ಫಿಟ್‌ ಆ್ಯಂಡ್‌ ರನ್‌


Team Udayavani, Dec 11, 2018, 11:55 AM IST

fit-run.jpg

“ದೇಹ ಬೆಳೆದಿದೆ, ಬುದ್ಧಿ ಬೆಳೆದಿಲ್ಲ’ ಎಂಬ ಸಾಮಾನ್ಯ ಆರೋಪ ಪ್ರತಿ ಕ್ಲಾಸ್‌ರೂಮ್‌ನ ಗೋಡೆಗಳಿಗೂ ಪರಿಚಿತ. ಆದರೆ, ಒಂದು ಸತ್ಯ ಗೊತ್ತೇ? ಈ ಜಗತ್ತಿನ ಎಲ್ಲ ವೃತ್ತಿಗಳಿಗೂ ಬೌದ್ಧಿಕತೆಯೇ ಅರ್ಹತೆ ಆಗಿರಬೇಕಿಲ್ಲ. ದೈಹಿಕ ಸದೃಢತೆಯಿಂದಲೂ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವ ಜಾಣ ಹಾದಿಗಳಿವೆ. ಅಲ್ಲಿ ಫಿಟ್ನೆಸ್ಸೇ ಫಿಲಾಸಫಿ. ಆ ತತ್ವಕ್ಕೆ ತಕ್ಕಂತೆ ದೇಹವನ್ನೂ, ದೈಹಿಕ ಸಾಮರ್ಥ್ಯವನ್ನೂ ರೂಪಿಸಿಕೊಂಡರೆ, ಅಲ್ಲಿ ಅರಳಿಕೊಳ್ಳುವ ಅವಕಾಶಗಳಿಗೆ ಲೆಕ್ಕವೇ ಇಲ್ಲ… 

“ಪ್ರತಿ ಜೀವಿಯೂ ಜೀನಿಯಸ್ಸೇ. ಆದರೆ, ನೀವು ಒಂದು ಮೀನನ್ನು ಮರ ಹತ್ತುವುದಿಲ್ಲ ಎಂದು ತೀರ್ಮಾನಿಸಿಬಿಟ್ಟರೆ, ಅದು ಬದುಕಿನುದ್ದಕ್ಕೂ ತಾನೊಬ್ಬ ಮೂರ್ಖ ಅಂತಲೇ ಭಾವಿಸುತ್ತೆ!’  ಅಲ್ಬರ್ಟ್‌ ಐನ್‌ಸ್ಟಿನ್‌ ಈ ಮಾತನ್ನು ಹೇಳುವಾಗ, ಅವರ ಕಣ್ಮುಂದೆ ಇದ್ದ ದಡ್ಡನಾರು? ಯಾರೂ ನೋಡಿದವರಿಲ್ಲ. ಆದರೆ, ಈ ಮಾತಿಗೆ ಅನ್ವರ್ಥನಾಗಿದ್ದ ಒಬ್ಬ ಸ್ನೇಹಿತನನ್ನು ನಾನು,  ಹೈಸ್ಕೂಲಿನ ದಿನಗಳಲ್ಲಿ ಕಂಡಿದ್ದೆ. ಕೊನೆಯ ಬೆಂಚಿನಲ್ಲಿ ತಲೆತಗ್ಗಿಸಿ ಕೂರುತ್ತಿದ್ದ ಪ್ರವೀಣನಿಗೆ ಅದಾಗಲೇ ದಪ್ಪ ಮೀಸೆ ಬಂದಾಗಿತ್ತು.

