ಇದು ಬರೀ ಟೀ ಅಲ್ಲ, ಹ್ಯೂಮಾನಿ”ಟೀ’


Team Udayavani, May 1, 2018, 8:30 PM IST

s.jpg

ಇಸ್ರೋದ ಟೆಕ್ಕಿ ರಾಕೇಶ್‌ ನಯ್ಯರ್‌ ಎಂದೂ ಸೂರ್ಯ ಹುಟ್ಟುವುದನ್ನು ನೋಡಿಯೇ ಇರಲಿಲ್ಲ. ಈಗ ಒಂದು ಕಪ್‌ ಚಹಾ ಅವರನ್ನು ನಿತ್ಯ ಎಬ್ಬಿಸುತಿದೆ. ಒಂದು ಕಪ್‌ ಚಹಾ, ಒಂದು ಬಿಸ್ಕತ್ತು, ಒಂದು ನಗುವನ್ನು ಹಂಚುವ ಇವರ ಕಾರ್ಯ ಒಂದು ಮಾದರಿ.

ಬೆಳಗ್ಗೆ ಸಮಯ 5.15. ಆ ಹೊತ್ತಿಗೆ ಸೂರ್ಯನಿಗೆ ಇನ್ನೂ ಬೆಳಕೇ ಬಿಟ್ಟಿರುವುದಿಲ್ಲ. ಇಸ್ರೋ ಹಾರಿಬಿಟ್ಟ ಉಪಗ್ರಹಗಳು ನೂರೆಂಟು ಕಣ್ಣು ತೆರೆದು, ಬೇರಿನ್ನೇನಾದರೂ ಬೆಳಕಿನ ಶೋಧಕ್ಕೆ ಕಾದು ಕುಳಿತಿರುವಾಗ, ಅವುಗಳ ಕಣ್ತಪ್ಪಿಸಿಕೊಂಡ ಕಿಡಿಯೊಂದು, ಭೂಮಿ ಮೇಲಿನ ಅದೇ ಇಸ್ರೋದ ಟೆಕ್ಕಿಯೊಬ್ಬರ ಮನೆಯಲ್ಲಿ ಹೊತ್ತಿಕೊಳ್ಳುತ್ತದೆ. ಆ ಟೆಕ್ಕಿಯ ಅಪಾರ್ಟ್‌ಮೆಂಟ್‌ ಇರುವುದು ಬೆಂಗಳೂರಿನ ಮುರುಗೇಶ್‌ ಪಾಳ್ಯದಲ್ಲಿ. ಅಲ್ಲಿ ಧಗ್ಗನೆ ಹೊತ್ತಿಕೊಂಡಿದ್ದು ಒಂದು ದೊಡ್ಡ ಸ್ಟೌ ಅಷ್ಟೇ. ಅದರ ಮೇಲೆ ಅಗಲದ ಪಾತ್ರೆ. 25 ಲೀಟರ್‌ ಹಾಲು ಕುದಿಯುತಿದೆ. ಕೊತ ಕೊತನೆ ಸದ್ದುಗೈಯ್ಯುತ್ತಾ, ಮುಕ್ಕಾಲು ಕೆಜಿ ಮಂಡ್ಯದ ಸಕ್ಕರೆ, ಪಂಜಾಬಿನ ಅಮೃತ್‌ಸರದ ಚಾಯ್‌ ಮಸಾಲವನ್ನು ತನ್ನ ಬುರುಗಿನೊಳಗೆ ಬೆರೆಸಿಕೊಂಡು, ಅದು ಮೆಲ್ಲನೆ ಮೇಲೇರುತಿದೆ. ನಲವತ್ತು ನಿಮಿಷ ಕುದ್ದು ಆ ಹಾಲು ಚಹಾವಾಗಿ ರೂಪಾಂತರಗೊಳ್ಳುವುದನ್ನೇ ಕಾಯುತ್ತಿದ್ದಾರೆ ಟೆಕ್ಕಿ. ಅದನ್ನು ದೊಡ್ಡ ಕ್ಯಾಟಲ್‌ಗೆ ಹಾಕಿ, ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಮುಂದೆ ಟೆಕ್ಕಿ ಬಂದು ನಿಲ್ಲುವಾಗ ಸಮಯ 6.30.

