ಮಕ್ಕಳಾಟ ಅಂದ್ಕೊಂಡ್ರಾ?
Team Udayavani, Jan 29, 2019, 12:30 AM IST
ಎಲ್ಲೋ ಸೋಫಾದ ಮೇಲೆ ಕೂತಿರುತ್ತೀರಿ, ಪಕ್ಕದಲ್ಲಿ ಬಬಲ್ ರ್ಯಾಪ್ ಇರುತ್ತೆ. ಅದನ್ನು ಪಟಕ್ ಪಟಕ್ ಮಾಡದೇ ಇರಲು ನಿಮಗೆ ಮನಸ್ಸೇ ಬರೋಲ್ಲ. ಯಾರ ಜತೆಯೋ ಮಾತಾಡುತ್ತಾ, ನಿಮ್ಮ ಕೈಗಳು ಸದ್ದಿಲ್ಲದೇ, ಆ ಬಬಲ್ ಗುಳ್ಳೆಗಳನ್ನು ಒಡೆದಿದ್ದು ನಿಮ್ಮ ಸ್ಮತಿಗೇ ಬಂದಿರೋದಿಲ್ಲ… ಯಾಕೆ ಹೀಗೆಲ್ಲ ಆಗುತ್ತೆ?
“ನನ್ನ ತುಟಿ ಮೇಲೆ ಮೀಸೆ ಮೂಡಿರಬಹುದು; ಅದೂ ಪುಟ್ಟದು ಬಿಡಿ. ನನ್ನ ಎತ್ತರ ನಾಲ್ಕೈದು ಅಡಿಯನ್ನೂ ಮೀರಿರಬಹುದು; ಅದೂ ಮೋಟುದ್ದವೇ ತಾನೇ? ಆದರೆ, ನನ್ನೊಳಗಿನ ಮಗುವಿಗೆ ಇನ್ನೂ ಮೀಸೆಯೇ ಚಿಗುರಿಲ್ಲ. ಅದಿನ್ನೂ ಅಂಗೈ ಅಗಲ ತೂಗಬಹುದಾದ ಕೂಸು…’ - ಚಾರ್ಲಿ ಚಾಪ್ಲಿನ್ ಹೀಗೆ ಹೇಳುತ್ತಾ, ಪುಟ್ಟ ಮಗುವಿನಂತೆ ನಗುತ್ತಾರೆ. ಚಾಪ್ಲಿನ್ ತಮ್ಮ ಹಾಸ್ಯ ನಟನೆಯ ಅಷ್ಟೂ ಕ್ರೆಡಿಟ್ಟನ್ನು ಕೊಡುವುದು ಅವರೊಳಗಿದ್ದ ಪುಟ್ಟ ಮಗುವಿಗೆ. ಆ ಪುಟ್ಟ ಮಗುವೇ ಅವರ ಬದುಕಿನ ಅಷ್ಟೂ ಯಶಸ್ಸಿಗೆ ಕಾರಣ ಅನ್ನೋ ಮಾತುಂಟು.
ಅವರೊಳಗೇನೋ ಮಗುವಿದೆ, ಅದೇ ಅವರನ್ನು ಬದುಕಿನಲ್ಲಿ ಗೆಲ್ಲಿಸಿತು ಕೂಡ. ನಮ್ಮೊಳಗೂ ಅಂಥ ಮಗುವಿದೆಯೇ? “ಇಲ್ಲ’ ಎನ್ನಲು ಕಾರಣವೇ ಇಲ್ಲವಲ್ಲ. ನಾವೆಲ್ಲ ಬಾಲ್ಯ ದಾಟಿದ್ದೇವೆ. ತಾರುಣ್ಯ, ಯವ್ವನದ ಹೊಸ್ತಿಲಲ್ಲಿದ್ದೇವೆ. ನಮ್ಮೊಳಗೆಲ್ಲಿದೆ ಆ ಪುಟಾಣಿ ಅಂತ ಎಲ್ಲೆಲ್ಲೂ ಹುಡುಕಾಟ ನಡೆಸಬೇಕಿಲ್ಲ. ಅದು ಬೇರೆ ಬೇರೆ ಸಂದರ್ಭಗಳಲ್ಲಿ ನಮಗೂ ಗೊತ್ತಿಲ್ಲದಂತೆ ಜಗತ್ತಿಗೆ ಕಾಣುತ್ತಾ ಹೋಗುತ್ತದೆ. ಅನೇಕ ಸಲ ಹಾಗೆ ಗೋಚರಗೊಂಡು, ನಮ್ಮನ್ನೇ ಅದು ವಿಸ್ಮಯಕ್ಕೆ ತಳ್ಳಿರುತ್ತದೆ.
