ನಮ್ಮೊಳಗೊಬ್ಬ ಧೋನಿ
ನನಗೆ ಮೊದಲು ದೇಶ, ನಂತರ ಹೆತ್ತವರು, ಆಮೇಲೆ ಹೆಂಡತಿ ಮಕ್ಕಳು
Team Udayavani, Jul 2, 2019, 5:00 AM IST
ಕನಸೇ ಇಲ್ಲ ಅಂದರೆ ಬದುಕು ಕತ್ತಲೇ. ಆತ್ಮವಿಶ್ವಾಸ ಇರೋಲ್ಲ, ಗುರಿ ಕಾಣಲ್ಲ.
ಕದಲಿಕೆಗಳು ಇಲ್ಲದ ಜೀವನವೇ ಇಲ್ಲ ಭಯದ ಚಳಿ ಬಿಟ್ಟರೆ ಮಾತ್ರ ಡಿಫರೆಂಟ್ ಆಗಿ ಏನಾದರು ಮಾಡಲು ಸಾಧ್ಯ ಮೈದಾನದಲ್ಲಿ ಆಟದ ಮೂಲಕ ಸ್ಟೇಟ್‌ಮೆಂಟ್ ಕೊಡೋದು ಇಷ್ಟ ನಾನು ವಾಸ್ತವದಲ್ಲಿ ಬದುಕುತ್ತಿದ್ದರೂ, ಕಣ್ಣು ಭವಿಷ್ಯವನ್ನೇ ನೋಡುತ್ತಿರುತ್ತದೆ ಹೊಸದನ್ನು ಕಲಿಯಬೇಕು, ಹೆಳೆಯ ತಪ್ಪುಗಳನ್ನು ಮರೆತೇ ಹೋಗಬೇಕು ನನಗೆ ಏನು ಫಲಿತಾಂಶ ಸಿಗುತ್ತೆ ಅನ್ನೋಕ್ಕಿಂತ, ನನ್ನ ಯೋಚನೆಗಳನ್ನು ಜಾರಿ ಮಾಡುವುದರಲ್ಲಿ ನಂಬಿಕೆ ಹೆಚ್ಚು.
ಧೋನಿ ಮೈದಾನದಲ್ಲಿ ಮಾತ್ರ ಕಾಣೋಲ್ಲ. ನಮ್ಮೊಳಗೂ ಇರ್ತಾನೆ. ತಲೆಯ ಮೇಲಿನ ಆಕಾಶವನ್ನು ನೋಡದ ನಾವು ನಮ್ಮೊಳಗಿನ “ನಮ್ಮನ್ನು ’ನೋಡಿಕೊಂಡರೆ ಧೋನಿ ಕಾಣುತ್ತಾನೆ. ಬದುಕು ಒಂಥರಾ ಕ್ರಿಕೆಟ್ ಪಂದ್ಯ ಇದ್ದಹಾಗೆ. ಆಗಾಗ, ಸಮಸ್ಯೆಗಳಿಗೆ ಬೌಲ್ಡ್ ಆಗಬೇಕು, ಇನ್ನು ಕೆಲವನ್ನು ಸಿಕ್ಸ್ ರ್ ಎತ್ತಬೇಕು. ಬೆನ್ನಟ್ಟಿ ಹೋದ ಆಸೆಗಳು ಕೈಗೂಡದೆ ರನ್ ಔಟ್ ಆಗಬೇಕಾಗುತ್ತದೆ. ಮತ್ತೆ ಕನಸುಗಳನ್ನು ಕಾಣುತ್ತಾ, ಇವತ್ತನ್ನು ಅರಿತು, ನಾಳೆಗೆ ತಂತ್ರಗಳನ್ನು ರೂಪಿಸಿದರೆ ಧೋನಿಯ ರೀತಿ ಯಶಸ್ಸಿನ ಹೆಲಿಕಾಪ್ಟರ್ ಶಾಟ್‌ಗಳನ್ನು ಬಾಳಿನುದ್ದಕ್ಕೂ ಹೊಡೆಯುತ್ತಲೇ ಇರಬಹುದು.
ಎಲ್ಲಿ ಧೋನಿ?