ಇಬ್ಬರು ಹೈಸ್ಕೂಲ್‌ ವಿದ್ಯಾರ್ಥಿಗಳನ್ನು ತುಲಾಭಾರಕ್ಕೆ ಹಾಕಿದರೂ, ಒಂದು ಗ್ರಾಮ್‌ ಹೆಚ್ಚೇ ತೂಗುತ್ತಿದ್ದ ಪ್ರವೀಣ ಥೇಟ್‌ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ “ದಡ್ಡ ದಡ್ಡ ದಡ್ಡ…’- ಹಾಡಿನ ಹುಡುಗನಂತೆಯೇ ಜಾಲಿ ಆಗಿರುತ್ತಿದ್ದವ. “ದೇಹ ಬೆಳೆದರೂ, ಬುದ್ಧಿ ಬೆಳೆದಿಲ್ಲ’, “ನಿನಗೆ ಬಡ್ಕೊಳ್ಳೋದೂ ಒಂದೇ, ರಾಮನಗರದ ಶೋಲೆ ಬಂಡೆಗೆ ಪಾಠ ಮಾಡೋದೂ ಒಂದೇ’ ಎಂದು ಮೇಷ್ಟ್ರು ತಲೆ ಚಚ್ಚಿಕೊಂಡು ಬಯ್ಯುತ್ತಿದ್ದಾಗ, ಮಿಕ್ಕ ವಿದ್ಯಾರ್ಥಿಗಳೆಲ್ಲ ಮುಸಿ ಮುಸಿ ನಗುತ್ತಿದ್ದರು.

ಆದರೆ, ಯಾಕೋ ನನಗೆ ಆತ ಯಾವತ್ತೂ ಕಾಮಿಡಿ ವಸ್ತುವಾಗಿ ಕಾಣಿಸಲೇ ಇಲ್ಲ. ಅಣ್ಣನಂತಿದ್ದ ಅವನನ್ನು ನೋಡಿ, ಮರುಗುತ್ತಿದ್ದೆ. “ಅಯ್ಯೋ’ ಅನ್ನಿಸುವಂಥ ಅಸಹಾಯಕ ಅವತಾರಿ ಆತ. ನನ್ನ ಮರುಕಕ್ಕೆ ಕಾರಣವೂ ಇತ್ತು. ಶಾಲೆಯಲ್ಲಿ ಯಾವುದೇ ಫ‌ಂಕ್ಷನ್‌ ನಡೆದಾಗಲೂ, ಅವನಿಗೆ ತೂಕದ ವಸ್ತುಗಳನ್ನು ಹೊರಲು ಅವನೇ ಬೇಕಿತ್ತು. ಒಂದು ಕ್ಲಾಸ್‌ನಿಂದ ಮತ್ತೂಂದು ಕ್ಲಾಸ್‌ಗೆ ಬೆಂಚು ಎತ್ತೂಯ್ಯುವಾಗ, ಒಬ್ಬನೇ ಹೊತ್ತುಕೊಂಡು ಹೋಗುವಷ್ಟು ಬಲಾಡ್ಯ ಭೀಮ.

ಅಟೆಂಡರ್‌ ಯಾರೂ ಇಲ್ಲದಿದ್ದಾಗ, ಒಬ್ಬನೇ ಬಾವಿಯಿಂದ ನೀರನ್ನು ಸೇದಿ, ನಮ್ಮನ್ನು ತಂಪಾಗಿಡುತ್ತಿದ್ದ. ಒಮ್ಮೆ ಹೀಗಾಯಿತು… ಯಾವ ಗಣಿತ ಮೇಷ್ಟ್ರು ಅವನಿಗೆ “ದೇಹ ಬೆಳೆದರೂ…’ ಎಂದು ಡೈಲಾಗ್‌ ಹೊಡೆದಿದ್ದರೋ, ಅವರೇ ಒಮ್ಮೆ ಶಾಲೆಯ ಮೈದಾನದಲ್ಲಿ ಆಕಸ್ಮಿಕವಾಗಿ ಬಿದ್ದು, ಕಾಲು ಗಂಟಿಗೆ ಬಲವಾದ ಪೆಟ್ಟು ಮಾಡಿಕೊಂಡರು. ಆಗ ಪ್ರವೀಣನೇ ಓಡಿಹೋಗಿ, ಅವರನ್ನು ಹೆಗಲ ಮೇಲೆ ಹೊತ್ತುಕೊಂಡು, ಪಕ್ಕದ ಆಸ್ಪತ್ರೆಗೆ ಸೇರಿಸಿದ್ದ. ಮೊನ್ನೆ ಅದೇ ಪ್ರವೀಣ ಸಿಕ್ಕಿದ್ದ.