ಹೇಗೆ ಅಂದಿರಾ? ಎಲ್ಲೋ ಸೋಫಾದ ಮೇಲೆ ಕೂತಿರುತ್ತೀರಿ, ಪಕ್ಕದಲ್ಲಿ ಬಬಲ್ ರ್ಯಾಪ್ ಇರುತ್ತೆ. ಅದನ್ನು ಪಟಕ್ ಪಟಕ್ ಮಾಡದೇ ಇರಲು ನಿಮಗೆ ಮನಸ್ಸೇ ಬರೋಲ್ಲ. ಯಾರ ಜತೆಯೋ ಮಾತಾಡುತ್ತಾ, ನಿಮ್ಮ ಕೈಗಳು ಸದ್ದಿಲ್ಲದೇ, ಆ ಬಬಲ್ ಗುಳ್ಳೆಗಳನ್ನು ಒಡೆದಿದ್ದು ನಿಮ್ಮ ಸ್ಮತಿಗೇ ಬಂದಿರೋದಿಲ್ಲ. ಅದನ್ನು ನೀವು ಬೇಕಂತ ಮಾಡಿದಿರಾ? ಅಥವಾ ಅದು ನಿಮ್ಮ ಯವ್ವನ ಮಾಡಿದ ಕಿತಾಪತಿಯೇ? ಖಂಡಿತವಾಗಿಯೂ ಅಲ್ಲ. ಒಳಗೊಂದು ಪುಟಾಣಿ ಮನಸ್ಸಿದೆಯಲ್ಲ, ಅದರ ರಂಜನೆಗೆ, ಅದರ ಜೋಶ್‌ಗೆ ಇವೆಲ್ಲ ಕ್ರಿಯೆಗಳು ಬೇಕೇ ಬೇಕು.
ಜ್ವರ ಬಂದಿದೆ. ವೈದ್ಯರ ಬಳಿ ಹೋಗ್ತಿರಿ. “ಎಲ್ಲಿ ಕೈ ಕೊಡಿ’ ಎನ್ನುತ್ತಾ, ಅವರು ಇಂಜೆಕ್ಷನ್‌ನ ಸೂಜಿಯನ್ನು ನಭದ ದಿಕ್ಕಿನತ್ತ ಹಿಡಿಯುತ್ತಾರೆ. “ಇಂಜೆಕ್ಷನ್ನಾ? ಅಯ್ಯೋ, ಕತೆ ಕೆಟ್ಟಿತು… ‘ ಎನ್ನುವ ಸಣ್ಣ ಅಳುಕೊಂದು ನಿಮ್ಮೊಳಗಿಂದ ನುಗ್ಗಿಬರುತ್ತೆ. ಯಾರೋ ಒಳಗೊಳಗೇ ಅತ್ತಂಗಾಗುತ್ತೆ. ನಿಮ್ಮ ಅರಿವಿಲ್ಲದೇ, ಕಣ್ಣಂಚು ಒದ್ದೆ ಆಗ್ತಿರುತ್ತೆ. ಇಪ್ಪತ್ತು- ಮೂವತ್ತು ವರುಷದ ದಾಟಿದ ದೇಹಕ್ಕೆ ಒಂದು ಸಣ್ಣ ಇಂಜೆಕ್ಷನ್ ನಡುಕ ಹುಟ್ಟಿಸುತ್ತಿದೆ ಅಂತಾದ್ರೆ, ಒಳಗೊಂದು ಮಗು ಇರಲೇಬೇಕಲ್ವೇ?
