ಬನ್ನಿ, ಮುದುಕರಾಗೋಣ!
Team Udayavani, Jul 30, 2019, 3:01 AM IST
ಫೇಸ್ ಆ್ಯಪ್ ಬಂದಾದ ಮೇಲೆ, ಸೋಷಿಯಲ್ ಮೀಡಿಯಾದಲ್ಲಿ ಈಗ ಎಲ್ಲರೂ ಮುದುಕರೇ! ಸ್ವಾಮಿ ವಿವೇಕಾನಂದರು, ಯಾವತ್ತೂ “ಯಂಗ್’ ಆಗಿರಿ ಅಂದರೆ, ನಾವು ಹೆಂಗೆಂಗೊ ಆಗುತ್ತಿದ್ದೇವೆ. ನನಗೆ ಇವರೆಲ್ಲರೂ ಅಕಾಲ ವೃದ್ಧಾಪ್ಯ ತಂದುಕೊಂಡ “ಯಯಾತಿ’ ನಾಟಕದ ಪುರುವಿನಂತೆ ಕಾಣಿಸುತ್ತಾರೆ…
ಹಿಂದೆ ಒಂದು ನೀಲಿ ಪರದೆ. ಎತ್ತರದ ಸ್ಟೂಲಿನ ಮೇಲಿಟ್ಟ ಒಂದು ಹೂವಿನ ಗುತ್ಛ. ಅದರ ಪಕ್ಕ ಗಂಭೀರವಾಗಿ, ಸಾವಧಾನ ಸ್ಥಿತಿಯಲ್ಲಿ ನಿಂತು ತೆಗೆಸಿಕೊಂಡ ಫೋಟೋ, ಆ ಕಾಲದ ಒಂದು ಹೆಗ್ಗಳಿಕೆ. ಅದಕ್ಕೊಂದು ಮರದ ಫ್ರೇಮ್ ಹಾಕಿಸಿ, ಗೂಡಿನಲ್ಲಿಟ್ಟುಬಿಟ್ಟರೆ, ಅದೇನೋ ಅಪಾರ ಖುಷಿ. ನೋಡಿ, ಈ ಹೊತ್ತಿಗೆ ಎಷ್ಟು ಬದಲಾಗಿ ಬಿಟ್ಟಿದ್ದೇವೆ! ಕೈಯಲ್ಲಿ ಮೊಬೈಲ್, ಅದರಲ್ಲೊಂದು ಕ್ಯಾಮೆರಾ ಬಂದಿದ್ದೇ ಗೊತ್ತು… ಅದೆಲ್ಲಿಗೆ ಬಂದು ನಿಂತಿದ್ದೀವಿ, ನೋಡಿ! ನಮಗೆ ನಾವೇ ಕಳವಳಗೊಳ್ಳುವಷ್ಟು ಬದಲಾಗಿದ್ದೇವೆ.
ಫೋಟೋಗಳಿಗಾಗಿಯೇ ಒಂದು ಟ್ರೆಂಡ್ ಸೃಷ್ಟಿಯಾಯಿತೊ; ಟ್ರೆಂಡ್‌ಗಾಗಿ ವಿಚಿತ್ರ ಸ್ವರೂಪದ ಫೋಟೊ ಅಭಿರುಚಿಯನ್ನು ಸೃಷ್ಟಿಸಲಾಗುತ್ತದೆಯೊ ಗೊತ್ತಿಲ್ಲ. ನಾವು ನಮ್ಮನ್ನು ವಿಚಿತ್ರವಾಗಿ ಹೊರಜಗತ್ತಿಗೆ, ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿಕೊಳ್ಳಲು ಒಂದು ಶೋಕಿಗೆ ಬಿದ್ದಿದ್ದೇವೆ ಅನ್ನುವುದು ಮಾತ್ರ ಸತ್ಯ. ಅದಕ್ಕಾಗಿ ಲಕ್ಷಾಂತರ ಆ್ಯಪ್‌ಗ್ಳು ಬಂದುಹೋಗಿವೆ. ಮೊನ್ನೆಯಿಂದ ಫೇಸ್ ಅ್ಯಪ್‌ನ ಜಮಾನ ಶುರುವಾಗಿದೆ.
