ಮೊದಲನೇ ಇಂಗ್ಲಿಷ್ ಕದನ
ಇಂಗ್ಲಿಷ್ ಕಡಲೆ, ಕನ್ನಡದ ಹಾಲ್ಹಲ್ಲುಗಳು
Team Udayavani, Jun 11, 2019, 6:00 AM IST
ಢಣ ಢಣ ಗಂಟೆ ಬಾರಿಸಿದೆ. ಕನ್ನಡ ಶಾಲೆಗಳೆಲ್ಲ ಬಣಗುಟ್ಟುತ್ತಿರುವ ಹೊತ್ತಿನಲ್ಲಿ, ಇಂಗ್ಲಿಷ್ ಕಾನ್ವೆಂಟುಗಳ ಹೆಂಚು ಹಾರಿಹೋಗುವಷ್ಟು ವಿದ್ಯಾರ್ಥಿಗಳ ದಂಡು ಸೇರುತಿದೆ. ಕಾನ್ವೆಂಟ್ ಬೆಂಚಿನ ಮೇಲೆ ಪಿಳಿಪಿಳಿ ಕಣ್ಣು ಬಿಡುತ್ತಾ, ಕುಳಿತ ಬಹುತೇಕರು ಕನ್ನಡ ಮೀಡಿಯಮ್ಮಿನ ವಿದ್ಯಾರ್ಥಿಗಳೇ. ಇಂಗ್ಲಿಷ್‌ನ ಮೋಹ ಏನೇ ಇದ್ದರೂ, ಆ ಮುಖಗಳಲ್ಲಿ ದಿಗಿಲೊಂದು ಇದ್ದೇ ಇದೆ. “ಪಟಪಟ ಅಂತ ಇಂಗ್ಲಿಷ್ ಹೊಡೆಯುವ ಕಾನ್ವೆಂಟ್ ಮಕ್ಕಳೊಂದಿಗೆ ನಾವು ಸ್ಪರ್ಧಿಸೋದು ಹೇಗೆ?’ ಎಂಬ ಮಹಾ ಆತಂಕವಿದೆ. ಇಂಗ್ಲಿಷ್ ಕಲಿಕೆಯ ಭಯ, ಅವಮಾನ ಅನುಭವಿಸಿ, ಈಗ ಇಂಗ್ಲಿಷನ್ನೇ ಜೀವನ ಮಾಡಿಕೊಂಡು, ದೇಶದ ಗಡಿಯಾಚೆ ನಿಂತ ಇಲ್ಲಿನ ಮೂವರ ಕತೆ, ಅಂಥ ಮಕ್ಕಳಿಗೆ ಸ್ಫೂರ್ತಿ ಆದೀತೆಂಬುದು “ಜೋಶ್’ನ ಆಶಯ…
ಇಂಗ್ಲಿಷ್ ದಡ್ಡನಿಗೆ ಇಂಗ್ಲೆಂಡ್ ಕರೆದಾಗ…
- ಡಾ. ರಾಮಪ್ಪ ಶಾನಭಾಗ್, ಲಿವರ್‌ಪೂಲ್, ಇಂಗ್ಲೆಂಡ್
ರಾಮಪ್ಪ ಎಂಬ ಹೆಸರಿನವನಾದ ನಾನು… ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆ ಮುಗಿಸಿ, ಹೈಸ್ಕೂಲ್‌ಗೆ ಇಂಗ್ಲಿಷ್ ಮೀಡಿಯಂ ಓದಲು ಹೋಗಿದ್ದೆ. ಅವತ್ತು ಮೂರನೇ ದಿನವೋ, ನಾಲ್ಕನೇ ದಿನವೋ. ಅದಾಗಲೇ ನನ್ನ ಹೆಸರು ಬಹಳ ಓಲು, ಪಂಪನ ಕಾಲದ್ದೆಂದು, “ಯಾವ ಪುಣ್ಯಾತ್ಮ ಗುರು, ನಿಂಗೆ ಹೆಸರಿಟ್ಟಿದ್ದು?’ ಎಂದು ಆಗಷ್ಟೇ ಪರಿಚಿತರಾದ ಮಾಡರ್ನ್ ಹೆಸರಿನ ಗೆಳೆಯರಿಂದ, ಕಾಲೆಳೆಸಿಕೊಂಡಿದ್ದೆ. “ಹೆಸರಿನಲ್ಲೇನಿದೆ, ಎಲ್ಲ ಇರೋದು ಉಸಿರಿನಲ್ಲಿರೋದು ಕಣೊ’ ಅಂದರೆ, “ನೋಡ್ರೋ ಶುರುಮಾಡª, ಚಂಪೂ ಕಾವ್ಯ… ಎಸ್ಕೇಪ್ ಆಗ್ರೋ ಇಲ್ಲಿಂದ’ ಅನ್ನೋರು.
