ಬಿಳಿ ಚೂಡಿದಾರ್ ಕಲರ್ ದುಪ್ಪಟ್ಟಾ
Team Udayavani, Feb 7, 2017, 3:45 AM IST
ಏನಾಯಿತು ಎಂದು ತಿಳಿಯುವ ಮೊದಲೇ ನಾನು ನೆಲಕ್ಕೆ ಉರುಳಿದ್ದೆ, ಸೈಕಲ್ ನನ್ನ ಮೇಲಿತ್ತು, ಎದುರಿನಿಂದ ಕೆಂಪು ಬಸ್ಸು ನನ್ನತ್ತ ಮುನ್ನುಗ್ಗುತ್ತಿತ್ತು. ಹೆದರಿ ಕಣ್ಮುಚ್ಚಿದ್ದು ಒಂದೇ ಕ್ಷಣ. ಅಷ್ಟರಲ್ಲಿ ಬ್ರೇಕಿನ ಜೋರಾದ ಕರ್ಕಶ ಸದ್ದಿನೊಂದಿಗೆ ನನ್ನಿಂದ ಕೇವಲ ಒಂದು ಇಂಚು ದೂರದಲ್ಲಿ ಬಸ್ಸು ನಿಂತಿತ್ತು.
ತೊಂಬತ್ತರ ದಶಕ ಆರಂಭವಾಗಿತ್ತು, ಆಗಿನ್ನೂ ಕಾಲೇಜಿಗೆ ಕಾಲಿಟ್ಟಿದ್ದೆವು. ಅಲ್ಲಿಯವರೆಗೆ ಬರೀ ಹೆಣ್ಣುಮಕ್ಕಳ ಶಾಲೆಯಲ್ಲಿ ಓದಿದ್ದ ನಮಗೆ ಅದೊಂದು ಕಂಡರಿಯದ, ಆದರೆ ಕೇಳಿ ಸಾಕಷ್ಟು ಅರಿತ ಹೊಸ ಪ್ರಪಂಚವೇ ಸರಿ. ಹದಿಹರೆಯದಲ್ಲಿದ್ದ ನಮಗೆ ಚೆಂದ ಕಾಣಬೇಕು ಎಂಬ ಬಯಕೆ ಇದ್ದದ್ದು ಸಹಜವೇ. ಅದಕ್ಕೆ ಸರಿಯಾಗಿ ಬಿಳಿ ಶರ್ಟ್ ಮತ್ತು ನೀಲಿ ಸ್ಕರ್ಟಿನ ಶಾಲಾ ದಿನಗಳು ಮುಗಿದಿದ್ದವು.
ಕಾಲೇಜು ಎಂದರೆ ಕಲರ್ ಡ್ರೆಸ್ಸು ಎಂಬುದು ನಮಗೆಲ್ಲಾ ಮಹಾ ಆಕರ್ಷಣೆಯ ವಿಷಯವಾಗಿತ್ತು. ಹಾಗಂತ ಕೆಲ ದಿನಗಳಲ್ಲಿಯೇ ಈ ಕಲರ್ ಡ್ರೆಸ್ಸಿನ ಕಷ್ಟವೂ ಅರಿವಾಗಿತ್ತು.
ಶಾಲೆಗಾದರೆ ದಿನವೂ, ಎಲ್ಲರೂ ಒಂದೇ ರೀತಿಯ ಯೂನಿಫಾರ್ಮ್. ಯಾರನ್ನೂ ಏನು ಧರಿಸಿದ್ದಾರೆ ಎಂದು ನೋಡುವ ಗೋಜಿಲ್ಲ. ಅದೇ ಕಾಲೇಜಿಗೆ ಬಂದಾಗ ಅದು ಚೆನ್ನಾಗಿದೆ ಇದು ಚೆನ್ನಾಗಿಲ್ಲ ಎಂಬ ಟೀಕೆ ಟಿಪ್ಪಣಿಗಳು. ಕಾಲೇಜಿನಲ್ಲಿ ಇದ್ದ ಸಿರಿವಂತರ ಮಕ್ಕಳು ಬಣ್ಣಬಣ್ಣದ ಬಟ್ಟೆ ತೊಟ್ಟು ಬಂದಾಗ ತುಂಬಾ ಚೆನ್ನಾಗಿದೆ ಎಂಬ ಮೆಚ್ಚುಗೆಯ ಉದ್ಗಾರ. ಎಲ್ಲಿ ಕೊಂಡಿದ್ದು? ಎಷ್ಟು ದರ? ಎಂಬ ವಿಚಾರಣೆ ನಡೆಸಿ ನಮ್ಮ ಬಜೆಟ್‌ನಲ್ಲಿ ಇದೆಯೇ ಎಂದು ಪರಾಮರ್ಶೆ ನಡೆಸುತ್ತಿದ್ದೆವು. ಬೆಲೆ ಕಡಿಮೆಯಿದ್ದರೆ ಯುಗಾದಿ ಅಥವಾ ದೀಪಾವಳಿಗೆ ಅದನ್ನು ತೆಗೆದುಕೊಳ್ಳುವ ಪ್ಲಾನು ಆಗಲೇ ಮನಸ್ಸಿನಲ್ಲಿ ಸಿದ್ಧವಾಗಿರುತ್ತಿತ್ತು.