  ಆ ಕಿದ್ವಾಯಿಯಲ್ಲಿ ಕಾಣಿಸುವ ಲೋಕವೇ ಬೇರೆ. ರಾತ್ರಿಯೆಲ್ಲ ನಿದ್ದೆಗೆಟ್ಟ ಕಣ್ಣುಗಳು, ಕಿಮೋಥೆರಪಿಯಂಥ ರೌದ್ರಚಿಕಿತ್ಸೆಯ ನೋವನ್ನುಂಡ ಜೀವಗಳು, ಇನ್ನೇನು ಉಸಿರೇ ನಿಂತುಹೋಗುವವನ ಪಾದಗಳನ್ನು ರಾತ್ರಿಯಿಡೀ ಕೈಯಿಂದ ತಿಕ್ಕಿ, ಕಾವು ಕೊಟ್ಟು, ನಾಲ್ಕು ನಿಮಿಷ ಹೆಚ್ಚು ಬದುಕಿಸಲು ಸಾಹಸಪಡುವ ಬಂಧುಗಳೆಲ್ಲ ಅಲ್ಲಿ ಇಷ್ಟದ ದೇವರುಗಳನ್ನು ಪ್ರಾರ್ಥಿಸುತ್ತಾ ಕುಳಿತಿರುವರು. ಅವರೆಲ್ಲರ ಮುಂದೆ ಟೆಕ್ಕಿ ರಾಜೇಶ್‌ ನಯ್ಯರ್‌ ಒಂದು ಟ್ರೇ ಹಿಡಿದು ನಿಲ್ಲುತ್ತಾರೆ. ನೆಮ್ಮದಿಗಾಗಿ ತಹತಹಿಸುತ್ತಿರುವ ಆ ಜೀವಗಳ ಕೈ ಹಿಡಿದು, ಮುಗುಳು ಚೆಲ್ಲುತ್ತಾ, ಒಂದು ಕಪ್‌ ಚಹಾ ಕೊಟ್ಟು, ರಾಕೇಶ್‌ ಹೇಳುವುದಿಷ್ಟು; “ಸರ್‌, ಈ ಚಾಯ್‌ ತಗೊಳ್ಳಿ. ನಿಮ್ಮ ನೋವು, ದುಃಖವೆಲ್ಲ ದೂರವಾಗುತ್ತೆ’. 

  ಚಹಾದೊಂದಿಗೆ 2 ರೂಪಾಯಿಯ ಪಾರ್ಲೆಜಿ ಬಿಸ್ಕತ್ತಿನ ಪೊಟ್ಟಣವನ್ನೂ ಅವರ ಕೈಗಿಡುತ್ತಾರೆ. ಆ ಮುಂಜಾನೆಯಲ್ಲಿ ಸರಿಸುಮಾರು 800 ಮಂದಿ ಇವರು ಮಾಡಿದ ಚಹಾವನ್ನು ಹೀರುತ್ತಾರೆ. ಅಲ್ಲಿದ್ದ ಯಾರಿಗೂ ಈ ಮನುಷ್ಯ ಚಂದ್ರಯಾನ ಪ್ರಾಜೆಕ್ಟ್ ಕೈಗೊಂಡ ಸಂಸ್ಥೆಯವನು, 6 ಅಂಕಿ ಸಂಬಳ ಕಾಣುತ್ತಿರುವವನು, ದೊಡ್ಡ ಅಪಾರ್ಟ್‌ಮೆಂಟಿನ ಯಜಮಾನ ಅಂತನ್ನಿಸುವುದೇ ಇಲ್ಲ.