ಕಳೆದ ವರ್ಷದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮೈದಾನದಲ್ಲಿದ್ದ 40ಕ್ಕೂ ಹೆಚ್ಚು ಕ್ಯಾಮರಾಗಳು, ಲಕ್ಷಾಂತರ ಅಭಿಮಾನಿಗಳ ಕಣ್ಣುಗಳು ಹೀಗೆ ಹುಡುಕಾಡ ತೊಡಗಿದವು. ಪಂದ್ಯ ಗೆದ್ದಾಗಿದೆ, ಸಂಭ್ರಮ ಹಂಚಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮೈದಾನ ಬಿರಿಯುವಂತೆ ಕುಣಿದು, ಕುಪ್ಪಳಿಸುತ್ತಿದ್ದಾರೆ. ಅದರೆ ನಾಯಕ ಧೋನಿಯೇ ಇಲ್ಲ. ಸನ್‌ರೈಸಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್ ನಂಥ ಘಟಾನುಘಟಿ ತಂಡಗಳ ಹೆಡೆಮುರಿ ಕಟ್ಟಿ ಪಡೆದ ಗೆಲುವದು. ಇಂಥ ಸುಸಮಯದಲ್ಲಿ ಧೋನಿ ನಾಪತ್ತೆ.
ಧೋನಿ ಇಲ್ಲೇ ಇದ್ರಲ್ಲ ;
ಪಂದ್ಯ ಮುಗಿದ ನಂತರ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧೋನಿ ಇದ್ದರು, ಕೈಗೆ ಕಪ್ ಕೊಟ್ಟರು. ಸಹ ಆಟಗಾರರು ಅದರೊಂದಿಗೆ ನಾನಾ ಭಂಗಿಯಲ್ಲಿ ಫೋಸು ಕೊಟ್ಟರು ಎಲ್ಲರಿಗಿಂತ ಹೆಚ್ಚು ಕುಣಿದಾಡಬೇಕಾದ ನಾಯಕನೇ ಅಲ್ಲಿಂದ ಎಸ್ಕೇಪ್. ಇದ್ದಕ್ಕಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಷ್ಟೂ ಜನರ ಕಣ್ಣುಗಳು ಒಮ್ಮೆಲೇ ತಿರುಗಿದ್ದು ಬೌಂಡರಿ ಲೈನ್ ಕಡೆಗೆ.
ಅಲ್ಲಿದ್ದಾರೆ ಧೋನಿ.
ಬೌಂಡರಿ ಗೆರೆ ಬಳಿ ಕುಳಿತು ಮಗಳು ಜೀವಳ ಜೊತೆ ಆಟವಾಡುತ್ತಿದ್ದಾರೆ. ಸಹ ಆಟಗಾರರ ಸಂಭ್ರಮವನ್ನು ಹರ್ಷಿಸುತ್ತಿದ್ದಾರೆ. ಗೆಲುವನ್ನು ಹೇಗೆ ಸಂಭ್ರಮಿಸಬೇಕು, ಎಷ್ಟು ಸಂಭ್ರಮಿಸಬೇಕು, ಅದು ದಕ್ಕಿದಾಗ ಹೇಗೆಲ್ಲಾ ಇರಬೇಕು ಅನ್ನೋದಕ್ಕೆ ಧೋನಿಯ ಉದಾಹರಣೆ ಆಗಿದ್ದು ಹೀಗೆ. ಧೋನಿ ಯಾವತ್ತೂ ಗೆಲುವನ್ನು ಕಿರೀಟ ಮಾಡಿಕೊಳ್ಳಲಿಲ್ಲ. ತಂಡವನ್ನು ಗೆಲ್ಲಿಸಿದ್ದು ನಾನೇ ಅಂತ ಹೇಳಿಕೊಳ್ಳಲಿಲ್ಲ. ಬದಲಿಗೆ, ಗೆಲುವಿನ ತಂತ್ರವನ್ನು ಹೆಣೆಯುವುದು ಹೇಗೆಂದು ತೋರಿಸಿ ಕೊಟ್ಟರು.
