಹೇಗೆ?
ಕಟ್ಟಡ ನಿರ್ಮಾಣ ಸಾಮಗ್ರಿ ತಯಾರಕರು ಜನರು ಹೆಚ್ಚಾಗಿ ಬಳಸುವ ಅಳತೆಗಳಲ್ಲೇ ವಸ್ತುಗಳನ್ನು ತಯಾರಿಸುತ್ತಾರೆ. ಪ್ಲೆçವುಡ್ ಮಾದರಿಯ ಫ್ಯಾಕ್ಟರಿಗಳಲ್ಲಿ ತಯಾರಾದ ವಸ್ತುಗಳು, ನಾಲ್ಕು ಅಡಿ ಅಗಲಕ್ಕೆ ಎಂಟು ಅಡಿ ಉದ್ದ ಇರುತ್ತವೆ. ಹಾಗಾಗಿ ನಾವು ವಾರ್ಡ್‌ರೋಬ್ ಶೆಲ್ಫ್ ಇತ್ಯಾದಿ ಮಾಡುವಾಗ, ಎರಡು ಅಡಿ ಅಗಲ ಬರುವಂತೆ ನೋಡಿಕೊಂಡರೆ, ಒಂದು ಹಲಗೆಯನ್ನು ಅರ್ಧಕ್ಕೆ ಕತ್ತರಿಸಿ ಉಪಯೋಗಿಸಬಹುದು. ಅದೇ ರೀತಿಯಲ್ಲಿ ಮೂರು ಅಡಿ ಅಗಲಕ್ಕೆ ಆರು ಅಡಿ ಉದ್ದ ಇದ್ದರೆ, ಇದನ್ನೂ ಕೂಡ ಅರ್ಧಕ್ಕೆ ಕತ್ತರಿಸಿ ಒಂದೂವರೆ ಅಡಿ ಶೆಲ್ಫ್ ಮಾಡಿಕೊಳ್ಳಬಹುದು. ಹೀಗೆ ನಾವು ಮಾರುಕಟ್ಟೆಯಲ್ಲಿ ಸಿಗುವ ಅಳತೆಯ ಅರ್ಧ, ಕಾಲುಭಾಗ ಇತ್ಯಾದಿ ಅಗಲ ಇರುವಂತೆ ನೋಡಿಕೊಂಡರೆ, ತ್ಯಾಜ್ಯದ ರಾಶಿ ಕಡಿಮೆಯಾಗುತ್ತದೆ. ವೇಸ್ಟೇಜ್ ಕಡಿಮೆ ಆಗಬೇಕು ಎಂದು ನಾವು ನಿರ್ಧರಿಸಿದರೆ, ಹಲಗೆಗಳನ್ನು ಜಾಣತನದಿಂದ ವಿಭಜಿಸಿ, ಸಣ್ಣ ಹಲಗೆಯೂ ಹಾಳಾಗದಂತೆ ವಿವಿಧ ಅಳತೆಗಳನ್ನು ಸರಿತೂಗಿಸಬೇಕು. ಕೆಲವೊಮ್ಮೆ ಜಾಯಿಂಟ್ಸ್ ಬರುವುದಾದರೂ ಅದನ್ನೂ ಜಾಣ್ಮೆಯಿಂದ ನಿರ್ವಹಿಸಿದರೆ, ಕಂಡೂ ಕಾಣದಂತೆ ಈ ಬೆಸುಗೆಗಳು ಬರುವಂತೆ ಮಾಡಬಹುದು. ಹೇಳಿ ಕೇಳಿ ಇವೆಲ್ಲ ಸಣ್ಣಸಣ್ಣ ಮರದ ಪದರ ಅಥವಾ ತುಂಡುಗಳನ್ನು ಅಂಟುಗಳಿಂದ ಬೆಸೆದೇ ತಯಾರು ಮಾಡುವುದು. ಹಾಗಾಗಿ, ನಮ್ಮ ಮನೆಯಲ್ಲೊಂದಷ್ಟು ಜಾಯಿಂಟ್ಸ್ ಬಂದರೆ ಅದೇನೂ ತೊಂದರೆದಾಯಕವಲ್ಲ!
