ಸಂಕಲನವೆಂಬ ವ್ಯವಕಲನ
Team Udayavani, Jan 22, 2019, 3:02 AM IST
ನಿಜವಾಗಿಯೂ ಒಂದು ಸಿನಿಮಾ ಸೃಷ್ಟಿಯಾಗುವುದು ಎಡಿಟಿಂಗ್ ಟೇಬಲ್‌ನಲ್ಲಿ ಎನ್ನುವ ಮಾತನ್ನು ಜಗದ್ವಿಖ್ಯಾತ ಸಿನಿಮಾ ನಿರ್ದೇಶಕರು ಒಪ್ಪುತ್ತಾರೆ. ಅದು ಎಡಿಟಿಂಗ್(ಸಂಕಲನ)ಗಿರುವ ಸಾಮರ್ಥ್ಯ. ಹಿಂದೆಲ್ಲಾ ಫಿಲಂ ರೀಲುಗಳನ್ನು ಕೈಯಲ್ಲಿ ಹಿಡಿದು ಕತ್ತರಿಸಿ, ಅಂಟಿಸಿಬಿಡುತ್ತಿದ್ದರು. ಸಣ್ಣ ಎಫೆಕ್ಟು ಕೊಡಬೇಕೆಂದರೂ ತ್ರಾಸವಿರುತ್ತಿತ್ತು. ಇಂದು ಆ ಸ್ಥಿತಿಯಿಲ್ಲ. ಅವರ ಹೆಚ್ಚಿನ ಕೆಲಸ ಕಂಪ್ಯೂಟರ್ ಟೇಬಲ್ ಮೇಲೆಯೇ ನಡೆಯುತ್ತದೆ. ದೃಶ್ಯ ಜೋಡಣೆ, ಟ್ರಾನ್ಸಿಷನ್ (ದೃಶ್ಯಗಳು ಬದಲಾಗುವ ಶೈಲಿ) ಇನ್ನೂ ಹತ್ತು ಹಲವು ಚಮತ್ಕಾರಗಳನ್ನು ಮಾಡಬಲ್ಲವರು ಸಂಕಲನಕಾರರು(ಎಡಿಟರ್). ಸಿನಿಮಾ, ಧಾರಾವಾಹಿ, ಕಿರುಚಿತ್ರ, ಸುದ್ದಿ ಮಾಧ್ಯಮ ಮುಂತಾದೆಡೆ ಅವರಿಗೆ ಅಪಾರ ಬೇಡಿಕೆ.
ವಿಡಿಯೋ ಸಂಕಲನದ ಕೋರ್ಸ್
ವಿಡಿಯೋ ತುಣುಕುಗಳನ್ನು ಚಿತ್ರಕತೆಗೆ ಅನುಸಾರವಾಗಿ ಸೇರಿಸುವುದು, ಪೂರಕವಾದ ಗ್ರಾಫಿಕ್ಸ್‌ಗಳನ್ನು ಒದಗಿಸುವುದು, ಇತ್ಯಾದಿ ಕೆಲಸಗಳನ್ನು ವಿಡಿಯೋ ಸಂಕಲನ (ಎಡಿಟಿಂಗ್) ಒಳಗೊಂಡಿರುತ್ತದೆ. ಪದವಿಪೂರ್ವ ಹಂತದ ನಂತರ, ಅನಿಮೇಷನ್ನಲ್ಲಿ ಡಿಪ್ಲೊಮಾ, ಅಥವಾ ಪದವಿ ಅಧ್ಯಯನ ಮಾಡಿರಬೇಕು. ಯಾವುದೇ ಪದವಿ ಗಳಿಸಿರುವ ವಿದ್ಯಾರ್ಥಿಗೂ ಇಲ್ಲಿ ಪ್ರವೇಶವಿರುತ್ತದೆ. ಕಿರುತೆರೆ, ಚಲನಚಿತ್ರ, ಪತ್ರಿಕೋದ್ಯಮ, ಸಾಕ್ಷ್ಯಚಿತ್ರ ತಯಾರಿಕೆ ಹಾಗೂ ಕಂಪ್ಯೂಟರ್ ಅನಿಮೇಷನ್ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರು ಈ ಕೋರ್ಸ್‌ಗೆ ಸೇರಬಹುದು.
