ಡಿಯರ್ ಬ್ರಿಗೇಡಿಯರ್
ಸೇವಾ'ಕರ್ತರು
Team Udayavani, Jul 16, 2019, 5:05 AM IST
ವೀಕೆಂಡ್ ಬಂದರೆ ಸಾಕು, ನಮ್ಮ ಯುವಕರಲ್ಲಿ ಬಹುತೇಕರು ಸಿನಿಮಾ, ಪ್ರವಾಸ ಅಂಥ ಮಜಾ ಮಾಡುತ್ತಾರೆ. ಆದರೆ ಈ ಬ್ರಿಗೇಡ್ ಬಂಧುಗಳು ಹಾಗಲ್ಲ. ಶನಿವಾರ, ಭಾನುವಾರಗಳನ್ನು ಜೋಡಿಸಿ ಕೊಂಡು ಅವರೆಲ್ಲಾ ಒಟ್ಟಾಗಿ ಹೋಗಿ, ಸುಳ್ಯದ ರಸ್ತೆಗಳನ್ನೋ, ದುರ್ಗದ ಕಾನಬಾವಿಯನ್ನೋ ಶುಚಿ ಮಾಡುತ್ತಾರೆ. ಯಾವುದೂ ಇಲ್ಲ ಅಂದರೆ, ಹಳಿಂಗಳಿ ಗುಡ್ಡದ ನೆತ್ತಿಯ ಮೇಲೆ ಗಿಡಗಳನ್ನು ನೆಡುವ ಮೂಲಕ “ಸೇವಾ’ಕರ್ತರಾಗುತ್ತಾರೆ. ಬದುಕಿನ ಸಾರ್ಥಕತೆ ಅಂದರೆ ಇದೆ ಅಲ್ಲವೇ?
ಬನ್ನೇರುಘಟ್ಟದ ಕಲ್ಯಾಣಿ ನೋಡಿದವರೆಲ್ಲಾ ಹೌಹಾರಿಬಿಡುತ್ತಿದ್ದರು. ಹಾಗಿತ್ತು ಜೊಂಡು. ಒಂದಷ್ಟು ಜೆಸಿಬಿ ಮಾಲೀಕರು ಬಂದವರೇ -“ಸ್ವಾಮಿ, ಇದನ್ನು ತೆಗೆಯೋಕೆ ದೇವರೂ ಬಂದ್ರೂ ಆಗೋಲ್ಲ’ ಅಂತ ಕೈ ಮುಗಿದು ಹೋಗಿದ್ದರು. ಆದರೆ, ಒಂದು ಭಾನುವಾರ ಇದ್ದಕ್ಕಿದ್ದಂತೆ ಕಲ್ಯಾಣಿ ಒಳಗೆ ಗಜಿಬಿಜಿ ಸದ್ದು.
ಹೊರಗೆ ಟನ್‌ಗಟ್ಟಲೆ ಜೊಂಡು. ಬರ್ಮುಡ, ಟೀ ಷರ್ಟ್ ಹಾಕಿದ್ದ 100 ಜನರ ಕೈಯಲ್ಲಿ ಸೆನಕೆ, ಕುಡುಗೋಲುಗಳಿದ್ದವು. ಕಲ್ಯಾಣಿ ಪಾದದ ಬಳಿ ಒಂದಷ್ಟು ಜನ ಜೊಂಡು ಕಿತ್ತು ಕೊಡುತ್ತಿದ್ದರೆ, ಮತ್ತೂಂದಷ್ಟು ಜನ ಪಂಕ್ತಿಯಲ್ಲಿ ನಿಂತು ಹೊರಗೆ ಎಸೆಯುತ್ತಿದ್ದಾರೆ. ಕಲ್ಯಾಣಿ ಒಳಗೆ ಗಬ್ಬು ವಾಸನೆ. ಆ ಮಟ್ಟಕ್ಕೆ ನೀರು ಕಲುಷಿತ ಗೊಂಡಿತ್ತು. ಸಂಜೆ ಹೊತ್ತಿಗೆ ಒಬ್ಬೊಬ್ಬರೇ ಮೆಲ್ಲಗೆ ಎದ್ದು ಮೇಲೆ ಬಂದಾಗ ಎಲ್ಲರ ಕೈಗಳಲ್ಲಿ ರಕ್ತದ ಗೆರೆಗಳು; ಜೊಂಡು ಆ ರೀತಿ ಸೇಡು ತೀರಿಸಿಕೊಂಡಿತ್ತು.