ಮಧ್ಯಮ ವರ್ಗದವರಾಗಿದ್ದ ನಮಗೆ ಹಾಕಲು ಬಟ್ಟೆ ಇದ್ದರೂ ಈಗಿನ ಮಕ್ಕಳಂತೆ ತೊಟ್ಟ ಬಟ್ಟೆ ಮತ್ತೆ ತೊಡೆನು ಎನ್ನುವುದು ಕನಸಿನಲ್ಲೂ ಅಸಾಧ್ಯವಾಗಿತ್ತು. ಮನೆಯವರಿಗೂ ಬೇಕು ಬೇಕೆಂದಾಗ ಬಟ್ಟೆ ಕೊಡಿಸುವುದು ರೂಢಿಯಲ್ಲೇ ಇರಲಿಲ್ಲ. ಬೆಳೆಯುವ ಮಕ್ಕಳ ಬಟ್ಟೆ ಮೇಲೆ ದುಡ್ಡು ಹಾಕುವುದು ವ್ಯರ್ಥ ಎಂಬುದು ಅಂದಿನವರ ದೃಢ ನಂಬಿಕೆಯಾಗಿತ್ತು. ಹೀಗಾಗಿ ಇದ್ದ ಆರೇಳು ಜತೆ ಬಟ್ಟೆಗಳನ್ನೇ ಹಾಕಿಕೊಂಡು ಹೋಗುತ್ತಿದ್ದೆವು.
ಹಬ್ಬ ಬಂದಾಗ ಮಾತ್ರ ಹೊಸ ಬಟ್ಟೆಯ ಸಂಭ್ರಮ. ಕಡಿಮೆ ಇದ್ದಿದ್ದರಿಂದಲೋ ಏನೋ ಪ್ರತೀ ಬಾರಿ ಬಟ್ಟೆ ಖರೀದಿಸಿದಾಗಲೆಲ್ಲಾ ಜಗತ್ತನ್ನೇ ಗೆದ್ದ ಸಡಗರ. ಹಬ್ಬಕ್ಕೆ ತಿಂಗಳ ಮುಂಚೆಯೇ ಏನು ತೆಗೆದುಕೊಳ್ಳಬಹುದು ಎಂಬ ಸವಿಕಲ್ಪನೆಯಲ್ಲಿ ಮನಸ್ಸು ತೇಲಾಡುತ್ತಿತ್ತು.
ನಮ್ಮ ಕಾಲೇಜಿನ ದಿನಗಳಲ್ಲಿ ಶ್ರೀದೇವಿಯ “ಚಾಂದನಿ’ ಸಿನಿಮಾ ಅತ್ಯಂತ ಜನಪ್ರಿಯವಾಗಿತ್ತು. ಬಂದು ವರ್ಷವಾಗಿದ್ದರೂ ಸಿನಿಮಾದಲ್ಲಿ ಆಕೆ ಧರಿಸಿದ್ದ ತೆಳು ಶಿಫಾನ್ ಸೀರೆ ಮಹಿಳೆಯರ, ಹಾಗೂ ಬಿಳಿ ಚೂಡಿದಾರ್ ಮತ್ತು ಬಣ್ಣದ ದುಪಟ್ಟಾ ಹುಡುಗಿಯರ ಮೆಚ್ಚಿನ ಉಡುಪಾಗಿತ್ತು. ಬಿಳಿ ಬಣ್ಣವೆಂದರೆ ಬಹಳ ಇಷ್ಟಪಡುವ ನನಗೂ ಅದು ಬಹಳ ಆಕರ್ಷಕವೆನಿಸಿತ್ತು.