  “ಮಿಷನ್‌ ಚಾಯ್‌’ ಎಂಬ ಪುಟ್ಟ  ಸೇನೆ ಕಟ್ಟಿಕೊಂಡು, ಟೆಕ್ಕಿಗಳು, ಉದ್ಯಮಿಗಳನ್ನೂ ಸೇರಿಸಿಕೊಂಡು, ರಾಕೇಶ್‌ ಕಳೆದ ಮೂರು ವರುಷಗಳಿಂದ “ಒಂದು ಚಾಯ್‌, ಒಂದು ಬಿಸ್ಕತ್ತು, ಒಂದು ನಗು’ವನ್ನು ಸದ್ದಿಲ್ಲದೆ ಹಂಚುತ್ತಿರುವ ಪರಿ ಇದು. ಚಹಾದೊಳಗೆ ಪ್ರೀತಿ ಬೆರೆಸಿ, ಮಾನವೀಯ ಪರಿಮಳದೊಂದಿಗೆ, ಕಿದ್ವಾಯಿಯ ಗೂಡಿನ ನೋವನ್ನು ಕರಗಿಸುತ್ತಾ, ಬೆಚ್ಚಗೆ ಮಾಡುವ ಅವರ ಕೆಲಸ ಹೊರಜಗತ್ತಿನ ಕಣ್ಣಿಗೂ ಬಿದ್ದಿಲ್ಲ.

  ರಾಕೇಶ್‌ ಹೀಗೆ ಟ್ರೇ ಹಿಡಿಯಲೂ ಒಂದು ಕಾರಣವಿದೆ. ಅಮೃತ್‌ಸರದ ಗುರುದ್ವಾರ ಆಸ್ಪತ್ರೆಯಲ್ಲಿ ಇವರ ಮಾವ ಗ್ಯಾಂಗ್‌ರಿನ್‌ನಿಂದ ಕಾಲು ಕತ್ತರಿಸಿಕೊಂಡು ಬೆಡ್ಡಿನ ಮೇಲೆ ಮಲಗಿದ್ದರಂತೆ. ರಾತ್ರಿಯೆಲ್ಲ ಅವರ ನೋವಿಗೆ ಔಷಧ ಹಚ್ಚಿ, ಆರೈಕೆ ಮಾಡಿದ ರಾಕೇಶ್‌, ಈ ಮನುಷ್ಯರ ಬದುಕೆಷ್ಟು ನರಕ ಎಂದು ಚಿಂತೆಗೆಟ್ಟು, ಬೇಸರದಲ್ಲಿ ಕುಳಿತಿದ್ದರಂತೆ. 

  ಆಗ ಯಾರೋ ಅಜ್ಜಿ ಭುಜದ ಮೇಲೆ ಕೈಯಿಟ್ಟು, ಮೊಗದ ನೆರಿಗೆಯನ್ನೆಲ್ಲ ಸರಿಸಿ, ನಿರ್ಮಲವಾಗಿ ನಗುಸೂಸಿ, “ಪಾಜೀ… ಚಾಯ್‌ ಪೀಯೋಗೆ?’ ಅಂತ ಕೇಳಿ, ಕೈಯಲ್ಲಿ ಚಹಾ ಕಪ್‌ ಇಟ್ಟರಂತೆ. ಆ ಒಂದು ಕಪ್‌ ಚಹಾ, ಒಂದು ನಗುವೇ ರಾಕೇಶ್‌ರ ಬದುಕಿನ ಬಹುದೊಡ್ಡ ತಿರುವು. ಯಾರು ಈ ಅಜ್ಜಿ? ಹಿಂಬಾಲಿಸಿ, ಹೆಜ್ಜೆ ಇಟ್ಟಾಗ ಗೊತ್ತಾಯಿತು; ಅವರು ಇನ್ನೊಬ್ಬರ ಮನೆಯಲ್ಲಿ ಕಸ ಹೊಡೆಯುವಾಕೆ, ಪಾತ್ರೆ ತೊಳೆಯುವ ಮುದಿ ಜೀವ ಎಂದು.

