ಮೋಹದ ಬಲೆ ಬೀಸುವುದನ್ನು ಅದೆಲ್ಲಿ ಕಲಿತೆ?
Team Udayavani, Jul 11, 2017, 6:08 PM IST
ಏನೇ ಹುಡುಗಿ, ನನ್ನನ್ನು ಕಾಡಿಸುವುದೆಂದರೆ ನಿನಗೆ ಅಷ್ಟೊಂದು ಖುಷೀನಾ? ಒಮ್ಮೆ ಕಣ್ಣೆದುರು ಬರುವೆ; ಥಟ್ಟನೆ ಮಾಯವಾಗುವೆ. ಯಾರು ಹೇಳಿಕೊಟ್ಟರು ನಿನಗೆ ಮರೀಚಿಕೆಯ ಮಂತ್ರವನ್ನು? ನಿನ್ನ ಗುಂಗಲ್ಲಿ ಬಿದ್ದು ನಾ ಪೂರ್ತಿ ಹಾಳಾಗಿದ್ದೇನೆ. ಎಲ್ಲರ ಜೊತೆ ಇರುತ್ತಿದ್ದ ನಾನು ಈಗೀಗ ಹಿಂಡನ್ನಗಲಿದ ಪಕ್ಷಿಯಂತಾಗಿಬಿಟ್ಟಿದ್ದೇನೆ. ಒಬ್ಬೊಬ್ಬನೇ ನಗುವೆ. ಮನಸ್ಸಿಗೆ ಬಂದ ಹಾಗೆ ಹಾಡುವೆ. ಮನಸ್ಸಿಗೆ ಬಂದ ಹಾಗೆ ಕುಣಿಯುವೆ. ನನಗೆ ಏನಾಗಿದೆಯೋ ನನಗೇ ಗೊತ್ತಿಲ್ಲ!
ಏನು ನಿನ್ನ ಕಣ್ಸನ್ನೆಯ ಕಪಟ ನೋಟ. ಬೇಲೂರು ಶಿಲಾಬಾಲಿಕೆಯನ್ನು ಬೆರಗುಗೊಳಿಸುವಂಥ ಆ ನಿನ್ನ ಮೈಮಾಟ. ಇದರಿಂದ ನಾ ಭಾವಪರವಶನಾಗಿರುವೆ. ಏ ಹುಡುಗಿ, ಪ್ರೀತಿ ಎಂದರೇನೆಂದೇ ನನಗೆ ಗೊತ್ತಿರಲಿಲ್ಲ. ನಿನ್ನ ನೋಡಿದ ದಿನದಿಂದಲೇ ನಿನ್ನನ್ನು ಪ್ರೀತಿಸಬೇಕು ಅನಿಸುತ್ತಿದೆ. ನಿನಗೆ ಯಾರು ಹೇಳಿ ಕೊಟ್ಟರು ಪ್ರೀತಿಯ ಬಲೆ ಬೀಸಲು? ನನ್ನ ಜೀವನ ಧಾರಾವಾಹಿಯ ನಾಯಕಿ ನೀನಾಗಬೇಕೆಂಬುದು ನನ್ನ ಆಸೆ. ಈ ಆಸೆಯನ್ನು ಈಡೇರಿಸುವೆಯಾ? ನನ್ನ ಮನದಾಳದ ಬಯಕೆಯನ್ನು ನಿನ್ನಲ್ಲಿ ಹೇಳುವ ಆಸೆ. ಆದರೆ ನಿನ್ನ ಎದುರು ನಿಂತು ಮಾತನಾಡಲು ಧೈರ್ಯ ಸಾಲದು. ಎಲ್ಲ ಹುಡುಗಿಯರಂತೆ ನೀನಲ್ಲ ಗೆಳತಿ. ನಿನ್ನಲ್ಲಿ ಏನೋ ವಿಶೇಷತೆ ಇದೆ.
ಸಾವಿರ ಹುಡುಗಿಯರ ನಡುವೆ ಇದ್ದರೂ ನೀನು ನನ್ನ ಕಣ್ಣಿಗೆ ಚಂದ್ರನಂತೆ ಹೊಳೆಯುವೆ. ಇತರರ ಹಾಗೆ ಅದ್ಧೂರಿಯಾದ ಆಡಂಬರದ ಪ್ರೀತಿ ನನದಲ್ಲ. ಆದರೆ ನಿನ್ನನ್ನು ನನ್ನ ಹೃದಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ್ದೇನೆ. ಇಷ್ಟು ಮಾತ್ರ ನಾ ಹೇಳಬಲ್ಲೆ.
ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಂಡು ಎಂದಾದರೂ ಹೇಳಲು ಬಾ. ನಾ ನಿನ್ನ ಪ್ರೀತಿಗಾಗಿ ಕಾಯುತ್ತಿರುವೆ. ನನ್ನ ಕೊನೆಯ ಉಸಿರಿರುವರೆಗೂ…
– ಗಿರೀಶ ಜಿ. ಆರ್., ಶಿವಮೊಗ್ಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.