ಸಂಕೀರ್ಣ ಡಿಸೈನ್ ಕಟ್ಟಿಂಗ್
ಹಲಗೆಗಳನ್ನು ಅರ್ಧ, ಕಾಲು ಭಾಗ ಇತ್ಯಾದಿಯಾಗೇ ತುಂಡು ಮಾಡಬೇಕು ಎಂದೇನೂ ಇಲ್ಲ. ನಾಲ್ಕು ಅಡಿ ಅಗಲದ ಶೀಟಿನಲ್ಲಿ ಒಂದು ಹಲಗೆಯ ಅಗಲ ಒಂದೂವರೆ ಅಡಿ ಇದ್ದು, ಮಿಕ್ಕ ಎರಡೂವರೆ ಶೀಟ್‌ನಲ್ಲಿ ಎರಡು ಒಂದೂಕಾಲು ಅಡಿ ಅಗಲದ ಹಲಗೆ ಬರುವುದರಿಂದ, ಇವನ್ನು ಶೆಲ್ಫ್ಗಳಿಗೆ ಧಾರಾಳವಾಗಿ ಉಪಯೋಗಿಸಬಹುದು. ಇದೇ ರೀತಿಯಲ್ಲಿ ನಾವು ಪ್ಲೆ„ವುಡ್- ಬ್ಲಾಕ್‌ಬೋರ್ಡ್‌ಗಳಿಗೆ ಮೇಲ್ಮೆ„ಯಾಗಿ ಅಂಟಿಸುವ ಲ್ಯಾಮಿನೇಟ್‌ಗಳನ್ನೂ ಹೆಚ್ಚು ವೇಸ್ಟೇಜ್ ಬಾರದ ರೀತಿಯಲ್ಲಿ ವಿನ್ಯಾಸ ಮಾಡಿಕೊಂಡು ಕತ್ತರಿಸಿದರೆ, ಸಾಕಷ್ಟು ಉಳಿತಾಯ ಆಗುತ್ತದೆ. ಕೆಲವೊಮ್ಮೆ ನಾಲ್ಕಾರು ಅಳತೆಯ ವಿವಿಧ ಉದ್ದ- ಅಗಲದ ತುಂಡುಗಳು ಬೇಕಾದಾಗ, ಒಂದೇ ಹಲಗೆಯಲ್ಲಿ ಕತ್ತರಿಸುವುದು ತಾಳ್ಮೆಯನ್ನೇ ಪರೀಕ್ಷಿಸುತ್ತದೆ. ಇಂಥ ಸಮಯದಲ್ಲಿ ಖಾಲಿ ಹಾಳೆಯಲ್ಲಿ ನಮಗೆ ಬೇಕಾದ ಅಳತೆಗಳ ಚಿತ್ರಣವನ್ನು ಬರೆದುಕೊಂಡು, ಅದು ನಮ್ಮ ಹತ್ತಿರ ಇರುವ ಹಲಗೆಯಲ್ಲಿ ಹೇಗೆ ಕುಳಿತರೆ ಕಡಿಮೆ ವೇಸ್ಟ್ ಆಗುತ್ತದೆ ಎಂದು ನಿರ್ಧರಿಸಬೇಕಾಗುತ್ತದೆ. ಅದೇ ರೀತಿ ಕತ್ತರಿಸುವ ಮೊದಲು ನಮಗೆ ಬೇಕಾದ ಎಲ್ಲ ತುಂಡುಗಳೂ ಬರುತ್ತಿವೆಯೇ? ಎಂದು ನೋಡಿ ನಂತರ ಮುಂದುವರಿಯಬೇಕಾಗುತ್ತದೆ. ಇದಕ್ಕಾಗಿ ನಾವು ಹಲಗೆಗಳ ಮೇಲೆಯೇ ಅಳತೆಗೆ ತಕ್ಕಂತೆ ಗುರುತು ಹಾಕಿಕೊಂಡು ಮಾರ್ಕಿನ ಪ್ರಕಾರ ಕತ್ತರಿಸುವುದು ಒಳ್ಳೆಯದು. ಸಾಮಾನ್ಯವಾಗಿ ನುರಿತ ಕಾಪೆìಂಟರ್‌ಗಳು ಅವರಾಗಿಯೇ ಈ ಎಲ್ಲ ಕಸರತ್ತುಗಳನ್ನು ಮಾಡುತ್ತಾರೆ. ಆದರೆ, ಈಗಿನ ಕಾಲದಲ್ಲಿ ಹೆಚ್ಚು ಅನುಭವ ಇರುವ ಬಡಗಿಗಳು ಸಿಗುವುದು ಕಷ್ಟ, ಹಾಗಾಗಿ, ಅವರ ಮೇಲೆ ನಿಗಾ ವಹಿಸಿ, ಸೂಚನೆಗಳನ್ನು ಕೊಡುವ ಮೂಲಕ ಸಾಕಷ್ಟು ಉಳಿತಾಯವನ್ನು ಮಾಡಬಹುದು.
