![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 11, 2020, 1:52 PM IST
ಸಾಂದರ್ಭಿಕ ಚಿತ್ರ
ಢಣ..ಢಣ… ಘಂಟೆ ಬಾರಿಸುವ ಮೊದಲೇ ಶಾಲೆಯ ಬಾಗಿಲು ತೆರೆದಿರುತ್ತಿತ್ತು. ನಾವು ಹಾಗೂ ನನ್ನಂಥ ಹಲವರು ಅವ್ವ ಕೊಟ್ಟ ಬುತ್ತಿ ಗಂಟನ್ನು ಕೈಲಿ ಹಿಡಿದು, ಪಾಟಿಚೀಲವನ್ನು ಬೆನ್ನಿಗೆ ಏರಿಸಿಕೊಂಡು ಸಂಭ್ರಮದಿಂದ ಶಾಲೆಗೆ ಓಡುತ್ತಿದ್ದೆವು. ಅಕ್ಕಾವ್ರು, ಮಾಸ್ತರ್ರು ಅ…ಆ…ಇ…ಈ.. ಕಲಿಸುತ್ತಿದ್ದರು. ಮಧ್ಯಾಹ್ನ ಆಗುತ್ತಿದ್ದಂತೆಯೇ ಊಟಕ್ಕೆ ಬಿಡುತ್ತಿದ್ದರು.
ಸಂಜೆ ಆಟದ ಸಮಯದಲ್ಲಿ ರಾಮು, ಶಾಮ, ಮಲ್ಲು , ಕೆಂಚಪ್ಪ ,ಶೀಲಾ, ಗೌರಿ, ಯಮುನವ್ವ ಎಲ್ಲರೂ ಸೇರಿ ಲಗೋರಿ, ಕಾಲ್ಚೆಂಡು, ಕುಂಟೋ ಬಿಲ್ಲೆ, ಡುಬ್ಬಕ್ಕೆ ಚೆಂಡು ಹೊಡೆಯುವ ಆಟ ಆಡಿ, ಕುಣಿದು ನಲಿಯುತ್ತಿದ್ದೆವು. ಸಂಜೆ ಮನೆಗೆ ಬರುವಾಗ ಹುಣಸೆಮರದಲಿ ಮರಕೋತಿ ಆಡುತ್ತಿದ್ದೆವು. ರಾತ್ರಿಯ ವೇಳೆ ಅಜ್ಜಿಯ ಕತೆಯನು ಕೇಳುತ ಮಲಗುತ್ತಿದ್ದೆವು. ಹೆಚ್ಚಿನ ಸಂದರ್ಭದಲ್ಲಿ ಮಳೆಗಾಲ ಶುರುವಾದ ದಿನವೇ ನಮ್ಮ ಶಾಲೆಯೂ ಆರಂಭವಾಗುತ್ತಿತ್ತು. ನಮ್ಮ ಹಾಜರಿ ಶಾಲೆಯಲ್ಲಿ, ಮಳೆಯ ಹಾಜರಿ ಊರಿನಲ್ಲಿ.
***
ಈಗ ಇದೆಲ್ಲಾ ಬರೀ ನೆನಪು. ನಮ್ಮ ಬಾಲ್ಯದ ಬಂಗಾರದ ದಿನಗಳು ಅವು. ಶಾಲೆ ಪ್ರಾರಂಭದ ದಿನದ ಸಂಭ್ರಮಕ್ಕೆ ಸರಿಸಾಟಿ ಅನ್ನಿಸುವಂಥ ದಿನ ಬೇರೊಂದಿಲ್ಲ. ಕೆಲವರಿಗೆ ಅದು ಸಜೆ, ಇನ್ನು ಕೆಲವರಿಗೆ ಖುಷಿಗೊಂದು ಹೊಸ ಕಾರಣ. ಭರ್ತಿ ಎರಡು ತಿಂಗಳ ಬಿಡುವಿನ ನಂತರ, ಎಲ್ಲಾ ಗೆಳೆಯರು ಸೇರುವ ತಾಣದಲ್ಲಿ ಕಲರವ. ಪಾಠ, ಆಟ, ಚೀರಾಟ, ತಿರುಗಾಟ, ಸಣ್ಣಪುಟ್ಟ ಹೊಡೆದಾಟಕ್ಕೆ ಚಾಲನೆ ಸಿಗುವ ದಿನವಿದು. ನಾವು ನಾಲ್ಕು ಗೋಡೆಗಳ ಮಧ್ಯೆ ಕಲಿತಿದ್ದಕ್ಕಿಂತಲೂ ಹೊರಗಡೆ ಕಲಿತಿದ್ದೇ ಹೆಚ್ಚು. ಆ ಬಾಲ್ಯದ ದಿನಗಳಿಗೆ ಯಾವ ಅಂಕೆ, ಅಡ್ಡಿ, ಆತಂಕ ಇರಲಿಲ್ಲ. ಅಲ್ಲಿ ಸ್ವತ್ಛಂದವಾಗಿ ಹಾರಾಡುತ್ತಾ, ಹಾಡುತ, ನಲಿಯುತ ಕಳೆದುಬಿಟ್ಟಿತು ಬಾಲ್ಯ. ಬದುಕಿನ ತಿರುವಿನಲ್ಲಿ ನಿಂತು ನೋಡಿದಾಗ, ಆ ದಿನಗಳು ಮತ್ತೆ ಮತ್ತೆ ಬರಲಿ ಎಂದು ಆ ದೇವರಿಗೆ ಅಪೀಲು ಹಾಕುತ್ತಲೇ ಇರುತ್ತೇವೆ. ಆದರೆ ಅದು ಬರುವುದಿಲ್ಲ, ನಾವು