  ಬೆಂಗಳೂರಿಗೆ ವಾಪಸು ಬಂದ ಮೇಲೂ ಆ ಅಜ್ಜಿ ಇವರನ್ನು ಕಾಡದೇ ಬಿಡಲಿಲ್ಲ. ಇಷ್ಟೆಲ್ಲ ದುಡಿದೂ, ತಾನು ಒಬ್ಬನ ಬದುಕಿನಲ್ಲೂ ನಗುವಿನ ಪಸೆ ಸೃಜಿಸಲಿಲ್ಲವಲ್ಲ ಎಂಬ ಬೇಸರ ರಾಕೇಶ್‌ರ ಹೃದಯಕ್ಕೆ ದಾಳಿ ಇಟ್ಟಿತು. ತಾನು ನಿತ್ಯ ಕುಡಿಯುವ ಆರೇಳು ಕಪ್‌ ಚಹಾದಲ್ಲಿ ಹಾಲಿತ್ತು; ಸಕ್ಕರೆಯಿತ್ತು; ಚಹಾಪುಡಿಯಿತ್ತು; ಮಾನವೀಯ ಆಸ್ವಾದವೆಲ್ಲಿತ್ತು? ಚಹಾ ಕಪ್ಪಿನಲ್ಲಿದ್ದ ಮಾನವೀಯ ಹಬೆ ನನ್ನ ಮೂಗಿನ ನಳಿಕೆಗೆ ಅಡರದೇ ಹೋಯಿತೇಕೆ? ಚಹಾದ ಈ ಸತ್ಯ ಕಂಡುಕೊಳ್ಳಲು ಇಷ್ಟು ದಿನ ಬೇಕಾಯಿತೇ? ಅಂತ ಮುಖ ಸಣ್ಣಗೆ ಮಾಡಿದರು.

  ನಾನೂ ಆ ಅಜ್ಜಿಯಂತೆ ಒಂದು ಚಹಾ, ಒಂದು ನಗು ಹಂಚುವುದಾದರೆ ಅದಕ್ಕೆ ಸೂಕ್ತ ತಾಣ ಬೆಂಗಳೂರಿನಲ್ಲಿ ಎಲ್ಲಿದೆ? ಹುಡುಕಾಟ ಶುರುವಾಯಿತು. ಕೊನೆಗೆ ಕಿದ್ವಾಯಿಯೇ ಸರಿ ಅಂತನ್ನಿಸಿತು. ಅತಿಹೆಚ್ಚು ಬಡವರು ಬರುವ, ಅತಿ ಕರಾಳ ನೋವನ್ನು ಉಣ್ಣುವ ಜೀವಗಳು ಬರೋದೂ ಅಲ್ಲಿಯೇ. ರಾಕೇಶ್‌ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಬಿ. ನಿಂಗೇಗೌಡರನ್ನು ಭೇಟಿ ಮಾಡಿ, ಚಹಾ ಹಂಚುವ ವಿಚಾರ ಹೇಳಿದರು. ಅವರ ಒಪ್ಪಿಗೆಯ ಪಲವೇ, 2016, ಆಗಸ್ಟ್‌ 16ರಂದು ಹುಟ್ಟಿಕೊಂಡ “ಮಿಷನ್‌ ಚಾಯ್‌’! 