ಅವನ ನಡಿಗೆಯಲ್ಲಿ ಮೊದಲಿನದ್ದೇ ಗತ್ತಿತ್ತು. ಅವತ್ತಿನ ತೆಳು ಮೀಸೆ, ಪೌಷ್ಟಿಕವಾಗಿ ಬೆಳೆದು, ಪೊದೆ ರೂಪ ತಾಳಿದೆ. ಗಣಿತ ಮೇಷ್ಟ್ರು ಅಂದುಕೊಂಡಂತೆ, ಅವನೇನು ಪೂರಾ ದಡ್ಡನೇ ಆಗಿ, ಉಡಾಳನಾಗಲಿಲ್ಲ. ಹೇಗೋ ಎಸ್ಸೆಸ್ಸೆಲ್ಸಿ ಪಾಸು ಮಾಡಿ, ಪಿಯುಸಿಯನ್ನೂ ಮುಗಿಸಿ, ಲೈನ್‌ಮ್ಯಾನ್‌ ಕೆಲಸ ಹಿಡಿದಿದ್ದಾನೆ. ಅದೇ ಮೇಷ್ಟ್ರ ಊರಿಗೆ ಲೈನ್‌ಮ್ಯಾನ್‌ ಆಗಿ ಹೋಗಿ, ಕ್ವಿಂಟಾಲ್‌ ತೂಗುವ ಕಂಬಗಳನ್ನು ಸಾಲಾಗಿ ನೆಟ್ಟಿದ್ದಾನಂತೆ. “ಎರಡು ಹಗಲು- ರಾತ್ರಿಯೊಳಗೇ, ಊರಿಗೆ ಕರೆಂಟು ಕೊಟ್ಟು, ಮೇಷ್ಟ್ರ ಹುಟ್ಟೂರ ಮನೆಯನ್ನೂ ಬೆಳಗಿಸಿದ್ದೇನೆ’ ಎನ್ನುವಾಗ ಅವನ ಮುಖದಲ್ಲಿ ಅಪಾರ ಖುಷಿ ತೇಲುತ್ತಿತ್ತು.

ಅಲ್ಲಿ ಕ್ಯಾಮೆರಾ ಇರೋದಿಲ್ಲ. ಯಾರ ಮುಖಕ್ಕೂ ಬಣ್ಣ ಮೆತ್ತಿರೋದಿಲ್ಲ ಎನ್ನುವುದನ್ನು ಬಿಟ್ಟರೆ ಪ್ರತಿ ಕ್ಲಾಸೂ ಒಂದು ಸಿನಿಮಾ ಇದ್ದಂತೆ. ಮೇಷ್ಟ್ರ ಕಣ್ಣೊಳಗಷ್ಟೇ ಆ ಚಿತ್ರವೇ ಪ್ಲೇ ಆಗುತ್ತಿರುತ್ತೆ. ಅಲ್ಲಿ ಹೀರೋ ಇರ್ತಾನೆ; ವಿಲನ್ನೂ ಇರ್ತಾನೆ.  ವಾರ್ಷಿಕ ಸರಾಸರಿ ಲೆಕ್ಕದಲ್ಲಿ ಒಂದು ಪೆಟ್ಟನ್ನೂ ತಿನ್ನದೇ, ನಿತ್ಯವೂ ಕೊಟ್ಟ ಲೆಕ್ಕ ಒಪ್ಪಿಸುವ ಜಾಣ ಹುಡುಗನೇ ಮೇಷ್ಟ್ರ ಪಾಲಿಗೆ ನಾಯಕ.