“ಏನ್ರೊ ಈ ರೀತಿ ಆಗಿದೆ?’
ನಮ್ಮ ಹುಡಗ್ರು ಏನು ಮಾಡಿದ್ದಾರೆ ನೋಡೋಣ ಅಂತ ಬಂದಿದ್ದ ಚಕ್ರವರ್ತಿ ಸೂಲಿಬೆಲೆ ಹೀಗಂತ ಕೇಳಿದಾಗ- “ಬಿಡ್ರಣ್ಣಾ, ಏನೋ ಒಳ್ಳೆ ಕೆಲ್ಸದಲ್ಲಿ ಹಿಂಗೆಲ್ಲ ಆಗ್ತದೆ’ ಅಂದು ಬಿಡೋದಾ?!
ಯುವ ಬ್ರಿಗೇಡ್ ಹುಡುಗರೇ ಹಿಂಗೆ. ನಿಮ್ಮೂರಲ್ಲಿ ಕಲ್ಯಾಣಿ ಕ್ಲೀನ್ ಮಾಡಬೇಕು, ಸ್ಕೂಲಿಗೆ ಹೊಸ ರೂಪ ಕೊಡಬೇಕು, ನದಿಯ ಗಬ್ಬು ತೆಗೆಯಬೇಕು ಅಂತೇನಾದರು ಇದ್ದರೆ ದಬ ದಬ ಅಂತ ಓಡಿ ಬರ್ತಾರೆ. ಆಮೇಲೆ, ನೋಡ ನೋಡುತ್ತಿದ್ದಂತೆ ಕಲ್ಯಾಣಿ ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು ನಿಂತು ಬಿಡ್ತದೆ. ಶನಿವಾರ, ಭಾನುವಾರ ಬಂತೆಂದರೆ ಯುವ ಬ್ರಿಗೇಡ್‌ನ ಯುವಕರಿಗೆ ವೀಕೆಂಡ್ ವಿತ್ ಸೇವೆ. ಅವರು ಏನೇನು ಮಾಡ್ತಾರೆ ಅಂತ ತಿಳಿಯೋಕೆ ಫೇಸ್‌ಬುಕ್ ಪೇಜ್ ನೋಡಿ – ಹಾವೇರಿ ರಸ್ತೆ ಪಕ್ಕ ಗಿಡ ನೆಡುವುದೋ, ದಕ್ಷಿಣ ಕನ್ನಡದ ಪೆರ್ನಿಯ ಹುಡುಗರು ತಮ್ಮ ರಸ್ತೆಯನ್ನು ತಾವೇ ದುರಸ್ಥಿ ಮಾಡಿಕೊಳ್ಳುವ… ಹೀಗೆ, ಎಲ್ಲರೂ ತಮ್ಮ ತಮ್ಮ ಪರಿಸರವನ್ನು ತಾವೇ ಶುಚಿಯಾಗಿಡುವಲ್ಲಿ ನಿರತರಾಗಿರುತ್ತಾರೆ.
“ಕಾವೇರಿ ನದಿಯ ನಾಲ್ಕು ಪಾಯಿಂಟ್‌ಗಳಲ್ಲಿ 300 ಟನ್ ಕಸ ತೆಗೆದವು. ಈಗ ನೋಡಿ, ಅಲ್ಲೆಲ್ಲ ಒಂದೊಂದು ತಂಡ ಶುರುವಾಗಿದೆ. ಅವ್ರು, ನಮ್ಮ ನದಿ ಕ್ಲೀನ್ ಮಾಡೋಕೆ ಇನ್ನು ನೀವು ಅಲ್ಲಿಂದ ಬರಬೇಕಿಲ್ಲ. ಇನ್ನು ಮುಂದೆ ನಾವೇ ಕ್ಲೀನ್ ಮಾಡ್ಕೊàತೀವಿ ಅಂತಾರೆ ಇದಕ್ಕಿಂತ ಬೇರೇನು ಬೇಕು? ಒಂದು ಸಲ ನಿಸ್ವಾರ್ಥ ಸೇವೆಯನ್ನು ತರುಣರಲ್ಲಿ ಬಿತ್ತಿದರೆ, ಅದು ಮುಂದೆ ಹೆಮ್ಮರವಾಗಿ ಫಲ ಕೊಡುತ್ತದೆ. ಆಗ ಈ ಯುವಬ್ರಿಗೇಡ್ ಬೇಕಾಗಲ್ಲ. ಇದೇ ನಮ್ಮ ಗುರಿ’ ಅಂತಾರೆ ಯುವ ಬ್ರಿಗೇಡ್‌ನ ರೂವಾರಿ ಚಕ್ರವರ್ತಿ ಸೂಲಿಬೆಲೆ.