ಮೊದಲು ರಟ್ಟಿನ ಮೇಲೆ ಪ್ರಯೋಗಿಸಿ
ವಿನ್ಯಾಸ ಹೆಚ್ಚು ಸಂಕೀರ್ಣವಾದಷ್ಟು ವೇಸ್ಟೇಜ್ ಹೆಚ್ಚು ಎಂದು ಅನ್ನಿಸಬಹುದು. ಆದರೆ ನಾವು ಇಲ್ಲೂ ಸ್ವಲ್ಪ ಎಚ್ಚರದಿಂದ ಇದ್ದರೆ, ತ್ಯಾಜ್ಯದ ರಾಶಿ ಕಡಿಮೆಯಾಗುತ್ತದೆ. ಹೇಳಿಕೇಳಿ ಮರಮುಟ್ಟುಗಳು- ಲ್ಯಾಮಿನೇಟ್‌ಗಳು ದುಬಾರಿ. ಹಾಗಾಗಿ ವಿವಿಧ ವಿನ್ಯಾಸಗಳು ಬಂದರೆ, ಅವನ್ನು ಕಾರ್ಡ್‌ಬೋರ್ಡ್(ರಟ್ಟು ) ಬಳಸಿ ಆಕಾರ ನಿರ್ಧರಿಸಿ, ನಂತರವೇ ಕಟ್ಟಿಂಗ್ ಮಾಡಬೇಕು. ಇದು ಹೆಚ್ಚು ವೇಳೆ ತೆಗೆದುಕೊಂಡರೂ ರಟ್ಟು ಅಗ್ಗದ ವಸ್ತು, ಅದನ್ನು ವೇಸ್ಟ್ ಮಾಡಿದರೂ ಪರವಾಗಿಲ್ಲ, ಆದರೆ ದುಬಾರಿ ವಸ್ತುಗಳು ಹಾಳಾಗದಂತೆ ತಡೆಯಲು ಈ ಟೆಂಪ್ಲೇಟ್‌ಗಳು ಬಹಳ ಅನುಕೂಲಕರ. ಒಮ್ಮೆ ಅಳತೆ ತಪ್ಪಿದರೆ, ಫಿನಿಶಿಂಗ್ ವಸ್ತುಗಳನ್ನು ರಿಪೇರಿ ಮಾಡುವುದು ಸುಲಭವಲ್ಲ. ಈ ತೊಂದರೆಗೆ ಹೋಲಿಸಿದರೆ, ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅನ್ನಿಸಿದರೂ ರಟ್ಟಿನಿಂದ ಮೊದಲು ಕತ್ತರಿಸಿ ನೋಡಿ ನಂತರವೇ ಮುಂದುವರಿಯುವುದು ಉತ್ತಮ. ಎಲ್ಲರಿಗೂ ತಮ್ಮ ಮನೆಯಲ್ಲಿ ಏನಾದರೂ ಒಂದು ವಿನೂತನವಾದದ್ದು, ವಿಭಿನ್ನವಾದದ್ದು ಇರಬೇಕು ಎಂಬ ಭಾವನೆ ಇದ್ದೇ ಇರುತ್ತದೆ. ಹಾಗಾಗಿ, ನಾವು ವೈವಿಧ್ಯಮಯ ವಿನ್ಯಾಸಗಳನ್ನು ಕೈಬಿಡುವಂತಿಲ್ಲ! ಆದ್ದರಿಂದ ನಾವು ವಿನ್ಯಾಸ ಹೆಚ್ಚು ಸಂಕೀರ್ಣವಾದಷ್ಟೂ ಹೆಚ್ಚು ಕಾಳಜಿ ವಹಿಸಿ ವೇಸ್ಟೇಜ್ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
ಸಮಯ ಹಾಗೂ ಹಣದ ಬ್ಯಾಲೆನ್ಸ್