    ಆರಂಭದಲ್ಲಿ ಸಹೋದ್ಯೋಗಿ ಸೇವಾಸಿಂಗ್‌ ಜತೆಗೂಡಿ ವಾರದಲ್ಲಿ ಎರಡು ದಿನದಂತೆ, ಚಹಾ ಹಿಡಿದುಕೊಂಡು ಕಿದ್ವಾಯಿಯಲ್ಲಿ ಸೇವೆ ಆರಂಭಿಸಿದರು. ಆ ಸುದ್ದಿ ಸ್ನೇಹಿತರ ಕಿವಿಗೆ ಬಿದ್ದಾಗ, ಅವರೂ “ಮಿಷನ್‌ ಚಾಯ್‌’ಗೆ ಬಲತುಂಬಲು ಮುಂದೆ ಬಂದರು.  “ನಮಗೂ ಒಂದು ವಾರ ಕೊಡಿ’ ಎಂದು ದುಂಬಾಲುಬಿದ್ದರು. ಈಗ ವಾರಕ್ಕೆರಡು ಬಾರಿ ರಾಕೇಶ್‌ ಕಿದ್ವಾಯಿಯಲ್ಲಿ ಚಹಾ ಹಂಚುತ್ತಾರೆ. ಮಿಕ್ಕ ದಿನಗಳಲ್ಲಿ “ಮಿಷನ್‌ ಚಾಯ್‌’ ಬಳಗ ಟೀ ಸೇವೆ ಪೂರೈಸುತ್ತದೆ. ಇಸ್ರೋದ 8 ಟೆಕ್ಕಿಗಳು ಇದಕ್ಕೆ ಕೈಜೋಡಿಸಿದ್ದಾರೆ.

   ಆರಂಭದಲ್ಲಿ ಒಬ್ಬಳು ಅಜ್ಜಿ ಮುಖಾಮುಖೀಯಾದಳು. ಅವಳು ಇವರ ಕೈಹಿಡಿದು, “ಅಪ್ಪಾ… ನಾಳೆ ಬರುತ್ತೀಯಲ್ಲ. ನಿನ್ನ ಚಹಾವನ್ನು ಕುಡಿಯಲು ನಾನು ಇರುತ್ತೇನಲ್ಲ…?’ ಎಂದು ಕೇಳಿದಾಗ, ಆ ಸಾವಿನ ಪ್ರಹಾರ ನೆನೆದು ಇವರ ಎದೆ ಝಲ್ಲೆಂದಿತಂತೆ. ಆ ರಾತ್ರಿ ಇಡೀ ಕಣ್ಣಿಗೆ ನಿದ್ದೆಯೇ ಹತ್ತಲಿಲ್ಲ. ಬೆಳಗ್ಗೆ ಎದ್ದಾಗಲೂ ಆತಂಕದಿಂದಲೇ ಸ್ಟೌ ಹಚ್ಚಿದರು. ಓಡೋಡಿ ಹೋಗಿ, ಕಿದ್ವಾಯಿಯಲ್ಲಿ ನಿಂತಾಗ, ಅಜ್ಜಿ ನಗುತ್ತಾ ಕಾಯುತ್ತಿದ್ದರಂತೆ. ಅವರ ಮೊಗದಲ್ಲಿ ಹಿಂದಿನ ದಿನಕ್ಕಿಂತ ಹೆಚ್ಚು ಲವಲವಿಕೆ ತುಂಬಿ ತುಳುಕುತ್ತಿತ್ತಂತೆ.

