ಕಾಪಿ ಚಿರಾಯು: ನನ್ನನ್ನು ಹಿಡಿದುಕೊಟ್ಟ ಸಹಪಾಠಿಗೆ ಥ್ಯಾಂಕ್ಸ್!
Team Udayavani, Aug 1, 2017, 12:06 PM IST
ಪರೀಕ್ಷೆ ಸಮಯ ಬಂತೆಂದರೆ ನಿದ್ದೆಗೆಟ್ಟು ಕಲಿಯಲೇಬೇಕು. ನಾನು ಅಲ್ಪ ಸ್ವಲ್ಪ ನೆನಪಿಗೆ ಬರುವುದನ್ನು ಪರೀಕ್ಷೆಯಲ್ಲಿ ಗೀಚಿ ಬರುತ್ತಿದ್ದೆ. ಹೀಗೇ ಒಂದು ದಿನ ಪರೀಕ್ಷೆಗೆ ಓದುತ್ತಾ ಕೂತಿದ್ದಾಗ ಹೊಳೆದಿದ್ದು ಕಾಪಿ ಮಾಡುವ ಐಡಿಯಾ. ದಿನ ಪೂರ್ತಿ ಅದೇ ವಿಷಯ ತಲೆಯಲ್ಲಿ ತಿರುಗುತ್ತಿತ್ತು, ಕೊನೆಗೂ ಗಟ್ಟಿ ಮನಸ್ಸು ಮಾಡಿ ಕಾಪಿ ಮಾಡಲು ನಿರ್ಧರಿಸಿದೆ.
ಪರೀಕ್ಷೆಯ ಹಿಂದಿನ ದಿನ ರಾತ್ರಿ ಕಾಪಿ ಚೀಟಿ ರೆಡಿ ಮಾಡಿದೆ. ಬೆಳಗ್ಗೆ ಬಯಾಲಜಿ ಪರೀಕ್ಷೆಗೆ ಚೀಟಿ ಸಮೇತ ಪರೀಕ್ಷೆ ಹಾಲ್‌ಗೆ ಭಯದಿಂದಲೇ ಹೋದೆ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕಿದ ಹಾಗೆ ಆಚೆ- ಈಚೆ ನೋಡಿ ತಂದಿದ್ದ ಚೀಟಿಯನ್ನು ಹೊರತೆಗೆದು ಗೀಚಲು ಪ್ರಾರಂಭಿಸಿದೆ. ಅಂತೂ ಇಂತೂ ಸಲೀಸಾಗಿ ಅಂದು ನನ್ನ ಬಯಾಲಾಜಿ ಪರೀಕ್ಷೆ ಮುಗಿಯಿತು. ಖುಷಿಯಿಂದ ಮನೆಗೆ ಹೋಗಿ, ಇವತ್ತು ಸಿಕ್ಕಿಬಿದ್ದಿಲ್ಲ ಎನ್ನುವ ಧೈರ್ಯದಿಂದ ಮರುದಿನದ ಪರೀಕ್ಷೆಗೂ ರಾತ್ರಿಯಿಡೀ ನಿದ್ದೆಗೆಟ್ಟು ಚೀಟಿ ರೆಡಿ ಮಾಡಿದೆ. ನಮ್ಮ ಮಗಳು ಪರೀಕ್ಷೆಗೆ ಶ್ರದ್ದೆಯಿಂದ ಓದುತ್ತಿದ್ದಾಳೆ ಎಂದು ಅಮ್ಮ ಅಪ್ಪನಲ್ಲಿ ಹೇಳುವುದು ಕೇಳಿಸುತ್ತಿತ್ತು. ಆ ಮಾತು ಕೇಳಿ ಮನಸೊÕಳಗೇ ನಕ್ಕು ಬಿಟ್ಟೆ. ಬೆಳಗ್ಗೆ ಬೇಗ ಎದ್ದು ಶಾಲೆಗೆ ಹೊರಟೆ, ಚೀಟಿ ಕಿಸೆಯಲ್ಲಿಟ್ಟುಕೊಂಡು ಪರೀಕ್ಷೆ ಹಾಲ್‌ನಲ್ಲಿ ಹೋಗಿ ಕೂತೆ. ಅಂದು