ಆ ಹುಡುಗರಿಗೆ ತಕ್ಕಂತೆ ಅಲ್ಲೊಬ್ಬ ಇಂಗ್ಲಿಷ್ ಪ್ರಾಧ್ಯಾಪಕರು. ಟಿಪ್‌ಟಾಪ್ ಆಗಿ, ಯಂಗ್ ಲುಕ್‌ನಲ್ಲಿ, ತನಗೆ ಕನ್ನಡವೇ ಗೊತ್ತಿಲ್ವೇನೋ ಎಂಬಂತೆ ವರ್ತಿಸುತ್ತಿದ್ದರು. ಕನ್ನಡ ಮೀಡಿಯಂನಿಂದ ಹೋದ ನನ್ನಂಥವರಿಗೆ ಅವರ ಮಾತುಗಳನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ ಆಗುತ್ತಿತ್ತು. ಅವರ ಕ್ಲಾಸಿನಲ್ಲಿ ಆರಂಭದಲ್ಲೇ ಮುಖಭಂಗಕ್ಕೆ ಗುರಿಯಾಗಿದ್ದೆ. “ವಾಟ್ಸ್ ಯುವರ್ ಗುಡ್ ನೇಮ್?’ ಅಂತ ಕೇಳಿದಾಗ, ಅಷ್ಟು ವೇಗವಾಗಿ ಅವರು ಅವರು ಏನಂದರು ಅಂತ ಗೊತ್ತೇ ಆಗಲಿಲ್ಲ. ಗೊತ್ತಾದರೂ, ಅವರೇಕೆ ಗುಡ್ ನೇಮ್ ಎಂದರು ಅನ್ನೋದು ಕನ್‌ಫ್ಯೂಸ್ ಆಗಿ, ಸುಮ್ಮನಾಗಿದ್ದೆ. ಅಷ್ಟರಲ್ಲೇ ಪಕ್ಕದಲ್ಲಿದ್ದವನೊಬ್ಬ, “ಸರ್ ಗುಡ್ ನೇಮ್ ಅಲ್ಲ, ಅದು ಬ್ಯಾಡ್ ನೇಮ್’ ಎಂದಿದ್ದ. ನನ್ನ ಹೆಸರನ್ನು ಕೇಳಿ ಅವರು ಇನ್ನಷ್ಟು ನಕ್ಕರು. ನನ್ನ ಹೆಸರೇ ನನಗೆ ಸಮಸ್ಯೆ ಅನ್ನುವ ರೀತಿಯಲ್ಲಿ ಅವರೆಲ್ಲರ ವರ್ತನೆ ಇತ್ತು.
ಅದೇ ನನ್ನೊಳಗೆ ಒಂದು ಛಲ ಹುಟ್ಟುಹಾಕಿತು. ನನ್ನ ಪಕ್ಕದ ಮನೆಯಲ್ಲಿದ್ದ, ಇಂಗ್ಲಿಷ್ ಎಂ.ಎ. ಪೂರೈಸಿದ್ದ, ಶಾಲಿನಿ ಅಕ್ಕ ಅವರಿಂದ ನಿತ್ಯವೂ ಆ ಭಾಷೆಯನ್ನು ಕಲಿಯುತ್ತಾ ಹೋದೆ. ನಿಜಕ್ಕೂ ಅವರು ನನ್ನ ಪಾಲಿನ ದೇವರು. ಕೆಲವೇ ತಿಂಗಳಲ್ಲಿ ಇಂಗ್ಲಿಷಿನಲ್ಲಿ ಗಟ್ಟಿಯಾದೆ. ಅದು ಎಷ್ಟರಮಟ್ಟಿಗೆ ಅಂದರೆ, ಎಸ್ಸೆಸ್ಸೆಲ್ಸಿಗೆ ಬರುವಷ್ಟರ ಹೊತ್ತಿಗೆ, “ಟಾಪ್ 3′ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಆದರೂ ನನ್ನ ಏಳ್ಗೆಯನ್ನು ಒಪ್ಪಿಕೊಳ್ಳುವ ಉದಾರ ಮನಸ್ಸನ್ನು ಆ ಮೇಷ್ಟ್ರು ತೋರಿರಲಿಲ್ಲ.
