ಪ್ರೇಮ ಜ್ವರದಲ್ಲಿ ಬೇಯುತ್ತಾ….
Team Udayavani, Sep 17, 2019, 5:00 AM IST
ಈ ಬದುಕಿನ ಪ್ರತೀ ಕ್ಷಣದಲ್ಲೂ ನೆರಳಿನಂತೆ ಜತೆಗೇ ನೀ ಇರುವಾಗ ನಾ ಒಬ್ಬಂಟಿ ಅಂತ ಹೇಗಾದರೂ ಅಂದುಕೊಳ್ಳಲಿ. ಯಾವತ್ತಾದರೂ ನನ್ನ ಉಸಿರು ನಿನ್ನ ತಲುಪಲಿ. ನಿಟ್ಟುಸಿರು ನನ್ನಲ್ಲೇ ಉಳಿಯಲಿ.
ರೂಪಸಿ….
ಮಧ್ಯಾನದ ಬಿರುಮಳೆ ನಿಂತಿದೆ. ಮೋಡವಿದ್ದಿದ್ದೇ ಸುಳ್ಳು ಅನ್ನುವಂತೆ ತೆರೆದುಕೊಂಡ ಆಕಾಶ . ಕಳ್ಳ ಹೆಜ್ಜೆಯಿಟ್ಟು ಬಂದು ನಗುವಿನ ಕಿರಣ ಸುರಿಯುತ್ತಿರುವ ಸಂಜೆ ಸೂರ್ಯ. ಬೀಸುಗಾಳಿಯ ತುಂಬಾ ಹೊಸತೊಂದು ಚೈತನ್ಯ. ಖಾಲಿ ಖಾಲಿ ಇದ್ದ, ಒದ್ದೆ ಒದ್ದೆ ರಸ್ತೆಯ
ತುಂಬಾ ಈಗ ಜೀವ ಸಂಚಾರ. ಮಳೆ ನಿಂತಿದ್ದರೂ , ಬಿಡಿಸಿದ ಬಣ್ಣದ ಛತ್ರಿ ಅಡಿಯಲ್ಲಿ ನೀ ನಡೆದು ಬರುವ ಹೊತ್ತಿಗೆ , ನೀ ಬರುವ ಹಾದಿ ಬದಿಯಲಿ ಕಾಯುತ್ತಾ ನಿಲ್ಲುವ ಅನಾಮಿಕ ನಾನು. ಈ ಕಾಯಕ ಶುರುವಾಗಿ ವರ್ಷವಾಗುತ್ತಾ ಬಂತು. ನಿನಗದರ ಸುಳಿವು ಸಿಗದಂತೆ ಉಳಿದುಹೋದವನು ನಾನು. ಎದೆಯೊಳಗಿನ ಒಲವು ನಿನ್ನೆದುರು ಪದಗಳಾಗಿಸುವ ಪರಿಯ ಅರಿಯದೇ ಮೌನವಾದವನು ನಾನು.
ಹೀಗೆ ಇನ್ನೆಷ್ಟು ದಿನಾ…? ನನ್ನೊಳಗೆ ಹುಟ್ಟುವ ಈ ಪ್ರಶ್ನೆಗೆ ಉತ್ತರ ದಕ್ಕುತ್ತಿಲ್ಲ. ಇವತ್ತಿನ ಈ ಕ್ಷಣ ನನ್ನದು. ನೀ ದಾಟಿ ಹೋಗುವ ಈ ಅರೆ ಘಳಿಗೆ ನನ್ನದು. ಗಾಳಿಯಲ್ಲಿ ತೇಲಿ ಬರುವ ನಿನ್ನ ಮೈಯ ಅತ್ತರಿನ ಘಮ ನನ್ನದು. ಮಿಂಚಂತೆ ಸುಳಿದು ಮಾಯವಾಗುವಾಗ ಉಳಿದ ಆ ಅನೂಹ್ಯ ಅನುಭವ ನನ್ನದು. ನೀ ಎದುರಾದಾಗೆಲ್ಲಾ ಎದೆಯೊಳಗೆ ಮೂಡುವ ಹೊಸ ಹಾಡಿಗೆ ಹಳೆಯ ಶ್ರೋತೃ ನಾನು. ಈ ಬದುಕಿನಲ್ಲಿ ಯಾವತ್ತಾದರೂ ಒಮ್ಮೆ ನಿನ್ನನ್ನ ಮಾತನಾಡಿಸಲು ಸಾಧ್ಯವಾ ? ಗೊತ್ತಿಲ್ಲ.
