ಡ್ರೀಮ್ ಸ್ಕೂಲ್‌ಗಳು
Team Udayavani, Aug 13, 2019, 5:00 AM IST
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು, ಸರ್ಕಾರಿ ಶಾಲಾ ಮಕ್ಕಳ ಭೌತಿಕ ಮಟ್ಟವನ್ನು ಹೆಚ್ಚಿಸಬೇಕು, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು- ಸ್ವಲ್ಪ ನಿಲ್ಲಿ. ಹೀಗೆ ಕನಸು ಕಾಣುತ್ತಿರುವುದು ಯಾವುದೇ ರಾಜಕೀಯ ವ್ಯಕ್ತಿಯಲ್ಲ, ಸರ್ಕಾರವೂ ಅಲ್ಲ. ಬದಲಾಗಿ, ಡ್ರೀಮ್‌ಸ್ಕೂಲ್ ಅನ್ನೋ ಸಂಸ್ಥೆ. ಸುಮಾರು 15 ವರ್ಷದಿಂದ ಹೀಗೆ ಕನಸು ಕಾಣುತ್ತಾ, ಅದನ್ನು ನನಸು ಮಾಡುತ್ತಲೇ ನೂರಾರು ಸರ್ಕಾರಿ ಶಾಲೆಗಳ ಸ್ವರೂಪ ಬದಲಿಸಿದೆ.
ಶರವೇಗದಲ್ಲಿ ಸ್ಪರ್ಧೆಗಿಳಿದಿರುವ ಖಾಸಗಿ ಶಾಲೆಗಳ ನಡುವೆ ಸಿಲುಕಿದ ಎಷ್ಟೋ ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿಯಲ್ಲಿದೆ. ಇದನ್ನೆಲ್ಲಾ , ಹೇಗೆ ಉದ್ದಾರ ಮಾಡುವುದು? ಬೆಂಗಳೂರಿನ ಮೈತ್ರೇಯಿ ಹೀಗೆ ಯೋಚನೆ ಮಾಡಿದಾಗ ಹೊಳೆದದ್ದು ಸರ್ಕಾರಿ ಶಾಲೆಗೆ ಹೋಗಿ ಪಾಠ ಮಾಡುವ ಯೋಜನೆ. ಅವರು ತಮ್ಮ ಸುತ್ತಮುತ್ತ ಇದ್ದ ಸರ್ಕಾರಿ ಶಾಲೆಯ ಶಿಕ್ಷಣದ ಗುಣಮಟ್ಟ, ಮಕ್ಕಳ ಆರ್ಥಿಕ ಸ್ಥಿತಿ ಎಲ್ಲವನ್ನು ಗಮನಿಸಿದರು. ಬಹುತೇಕ ಬಡ ಮಕ್ಕಳೇ ಓದುವ ಶಾಲೆಗಳಿಗೆ ಏನಾದರೂ ಮಾಡಬೇಕಲ್ಲ ಅಂತ ಸಮಾನ ಮನಸ್ಕರ ತಂಡವನ್ನು ಕಟ್ಟಿ , ಡ್ರೀಮ್ ಸ್ಕೂಲ್ ಫೌಂಡೇಶನ್ ಅಂತ ಶುರು ಮಾಡಿಯೇ ಬಿಟ್ಟರು.
ಇದರ ಪರಿಣಾಮ, ಇವತ್ತು ಯಶವಂತಪುರದ ಹೈಸ್ಕೂಲ್ ಹಾಗೂ ಪ್ರೈಮರಿ ಸ್ಕೂಲ್ ಸೇರಿ 4 ಸರ್ಕಾರಿ ಶಾಲೆಗಳ ಸ್ವರೂಪ ಬದಲಾಗಿದೆ. ಆರ್.ಟಿ. ನಗರದ ಮಠದಳ್ಳಿಯ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಸುಮಾರು 15 ವರ್ಷಗಳಿಂದ ನಿಗಾವಹಿಸಿದ್ದಾರೆ. ಅಲ್ಲಿ ತರಗತಿ ಕೊಠಡಿಗಳ ಕೊರತೆ ಇತ್ತು. 4 ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಈ 8 ಶಾಲೆಗಳಿಗೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಹೀಗೆ ಲೆಕ್ಕ ಹಾಕುತ್ತಾ ಹೋದರೆ ನೂರಾರು ಶಾಲೆಗಳು ಶೈಕ್ಷಣಿಕವಾಗಿ ಬದಲಾಗಿವೆ.
ಆದಾಯ ಎಲ್ಲಿಂದ?