ನಮ್ಮ ನಿಮ್ಮ ಬದುಕೂ ಅದು ಹೀಗೆ ಅಲ್ಲವೇ? ಮೊದಲು ಗೆಲುವಿನ ದಡವನ್ನು ಮಟ್ಟುವ ತವಕ. ಗೆದ್ದ ಮೇಲೆ ಅದನ್ನು ಕಾಪಾಡಿಕೊಳ್ಳುವ ಹೋರಾಟ. ಬಹುತೇಕರು ಫೇಲ್ ಆಗುವುದು ಈ ಎರಡು ಘಟ್ಟದಲ್ಲೇ. ಈ ಧೋನಿ ಮಹಾಶಯ ಈ ಎರಡಲ್ಲೂ ಸೈ ಎನಿಸಿಕೊಂಡಿದ್ದಾರೆ. ಒನ್‌ಡೇ, ಟಿ.20, ಟೆಸ್ಟ್ ಹೀಗೆ ಮೂರೂ ಮಾದರಿಗಳಲ್ಲಿ ಈತನಕ ಕ್ರಿಕೆಟ್ ಪ್ರಪಂಚದ ಯಾವ ನಾಯಕನೂ ಮಾಡದ ಸಾಧನೆ ಮಾಡಿದರೂ ಧೋನಿ, ಧೋನಿಯೇ ಆಗಿ ಉಳಿದಿದ್ದಾರೆ.
ಪಂದ್ಯ ನಡೆಯುವ ಮೊದಲೇ ಅದು ಹೀಗೇ ನಡೆಯಬೇಕು ಊಹಿಸುತ್ತಾರೆ. ತಮ್ಮ ಲೆಕ್ಕಾಚಾರದಂತೆಯೇ ನಡೆಯುವಂತೆ ನೋಡಿಕೊಳ್ಳುತ್ತಾರೆ. ಇದೆಲ್ಲಾ ಹೇಗೆ ಸಾಧ್ಯ ? ಅದೇ ಗೆಲುವಿನ ತಂತ್ರಗಾರಿಕೆ. ಪಂದ್ಯಕ್ಕೂ ಮುನ್ನ ಪಿಚ್‌ನ ವರ್ತನೆ, ಹವಾಮಾನ, ತಂಡದ ಆಟಗಾರರ ಸಾಮರ್ಥ್ಯ ಎಲ್ಲವನ್ನೂ ಲೆಕ್ಕ ಹಾಕಿ, ಎದಾರಾಳಿ ತಂಡದ ಒಬ್ಬೊಬ್ಬ ಆಟಗಾರರ ಪ್ಲಸ್, ಮೈನಸ್‌ಗಳನ್ನು ಗುಣಾಕಾರ ಮಾಡಿ, ಅದಕ್ಕೆ ವಿರುದ್ಧವಾದ ತಂತ್ರ ರಚಿಸುವುದೇ ಧೋನಿ ತಾಕತ್ತು.
ನಾವೆಲ್ಲ ಬದುಕನ್ನು ಸುಮ್ಮನೆ ಜೀವಿಸ್ತಾ ಇರುತ್ತೇವೆ. ಧೋನಿಯ ಆಟದ ತಂತ್ರವನ್ನು ಒಳಗೆ ಬಿಟ್ಟುಕೊಂಡರೆ ಜೀವನ ಸರಾಗ. ಹೇಗೆ ಅನ್ನೋದನ್ನು ನೋಡೋಣ. ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಬಿದ್ದರೆ ಅಥವಾ 15 ಓವರ್ ತನಕ ವಿಕೆಟ್ ಬೀಳದೇ ಇದ್ದರೆ, ಕಡೆಯ ಹತ್ತು ಓವರ್‌ನಲ್ಲಿ ನಾಲ್ಕು ವಿಕೆಟ್ ಕಳೆದು ಕೊಂಡರೆ, ಇಡೀ ತಂಡ 350ರನ್ ಹೊಡೆಸಿಕೊಂಡರೆ…ಹೀಗೆ ಸಂಭವನೀಯ ಅಪಾಯಗಳಿಗೆ ಒಂದೊಂದು ಮದ್ದು ಸಿದ್ಧ ಮಾಡಿ ಕೊಳ್ಳುವುದು ತಂತ್ರಗಾರಿಕೆಯ ಗುಟ್ಟು.