ನಿನ್ನೆ ನಿಲ್ಲಿಸಿದ್ದ ಪಾಠದ ನೆನಪನ್ನೇ ಮರೆತ, ಪೆಟ್ಟು ತಿನ್ನಲು ಮೈಮೇಲೆ ಜಾಗವನ್ನೇ ಖಾಲಿ ಇಟ್ಟುಕೊಳ್ಳದ, ಕೊನೆಯ ಬೆಂಚಿನ ದಡ್ಡನೇ ಅವರ ಪಾಲಿಗೆ ಮೊಗ್ಯಾಂಬೋ. ಪಠ್ಯದ ವಿದ್ಯೆಯನ್ನು ತಲೆಯೊಳಗೆ ಇಳಿಸಿಕೊಳ್ಳದೇ, ಸಕಲವಿದ್ಯಾಪಾರಂಗತರಾದ ಈ “ಶಕ್ತಿಶಾಲಿ’ ಹುಡುಗರನ್ನು ತಮಾಷೆಯಾಗಿ ನೋಡುವವರೇ ಹೆಚ್ಚು. ಅವರ ದೇಹಕ್ಕೆ ಬೆಟ್ಟದ ರೂಪವೇ ಇದ್ದಿರಬಹುದು. ಆದರೆ, ಆ ದೇಹ ಸದ್ದಿಲ್ಲದೇ ಅವರೊಳಗೊಂದು ಟ್ಯಾಲೆಂಟ್‌ ಅನ್ನು ರೂಪಿಸುತ್ತಿರುತ್ತದೆ. ಮುಂದೆ ಅದೇ ದೈಹಿಕ ಸಾಮರ್ಥ್ಯವೇ ಅವರಿಗೆ ಅನ್ನ ಹಾಕುವ ವೃತ್ತಿಯಾದರೂ ಅಚ್ಚರಿಯಿಲ್ಲ.

ಈ ಜಗತ್ತಿನ ಎಲ್ಲ ವೃತ್ತಿಗಳಿಗೂ ಬೌದ್ಧಿಕತೆಯೇ ಅರ್ಹತೆ ಆಗಿರಬೇಕಿಲ್ಲ. ದೈಹಿಕ ಸದೃಢತೆಯಿಂದಲೂ ಬದುಕನ್ನು ಸುಂದರವಾಗಿ ರೂಪಿಸಿಕೊಂಡವರು ನಮ್ಮ ನಡುವೆ ಇದ್ದಾರೆ. ಟ್ರ್ಯಾಕ್‌ನಲ್ಲಿ ವೇಗವಾಗಿ ಓಡಬಲ್ಲ ಯುವಕನಿಂದ ಪೈಥಾಗೋರಸನ ಪ್ರಮೇಯದ ಕಂಠಪಾಠ ನಿರೀಕ್ಷಿಸುವುದರಲ್ಲಿ ಅರ್ಥವೇ ಇಲ್ಲ. ಅದರ ಬದಲಾಗಿ, ಎಷ್ಟು ಸೆಕೆಂಡಿನಲ್ಲಿ ಎಷ್ಟು ಹೆಜ್ಜೆ ಓಡಿದರೆ, 100 ಮೀಟರ್‌ ಮುಗಿಯುತ್ತದೆ ಎಂಬುದನ್ನು ಕೇಳಿದರೆ, ಆತ ರ್‍ಯಾಂಕ್‌ ವಿದ್ಯಾರ್ಥಿಗಿಂತಲೂ ಮೊದಲೇ ಅಂದಾಜಿಸಬಲ್ಲ. ಅದೇ ಅವರ ಟ್ಯಾಲೆಂಟ್‌ಗೆ ಇರುವ ಭಿನ್ನತೆ.

