ಬಾಳಗೆಳತಿಯೇ, ತರವೇ ನನ್ನಲಿ ಈ ಕೋಪ?
Team Udayavani, Dec 5, 2017, 1:39 PM IST
ನೀ ಬರುವ ದಾರಿಯಲ್ಲಿ ನನ್ನೆರಡು ಕಣ್ಣುಗಳ ಚೆಲ್ಲಿ, ನಿನ್ನ ಮುದ್ದಾದ ಮೊಗವ ಕಣ್ತುಂಬಿಸಿಕೊಳ್ಳಲು ಕಾತರನಾಗಿದ್ದೇನೆ. ಕಾಯಿಸದೆ ಒಳ್ಳೆಯ ಹುಡುಗಿಯಂತೆ ಬಳಿ ಬಂದು ಬಿಡು…
ಬಾಳ ಗೆಳತಿಯೇ…
ಮನದ ಮನೆ ಬರಿದಾಗಿದೆ. ಕಣ್ಣಲ್ಲಿ ನಿತ್ಯ ಕಂಗೊಳಿಸುವ ಬೆಳಕಿಲ್ಲ. ಎದೆಯ ಮೂಲೆಯಲ್ಲಿ ಸೂತಕದ ಛಾಯೆ. ಮಾತುಗಳಲ್ಲಿ ಸತ್ವವಿಲ್ಲ. ಆಗಾಗ ಮೈದಳೆದು ಅಚ್ಚರಿಗೊಳಿಸುವ ಕತೆಗಳು ಕಾಣೆಯಾಗಿವೆ. ನಿಜಮಿತ್ರರಂತೆ ಒಡನಿದ್ದು ಸಲಹುವ, ಆಸಕ್ತಿಯಿಂದ ಓದಿಸಿಕೊಳ್ಳುತ್ತಾ ಕುತೂಹಲ ಹೆಚ್ಚಿಸಿ, ಜೀವನೋತ್ಸಾಹವನ್ನು ಇಮ್ಮಡಿಗೊಳಿಸುವ ಪುಸ್ತಕಗಳು ಇಂದೇಕೋ ಬೇಸರ ಮೂಡಿಸಿವೆ. ಒಂಥರದ ಒಬ್ಬಂಟಿತನ ಮೈಮನವನ್ನಾವರಿಸಿ ನನ್ನನ್ನು ಹಣಿದು ಹೈರಾಣಾಗಿಸಿದೆ.
ಕಾರಣ ಗೊತ್ತೆ? ದಿನದ ಒಂದರೆಕ್ಷಣವಾದರೂ ನಿನ್ನ ಮುದ್ದಾದ ಮೊಗವನ್ನ ತೋರಿಸಿ, ಮುಗುಳ್ನಕ್ಕು ಮರೆಯಾಗುತ್ತಿದ್ದವಳು ವಾರವಾದರೂ ದರ್ಶನಭಾಗ್ಯ ನೀಡದೆ ಸತಾಯಿಸುತ್ತಿರುವುದು. ನಿಷ್ಕಲ್ಮಷವಾಗಿ ಜನ್ಮಜನ್ಮದ ನಂಟಿನಂತೆ, ನಿನ್ನ ಹಚ್ಚಿಕೊಂಡು ಪ್ರೀತಿಯೊಲವ ಸುಧೆಯಲ್ಲಿ ಕೊಚ್ಚಿಹೋಗುತ್ತಿರುವ ನನಗೆ, ನಿನ್ನ ವದನ ಕಾಣದೆ ಹೃದಯಕ್ಕೆ ಕಿಚ್ಚು ಬಿದ್ದಂತಾಗಿದೆ. ಕಾರಣ ಹೇಳದೆ ಅದೆಲ್ಲಿಗೆ ತೆರಳಿಬಿಟ್ಟೆ ನೀನು? ಗೊತ್ತಾಗುತ್ತಿಲ್ಲ!
ವಿರಹದುರಿಯ ನೋವ ಸಹಿಸಿದವನೇ ಬಲ್ಲ. ನಲ್ಲೆಯಿಲ್ಲದೆ, ಗೆಳತಿಯ ಕಣ್ಣಂಚಿನ ನೋಟ ಕಾಣಸಿಗದೆ, ದೈವಸನ್ನಿಧಿಯಲ್ಲಿ ಸಿಗುವಂತಹ ಸ್ವರ್ಗ ಸಾಮೀಪ್ಯವಿಲ್ಲದೆ, ನೂರು ನೋವಿಗೆ ಮದ್ದು ನೀಡುವ ಚಿಗುರುಬೆರಳ ಸಾಂತ್ವನ ದೊರೆಯದೆ ಪ್ರೇಮಿಯೊಬ್ಬ ಪರಿತಪಿಸುವ ಪಾಡನ್ನು ವಿವರಿಸಲಾಗುವುದಿಲ್ಲ. ಬೆಳಗಿನಿಂದ ಸಂಜೆಯವರೆಗೆ ಗುರಿತಪ್ಪಿದ ಬಾಣದಂತೆ, ದಿಕ್ಕುತಪ್ಪಿದ ಪಥಿಕನಂತೆ ಅಲೆದಾಡಿ ಬಂದೆ.
