ಏಳಿ…ಎದ್ದೇಳಿ…ಅಪರಾಧ ಈಗ ಒಂದು ಪ್ಯಾಶನ್!
Team Udayavani, Dec 10, 2019, 5:42 AM IST
ನಮ್ಮ ಹುಡುಗರು ಬಹಳ ಒಳ್ಳೆಯವರು. ಹೀಗಂತ ಹೆತ್ತವರು ತಿಳಿದುಕೊಂಡಿರುತ್ತಾರೆ. ಆದರೆ, ಮಕ್ಕಳ ಮನಸ್ಸು ಯಾವಾಗಲೋ “ಆ’ ಕಡೆಗೆ ತಿರುಗಿಬಿಟ್ಟಿರುತ್ತದೆ. ಆ ದಾರಿಯಲ್ಲಿ ನಡೆದು ನಡೆದು, ದೈಹಿಕವಾಗಿ ನಮ್ಮ ಜೊತೆ ಇದ್ದರೂ, ಮಾನಸಿಕವಾಗಿ ನಮ್ಮ ಸಂಸ್ಕೃತಿ, ಸಮಾಜದಿಂದ ಬಹುದೂರ ನಿಂತಿರುತ್ತಾರೆ. ಇಂಥ ಘಾಸಿ ಮನಸ್ಸುಗಳ ಯುವಕರಿಗೆ ಕ್ರೈಂ ಅನ್ನೋದು ಪ್ಯಾಷನ್ ಆಗಿದೆ. ನಿಮ್ಮ ಹುಡುಗರೂ ಹೀಗೇನಾ ….ಚೆಕ್ ಮಾಡಿಕೊಳ್ಳಿ.
ಹೊರಬಾಗಿಲು ಸದ್ದಾಯಿತು. ಒಳಗಡೆಯಿಂದ ಯಾವ ಉತ್ತರವೂ ಬರಲಿಲ್ಲ. “ಅಮ್ಮ ಎಲ್ಲಿ ಹೋದಳು? ಅರ್ಧಗಂಟೆಗೆ ಮೊದಲು ಕರೆ ಮಾಡಿದ್ದಳಲ್ಲ. ಬಿಸಿಬಿಸಿ ಅವರೇಕಾಳು ಉಪ್ಪಿಟ್ಟು ಮಾಡಿರ್ತೀನಿ. ಏರ್‌ಪೋರ್ಟಿನಿಂದ ಬೇಗ ಬಾ’ ಅಂದಳು- ಎಲ್ಲಿ ಹೋದಳು? ಮಗಳಿಗೆ, ಹೀಗೆ ಅನಿಸತೊಡಗಿತು.
ಜೊತೆಗಿದ್ದ ಗಂಡ ಬಾಗಿಲು ಬಡಿದ. ಆಗಲೂ ಉತ್ತರವಿಲ್ಲ. 20 ನಿಮಿಷ ಆಯಿತು. ಸದ್ದೇ ಇಲ್ಲ. ಅನುಮಾನ ಗೊಂಡ ಅಳಿಯ ಹಿತ್ತಲ ಕಡೆಯಿಂದ ಮಹಡಿ ಹತ್ತಿ ನೋಡಿದರೆ, ಅಲ್ಲಿ ಬಾಗಿಲು ತೆರೆದಿದೆ. ಮೆಲ್ಲಗೆ ಇಳಿದು ಬಂದು ಮುಂಬಾಗಿಲು ತೆರೆದ. ಒಳಗೆ ಹೋದರೆ, ಬೆಡ್‌ರೂಮಿನಲ್ಲಿ ಅತ್ತೆ ಹೆಣವಾಗಿದ್ದಾಳೆ.