ದೇಹದ ತತ್ವ ಬಲ್ಲಿರೇನು?: ನಿಜ, ವಿದ್ಯೆಯೇ ಎಲ್ಲದಕ್ಕೂ ವೇದಿಕೆ. ಹೆಚ್ಚು ಮಾರ್ಕ್ಸ್ ತೆಗೆದುಕೊಂಡರೆ, ಟೆಕ್ಕಿಯೋ, ಡಾಕ್ಟರೋ ಆಗಿ ಲಕ್ಷ ಲಕ್ಷ ದುಡಿಯಬಹುದು ಅಥವಾ ಬುದ್ಧಿಗೆ ಪ್ರಾಶಸ್ತ್ಯ ನೀಡುವ ಇನ್ನಾವುದಾದರೂ ಹುದ್ದೆಯನ್ನು ದಕ್ಕಿಸಿಕೊಳ್ಳಬಹುದು. ಆದರೆ, ವೃತ್ತಿ ಪ್ರಪಂಚ, ಇಷ್ಟಕ್ಕೇ ಸೀಮಿತ ಆಗಿರುವುದಿಲ್ಲ. ದೈಹಿಕ ಶಕ್ತಿಗೆ ಆದ್ಯತೆ ನೀಡಬಲ್ಲ, ದೈಹಿಕ ಕಸರತ್ತಿಗೆ ಬೆಲೆ ಕಟ್ಟಬಲ್ಲ ಕೆಲಸಗಳೂ ಸಾಕಷ್ಟಿವೆ. ಹಾಗೆ ನೋಡಿದರೆ, ಬೆವರು ಹರಿಸಿ ಸಂಪಾದಿಸುವ ಕ್ಷೇತ್ರದ ಪಾಲೇ ದೊಡ್ಡದಿದೆ. ಅಲ್ಲಿ ಫಿಟ್ನೆಸ್ಸೇ ಫಿಲಾಸಫಿ. ಆ ತತ್ವಕ್ಕೆ ತಕ್ಕಂತೆ ದೇಹವನ್ನೂ, ದೈಹಿಕ ಸಾಮರ್ಥ್ಯವನ್ನೂ ರೂಪಿಸಿಕೊಂಡರೆ, ಅಲ್ಲಿ ಅರಳಿಕೊಳ್ಳುವ ಅವಕಾಶಗಳಿಗೆ ಲೆಕ್ಕವೇ ಇಲ್ಲ.

ಇಲ್ಲಿ ಯಾರೂ ದಡ್ಡರಿಲ್ಲ…: ಚೆನ್ನಾಗಿ ಓದಿದವನಿಗೆ ಮಾತ್ರವೇ ಒಳ್ಳೆಯ ಭವಿಷ್ಯ ಎಂಬ ಮಾತು ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇವರ ದೇಹದಾಡ್ಯì ಟ್ಯಾಲೆಂಟ್‌ಗೆ, ದೈಹಿಕ ಶಕ್ತಿಯ ಬಲಕ್ಕೆ ಓದು ಪೂರಕವಾಗಿದ್ದರೆ, ಇಂಥವರ ಗುರಿ ಬಹಳ ಸಲೀಸು. ಐನ್‌ಸ್ಟಿನ್‌ ಹೇಳಿದ ಹಾಗೆ, ನಾವು ಇವರನ್ನೆಲ್ಲ ಮೀನು ಎಂದು, ಇವರು ಸಮುದ್ರದಲ್ಲಿದ್ದರೂ ಮರ ಹತ್ತಲೇಬೇಕೆಂದು ನಿರೀಕ್ಷಿಸಿಬಿಟ್ಟರೆ, ಇವರು ತಮ್ಮನ್ನು ದಡ್ಡರೆಂದೇ ಭಾವಿಸಿಕೊಳ್ಳುವರು. ಕ್ರೀಡೆಯೋ, ಫಿಟ್ನೆಸೊ… ಇವರು ನೆಚ್ಚಿಕೊಂಡ ಟ್ಯಾಲೆಂಟ್‌ಗೆ ನೀರೆರೆಯುತ್ತಾ ಹೋದಲ್ಲಿ, ಇವರು ಬೇರೆಲ್ಲರಿಗಿಂತಲೂ ಮೊದಲೇ ಗುರಿ ಮುಟ್ಟುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.ಐನ್‌ಸ್ಟಿನ್‌ ಅದಕ್ಕೇ ಮುಂದುವರಿಸಿ ಹೇಳಿದ್ದು, “ದಡ್ಡ ಯಾವತ್ತೂ ದಡ್ಡನಲ್ಲ. ಈ ಭೂಮಿ ಮೇಲೆ ಯಾರೂ ದಡ್ಡರಿಲ್ಲ…’ ಅಂತ.

