ಅಪ್ಪಾ… ಬರಿಗಾಲ ದೇವರು!: ವಿದೇಶಕೂ, ವಿಮಾನಕೂ ಚಪ್ಪಲಿಯೇಕೆ?
Team Udayavani, Apr 11, 2017, 3:50 AM IST
ಅಪ್ಪನನ್ನು “ಓಲ್ಡೋ ಓಲ್ದು’ ಎನ್ನುತ್ತಾ ಹೊರಜಗತ್ತಿನಿಂದ ಬಚ್ಚಿಡುವ ಮಕ್ಕಳಿಗೆ ಇಲ್ಲೊಬ್ಬ ಮಗನನ್ನು ಪರಿಚಯಿಸಬೇಕು. ಆ ಮಗ ತನ್ನ ಅಪ್ಪನಿಗಾಗಿ ಬರಿಗಾಲಲ್ಲಿ, ಬಹ್ರೈನ್‌ಗೆ ಹೋದವನು!
ಇವನಿಗಿಂತ ಅಮಿತಾಭ್ ಸಿಂಹ ಎಷ್ಟೋ ಬ್ಯೂಟಿಫುಲ್ಲು. ಅಪ್ಪನನ್ನು ನೋಡಿದಾಗ ಕೆಲವರಿಗೆ ಆಕಳಿಕೆ ಬರುತ್ತೆ. ಶಮಿತಾಭ್ ಚಿತ್ರದ ಅಮಿತಾಭನೇ ಇವನಿಗಿಂತ ತುಸು ಗ್ಲ್ಯಾಮರ್ ಅಂತನ್ನಿಸುತ್ತೆ. ಅಪ್ಪನಿಗೆ ಇಂಗ್ಲಿಷು ಬರೋದಿಲ್ಲ. ಬೆಳ್ಳಿಕೂದಲ ಆಸಾಮಿ. ಗಡ್ಡ ಬಂದಾಗ ಥೇಟ್ ಫಕೀರ. ಪ್ಯಾಂಟಿನ ಯುಗದಲ್ಲೂ ಮಾಸಿದ ಪಂಚೆಯೇ ಅವನ ಕಾಸ್ಟೂಮು. ಹರಕು ಚಪ್ಪಲಿಯಲ್ಲಿ ಓಡಾಡುತ್ತಾನೆ, ಹಗಲೂರಾತ್ರಿ. ಮಲ್ಟಿಪ್ಲೆಕ್ಸ್‌ನಲ್ಲಿ ಕಾಣಿಸುವ ಹೀರೋನ ತಂದೆಯ ಮುಂದೆ, “ನನ್ನ ಅಪ್ಪ ಏನೂ ಅಲ್ಲ’ ಅಂತನ್ನಿಸಿ ಕಾಲೇಜು ಹುಡುಗನ ಮೋರೆ ಬಾಡುತ್ತದೆ.
ಮಗ/ ಮಗಳು ಓದುವ ಕಾಲೇಜನ್ನು ಹಳ್ಳಿಯ ಅಪ್ಪ ಯಾವತ್ತೂ ನೋಡುವುದಿಲ್ಲ. ಅಪ್ಪನ ಕೈಹಿಡಿದು ಕಾಲೇಜಿನ ಕಾರಿಡಾರಿನಲ್ಲಿ ನಡೆದಾಡುವ ಕನಸನ್ನೂ ಮಗ ಕಾಣುವುದಿಲ್ಲ. ಇದು ಕನ್ನಡ ಡಿಪಾರ್ಟ್‌ಮೆಂಟು, ಅವ್ರು ಇಂಗ್ಲಿಷ್ ಲೆಕ್ಚರರು ಎನ್ನುತ್ತಾ ಪ್ರೀತಿಯಿಂದ ಪರಿಚಯಿಸುವ ಮಾತಂತೂ ಇಲ್ಲವೇ ಇಲ್ಲ. ಅಪ್ಪನನ್ನು “ಓಲ್ಡೋ ಓಲ್ದು’ ಎನ್ನುತ್ತಾ ಹೊರಜಗತ್ತಿನಿಂದ ಬಚ್ಚಿಡುವ ಮಕ್ಕಳಿಗೆ ಇಲ್ಲೊಬ್ಬ ಮಗನನ್ನು ಪರಿಚಯಿಸಬೇಕು. ಆ ಮಗ ತನ್ನ ಅಪ್ಪನಿಗಾಗಿ ಬರಿಗಾಲಲ್ಲಿ, ಬಹ್ರೈನ್‌ಗೆ ಹೋದವನು!