ಇಡೀ ಮನೆಯಲ್ಲಿದ್ದ ನಿಶ್ಯಬ್ದ ಒಮ್ಮೆಲೆ ಕಿಟಾರ್ ಅಂದಂತಾಯಿತು. ಆಗತಾನೆ ಮದುವೆಯಾಗಿ ಬಂದ ಮಗಳಿಗೆ ಸಾವಿನ ಸ್ವಾಗತ… ವಿಷಯ ತಿಳಿದ ಪೊಲೀಸರು ಬಂದರು. ವಿವರ ಪಡೆದರು. “ಮನೆಯ ಮುಂದಿನ ಬಾಗಿಲು ಲಾಕ್ ಆಗಿತ್ತು ಅಂದರೆ, ಕೊಲೆಗಾರನಿಗೆ ಇವರೇ ಬಾಗಿಲು ತೆರೆದಿದ್ದಾರೆ. ಅವನು ಏಕೆ ಮುಂಬಾಗಿಲಿನಿಂದ ಹೋಗಲಿಲ್ಲ? ಬಹುಶಃ ಅಷ್ಟೊತ್ತಿಗೆ ಅಳಿಯ-ಮಗಳು ಬಾಗಿಲು ತಟ್ಟಿದ್ದಾರೆ… ಹೀಗೆ ಅನುಮಾನಗಳನ್ನು ಕ್ರೋಢೀಕರಿಸಿದರು.
ಕೊಲೆ ಮಾಡಿದ ವ್ಯಕ್ತಿ, ಆಭರಣಗಳನ್ನು ಬಿಟ್ಟರೆ ಬೇರೇನನ್ನು ಮುಟ್ಟಿರಲಿಲ್ಲ. ಎಲ್ಲÉವೂ ಹೇಗೇಗೆ ಇದ್ದವೋ ಹಾಗಾಗೇ ಇತ್ತು. ಪೊಲೀಸರಿಗೆ ಇದು ಗಾಂಜಾ ಸೇದುವವರ ಕೈಕೆಲಸ ಇರಬಹುದೇ? ಎಂಬ ಅನುಮಾನ ಹುಟ್ಟಿ, ಹುಡುಕಾಟ ಶುರುವಾಯಿತು. 15 ದಿನಗಳ ನಂತರ ನಡು ರಾತ್ರಿ ಎಲ್ಲದಕ್ಕೂ ಉತ್ತರದಂತೆ ಒಬ್ಬ ಹುಡುಗ ಸಿಕ್ಕ. ಅವನ ವಯಸ್ಸು 23. ಅವನು ಮನೆ ಬಿಟ್ಟು 20 ದಿನವಾಗಿತ್ತು. ಕೊಲೆಯದ ಹೆಂಗಸು ಇವನಿಗೆ ಅತ್ತೆಯಾಗಬೇಕು. ಆವತ್ತು ಮನೆಗೆ ಬಂದಿದ್ದ. ದುಡ್ಡು ಕೇಳಿದ. ಕೊಡಲಿಲ್ಲ. ಆಕೆ ಗದರಿಸಿದಳು. ಇವನು ಆಕೆಗೆ ಹೊಡೆದ. ಮುಂದುವರಿದು ಮೊಬೈಲ್ ಚಾರ್ಜರ್ ಕತ್ತಿಗೆ ಸುತ್ತಿ, ಮುಖಕ್ಕೆ ದಿಂಬು ಇಟ್ಟು ಕೊಲೆ ಮಾಡುವ ಹೊತ್ತಿಗೆ, ಹೊರಗಿಂದ ಮಗಳು-ಅಳಿಯ ಬಾಗಿಲು