ಬಿಡುವುದಿಲ್ಲ. ಕಲಿತು ದೊಡ್ಡವರಾಗಿ ದೊಡ್ಡ ಕೆಲಸದಲ್ಲಿ ಇದ್ದರೂ, ಹುಟ್ಟೂರಿನ ನೆನಪು. ಬಾಲ್ಯದಲ್ಲಿ ಕಲಿತ ಶಾಲೆ, ಕಲಿಸಿದ ಮಾಸ್ತರ್, ಆತ್ಮೀಯ ಗೆಳೆಯರು, ಬದ್ಧ ವೈರಿಗಳು, ಹಳೆ ಲಡಕಾಸಿ ಸೈಕಲ್ಲು, ಹಳೆ ಹುಣಸೆ ಮರ, ಪ್ರೀತಿ ಪ್ರೇಮದ ಗುಂಗು ಹಿಡಿಸಿ ಎಲ್ಲರಿಗಿಂತ ಮುಂಚೆಯೇ ಮದುವೆ ಮಾಡಿಕೊಂಡು ಹೋದ ಹುಡುಗಿ, ಪೋಲಿ ಕತೆ ಹೇಳುತ್ತಿದ್ದ ತರ್ಲೆ ಗೆಳೆಯರು, ಊರ ಜಾತ್ರೆ, ಹನುಮನ ಗುಡಿಕಟ್ಟೆ, ಭಜನಾ ಮಂಡಳಿ ಹಾಡುಗಳು, ಇಂಥವೇ ಹಲವು ನೆನಪುಗಳು…
***
ಎಲ್ಲವೂ ಸರಿ ಇದ್ದಿದ್ದರೆ, ಈ ವೇಳೆಗೆ ಶಾಲೆ ಆರಂಭವಾಗಿ ಎರಡು ತಿಂಗಳೇ ಕಳೆದಿರಬೇಕಿತ್ತು. ಆದರೆ, ಜಾಗತಿಕ ಮಹಾಮಾರಿ ಕೋವಿಡ್ ದಿಂದ ಇನ್ನೂ ಎರಡು ತಿಂಗಳು ಶಾಲೆ ಶುರುವಾಗುವುದು ಅನುಮಾನ. ಮಳೆಗಾಲ ಮತ್ತು ಶಾಲೆ ಒಟ್ಟಿಗೇ ಆರಂಭವಾಗುತ್ತಿದ್ದ ಕ್ಷಣಕ್ಕೆ ಸಾಕ್ಷಿಯಾಗುವ ಅದೃಷ್ಟ ಇಂದಿನ ಪೀಳಿಗೆಗೆ ಇಲ್ಲ. ಆಟವೆಂದರೆ ಬರಿ ವಿಡಿಯೋ ಗೇಮ್ಸ್ ಮಾತ್ರ ಎಂಬ ಮನಸ್ಥಿತಿ ಬಂದು ಕುಳಿತಿದೆ. ನಮಗೆ ಸಿಕ್ಕಿದಂಥ ಬಾಲ್ಯದ ಅಮೂಲ್ಯ ನೆನಪುಗಳು ಮುಂದಿನ ಪೀಳಿಗೆಗೆ ಸಿಗುವುದು ಅಪರೂಪವೇ ಸರಿ. ಈ ವರ್ಷ ಮಕ್ಕಳ ಕಲಿಕೆಯು ಯಾಂತ್ರಿಕವಾಗಿದೆ.
ಕಲಿಕೆಯ ಮಾಧ್ಯಮವೂ ಬದಲಾಗಿದೆ. ಮಕ್ಕಳ ಶಿಕ್ಷಣ ಯಾವುದಿರಬೇಕೆಂದು, ಮಕ್ಕಳನ್ನು ಒಂದೇ ಒಂದು ಮಾತೂ ಕೇಳದೆ, ಹೆತ್ತವರೇ ನಿರ್ಧರಿಸುತ್ತಿದ್ದಾರೆ.
***
ಆದಷ್ಟು ಬೇಗ ಮಹಾಮಾರಿ ಕೊರೋನಾ ಹೊರಟು ಹೋಗಲಿ. ಮತ್ತೆ ಶಾಲೆ ತೆರೆಯಲಿ ಢಣ..ಢಣ.. ಘಂಟೆಯ ಸದ್ದು ಕೇಳಲಿ. ಸಂಭ್ರಮದಿಂದ ಮಕ್ಕಳು ಬ್ಯಾಗ್ ಹೆಗಲಿಗೇರಿಸಿಕೊಂಡು ಕುಣಿಯುತ್ತಾ, ನಲಿಯುತ್ತಾ ಶಾಲೆಯ ಹಾದಿ ಹಿಡಿಯಲಿ. ಮಕ್ಕಳ ಕಲರವವು ಶಾಲೆ ಆವರಣ ತುಂಬಲಿ. ವರ್ಗದ ಕೋಣೆಯಿಂದ ಅ..ಆ..ಇ…ಈ.. ಅ..ಆ… ಇ..ಈ. A..B..C..D.. ಕತೆ, ಹಾಡು, ಕುಣಿತ, ಗಲಾಟೆಯ ಸದ್ದು ಕೇಳಿ ಬರಲಿ. ಭವಿಷ್ಯ ಎಂಬ ಗೂಡೊಳಕ್ಕೆ ಮಕ್ಕಳು ಎಂಬ ಪುಟ್ಟ ಮರಿಗಳು ನುಗ್ಗಿಬರಲಿ.
– ವೃಶ್ಚಿಕಮುನಿ
You seem to have an Ad Blocker on.
To continue reading, please turn it off or whitelist Udayavani.