ಮೊದಲು ಬೆಂಗಳೂರಿನ ವಿವಿಧ ಕಡೆಗಳಲ್ಲಿರುವ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಹಾಗೂ ಸ್ಲಂಗಳಲ್ಲಿರುವ ಶಾಲೆಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸುತ್ತಾರೆ. ಅಗತ್ಯವಿರುವ ಸಾಮಗ್ರಿಗಳ ಯೋಜನಾಪಟ್ಟಿ ತಯಾರಿಸಿ, ಅದಕ್ಕೆ ಬೇಕಾದ ಖರ್ಚನ್ನು ಸರಿದೂಗಿಸಲು ಸದಸ್ಯರೇ ಮೊದಲು ಕೈಯಿಂದ ಹಣ ವ್ಯಯಿಸುತ್ತಾರೆ. ಆನಂತರ ಟ್ರಸ್ಟ್‌ನ ವೆಬ್‌ಸೈಟ್, ಫೇಸ್ ಬುಕ್, ವಾಟ್ಸಾಪ್ ಮೂಲಕ, ನಾವು ಹೀಗೆ ಹೀಗೆ ಮಾಡ್ತಾ ಇದ್ದೀವಿ. ಆಸಕ್ತರು ಸ್ಪಂದಿಸಿ ಎಂದು ಪ್ರಕಟಿಸುತ್ತಾರೆ. “ಜನರಿಂದ ಬಂದ ಹಣದ ಜೊತೆಗೆ, ಟ್ರಸ್ಟಿನ ಹಣ ವಿನಿಯೋಗಿಸಿಕೊಂಡು ಸಮಸ್ಯೆ ಇರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳುತ್ತಾರೆ. ಆಯಾ ಶಾಲೆಗಳ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುತ್ತಾ ಹೋಗುತ್ತೇವೆ’ ಎನ್ನುತ್ತಾರೆ ಟ್ರಸ್ಟ್‌ನ ನಿರ್ದೇಶಕಿ ಮೈತ್ರೇಯಿ.
ಟ್ರಸ್ಟಿನಲ್ಲೇ ಶಿಕ್ಷಕರಿರುವುದರಿಂದ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ, ಅವರಿಂದಲೇ ಮಕ್ಕಳಿಗೆ ಪಠ್ಯಕ್ರಮದ ಬೋಧನೆಯನ್ನು ಮಾಡಿಸಲಾಗುತ್ತದೆ. ಹೀಗೆ ಸುಮಾರು 15 ವರ್ಷಗಳಿಂದ ಸಂಸ್ಥೆಯು ಸರ್ಕಾರಿ ಶಾಲಾ ಸರ್ವಾಂಗೀಣ ಸೇವೆ ಮಾಡುತ್ತಿದ್ದು, ಇಲ್ಲಿಯವರೆಗೆ 30ಕ್ಕೂ ಅಧಿಕ ಶಾಲೆಗಳಿಗೆ ಬೋಧನೆ, ಹಾಗೂ ವಿವಿಧ ಸೌಲಭ್ಯವನ್ನು ಟ್ರಸ್ಟ್ ಒದಗಿಸಿಕೊಟ್ಟಿದೆ.
ಅಗ್ರಿಮೆಂಟ್
ಶಾಲೆಗಳನ್ನು ದತ್ತು ಪಡೆದುಕೊಳ್ಳುವ ಮುನ್ನ ಆ ಪ್ರದೇಶದ ಬಿಇಓ ಹತ್ತಿರ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ನಂತರ ಆಯಾ ಶಾಲಾ ಮುಖ್ಯಶಿಕ್ಷಕರ ಒಪ್ಪಿಗೆ ಪಡೆದು ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಶಾಲೆಗಳಲ್ಲಿ ಪಾಠ ಮಾಡುವುದಕ್ಕಾಗಿಯೇ ಟ್ರಸ್ಟಿನಲ್ಲಿ ಮೂವರು ಬೋಧಕರಿದ್ದಾರೆ. ಒಬ್ಬೊಬ್ಬರನ್ನು ಒಂದೊಂದು ಶಾಲೆಗಳಿಗೆ ನೇಮಿಸಲಾಗುತ್ತದೆ. ಈ ರೀತಿಯ ಅತಿಥಿ ಶಿಕ್ಷಕರ ಬೋಧನೆ ಅವಧಿ, ಶಾಲಾ ಸಮಯದಲ್ಲೇ ನಿಗದಿಯಾಗುವುದರಿಂದ ಮಕ್ಕಳಿಗೆ ಕಿರಿಕಿರಿ ಎನಿಸುವುದಿಲ್ಲ. ಇವರು ಬರೀ ಪಠ್ಯದ ವಿಚಾರವನ್ನು ಮಾತ್ರ ತಿಳಿಸುವುದಿಲ್ಲ, ಬದುಕುವುದು ಹೇಗೆ ಅನ್ನೋದನ್ನೂ ಕಲಿಸಿಕೊಡುತ್ತಾರೆ.