ತಟ್ಟಿದರು. ಕೊನೆಗೆ, ದಾರಿಕಾಣದೆ ಬಾಲ್ಕನಿಯಿಂದ ಹಾರಿ ಪರಾರಿಯಾದ. ಯಾಕಯ್ಯ ಹೀಗೆ ಮಾಡಿದೆ? ಪೊಲೀಸಿನವರು ಕೇಳಿದರು. ಅವನು- “ಸಾರ್, ನಾನು ಕೊಲೆ ಮಾಡಬೇಕು ಅಂತ ಮಾಡಲಿಲ್ಲ. ಗಾಂಜಾ ಸೇದಲು ದುಡ್ಡು ಬೇಕಿತ್ತು. ಕೇಳಿದೆ. ಅತ್ತೆ ಕೊಡಲಿಲ್ಲ. ಬೈದಳು. ಮಾಡ್ತೀನಿ ತಾಳು ಅಂತ ಹೊಡೆದಳು. ಅವಳ ಮಾತು ಕೇಳಿ ನನ್ನ ಸಿಟ್ಟು ನೆತ್ತಿಗೆ ಏರಿತು. ಹಾಗೇ ಮಾಡಿದೆ’ ಆ ಡಬಲ್ ಡಿಗ್ರಿ ಹೋಲ್ಡರ್ ಹುಡುಗ ಹೀಗಂದ. ಈ ವಿಚಾರ ಅವನ ಅಪ್ಪನಿಗೂ ಗೊತ್ತಿಲ್ಲ. ಅವರ ಹಾಗೂ ಊರಿನವರ ಕಣ್ಣಲ್ಲಿ ಇವನು ಮುಗª ವ್ಯಕ್ತಿ. ಅವನ ಕೈಯಲ್ಲಿ ಬ್ಯಾಗ್ ಇತ್ತು. ಅದರ ತುಂಬ ಅತ್ತೆಮನೆಯಲ್ಲಿ ಕದ್ದ ಒಡವೆಗಳು ಇದ್ದವು…
ಜಗತ್ತು ಎಲ್ಲಿಗೆ ಬಂದು ನಿಂತಿದೆ ನೋಡಿದ್ರಾ…?
ಹಿಂದೆ, ಗಾಂಜಾ ಹೊಡೆಯೋದು, ಪಾರ್ಟಿ ಮಾಡೋದು ಎಲ್ಲವೂ ಅತ್ಯಪರೂಪದ, ಸಮಾಜ ಘಾತಕ ಕೃತ್ಯಗಳಂತೆಯೇ ಆಗಿತ್ತು. ಯಾವುದೋ ಕತ್ತಲು ಕದಲದ ರಾತ್ರಿಯಲ್ಲಿ ಎಲ್ಲ ಮುಗಿಸಿಬಿಡುತ್ತಿದ್ದರು. “ಅಯ್ಯೋ, ಅವನು ಗಾಂಜ ಹೊಡೀತಾನಂತೆ, ಕುಡೀತಾನಂತೆ’ ಅಂತ ಆತಂಕದಿಂದ ಮಾತಾಡಿಕೊಂಡರೆ ಸಾಕು ಮಾನ, ಮಾರ್ಯಾದೆ ಬೀದಿಯಲ್ಲಿ ಹರಾಜಾಗಿ ಬಿಡೋದು. ಗಾಂಜಾ ಕೂಡ ಬಹಳ ನಿಗೂಢ ಸ್ಥಳಗಳಲ್ಲಿ ಮಾತ್ರ ಸಿಗೋದು. ಇವತ್ತು ನೋಡಿ, ಗಲ್ಲಿ ಗಲ್ಲಿಗಳಲ್ಲಿ ಗಾಂಜಾ ಸಿಗುತ್ತೆ.
