ಪ್ರಕೃತಿ ಕತೃ ಪರಿಚಯ
Team Udayavani, Nov 13, 2018, 6:00 AM IST
ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ತಲೆ ತಗ್ಗಿಸಿ ಪಠ್ಯ ಪುಸ್ತಕದ ಪುಟಗಳನ್ನು ದಿಟ್ಟಿಸುತ್ತಾ “ಇದು ಮರ ಇದು ನದಿ’ ಎಂದು ಉರು ಹೊಡೆಸುವುದಿಲ್ಲ ಈ ಟೀಚರ್. ಪ್ರಕೃತಿ ಮಧ್ಯೆಯೇ ಮಕ್ಕಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಿ ಪ್ರಕೃತಿ ಪಾಠವನ್ನು ಹೇಳಿಕೊಡುತ್ತಾರಿವರು! ಟೀಚರ್ ಷಡಕ್ಷರಿಯವರ ಬಳಿ ಪಾಠ ಹೇಳಿಸಿಕೊಂಡವರು ಅವರದ್ದೇ ನೇಚರನ್ನು ಮೈಗೂಡಿಸಿಕೊಂಡು ಪರಿಸರಪ್ರೇಮಿಗಳಾಗಿದ್ದಾರೆ, ಕೆಲವರು ಪ್ರಕೃತಿ ಶಾಸ್ತ್ರಜ್ಞರೂ ಆಗಿದ್ದಾರೆ…
ಗುದ್ದಲಿಗೆ ಕಾವು ಹಾಕೋಕೆ ಮರ ಯಾಕೆ ಬಳಸ್ತಾರೆ? ಕಾಫಿ ಗಿಡ ಹೂ ಕಟ್ಟಬೇಕಾದರೆ ಮಾವು ಹಲಸು ಯಾಕೆ ಬೆಳೆಸ್ತಾರೆ? ಇವೆಲ್ಲಾ ಎಷ್ಟು ಸರಳ ಪ್ರಶ್ನೆಗಳು ಅನ್ನಿಸುತ್ತಿವೆ ಅಲ್ವಾ? ಹಾಗಿದ್ದರೆ ಉತ್ತರ ಹೇಳಿ ನೋಡೋಣ! ಇಷ್ಟಕ್ಕೂ ಇವು ದೊಡ್ಡವರು ಕೇಳಿದ ಪ್ರಶ್ನೆಗಳಲ್ಲ. ಪುಟ್ಟ ಪುಟ್ಟ ಮಕ್ಕಳು ಕೇಳಿದವು. ಚಿಕ್ಕಮಗಳೂರಿನ ಉಪ್ಪಳ್ಳಿ ಮಾಡೆಲ್ ಶಾಲೆಯ ಮಕ್ಕಳು ಕೇಳಿದ ಪ್ರಶ್ನೆಗಳಿವು. ಎಲ್ಲರಿಗೂ ಈ ಪ್ರಶ್ನೆಗಳು ಹೊಳೆಯುವುದಿಲ್ಲ. ಏಕೆಂದರೆ, ಪ್ರಶ್ನೆಗಳು ಮೂಡಲೂ ವಿಶಿಷ್ಟ ಬಗೆಯ ಪರಿಸರ, ವಾತಾವರಣ ಬೇಕು. ಅದನ್ನು ನಿರ್ಮಿಸಿದವರು ಷಡಕ್ಷರಿ ಸರ್.
