ಆನ್ಸರ್ ಪ್ಲೀಸ್…
ಬಿಟ್ಟ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ !
Team Udayavani, Feb 11, 2020, 6:15 AM IST
ನಾನು ಎಲ್ಲವನ್ನೂ ಓದಿದ್ದೆ. ಅದೇಕೋ ಯಾವುದೂ ನೆನಪಿಗೆ ಬರ್ತಾ ಇಲ್ಲ; ಅಯ್ಯೋ, ಆ ಪ್ರಶ್ನೆಗಳಿಗೆಲ್ಲ ಉತ್ತರ ಗೊತ್ತಾಗಲೇ ಇಲ್ಲ; ಉತ್ತರಗಳೆಲ್ಲಾ ಗೊತ್ತಿತ್ತು, ಆದರೂ ಬರೆಯೋಕೆ ಆಗಲಿಲ್ಲ; ಈ ಸಲ ಹೆಚ್ಚಿಗೆ ಅಂಕ ಬರೋಲ್ಲ, ಹಾಗಾಗಿ, ನಾನು ಹೆತ್ತವರಿಗೆ ಒಳ್ಳೆ ಮಗ/ಮಗಳಲ್ಲ… ಪರೀಕ್ಷೆ ಎದುರಾದರೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಇಂಥದೇ ಉತ್ತರಗಳು. ಫಲಿತಾಂಶ ಬರುವ ಮೊದಲೇ ಅಂಕ ವಿಮರ್ಶೆ ಮಾಡಿಕೊಳ್ಳುವ ಇವರು ಈ ಮೊದಲೇ ಈ ಪ್ರಶ್ನೆಗಳಿಗೆ ಏಕೆ ಉತ್ತರ ಬರೆಯಲು ಆಗುತ್ತಿಲ್ಲ ಎಂದು ತಮ್ಮ ಸಾಮರ್ಥ್ಯದ ಆತ್ಮವಿಮರ್ಶೆ ಮಾಡಿಕೊಂಡರೆ ಹೀಗೆಲ್ಲ ಆಗುವುದಿಲ್ಲ…
ಇತ್ತೀಚೆಗೆ ಪರೀಕ್ಷೆ ಬರೆದ ಮಕ್ಕಳಲ್ಲಿ ಸ್ವಲ್ಪ ಸಪ್ಪಗಾಗೋರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮನಸ್ಸಲ್ಲಿ ಅದೇ ಗುಣಾಕಾರ, ಭಾಗಾಕಾರ-ಆ ಪ್ರಶ್ನೆಗೆ ಉತ್ತರ ಬರೆಯೋಕೆ ಆಗಲಿಲ್ಲ. ಅಯ್ಯೋ, ಅದು ಗೊತ್ತಿತ್ತು ಆದರೂ ಬರೆಯೋಕೆ ಸಮಯ ಇರಲಿಲ್ಲ. ಇಲ್ಲ ಬಿಡು, ಈ ಸಲ ನಾನು 90 ಅಂಕ ತಗೊಳೊಲ್ಲ- ಹೀಗೆ ಪರೀಕ್ಷೆ ಬರೆದ ಮರು ಕ್ಷಣದಿಂದಲೇ ತಾವು ಪಡೆಯಬಹುದಾದ ಅಂಕಗಳನ್ನು, ತಾವೇ ಊಹಿಸಿ ಲೆಕ್ಕ ಹಾಕುತ್ತಾರೆ. ಫಲಿತಾಂಶ ಬರೋ ತನಕ ಕಾಯುವ ಪ್ರಮೇಯವೇ ಇಲ್ಲ. ಅಷ್ಟರಲ್ಲಿ ಅವರ ಮನಸ್ಸು ಸಿಕ್ಕುಸಿಕ್ಕಾಗಿರುತ್ತದೆ.
ಇವತ್ತು, ಹೆತ್ತವರ ಮತ್ತು ಮಕ್ಕಳು ಮನಸ್ಸೂ ಹಾಗೇ ಇದೆ. ಎಲ್ಲವೂ ಅಂಕಗಣಿತ. ಸಂಬಂಧಗಳನ್ನು ಕೂಡಿ ಕಳೆಯುವುದೂ ಈ ಪರೀಕ್ಷೆಯ ಅಂಕಗಳಿಂದ. ಎಷ್ಟೋ ಮಕ್ಕಳು, ನಾನು ನೂರಕ್ಕೆ 99 ಅಂಕ ತೆಗೆದರೇನೇ ಅಪ್ಪ-ಅಮ್ಮ ನನ್ನನ್ನು ಪ್ರೀತಿಸೋದು, ಮುದ್ದು ಮಾಡೋದು. ಇಲ್ಲವಾದರೆ, ನಾನು ಅವರ ಪ್ರೀತಿಗೆ ಅರ್ಹನಲ್ಲ, ಒಳ್ಳೆಯ ಮಗಳಾಗುವುದು ಅಂಕ ತೆಗೆದರಷ್ಟೇ – ಹೀಗೆಲ್ಲ ಯೋಚನೆ ಮಾಡ್ತವೆ. ಇವನ್ನೆಲ್ಲಾ ಯಾರು ಹೇಳಿ ಕೊಟ್ಟರು? ಅಂತ ನೋಡಿದರೆ. ಉತ್ತರ- ಈಗಿನ ತಲೆಮಾರಿನ ಹೆತ್ತವರು.
