ನಾನು ಸ್ಕೂಲ್‌ಗೆ ಹೋಗ್ಬೇಕು ಸ್ವಾಮೀ… ನಮ್ಮೂರಿಗೆ ಒಂದು ರಸ್ತೆ ಮಾಡಿಸ್ಕೊಡಿ!
ನಾವೆಲ್ಲಾ ಇವತ್ತಿಗೂ ಅಲ್ಲೇ ಇದ್ದೀವಿ
Team Udayavani, Feb 2, 2021, 1:48 PM IST
ಚಿಕ್ಕಮಗಳೂರು : ದೊಡ್ಡವರಿಗೆಲ್ಲಾ ನಮಸ್ಕಾರ. ನಾನು ಸಂದೇಶ್. ನನ್ನೂರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಹಾದಿಓಣಿ ಗ್ರಾಮದ ಹೊಳೆಕೂಡಿಗೆ. ನನ್ನ ತಂದೆ ಸತೀಶ್, ತಾಯಿ ಸವಿತಾ. ನಾನೀಗ ಮಾಗುಂಡಿಯ ಸರ್ಕಾರಿ ಶಾಲೆಯಲ್ಲಿ ಆರನೇ ಕ್ಲಾಸ್ ಓದುತ್ತಿದ್ದೇನೆ. ನಾನು ಶಾಲೆಗೆ ಹೋಗ್ಬೇಕು ಅಂದ್ರೆ ಪ್ರತಿದಿನ ಹೊಳೆ ದಾಟ್ಲೆಬೇಕು. ಅದೆಷ್ಟೇ ಮಳೆ ಇರಲಿ, ಅದೇನೇ ಪ್ರವಾಹ ಇರಲಿ; ನಾನು ತೆಪ್ಪದಲ್ಲಿ ಭದ್ರಾ
ನದಿ ದಾಟಿದರೆ ಮಾತ್ರ ಶಾಲೆಗೆ ಹೋಗೋಕೆ ಸಾಧ್ಯ. ಅಯ್ಯೋ, ಈ ಹುಡುಗ ಅದೇಕೆ ಹೀಗೆ ಹೇಳ್ತಿದ್ದಾನೆ ಅಂತ ವಿಚಿತ್ರವಾಗಿ ನೋಡ್ಬೇಡಿ. ನನ್ನೂರಿಗೆ ರಸ್ತೆ ಇಲ್ಲ ಕಂಡ್ರೀ.
ನಮ್ಮ ಗೋಳು ಕೇಳ್ಳೋರಿಲ್ಲ. ಭದ್ರಾನದಿಯ ಒಂದು ಮಗುಲಲ್ಲಿ ನನ್ನ ಹಳ್ಳಿ. ಇನ್ನೊಂದು ಮಗುಲಲ್ಲಿ ಮಾಗುಂಡಿ ರಸ್ತೆಯಿದೆ. ನನ್ನ ಅಪ್ಪ-ಅಮ್ಮ ದಿನಸಿ ಸಾಮಾನು ತರಬೇಕು, ಸೊಸೈಟಿಗೆ ಹೋಗ್ಬೇಕು, ಹುಷಾರಿಲ್ಲ ಆಸ್ಪತ್ರೆ ಮುಖ ನೋಡ್ಬೇಕು ಅಂದ್ರೂ ಈ ಹೊಳೆ ದಾಟಲೇ ಬೇಕು. ಈಗ ಎರಡು ವರ್ಷದ ಹಿಂದೆ ಆಗ… ನಲ್ಲಿ ಮಹಾಮಳೆ ಬಂದಿತ್ತು. ಒಂದು ವಾರ ಎಡಬಿಡದೆ ಮಳೆ ಸುರಿಯುತ್ತಲೇ ಇತ್ತು. ಅದೇ ಸಮಯಕ್ಕೆ ಸರಿಯಾಗಿ ನನ್ನ ಅಜ್ಜ ರುದ್ರಯ್ಯನಿಗೆ ಉಬ್ಬಸ ಜೋರಾಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂದ್ರೆ ರಸ್ತೆಯಿಲ್ಲ.
ತೆಪ್ಪದಲ್ಲಿ ನದಿ ದಾಟೋಣ ಅಂದ್ರೆ ಪ್ರವಾಹ ಬಂದುಬಿಟ್ಟಿದೆ.
