ಕನಸುಗಳನ್ನು ಕೊಲ್ಲುವ ಐದು ವಿಧಾನಗಳು
Team Udayavani, Jan 10, 2017, 3:45 AM IST
ಬೆಲ್ ಪೆಸೆ
ಬ್ರೆಜಿಲ್‌ನ ಹತ್ತು ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ವಯಸ್ಸಿನ್ನೂ ಮೂವತ್ತು ದಾಟಿಲ್ಲ. ಮೂರು ಬೆಸ್ಟ್ ಸೆಲ್ಲಿಂಗ್ ಪುಸ್ತಕಗಳ ಲೇಖಕಿ ಮತ್ತು ಒಂದು ಸ್ಕೂಲ್ ನಡೆಸುತ್ತಿರುವ ಬ್ಯುಸಿನೆಸ್ ವುಮೆನ್. ಆಕೆ ಟೆಡ್ ಡಾಟ್ ಕಾಮ್‌ನಲ್ಲಿ ಮಾಡಿದ 2015ರ ಅತ್ಯಂತ ಜನಪ್ರಿಯ ಭಾಷಣದ ಭಾವಾನುವಾದ.
ಜನರು ಹೇಗೆ ಕನಸು ನನಸು ಮಾಡುತ್ತಾರೆ ಅಂತ ಅರ್ಥ ಮಾಡಿಕೊಳ್ಳಲು ನಾನು ನನ್ನ ಎರಡು ವರ್ಷಗಳನ್ನು ಕಳೆದಿದ್ದೇನೆ. ಹಾಗಾಗಿ ನಾನೀಗ ಕನಸುಗಳನ್ನು ನನಸು ಮಾಡಲು ಹಿಡಿಯಬಾರದ ಐದು ದಾರಿಗಳ ಬಗ್ಗೆ ಮಾತಾಡುತ್ತಿದ್ದೇನೆ.
ಒಂದು
ಒಂದೇ ರಾತ್ರಿಯಲ್ಲಿ ಗೆಲ್ಲುವ ಆಸೆ.
ಒಂದು ಕತೆ ನೀವು ಕೇಳಿರಬಹುದು. ಒಂದು ದಿನ ಒಬ್ಬ ಹುಡ್ಗ ಒಂದು ಆ್ಯಪ್ ಸೃಷ್ಟಿಸಿದ ಮತ್ತು ಆ ಆ್ಯಪ್ ಅನ್ನು ದೊಡ್ಡದೊಂದು ಕಂಪನಿ ತುಂಬಾ ದುಡ್ಡು ಕೊಟ್ಟು ಖರೀದಿಸಿತು. ಒಂದೇ ದಿನದಲ್ಲಿ ಅವನು ಕೋಟ್ಯಧಿಪತಿಯಾದ.
ಈ ಕತೆ ನಿಜವಾಗಿರಬಹುದು. ಆದರೆ ಈ ಕತೆಯನ್ನು ಅರ್ಧವಷ್ಟೇ ಹೇಳಲಾಗಿದೆ. ಬಾಕಿ ಉಳಿದದ್ದನ್ನು ತಿಳಿದುಕೊಳ್ಳಲು ಹೊರಟರೆ ನಿಮಗೆ ಅಚ್ಚರಿಯಾಗುತ್ತದೆ. ಈ ಹುಡ್ಗ ಭಯಂಕರ ದುಡ್ಡು ತಂದುಕೊಟ್ಟ ಆ್ಯಪ್ ಸೃಷ್ಟಿಸುವ ಮುನ್ನ ಅದೇ ಥರದ 30 ಆ್ಯಪ್ ಸೃಷ್ಟಿಸಿರುತ್ತಾನೆ. ಅವೆಲ್ಲವೂ ತೋಪಾಗಿರುತ್ತದೆ. ಆದರೆ ಅವನು ಆ ವಿಷ್ಯದಲ್ಲಿ ಮಾಸ್ಟರ್ ಆಗಿರುತ್ತಾನೆ. ಅವನ ಇಪ್ಪತ್ತು ವರ್ಷಗಳನ್ನು ಅದೊಂದೇ ಕೆಲಸದಲ್ಲಿ ಕಳೆದಿರುತ್ತಾನೆ.
ಇಂಟರೆಸ್ಟಿಂಗ್ ಅಲ್ವಾ. ನನ್ನದೇ ಕತೆ ತೆಗೆದುಕೊಳ್ಳಿ. ನಾನೊಂದು ಪುಟ್ಟದಾದ ಕುಟುಂಬದಲ್ಲಿ ಬದುಕುತ್ತಿರುವವಳು. ಉನ್ನತ ಅಧ್ಯಯನಕ್ಕಾಗಿ ಯುನಿವರ್ಸಿಟಿಗೆ ಸೇರಬೇಕಾಗಿತ್ತು. ಇನ್ನೆರಡು ವಾರದಲ್ಲಿ ಪರೀಕ್ಷೆ ಇದೆ. ನಾನು ತಯಾರಿ ಶುರು ಮಾಡಿದೆ. ಎಕ್ಸಾಮಲ್ಲಿ ಪಾಸಾಗಿ ಸೀಟ್ ಗಿಟ್ಟಿಸಿದೆ. ಎಲ್ಲರೂ ಇದು ನನ್ನ ಒಂದು ದಿನದ ಶ್ರಮ ಅಂತಂದುಕೊಂಡರು. ಆದರೆ ನಾನು ಅದಕ್ಕಾಗಿ ನನ್ನ ಜೀವನದ ಹದಿನೇಳು ವರ್ಷಗಳನ್ನು ಕಳೆದಿದ್ದೇನೆ. ನಿಮ್ಮ ಒಂದು ದಿನದ ಯಶಸ್ಸಿದೆಯಲ್ಲ ಅದರ ಹಿಂದೆ ನಿಮ್ಮ ಅಲ್ಲಿಯವರೆಗಿನ ಜೀವನ ಬದುಕಿನ ಪಾಠಗಳ ಕೊಡುಗೆ ಇದೆ.