ಪಕ್ಕದ ಮನೆ ಸುಶಾಂತ ಔಟಾಫ್ ಔಟ್ ಕಣೋ, ನೀನು? ಅವನಿಗಿಂತ ಚೆನ್ನಾಗಿ ಮಾಕ್ಸì ತೆಗೀಬೇಕು. ಆಯ್ತಾ… ಈ ಸಲ ನೀನು ನೂರಕ್ಕೆ 98 ತೆಗಿ. ಕೇಳಿದ್ದು ಕೊಡಿಸ್ತೀನಿ ಕಣೇ ಅಂದು ಬಿಡ್ತಾರೆ. ಇದರ ಅರ್ಥ. ಅಂಕ ತೆಗೆಯದೇ ಇದ್ದರೆ ಕೇಳಿದ್ದು ಕೊಡಿಸಲ್ಲ ಅಂತಾನಾ? ಹೀಗೆ, ಹೆತ್ತವರ ಒತ್ತಡ ಕೂಡ ಮಕ್ಕಳ ಇಂಥ ಮನಸ್ಥಿತಿಗೆ ಕಾರಣ ಇರಬಹುದು. ಇದನ್ನು ಬಾಯಿ ಬಿಟ್ಟು ಹೇಳಬೇಕೆಂದಿಲ್ಲ. ಕಡಿಮೆ ಅಂಕ ಬಂದಾಕ್ಷಣ, ಅಮ್ಮನ ಮುಖ ಸಪ್ಪಗಾಗುವುದು, ಅಪ್ಪನ ಮುಖದಲ್ಲಿ ಕೋಪದ ಗೆರೆಗಳು ಕಾಣುವುದು. ಪಕ್ಕದ ಮನೆ ಹುಡುಗೀಗೆ ಜಾಸ್ತಿ ಮಾರ್ಕ್ಸ್ ಬಂತು ಅನ್ನೋದು… ಹೀಗೆಲ್ಲ ಮಾಡಿದರೆ, ಮಕ್ಕಳು ಹೆತ್ತವರ ವರ್ತನೆಗಳಿಂದಲೇ ಮೆಸೇಜ್ ಪಡೆಯುತ್ತಾರೆ. ನಾನು ಇವರಿಗೆ ಒಳ್ಳೆ ಮಗ/ಮಗನಲ್ಲ ಅಂತ…
ಸತ್ಯ ಏನು ಗೊತ್ತಾ?
ಅಂಕ ಬದುಕನ್ನು ನಿರ್ಧರಿಸಲ್ಲ. ಅಂಕವೇ ಬದುಕಲ್ಲ. ಅಂಕ ಪಡೆಯದವರೂ ಈ ಭೂಮಿಯ ಮೇಲೆ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಹೆಚ್ಚೆಚ್ಚು ಅಂಕ ಪಡೆದರೆ, ನಮ್ಮ ಭವಿಷ್ಯ ರೂಪಿಸಿಕೊಳ್ಳೋದು ಸುಲಭವಾಗುತ್ತದೆ ಅಷ್ಟೇ. ಇದೊಂಥರ, ಗಾಡಿಯ ಚಕ್ರ ತಿರುಗಲು ಬಳಸುವ ಗ್ರೀಸ್‌ನಂತೆ. ಆದರೆ, ಜೀವನದಲ್ಲಿ ಪರೀಕ್ಷೆ ಒಂದು ಭಾಗ. ಪರೀಕ್ಷೆಯೇ ಜೀವನವಲ್ಲವಲ್ಲ? ಹೀಗಂತ ಮಕ್ಕಳಿಗೆ ಹೇಳಬೇಕು. ಅವರಲ್ಲಿ ಒಂದು ಸಣ್ಣ ಉಡಾಫೆ ತುಂಬಿಸಬೇಕು. ಇವತ್ತಿನ ಯುವಜನತೆ ಹೀಗೇ “ಮಾರ್ಕ್Õ ‘ವಾದಿಗಳಾಗಿರುವುದರಿಂದಲೇ ನೂರಕ್ಕೆ 99 ತೆಗೆದರೂ ಬೆಲೆ ಸಿಗುತ್ತಿಲ್ಲ. ನೈನ್‌ಟಿನೈನ್ ಅಷ್ಟೇನಾ ಅಂತಾರೆ. ಏಕೆಂದರೆ, ನೂರು ತೆಗೆದವರೂ ನಮ್ಮಲ್ಲಿ ಇದ್ದಾರೆ.