ಕುಡಿಯೋದು, ಗಾಂಜ ಸೇದುವುದು ದುರಭ್ಯಾಸವಲ್ಲ ; ಸ್ಟೇಟಸ್. ನಿಮಗೆ ಸಿಗರೇಟು ಸೇದಲು ಬಾರದು ಅಂದರೆ, ವೇಸ್ಟ್‌ಫೆಲೋ ಅಂದುಬಿಟ್ಟಾರು. ಇದರ ಮುಂದುವರಿದ ಭಾಗ ಅನ್ನುವಂತೆ ಬ್ರೆಕದ ರೂಲ್ಸ್ , ವ್ಯವಸ್ಥೆ ವಿರುದ್ಧ ನಡೆಯೋದು ಎಲ್ಲವೂ ಇಂದಿನ ಯುವಕರ ಪ್ಯಾಷನ್. ಇದರಲ್ಲಿ ಅದೇನೋ ಮಜ ಅವರಿಗೆ. ನಮ್ಮ ಏರಿಯಾ, ನಮ್ಮ ಯುವಕರು, ನಮ್ಮ ಹುಡುಗರು, ನಮ್ಮ ನಾಯಕ ಅನ್ನುತ್ತೇವಲ್ಲ; ಹಾಗೇನೇ ನಮ್ಮ ಹೊಡೆದಾಟ… ಹೀಗೆ, ಬದುಕುತ್ತಿರುತ್ತಾರೆ. ಕುಡಿಯೋದಕ್ಕೆ ಹಣ ಬೇಕಾದರೆ ಚೂರಿ ಹಾಕೋದು ಕೂಡ ಪ್ಯಾಷನ್‌ನ ಇನ್ನೊಂದು ರೂಪ. ಹೀಗಾಗಿ, ಕ್ರೈಂ ಅನ್ನೋದು ಬಡತನ ನೀಗಿಕೊಳ್ಳೋಕೆ ಅಲ್ಲವೇ ಅಲ್ಲ. ಬದಲಾಗಿ ತಮ್ಮ ಚಟ ತೀರಿಸಿಕೊಳ್ಳೋಕೆ.
ಸೈಕಾಲಜಿಕಲ್ ಅಫೆನ್ಸ್
ಕ್ರೈಂ ಮಾಡೋದು ಅಂದರೆ ರಕ್ತ ಹರಿಸೋದು, ಪ್ರಾಣ ತೆಗೆಯೋದೇ ಆಗಬೇಕಿಲ್ಲ. ಬದಲಾದ ಕಾಲಮಾನದಲ್ಲಿ ಸೈಕಲಾಜಿಕಲ್ ಅಫೆನ್ಸ್ ಜಾಸ್ತಿಯಾಗುತ್ತಿದೆ. ಅಂದರೆ, ಮಾನಸಿಕವಾಗಿ ಕುಗ್ಗಿಸೋದು. ಇದಕ್ಕೆ ಸೋಶಿಯಲ್ ಮೀಡಿಯಾಗಳೇ ಅಡ್ಡೆಯಾಗಿದೆ. ಡ್ರಗ್ಸ್, ಗಾಂಜಾ, ಅಫೀಮ್, ಸಿಂಥಟಿಕ್‌ಡ್ರಗ್ಸ್ ಇವೆಲ್ಲವೂ ಸುಲಭವಾಗಿ ಕೈಗೆ ಸಿಗುತ್ತಿವೆ. ವೈಟ್ ಕಾಲರ್‌ಯುವ ಜನಾಂಗ ಫೇಸ್‌ಬುಕ್ ಹಿಂದೆಯೇ ಬಿದ್ದಿರುತ್ತಾರೆ. ಅವರಲ್ಲೂ ಕ್ರೈಂ ಇದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ವಂಚನೆ ಮಾಡೋದು, ಡಾಟಾ ಬೇಸ್‌ಗೆ ಹೋಗಿ, ಪಿನ್ ನಂಬರ್ ಚೇಂಜ್ ಮಾಡಿ ದುಡ್ಡು ಎತ್ತಿಬಿಡೋದು. ಕನ್ಸಲ್ಟೆನ್ಸಿ ನೆಪದಲ್ಲಿ ಬ್ಯಾಂಕ್ ಲೋನ್ ಕೊಡಿಸ್ತೀನಿ ಅಂತ ನಾಮ ಹಾಕೋದು. ಓಎಲ್‌ಎಕ್ಸ್‌ನಲ್ಲಿ ದುಡ್ಡು ಹಾಕದೆ ಗಾಡಿ ಎತ್ತಾಕ್ಕೊಂಡು ಹೋಗೋದು. ಈ ಎಲ್ಲವೂ ವೈಟ್ ಕಾಲರ್ ಕ್ರೈಂಗಳ ಪಟ್ಟಿಗೆ ಬರುತ್ತವೆ. ಇವನ್ನೆಲ್ಲ ಹೊಟ್ಟೆ ಹಸಿವಿಗಾಗಿ ಮಾಡಿದ್ದು ಅಂತೀರ? ಸಾಧ್ಯವೇ ಇಲ್ಲ. ವಿದ್ಯೆ, ಬುದ್ಧಿ, ದುಡ್ಡು ಎಲ್ಲಾ ಇರೋ ಕುಟುಂಬದಲ್ಲಿ ಇವು ನಡೆಯುತ್ತಿವೆಯಲ್ಲ ಇದಕ್ಕೆ ಏನು ಹೇಳ್ಳೋಣ? ಈ ಅಚಾತುರ್ಯಕ್ಕೆ ಕಾರಣ ಏನು? ಇದನ್ನು ಸೈಕಾಲಜಿಕಲ್ ಹಂಗರ್ ಅಂತಲೇ ಹೇಳಬೇಕು.