ಕೊನೆಗೂ ನನ್ನ ಅಜ್ಜನನ್ನು ನದಿ ದಾಟಿಸಲಾಗದೆ ಅವರು ತೀರಿಹೋದ್ರು. ಹೀಗೇ ಕಳೆದ ಮಳೆಗಾಲದಲ್ಲಿ ನನ್ನ ಚಿಕ್ಕಪ್ಪ ರಾಘವೇಂದ್ರ ಕೂಡಾ ಜಾಂಡೀಸ್ ಜೋರಾಗಿ ಸತ್ತು ಹೋದ್ರು. ಮತ್ತೆ ಕೆಲವು ದಿನಕ್ಕೆ ಅತ್ತೆ ಶಶಿಕಲಾ ಅನಾರೋಗ್ಯದಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಹೋಗಿಬಿಟ್ರಾ. ಈ ಎಲ್ಲರ ಸಾವಿಗೂ ನನ್ನೂರಿಗೆ ಸಂಪರ್ಕ ಇಲ್ಲದೇ ಇರುವುದೇ ಕಾರಣ. ನಾನು ಆಪ್ತರನ್ನು ಅನ್ಯಾಯವಾಗಿ ಕಳೆದುಕೊಂಡಿದ್ದೇನೆ. ನಲವತ್ತು ವರ್ಷದ ಹಿಂದೆ, ಅಂದ್ರೆ 1981ರಲ್ಲಿ ನನ್ನಜ್ಜಂದಿರಾದ ರುದ್ರಯ್ಯ-ಕೃಷ್ಣಯ್ಯರಿಗೆ ಸರ್ಕಾರವೇ ಮೂರ್ಮೂರು ಎಕರೆ ಭೂಮಿ ಮಂಜೂರು ಮಾಡಿತಂತೆ. ಅವತ್ತಿಂದ ಆ ಎರಡೂ ಕುಟುಂಬಗಳು ಭದ್ರಾ ನದಿಯ ತಟದಲ್ಲಿ ಜೀವನ ಸಾಗಿಸ್ತಾ ಇದ್ದಾವೆ.
ಓದಿ : ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ
ನಾವೆಲ್ಲಾ ಇವತ್ತಿಗೂ ಅಲ್ಲೇ ಇದ್ದೀವಿ. ಆದರೆ, ಇಂದಿನವರೆಗೂ ನಮ್ಮೂರಿಗೆ ರಸ್ತೆ ಮಾಡಿಕೊಟ್ಟಿಲ್ಲ. ನಮ್ಮ ಜಾಗದ ಪಕ್ಕ ಒಂದು ಕಾμ ಎಸ್ಟೇಟ್ ಇದೆ. ಅದರೊಟ್ಟಿಗೆ ಸ್ವಲ್ಪ ಕಾಡು ಇದೆ. ಆ ಕಾಡು ಅರಣ್ಯ ಇಲಾಖೆಗೆ ಸೇರಿತ್ತಂತೆ. ಕಾಫಿ ಎಸ್ಟೇಟ್ ನವರು ಅಲ್ಲಿದ್ದ ಮರಗಳನ್ನೆಲ್ಲಾ ಕಡಿದು, ಅರಣ್ಯ ಇಲಾಖೆಯ ಬೋರ್ಡ್ ಕಿತ್ತು ಹಾಕಿ ಒತ್ತುವರಿ ಮಾಡಿದ್ರಂತೆ. ಇದರಿಂದ ಸಿಟ್ಟುಗೊಂಡ ಅರಣ್ಯ ಇಲಾಖೆಯವರು ಕೋರ್ಟ್‌ಗೆ ಹೋದ್ರಂತೆ. ತಕ್ಷಣ ಎಸ್ಟೇಟ್ ನವರು ಹೋಗಿ ತಡೆಯಾಜ್ಞೆ ತಂದ್ರಂತೆ. ಈಗ ಅದೆಲ್ಲಾ ಕಥೆ ಏನಕ್ಕೆ ನಿಮ್ಮತ್ರ ಹೇಳ್ತಾ ಇದೀನಿ ಅಂದ್ರೆ, ನಮ್ಮೂರಿಗೆ ರಸ್ತೆ ಮಾಡ್ಬೇಕು ಅಂದ್ರೆ ಈ ಜಾಗದಲ್ಲೇ ಅದು ಹಾದು ಹೋಗ್ಬೇಕಾಗಿರೋದ್ರಿಂದ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ಇದೇ ಕಥೆ ಹೇಳ್ತಾರೆ.
ನಿಮ್ಮೂರಿಗೆ ರಸ್ತೆ ಮಾಡೋಕಾಗೊಲ್ಲ ಅಂತಾರೆ. ನಂಗೆ ಈ ಕೋರ್ಟ್, ತಡೆಯಾಜ್ಞೆ ಏನೂ ಅರ್ಥವಾಗಲ್ಲ. ಒಟ್ಟಿನಲ್ಲಿ ನನ್ನೂರಿಗೆ ರಸ್ತೆ
ಇಲ್ಲ. ಬೇರೆಯ ಊರಂತೆ ನನಗೂ ರಸ್ತೆ ಬೇಕು ಅಷ್ಟೇ. ನನ್ನೂರು ಕೂವೆ ಗ್ರಾಮ ಪಂಚಾಯಿತಿಗೆ ಸೇರುತ್ತೆ. ಇಲ್ಲಿನ ಸಮಸ್ಯೆ ಬಗ್ಗೆ ಪೇಪರ್, ಟೀವಿಲಿ ಎಲ್ಲಾ ಬಂದು ಎ.ಸಿ, ತಹಶೀಲ್ದಾರ್, ಪಿಡಿಒ ಯಾರ್ಯಾರೋ ಆಫೀಸರ್‌ಗಳೆಲ್ಲಾ ಬಂದು ಹೋದ್ರು. ರಾಜಕಾರಣಿಗಳು ಈ ವರ್ಷದ ಎಲೆಕ್ಷನ್ನಿಗೆ ಬಂದ್ರೆ ಮತ್ತೆ ಮುಂದಿನ ಚುನಾವಣೆಗೇ ಬರೋದು.