ಇನ್ನೇನು ಹೈಸ್ಕೂಲ್ ಮುಗಿಸುವ ಹೊತ್ತಿನಲ್ಲಿ ಹೀಗಾಯಿತು… ಅದೇ ಇಂಗ್ಲಿಷ್ ಮೇಷ್ಟ್ರು ಪಾಠ ಮಾಡುತ್ತಿರುವಾಗ, ಕಿಟಕಿಯಿಂದಾಚೆ ಏನೋ ಶಬ್ದ ಆದಂತಾಯಿತು. ಅರಿವಿಲ್ಲದೇ, ಇಣುಕಿ ನೋಡಿದ್ದು ನನ್ನ ತಪ್ಪು. ಅದನ್ನು ಗಮನಿಸಿದ ಅವರು, ನನ್ನತ್ತ ಚಾಕ್‌ಪೀಸ್ ಎಸೆದು, “Why are you looking at the monkey outside, when i am inside….’ ಎಂದು, ಕಣ್ಣು ಕೆಂಪಾಗಿಸಿಕೊಂಡು ಗದರಿದ್ದರು. ನನಗೆ ಜೋರು ನಗು. “ಯಾಕೋ ನಗ್ತಿದ್ದೀಯ?’- ಮತ್ತೆ ಅವರ ಪ್ರಶ್ನೆ. ನಗುವನ್ನು ಹೇಗೋ ತಡೆದುಕೊಂಡು ನಾನು ಹೇಳಿದೆ… “ಸರ್… ನೀವು ಹೇಳಿದ ವಾಕ್ಯವನ್ನು ನೋಡಿ… ಸುಮ್ಮನೆ ನಿಮ್ಮನ್ನೇಕೆ ನೀವು ಮಂಕೀ ಎಂದು ಭಾವಿಸಿಕೊಂಡಿರಿ?’ ಅಂದೆ. ಅವರಿಗೆ ಮುಖಭಂಗವಾಗಿ, ಮತ್ತೆ ಸಿಟ್ಟಾದರು. ನಾಲ್ಕು ಪೆಟ್ಟೂ ಬಿತ್ತು.
ಇವತ್ತು ವೈದ್ಯನಾಗಿ ಇಂಗ್ಲೆಂಡಿನಲ್ಲಿ ನಿಂತು, ಆ ದಿನಗಳನ್ನು ನೆನೆದಾಗ, ಅವತ್ತಿನ ಅವಮಾನಗಳೆಲ್ಲ, ಇವತ್ತಿನ ಸನ್ಮಾನದಂತೆ ಕಾಣಿಸುತ್ತಿವೆ.
ಕನಸಲ್ಲೂ “ಬಾಟನಿ’ಯ ನರ್ತನ
– ಪ್ರಶಾಂತ್ ಜೋಶಿ, ಮಿನ್ನೆಪೊಲೀಸ್, ಅಮೆರಿಕ
ಹೈಸ್ಕೂಲಿನಲ್ಲಿ ನನಗೆ ವಿಜ್ಞಾನ, ಗಣಿತ ಬಹಳ ಅಚ್ಚುಮೆಚ್ಚು. ಪತ್ರ ಹರಿತ್ತು, ದ್ಯುತಿ ಸಂಶ್ಲೇಷಣೆ, ಪ್ರಣಾಳ, ಬೀಜಗಣಿತ, ವಾಹಕಗಳು, ಸಂಭವನೀಯತೆ, ತ್ರಿಜ್ಯ- ಎಂಥ ಒಳ್ಳೊಳ್ಳೆ ರೊಮ್ಯಾಂಟಿಕ್ ಪದಗಳು ಅವು! ಎಲ್ಲ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ ನಾನು, ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಸೇರಿದಂತೆ, ಎಲ್ಲ ಸಬೆjಕುrಗಳಲ್ಲಿ ಒಳ್ಳೆಯ ಅಂಕ ಗಳಿಸಿ ಶಾಲೆಗಷ್ಟೇ ಅಲ್ಲದೆ, ಇಡೀ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಬೀಗುತ್ತಿ¨ªೆ. ನನ್ನ ಈ ಖುಷಿಯನ್ನು ಒಂದೇ ಏಟಿಗೆ ಧುತ್ ಎಂದು ಹೊಡೆದು ಹಾಕಿದ್ದು ಪಿಯು ಕಾಲೇಜಿನ ಇಂಗ್ಲಿಷ್ ಮಾಧ್ಯಮದ ಶಿಕ್ಷಣ.