ಪ್ರತಿಸಾರಿ ನಿನ್ನ ನೋಡಿದಾಗಲೂ , ಎಂಥದ್ದೋ ಸಂತೋಷವೊಂದು ಸದ್ದಿಲ್ಲದೇ ಎದೆ ತುಂಬಿಕೊಳ್ಳುತ್ತದೆ. ಈ ಒಬ್ಬಂಟಿ ಹಾದಿಯಲ್ಲೇ ಖುಷಿ ಇದೆ. ಇರುಳ ಆಕಾಶದಲ್ಲಿನ ಚುಕ್ಕಿ ಕಣ್ಣಿಗಷ್ಟೇ ಸಿಗುತ್ತದೆ. ಕೈ ಚಾಚಿ ನಿರಾಸೆಯ ನಿರ್ವಾತದಲ್ಲಿ ಖಾಲಿ ಕೈಯಲ್ಲಿ ಉಳಿಯಲಾರೆ. ನಿಂಗೆ ನೀಲಿ ಬಣ್ಣದ ಆ ಚೂಡಿದಾರ್ ಅದರ ಮೇಲೆ ಚಿಮುಕಿಸಿದಂತಿರುವ , ಹೊಳೆ ಹೊಳೆವ ಸಣ್ಣ ಮಿಂಚಿನ ಚೂರುಗಳು. ಅದೆಷ್ಟು ಚೆನ್ನಾಗಿ ಒಪ್ಪುತ್ತದೆ ಗೊತ್ತಾ?. ಗಾಳಿಗೆ ಹಾರುವ ಹೆರಳಂತೂ ನನ್ನೊಳಗೆ ಸಂತಸದ ತೂಫಾನು ಎಬ್ಬಿಸುತ್ತದೆ. ಇದೆಲ್ಲಾ ನೆನಪಾದಾಗ ಏಕಾಂಗಿಯೊಬ್ಬ ನನ್ನೊಳಗೆ ಹಾಡಿಕೊಳ್ಳುತ್ತಾನೆ.
ನಿನ್ನ ಕನಸಿನ ಹುಡುಗ ಹೇಗಿದ್ದಾನೋ ಗೊತ್ತಿಲ್ಲ. ಆದರೆ, ನಾನು ಅವನಿಗಿಂತ ನಿನ್ನನ್ನ ತುಂಬಾ ಪ್ರೀತಿಸುತ್ತೇನೆ. ಅವನು ಎಷ್ಟು ಪ್ರೀತಿಸುತ್ತಾನೆ ಅಂತ ನೀ ತಿಳಿದಿದ್ದಿಯೋ ಅದಕ್ಕಿಂತ ಹೆಚ್ಚು ನಾ ನಿನ್ನ ಪ್ರೀತಿಸುತ್ತೇನೆ. ಯಾಕೆಂದರೆ, ನನ್ನನ್ನ ನಾನು ಪ್ರೀತಿಸೋದಕ್ಕಿಂತ ಹೆಚ್ಚು ನಿನ್ನನ್ನ ಪ್ರೀತಿಸ್ತಿನಿ. ಒಮ್ಮೊಮ್ಮೆ ಇದೆಲ್ಲಾ ಎಂಥಾ ಹುಚ್ಚಾಟ ಅನಿಸುತ್ತದೆ. ಆದರೆ ಇಷ್ಟೊಂದು ಸಂಭ್ರಮ ಉಕ್ಕಿಸುವ , ಕತ್ತಲೆಯ ಎದೆಯೊಳಗೊಂದು ನೀಲಾಂಜನ ಹೆಚ್ಚಿಡುವ , ಅಪರಿಮಿತ ಸಂತೋಷ ನೀಡುವ, ಈ ಒಲವ ಮಳೆಯಲಿ ನೆನೆಯದೇ ನಾ ಹೇಗೆ ಉಳಿಯಲಿ?
ನಿತ್ಯ ನೋಡುವ ಸಾವಿರ ಮುಖಗಳ ಮೇಲಿನ ಆಳದ ನೋವು ನಲಿವುಗಳು , ಯಾವತ್ತಿನದೋ ಒಲವಿನ ಕಾಣಿಕೆಯೇ ಆಗಿರುತ್ತದಲ್ವಾ? ಮತ್ತೆ ನಿನ್ನ ನೋಡಲು ನಾನು ಇಡೀ ರಾತ್ರಿ ಸುಟ್ಟು ಹಗಲಾಗಿಸಿಕೊಳ್ಳಬೇಕು. ನಿನ್ನ ನೆನಪುಗಳ ಜ್ವರದಲ್ಲಿ ಬೇಯಬೇಕು. ನನ್ನ ಕನಸುಗಳ ದರ್ಬಾರಿಗೆ ನಿನ್ನ ಬರಮಾಡಿಕೊಳ್ಳಬೇಕು. ಈ ಬದುಕಿನ ಪ್ರತೀ ಕ್ಷಣದಲ್ಲೂ ನೆರಳಿನಂತೆ ಜತೆಗೇ ನೀ ಇರುವಾಗ ನಾ ಒಬ್ಬಂಟಿ ಅಂತ ಹೇಗಾದರೂ ಅಂದುಕೊಳ್ಳಲಿ. ಯಾವತ್ತಾದರೂ ನನ್ನ ಉಸಿರು ನಿನ್ನ ತಲುಪಲಿ. ನಿಟ್ಟುಸಿರು ನನ್ನಲ್ಲೇ ಉಳಿಯಲಿ.
ಕಣ್ಣಿಗೆ ಕತ್ತಲು ಕವಿಯುವ ಮುನ್ನ ನಿನ್ನ ನೋಡುವೆನೆಂಬ ಭರವಸೆಗೆ ವಯಸ್ಸಾಗದಿರಲಿ.
ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ…..
ನಿನ್ನವನು
ಜೀವ ಮುಳ್ಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.