ಸರಿ, ಆ ಸಲ ಯುಗಾದಿ ಹಬ್ಬಕ್ಕೆ ಮೊದಲೇ ಬಿಳಿ ಚೂಡಿದಾರ್ ಮತ್ತು ಹಸಿರು, ಕೆಂಪು, ನೀಲಿ ಬಣ್ಣಗಳ ದುಪಟ್ಟಾ ಸ್ವಲ್ಪ ದುಬಾರಿಯಾದರೂ ತೆಗೆದುಕೊಂಡಿದ್ದೆ. ಅಚ್ಚ ಬಿಳಿ ಬಣ್ಣ, ಮೃದುವಾದ ಅದನ್ನು ನೋಡಲು ನನಗಂತೂ ಎರಡು ಕಣ್ಣು ಸಾಲದಾದರೆ ಮುಟ್ಟಲು ಇನ್ನೂ ಎರಡು ಕೈಗಳು ಬೇಕಿತ್ತು. ಅದನ್ನು ಹಾಕುವ ತನಕ ಪುರುಸೊತ್ತಿಲ್ಲ. ಹಬ್ಬಕ್ಕೆ ಮನೆಯಲ್ಲಿ ಪೂಜೆಗೆ ಹಾಕಿದರೆ ಸಾಕೇ? ಕಾಲೇಜಿನವರು ಎಲ್ಲಾ ನೋಡಬೇಡವೇ? “
ಅಂತೂ ಹಬ್ಬ ಮುಗಿದ ನಂತರ ವಾರದ ಮೊದಲ ದಿನವೇ ಸಾಲಂಕೃತಳಾಗಿ ಕಾಲೇಜಿಗೆ ನನ್ನ ಸವಾರಿ, ಸೈಕಲ್ಲಿನಲ್ಲಿ! ಹೊಸಾ ಚೂಡಿದಾರವಂತೂ ಹಾಕಿದ್ದು ಆಯ್ತು. ಅದು ಮ್ಯಾಚಿಂಗ್ ಜಮಾನಾ. ಹಾಗಾಗಿ ದುಪ್ಪಟ್ಟಾಕ್ಕೆ ಮ್ಯಾಚಿಂಗ್ ಆಗಲೆಂದು ಕೈ ತುಂಬಾ ಅಲ್ಲ ತೋಳು ಜಗ್ಗಿ ಬೀಳುವಷ್ಟು ಬಣ್ಣ ಬಣ್ಣದ ಗಾಜಿನ ಬಳೆಗಳು ಝಣಗುಡುತ್ತಿತ್ತು. ಡಿಸ್ಕೋ ರಬ್ಬರ್‌ಬ್ಯಾಂಡ್ ಹಾಕಿದ ಎರಡು ಉದ್ದ ಜಡೆ ತೂಗಾಡಿಸುತ್ತಾ, ಕಿವಿಗೊಂದು ರಿಂಗ್ ಹಾಕಿ, ಮುಖಕ್ಕೆ ಹಗುರಾಗಿ ಪೌಡರ್ ಬಳಿದು ಸೈಕಲ್ ಏರಿ ಟ್ರಿಣ… ಎಂದು ಬೆಲ್ ಬಾರಿಸುತ್ತಾ ಹೋಗುತ್ತಿದ್ದರೆ, ನಾನೇ ನಮ್ಮೂರ ಚಾಂದನಿ ಎನ್ನಿಸಿದ್ದು ಸಹಜವೇ.
ಮನೆಯಿಂದ ಕಾಲೇಜಿಗೆ ಸುಮಾರು ಮೂರು ಮೈಲಿ ದೂರ. ದಿನವೂ ಗೆಳತಿಯರೆಲ್ಲಾ ಒಟ್ಟಾಗಿ ಸೈಕಲ್ ತುಳಿಯುತ್ತಾ ಕಾಲೇಜಿಗೆ ಹೋಗುವುದು ನಮ್ಮ ದಿನಚರಿ. ಆ ದಿನ ನನ್ನ ಅಲಂಕಾರಕ್ಕೆ ಎಲ್ಲಾ ಗೆಳತಿಯರ ಭರಪೂರ ಪ್ರಶಂಸೆ ಸಿಕ್ಕು ಆ ಡ್ರೆಸ್ ಕೊಂಡಿದ್ದಕ್ಕೂ ಸಾರ್ಥಕ ಅನ್ನಿಸಿ, ಸೈಕಲ್ ನೆಲದ ಮೇಲಿದ್ದರೂ ನಾನು ಮೇಲೆ ಹಾರಾಡುತ್ತಿದ್ದೆ. ಕೆಂಪು ಸೈಕಲ್ಲಿನ ಮೇಲೆ ಬಿಳಿ ಚೂಡಿದಾರ್ ಧರಿಸಿದ್ದ ನಾನು ಸೈಕಲ್ಲೇರಿ ಬರುತ್ತಿದ್ದಂತೆ ಗಾಳಿಗೆ ವಿಜಯ ಪತಾಕೆಯಂತೆ ಹಾರಾಡುತ್ತಿದ್ದ ಬಣ್ಣದ ದುಪ್ಪಟ್ಟಾ ಇವುಗಳಿಂದ ದೇವತೆಯಂತೆ ಕಾಣುತ್ತಿದ್ದೇನೆ ಎಂದು ಕವಿ ಹೃದಯದ ಆಪ್ತಗೆಳತಿ ವರ್ಣಿಸಿದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು.