ಕೊಚ್ಚಿಯ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಆ ಮೂವರು ಕೂತಿದ್ದಾರೆ. ಆಚೆಗೆ ಅಪ್ಪ, ಈಚೆಗೆ ಮಗ, ಮಧ್ಯದಲ್ಲಿ ತಾಯಿ. ಆಕೆ ಮಾತ್ರ ಕಾಲಿಗೆ ಚಪ್ಪಲಿ ಧರಿಸಿ, ಕಾಲು ಅಲುಗಾಡಿಸುತ್ತಿದ್ದಾಳೆ. ಅಪ್ಪ- ಮಗ ಕಾಲಿಗೆ ಚಪ್ಪಲಿ ಧರಿಸದೆ, ಬರಿಗಾಲಲ್ಲಿ ಕುಳಿತಿದ್ದಾರೆ. ಸೂಟು ಬೂಟು ತೊಟ್ಟವರು ಸುತ್ತಮುತ್ತ ಓಡಾಡುವಾಗ, ಅಪ್ಪನಿಗೆ ಅಂಜಿಕೆ ಆಗುವುದಿಲ್ಲ. ಚಪ್ಪಲಿ ತೊಡದ ತಾನು ಹಳ್ಳಿಯ ಗಮಾರ ಅಂತನ್ನಿಸುವುದಿಲ್ಲ. ಇಲ್ಲಿ ತಾನೊಬ್ಬನೆ ಬರಿಗಾಲಲ್ಲಿ ಬಂದಿಲ್ಲವಲ್ಲ; ತನ್ನೊಂದಿಗೆ ಮಗನಿದ್ದಾನೆಂಬ ಸಮಾಧಾನ ಆತನಿಗೆ!
ನಡು ವಯಸ್ಸಿನ ಆ ಮಗನ ಹೆಸರು ಡೇವಿಸ್ ದೇವಸ್ಸಿ ಚಿರಾಮೆಲ್. ಬಹ್ರೈನ್ ದೇಶದಲ್ಲಿ ಸಾಫ್ಟ್ವೇರ್ ಎಂಜಿನಿಯರಾಗಿ ದುಡಿಯುತ್ತಾ ಹತ್ತಾರು ವರುಷಗಳಾಗಿವೆ. ಸೌದಿಯ ಪಕ್ಕದಲ್ಲಿ ಸೌತೇಕಾಯಿಯಂತಿರುವ ಬಹ್ರೈನ್‌ನಲ್ಲಿ ಆಗಸ ಚುಂಬಿಸುವ ಕಟ್ಟಡಗಳೆಷ್ಟಿವೆ ಎಂಬುದರ ಬಗ್ಗೆ ಅಪ್ಪನಿಗೆ ಗೊತ್ತೇ ಇಲ್ಲ. ಆ ಲೆಕ್ಕವನ್ನು ಅಪ್ಪನಿಗೆ ಒಪ್ಪಿಸಬೇಕು. ಹೊಲ- ಗದ್ದೆ, ಬೆಟ್ಟ- ಕಾಡು ಎಂದು ತಿರುಗಾಡುವ ಅಪ್ಪ ಯಾವತ್ತೂ ಆ ದೇಶಕ್ಕೆ ಹೋದವನಲ್ಲ. ಆ ಬಿಲ್ಡಿಂಗುಗಳ ಕೆಳಗೆ ನಿಲ್ಲಿಸಬೇಕು. ಬೆವರಿದ ಅವನ ಮೈಗೆ ಎಸಿಯ ತಂಪು ಸೋಕಿಸಬೇಕು. ದುಡ್ಡು ಸುರಿದು ಮನುಷ್ಯ ಸೃಷ್ಟಿಸಿರುವ ಈ ಸ್ವರ್ಗವನ್ನು ತೋರಿಸಬೇಕೆಂದು ಮಗ ಕೆಲಸ ಸಿಕ್ಕಾಗಿನಿಂದ ಹಂಬಲಿಸುತ್ತಲೇ ಇದ್ದಾನೆ. ಕರೆಯುತ್ತಲೇ ಬಂದಿದ್ದಾನೆ.
