ಬೆಳಗೆರೆಯಲ್ಲಿ ಬಾಪೂ ನೆರಳು
Team Udayavani, Oct 9, 2018, 6:00 AM IST
ಗಾಂಧೀಜಿ ನಾನಾ ರೂಪಗಳಲ್ಲಿ ನಮ್ಮ ನಡುವೆಯೇ ಇದ್ದಾರೆ. ರಸ್ತೆ, ವೃತ್ತ, ಪಠ್ಯಪುಸ್ತಕ, ಕತೆ, ಸಿನಿಮಾ ಹೀಗೆ ಹುಡುಕುತ್ತಾ ಹೋದರೆ ಅಸಂಖ್ಯ ಪಟ್ಟಿ ಸಿಗುತ್ತದೆ. ಗಾಂಧಿಯನ್ನು ಜೀವಂತವಾಗಿಸಿರುವ ಶಾಲೆಯ ಕತೆ ಇಲ್ಲಿದೆ. ಬಯಲುಸೀಮೆಯ ಗಾಂಧಿ ಎಂದೇ ಹೆಸರಾದ ಬೆಳಗೆರೆ ಕೃಷ್ಣಶಾಸ್ತ್ರಿಯವರು ಕಲ್ಲು ಮಣ್ಣು ಹೊತ್ತು ಕಟ್ಟಿದ ಶಾಲೆಯಿದು. ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಈ ಶಾಲೆ ಗಾಂಧಿಯವರ ಕನಸನ್ನು ಸಾಕಾರಗೊಳಿಸುತ್ತಲೇ ಇದೆ. ಗಾಂಧಿ ಜಯಂತಿಯ ನೆಪದಲ್ಲಿ ಲೇಖಕರು ಈ ಶಾಲೆಗೆ ಭೇಟಿ ನೀಡಿದ್ದರ ಅನುಭವ ಕಥನ ಇಲ್ಲಿದೆ…
ಸೀತಾರಾಮಶಾಸ್ತ್ರಿ ಪ್ರೌಢಶಾಲೆ, ಬೆಳಗೆರೆ, ನಾರಾಯಣಪುರ ಗ್ರಾಮ, ಚಳ್ಳಕೆರೆ ತಾ., ಚಿತ್ರದುರ್ಗ ಜಿಲ್ಲೆ
ಜನುಮದಿನದ ಖುಷಿಯೇ? ಮನೆಯಲ್ಲಿ ಶುಭಕಾರ್ಯವೇ? ಯಾವುದೇ ಒಂದು ಖುಷಿಯ ಕಾರಣ ಜತೆಗಿರಲಿ. ಆ ನೆಪದಲ್ಲಿ ಈ ಶಾಲೆಯ ವಿಳಾಸಕ್ಕೇನಾದರೂ ಚಿಕ್ಕಾಸಿನ ಕೊಡುಗೆಯನ್ನು ಪೋಸ್ಟ್ ಮಾಡಿಬಿಟ್ಟರೆ, ಕೂಡಲೇ ಒಂದು ಸಹಿಯೊಂದಿಗೆ ರಶೀದಿಯೊಂದು ಮನೆಬಾಗಿಲಿಗೆ ತಲುಪುತ್ತದೆ. “ಹಾಸ್ಟೆಲಿನ 200 ಬಡಮಕ್ಕಳಿಗೆ ನಿಮ್ಮ ಹಿರಿಯರ ಹೆಸರಿನಲ್ಲಿ ಅಥವಾ ನಿಮ್ಮ ಮಗುವಿನ ಹೆಸರಿನಲ್ಲಿ ಇಂಥ ತಾರೀಖೀನಂದು ಊಟ ಹಾಕಿದ್ದೇವೆ. ಮಕ್ಕಳೆಲ್ಲ ಖುಷಿಪಟ್ಟರು’ ಎಂಬ ಸಾಲುಗಳೂ ಆ ಚೀಟಿಯಲ್ಲಿ ಅಚ್ಚಾಗಿರುತ್ತವೆ. ಬಹುಶಃ ಇಂಥ ರಶೀದಿಗಳು ನಾಡಿನ ಸಹಸ್ರಾರು ಮಂದಿಯ ಮನೆಯಲ್ಲಿ ನೆನಪಿನ ಬಿಂಬಗಳಾಗಿವೆ.