ಫಿಟ್‌ ಆಗಿದ್ದರೆ, ಬದುಕೂ ಫಿಟ್‌!
1. ಸೈನಿಕ: 
ಸೈನ್ಯದಲ್ಲಿ ಹೆಚ್ಚು ಪ್ರಾಶಸ್ತ್ಯ ಸಿಗುವುದೇ ದೈಹಿಕ ಬಲಾಡ್ಯರಿಗೆ. ಗಡಿಗಳಲ್ಲಿ, ಯುದ್ಧ ಕಣದಲ್ಲಿ ದಣಿವರಿಯದೇ ದುಡಿಯುವ ಕಸುವು ಅವರಲ್ಲಿರಬೇಕಾಗುತ್ತದೆ. ಒಳ್ಳೆಯ ಫಿಟ್ನೆಸ್‌ ಜತೆಗೆ ಪಿಯುಸಿಯೋ, ಪದವಿಯೋ ಮುಗಿಸಿದರೆ, ಸೈನ್ಯದ ಬಾಗಿಲು ತೆರೆಯಲು ಹೆಚ್ಚು ಕಷ್ಟಪಡಬೇಕಿಲ್ಲ. ಎನ್‌ಸಿಸಿ ತರಬೇತಿ ಪಡೆದವರಿಗೆ, ಸೈನ್ಯದ ದಾರಿ ಸುಲಭ.

2. ಕ್ರೀಡಾಪಟು: ಹಾಕಿ, ಕಬಡ್ಡಿ, ಕ್ರಿಕೆಟ್‌, ವಾಲಿಬಾಲ್‌, ಫ‌ುಟ್‌ಬಾಲ್‌, ಚೆಸ್‌, ಟೇಬಲ್‌ ಟೆನ್ನಿಸ್‌, ಬ್ಯಾಡ್ಮಿಂಟನ್‌… ಹೀಗೆ ಬೇರೆ ಬೇರೆ ಕ್ರೀಡೆಗಳಲ್ಲಿ ಆಸಕ್ತಿ ಇದ್ದರೆ, ಅದನ್ನು ವೃತ್ತಿಪರವಾಗಿ ಕಲಿಯಬಹುದು. ಆ ಮೂಲಕ ಕ್ರೀಡಾಪಟು, ದೈಹಿಕ ಶಿಕ್ಷಕ, ಪರ್ಸನಲ್‌ ಕೋಚ್‌ ಮುಂತಾದ ಉದ್ಯೋಗಗಳನ್ನು ಆರಿಸಿಕೊಳ್ಳಬಹುದು. ಸಮರ್ಪಣಾ ಭಾವದಿಂದ ತೊಡಗಿಸಿಕೊಂಡರೆ, ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನೂ ಮಾಡಬಹುದು.

3. ಅಗ್ನಿಶಾಮಕ ದಳ: ಮನೆ, ಫ್ಯಾಕ್ಟರಿ ಕಚೇರಿ ಸ್ಥಳ… ಹೀಗೆ ಎಲ್ಲಿ ಬೆಂಕಿ ಕಾಣಿಸಿಕೊಂಡರೂ ಮೊದಲು ಕರೆ ಹೋಗುವುದು ಅಗ್ನಿಶಾಮಕ ದಳಕ್ಕೆ. ಸಮಯಕ್ಕೆ ಸರಿಯಾಗಿ ಧಾವಿಸಿ, ಸಂತ್ರಸ್ತರನ್ನು ಪ್ರಾಣಾಪಾಯದಿಂದ ಹೊರ ತರುವ, ಆಸ್ತಿ-ಪಾಸ್ತಿಯನ್ನು ರಕ್ಷಿಸುವ ಜವಾಬ್ದಾರಿ ಅವರದ್ದಾಗಿರುತ್ತದೆ. ಬಹುಮಹಡಿ ಕಟ್ಟಡಗಳನ್ನು ಹತ್ತುವ, ಪ್ರಾಣವನ್ನು ಪಣಕ್ಕಿಟ್ಟು ಬೆಂಕಿಯ ವಿರುದ್ಧ ಸೆಣಸುವ ಕೆಲಸ ಸಾಮಾನ್ಯದ್ದಲ್ಲ. ಇದು ದೈಹಿಕ ಸಾಮರ್ಥ್ಯ ಚೆನ್ನಾಗಿರುವವರಿಗಷ್ಟೇ ಆಗುವಂಥ ಕೆಲಸ.