ನ್ಯೂಯಾರ್ಕ್ ವಿವಿಯಲ್ಲಿ ಎಚ್‌ಓಡಿ ಆಗಿದ್ದ ಆ್ಯಂಡಿ ಸ್ಟಾನ್ಲಿ ಇರೆಸಿಸ್ಟೆಬಲ್ ಅನ್ನೋ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಸದಾ ಕಂಪ್ಯೂಟರ್ ಮುಂದೆ ಕೂರುವ ಟೆಕ್ಕಿಗಳು, ಮೊಬೈಲ್‌ಗೆ ಅಡಿಕ್ಟಾಗಿರುವ ವಿದ್ಯಾರ್ಥಿಗಳು ಅದರಿಂದ ಹೇಗೆ ಹೊರಬರಬೇಕು ಅನ್ನೋದನ್ನು ಹೇಳಿದ್ದಾರೆ. ಅವರು ಹೇಳಿರೋದು ಸತ್ಯ, ನೀವು ಹತ್ತು ಜನ ಹುಡುಗರ ಮೊಬೈಲ್ ಇಸಿದುಕೊಂಡು, ಒಂದು ಗಂಟೆ ಇನ್ನು ಆರಾಮಾಗಿರಿ, ಚಾಟ್ ಮಾಡಬೇಡಿ, ಮೆಸೇಜ್ ಮಾಡಬೇಡಿ ಅಂತ ಹೇಳಿ ನೋಡಿ.
ಸಾಧ್ಯನೇ ಇಲ್ಲ, ಕೇವಲ ಒಂದು ಗಂಟೆಯಲ್ಲೇ ಮಾನಸಿಕವಾಗಿ ಕುಸಿದು ಹೋಗಿಬಿಟ್ಟಿರುತ್ತಾರೆ. ಅಂದರೆ, ಮೊಬೈಲ್‌ಗೆ ಅಷ್ಟು ಅಡಿಕ್ಟಾಗಿರುತ್ತಾರೆ. ಪ್ರತಿ ಹತ್ತು ಜನರಲ್ಲಿ 8 ಜನ, ಹತ್ತು ನಿಮಿಷದಲ್ಲಿ ಒಂದು ಸಲ ಮೊಬೈಲ್ ಸ್ಕ್ರೀನ್ ಮುಟ್ಟದೇ ಇರಲಾರರು. ಹೀಗಿದೆ ನಮ್ಮ ಯುವಕರ ಅವಲಂಬನೆ.
ಗ್ಯಾಜೆಟ್‌ಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳೋರ ಸಂಖ್ಯೆ ದಿನೇ ದಿನೇ ಕಡಿಮೆ ಯಾಗುತ್ತಿದೆ. ಇವತ್ತು ವೈಟ್‌ಕಾಲರ್ ಕ್ರೈಂ ನಡೀತಿರೋದೇ ಸೋಶಿಯಲ್ ಮೀಡಿಯಾನ ಬಳಸಿಕೊಂಡು.