ಇನ್ನೊಂದು ಆಸಕ್ತಿದಾಯಕ ವಿಚಾರ ಎಂದರೆ, ಕುಮಾರವ್ಯಾಸ ಪ್ರತಿ ದಿನ ಸ್ನಾನ ಮಾಡಿ, ಗದುಗಿನ ಭಾರತ ಬರೆಯುತ್ತಿದ್ದ ಕಲ್ಯಾಣಿ ಹುಡುಕಿ, ದಿನಕ್ಕೆ ನಾಲ್ಕು ಜನರಂತೆ 276ದಿನ ಕ್ಲೀನ್ ಮಾಡಿದ್ದು ಇದೇ ಬ್ರಿಗೇಡ್ ಬಂಧುಗಳು.
ಇದರಿಂದ ಲಾಭ ಏನು?
ಬ್ರಿಗೇಡ್‌ಹುಟ್ಟಿದ್ದು ಈ ಉದ್ದೇಶಕ್ಕಲ್ಲ. ಮೋದಿ ಅವರನ್ನು ಬೆಂಬಲಿಸಲು. ಆಗ ನಮೋ ಬ್ರಿಗೇಡ್‌ಅಂತಿತ್ತು. ಅವರು ಅಧಿಕಾರಕ್ಕೆ ಬಂದ ಮೇಲೆ ವಿಸರ್ಜನೆ ಮಾಡೋಣ ಅಂತ ತೀರ್ಮಾನಿಸಿದಾಗ- ಒಳ್ಳೇ ಉದ್ದೇಶಕ್ಕೆ, ನಿಸ್ವಾರ್ಥಯುವಕರ ನೆಟ್‌ವರ್ಕ್ ಇದೆ. ಇದನ್ನು ಒಳ್ಳೆ ಕೆಲಸಕ್ಕೆ ಬಳಸಿಕೊಳ್ಳಿ ‘ ಅಂತ ಒಂದಷ್ಟು ಜನ ಸಲಹೆ ಕೊಟ್ಟಾಗ ನಮೋ ಬ್ರಿಗೇಡ್‌ನ ಗುಡ್‌ವಿಲ್‌ನ ಹಾಗೇ ಇಟ್ಟು, ಉದ್ದೇಶವನ್ನು ಬದಲಾಯಿಸಿಕೊಳ್ಳಲಾಯಿತು. ಹಾಗೆ ಶುರುವಾದದ್ದೇ ಯುವ ಬ್ರಿಗೇಡ್.
ಯುವ ಬ್ರಿಗೇಡ್‌ನಲ್ಲಿ ಮಹಾರಕ್ಷಕ್, ವಿತ್ತಶಕ್ತಿ, ಸದಾºವನ, ಡಿಜಿಟಲ್ ಸಂಸ್ಕಾರ ಅನ್ನೋ ನಾಲ್ಕು ವಿಭಾಗವಿದೆ. ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ. ಇದಕ್ಕೆ ಒಬ್ಬ ರಾಜ್ಯ ಸಂಚಾಲಕರು. ಒಂದು ನಿರ್ದೇಶನ ಮಂಡಳಿ ಇದೆ. ರಾಜ್ಯದಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದಾರೆ.