ಮುಂಚಿಗಿಂತ ಭಯ ಸ್ವಲ್ಪ ಕಮ್ಮಿಯೇ ಇತ್ತು. ಯಾಕೆಂದರೆ ಮೊದಲ ಸಲ ಸಿಕ್ಕಿ ಬಿದ್ದಿಲ್ಲ, ಇವತ್ತೂ ಸಲೀಸಾಗಿ ಕಾಪಿ ಮಾಡಬಹುದೆಂದು ಖುಷಿಯಾಗಿದ್ದೆ. ಆದರೆ ನನ್ನ ಗ್ರಹಚಾರಕ್ಕೆ ಅಂದು ನಡೆದದ್ದೇ ಬೇರೆ: ನನ್ನ ಕೈಯಲ್ಲಿದ್ದ ಚೀಟಿಯನ್ನು ನೋಡಿದ ಪಕ್ಕದವಳು ಪರೀಕ್ಷಾ ಕೊಠಡಿಯಲ್ಲಿದ್ದ ಶಿಕ್ಷಕಿಯನ್ನು ಕರೆದು ಹೇಳಿಯೇಬಿಟ್ಟಿದ್ದಳು. ಅದನ್ನು ಕೇಳಿದ ಶಿಕ್ಷಕಿ ಓಡಿ ಬಂದು ಕೈಯಲ್ಲಿದ್ದ ಚೀಟಿ ಸಮೇತ ನನ್ನನ್ನು ಪ್ರಾಂಶುಪಾಲರ ಕೊಠಡಿಗೆ ಕರೆದುಕೊಂಡು ಹೋದರು. ಅಂದು ಆ ಸುದ್ದಿ ಶಾಲೆ ತುಂಬಾ ಹರಡಿತ್ತು. ತಲೆಯೆತ್ತಿ ಯಾರಿಗೂ ಮುಖ ತೋರಿಸಲಾಗದ ಸ್ಥಿತಿ. ನಾಚಿಕೆ, ಮುಜುಗರ, ಒಂದು ಕಡೆ ಬೇಸರವೂ ಆಗಿತ್ತು.
ಪ್ರಾಂಶುಪಾಲರು ಹೆತ್ತವರನ್ನು ಕರೆತರಲು ಹೇಳಿದರು. ಶಾಲೆಯಲ್ಲಿ ಮೀಟಿಂಗ್ ಇದೆ ಎಂದು ಸುಳ್ಳು ಹೇಳಿ ಅಮ್ಮನನ್ನು ಶಾಲೆಗೆ ಕರೆದುಕೊಂಡು ಬಂದೆ. ಪ್ರಾಂಶುಪಾಲರು ಹೇಳಿದಾಗಲೇ ಅಮ್ಮನಿಗೆ ವಿಷಯ ಗೊತ್ತಾಗಿದ್ದು. ವಿಷಯ ಕೇಳಿ ಅಮ್ಮತಲೆ ತಗ್ಗಿಸಿ ಕಣ್ಣೀರು ಹಾಕುತ್ತಾ ಕುಳಿತುಬಿಟ್ಟರು. ಆವತ್ತೇ ನಿರ್ಧರಿಸಿದೆ. ಆವತ್ತು ತಲೆತಗ್ಗಿಸಿದ ಅಮ್ಮ ತಲೆಯೆತ್ತಿ “ಇವಳು ನನ್ನ ಮಗಳು’ ಎಂದು ಹೆಮ್ಮೆ ಪಡುವಂತೆ ಮಾಡಬೇಕು ಅಂತ. ಅದರಂತೆ ಕಷ್ಟಪಟ್ಟು ಶ್ರದ್ಧೆಯಿಂದ ಓದಿದೆ. ತರಗತಿಗೆ ಉತ್ತಮ ಅಂಕಗಳನ್ನು ಗಳಿಸಿದೆ. ಆವತ್ತು ಪರೀಕ,ಆಲ್‌ನಲ್ಲಿ ನನ್ನನ್ನು ಶಿಕ್ಷಕಿಗೆ ಹಿಡಿದುಕೊಟ್ಟ ಸಹಪಾಠಿಗೆ ಥ್ಯಾಂಕ್ಸ್!
ಕಾವ್ಯ ಕುಲಾಲ್, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.