ಗಣಿತದ ಮೇಲಿದ್ದಿದ್ದ ಲವ್ವು, ದ್ವೇಷವಾಗಿ ಬದಲಾಗಿತ್ತು. ವಿಜ್ಞಾನದಲ್ಲಿ ಫೋಕಸ್ ಇರದೇ- ಫಿಸಿಕ್ಸ್…, ಬಾಟನಿ, ಝುವಾಲಾಜಿ, ಫಿಸಿಕಲ್ ಕೆಮಿಸ್ಟ್ರಿ, ಆರ್ಗಾನಿಕ್ ಕೆಮಿಸ್ಟ್ರಿ – ಅಂತೆಲ್ಲ ಹರಿದು ಹಂಚಿಹೋಗಿತ್ತು. ಪ್ರೊಫೆಸರ್‌ಗಳು ಪಾಠ ಮಾಡಿದ್ದು ಯಾವುದೂ ತಲೆಗೆ ಹೋಗುತ್ತಿರಲಿಲ್ಲ. ಅವರೆಲ್ಲರೂ ಕಾಯಂ ವೈರಿಗಳಾಗಿದ್ದರು. ಆ ಬಾಟನಿ ಲೆಕ್ಚರರ್ ಅಂತೂ ರಾತ್ರಿ ಕನಸಿನಲ್ಲಿ ಬಂದು “ಕಿಂಗ್ಡಮ್ ಮೊನೆರ, ಡೈಕಾಟ ಸ್ಟೆಮ…, ಸ್ಟಿಗ್ಮಾ, ಜೆಲಮ್’ ಅಂತೆಲ್ಲ, ಅತ್ಯಂತ ಜಟಿಲ ಪದಗಳಲ್ಲಿ ಪಾಠ ಹೇಳುತ್ತಿದ್ದ. ಅಕ್ಷರಗಳು ಕಣ್ಣ ಮುಂದೆ ಡ್ಯಾನ್ಸ್ ಮಾಡುತ್ತಿರುವ “ತಾರೇ ಜಮೀನ್ ಪರ್’ ಚಿತ್ರದ ದರ್ಶಿಲ್‌ನಂತಾಗಿತ್ತು ನನ್ನ ಸ್ಥಿತಿ. ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಗೊತ್ತಿಲ್ಲದೆ, ಸ್ನೇಹಿತನನ್ನು ಕೇಳಲು ಹೋಗಿ ಸಿಕ್ಕಿಬಿದ್ದು ಒಳ್ಳೆಯ ಫಜೀತಿಯಾಗಿತ್ತು.
ಪಿಯುಸಿ ಕಷ್ಟವಾಗಿದ್ದರೂ, ಜೀವನಕ್ಕೆ ಇಂಗ್ಲಿಷ್ ಅನಿವಾರ್ಯ ಎಂಬ ಗುಟ್ಟನ್ನು ಕಂಡುಕೊಂಡೆ. ಬೆಂಗಳೂರಿನ ಪರಿಸರ, ಹಾಸ್ಟೆಲ್ ಸಹವಾಸ, ಗೆಳೆಯರೊಡನೆ ಒಡನಾಟ ನಿಧಾನವಾಗಿ ಇಂಗ್ಲಿಷ್ ತಕ್ಕ ಮಟ್ಟಿಗೆ ಹಿಡಿತಕ್ಕೆ ಬಂತು. ಕೀಳರಿಮೆ ಹೊರಟು ಹೋಗಿ, ಪಿಯು ಕಾಲೇಜಿನಲ್ಲಿ ಕಳೆದುಕೊಂಡ ಆತ್ಮವಿಶ್ವಾಸ, ಎಂಜಿನಿಯರಿಂಗ್‌ನಲ್ಲಿ ಮರಳಿ ಪಡೆದುಕೊಂಡೆ. ಈ ಹೊತ್ತಿನಲ್ಲಿ, ಸಂಪೂರ್ಣವಾಗಿ ಇಂಗ್ಲಿಷಿನಲ್ಲೇ ವ್ಯವಹಾರವಿರುವ ಐ.ಟಿ. ಕ್ಷೇತ್ರದಲ್ಲಿ ಉದ್ಯೋಗಿಯಾಗಿ, ಸದ್ಯ ಅಮೆರಿಕದಲ್ಲಿ ನೆಲೆಸಿದ್ದೇನೆ.