ಬದುಕಿಗೆ ಬೇಕಾಗಿರುವುದು ಇದೇ ಅಲ್ಲವೇ? ವಾಸ್ತವದಲ್ಲಿ ಇದ್ದರೂ, ಭವಿಷ್ಯದ ಯೋಚನೆ ಮಾಡುವುದು. ಇವತ್ತು ಅರ್ಥವಾದ ಮೇಲೆ ನಾಳೆಯನ್ನು ಅರಿಯುವುದು. ಆದರೆ ನಾವು ಇವತ್ತಿಂದು ಇವತ್ತಿಗೆ, ನಾಳೆಯದು ನಾಳೆಗೆ ಅನ್ನೋ ಮನೋಭಾವದಲ್ಲಿದ್ದೇವೆ. ಕೆಲಸ ಸಿಕ್ಕಿ, ತಿಂಗಳ ಪಗಾರ ಬಂದರೆ, ನಾಳೆಯ ಯೋಚನೆ ಏಕೆ ಅಂತೀವಿ. ಇರೋದು ಮೂರು ದಿನ, ಎಂಜಾಯ್ ಮಾಡೋಣ ಅನ್ನೋ ಮನೋಭಾವದಲ್ಲಿ ಬದುಕಿದ್ದರೆ ಧೋನಿ ಕೂಡ ಯಶಸ್ಸಿನ ಶಿಖರಕ್ಕೆ ಏರುತ್ತಿರಲಿಲ್ಲ.
ಸಾಮಾನ್ಯವಾಗಿ ನಾವು ಅಕ್ಕಪಕ್ಕದವರ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮೊಳಗಿನ ನಮ್ಮನ್ನು ನೋಡಿಕೊಳ್ಳುವುದೇ ಇಲ್ಲ. ಮನಸ್ಸಿನ ಮುಂದೆ ಬೆತ್ತಲಾದಾಗ ಮಾತ್ರ ನಮ್ಮ ಪ್ಲಸ್, ಮೈನಸ್ಸುಗಳು ಗೊತ್ತಾಗೋದು. ಐ ನೋ ವಾಟ್ ಐ ಡೋಂಟ್ ನೋ ಅಂತಾರೆ ಧೋನಿ. ಇದು ಅಂತರಂಗವನ್ನು ನೋಡಿಕೊಳ್ಳುವ ಪರಿ. ಇಂಥವರಿಗೆ ಹಾಸ್ಯ ಪ್ರವೃತ್ತಿ ಜಾಸ್ತಿ. ಧೋನಿಗೂ ಅದಿದೆ. ಮೈದಾನದ ಹೊರಗೆ, ಒಳಗೆ ಸದಾ ಸಹಆಟಗಾರರನ್ನು ನಗಿಸ್ತಾನೇ ಇರ್ತಾರೆ. ಹೀಗಾಗಿ, ಒತ್ತಡಗಳು ಮಂಗಮಾಯ.
ಧೋನಿಯ ಯಶಸ್ಸಿನ ಗುಟ್ಟು ಇರೋದು ಯೋಚಿಸಿದ್ದನ್ನು ಜಾರಿ ಮಾಡುವುದರಲ್ಲಿ. ಅದಕ್ಕಾಗಿ ಆಟಗಾರರ ಮನಸುಗಳನ್ನು ಅವರ ಹೆಂಡತಿಯರಿಗಿಂತ ಚೆನ್ನಾಗಿ ಓದಿ ಕೊಂಡಿರುತ್ತಾರೆ. ಅಷ್ಟೂ ಜನರನ್ನು ಗೆಲುವಿನ ಗುರಿಯತ್ತ ನಡೆಸಲು ಬೇಕಾದ ಚಾಣಾಕ್ಯನ ಗುಣ ಅಂದರೆ ಇದೆ. ನೀವು ಗಮನಿಸಿ ; ಧೋನಿ ಈ ತನಕಯಾರ ಮೇಲೂ ಸಿಟ್ಟಾಗಿದ್ದಿಲ್ಲ. ಆರಂಭದ ಮೂರೂ ಜನ ಸೊನ್ನೆ ಸುತ್ತಿದರೂ ಮುಖ ಸಿಂಡಸಿರಿದ್ದಿಲ್ಲ. ಹದಿನೈದು ವರ್ಷದಲ್ಲಿ ಇಂಥ ಘಟನೆ ಆಗಿದ್ದರೂ ಒಂದೋ, ಎರಡೋ.