ಕೆಲ ದಿನಗಳ ಹಿಂದೆ ಧೋನಿಯ ಬಿಳಿ ಗಡ್ಡ ಒಂದು ಟ್ರೆಂಡ್ ಸೃಷ್ಟಿಸಿತ್ತು. ಆಗ ಎಷ್ಟೋ ಯುವಕರು ತಮ್ಮ ಕರಿ ಗಡ್ಡಕ್ಕೆ ಬಿಳಿ ಬಣ್ಣ ಬಳಿದುಕೊಂಡೂ ತಿರುಗಾಡಿದ್ದಿದೆ. ತಮಿಳು ನಟ ಅಜಿತ್ ಅವರ ಮೋಹಕ ಬಿಳಿಕೂದಲಂತೂ ಹಲವರಿಗೆ ಹುಚ್ಚು ಹಿಡಿಸಿಬಿಟ್ಟಿತ್ತು… ಇಂತಹ ನೂರಾರು ಆಸೆಗಳು ಈಗ ಫೇಸ್ ಆ್ಯಪ್‌ನಲ್ಲಿ ಸಾಧ್ಯವಾಗುತ್ತಿವೆ. ಇದೆಲ್ಲಾ ತಿದ್ದಿದ್ದು ಎಂಬ ಅನುಮಾನವೂ ಬಾರದಂತೆ ಈ ಆ್ಯಪ್ ತನ್ನ ಕೆಲಸ ಮಾಡಿ ಮುಗಿಸುತ್ತದೆ. ನಟ- ನಟಿಯರಿಂದ ಹಿಡಿದು, ಸಾಮಾನ್ಯರೂ ತಮಗೆ ಹೇಗೆ ಇಷ್ಟವೋ, ಹಾಗೆ ತಮ್ಮ ಫೋಟೊವನ್ನು ತಿದ್ದಿಕೊಂಡು ಖುಷಿಪಟ್ಟರು. ತಮ್ಮ ಮುಖವನ್ನು ತಾವೇ ಗುರುತಿಸಿಕೊಳ್ಳಲಾಗದಷ್ಟು ಕಳೆದು ಹೋಗಿಬಿಟ್ಟರು.
ಎಲ್ಲಿ ನೋಡಿದರೂ ಮುದುಕರೇ…: ಸೋಷಿಯಲ್ ಮೀಡಿಯಾದಲ್ಲಿ ಈಗ ಎಲ್ಲರೂ ಮುದುಕರಾಗುತ್ತಿದ್ದಾರೆ. ನನಗೆ ಇವರೆಲ್ಲರೂ ಅಕಾಲ ವೃದ್ಧಾಪ್ಯ ತಂದುಕೊಂಡ “ಯಯಾತಿ’ ನಾಟಕದ ಪುರುವಿನಂತೆ ಕಾಣಿಸುತ್ತಾರೆ. “ವೃದ್ಧಾಪ್ಯ ಬರುವ ಹೊತ್ತಿಗೆ ಬಂದರೆ ಸ್ವೀಕರಿಸಬಹುದಿತ್ತು. ಅದರೊಂದಿಗೆ ಬರುವ ಅನುಭವವೂ ಜೊತೆಗಿರುತ್ತಿತ್ತು’ ಅನ್ನುತ್ತಾನೆ ಪುರು. ನನಗೆ ಆಶ್ಚರ್ಯವಾಗುವುದು, ಫೇಸ್ ಆ್ಯಪ್‌ನಲ್ಲಿ ಪ್ರತಿಯೊಬ್ಬರಿಗೂ ಮತ್ತಷ್ಟು ಯುವಕರಾಗಲಿಕ್ಕೆ ಹತ್ತಾರು ಆಯ್ಕೆಗಳಿದ್ದವು. ಆದರೆ, ಬಹುಪಾಲು ಮಂದಿ ಮುದುಕರಾಗಲಿಕ್ಕೆ ಬಯಸಿದ್ದಾರೆ.