ಐದು ವರ್ಷಗಳಲ್ಲಿ 250 ಕಲ್ಯಾಣಿಗಳ ಮೈ ತೊಳೆದಿದ್ದಾರೆ, 40 ಕೆರೆಗಳನ್ನು ಶುದ್ಧೀಕರಿಸಿದ್ದಾರೆ. ನೇತ್ರಾವತಿ, ಕಾವೇರಿ, ಕಪಿಲಾ, ಭೀಮಾ, ಸೌಪರ್ಣಿಕ, ನಂದಿನಿ… ಹೀಗೆ, 8 ನದಿಗಳನ್ನು ಶುಚಿ ಮಾಡಿದ್ದಾರೆ. ಹಲವು ಶಾಲೆಗಳ ಪುರೋಭಿವೃದ್ಧಿಗೆ ಹೆಗಲು ಕೊಟ್ಟಿದ್ದಾರೆ. ಹೆಚ್‌ಡಿಎಫ್ಸಿ ಬ್ಯಾಂಕ್ ಮೂಲಕ ಒಂದಷ್ಟು ಮಂದಿಗೆ ತರಬೇತಿ, ಉದ್ಯೋಗ ಕೊಡಿಸಿದ್ದೂ ಇದೇ ಬ್ರಿಗೇಡ್ ಮಹಾನುಭಾವರು.
ಯುವ ಬ್ರಿಗೇಡ್‌ನಲ್ಲಿ ಡಾಕ್ಟರ್, ಎಂಜಿನಿಯರ್‌ಗಳು, ಎಸ್‌ಎಸ್‌ಎಲ್‌ಸಿ ನಪಾಸಾದವರು, 7ನೇತರಗತಿ ಜೊತೆ ಟೂ ಬಿಟ್ಟವರು ಇದ್ದಾರೆ. ಎಲ್ಲರಿಗೂ ಒಂದೇ ಕೆಲಸ, ಒಂದೇ ಡ್ರೆಸ್. ಅದುವೇ ಬರ್ಮುಡಾ, ಬನಿಯನ್, ಕೈಯಲ್ಲಿ ಪಿಕಾಸಿ ಮತ್ತು ಸೆನೆಕೆ. “ನಮ್ಮಲ್ಲಿ ವೇದಿಕೆ ಕಾರ್ಯಕ್ರಮ ಇಲ್ಲ. ರಾಜಕೀಯಕ್ಕೆ ಜಾಗ ಇಲ್ಲ. ಹೀಗಾಗಿ ಹೆಚ್ಚಾಗಿ ಹಣವೂ ಓಡಾಡೊಲ್ಲ. ಬೇಕಾಗಿರುವುದು ಶ್ರಮಿಕರು ಮಾತ್ರ. ಮನೆ, ಊರಲ್ಲಿ “ಇವನೇನು ಮಾಡ್ತಾನೆ’ ಅನ್ನೋ ವ್ಯಕ್ತಿ ಇಲ್ಲಿ ಹೆಚ್ಚು ಗೌರವ ಪಡೀತಾನೆ. ಏಕೆಂದರೆ, ಅವನು ರೆಗ್ಯುಲರ್ ಆಗಿ ಮಾಡೋದನ್ನೇ, ಇಲ್ಲಿ ಹೆಚ್ಚು ಓದಿದವರೂ ಮಾಡ್ತಾ ಇರ್ತಾರೆ. ಸೆನಕೆ ಹಿಡಿಯೋಕೆ ಬಂದವರು ಮಾತ್ರ ನಮ್ಮ ಜೊತೆ ಇರೋಕೆ ಸಾಧ್ಯ. ಹಾಗಂತ, ಕೆಲಸ ಮಾಡದೇ ಇರುವವರನ್ನು ನಾವು ದೂಷಿಸಲ್ಲ’ ಅಂತಾರೆ ಚಕ್ರವರ್ತಿ.