ನಿಮಗೆ ಇಲ್ಲೊಂದು ಸತ್ಯ ಇದೆ. ಅದನ್ನು ಹೇಳಬೇಕು.
ನೂರು ಮಕ್ಕಳು ಇದ್ದಾರೆ ಅಂತಿಟ್ಟುಕೊಳ್ಳಿ. ಇದರಲ್ಲಿ ಶೇ.10ರಷ್ಟು ನಿಜವಾಗಲೂ ಕಷ್ಟಪಟ್ಟು ಓದುತ್ತಿರುತ್ತಾರೆ. ತಮಗೆ ತಾವೇ ಮಾಪನ ಹಾಕ್ಕೊಂಡಿರ್ತಾರೆ. ಇಷ್ಟೇ ಅಂಕ ತೆಗೆಯಬೇಕು, ಅದಕ್ಕೆ ಹೀಗೇ ಓದಬೇಕು ಅಂತ. ಇನ್ನು ಶೇ. 60ರಷ್ಟು ಮಂದಿ ಪರೀಕ್ಷೆ ಬಗ್ಗೆ ತಲೆನೇ ಕೆಡಿಸಿಕೊಳ್ಳೋಲ್ಲ. ಬಂದಿದ್ದು ಬರಲಿ, ಗೋವಿಂದನ ದಯೆ ಇರಲಿ, ಆಗಿದ್ದು ಆಗಲಿ ಅಂತ ಹೇಗೋ ಪರೀಕ್ಷೆ ಬರೀತಾರೆ. ನೀವು ನೋಡಿ, ಲಾಂಗ್‌ಲೈಫ್ನಲ್ಲಿ ಸಂಗೀತ, ನಾಟಕ, ಬರವಣಿಗೆ, ಮಾತುಗಾರಿಕೆ ಹೀಗೆ ಯಾವುದರಲ್ಲೊ ಒಂದರಲ್ಲಿ ಶೈನ್ ಆಗಿಬಿಡ್ತಾರೆ. ಯಾವ ರೀತಿ ಅಂದರೆ, ಅಂಕಗಳಿಗಾಗಿ ಓದಿದವರೂ ಇವರ ಮುಂದೆ ಮಂಕು. ಈ ವರ್ಗ ಜೀವನದಲ್ಲಿ ಬಹಳ ಖುಷಿಯಾಗಿರುತ್ತದೆ. ಉಳಿದ ಶೇ.20-30ರಷ್ಟು ಮಕ್ಕಳು ವರ್ಷ ಪೂರ್ತಿ ಸರಿಯಾಗಿ ಓದದೇ. ಇನ್ನೇನು ಪರೀಕ್ಷೆ ಬಂದೇ ಬಿಡು¤ ಅಂದಾಗ ಪುಸ್ತಕ ಹಿಡಿದು ಪ್ರಯತ್ನ ಪಟ್ಟು, ಪರೀಕ್ಷೆ ಬಂದಾಗ ಎಲ್ಲಾ ಮರೆತು ಹೋಯ್ತು, ಚೆನ್ನಾಗಿ ಓದಿದ್ದೆ ಅಂತೆಲ್ಲಾ ಒದ್ದಾಡ್ತಾ ಇರ್ತಾರೆ. ಸಿದ್ಧತೆ ಮಾಡಿಕೊಳ್ಳದೆ ಪರೀಕ್ಷೇನ ಗೆಲ್ಲೋದಾದರೂ ಹೇಗೆ?
ಏನು ಮಾಡಬೇಕು?