ಎಲ್ಲರ ಮುಖಗಳು ಮಾವಿನ ಕಾಯಿಯನ್ನು ಕಿತ್ತು ಪೌಡರ್ ಹಾಕಿ, ಬಚ್ಚಿಟ್ಟು ಮಾಡಿದ ಹಣ್ಣುಗಳಂತೆ ಕಾಣುತ್ತವೆ. ಸ್ವಾಮಿ ವಿವೇಕಾನಂದರು, ಯಾವತ್ತೂ ಕೂಡ ‘ಯಂಗ್’ ಆಗಿರಿ ಅಂದರೆ, ನಾವು ಹೆಂಗೆಂಗೊ ಆದೆವು! ನಾವು ಹದಿಹರೆಯದಲ್ಲಿ ಮುದುಕರಾಗುವ ಕಡೆ ಗಮನ ಹರಿಸುತ್ತಿದ್ದೇವೆ. ಮನಸ್ಸು ಏನು ಬಯಸುತ್ತೋ, ಅದನ್ನೇ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ ಬಿಡಿ. ಹಾಗಾದರೆ, ನಮ್ಮ ಮನಸ್ಸು ವೃದ್ಧಾಪ್ಯದ ದುರ್ಬಲತೆಯನ್ನು ಯೋಚಿಸುತ್ತಿದೆಯಾ?
ನಾಳೆ ನಾನು ಹೇಗೆ ಕಾಣಿ¤àನಿ ಅನ್ನುವ ಒಂದು ಕುತೂಹಲ ಎಲ್ಲರಿಗೂ ಇದ್ದಿದ್ದೇ. ಅದರಲ್ಲೂ ಕಾಲ ಕೊಡಮಾಡುವ ಟ್ರೆಂಡ್‌ಗೆ ನಾವು ಸಿದ್ಧರಾಗದಿದ್ದರೆ ಜನ ನಮ್ಮನ್ನು ಗಮಾರನಂತೆಯೇ ಪರಿಗಣಿಸುತ್ತಾರೆ. ಆ ಒಂದು ಚಡಪಡಿಕೆಗಾದರೂ ಭಯದಿಂದ “ನಮೂª ಒಂದು ಇರ್ಲಿ’ ಅನ್ನುವ ಒತ್ತಡಕ್ಕೆ ಬೀಳುತ್ತೇವೆ. ನಾಳೆ ಅದೊಂದು ಚಟವಾಗಿಬಿಡುತ್ತದೆ. ಬಿಟ್ಟೂಬಿಡದ ಮಾಯೆಯಾಗಿ ಕಾಡುತ್ತದೆ. ಬರೀ ಲೈಕ್, ಕಾಮೆಂಟ್‌ಗಾಗಿ ನಾವು ಏನು ಬೇಕಾದರೂ ಆಗಲು ಸಿದ್ಧರಾಗುತ್ತೇವೆ. ಎಂತಹ ವಿಚಿತ್ರ ಅಲ್ವಾ? ನಾವು ಏನನ್ನು ಧೇನಿಸುತ್ತೇವೊ, ಅದೇ ಆಗಿಬಿಡುತ್ತೇವೆ. ತೀರಾ ಹರೆಯದ ಹೊತ್ತಲ್ಲಿ ವೃದ್ಧಾಪ್ಯದಲ್ಲಿ ಹೇಗೆ ಕಂಡೇನು ಅನ್ನುವ ಫೇಸ್ ಆ್ಯಪ್‌ನ ಮುದುಕುತನ ನಿಮ್ಮ ಮನಸಲ್ಲಿ ಸಣ್ಣ ಸುಸ್ತನ್ನು ತರಬಹುದು.