ಹೀಗಾಗಿ, ಯುವಕರಲ್ಲಿ ಬಹುತೇಕರಿಗೆ ನೈತಿಕತೆ ಅನ್ನೋದು ಕೊನೆ ಪ್ರಯಾರಿಟಿ. ತಾಳ್ಮೆ ಅನ್ನೋದು ಇಲ್ಲವೇ ಇಲ್ಲ. ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಭೈರಪ್ಪ, ಎಚ್‌ಎಸ್‌ವಿ ಅವರ ಪುಸ್ತಕಗಳನ್ನು ಕೊಟ್ಟು, ಒಂದು ವಾರ ಟೈಂ ಕೊಡ್ತೀನಿ. ಓದಿ ಸಾರಾಂಶ ಹೇಳಿ ಅಂತ ಕೇಳಿ. ನೂರರಲ್ಲಿ ಇಬ್ಬರು ಕೂಡ ಓದಲ್ಲ. ಅಷ್ಟೊಂದು ಓದಬೇಕಾ ಅಂತಾರೆ. ಗಂಟೆ ಗಟ್ಟಲೆ ಸೋಶಿಯಲ್ ಮೀಡಿಯಾದಲ್ಲಿ ಹರಟೆ ಹೊಡೆಯೋಕೆ ಆಗುತ್ತೆ, ತಲೆ ಬಗ್ಗಿಸಿ ಪುಸ್ತಕ ಓದೋಕೋ ಇವರಲ್ಲಿ ತಾಳ್ಮೆ ಇಲ್ಲ.
ನಮ್ಮ ಸಂಸ್ಕೃತಿ ಅನ್ನೋದು ಬರಬೇಕು…
ಎಲ್ಲರ ಮೈಂಡ್ ಕರಪ್ಟ್ ಆಗೋಗಿದೆ. ಲೈಫ್ಸ್ಟೈಲ್ ಬದಲಾಗಿದೆ. ನಮ್ಮ ಕುಟುಂಬ, ನಮ್ಮ ತಂದೆ ತಾಯಿ ಅನ್ನೋದು ಇಲ್ಲ. ಅವರ ಆರ್ಥಿಕ ಹಿನ್ನೆಲೆ, ಸಾಮಾಜಿಕ ಹಿನ್ನೆಲೆ ತಿಳಿದು, ಅದಕ್ಕೆ ತಕ್ಕಂತೆ ಹೇಗೆ ಬದುಕಬೇಕು ಅನ್ನೋದು ತಿಳಿದಿಲ್ಲ. ನಮ್ಮೂರು, ಬೆಳೆದ ಊರು, ದೇಶ, ರಾಜ್ಯ ಎಲ್ಲವೂ ನಮ್ಮದು ಅನ್ನೋ ಮನೋಭಾವ ಯುವಕರ ಮನಸ್ಸಿನಲ್ಲಿ ಬೇರೂರಿರಬೇಕು. ಅದಾಗಿಲ್ಲ. ಹೀಗಾಗಿ, ಸಂಸ್ಕೃತಿಯ ಬಗ್ಗೆ ಅರಿವು, ಒಲವು ಇಲ್ಲದೆ ನೈತಿಕ ಅಧಃಪತನವಾಗಿದೆ. ಬದುಕಿನ ಪುನರುಜ್ಜೀವನ ಆಗದ ಹೊರತು ಯುವಕರಲ್ಲಿ ಬದಲಾವಣೆ ಅಸಾಧ್ಯ. ಆವತ್ತಿನ ಸಮಾಜ, ಜನ ಇವತ್ತಿಗಿಂತ ಬುದ್ಧಿವಂತರು. ವಿವೇಕಾನಂದರು ಏಳಿ ಎದ್ದೇಳಿ ಅಂತ ಹೇಳಿದ್ದು ಮಾನಸಿಕವಾಗಿ, ದೈಹಿಕವಾಗಿ ಕ್ರಿಯಾಶೀಲರಾಗಿ ಅನ್ನೋ ಅರ್ಥದಲ್ಲಿ. ವಿವೇಕಾನಂದರು ಇದೇ ಮಾತನ್ನು ಈಗ ಹೇಳಿದ್ದರೆ, ಯುವಕರು ದೈಹಿಕವಾಗಿಯೂ, ಮಾನಸಿಕವಾಗಿಯೂ ಎದ್ದೇಳುವುದಕ್ಕೆ ಆಗುತ್ತಿರಲಿಲ್ಲ. ಆಮಟ್ಟಿಗೆ ನಮ್ಮ ಯುವಕರು ನಿಸ್ತಂತು ಸ್ಥಿತಿಯಲ್ಲಿದ್ದಾರೆ.