ರಿಪೇರಿ ಮಾಡಲು ಬರಬೇಕು…
ತೇಜಸ್ವಿಯವರ ಕರ್ವಾಲೊ ಕಾದಂಬರಿ ಓದಿದ್ದರೆ ನ್ಯಾಚುರಲಿಸ್ಟ್ ಮಂದಣ್ಣನ ಪರಿಚಯ ಇದ್ದೇ ಇರುತ್ತೆ. ಯಾವುದೇ ಡಿಗ್ರಿಯನ್ನು ಪಡೆದುಕೊಳ್ಳದ, ಕೊಂಪೆಯಲ್ಲಿ ವಾಸಿಸುವ ಮಂದಣ್ಣ ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನ ಯಾವುದೇ ಉದ್ಧಾಮ ಪಂಡಿತನಿಗೂ ಕಡಿಮೆಯಿರಲಿಲ್ಲ. ಇದರರ್ಥ ಜ್ಞಾನ ಅನ್ನೋದು ನಾಲ್ಕಿಂಚಿನ ಸರ್ಟಿಫಿಕೇಟುಗಳಿಗೆ ಸೀಮಿತವಾಗಬಾರದು ಎಂದು. ಇದೇ ಷಡಕ್ಷರಿ ಸರ್ ಅವರ ಆಶಯ. “ಮಕ್ಕಳು ಬರೀ ಪಠ್ಯಪುಸ್ತಕ ಓದಿ ಮಾರ್ಕ್ಸ್ ಗಳಿಸಿದರಷ್ಟೇ ಸಾಲದು. ರಿಪೇರಿ ಮಾಡಲು ಬರಬೇಕು. ಯಾವುದೇ ಒಂದು ವಸ್ತು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಗೊತ್ತಿರಬೇಕು. ಅದರ ಹಿಂದಿನ ತಂತ್ರಜ್ಞಾನವನ್ನು ತಿಳಿದುಕೊಂಡಿರಬೇಕು. ಸುತ್ತಮುತ್ತಲ ಪರಿಸರವನ್ನು ಗಮನಿಸುತ್ತಿರಬೇಕು’. ಮಾಡೆಲ್ ಶಾಲೆಯ ಮಕ್ಕಳಿಗೆ ಮರದ ಕಾಂಡದ ಮೇಲೆ ಕಲ್ಲು ಹೂ ಏಕೆ ಬೆಳೆಯುತ್ತೆ ಎಂಬುದನ್ನು ಹೇಳಿಕೊಡುತ್ತಾರೆ. ಕಾಂಡದ ಮೇಲಿನ ವರ್ತುಲ ವಿನ್ಯಾಸವನ್ನು ಗಮನಿಸಿ ದಿಕ್ಕು ಪತ್ತೆ ಮಾಡೋದು ಹೇಗೆ ಎಂಬುದನ್ನು ಕಲಿಸುತ್ತಾರೆ.
ದೊಡ್ಡವರಾಗೋದೇ ತಪ್ಪು
ಪ್ರಕೃತಿಯನ್ನು “ತಾಯಿ’ ಎಂದು ಕರೆಯುವುದು ಸುಮ್ಮನೆಯೇ ಅಲ್ಲ. ಭೂಮಿ ಮೇಲಿನ ಕೋಟ್ಯಾನುಕೋಟಿ ಜೀವಿಗಳನ್ನು ಪೊರೆಯುತ್ತಿದೆ ಪ್ರಕೃತಿ. ಹಿಂದೆ ಮನುಷ್ಯ ಮತ್ತು ಪ್ರಕೃತಿ ನಡುವೆ ಬಾಂಧವ್ಯವಿತ್ತು, ಮಮಕಾರವಿತ್ತು, ಭಕ್ತಿ ಇತ್ತು. ಮನುಷ್ಯ ಪ್ರಕೃತಿಯನ್ನು ಪೂಜಿಸುತ್ತಿದ್ದ. ಆದರೆ, ಈಗ ಕಾಡು ಬೇರೆಯದೇ ಅರ್ಥವನ್ನು ಪಡೆದುಕೊಂಡಿದೆ. ಉಪ್ಪಳ್ಳಿ ಶಾಲೆಯ ಸಮೀಪದ ಕಾಡಿನಲ್ಲಿ ಜಾಗ್ರಾ ಜೇಂಟ್ ಎನ್ನುವ ಹೆಸರಿನ ಸಾಗುವಾನಿ ಮರವೊಂದಿದೆ. ಅದೆಷ್ಟು ದೊಡ್ಡದೆಂದರೆ ನಾಲ್ಕೈದು ಮಕ್ಕಳು ಸೇರಿ ಅದನ್ನು ತಬ್ಬಿ ಸುತ್ತುವರಿಯಬಹುದಿತ್ತು. ಷಡಕ್ಷರಿ ಸರ್ ಮಕ್ಕಳನ್ನು ಅಲ್ಲಿಗೆ ತಪ್ಪದೆ ಕರೆದೊಯ್ಯುತ್ತಿದ್ದರು. ಮಕ್ಕಳು ಅದರ ಸುತ್ತ ಆಟವಾಡುತ್ತಾ ನಕ್ಕು ನಲಿಯುವುದನ್ನು ನೋಡುವುದೇ ಅವರಿಗೆ ಬಲು ಸಂತಸ. ಸನಿಹದಲ್ಲಿ ಅಧ್ಯಾಪಕರೊಬ್ಬರು ಮರವನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದರು. ಅವರನ್ನು ಮಾತಿಗೆಳೆದಾಗ ಆ ಅಧ್ಯಾಪಕ ಮಹಾಶಯರು, “ಸಾರ್ ಇಷ್ಟು ದೊಡ್ಡ ಮರವನ್ನು ಕಡಿದರೆ ಎಷ್ಟೊಂದು ಫನೀಚರ್‌ಗಳನ್ನು ಮಾಡಬಹುದಲ್ವಾ?’ ಎಂದು ಕೇಳಿದರು. ಅಡನೆಯೇ ಷಡಕ್ಷರಿಯವರ ಕಣ್ಣಿಗೆ ಬಿದ್ದಿದ್ದು ಮರದ ಸುತ್ತಲೂ ಸ್ವತ್ಛಂದವಾಗಿ ಆಡುತ್ತಿರುವ ಮಕ್ಕಳು! ಅವರನ್ನು ನೋಡಿ ಸರ್‌ಗೆ ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಎಷ್ಟೊಂದು ಕ್ರೂರಿಯಾಗುತ್ತಾನೆ ಎಂದು ಅನ್ನಿಸಿತ್ತು. ನಿಜ ತಾನೇ?