ಶೈಕ್ಷಣಿಕ ಮಟ್ಟ ತಿಳಿಯೋದು ಹೀಗೆ
ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಂತರ, ಪಾಠ ಪ್ರವಚನ ಪ್ರಾರಂಭಿಸುವುದಕ್ಕೂ ಮುಂಚೆ ಮಕ್ಕಳ ಬೌದ್ದಿಕ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಹೇಗೆಂದರೆ: ಪ್ರೌಢಶಾಲಾ ಮಕ್ಕಳಿಗೆ ಮೂರನೇ ತರಗತಿ ಪಠ್ಯಪುಸ್ತಕವೊಂದನ್ನು ಕೊಟ್ಟು ಓದಲು ಹಾಗೂ ಬರೆಯಲು ಹೇಳುತ್ತಾರೆ. ಅದರಲ್ಲಿ ಯಾವ ಯಾವ ಮಕ್ಕಳು ವಿಷಯವನ್ನು ಅರ್ಥೈಸಿಕೊಂಡಿದ್ದಾರೆ ಎಂಬುದರ ಪಟ್ಟಿಯನ್ನು ತಯಾರಿಸಿಕೊಳ್ಳಲಾಗುತ್ತದೆ. ಮಕ್ಕಳ ಶೈಕಣಿಕ ಕೊರತೆ ಗಮನಿಸಿ, ಅದಕ್ಕೆ ತಮ್ಮದೇ ಆದ ಕೆಲವು ಬೇಸಿಕ್ ಸ್ಕಿಲ್ಸ್‌ಗಳನ್ನು ಹೇಳಿಕೊಡುತ್ತಾರೆ. ನಂತರ, ಬೋಧನೆ ಪೂರ್ವ, ನಂತರ ಹೀಗೆ ಎರಡು ಅಸೈನ್‌ಮೆಂಟ್‌ಗಳನ್ನು ಕೊಡಲಾಗುತ್ತದೆ. ಕೆಲವು ಮೌಖೀಕ ಪರೀಕ್ಷೆಗಳನ್ನು ನಡೆಸಿ, ನಮ್ಮ ಬೋಧನೆಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಮಕ್ಕಳು ಶೈ ಕ್ಷಣಿಕ ಮಟ್ಟ ಹೇಗಿತ್ತು ಎನ್ನುವುದನ್ನು ಪಟ್ಟಿ ಮಾಡಲಾಗುತ್ತದೆ.
ಟ್ರಸ್ಟಿನ ಬೋಧಕರಲ್ಲಿ ಬಹುತೇಕ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳ ಕುರಿತು ಪಾಠ ಮಾಡುತ್ತಾರೆ. ಅಗತ್ಯ ಪಠ್ಯಕ್ರಮವನ್ನು , ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಬಳಿಕ, ಶಿಕ್ಷಕರು ಟ್ರೈನ್‌ಅಪ್ ಆದ ನಂತರ ಬೋಧನೆಯನ್ನು ಆರಂಭಿಸುತ್ತಾರೆ. ಸಾಮಾನ್ಯವಾಗಿ ಸ್ಲಂ ವಿದ್ಯಾರ್ಥಿಗಳು, ಬಡತನದಿಂದ ಬಂದವರಾಗಿರುವುದರಿಂದ 7 ನೇ ತರಗತಿ ಮುಗಿಯುತ್ತಿದ್ದಂತೆ ಶಾಲೆ ತೊರೆದು ಕೂಲಿ ಕೆಲಸಕ್ಕೆ ಹೊರಟುಬಿಡುತ್ತಾರೆ. ಓದಿನ ವಿಚಾರದಲ್ಲಿ ಅವರ ಮನೆಯಲ್ಲಿಯೂ ಸಹಕಾರವಿಲ್ಲದೆ ಮಕ್ಕಳು ಹಿಂದೆ ಉಳಿಯುವುದುಂಟು. ಕೆಲವು ಮಕ್ಕಳಿಗೆ ಪಠ್ಯಕ್ರಮ ಕ್ಲಿಷ್ಟವೆನಿಸಿದರೆ ಅರ್ಧಕ್ಕೇ ಶಾಲೆ ಬಿಡುತ್ತಾರೆ. ಹೀಗಿದ್ದಾಗ ಅವರಿಗೆ ಸುಲಭ ಮಾರ್ಗದ ಮೂಲಕ ಪಾಠ ಮಾಡಿದರೆ ಓದುವ ಪ್ರೀತಿ ಹೆಚ್ಚುತ್ತದೆ ಎಂಬುದು ಟ್ರಸ್ಟ್ ಸದಸ್ಯರ ಅನಿಸಿಕೆ.
ಮಲ್ಲೇಶ್ವರಂ, ಯಶವಂತಪುರ, ಆರ್.ಟಿ ನಗರ ಸೇರಿದಂತೆ ಬೆಂಗಳೂರಿನ ಈ ಮೂರು ಕಡೆಗಳಲ್ಲಿ ಟ್ರಸ್ಟಿನ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸಂಸ್ಥೆಯ ಮೂಲಕ ವಾಲಂಟರಿಯಾಗಿ ಬಂದು ಪಾಠ ಮಾಡುವವರೂ ಇದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವಿಷಯ ತಿಳಿದವರು, ಈ ರೀತಿ ಪಾಠ ಮಾಡಲು ಆಗದವರು, ತಮ್ಮಲ್ಲಿದ್ದಷ್ಟು ಹಣ ಕೊಡುತ್ತಾರೆ. ಎಲ್ಲವೂ ಪಾರದರ್ಶಕವಾಗಿ ನಡೆಯುವುದರಿಂದ, ಈ ತನಕ ಯಾವುದೇ ಗೊಂದಲಗಳಾಗಲಿ ಎದುರಾಗಿಲ್ಲ.
-ಯೋಗೇಶ್ ಮಲ್ಲೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.