ಒರ್ಜಿನಲ್ ಹೋಗಿ, “ವರ್ಜಿನಲ್’ ಆದ ಕತೆ
– ಮಹೇಶ್ವರಪ್ಪ ಎನ್., ಮ್ಯಾಡ್ರಿಡ್, ಸ್ಪೇನ್
ಬಾಲ್ಯದಲ್ಲಿ ಎಬಿಸಿಡಿ ಗ್ಯಾಂಗ್‌ನ ದಾಳಿಗೆ ಒಳಗಾದವರಲ್ಲಿ ನಾನೂ ಒಬ್ಬ. ಇವುಗಳ ಕಣ್ತಪ್ಪಿಸಿಕೊಂಡು, ರಜೆಯಲ್ಲಿ ತಾತನ ಮನೆಗೆ ಹೋದರೂ, ಊರಿನವರ ಮುಂದೆ ಅಲ್ಲೂ ತಾತನ ಬಿಲ್ಡಪ್ಪು… “ನೋಡು, ನನ್ನ ಮೊಮ್ಮಗ ಹೇಗೆ ಓದ್ತಾನೆ ಅಂತ… ಎಲ್ಲಿ ಜೋರಾಗಿ ಓದ್ಲಾ ಈ ಪೊಯೆಮ್ಮು’ ಅಂತೆಳಿ, ನಾನು ನಿಂತ ನೆಲವನ್ನೇ ಕುಸಿಯುವ ಹಾಗೆ ಮಾಡಿರುತ್ತಿದ್ದ. ತಾತನ ಕಾಟ ತಾಳಲಾರದೇ, ಓದಲು ಸುಲಭವಾದ ಕನ್ನಡದ ಪುಸ್ತಕವನ್ನು ಕೈಗೆತ್ತಿಕೊಂಡರೆ, ಅದಕ್ಕೂ ಅಪಸ್ವರ. ಇಂಗ್ಲಿಷ್ ಪೊಯೆಮ್ಮೇ ಓದೆಂದು, ದುಂಬಾಲು ಬೀಳುತ್ತಿದ್ದ. ತಪ್ಪೋ- ಒಪ್ಪೋ, ಹೇಗೋ ದಬದಬ ಅಂತ ಪೊಯೆಮ್ಮು ಓದೋಣ ಅಂದ್ರೆ, ಇಂಗ್ಲಿಷನ್ನು ಅರೆದು ಕುಡಿದು, ರಾಣಿ ಎಲಿಜೆಬೆತ್ ರೀತಿ ನಿಂತಿರುತ್ತಿದ್ದ, ನನ್ನ ಇಬ್ಬರು ಅಕ್ಕಂದಿರಿಗೆ ಚಳ್ಳೇಫೂಟು ತಿನ್ನಿಸಲು ಸಾಧ್ಯವೇ ಆಗುತ್ತಿರಲಿಲ್ಲ. ನನ್ನ ಓದಿನಲ್ಲಿ ತಪ್ಪುಗಳನ್ನು ಹೆಕ್ಕಿ ಹೆಕ್ಕಿ, ಊರಿನವರ ಮುಂದೆ ನನ್ನ ಮರ್ಯಾದೆಯನ್ನು ಹರಾಜಿಗಿಡುತ್ತಿದ್ದರು. ತಮ್ಮ ಎನ್ನುವ ಕರುಣೆ ಸ್ವಲ್ಪವೂ ಬೇಡವೇ ಅಂತನ್ನಿಸಿ, ಅವರನ್ನೇ ನೋಡುತ್ತಿದ್ದೆ.