ಯಾರೂ ಕಂಟ್ರೋಲ್ ಮಾಡೋಲ್ಲ
ಯುವ ಬ್ರಿಗೇಡ್‌ನ ಮೂಲ ಮಂತ್ರವೇ ಸೇವೆ. ಅದರ ಹಿಂದೆ ಪಕ್ಷ, ಜಾತಿಯ ಹಿಡನ್ ಅಜೆಂಡಾ ಇಲ್ಲ. ಸಂಘಟನೆ ಯಾರ ವಿರುದ್ಧವೂ ಪ್ರತಿಭಟನೆಗೆ ಇಳಿಯೋಲ್ಲ. ಹಾಗಾಗಿ ವೈಮನಸ್ಯ ನೂಕಾಚೆ ದೂರ. ಇಂಥ ಕೆಲ್ಸ ಮಾಡಿ ಅಂತ ಯಾರೂ ಆಜ್ಞೆ ಮಾಡೋಲ್ಲ. ನಿಸ್ವಾರ್ಥ ಸೇವೆಗೆ ಅವರವರೇ ಸೇರಿಕೊಳ್ಳುತ್ತಾರೆ. “ಇದು ಪ್ರೀತಿ, ನಂಬಿಕೆಯ ಬಂಧ ಅಷ್ಟೇ. ಒಂದು ಪಕ್ಷ ಇಲ್ಲಿ ಸ್ವಾರ್ಥ ಏನಾದರೂ ಇದ್ದಿದ್ದರೆ ಇಷ್ಟು ಸಾವಿರ ಜನರ ನೆಟ್‌ವರ್ಕ್ ಆಗುತ್ತಿರಲಿಲ್ಲ. ಇದು ಯಾವ ಮಟ್ಟಿಗೆ ಇದೆ ಅಂದರೆ, “ಬನÅಪ್ಪಾ ಪಾರ್ಟಿ ಮಾಡೋಣ’ ಅಂತ ಸುಮ್ಮನೆ ಕರೆದರೆ ನಮ್ಮ ಹುಡುಗರು ಯಾರೂ ಬರೋಲ್ಲ.
ನಾಳೆ ಉಡುಪಿ, ಮಣಿಪಾಲದ ಬೀದಿಗಳನ್ನು ಕ್ಲೀನ್ ಮಾಡಬೇಕು ಅಂತ ಹೇಳಿ, ಕನಿಷ್ಠ ಎರಡು ಸಾವಿರ ಜನ ಬಂದು ನಿಲ್ಲುತ್ತಾರೆ. ಇದೆಲ್ಲ ಸಾಧ್ಯವಾಗಿದ್ದು ನಿಷ್ಕಲ್ಮಷ ಉದ್ದೇಶದಿಂದ ಮಾತ್ರ’ ಅಂತಾರೆ ಚಕ್ರವರ್ತಿ. ಪ್ರತಿಭಟನೆ ಮಾಡೋದು, ಕೂಗಾಡೋದು ಮಾಡುತ್ತಿದ್ದ ಎಷ್ಟೋ ಸಂಘಟನೆಗಳು ಇವತ್ತು ಬ್ರಿಗೇಡ್‌ನ ಹೆಜ್ಜೆಯನ್ನು ಅನುಸರಿಸುತ್ತಿವೆಯಂತೆ. ಜನಮನ್ನಣೆ ಗಳಿಸಬೇಕು ಅಂದರೆ ಕೆಲಸ ಮಾಡಿದರೆ ಮಾತ್ರ ಸಾಧ್ಯ ಅಂತ ಅರಿವು ಮೂಡಿಸಿರುವ ಹೆಗ್ಗಳಿಕೆ ಬ್ರಿಗೇಡ್‌ಗೆ ಇದೆ.
ಸೇರುವುದು ಹೇಗೆ?
