ಹೃದಯ ಚೀರುತ್ತಿದೆ ಈಗ ಬಾ, ಬೇಗ ಬಾ!
Team Udayavani, Mar 27, 2018, 5:54 PM IST
ಹಗಲೂ ಇರುಳೂ ನಿನ್ನದೇ ಧ್ಯಾನ. ನಿನ್ನ ನೆನಪಲ್ಲಿ ಲೋಕವನ್ನೇ ಮರೆತಿರುವೆ. ನಿನ್ನ ಕುರಿತ ಹಗಲುಗನಸುಗಳಲ್ಲಿ ಕಳೆದು ಹೋಗುತ್ತಿದ್ದೇನೆ. ಗೆಳೆಯಾ, ಈ ರೀತಿ ನನ್ನನ್ನು ಪರೀಕ್ಷಿಸಬೇಡ.
ನನ್ನೊಲವೇ,
ಸುಮ್ಮಸುಮ್ಮನೇ ನನ್ನಿಂದ ದೂರವಿದ್ದು ನನ್ನನ್ನು ಗೋಳು ಹೊಯ್ಯುತ್ತಿರುವ ನಿನಗೆ ಮತ್ತೂಮ್ಮೆ ನಾನೇ ಈ ಪತ್ರ ಬರೆಯುತ್ತಿದ್ದೇನೆ. (ಇದು ನಿನಗೆ ಬರೆದ ಎಷ್ಟನೇ ಪತ್ರ? ನಾನು ಲೆಕ್ಕವಿಟ್ಟಿಲ್ಲ) ಇದು ಕಾಗದದಲ್ಲಿ ಬರೆದಿರುವ ಅಕ್ಷರಗಳೆಂದುಕೊಳ್ಳಬೇಡ. ಇದು ನನ್ನ ಹೃದಯದ ಭಾವ. ಮನದ ಮಾತು, ಎದೆಯ ಅಳಲು. ಕಾಣಲು ಕುರುಡಾಗಬೇಡ. ಕಿವುಡನಂತೆ ನಟಿಸಿ ನನ್ನ ಹೃದಯದ ರೋದನವನ್ನು ಕೇಳದಿರಬೇಡ. ಛಿದ್ರಗೊಂಡ ನನ್ನ ಹೃದಯದ ಚೂರುಗಳನ್ನು ಪುನಃ ಪೇರಿಸಿಟ್ಟು ಈ ಪತ್ರ ಬರೆಯುತ್ತಿದ್ದೇನೆ. ಕಣ್ಣೆದುರು ಈಗ ನೀನಿಲ್ಲ. ಕನಸಲ್ಲೂ ನಿನ್ನ ಸುಳಿವಿಲ್ಲ. ಕನಸಿನ ಉಯ್ನಾಲೆ ಜೀಕಿಕೊಂಡು ನೀನು ಬರಲಾರೆಯಾ? ಪ್ರೀತಿಯ ಪರಿಮಳ ಹೊತ್ತ ತಂಗಾಳಿಯಾಗಿ ಸುಳಿಯಲಾರೆಯಾ? ನಿನ್ನ ಕಾಣದೇ ಬರಡಾದ ಕಂಗಳನ್ನು ತಂಪಾಗಿ ತೀಡಲಾರೆಯಾ? ನೊಂದು ಬೆಂದು ಬೆಂಗಾಡಾಗಿರುವ ಮನಸ್ಸಲ್ಲಿ ಮಳೆಯಾಗಿ ಸುರಿಯಲಾರೆಯಾ?