ಬೀದಿಯ ಯಾವುದೋ ತಿರುವಿನಲ್ಲಿ ಎಲ್ಲಾದರೂ ನಿನ್ನ ಮಂದಹಾಸಭರಿತ ಮುದ್ದು ಮೊಗ ತೋರಬಹುದೇನೋ ಎಂದು. ಊಹುಂ! ನಿರಾಸೆಯೊಂದನ್ನು ಬಿಟ್ಟು ಏನೂ ದಕ್ಕಲಿಲ್ಲ. ಒಂಚೂರೂ ಸುಳಿವು ಕೊಡದೆ ನೀನು ಬಿರಬಿರನೆ ನಡೆದದ್ದಾದರೂ ಎಲ್ಲಿಗೆ? ಮನದಲ್ಲಿ ಏಳುತಿಹ ನೂರೆಂಟು ಪ್ರಶ್ನೆಗಳಿಗೆ ಉತ್ತರ ದೊರಕುತ್ತಿಲ್ಲ. ಹುಚ್ಚುಕಡಲ ಕಿನಾರೆಯಲ್ಲಿ, ಒಬ್ಬರಿಗೊಬ್ಬರು ಬೆನ್ನಿಗಾನಿಕೊಂಡು, ಮಳಲರಾಶಿಯ ಮೇಲೆ ಹೆಜ್ಜೆಗುರುತುಗಳನ್ನು ಚೆಲ್ಲುತ್ತಾ, ಎಂದಿಗೂ ಅಗಲದ ಆಣೆ-ಪ್ರಮಾಣಗಳನ್ನು ಮಾಡಿದ್ದು ನೆನಪಾಗುತ್ತಿದೆ.
ಹುಣ್ಣಿಮೆಯ ಹಾಲುಚೆಲ್ಲಿದ ಬೆಳದಿಂಗಳ ಬೆಳಕಲ್ಲಿ, ಮಡಿಲಲ್ಲಿ ಮಲಗಿ ಕಪ್ಪು ಬಾನಿನ ತುಂಬ ಹರಡಿಕೊಂಡ ತುಣುಕು ದೀಪಗಳಂಥ ನಕ್ಷತ್ರಗಳ ಎಣಿಸುತ್ತಾ ನೂರು ಜನ್ಮಕ್ಕೂ ನೀನೇ ನನ್ನ ಜೊತೆಗಾರನಾಗಬೇಕು ಎಂದದ್ದೂ ಎದೆಗಿರಿಯುತ್ತಿದೆ. ಇಷ್ಟೆಲ್ಲ ಭರವಸೆಗಳಿಗೆ ಆಸರೆಯಾಗಿ, ಕನಸುಗಳಿಗೆ ಸಾಥ್ ಕೊಟ್ಟು, ನಿರೀಕ್ಷೆಗಳ ಮೈದಡವಿ ಮೌನವಾಗಿ ಮರೆಯಾದ ಅಂತರಂಗದ ಆತ್ಮಸಖೀಯೇ, ಈ ಮುನಿಸು ನ್ಯಾಯವೇ…?
ನನ್ನೆದೆಯಲ್ಲಿ ನವಿರಾಗಿ ಹರಡಿಕೊಂಡ ನಿನ್ನ ನೆನಪುಗಳ ನೆತ್ತಿ ನೇವರಿಸುತ್ತಾ, ನಿದ್ದೆ ಬರದ ರಾತ್ರಿಗಳ ಸುಡುತ್ತಿದ್ದೇನೆ. ಸುಮ್ಮನೆ ಸತಾಯಿಸೋಣವೆಂದು, ನನ್ನ ಅಚಲ ನಂಬಿಕೆಯನ್ನು ನೀನೇನಾದರೂ ಪರೀಕ್ಷಿಸುತ್ತಿದ್ದರೆ ದಯವಿಟ್ಟು ನಿಲ್ಲಿಸು. ಇನ್ನೂ ಸಹಿಸಿಕೊಳ್ಳುವ ತಾಳ್ಮೆ ನನಗಿಲ್ಲ. ನೀ ಬರುವ ದಾರಿಯಲ್ಲಿ ನನ್ನೆರಡು ಕಣ್ಣುಗಳ ಚೆಲ್ಲಿ, ನಿನ್ನ ಮುದ್ದಾದ ಮೊಗವ ಕಣ್ತುಂಬಿಸಿಕೊಳ್ಳಲು ಕಾತರನಾಗಿದ್ದೇನೆ. ಕಾಯಿಸದೆ ಒಳ್ಳೆಯ ಹುಡುಗಿಯಂತೆ ಬಳಿ ಬಂದು ಬಿಡು. ನಿನ್ನೊಲವ ಧಾರೆಯಲಿ ಅನುಗಾಲ ಮೀಯಲು ಹಂಬಲಿಸುತ್ತಿರುವ.
– ನಿನ್ನವನು
ನಾಗೇಶ್.ಜೆ. ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.