ನಾನು ಬಹಳ ಗಮನಿಸಿದ್ದೇನೆ. ಈ ಸಿಂಡ್ರೋಮ್‌ಗಳು ಪರೀಕ್ಷೆ ಎದುರಾದಾಗ ಮಾತ್ರ ಶುರುವಾಗುತ್ತವೆ. ಆದರೆ, ವಿದ್ಯಾರ್ಥಿಗಳಲ್ಲಿ ಇದು ಬೇರೂರಿ ಬಹಳ ಕಾಲ ಆಗಿರುತ್ತದೆ. ವರ್ಷ ಪೂರ್ತಿ ನಡೆಯುವ ಟೆಸ್ಟ್‌ಗಳಲ್ಲಿಯೂ ಮರೆತು ಹೋಗೋದು, ಕಡಿಮೆ ಅಂಕ ತೆಗೆಯುವ ಪ್ರಕ್ರಿಯೆಗಳು ಆಗಿರುತ್ತವೆ. ಆ ಕಡೆ ಗಮನ ಕೊಟ್ಟಿರುವುದಿಲ್ಲ ಅಷ್ಟೇ. ಟೆಸ್ಟ್ ಅಂತ ಮಾಡೋದೇ ನಮ್ಮನ್ನು ನಾವು ಅರಿತು ಕೊಳ್ಳೋದಕ್ಕೆ. ಅಲ್ಲಿ ಆದ ತಪ್ಪುಗಳನ್ನು ಪಟ್ಟಿ ಮಾಡಿಕೊಂಡು, ಅವುಗಳನ್ನು ಸರಿಪಡಿಸಿಕೊಳ್ಳುತ್ತಾ ಹೋಗಿದ್ದರೆ, ಮುಖ್ಯ ಪರೀಕ್ಷೆಯಲ್ಲಿ ಎಡವುದಕ್ಕೆ ಸಾಧ್ಯವೇ ಇಲ್ಲ.
ಟೆಸ್ಟ್‌ಗಳು ಮಾನಸಿಕವಾಗಿ ವಿದ್ಯಾರ್ಥಿಗಳನ್ನು ಗಟ್ಟಿ ಗೊಳಿಸುತ್ತವೆ. ಟೆಸ್ಟ್‌ನಲ್ಲೂ ಕಡಿಮೆ ಅಂಕ ಬಂತಲ್ಲಪ್ಪಾ ಅಂತ ಅಂದುಕೊಳ್ಳದೇ. ಎಲ್ಲಿ ತಪ್ಪು ಮಾಡಿದ್ದೀನಿ, ಅದಕ್ಕೆ ಸರಿಯಾದ ಉತ್ತರ ಯಾವುದು? ನಾನು ಓದಿದ್ದು ಯಾವುದು ಎಂದೆಲ್ಲಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಉತ್ತರ ಬರೆಯುವುದಕ್ಕೆ ಆಗುವುದಿಲ್ಲ ಅಂತಾದರೆ, ಅದಕ್ಕೆ ಓದಿನ ವೈಖರಿ ಸರಿ ಇಲ್ಲದೇ ಇರಬಹುದು ಅಥವಾ ಓದದೆಯೇ ಇರಬಹುದು, ಇಲ್ಲವೇ, ನಿಮ್ಮನ್ನು ಕನ್‌ಫ್ಯೂಸ್ ಮಾಡಲೆಂದೇ ಬೇರೆ ರೀತಿ ಪ್ರಶ್ನೆ ಕೇಳಿರಬಹುದು. ಇವಲ್ಲದೇ ನಿಮಗೆ ಭಯ ಹೆಚ್ಚಾಗಿ ಓದಿದ್ದೆಲ್ಲಾ ಮರೆತು ಹೋಗಿರಬಹುದು. ತಪ್ಪಾದ ಉತ್ತರಕ್ಕೆ ಇಷ್ಟೆಲ್ಲಾ ಕಾರಣಗಳಿರುತ್ತವೆ. ಇಂಥ ಗೊಂದಲಗಳು ನಿಮ್ಮನ್ನು ಕಾಡಬಾರದು ಅನ್ನುವುದಾದರೆ ಮೊದಲೇ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಿ. ಆಗ, ಯಾವ ಗೊಂದಲಗಳೂ ಆಗುವುದಿಲ್ಲ. ಸಿದ್ಧತೆ ಅಂದರೆ ಮತ್ತೇನಿಲ್ಲ, ಭಯ ಹೋಗಲಾಡಿಸಲು ಅಣಕು ಪರೀಕ್ಷೆಗಳಲ್ಲಿ ಭಾಗವಹಿಸಿದರೆ ಸರಿಹೋಗುತ್ತದೆ.