ಸಲೀಂ ಆಲಿ ಮತ್ತು ಕಾಪರ್ ಸಲ್ಫೆಟ್ ದ್ರಾವಣ
ಈ ಶಾಲೆಗೆ ಭಾರತದ ಹಕ್ಕಿ ಮನುಷ್ಯ ಸಲೀಂ ಆಲಿಯವರೂ ಎರಡೂರು ಬಾರಿ ಭೇಟಿ ನೀಡಿದ್ದಾರೆ. ಅವರು ಬಂದಾಗಲೆಲ್ಲಾ ಮಕ್ಕಳ ನೇಚರ್ ಕ್ಲಬ್ ವತಿಯಿಂದ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಷಡಕ್ಷರಿ ಸರ್. ಆಲಿಯವರದು ಮಕ್ಕಳ ಕುತೂಹಲವಂತೆ. ಮಕ್ಕಳು ಪೆದ್ದುಪೆದ್ದಾಗಿ ಕೇಳಿದ ಪ್ರಶ್ನೆಗಳಿಗೆಲ್ಲಾ ಮಕ್ಕಳ ಥರಾನೇ ಉತ್ತರಿಸುತ್ತಿದ್ದರಂತೆ. ಶಾಲೆಯ ಪುಟ್ಟ ಮ್ಯೂಸಿಯಂನಲ್ಲಿ ಸಮುದ್ರ ಪಾಚಿ ಗಿಡ ನೋಡಿ ಅವರಿಗೆ ಅಚ್ಚರಿಯಾಗಿತ್ತು. ಸಾಮಾನ್ಯವಾಗಿ ಕೆಮಿಕಲ್ ಬಳಸಿ ಸಂರಕ್ಷಿಸಿಟ್ಟ ಗಿಡ ಹಸಿರು ಬಣ್ಣವನ್ನು ಕಳೆದುಕೊಂಡುಬಿಡುತ್ತೆ. ನೀವು ಬಣ್ಣ ಹೇಗೆ ಕಾಪಾಡಿಕೊಂಡಿದ್ದೀರಿ ಎನ್ನುವುದು ಅವರ ಪ್ರಶ್ನೆ. ಸಕ್ಕರೆ ಮತ್ತು ಕಾಪರ್ ಸಲ್ಫೆಟ್ ದ್ರಾವಣ ಹಾಕಿದರೆ ಬಣ್ಣ ಕೆಡುವುದಿಲ್ಲ ಎಂದು ಷಡಕ್ಷರಿ ಸರ್ ರಹಸ್ಯ ಬಿಚ್ಚಿಟ್ಟಾಗ ಸಲೀಂ ಆಲಿಯವರು ಥ್ರಿಲ್ಲಾಗಿದ್ದರು!