ಅಗತ್ಯ ಕೌಶಲ
ಚಲನಚಿತ್ರ ಮತ್ತು ವಿಡಿಯೋ ಸಂಕಲನಕಾರರು ಹೆಚ್ಚಿನ ಸಮಯ ಕಂಪ್ಯೂಟರ್‌ನ ಜೊತೆಯಲ್ಲೇ ಕೆಲಸ ಮಾಡಬೇಕಾಗುತ್ತದೆ. ಪವರ್ ಪಾಯಿಂಟ್, ಫೋಟೋಶಾಪ್ ಮುಂತಾದ ಸಾಮಾನ್ಯ ತಂತ್ರಾಂಶ (ಸಾಫ್ಟ್ವೇರ್)ಗಳ ಬಳಕೆಯ ಅನುಭವವಿದ್ದರೆ ಒಳ್ಳೆಯದು. ಎಡಿಟಿಂಗ್‌ಗೆ ಸಂಬಂಧಿಸಿದ ನಿಯತಕಾಲಿಕೆಗಳನ್ನು ಓದುವುದು, ಕಿರುತೆರೆ ಚಾನೆಲ್‌ಗಳಲ್ಲಿ, ಆಡಿಯೋ- ವಿಡಿಯೋ ಕ್ಲಬ್‌ಗಳಲ್ಲಿ, ಚಲನಚಿತ್ರ ಸ್ಟುಡಿಯೋಗಳಲ್ಲಿ ಅಥವಾ ಕೇಬಲ್ ನೆಟ್‌ವರ್ಕ್‌ಗಳಲ್ಲಿ ಕೆಲ ಕಾಲ ವೃತ್ತಿ ಮಾಡಿದ್ದರೆ ಅನುಕೂಲ. ತಾಳ್ಮೆ, ನಿರ್ದಿಷ್ಟತೆ ಹಾಗೂ ಪ್ರತಿಯೊಂದನ್ನೂ ವರವಾಗಿ ಅವಲೋಕಿಸುವ ಗುಣಗಳಿರುವುದು ಅತ್ಯವಶ್ಯ. ನಿರ್ದೇಶಕ ಮತ್ತು ನಿರ್ಮಾಪಕರ ಜೊತೆಗೆ ಸುಲಲಿತವಾಗಿ ಸಂವಹನ ನಡೆಸಬಲ್ಲ ದಕ್ಷತೆ ನಿಮ್ಮಲ್ಲಿರಬೇಕು.
ನೌಕರಿ ಭವಿಷ್ಯ
ಸ್ವತಂತ್ರವಾಗಿ ವೃತ್ತಿ ಹಿಡಿಯುವ ಮನಸ್ಸಿದ್ದರೆ, ಅದಕ್ಕೂ ದಾರಿಗಳಿವೆ. ಕಾರ್ಪೊರೆಟ್ ಸಂಸ್ಥೆಗಳೊಡನೆ ಮತ್ತಿತರ ಸಂಸ್ಥೆಗಳೊಡನೆ ಒಡನಾಟ ಇಟ್ಟುಕೊಳ್ಳಬೇಕಾಗುತ್ತದೆ. ಅನುಭವಕ್ಕೆ ಅನುಗುಣವಾಗಿ, ಕಿರುತೆರೆ ಧಾರಾವಾಹಿಗಳು, ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಕಾರ್ಪೊàರೆಟ್ ಸಂಸ್ಥೆಗಳ ತರಬೇತಿ ವಿಡಿಯೋಗಳು, ಜಾಹೀರಾತು ಸಂಸ್ಥೆಗಳು ಹಾಗೂ ಸಂಗೀತದ ವಿಡಿಯೋ ತಯಾರಕರು ನಿಮಗೆ ಉದ್ಯೋಗ ನೀಡಬಹುದು. ಜೊತೆಗೆ, ಜಾಹೀರಾತು ಸಂಸ್ಥೆಗಳಲ್ಲಿ, ಕಿರುತೆರೆ ಚಾನೆಲ್‌ಗಳಲ್ಲಿ ಹಾಗೂ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಉಪಸಂಕಲನಕಾರರಾಗಿ ಸೇರಿ ಮುಂದೆ ಸಂಕಲನಕಾರರಾಗಿ ಭಡ್ತಿ ಹೊಂದಬಹುದು. ಅಲ್ಲದೆ, ಚಲನಚಿತ್ರ ತರಬೇತಿ ಸಂಸ್ಥೆಗಳಲ್ಲಿ, ತಾಂತ್ರಿಕ ಶಾಲೆಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿಯೂ ಕೆಲಸಕ್ಕೆ ಸೇರಬಹುದು. ಕೆಲ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬಂದ ಲಾಭಾಂಶವನ್ನು ಸಂಕಲನಕಾರರ ಜೊತೆಗೆ ಹಂಚಿಕೊಳ್ಳುವ ವ್ಯವಸ್ಥೆ ಕೂಡ ಇರುತ್ತದೆ.
ಡಾ. ಟಿ. ಎ. ಬಾಲಕೃಷ್ಣ ಅಡಿಗ, ನಿವೃತ್ತ ಪ್ರಾಂಶುಪಾಲರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.