ಆ ಪ್ರತಿಬಿಂಬಗಳಲ್ಲೇ ಮತ್ತೆ ಮತ್ತೆ ಕಾಣುವವರು “ಬಯಲುಸೀಮೆಯ ಗಾಂಧಿ’ ಅಂತಲೇ ಹೆಸರಾಗಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಯವರು. ಜನರ ಈ ಉದಾರತೆಯಿಂದಲೇ, ಸರ್ಕಾರದಿಂದ ಪುಡಿಗಾಸನ್ನೂ ಬಯಸದೇ ಈ ಶಾಲೆಯನ್ನು ಕಟ್ಟಿದರು. ಗಾಂಧೀಜಿ ಕರ್ನಾಟಕಕ್ಕೆ ಹಲವು ಸಲ ಬಂದಿದ್ದಾರೆ; ಅಲ್ಲಿ ಇಲ್ಲಿ ವಾಸ್ತವ್ಯ ಹೂಡಿದ್ದಾರೆ; ಹತ್ತಾರು ಕಡೆ ಚಳವಳಿ ಕಟ್ಟಿದ್ದಾರೆ; ಇಲ್ಲಿನ ಸಹಸ್ರಾರು ಜನರನ್ನು ಪ್ರಭಾವಿಸಿದ್ದಾರೆ ಎಂಬುದೆಲ್ಲ ನಿಜವೇ. ಹಾಗೆ ಪ್ರಭಾವಿತರಾಗಿ, ಕೊನೆಯತನಕ ಗಾಂಧಿಯ ತತ್ವಗಳನ್ನು ಬಿತ್ತಿದ, ಉಸಿರು ಉಡುಗಿದ ನಂತರವೂ ಮಹಾತ್ಮನ ತತ್ವಗಳನ್ನು ಹಸಿರಾಗಿಸುತ್ತಲೇ ಇರುವವರು ಬೆಳಗೆರೆ ಕೃಷ್ಣಶಾಸ್ತ್ರಿ. ಇವತ್ತಿಗೂ ಚಳ್ಳಕೆರೆ ಸಮೀಪದ ನಾರಾಯಣ ಪುರದಲ್ಲಿರುವ ಸೀತಾರಾಮಶಾಸ್ತ್ರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿಯ ನೆರಳೇ ಕಾಣಿಸುತ್ತದೆ. ನಿತ್ಯವೂ ಗಾಂಧೀಜಿಯನ್ನು ಸ್ಮರಿಸುತ್ತಲೇ, ಅವರ ತತ್ವಗಳನ್ನು ಹೃದಯದಲ್ಲಿ ಕೂರಿಸಿಕೊಂಡೇ, ಒಂದು ತರಗತಿಯಿಂದ ಮತ್ತೂಂದಕ್ಕೆ ದಾಟುತ್ತಾರೆ ಇಲ್ಲಿನ ಮಕ್ಕಳು. ಶಾಂತಿ- ಶಿಸ್ತು- ಅಹಿಂಸೆಯ ಮಹತ್ತರ ಪಾಠವೇ ಇಲ್ಲಿನ ಪ್ರಧಾನ ಸರ್ಟಿಫಿಕೇಟ್.
ಊರವರ ಪ್ರೀತಿಯ ಮೇಷ್ಟ್ರು
ಅಪ್ಪಟ ಗಾಂಧಿವಾದಿಯಾಗಿದ್ದ ಶಾಸ್ತ್ರಿಗಳು ಕೊನೆಯವರೆಗೂ ಶ್ವೇತಧಾರಿಯಾಗಿಯೇ ಇದ್ದರು. ಶಾಲೆಗೆ ಸೇರಿದ 9 ಎಕರೆ ಜಮೀನಿನ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಬಾಗಿಲಿಲ್ಲದ ಗುಡಿಸಲೇ ಅವರ ಅರಮನೆಯಾಗಿತ್ತು. ಅವರು, ನಡಿಗೆಯ ಮೂಲಕವೇ ಬಹುಪಾಲು ರಾಜ್ಯ ಸುತ್ತಿದರು. ಊರವರು ಅವರನ್ನು ಪ್ರೀತಿಯಿಂದ “ಕಿಟ್ಟಪ್ಪ’, “ಮೇಷ್ಟ್ರು’ ಎಂದು ಕರೆಯುತ್ತಿದ್ದರು. ಮಕ್ಕಳು “ಅಜ್ಜಾರೇ ‘ಎಂದು ಕರೆಯುತ್ತಿದ್ದರಂತೆ. ಈಗ ಇಲ್ಲಿನ ಮಕ್ಕಳಲ್ಲಿ ಅನೇಕರು, “ಅಜ್ಜಾ’ ಅವರನ್ನು ಫೋಟೋದಲ್ಲಿ ಕಂಡವರು. ಆ ಫೋಟೋಗೆ ಜೀವವಿದೆ ಎನ್ನುತ್ತಾ ನಿತ್ಯವೂ ಅದಕ್ಕೆ ಕರ ಮುಗಿದು, ಅದರೆದುರು ಗಲಾಟೆ ಮಾಡದೇ, ಶ್ರದ್ಧೆಯಿಂದ ಪಾಠಗಳನ್ನು ಕೇಳುತ್ತಾರೆ.
ಗಾಂಧೀಜಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಗಾಂಧೀಜಿಯವರಂತೆಯೇ ಬಾಳಿದವರು ಶಾಸ್ತ್ರಿಗಳು. ಸಣ್ಣ ಹಳ್ಳಿಯೊಂದರಲ್ಲಿ ಉಪಾಧ್ಯಾಯರಾಗಿದ್ದುಕೊಂಡೇ ಒಬ್ಬ ವ್ಯಕ್ತಿ ಏನೆಲ್ಲ ಮಾಡಬಹುದು? ಗಾಂಧಿ ಕಂಡ ಕನಸನ್ನು ತಮ್ಮದಾಗಿಸಿಕೊಂಡು ಸಾಮಾಜಿಕ ಪರಿವರ್ತನೆ, ಶಿಕ್ಷಣ ಸುಧಾರಣೆ, ಪರಿಸರ ಸಂರಕ್ಷಣೆ ಮಾಡಲು ಹೇಗೆ ಸಾಧ್ಯವಾಯಿತು ಎಂಬುದು ಅವರ ಜೀವನ ಚರಿತ್ರೆಯಿಂದ ತಿಳಿದುಬರುತ್ತದೆ.
ಅಜ್ಜ ಕಟ್ಟಿದ ಶಾಲೆ
ಕೃಷ್ಣಶಾಸ್ತ್ರಿಗಳ ತಂದೆ ಚಂದ್ರಶೇಖರ ಶಾಸ್ತ್ರಿಗಳು ಸಾಯುವುದಕ್ಕೆ ಮುಂಚೆ ಮಗನನ್ನು ಪಕ್ಕಕ್ಕೆ ಕೂರಿಸಿಕೊಂಡರು. ಮಗನ ಕೈ ಹಿಡಿದು “ಕಿಟ್ಟಪ್ಪಾ, ಈ ಮಣ್ಣು ನಮಗೆ ಎರಡು ಹೊತ್ತು ಅನ್ನ ಹಾಕಿದೆ. ಈ ಮಣ್ಣಿನ ಋಣ ತೀರಿಸಬೇಕಾದರೆ, ಇಲ್ಲಿನ ಬಡ ಮಕ್ಕಳಿಗೆ ಎರಡೊತ್ತು ಅನ್ನ ಹಾಕಿ, ಅಕ್ಷರ ಕಲಿಸು’ ಎಂದು ಕಣ್ಮುಚ್ಚಿದ್ದರಂತೆ. ಅಪ್ಪನ ಕೊನೆ ಆಸೆ ಈಡೇರಿಸುವ ಸಲುವಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಗ್ರಾಮಗಳ ಅಭಿವೃದ್ಧಿ ಆಯಾಯ ಗ್ರಾಮಸ್ಥರಿಂದಲೇ ಆಗಬೇಕು ಎಂಬ ಮಹಾತ್ಮ ಗಾಂಧೀಜಿಯವರ ಮಾತಿಗೆ ಓಗೊಟ್ಟರು. 1967ರಲ್ಲಿ ಸಹೋದರ ಬಿ. ಸೀತಾರಾಮಶಾಸ್ತ್ರಿಗಳ ಹೆಸರಿನಲ್ಲಿ ಪ್ರೌಢಶಾಲೆ, ನಂತರದ ದಿನಗಳಲ್ಲಿ ಶಾರದಾ ಮಂದಿರ ವಿದ್ಯಾಸಂಸ್ಥೆ ಹೆಸರಿನಲ್ಲಿ ಕಾಲೇಜೂ ತಲೆ ಎತ್ತಿವೆ. ಈಗಲೂ ಇದು ಜನರ ನೆರವಿನಿಂದಲೇ ಮುನ್ನಡೆಯುತ್ತಿದೆ.