‘ನಿಮಗೆ ರಸ್ತೆ ಮಾಡೋ ಹಾಗೇ ಇಲ್ಲ, ಕೇಸ್ ಕೋರ್ಟಲ್ಲಿ ಇದೆ, ತೂಗುಸೇತುವೆ ಮಾಡಿಕೊಡ್ತೀವಿ’ ಅಂತ ಹೇಳಿ ವರ್ಷ ವರ್ಷವೇ ಉರುಳಿತು. ಅದು ಬರೇ ಭರವಸೆಯಾಗಿ ಇವತ್ತಿಗೂ ಉಳಿದಿದೆ. ಹಾಗೀಗಂತ ಪುನಃ ಮಳೆಗಾಲ ಬರುತ್ತೆ, ಈ ಮಳೆಗಾಲದಲ್ಲೂ ನಾವೆಲ್ಲಾ ಜೀವ ಕೈಯಲ್ಲಿ ಹಿಡಿದು ನದಿಯಲ್ಲಿ ಹುಟ್ಟು ಹಾಕುತ್ತಾ ಶಾಲೆಗೆ ಹೋಗ್ಬೇಕು. ನಾನು ಶಾಲೆಗೆ ಹೋಗಲು ಪಡುವ ಕಷ್ಟ ಯಾರಿಗೂ ಅರ್ಥವಾಗಲ್ಲ. ಅಪ್ಪ ಹೇಳ್ತಾ ಇರ್ತಾರೆ, “ಚತುಷ್ಪಥ ಹೆದ್ದಾರಿ, ರೈಲ್ವೇ ಮಾರ್ಗ, ವಿಮಾನ ನಿಲ್ದಾಣ, ಕೇಬಲ್ ಕಾರು ಅದು ಇದು ಏನೇನೋ ಮಾಡೋಕೆ ಸರ್ಕಾರದ ಹತ್ತಿರ ದುಡ್ಡಿರುತ್ತೆ. ನಮ್ಮಂತಹ ಹಳ್ಳಿಗೆ ಕನಿಷ್ಠ ರಸ್ತೆನೋ, ಸೇತುವೇನೋ ಏನೋ ಒಂದು ಮಾಡೋಕೆ ಅದ್ರ ಹತ್ತಿರ ಹಣವಿರಲ್ಲ.
ನಮ್ಮೂರಲ್ಲಿ ಇರೋದು ಮೂರು ಮತ್ತೂಂದು ಓಟಾಗಿರೋದ್ರಿಂದ ಅವ್ರು ನಮ್ಕಡೆ ಗಮನಹರಿಸೊಲ್ಲ. ಬಡವರು ಅಂದ್ರೆ ಎಲ್ಲರಿಗೂ ತಾತ್ಸಾರ’ ಅಂತ. ಅದೆಲ್ಲಾ ರಾಜಕೀಯ ನಂಗೆ ಅರ್ಥವಾಗಲ್ಲ. ಆದರೆ ನನ್ನ ಫ್ರೆಂಡ್ಸ್ ಎಲ್ಲಾ ಶಾಲೆಗೆ ರಸ್ತೇಲಿ ಬರ್ತಾರೆ. ನಾನು ಮಳೆಗಾಲದಲ್ಲೂ ಜೀವ ಪಣಕ್ಕಿಟ್ಟು ಹುಟ್ಟು ಹಾಕುತ್ತಾ ತೆಪ್ಪದಲ್ಲಿ ನದಿ ದಾಟಿ ಹೋಗ್ಬೇಕು. ನಂಗೆ ಬೇರೇನೂ ಬೇಕಾಗಿಲ್ಲ. ದಯಮಾಡಿ ನಮ್ಮೂರಿಗೊಂದು ರಸ್ತೆನೋ, ನದಿ ದಾಟೋಕೆ ತೂಗು ಸೇತುವೆನೋ ಮಾಡಿಕೊಡಿ ಸ್ವಾಮಿ. ನಿಮ್ಮಂತೆಯೇ ನಾನು ಕೂಡಾ ಮನುಷ್ಯ. ನನಗೂ ಮೂಲಭೂತ ಸೌಕರ್ಯ ಪಡೆಯುವ ಹಕ್ಕಿದೆ.
*ನಾಗರಾಜ ಕೂವೆ
ಓದಿ : ಕಾಪು: ರೈತ ವಿರೋಧಿ, ಬೀಡಿ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.