ಹುಟ್ಟೂರು ಬಿಡಲಿಲ್ಲ…
ಮೂಲತಃ ಚಿಕ್ಕಮಗಳೂರಿನವರಾದ ಷಡಕ್ಷರಿ ಸರ್ ಆಗ ತಾನೇ ಬಿ.ಎಸ್ಸಿ. ಮುಗಿಸಿದ್ದರು. ಎಂ.ಸ್ಸಿ. ಸೀಟಿಗಾಗಿ ಕಾಯುತ್ತಾ ಮನೆಯಲ್ಲೇ ಕೂರುವುದೇಕೆಂದು ಮನೆ ಹತ್ತಿರದ ಮೌಂಟೇನ್ ವ್ಯೂ ಶಾಲೆಯಲ್ಲಿ ಅಧ್ಯಾಪಕರಾಗಿ ತಾತ್ಕಾಲಿಕವಾಗಿ ಸೇರಿದ್ದರು. ಅದಾಗಲೇ ಮಕ್ಕಳನ್ನು, ಪ್ರಕೃತಿ ನಡುವಿದ್ದ ಶಾಲೆಯನ್ನೂ ಹಚ್ಚಿಕೊಂಡಿದ್ದ ಷಡಕ್ಷರಿ ಸರ್ ಅವರಿಗೆ ಮುಂದೆ ಎಂ.ಎಸ್ಸಿ. ಸೀಟು ಸಿಕ್ಕಾಗ ಬಿಡುವ ಮನಸ್ಸಿರಲಿಲ್ಲ. ಹೆಚ್ಚಾಗಿ ಊರಲ್ಲೇ ಇರುವಂತೆ ಅಮ್ಮನ ಒತ್ತಾಸೆ ಬೇರೆ. ಹೀಗೆ ಮಾತೆ ಮತ್ತು ಪ್ರಕೃತಿ ಮಾತೆ ಇಬ್ಬರ ದೆಸೆಯಿಂದಲೂ ಸರ್ ಊರಲ್ಲೇ ಉಳಿಯುವಂತಾಯಿತು. ಅದೇ ಶಾಲೆಯಲ್ಲಿ ದಶಕಗಳ ಕಾಲ ಕೆಲಸ ಮಾಡಿ 1982ರಲ್ಲಿ ತಮ್ಮದೇ ಸ್ವಂತ ಶಾಲೆಯನ್ನು ತೆರೆದರು.
ಕಪ್ಪೆ ಚಿಪ್ಪು ಕಲೆಕ್ಷನ್
ಮಲೆನಾಡಿನಲ್ಲಿ ನೆಲೆಸಿದ್ದರೂ ಅವರ ಫೇವರಿಟ್ ಹವ್ಯಾಸ ಸಮುದ್ರದ ಚಿಪ್ಪು ಸಂಗ್ರಹ. ಇಲ್ಲಿಯವರೆಗೂ ಸುಮಾರು 300ಕ್ಕೂ ಹೆಚ್ಚು ಬಗೆಯ ಚಿಪ್ಪುಗಳನ್ನು ಸಂಗ್ರಹಿಸಿದ್ದಾರೆ. ಸಮುದ್ರ ಕಿನಾರೆಗಳಿಗೆ ಹೋದಾಗಲೆಲ್ಲಾ ಈಗಲೂ ಮಕ್ಕಳಂತೆ ನೀರಲ್ಲಿ ಥರ ಥರದ ಚಿಪ್ಪುಗಳನ್ನು ಹುಡುಕಿ ತರುತ್ತಾರೆ. ಅಮೆರಿಕಕ್ಕೆ ಹೋದವರು ಅಲ್ಲಿಂದ ಹಿಂದಿರುಗುವಾಗ ಚಾಕಲೇಟು, ಗಿಫುr ಪ್ಯಾಕೇಟುಗಳನ್ನು ತಂದರೆ, ಇವರು ಅಲ್ಲಿಂದಲೂ ಚಿಪ್ಪುಗಳನ್ನು ಹೊತ್ತು ತಂದಿದ್ದರು!
ಕೆಲ ದಿನಗಳ ಹಿಂದಷ್ಟೇ 1974ನೇ ಇಸವಿ ಬ್ಯಾಚಿನ ಸುಮಾರು 30 ಮಂದಿ ವಿದ್ಯಾರ್ಥಿಗಳು ನನ್ನ ನೋಡೋಕೆ ಅಂತ ಬಂದಿದ್ದರು. ಚಿಕ್ಕ ಮಕ್ಕಳಾಗಿದ್ದಾಗ ಅವರಿಗೆಲ್ಲಾ ನಾನು ಪರಿಸರಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದಿ ಅಂತ ರೆಕಮೆಂಡ್ ಮಾಡುತ್ತಿದ್ದೆ. ಅವರದನ್ನೆಲ್ಲಾ ನೆನಪಿಸಿಕೊಂಡು ಖುಷಿಪಟ್ಟರು. ಈಗ ಅವರಲ್ಲನೇಕರು ನಂಗಿಂತಲೂ ಜಾಸ್ತಿ ಪುಸ್ತಕ ಓದಿಬಿಟ್ಟಿದ್ದಾರೆ. ಕೆಲ ಪುಸ್ತಕಗಳನ್ನು ರೆಕಮೆಂಡ್ ಕೂಡಾ ಮಾಡಿದರು. ಒಬ್ಬ ಟೀಚರ್‌ನ ಪ್ರಯತ್ನ ಯಾವತ್ತೂ ವ್ಯರ್ಥ ಆಗಲ್ಲ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?
– ಷಡಕ್ಷರಿ, ಪ್ರಾಂಶುಪಾಲರು, ಮಾಡೆಲ್ ಶಾಲೆ, ಉಪ್ಪಳ್ಳಿ
– ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.