ಗಾಂಧಿ ತತ್ವವೇ ಮುಖ್ಯ ಪಾಠ…
ಈ ಶಾಲೆಯ ವಿದ್ಯಾರ್ಥಿಗಳು ಗಾಂಧೀಜಿಯ ಸಾನ್ನಿಧ್ಯವನ್ನು ಅನುಭವಿಸುತ್ತಿದ್ದಾರೆ. ಪಠ್ಯ ಮಾತ್ರವಲ್ಲದೆ ಗಾಂಧೀಜಿಯವರ ಏಳು ಸಾಮಾಜಿಕ ಪಾಪಗಳಾದ ತತ್ವ ರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ನೀತಿ ಹೀನ ವ್ಯಾಪಾರ, ಶೀಲ ಇಲ್ಲದ ಶಿಕ್ಷಣ, ಆತ್ಮಸಾಕ್ಷಿ ರಹಿತ ಭೋಗ, ಮಾನವತಾ ಶೂನ್ಯ ಜ್ಞಾನ, ತ್ಯಾಗವಿಲ್ಲದ ಪೂಜೆ ಮುಂತಾದವಕ್ಕೆ ಇವರೂ ವಿರುದ್ಧವೇ. ಸರ್ವ ಧರ್ಮ ಸಮನ್ವಯತೆ, ಸ್ಥಳೀಯ ವಸ್ತುಗಳ ಕುರಿತ ನುಡಿಮುತ್ತುಗಳು ಮಕ್ಕಳ ಬಾಯಲ್ಲಿ ಪಠಣಗೊಳ್ಳುತ್ತಿವೆ. ಪ್ರೌಢಶಾಲೆಯಲ್ಲಿ 230 ವಿದ್ಯಾರ್ಥಿಗಳು, ಕಾಲೇಜಿನಲ್ಲಿ 156 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗುಣಾತ್ಮಕ ಶಿಕ್ಷಣ ಮತ್ತು ವಸತಿ ಸೌಲಭ್ಯ ಎರಡೂ ಇಲ್ಲಿ ಸಂಪೂರ್ಣ ಉಚಿತವೆನ್ನುವುದು ಶ್ಲಾಘನೀಯ.
ಮಹಿಳೆಯರಿಗೆ ಸ್ವಯಂ ಉದ್ಯೋಗ
ಇದಿಷ್ಟು ಶಾಲೆಯ ವಿಚಾರವಾದರೆ, ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ನಡೆಸುತ್ತಿರುವ ಹೊಲಿಗೆ ತರಬೇತಿ ಬಗ್ಗೆ ಹೇಳದಿದ್ದರೆ ಪೂರ್ಣವಾಗದು. ಇಲ್ಲಿ ಪ್ರತಿ ಬ್ಯಾಚ್ ಹೊಲಿಗೆ ತರಬೇತಿಗೆ 30 ಯುವತಿಯರ ತನಕ ಉಚಿತ ತರಬೇತಿ ನೀಡಲಾಗುತ್ತದೆ. ಜಿಲ್ಲೆಯ ನಾನಾ ಭಾಗಗಳಿಂದ ಯುವತಿಯರು ಇಲ್ಲಿ ಹೊಲಿಗೆ ತರಬೇತಿ ಪಡೆದು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. “ಒಂದು ರೂ. ಪಾವತಿ ಮಾಡದೆ ಹೊಲಿಗೆ ತರಬೇತಿ ಕಲಿಯುತ್ತಿದ್ದೇವೆ’ ಎಂದು ಮೀರಾಸಾಬಿಹಳ್ಳಿ ಪದ್ಮಾ, ಶಾಸ್ತ್ರಿಗಳನ್ನು ಹೆಮ್ಮೆಯಿಂದ ನೆನೆಯುತ್ತಾರೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳು ಕಟ್ಟಿದ ಈ ಶಾಲೆ, ಗ್ರಾಮೀಣ ಭಾಗದವರ ಮೇಲೆ ಅವರಿಗಿದ್ದ ಪ್ರೀತಿ, ತ್ಯಾಗ, ಸೇವೆಯ ಸಂಕೇತ. ಅಷ್ಟೇ ಅಲ್ಲದೆ, ಗಾಂಧೀ ತತ್ವಗಳು ನಮ್ಮ ನಡುವೆಯಿನ್ನೂ ಜೀವಂತವಾಗಿರುವುದರ ಕುರುಹು ಕೂಡಾ ಹೌದು.
– ಹರಿಯಬ್ಬೆ ಹೆಂಜಾರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.