ಎಲ್ಲವನ್ನೂ ಲೆಕ್ಕಾಚಾರ ಮಾಡುತ್ತಾ ಕೂತರೆ ಬಡಗಿಗಳಿಗೆ ತಮ್ಮ ವೇಳೆ ವ್ಯರ್ಥವಾಗುತ್ತಿದೆ ಎಂದೆನಿಸುತ್ತದೆ. ಅವರಿಗೆ ಒಂದು ದಿನದಲ್ಲಿ ಇಷ್ಟು ಕೆಲಸ ಆಗಿಬಿಡಬೇಕು ಎಂದಿರುತ್ತದೆ. ಮನೆ ಕಟ್ಟುವವರು ಮರಮುಟ್ಟುಗಳನ್ನು ಸರಬರಾಜು ಮಾಡುತ್ತಿದ್ದರೆ, ಅದರ ಬೆಲೆ ಹಾಗೂ ವೇಸ್ಟ್ ಆಗುವುದನ್ನು ಕಡಿಮೆ ಮಾಡಬೇಕು ಎಂಬ ಕಾಳಜಿ ಸಾಮಾನ್ಯವಾಗಿ ಕಾಪೆìಂಟರ್‌ಗಳಿಗೆ ಇರುವುದಿಲ್ಲ! ಮನೆ ಯಜಮಾನರಿಗೆ ಕೆಲಸ ಸ್ವಲ್ಪ ನಿಧಾನ ಆದರೂ ಪರವಾಗಿಲ್ಲ, ಹೆಚ್ಚು ವೇಸ್ಟ್ ಆಗಬಾರದು ಎಂದಿರುತ್ತದೆ. ಹಾಗಾಗಿ ಇಲ್ಲಿ ಎರಡು ಆಸಕ್ತಿಗಳನ್ನೂ ಸರಿದೂಗಿಸಿಕೊಂಡು ಹೋಗುವುದು ಅಗತ್ಯ. ಆ ಕಡೆ ಬಡಗಿಗಳಿಗೆ ಹೆಚ್ಚು ವೇಳೆ ತೆಗೆದುಕೊಳ್ಳದ ರೀತಿಯಲ್ಲಿ, ಹಾಗೆಯೇ ಹೆಚ್ಚು ತ್ಯಾಜ್ಯ ಉಂಟಾಗದಂತೆಯೂ ಜಾಣ್ಮೆಯಿಂದ ನೋಡಿಕೊಳ್ಳಬೇಕು. ಹಾಗಾಗುವಂತೆ ಮಾಡಲು ಇರುವ ಸುಲಭ ವಿಧಾನ ಎಂದರೆ, ಬಡಗಿಗಳಿಂದ ಮೊದಲೇ ಎಷ್ಟು ವಸ್ತುಗಳು ಬೇಕು ಹಾಗೂ ಏಕೆ ಎಂಬುದನ್ನು ವಿವರಿಸುವಂತೆ ಹೇಳಬೇಕು. ಹೆಚ್ಚು ತ್ಯಾಜ್ಯ ಉಂಟಾಗದ ರೀತಿಯಲ್ಲಿ ಲೆಕ್ಕ ಹಾಕಲಾಗಿದೆಯೇ? ಎಂದು ಪರಿಶೀಲಿಸಬೇಕು. ಸಾಮಾನ್ಯವಾಗಿ ಲೆಕ್ಕಾಚಾರದಲ್ಲಿ ಬಡಗಿಗಳೇ ಚಾಣಕ್ಯರಾಗಿರುತ್ತಾರೆ. ಯಾರಾದರೂ ತಮ್ಮ ಮೇಲೆ ನಿಗಾ ಇಡುತ್ತಿದ್ದಾರೆ ಎಂಬುದು ತಿಳಿದರೆ, ಅವರೇ ಎಲ್ಲವನ್ನೂ ಲೆಕ್ಕಾಚಾರದ ಪ್ರಕಾರ ಮಾಡಿ ಸಾಕಷ್ಟು ಹಣ ಉಳಿಸಬಲ್ಲರು!
ಹೆಚ್ಚಿನ ಮಾಹಿತಿಗೆ ಫೋನ್ 98441 32826
– ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.