   ಒಬ್ಬಳು ಕ್ಯಾನ್ಸರ್‌ಪೀಡಿತ ತಾಯಿ. ಬೆಡ್ಡಿನ ಮೇಲೆ ಮಲಗಿದ್ದಾಳೆ. ಆಕೆಗೆ ಒಂದು ಪುಟ್ಟ ಮಗು. ರಾತ್ರಿ ಆಕೆಗೆ ಚಹಾ ಕುಡಿಯುವ ಮನಸ್ಸಾಗಿದೆ. ದುಡ್ಡಿದೆ. ಆದರೆ, ಹೊರಗೆ ಹೋಗಲು ದೇಹ ಸಹಕರಿಸುತ್ತಿಲ್ಲ. ಇಂಥವರಿಗೆ ರಾಕೇಶ್‌ ಅವರ ಚಹಾದ ಮೌಲ್ಯ ಅರ್ಥವಾಗಿದೆ. “ಅವರು ಚಹಾವನ್ನು ಕೈಯಲ್ಲಿ ಹಿಡಿದು ಪ್ರತಿನಗು ಬೀರಿದರೆ, ಅದೇ ನಮಗೆ ದೊಡ್ಡ ಪ್ರಶಸ್ತಿ’ ಎನ್ನುತ್ತಾರೆ ಈ ಟೆಕ್ಕಿ. ಇನ್ನೊಬ್ಬ ವ್ಯಕ್ತಿ ಧರ್ಮಪುರಿಯವರು. “ನಾಳೆ ಡಿಸಾcರ್ಜ್‌ ಆಗುತ್ತಿದ್ದೇನೆ. ಈ ಖುಷಿಗೆ ನಿಮ್ಮೊಟ್ಟಿಗೆ ನಾನೂ ಚಹಾ ಹಂಚಲೇ?’ ಎಂದು ಕೇಳಿದಾಗ, ರಾಕೇಶ್‌ ಟ್ರೇಯನ್ನು ಖುಷಿಯಿಂದ ಅವರ ಕೈಗಿತ್ತರು.

  ತಾಯಿಯ ಶ್ರಾದ್ಧಾವನ್ನೂ ಕಿದ್ವಾಯಿಯಲ್ಲೇ ಆಚರಿಸುತ್ತಾರೆ, ರಾಕೇಶ್‌. ಆರಂಭದಲ್ಲಿ ದೇವಸ್ಥಾನದಲ್ಲಿಯೇ ಪಂಡಿತರಿಗೆ ಅನ್ನದಾನ ಮಾಡಿದಾಗ, ಅವರು ಅದನ್ನು ಮುಟ್ಟಿಯೂ ನೋಡಿರಲಿಲ್ವಂತೆ. ಅವತ್ತೇ ಕೊನೆ. ಮತ್ತೆಂದೂ ಅವರು ದೇವಸ್ಥಾನದಲ್ಲಿ ತಿಥಿ ಆಚರಿಸಲು ಹೋಗಲಿಲ್ಲ. “ಮಿಷನ್‌ ಚಾಯ್‌’ ಸದಸ್ಯರ ಜನುಮದಿನ, ವಿವಾಹ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬಗಳೆಲ್ಲ ಕಿದ್ವಾಯಿಯಲ್ಲಿಯೇ ಆಚರಣೆಗೊಳ್ಳುತ್ತಿದೆ.

  ಕೆಲವು ಮಂಜಾವುಗಳು ಬಹಳ ಕರಾಳ ಎನ್ನುತ್ತಾರೆ ರಾಕೇಶ್‌. ಅವರು ಟ್ರೇ ಹಿಡಿದು, ವಾರ್ಡಿನೊಳಗೆ ಕಾಲಿಟ್ಟಾಗ, ಯಾರಾದರೂ ಸಾವನ್ನಪ್ಪಿರುತ್ತಾರೆ. ” ಪಕ್ಕದ ಬೆಡ್ಡಿನಲ್ಲಿ ಶವವಿದ್ದಾಗ, ಅವರ ಬಳಗದವರೆಲ್ಲ ದುಃಖದಲ್ಲಿರುವ ದೃಶ್ಯಗಳು ನಮ್ಮನ್ನು ಮುಜುಗರಕ್ಕೆ ತಳ್ಳುತ್ತವೆ. ಇಂಥ ವೇಳೆ, ಟ್ರೇಯನ್ನು ಪಕ್ಕಕ್ಕಿಟ್ಟು, ಅಗಲಿದವರ ಬಳಗಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತೇವೆ. ಚಹಾ ಆರಿದರೂ ಚಿಂತೆಯಿಲ್ಲ’ ಎನ್ನುತ್ತಾರೆ ರಾಕೇಶ್‌.