ಧೋನಿ ಮುಗ್ಗರಿಸಿಲ್ಲವೇ? ಮುಗ್ಗರಿಸಿ ಅದನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡಿದ್ದಾರೆ. “ ಈ ಸಲದ ನನ್ನ ತಂತ್ರಗಾರಿಕೆ ಅಷ್ಟಾಗಿ ನಡೆಯಲಿಲ್ಲ’ ಅಂತ ಮೊನ್ನೆ ಐಪಿಎಲ್ ಸಂದರ್ಭದಲ್ಲಿ ಹೇಳಿಕೊಂಡಿದ್ದು ಇದೇ ಧೋನಿ. ಮಿಡ್ನಾಪುರದ ರೈಲ್ವೇಸ್ಟೇಷನ್ನಿನಲ್ಲಿ ಟಿಟಿಇ ಆಗಿದ್ದಾಗ, ದುಲೀಪ್ ಟ್ರೋಫಿಗೆ ಈಸ್ಟ್ ಜೋನ್‌ನಿಂದ ಸೆಲೆಕ್ಟ್ ಆಗಿದ್ದರು. ದುರಂತ ಎಂದರೆ, ಈ ವಿಚಾರ ಬಿಹಾರ್ ಕ್ರಿಕೆಟ್ ಮಂಡಳಿ ಧೋನಿಗೆ ತಿಳಿಸೇ ಇರಲಿಲ್ಲ. ರೈಲ್ವೇ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಧೋನಿಗೆ ಹೇಗೋ ತಿಳಿದು, ಗೆಳೆಯನ ನೆರವಿನಿಂದ ಕಾರಲ್ಲಿ ಕೊಲ್ಕತ್ತಾ ಏರ್‌ಪೋರ್ಟ್‌ಗೆ ಹೋಗುತ್ತಿದ್ದಾಗ ಆ ಕಾರು ಕೆಟ್ಟು , ಕೊನೆಗೆ ತಂಡ ಸೇರಿಕೊಳ್ಳುವ ಹೊತ್ತಿಗೆ ದೀಪ್‌ದಾಸ್‌ಗುಪ್ತಾ ವಿಕೇಟ್ ಕೀಪಿಂಗ್ ಮಾಡುತ್ತಿದ್ದ. ಧೋನಿ ಪ್ರಿಯಾಂಕ ಝಾಳನ್ನು ಪ್ರೀತಿಸುತ್ತಿದ್ದ. ಭಾರತ ಎ ತಂಡದ ಪರವಾಗಿ ಆಡುತ್ತಿರುವಾಗಲೇ ಆಕೆ ಅಪಘಾತದಲ್ಲಿ ಅಸುನೀಗಿದಾಗ, ನಮ್ಮ ನಿಮ್ಮಂತೆ ಧೋನಿ ಡಿಪ್ರಸ್ ಆಗಿ, ನಿಧಾನಕ್ಕೆ ತನ್ನನ್ನು ತಾನು ನೋಡಿಕೊಳ್ಳುತ್ತಲೇ ಆಟದಲ್ಲಿ ಲಯ ಕಂಡು ಕೊಂಡರು.
ಇವೆಲ್ಲ ಬಿಡಿ, ತನ್ನ ಆದಾಯ ವರ್ಷಕ್ಕೆ 180 ಕೋಟಿ ಇದ್ದಾಗಲೂ ಧೋನಿಯ ತಲೆಯನ್ನು ಕುತ್ತಿಗೆ ಮೇಲೆಯೇ ಇಟ್ಟುಕೊಂಡಿದ್ದರು. ಈಗಲೂ ಆತನ ವಾರ್ಷಿಕ ಆದಾಯ 100 ಕೋಟಿ ಇದೆ. ಆದರೂ, ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಮಲಗೋದು, ವಿಮಾನ ಬಿಟ್ಟು, ರೈಲಲ್ಲಿ ಸಹ ಆಟಗಾರರ ಜೊತೆ ಪ್ರಯಾಣ ಮಾಡುವ ಮನೋಸ್ಥಿತಿ ಇದೆಯಲ್ಲ, ಇವೆಲ್ಲ ಧೋನಿ ಉಳಿಸಿಕೊಂಡ ಸಂಸ್ಕಾರದ ಬೇರುಗಳು.
ಧೋನಿ ಯಾವ ಸ್ಟಾರ್ ಆಟಗಾರರನ್ನೂ ಅನುಕರಿಸಲಿಲ್ಲ. ಬದಲಿಗೆ, ತನ್ನನ್ನು ಇತರರು ಅನುಕರಿಸುವಂತೆ ಮಾಡಿಕೊಂಡರು. ಈತ ಎಲಿಕಾಪ್ಟರ್ ಶಾಟ್ ಕಲಿತದ್ದು ಗೆಳೆಯನಿಂದ, ಕೂದಲು ಇಳೆ ಬಿಟ್ಟು ಎಲ್ಲರೂ ತನ್ನನ್ನು ನೋಡುವಂತೆ ಮಾಡಿದ್ದು ಜಗತ್ತಿನ ಐಡೆಂಟಿಟಿಗೆ. ಇದೇ ಧೋನಿ ತಂತ್ರ.