ಗೆಳೆಯಾ, ನಿನಗಾಗಿ ನಾನೆಷ್ಟು ಹಂಬಲಿಸುತ್ತಿದ್ದೇನೆ ಗೊತ್ತಾ? ನನ್ನ ಚಡಪಡಿಕೆ, ಗೊಂದಲ, ಕಾತರ ನಿನಗೆ ತಿಳಿಯದ್ದಂತೂ ಅಲ್ಲ. ಮತ್ತೆ ಬೇಕೆಂತಲೇ ಎಲ್ಲೋ ದೂರ ಅಡಗಿ ಕುಳಿತು ನನ್ನ ಹೃದಯವನ್ನೇಕೆ ಹಿಂಡುವೆ? ನೆನಪಿನ ಅಂಕುಶದಿಂದ ಪ್ರಾಣವನ್ನೇಕೆ ಸೆಳೆಯುವೆ? ನಿನ್ನ ಕೈಹಿಡಿದು ನಡೆದ ಮುಸ್ಸಂಜೆಗಳ ಲೆಕ್ಕವಿದೆ ನನ್ನಲ್ಲಿ. ನಿನ್ನ ಜೊತೆ ಹಾಕಿದ ಹೆಜ್ಜೆಗಳ ಗುರುತು ನನ್ನ ಮನಸ್ಸಲ್ಲಿ ಅಚ್ಚಾಗಿದೆ. ಜೊತೆಯಾಗಿ ನಾವು ಕಂಡ ಪ್ರೀತಿಯ ಕನಸುಗಳು ಹೃದಯದ ತಿಜೋರಿಯಲ್ಲಿ ಭದ್ರವಾಗಿವೆ. ನೀನು ಕನಸಿನ ಕದ ತೆರೆದು ಒಳ ಬರುವುದನ್ನೇ ಕಾಯುತ್ತಾ ನನ್ನ ಕಣ್ಣುಗಳು ನಿದ್ದೆಯನ್ನೇ ಮರೆತಿವೆ. ನೀನು ಬಿತ್ತಿದ ಪ್ರೀತಿಯ ಬೀಜಗಳು ನನ್ನ ಮನದಲ್ಲಿ ಮೊಳಕೆಯೊಡೆದಿವೆ. ಅವಕ್ಕೆ ನೀರುಣಿಸಲು ಬೇಗ ಬಂದುಬಿಡು. ನಿನ್ನ ಪ್ರೀತಿ ಮಾತುಗಳೆಂಬ ನೀರಿಲ್ಲದೇ ಅವು ಬಾಡಿ ಒಣಗುತ್ತಿವೆ. ನೀನಿನ್ನೂ ಬಾರದಿದ್ದರೆ ನನ್ನ ಹೃದಯವೂ ಬರಡು ನೆಲದಂತೆ ಬಿರುಕು ಬಿಡಬಹುದು. ಅದಕ್ಕೂ ಮೊದಲು ದಯವಿಟ್ಟು ಬಂದುಬಿಡು.
ನನಗಂತೂ ಈಗ ಹಗಲೂ ಇರುಳೂ ನಿನ್ನದೇ ಧ್ಯಾನ. ನಿನ್ನ ನೆನಪಲ್ಲಿ ಲೋಕವನ್ನೇ ಮರೆತಿರುವೆ. ನಿನ್ನ ಕುರಿತ ಹಗಲುಗನಸುಗಳಲ್ಲಿ ಕಳೆದು ಹೋಗುತ್ತಿದ್ದೇನೆ. ಗೆಳೆಯಾ, ಈ ರೀತಿ ನನ್ನನ್ನು ಪರೀಕ್ಷಿಸಬೇಡ. ತಮಾಷೆಯ ಮಾತನ್ನು ಗಹನವಾಗಿ ಪರಿಗಣಿಸಿ ನನ್ನನ್ನು ಕಾಡಬೇಡ. ಅಜ್ಞಾತವಾಸ ಕೊನೆಗೊಳಿಸಿ ಬೇಗ ಬಂದುಬಿಡು. ಆಕಾಶವೇ ಕಳಚಿ ಬಿದ್ದರೂ, ಲೋಕವೇ ಎದುರು ನಿಂತರೂ ನಿನ್ನ ಕೈ ಬಿಡಲಾರೆ, ಜನುಮಜನುಮಕ್ಕೂ ನೀನೇ ನನ್ನ ಸಂಗಾತಿ ಎನ್ನುತ್ತಿದ್ದವ ನೀನು. ನಿನ್ನ ಪ್ರೀತಿ ಪ್ರಾಮಾಣಿಕವಾಗಿದ್ದರೆ ಬೇಗ ಬಂದು ಬಿಡು.
ನಿನಗಾಗಿ ಹಂಬಲಿಸುತ್ತಾ, ನಿನ್ನದೇ ನಿರೀಕ್ಷೆಯಲ್ಲಿರುವ-
ನಿನ್ನ ಗೆಳತಿ
ಜೆಸ್ಸಿ. ಪಿ.ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.