  “ಕಿದ್ವಾಯಿಯ ಒಪಿಡಿಗೆ ಬೆಳಗ್ಗೆ ಏನಿಲ್ಲವೆಂದರೂ 200 ಜನ ಬರುತ್ತಾರೆ. ಹಾಗೆ ಬಂದವರಲ್ಲಿ ಅನೇಕರು ಪುಟ್‌ಪಾತ್‌ನ ಮೇಲೆ ಮಲಗಿರುತ್ತಾರೆ. ಚಳಿಯಿಂದ ಕಂಪಿಸುತ್ತಿರುತ್ತಾರೆ. ಆತಂಕದಲ್ಲಿರುತ್ತಾರೆ. ಅಂಥವರಿಗೆ ನಮ್ಮ ಚಹಾ ಸಾಂತ್ವನ ಹೇಳುವ, ಧೈರ್ಯ ತುಂಬುವ ಕೆಲಸ ಮಾಡುತ್ತೆ’ ಎಂಬ ಸಾರ್ಥಕ ನುಡಿ ಇವರದು. ಅಂದಹಾಗೆ, ಈ ಟೆಕ್ಕಿ ಬಳಗ ಕೆಲವರಿಗೆ ಮಾತ್ರೆ, ಔಷಧಕ್ಕೆ, ಮತ್ತೆ ಕೆಲವರಿಗೆ ಕಿಮೋಥೆರಪಿಗೂ šನೆರವು ನೀಡಿದ್ದೂ ಇದೆ.

  “ಮಿಷನ್‌ ಚಾಯ್‌’ ನೀಡುವ ಕಪ್‌ ಏನೂ ದೊಡ್ಡದಲ್ಲ. 60 ಎಂ.ಎಲ್‌. ಅಷ್ಟೇ. ಅವರು ಕೊಡುವ ಚಹಾದಲ್ಲಿ ಔಷದಿ ಏನೂ ಇಲ್ಲ. ಒಂದು ನಗುವಿದೆ. ಆ ನಗುವೇ ಮೌಲ್ಯ ದೊಡ್ಡದು.

ಈ ಟೆಕ್ಕಿ ಬಳಗ ಹಂಚುವ ಚಹಾದೊಟ್ಟಿಗೆ ಒಂದು ಜೆನ್‌ ಕತೆ ನೆನಪಿಗೆ ಬಂತು: ಒಬ್ಬ ಝೆನ್‌ ಗುರು. ಸಿರಿವಂತನೊಬ್ಬ ಆ ಗುರುವಿನ ಬಳಿ ಬಂದು, ತನ್ನೆಲ್ಲ ಆಸ್ತಿ-ಪಾಸ್ತಿಗಳನ್ನು ಗುರುಪಾದಕ್ಕೆ ಅರ್ಪಿಸುವುದಾಗಿ ಹೇಳಿದ. ಗುರು ತಕ್ಷಣ ಪಕ್ಕದಲ್ಲಿದ್ದ ಶಿಷ್ಯನಿಗೆ, “ಇವನಿಗೊಂದು ಕಪ್‌ ಚಹಾ ಕೊಟ್ಟು ಕಳುಹಿಸು’ ಎಂದನಂತೆ. ಮರುಕ್ಷಣವೇ ಒಬ್ಬ ನಾಸ್ತಿಕನೂ ಬಂದ. ಗುರುವನ್ನು ಬಾಯಿಗೆ ಬಂದಹಾಗೆ ಬಯ್ಯಲು ಶುರುಮಾಡಿದ. ಆಗಲೂ ಗುರು ತಾಳ್ಮೆಗೆಡದೆ, “ಇವನಿಗೊಂದು ಕಪ್‌ ಚಹಾ ಕೊಟ್ಟು ಕಳುಹಿಸು’ ಎಂದನಂತೆ. ಮರುಕ್ಷಣವೇ ಒಬ್ಬಳು ವಿಧವೆ ಬಂದಳು. “ಗಂಡ ನನ್ನ ಕೈಬಿಟ್ಟು ಹೊರಟ. ಹೇಗಾದರೂ ಮಾಡಿ ಬದುಕಿಸಿ’ ಅಂತ ಅಂಗಲಾಚಿದಳು. ಆಗಲೂ ಗುರುವಿನ ಉತ್ತರ: “ಇವಳಿಗೊಂದು ಕಪ್‌ ಚಹಾ ಕೊಟ್ಟು ಕಳುಹಿಸು’ ಅಂತಲೇ.