ಓದು, ನಿರೀಕ್ಷೆಯ ಸಮತೋಲನ
ವಿದ್ಯಾರ್ಥಿಗಳ ಮೇಲಿನ ಒತ್ತಡ ಹೆಚ್ಚಾಗಲು ಹೆತ್ತವರ ನಿರೀಕ್ಷೆಗಳೂ ಕಾರಣ. ಅವರು ಅಕ್ಕಪಕ್ಕದ ಮನೆಯ ಮಕ್ಕಳ ಸಾಮರ್ಥ್ಯದ ಜೊತೆಗೆ ತಮ್ಮ ಮಕ್ಕಳನ್ನು ಹೋಲಿಸುತ್ತಾರೆ. ಇದೇ ಸಮಸ್ಯೆ. ತಮ್ಮ ಅಪೇಕ್ಷೆ,, ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಇದೆಯೇ ಅನ್ನೋದು ತಿಳಿದಿರುವುದಿಲ್ಲ. ಎಷ್ಟೋ ಸಲ, ಮಕ್ಕಳ ಸಾಮರ್ಥ್ಯವನ್ನು ಮೀರಿದ ಅಪೇಕ್ಷೆ ಹೆತ್ತವರಲ್ಲಿರುತ್ತದೆ. ಉದಾಹರಣೆಗೆ, ತಮ್ಮ ಮಗನಿಗೆ ನೂರಕ್ಕೆ 70 ಅಂಕ ಪಡೆಯುವ ಸಾಮರ್ಥ್ಯ ಇದ್ದರೆ ಅದನ್ನು ಗಮನಿಸದೆ, ಆತ 90 ಅಂಕ ಪಡೆಯಬೇಕು ಅಂತ ಅಪೇಕ್ಷಿಸುವುದು. ಅವನ ಮುಂದೆ ಪದೇ ಪದೇ ಅದನ್ನೇ ಹೇಳುವುದು ಮಾಡಿದರೆ, ಮಕ್ಕಳಿಗೆ ಒತ್ತಡ ಸೃಷ್ಟಿಯಾಗುತ್ತದೆ. ಇದರ ಜೊತೆಗೆ, ಪರೀಕ್ಷೆಯ ಒತ್ತಡವನ್ನು ಸೇರಿ- ಮರೆವು ಉಂಟಾಗಬಹುದು. ಓದಿದ್ದೂ ನೆನಪಾಗದೇ ಇರಬಹುದು. ಆಗ ಬೇಸರವಾಗಿ, ಖನ್ನತೆಗೂ ದಾರಿಯಾಗಬಹುದು.
ಸಾಮರ್ಥ್ಯ ಹೆಚ್ಚಿಸಿಕೊಳ್ಳೋದು ಹೇಗೆ?
ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿಯದೇ ಓದುವುದು ನಾನಾ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಸಮಾಜದ ಕಣ್ಣಿಗೆ ಕಾಣಲು, ಹೆತ್ತವರ ಆಸೆ ಪೂರೈಸಲು ಸಾಮರ್ಥ್ಯವನ್ನು ಮೀರಿದ ಓದು ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಂತ ಸಾಮರ್ಥ್ಯ ಗಳಿಸಿಕೊಳ್ಳಲು ಆಗುವುದಿಲ್ಲ ಅಂತಲ್ಲ. ಮೊದಲನೇ ರ್‍ಯಾಂಕ್ ಪಡೆದ ಹುಡುಗನಿಗೆ ಓದಿದ ಒಂದೇ ಬಾರಿಗೆ ಅರ್ಥವಾಗುತ್ತದೆ ಅಂತಲೂ, 10ನೇ ರ್‍ಯಾಂಕ್ ಪಡೆದವನಿಗೆ ಅದೇ ವಿಷಯವನ್ನು 3 ಬಾರಿ ಓದಿದರೆ ಅರ್ಥವಾಗುತ್ತದೆ ಅಂತಿಟ್ಟುಕೊಳ್ಳಿ. ಈ ಹತ್ತನೇ ರ್‍ಯಾಂಕ್ ಪಡೆದ ಹುಡುಗ ಹತ್ತು ಬಾರಿ ಆ ವಿಷಯ ಓದಿ, ಅದನ್ನೆಲ್ಲ ಮನದಲ್ಲಿ ರಿಜಿಸ್ಟರ್ ಮಾಡಿಕೊಂಡರೆ, ಅವನೂ ಕೂಡ ಮೊದಲನೆ ರ್‍ಯಾಂಕ್ ಪಡೆಯಬಹುದು ಅಲ್ಲವೇ? ಹೀಗೆ, ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಎರಡರ ಅಸಮತೋಲನ ಆದರೆ ಮಾತ್ರ ಸಮಸ್ಯೆ.
ನಿರೂಪಣೆ-ಕಟ್ಟೆ
ಡಾ. ಕೆ.ಎಸ್. ಸುಭ್ರತಾ, ಮನೋವೈದ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.