ನಮಗೆಲ್ಲಾ ಒಂದಷ್ಟು ದುಡ್ಡು ಓಡಾಡಿದರೆ, ಅಂಕಪಟ್ಟಿಯಲ್ಲಿ ಮಾರ್ಕು ಹೆಚ್ಚಾದರೆ ತಲೇನೇ ನಿಲ್ಲೊಲ್ಲ. ಜವಾಬ್ದಾರಿ ಸಿಕ್ಕಿ ಜೇಬು ತುಂಬುವಷ್ಟು ಸಂಬಳ ಬಂದರೆ ಇಲ್ಲದ ಶೋಕಿ ಬಂದು ಬಿಡುತ್ತೆ. ಕಾರು, ಮನೆ, ಬಂಗ್ಲೆಯ ಕನಸುಗಳು ಬೀಳ ತೊಡಗುತ್ತೆ . ಅದರ ಹಿಂದೆ ಬಿದ್ದು, ಸಾಲ ಸೋಲ ಮಾಡಿಯಾದರೂ ನನಸು ಮಾಡಿಕೊಳ್ಳುತ್ತೇವೆ. ಧೋನಿಗೆ ಕೋಟಿ ಕೋಟಿ ದುಡ್ಡಿದ್ದರೂ ಇವತ್ತಿಗೂ ಊರಿಗೆ ಹೋದರೆ ಬುಲೆಟ್‌ನಲ್ಲೇ ಓಡಾಡೋದು. ಎಷ್ಟೇ ಎತ್ತರದಲ್ಲಿದ್ದರೂ ತನ್ನ ನೋಡಲು ಬಂದ ಅಭಿಮಾನಿಗಳಿಗೆ ನಿರಾಸೆ ಮಾಡದ ಮನೋಸ್ಥಿತಿ ಇದೆಯಲ್ಲ ಇದು ಎಲ್ಲರೊಳಗೊಂದಾಗೋ ಮಂಕುತ್ತಿಮ್ಮ ಅನ್ನೋದು. ಯಶಸ್ಸನ್ನು ಜೇಬಿನ ಬಳಿ ಬಿಟ್ಟುಕೊಳ್ಳಬೇಕೇ ಹೊರತು, ಹೃದಯಕ್ಕಾಗಲಿ ತಲೆಗಾಗಲಿ ತೆಗೆದುಕೊಳ್ಳಬಾರದು ಅನ್ನೋದು ಧೋನಿ ಪಾಲಿಸಿ.
ಗುರಿ ಇಟ್ಟುಕೊಳ್ಳೋದು ದೊಡ್ಡದಲ್ಲ. ಆದರೆ, ಪೂರಕವಾಗಿ ಬೇಕಾದ ಜ್ಞಾನ, ಚಾಕಚಕ್ಯತೆ, ಹುಡಕಾಟ ಮಾಡುವುದೇ ಧೋನಿಯ ಗುಣ. ಅದನ್ನು ನಾವು ಅಳವಡಿಸಿಕೊಂಡರೆ ಬದುಕಲ್ಲಿ ಎದುರಾಳಿಗಳಂತೆ ಬರುವ ಎಂಥದೇ ಪರಿಸ್ಥಿತಿಯನ್ನು ಸಿಕ್ಸರ್ ನಂತೆ ಭಾರಿಸಿ ನಿಭಾಯಿಸಬಹುದು. ಧೋನಿ ಬದುಕೂ ಇದನ್ನೇ ಹೇಳ್ಳೋದು. ಧೋನಿ ಮೈದಾನದಲ್ಲಿ ಮಾತ್ರ ಕಾಣೋಲ್ಲ. ನಮ್ಮೊಳಗೂ ಇರ್ತಾನೆ. ತಲೆಯ ಮೇಲಿನ ಆಕಾಶವನ್ನು ನೋಡದ ನಾವು ನಮ್ಮೊಳಗಿನ “ನಮ್ಮನ್ನು ’ನೋಡಿಕೊಂಡರೆ ಧೋನಿ ಕಾಣುತ್ತಾನೆ.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.