ನಂತರ ಹೈಸ್ಕೂಲ್‌ಗೆ ಬಂದೆ. ಅಲ್ಲಂತೂ ಇಂಗ್ಲಿಷ್ ಮಾತಾಡುವವರದ್ದೇ ಒಂದು ಪ್ರತ್ಯೇಕ ಗುಂಪು. ಇಂಗ್ಲಿಷ್ ಮಾತಾಡುವ, ಭಾಷಣ ಮಾಡುವ ಹುಡುಗರಿಗೆ ಸಿಗುವ ಗೌರವದ ಜೊತೆಗೆ ಅವರ ಹಿಂದೆ ಮುಗಿಬೀಳುವ ಹುಡುಗಿಯರನ್ನು ನೋಡಿ, ಎಷ್ಟೋ ಸಲ ಹೊಟ್ಟೆ ಉರಿದುಕೊಂಡಿದ್ದೂ ಉಂಟು. ಅವರಂತಾಗಲು ಪ್ರಯತ್ನಿಸಿದ್ದೇನೋ ನಿಜ. ಆದರೆ, ಹಾಗೆ ಪ್ರಯತ್ನಿಸಿದಷ್ಟು ನಗೆಪಾಟಲಿಗೀಡಾಗಿದ್ದೂ ಹೆಚ್ಚು.
ಒಂದು ಸಲ ನಮ್ಮ ಇಂಗ್ಲಿಷ್ ಮೇಷ್ಟ್ರು, “ಪಾಠವನ್ನು ಯಾರು ಜೋರಾಗಿ ಓದಿರ?’ ಅಂತ ಕೇಳಿದರು. ಅವತ್ತು ಅದೆಲ್ಲಿಂದ ಧೈರ್ಯ ಬಂದಿತ್ತೋ ಗೊತ್ತಿಲ್ಲ. ಕೈ ಎತ್ತಿ, ಓದಲಾರಂಭಿಸಿದ್ದೆ. ಆರಂಭದ ಪ್ಯಾರಾ ಓದಿದ್ದು ಸರಿಯಾಗಿಯೇ ಇತ್ತು. ಆದರೆ, ಎರಡನೇ ಪ್ಯಾರಾದಲ್ಲಿ ನನ್ನ ಕಾನ್ಫಿಡೆನ್ಸ್ ತುಂಬಾ ಹೆಚ್ಚಿ, ಒರಿಜಿನಲ್ (original) ಅಂತ ಹೇಳುವ ಬದಲಿಗೆ ನಾಲಿಗೆ ಹೊರಳದೇ, ವರ್ಜಿನಲ್ (virgninal) ಅಂತ ಉಚ್ಚರಿಸಿ, ಶಾಲೆಯಲೆಲ್ಲಾ ಸಿಕ್ಕಾಪಟ್ಟೆ ಹಾಸ್ಯಕ್ಕೊಳಗಾಗಿಬಿಟ್ಟೆ. ಅವತ್ತು ಇಡೀ ನನ್ನನ್ನು ನೋಡಿ, ಹುಡುಗಿಯರೆಲ್ಲ ಮುಸಿ ಮುಸಿ ನಗೋರು. ಈ ಮುಖಭಂಗದಿಂದ ಒಂದು ವಾರ ಶಾಲೆಯ ಕಡೆಗೆ ತಲೆಯೇ ಹಾಕಲಿಲ್ಲ. ಅಂದೇ ಕೊನೆ ಕ್ಲಾಸ್‌ನಲ್ಲಿ ಓದುವ ದುಸ್ಸಾಹಸಕ್ಕೂ ಇಳಿಯಲಿಲ್ಲ.
ಆದರೆ, ಇಂಗ್ಲಿಷ್ ಮಾತಾಡಲು ನನಗೆ ಸುಲಭವಾಗಿದ್ದು ಎಂಜಿನಿಯರಿಂಗ್ ಕಾಲೇಜು ಸೇರಿದ ಮೇಲೆ. ಅಲ್ಲಿಯ ಗೆಳೆಯರ ಜೊತೆ ಸ್ವಲ್ಪ- ಸ್ವಲ್ಪವಾಗಿ ತಪ್ಪೋ-ನೆಪ್ಪೋ, ಬಾಯಿಗೆ ಬಂದಿದ್ದನ್ನು ಮಾತಾಡುತ್ತಾ, ಇಂಗ್ಲಿಷ್ ಸಿನಿಮಾ- ಹಾಡುಗಳು, ದಿನಪತ್ರಿಕೆಗಳನ್ನು ಓದುತ್ತಾ, ಜ್ಞಾನಭಂಡಾರ ಹೆಚ್ಚಿಸಿಕೊಂಡೆ. ಇಂದು ಇಂಗ್ಲಿಷ್ ಜನರೊಂದಿಗೆ ಇಂಗ್ಲಿಷ್ ದೇಶದಲ್ಲೇ ಕೆಲಸ ಮಾಡುತ್ತಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.