ಯುವ ಬ್ರಿಗೇಡ್‌ನ ಶಕ್ತಿ ಸೋಶಿಯಲ್ ಮೀಡಿಯಾ. ತಾವು ಮಾಡಿದ ಕೆಲಸಗಳನ್ನು ಅದರಲ್ಲಿ ಅಪ್‌ಲೋಡ್ ಮಾಡುತ್ತಾರೆ. ತಕ್ಷಣ ದೂರದ ಉಡುಪಿಯಲ್ಲೋ, ಮಂಗಳೂರಲ್ಲೋ, ಧಾರವಾಡದ ಹಳ್ಳಿಯಲ್ಲೋ ಯುವಕನೊಬ್ಬ ನಮ್ಮೂರ ಕಲ್ಯಾಣಿ ಕ್ಲೀನ್ ಮಾಡಬೇಕು ಅಂತ ಫೇಸ್‌ಬುಕ್‌ನಲ್ಲಿ ಹಾಕಿದರೆ. ತಕ್ಷಣ ಸ್ಥಳೀಯ ಬ್ರಿಗೇಡ್ ಹುಡುಗರು ಅವರನ್ನು ಸಂಪರ್ಕಿಸುತ್ತಾರೆ. ಆ ಊರ ಜನರ ಜೊತೆ ಬೇರೆ ಬೇರೆ ಭಾಗದವರೂ ಸೇರಿ ಸೇವೆ ಮುಗಿಸುತ್ತಾರೆ. “ನಮಗೆ ಯಾವತ್ತೂ ಊಟ-ತಿಂಡಿಗೆ ಕೊರತೆ ಆಗಿಲ್ಲ. ಮೊದಲ ಸಲ, ನಾವು ಚಕ್ರವರ್ತಿ ಸೂಲಿಬೆಲೆ ಕಡೆಯವರು, ಇಂಥ ಕೆಲಸ ಮಾಡೋಕೆ ಬಂದಿದ್ದೇವೆ ಅಂತ ನನ್ನ ಹೆಸರು ಬಳಸಿಕೊಳ್ಳುತ್ತಾರೆ. ಆಮೇಲೆ ನನ್ನ ಹೆಸರೇನೂ ಬೇಕಾಗಲ್ಲ. ಅವರು ಮಾಡುವ ಕೆಲಸವೇ ಅವರಿಗೆ ಶ್ರೀರಕ್ಷೆಯಾಗಿಬಿಡುತ್ತದೆ. ಹೀಗಾಗಿ, ಹಣದ ಅವಶ್ಯಕತೆ ಇರೋದಿಲ್ಲ’
ಚಕ್ರವರ್ತಿಹೀಗೆ ವಿವರಿಸುವಾಗ ಮುಖದಲ್ಲಿ ಸಾರ್ಥಕಭಾವ.
“ಭಿನ್ನ’ ಕಾರ್ಯ
ಭಿನ್ನವಾದ ದೇವರಪಟಗಳನ್ನು ಮರದಡಿ ಇಡುತ್ತಾರೆ. ಅವನ್ನು ಸಂಗ್ರಹಿಸಿ, ಮಣ್ಣಲ್ಲಿ ಬೆರಯದೇ ಇರುವ ಮೊಳೆ, ಗಾಜುಗಳನ್ನು ಬೇರ್ಪಡಿಸಿ ರೀಸೈಕಲ್ ಮಾಡುತ್ತಾರೆ. ಮಣ್ಣಲ್ಲಿ ಬೆರೆಯುವ ವಸ್ತುಗಳನ್ನು ಗುಂಡಿ ತೋಡಿ ಅದರೊಳಗೆ ಹಾಕಿ, ಅಲ್ಲಿ ಗಿಡ ನೆಡುವುದು ಬ್ರಿಗೇಡ್ ಸಂಪ್ರದಾಯ. ಈ ರೀತಿ ಅನಾಥವಾಗಿ ಬಿದ್ದಿದ್ದ 6 ಲಕ್ಷ ಫೋಟೋಗಳನ್ನು ಸಂಗ್ರಹಿಸಿ ಉಳಿಸಿದ್ದಾರೆ ಬ್ರಿಗೇಡ್ ತಂಡದ ಸದಸ್ಯರು. ಇದರ ಹೆಸರು ಕಣ, ಕಣದಲ್ಲೂ ಶಿವ ಅಂತ.
ನೇತ್ರಾವತಿ- 500 ಜನ, 1 ದಿನ, 300ಟನ್ ತ್ಯಾಜ್ಯ
ಭೀಮಾ-700 ಜನ, 2 ದಿನ, 180 ಟನ್ ತ್ಯಾಜ್ಯ
ಕಾವೇರಿ- 500ಜನ, 7 ದಿನ, 250ಟನ್ ತ್ಯಾಜ್ಯ ಒಟ್ಟು 175 ಕಿ.ಮೀ
ಸಂಪರ್ಕ– yuvabrigade.net
– 8152873124
– ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.