ಚೆಂದವಾಗಿ ಕಾಣಿ, ಆದರೆ…: ಚೆನ್ನಾಗಿ ಕಾಣಬೇಕು ಅನ್ನುವ ತುಡಿತ ಯಾರಿಗೆ ತಾನೆ ಇರುವುದಿಲ್ಲ, ಹೇಳಿ? ಅದಕ್ಕೆಂದೇ ತೆಗೆದುಕೊಂಡ ಫೋಟೋಗಳನ್ನು ತಿದ್ದಲು ಕೂರುತ್ತೇವೆ. ಅದರಿಂದ ನೀವು ಚೆಂದವಾಗುವುದಿಲ್ಲ; ನಿಮ್ಮ ಫೋಟೋ ಮಾತ್ರ ಚಂದವಾಗುತ್ತದೆ. ನೀವು ಮಾತ್ರ ಹಾಗೆಯೇ ಉಳಿಯುತ್ತೀರಿ. ಹಾಗೆ ಚೆಂದ ಮಾಡಿದ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳಬೇಕು ಅನ್ನುವುದನ್ನು ಬಿಟ್ಟರೆ, ಬೇರೆ ಏನೂ ಉದ್ದೇಶವಿರುವುದಿಲ್ಲ. ನನ್ನನ್ನು ನಾಲ್ಕು ಜನ ನೋಡಿ ಮೆಚ್ಚಬೇಕು ಅನ್ನುವುದಷ್ಟೇ ತುಡಿತ. ಆ ಮೆಚ್ಚುಗೆ ಎಷ್ಟು ದಿನ ಉಳಿಯುತ್ತದೆ ಎಂಬುದು ಬೇರೆ ಮಾತು. ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಫೋಟೊಗಳು ತಂದುಕೊಡುವ ಅವಾಂತರಗಳ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಅಷ್ಟೇ ಅಲ್ಲದೆ, ಅದು ನೀಡುವ ಮಾನಸಿಕ ಕಿರಿಕಿರಿ ನೈಜ ಬದುಕಿನಲ್ಲಿ ನಿಮ್ಮ ಮುಖದ ಚೆಲುವನ್ನು ಬಾಡಿಸದೇ ಇರದು.
ನಿಮ್ಮ ಮುಖ ರಷ್ಯಾಗೆ ಹೋಗುತ್ತೆ!: ಹೌದು, ಫೇಸ್ ಆ್ಯಪ್ ಸೇಫ್ ಅಲ್ಲ!- ಇದು ರಷ್ಯಾ ಮೂಲದ ಒಂದು ಆ್ಯಪ್. ಇದರ ಸರ್ವರ್‌ಗಳು ರಷ್ಯಾದಲ್ಲಿವೆ. ನೀವು ಫೇಸ್ ಆ್ಯಪ್‌ಗೆ ಅಪ್ಲೋಡ್ ಮಾಡಿದ ಫೋಟೊಗಳು ಸರ್ವರ್‌ಗಳಲ್ಲಿ ಉಳಿದುಬಿಡುತ್ತವೆ. ಆ್ಯಪ್‌ನಲ್ಲಿ ಅದನ್ನು ಡಿಲೀಟ್ ಮಾಡಿದರೂ ಅವು ಸರ್ವರ್‌ನಿಂದ ಡಿಲೀಟ್ ಆಗಿರುವುದಿಲ್ಲ. ಇದರೊಂದಿಗೆ ನಿಮ್ಮ ಮೊಬೈಲ್‌ನ ಡಾಟಾ ಸೋರಿಕೆಯಾಗುವ ಅಪಾಯವೂ ಇದೆ. ನಿಮ್ಮ ವೆಬ್ ಸರ್ವರ್ ಮಾಹಿತಿ, ಐಪಿ ಅಡ್ರೆಸ್, ಬ್ರೌಸರ್ ಮಾಹಿತಿ, ಇಂಟರ್ನೆಟ್ ಮೂಲಕ ಮಾಡುವ ವ್ಯವಹಾರಗಳು… ಹೀಗೆ ಏನನ್ನು ಬೇಕಾದರೂ ಈ ಆ್ಯಪ್ ಕದ್ದು ನೋಡುವ ಅಪಾಯವಿದೆ.
* ಸದಾಶಿವ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.