ಅಮ್ಮನನ್ನು ಬಿಟ್ಟಿರಲಾಗದೇ ಚಡಪಡಿಕೆ ಹುಟ್ಟಿದರೆ; ಐಸ್‌ಕ್ರೀಮನ್ನೋ, ಚಾಕ್ಲೆಟನ್ನೋ ಕಂಡಾಗ ಬಾಯಿ ಚಪ್ಪರಿಸುವ ಆಸೆ ಹುಟ್ಟಿದರೆ; ಬಲೂನ್ ಕಂಡಾಗ ಆಟಾಡ್ಬೇಕು ಅನ್ನೋ ಆಸೆ ಜಿನುಗಿದರೆ; ಪತ್ರಿಕೆಯಲ್ಲಿ ಕಾಟೂìನ್ ನೋಡುತ್ತಾ ನಗು ಹೊಮ್ಮಿಸಿದರೆ; ಮಳೆ ಬಂದಾಗ ಪುಳಕಗೊಂಡು ಮೀಯುವ ಮನಸ್ಸಾದರೆ; ಒಂದೊಂದೇ ಬಬೂಲ್ ಗುಳ್ಳೆಗಳನ್ನು ಗಾಳಿಯಲ್ಲಿ ತೇಲಿಸುವುದರಲ್ಲಿ ಸುಖ ಸಿಕ್ಕರೆ; ಟಿವಿಯಲ್ಲಿ ಚಾನೆಲ್‌ಗಳನ್ನು ಓಡಿಸುವಾಗ, ಟಾಮ್ ಆ್ಯಂಡ್ ಜೆರ್ರಿ ನೋಡಿ, ಬಾಲ್ಯದ ನೆನಪಿಗೆ ಸರ್ರನೆ ಜಾರಿದರೆ… ಚಾಪ್ಲಿನ್ ಒಳಗಿನ ಕೂಸು, ನಿಮ್ಮೊಳಗೂ ಇದೆಯೆಂದು ಹಿಗ್ಗಬಹುದು.
“ಹೊರಗೆ ಒರಟ ಆದ್ರೂ ಅವರ ಒಳಗೊಂದು ಮಗು ಮನಸ್ಸಿದೆ’ ಅನ್ನೋ ಕೆಲವರ ಮಾತುಗಳು ನಿಮ್ಮ ಕಿವಿಗೂ ಬಿದ್ದಿರಬಹುದು. ಅಂದರೆ, ಬಾಯಿ ಮಾತಿನಲ್ಲಿ ಅಥವಾ ತೋರಿಕೆಗೆ ಅವರೇನೇ ಹೇಳಿದರೂ, ಅವರೇನೇ ವರ್ತನೆ ತೋರಿದರೂ, ಅವರೊಳಗಿರುವ ಅಂತಃಕರಣಕ್ಕೆ ಸ್ಪಂದಿಸುವುದು ಗೊತ್ತು ಎನ್ನುವುದು ಈ ಮಾತಿನ ತಾತ್ವರ್ಯ.
ಬಾಲ್ಯದಿಂದ ಜಿಗಿದು, ವಯಸ್ಸು ವಯಸ್ಸುಗಳನ್ನು ಮೀರುತ್ತಾ ಹೋದರೂ, ಪ್ರತಿಯೊಬ್ಬರಲ್ಲೂ ಒಂದು ಮಗು ಇದ್ದೇ ಇರುತ್ತೆ. ಆ ಮಗುವಿನ ಪ್ರತಿನಿಧಿಯೇ ನಮ್ಮ ಮೊಗದಲ್ಲಿ ಹೊಮ್ಮುವ ನಗು. ಅದು ಎಂದಿಗೂ ಅಳಿಯದ ಬಾಲ್ಯದ ಬಳುವಳಿ. ತಾರುಣ್ಯದಾಚೆಗೆ ನಮ್ಮೊಳಗೆ ಸೇರುವ ಕೋಪ, ತಾಪ, ಅಹಂಗಳ ನಡುವೆ ಆ ನಗುವನ್ನು, ಮಗುವಿನಂಥ ಪುಟ್ಟ ಪುಟ್ಟ ನಡವಳಿಕೆಗಳನ್ನು ಸಾಕಿಕೊಳ್ಳುವುದು ಕೂಡ ನಮ್ಮ ವ್ಯಕ್ತಿತ್ವವನ್ನು ಹೊಳಪೇರಿಸುವಂತೆ ಮಾಡುವ ಅಮೂಲ್ಯ ಸಂಗತಿ.
ಸಣ್ಣಪುಟ್ಟ ಖುಷಿಗಳಿಗೂ ಹಿಗ್ಗುವ, ಎಲ್ಲರ ಸಂತೋಷಗಳಲ್ಲೂ ಒಂದಾಗುವ ಸಂತಸವೇ ಮಗುವಿನ ಮನಸ್ಸು. ಅದಿದ್ದರೇನೇ, ಜಗತ್ತನ್ನು ಮಂತ್ರಮುಗ್ಧಗೊಳಿಸಲು ಸಾಧ್ಯ ಎನ್ನುವ ಗುಟ್ಟೇ, ಯಶಸ್ಸಿನ ಮೊದಲ ಮೆಟ್ಟಿಲು.
ಸಾಯಿ ಕಿರಣ್ ಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.