ಸೌಂಡ್ ಬಾಡಿ ಸೌಂಡ್ ಮೈಂಡ್
“ಲೇ, ಹುಡುಗರ, 10 ಕಿ.ಮೀ ಸೈಕಲ್ ತುಳಿರೋ ಅಂತ ಹೇಳಿ- ಏತಕ್ಕೆ ತುಳಿಬೇಕು, ಅದರಿಂದ ಏನಾಗುತ್ತೆ, ಮೈಕೈ ಏಕೆ ನೋಯಿಸಿಕೊಳ್ಳಬೇಕು’ ಹೀಗಂತ ಕೇಳುತ್ತಾರೆ. “ಬೇಡ್ರಪ್ಪಾ, ಕಾರ್ ಕೊಡ್ತೀನಿ 25ಕಿ.ಮೀ ಡ್ರೈವ್ ಮಾಡ್ತೀರ’ ಅಂದರೆ ನನ್ನ ಕೈಲಿ ಆಗಲ್ಲ. ವೋಲಾ, ಊಬರ್‌ನಲ್ಲಿ ಹೋಗ್ತಿàವಿ ಅಂತಾರೆ.
ಅಂದರೆ, ಶ್ರಮ ಹಾಕೋಕೂ ದೇಹದಲ್ಲಿ ನಿರೋಧಕ ಗುಣವೇ ಇಲ್ಲ. ಬರೀ ಜಂಕ್ ಫುಡ್ ತಿಂದು ತಿಂದೂ ದೇಹದಲ್ಲಿ ಸತ್ವವೇ ಇಲ್ಲದಂತಾಗಿದೆ. ಸೌಂಡ್ ಬಾಡಿ ಹ್ಯಾವ್ ಸೌಂಡ್ ಮೈಂಡ್ ಅಂತಾರೆ. ಬಾಡಿಯಲ್ಲಿ ಸೌಂಡೇ ಇಲ್ಲ ಅಂದರೆ ಮೈಂಡ್ ಹೇಗೆ ಸೌಂಡ್ ಮಾಡುತ್ತೆ? ಜಂಕ್‌ಫುಡ್ ಯೂರೋಪಿಯನ್ ದೇಶಗಳ ಹವಾಮಾನಕ್ಕೆ ಅದು ಬೇಕು. ನಮ್ಮ ಪ್ರಕೃತಿಗೆ ಅದರ ಅಗತ್ಯವಿಲ್ಲ. ಹಾಗಾದರೆ, ಆ ಫುಡ್ ನಮಗೆ ಏಕೆ ಬೇಕು? ಕೊಲೆಸ್ಟ್ರಾಲ್‌ರೂಪದಲ್ಲಿ ಸೇರಿಕೊಂಡು ದೇಹವನ್ನು ಹಾಳು ಮಾಡ್ತಾ ಇದೆ. ಮಿನರಲ್ಸ್, ವಿಟಮಿನ್ಸ್ ಬಿಟ್ಟು ಮಿಕ್ಕಿದ್ದೆಲ್ಲಾ ದೇಹಕ್ಕೆ ಸಿಗ್ತಾ ಇದೆ. ಹೀಗಿರಬೇಕಾದರೆ, ನಮ್ಮ ಯುವಕರು ಕೈಂ ದಾರಿ ತುಳಿಯದೇ ಇನ್ನೇನು ಮಾಡ್ತಾರೆ?
ಆದ್ಯಂತ್ ಹರಿಯಬ್ಬೆ
ನಿರೂಪಣೆ- ಕೆ.ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.