ಇದೇ ಖುಷಿಯಲ್ಲಿ ಸಣ್ಣ ಬೀದಿಯಿಂದ ದಾಟಿ ಮುಖ್ಯ ರಸ್ತೆ ದಾಟುವಾಗ ಗಮನ ಎಲ್ಲೋ ಇತ್ತು. ಇದ್ದಕ್ಕಿದ್ದಂತೆ ಕಣ್ಮುಂದೆ ದುತ್ತನೆ ಎದುರಾಗಿದ್ದು ದೈತ್ಯಾಕಾರದ ಕೆಂಪು ಬಸ್ಸು!
ಏನಾಯಿತು ಎಂದು ತಿಳಿಯುವ ಮೊದಲೇ ನಾನು ನೆಲಕ್ಕೆ ಉರುಳಿದ್ದೆ, ಸೈಕಲ್ ನನ್ನ ಮೇಲಿತ್ತು, ಎದುರಿನಿಂದ ಕೆಂಪು ಬಸ್ಸು ನನ್ನತ್ತ ಮುನ್ನುಗುತ್ತಿತ್ತು. ಹೆದರಿ ಕಣ್ಮುಚ್ಚಿದ್ದು ಒಂದೇ ಕ್ಷಣ. ಅಷ್ಟರಲ್ಲಿ ಬ್ರೇಕಿನ ಜೋರಾದ ಕರ್ಕಶ ಸದ್ದಿನೊಂದಿಗೆ ನನ್ನಿಂದ ಕೇವಲ ಒಂದು ಇಂಚು ದೂರದಲ್ಲಿ ಬಸ್ಸು ನಿಂತಿತ್ತು. ತಪ್ಪು ನನ್ನದೇ! ಫ್ಯಾಶನ್ ಅಂತ ಉದ್ದವಾಗಿ ಇಳಿಬಿಟ್ಟಿದ್ದ ದುಪ್ಪಟ್ಟಾ ನನ್ನ ಸೈಕಲ್ಲಿನ ಚಕ್ರಕ್ಕೆ ಸಿಲುಕಿ ಬಾಲೆನ್ಸ್ ತಪ್ಪಿತ್ತು.
ಪುಣ್ಯಕ್ಕೆ ಆ ಸಮಯದಲ್ಲಿ ವಾಹನ ಸಂಚಾರ ಅಷ್ಟಿರಲಿಲ್ಲ, ಬಸ್ಸಿನ ವೇಗವೂ ಕಡಿಮೆಯಿತ್ತು. ಹೀಗಾಗಿ ಹೇಗೋ ಡ್ರೈವರ್ ಕಷ್ಟಪಟ್ಟು ಬಸ್ಸು ನಿಲ್ಲಿಸಿದ್ದ, ನಾನು ಪಾರಾಗಿದ್ದೆ! ಕಾಲಿಗೆ ಪೆಟ್ಟಾಗಿ ರಕ್ತ ಸುರಿದು ಬಿಳಿ ಚೂಡಿದಾರ್ ಕೆಂಪಾಗಿತ್ತು, ದುಪ್ಪಟ್ಟಾ ಹರಿದು ಚೂರಾಗಿತ್ತು. ಅರ್ಧದಷ್ಟು ಗಾಜಿನ ಬಳೆಗಳು ಒಡೆದಿದ್ದವು.ಅಂತೂ ಭರ್ಜರಿ ಅಲಂಕಾರದಿಂದ ಕಾಲೇಜಿನಲ್ಲಿ ಮೆರೆಯಬೇಕೆಂದುಕೊಂಡಿದ್ದ ನನ್ನ ಕಣ್ಣಲ್ಲಿ ನೋವಿನಿಂದ ನೀರು. ಸುತ್ತಲಿದ್ದವರಿಂದ ಬುದ್ಧಿ ಹೇಳಿಸಿಕೊಂಡು, ಕಾಲಿಗೆ ಡಾಕ್ಟ್ರ ಹತ್ತಿರ ಡ್ರೆಸ್ಸಿಂಗ್ ಮಾಡಿಸಿಕೊಂಡು ಮನೆಗೆ ಬಂದಾಗ ಹೊಸ ಬಟ್ಟೆ ಹಾಳಾದರೂ, ಹೊಸ ಜೀವನ ಪಡೆದ ಅನುಭವವಾಗಿತ್ತು!
– ಡಾ.ಕೆ.ಎಸ್.ಚೈತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.