4. ಲೈಫ್ ಗಾರ್ಡ್‌ (ಜೀವರಕ್ಷಕ ಸಿಬ್ಬಂದಿ): ಜಲಪಾತ, ಸಮುದ್ರ ತೀರ, ರಿವರ್‌ ರ್ಯಾಫ್ಟಿಂಗ್‌, ಸ್ಕೂಬಾ ಡೈವಿಂಗ್‌… ಹೀಗೆ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸೂಕ್ತ ಮಾಹಿತಿ, ರಕ್ಷಣೆ ನೀಡುವವರು ಲೈಫ್ಗಾರ್ಡ್‌ ಅಥವಾ ಜೀವರಕ್ಷಕ ದಳದವರು. ನೀರಿಗಿಳಿದು ಆಡುವಾಗ, ಈಜುವಾಗ, ದೋಣಿಯಲ್ಲಿ ಹೋಗುವಾಗ ಯಾವುದೇ ಅಪಾಯ ಎದುರಾದಾಗ, ಲೈಫ್ಗಾರ್ಡ್‌ಗಳು ನೆರವಿಗೆ ಬರುತ್ತಾರೆ. ನೀರಿನಲ್ಲಿ ಸಾಹಸ ಮೆರೆಯಲು, ದೈಹಿಕ ಸಾಮರ್ಥ್ಯದ ಜೊತೆಗೆ, ಮಾನಸಿಕ ಶಕ್ತಿಯೂ ಬೇಕು. ಅಂಥ ಸದೃಢ ಈಜುಪಟುಗಳಿಗೆ ಈ ಕೆಲಸ ಹೇಳಿಮಾಡಿಸಿದ್ದು.

5. ಜಿಮ್‌ ಟ್ರೇನರ್‌: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಸಿನಿಮಾ ಹೀರೋನಂತೆ ಕಾಣಬೇಕೆಂದು, ಸಿಕ್ಸ್‌ಪ್ಯಾಕ್‌ನ ಹಿಂದೆ ಬೀಳುತ್ತಾರೆ. ದಿನವೂ ಜಿಮ್‌ನಲ್ಲಿ ಬೆವರು ಸುರಿಸಿ, ಫಿಟ್‌ನೆಸ್‌ಗಾಗಿ ಶ್ರಮ ಪಡುತ್ತಾರೆ. ಸೆಲೆಬ್ರಿಟಿಗಳು, ಆಟಗಾರರು ಮುಂತಾದವರು ಪ್ರತ್ಯೇಕವಾಗಿ ಜಿಮ್‌ ಟ್ರೇನರ್‌ಗಳನ್ನೇ ನೇಮಿಸಿಕೊಳ್ಳುತ್ತಾರೆ.

6. ನೃತ್ಯ ಶಿಕ್ಷಕ: ಶಾಲೆಗೆ ಹೋಗುವ ಮಕ್ಕಳನ್ನು ಕೇಳಿ ನೋಡಿ: “ಭರತನಾಟ್ಯ ಕಲಿಯುತ್ತಿದ್ದೇನೆ, ಸಾಲ್ಸಾ ಕ್ಲಾಸ್‌ಗೆ ಹೋಗುತ್ತೇನೆ, ವೆಸ್ಟರ್ನ್ ಡ್ಯಾನ್ಸ್‌ ಮಾಡುತ್ತೇನೆ’ ಎಂದು ಹೇಳುತ್ತಾರೆ. ಇಂದು ಡ್ಯಾನ್ಸ್‌ ಎಂಬುದು ಅನೇಕರ ಮೆಚ್ಚಿನ ಹವ್ಯಾಸ. ಭರತನಾಟ್ಯ, ವೆಸ್ಟರ್ನ್, ಕಥಕ್‌, ಕಥಕ್ಕಳಿ, ಯಕ್ಷಗಾನ… ಹೀಗೆ ವಿವಿಧ ನೃತ್ಯಪ್ರಾಕಾರಗಳಲ್ಲಿ ಪರಿಣತಿ ಪಡೆದಿದ್ದರೆ, ಸ್ವಂತ ನೃತ್ಯಶಾಲೆಯನ್ನು ತೆರೆಯಬಹುದು. ನೃತ್ಯ ಶಿಕ್ಷಕರಿಗೂ ಒಳ್ಳೆಯ ಬೇಡಿಕೆ ಇದೆ.

* ಜೆ. ಪುಷ್ಪಲತಾ

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.