ಮಗ ಪ್ರತಿಸಲ ಪ್ರೀತಿಯಿಂದ ಕರೆದಾಗ್ಲೆಲ್ಲ “ಬರಿಗಾಲಲ್ಲಿ ನನ್ನ ನೋಡಿದ್ರೆ ಆ ದೇಶದವರು ಏನಂತಾರೋ? ನನ್ನಂತೆ ಮಾಸಿದ ಪಂಚೆ ಉಟ್ಟ ಜನ ಅಲ್ಲಿ ಯಾರಿದ್ದಾರೆ ಮಗನೆ…?’ ಅಪ್ಪನ ಈ ಪ್ರಶ್ನೆ ಮತ್ತೆ ಮತ್ತೆ ಅಡ್ಡಿ ಆಗುತ್ತಿತ್ತು. ಅಪ್ಪನನ್ನು ಒಪ್ಪಿಸಲಾಗದೆ ಮಗ ಪ್ರತಿ ಬಾರಿಯೂ ಸೋಲುತ್ತಿದ್ದ. ಕೊನೆಗೆ ಧೈರ್ಯ ತುಂಬಿದ ಮಗ, “ಅಪ್ಪಾ… ನೀನು ಚಪ್ಪಲಿ ಧರಿಸೋದಿಲ್ಲ ಅಂದ್ರೆ, ನಾನೂ ಧರಿಸೋದಿಲ್ಲ. ನಿನ್ನ ರೀತಿಯೇ ಬರಿಗಾಲಲ್ಲಿ ಇರುತ್ತೇನೆ. ಈ ಪ್ಯಾಂಟು ಸಾಕು, ನಿನ್ನಂತೆ ಪಂಚೆ ಉಡುತ್ತೇನೆ. ಪಂಚೆಯುಟ್ಟು, ಬರಿಗಾಲಲ್ಲಿ ನಾನೂ ಬರೋದಾದ್ರೆ ಬಹ್ರೈನ್ ನೋಡಲು ಬರುತ್ತೀಯಾ?’ ಎಂಬ ಪ್ರಶ್ನೆ ಮುಂದಿಟ್ಟಾಗ ಅಪ್ಪನ ಕಂಗಳಲ್ಲಿ ನೀರು. ಮಗನ ಪ್ರೀತಿಗೆ ಕಣ್ಣ ಹನಿಗಳೇ ಕಾಣಿಕೆಯಾದವು. ಕೊನೆಗೂ ಹೇಳಿದಂತೆ ನಡೆದು, ಅಪ್ಪನನ್ನು ಕರೆದೊಯ್ಯಲು ಬರಿಗಾಲಲ್ಲಿ, ಪಂಚೆಯಲ್ಲಿಯೇ ಬಂದ ಲಕ್ಷ ಲಕ್ಷ ಎಣಿಸುವ ಆ ಎಂಜಿನಿಯರು.
ಈ ಕತೆ ಹೃದಯಕ್ಕಿಳಿಯುವಾಗ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದ ವೆಂಕೋಬರಾವ್ ಅಲ್ಲೆಲ್ಲೋ ಬೀದಿ ಬದಿ ಬ್ರೆಡ್ಡು, ಟೀಗಾಗಿ ಕಾದು ನೋಡುತ್ತಿರುವಂತೆ ಕಾಣುತ್ತಿದೆ. ಅದೇ ಬೀದಿಯಂಚಿನ ವೃದ್ಧಾಶ್ರಮದ ಕಿಟಕಿಯಲ್ಲಿ ಮಗನ ಹಾದಿಗಾಗಿ ಇಳಿವಯಸ್ಸಿನ ಕಣYಳೆರಡು ಇಣುಕಿ ನೋಡುತ್ತಿವೆ. ನಾವೆಲ್ಲ ಅಪ್‌ಡೇಟ್ ಆದವರು. ಧರಿಸುವ ಶೂನಿಂದ ಹಿಡಿದು, ಮೊಬೈಲಿನ ಆ್ಯಪ್‌ಗ್ಳ ತನಕ ಅಪ್‌ಡೇಟ್ ವರ್ಶನ್ನು ಇಟ್ಟುಕೊಂಡ ಫೈವ್ ಜಿ ತಲೆಮಾರಿನವರು. ಆದರೆ, ಅಪ್ಪ…? ಅಪ್‌ಡೇಟ್ ಆಗು ಎಂದರೆ ಕೇಳುವುದಿಲ್ಲ. ಅವನನ್ನು ಅಪ್‌ಡೇಟ್ ಮಾಡಲು ಸಾಫ್ಟ್ವೇರುಗಳಿಲ್ಲ ಎನ್ನುವ ಈ ಯುಗದಲ್ಲಿ “ಡೇಬಿಸ್ ದೇವಸ್ಸಿ’ಯಂಥ ಮಗ ನನ್ನ ಹೊಟ್ಟೆಯಲ್ಲಿ ಹುಟ್ಟಲಿಯೆಂಬ ಪ್ರಾರ್ಥನೆಯೂ ಕೇಳಿಸುತ್ತಿದೆ. ಕೆಲವು ಮನಃಸ್ಥಿತಿಗೆ ಬದಲಾವಣೆ ಒಗ್ಗದು. ಬದಲಾಯಿಸಲು ಹೋದರೆ ಅದರಲ್ಲಿ ಒರಿಜಿನಾಲಿಟಿ ಕಾಣಿಸದು. ಇದ್ದಿದ್ದನ್ನು ಇದ್ದಹಾಗೆ ಒಪ್ಪಿಕೊಳ್ಳುವ ವಿಶಾಲ ಹೃದಯ ನಮ್ಮದಾಗಲಿ. ಅವರು ಖುಷಿ ಆಗಿರುತ್ತಾರೆಂದರೆ, ಅವರಂತೆಯೇ ನಾವಾಗಲು ಒಂದು ಗಟ್ಟಿತನ ಆ ಹೃದಯದೊಳಗೆ ನೆಲೆಸಲಿ.
ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.