ಕುಳಿತ ಜಾಗದಲ್ಲೇ ಯೋಗ ಮಾಡಿ!
Team Udayavani, May 12, 2020, 5:43 AM IST
ಸಾಂದರ್ಭಿಕ ಚಿತ್ರ
ವರ್ಕ್ ಫ್ರಂ ಹೋಮ್ ಆಗಿ ಕೆಲಸ ಮಾಡುವಾಗ, ಕುಂತಲ್ಲೇ ಕೂರಬೇಕು. ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೂತರೆ, ಜಗವೇ ಮರೆತುಹೋಗುತ್ತದೆ. ಸೋಫಾಗಳು,
ಮಂಚದ ಮೇಲೆ ಕುಳಿತು ಕೆಲಸ ಮಾಡಬಹುದಾದರೂ, ಅದು ಟೇಬಲ್ ಮುಂದೆ ಕೂತಷ್ಟು ಆರಾಮ್ ಅನಿಸೋಲ್ಲ. ಆದರೆ, ತುಂಬಾ ಹೊತ್ತು ಒಂದೇ ಭಂಗಿಯಲ್ಲಿ ಕೂರುವುದರಿಂದಲೂ ತೊಂದರೆಯಿದೆ. ಹೀಗಾಗಿ, ಚೇರ್‌ನಲ್ಲಿ ಕುಳಿತಿದ್ದೇ ಯೋಗಗಳನ್ನು ಮಾಡಬಹುದು. ಅದು ಹೀಗೆ- ನೀವು ಲ್ಯಾಪ್‌ಟಾಪ್ ಇಟ್ಟುಕೊಳ್ಳುವ ಚೇರು, ಟೇಬಲ್‌ನ ಅಂತರ ಸರಿಯಾಗಿರಲಿ.
ಟೇಬಲ್ ಮೇಲೆ ಲ್ಯಾಪ್‌ಟಾಪ್ ಇರಲಿ. ಹೀಗೆ ಇಟ್ಟುಕೊಂಡು ಟೈಪ್ ಮಾಡುವಾಗ, ಎರಡೂ ಕೈಗಳಲ್ಲಿ ರಕ್ತಸಂಚಾರ ಕೆಳಮುಖವಾಗಿರುತ್ತದೆ. ಇದು ಮೇಲ್ಮುಖವಾದರೆ ಜೋಮು ಬರಬಹುದು. ಗಂಟೆಗೊಮ್ಮೆ ಎದ್ದು ಓಡಾಡಿ. ಆಗ, ಸೊಂಟದ ಸುತ್ತಮುತ್ತಲಿನ ಪ್ರದೇಶದಲ್ಲಿ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಜೊತೆಗೆ, ಚೇರಿನ ಮೇಲೆ ಕೂತೇ, ಎರಡೂ ಕೈಗಳನ್ನು ಮಂಡಿಯ ತನಕ ಚಾಚಿ, ಕತ್ತನ್ನು ಬಗ್ಗಿಸಿ. ಹೀಗೆ ಮಾಡಿದರೆ, ಕುತ್ತಿಗೆ ಸುತ್ತಮುತ್ತಲ ಪ್ರದೇಶದಲ್ಲಿ ರಕ್ತಸಂಚಾರ ಸುಗಮವಾಗುತ್ತದೆ. ಬಹಳ ಹೊತ್ತು ಕೂತೇ ಕೆಲಸ ಮಾಡಿದರೆ, ಸೊಂಟ ಹಿಡಿದುಕೊಂಡಂತೆ ಆಗುತ್ತದೆ. ಆಗ, ಚೇರಿಂದ ಮೇಲೆದ್ದು, ಎರಡೂ ಕೈಯನ್ನು ಮುಂದಕ್ಕೆ ಚಾಚಿ, ಎರಡೂ ಕೈಗಳ ಮಧ್ಯೆ ಮುಖ ಭೂಮಿ ನೋಡುವ ಹಾಗೆ ಬಾಗಿ. ಈ ಸಂದರ್ಭದಲ್ಲಿ ಕಾಲು ನೇರವಾಗಿರಬೇಕು. ಹೀಗೆ, ನಾಲ್ಕು ಸಲ ಮಾಡಿದರೆ, ಸೊಂಟದ ಸುತ್ತಲಿನ ನೋವು ಇಳಿಯುತ್ತದೆ. ತೊಡೆಯಲ್ಲಿ ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ. ಇದೆಲ್ಲ ಸೊಂಟದ ವಿಷ್ಯ ಆಯ್ತು. ಮಂಡಿ, ಕಾಲು, ಮಾಂಸ ಖಂಡಗಳ ನೋವಿಗೆ ಏನು ಮಾಡು ವುದು, ಅಂದಿರಾ? ಅದಕ್ಕೂ ಇಲ್ಲಿ ಪರಿಹಾರವಿದೆ. ಟೇಬಲ್‌ನಿಂದ ಸ್ವಲ್ಪ ದೂರಕ್ಕೆ ಚೇರನ್ನು ಎಳೆದುಕೊಂಡು, ಅದರಲ್ಲೇ ಕೂತು ಎರಡು ಕಾಲುಗಳನ್ನೂ ನೇರಕ್ಕೆ ಎತ್ತಿ. ಬಲಗಾಲನ್ನು ಮೊದಲು ಎತ್ತಿ, ಎಡಗಾಲನ್ನು ಆಮೇಲೆ. ಹೀಗೆ, ಐದಾರು ಸಲ ಮಾಡಿದರೆ, ಮಂಡಿ ಗಟ್ಟಿಯಾಗುತ್ತಾ ಹೋಗುತ್ತದೆ. ಕೀಲು ನೋವು ಕಡಿಮೆಯಾಗು ತ್ತದೆ.
ಲ್ಯಾಟ್‌ಟಾಪ್, ಕಂಪ್ಯೂಟರ್ ಪರದೆಯನ್ನು ತದೇಕ ಚಿತ್ತದಿಂದ ನೋಡುವುದರಿಂದ, ಕಣ್ಣಿನ ಸಮಸ್ಯೆ ಆಗಬಹುದು. ಹಾಗಾಗಿ, 15-20 ನಿಮಿಷಕ್ಕೊಮ್ಮೆ, ಕಣ್ಣುಗಳನ್ನು ಆ ಕಡೆ ಈ ಕಡೆ
ಹೊರಳಿಸಿ. ಅರ್ಧಗಂಟೆಗೆ ಒಂದು ಬಾರಿ ಹಾಗೇ ಚೇರಿಗೆ ಒರಗಿ, ಮೂರು ನಿಮಿಷಗಳ ಕಾಲ ಕಣ್ಣುಮುಚ್ಚಿ. ಮನೆಯಲ್ಲಿ ಸೌತೇಕಾಯಿ ಇದ್ದರೆ, ಒಂದು ಚೂರನ್ನು ಕಣ್ಣ ಮೇಲೆ ಮೂರು
ನಿಮಿಷ ಇಟ್ಟುಕೊಳ್ಳಿ. ಕಣ್ಣು ತಂಪಾಗುತ್ತದೆ. ಹೊಸ ಚೈತನ್ಯ ಬರುತ್ತದೆ.