  ಕೊನೆಗೆ ಚಹಾ ಕೊಡುತ್ತಿದ್ದ ಶಿಷ್ಯ, “ಬಂದವರಿಗೆಲ್ಲ ಚಹಾ ಕೊಟ್ಟು ಕಳಿಸುತ್ತಿದ್ದೀರಿ. ಅವರೆಲ್ಲ ತಮ್ಮ ಸಮಸ್ಯೆ ಬಗೆಹರಿಯಿತೆಂದು, ಸಮಾಧಾನಪಟ್ಟು ಹೋಗುತ್ತಿದ್ದಾರೆ. ಇದರ ಗುಟ್ಟೇನು?’ ಅಂತ ಕೇಳಿದ. ಆಗ ಗುರು ಹೇಳಿದ್ದು, “ಯಾರಿದ್ದೀರಿ? ಇವನಿಗೂ ಒಂದು ಕಪ್‌ ಚಹಾ ಕೊಟ್ಟು ಕಳುಹಿಸಿ…’!

  ಈ ಟೆಕ್ಕಿ ಹಂಚುವ ಚಹಾದಲ್ಲಿ ಇರುವ ಗುಟ್ಟೂ ಅದೇ!
ನಾವು ನಗುತ್ತಾ ಚಹಾ ನೀಡಿದಾಕ್ಷಣ ಖುಷಿಯಿಂದ ಅವರೂ ಪ್ರತಿ ನಗುತ್ತಾರೆ. ಅದೇ ನಮಗೆ ದೊಡ್ಡ ಪ್ರಶಸ್ತಿ. ನಮ್ಮ ಈ ಚಹಾಸೇವೆಗೆ ಕಿದ್ವಾಯಿಯ ಡಾ.ಕೆ.ಬಿ. ನಿಂಗೇಗೌಡ, ವೆಂಕಟಸ್ವಾಮಿ, ನಾಗಯ್ಯ ಸಹಕಾರವೂ ದೊಡ್ಡದು.
– ರಾಕೇಶ್‌ ನಯ್ಯರ್‌, ಇಸ್ರೋ ಟೆಕ್ಕಿ

ಚಾಯ್‌ ಮಿಷನ್‌ ಬಳಗ ಹೀಗಿದೆ…
ಪರಂಜಿತ್‌ ಸಿಂಗ್‌, ಹರ್ಪಾಲ್‌ ಜಾಲಿ, ಮಂಜುಳಾ ದೇವಿ, ರಿತೇಶ್‌ ಗುಪ್ತಾ, ಪರ್ವೀನ್‌ ಮಲ್ಹೋತ್ರಾ, ಸುಖ್‌ವಿಂದರ್‌ ವಿಖ್‌, ಅನಾಮಿಕಾ ಪ್ರಸಾದ್‌, ನೀಲಂ ವಿಕ್‌, ಹರಿನಾಥ್‌, ರಿಂಪಿ ರಜಪೂತ್‌ ಮತ್ತು ಕೃಷ್ಣ ಪರಿವಾರದ ಸದಸ್ಯರೂ ಸೇರಿದಂತೆ 100 ಮಂದಿ ಇದರ ವಾಟ್ಸಾಪ್‌ ಬಳಗದಲ್ಲಿದ್ದಾರೆ.

ಕೀರ್ತಿ ಕೋಲ್ಗಾರ್‌  

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.