ಎರಡು
ಯಾರೋ ಒಬ್ಬರು ಒಳ್ಳೆ ದಾರಿ ತೋರಿಸುತ್ತಾರೆ.
ದಾರಿ ಕಾಣದೆ ಗೊಂದಲದಲ್ಲಿ ನಿಂತಿದ್ದಾಗ ಯಾರೋ ಒಬ್ಬರ ಸಹಾಯಕ್ಕೆ ನಿರೀಕ್ಷೆ ಮಾಡುವುದು ಮನುಷ್ಯ ಸಹಜ ಗುಣ. ಕುಟುಂಬದವರು, ಫ್ರೆಂಡು ಎಲ್ಲರೂ ನಾವು ದಾರಿಯಲ್ಲಿ ಹೋಗಬೇಕು ಅನ್ನುವ ಬಗ್ಗೆ ಒಂದು ಅಭಿಪ್ರಾಯ ಹೊಂದಿರುತ್ತಾರೆ. ಅವರು ಯಾವುದೋ ಒಂದು ದಾರಿ ತೋರಿಸುತ್ತಾರಲ್ಲ, ಅದರಲ್ಲಿ ಸಾಗುತ್ತಿದ್ದಂತೆಯೇ ನಿಮಗೆ ನೀವು ಹೋಗಬೇಕಾದ ದಾರಿ ಯಾವುದು ಅಂತ ಹೊಳೆಯಬಹುದು. ಈ ಜಗತ್ತಿನಲ್ಲಿ ಯಾರು ಕೂಡ ನೀವೇನು ಮಾಡಬೇಕು ಅಂತ ನಿರ್ಧರಿಸಲು ಸಾಧ್ಯವಿಲ್ಲ. ನಿಮಗೆ ಬೇಕಾದ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕು.
ಮೂರು
ಬೆಳೆದೆ ಅನ್ನುವಾಗ ಸೆಟ್ಲ ಆಗಿಬಿಡಬೇಕು.
ಲೈಫು ಸುಂದರವಾಗಿದೆ. ಒಳ್ಳೆಯ ಟೀಮ್ ಇದೆ. ಆರ್ಥಿಕವಾಗಿಯೂ ಒಳ್ಳೆ ಸ್ಥಾನದಲ್ಲಿದ್ದೀರಿ. ಆ ಹೊತ್ತಿಗೆ ಸೆಟ್ಲ ಆಗಬೇಕು ಅನ್ನೋ ಸಲಹೆ ಸಿಗುತ್ತದೆ. ನಾನು ಮೊತ್ತ ಮೊದಲ ಪುಸ್ತಕ ಬರೆದಾಗ ಪ್ರಕಾಶಕರು ಸಿಗಲಿಲ್ಲ. ಅದನ್ನು ಓದುಗರಿಗೆ ತಲುಪಿಸಲು ತುಂಬಾ ಕಷ್ಟ ಪಟ್ಟೆ. ಸಮಯ ಕಳೆದಂತೆ 30 ಲಕ್ಷ ಜನ ಆ ಪುಸ್ತಕವನ್ನು ಡೌನ್‌ಲೋಡ್ ಮಾಡಿದರು. 50000 ಸಾವಿರ ಪ್ರತಿಗಳು ಮಾರಾಟವಾದವು. ಎರಡನೇ ಪುಸ್ತಕ ಬರೆದಾಗ ಓದುಗರ ಪ್ರತಿಕ್ರಿಯೆ ಮೊದಲಿಗಿಂತ ಚೆನ್ನಾಗಿರುತ್ತದೆ. ಪರ್ವಾಗಿಲ್ಲ ಅಂತ ಸುಮ್ಮನಿರುವುದಲ್ಲ. ಎತ್ತರಕ್ಕೆ ಸಾಗುತ್ತಿದ್ದಾಗ ಜಾಸ್ತಿ ಶ್ರಮಿಸಬೇಕು ಮತ್ತು ಇನ್ನೂ ಎತ್ತರಕ್ಕೆ ಸಾಗುವ ಪ್ರಯತ್ನ ಮಾಡಬೇಕು. ನಾನು ಮತ್ತೂಂದು ಪುಸ್ತಕ ಬರೆದಾಗ ನನ್ನ ದೇಶದ ಪ್ರತಿಯೊಂದು ರಾಜ್ಯಕ್ಕೂ ಹೋಗಿ ಬಂದೆ. ಬದುಕಲ್ಲಿ ಸೆಟ್ಲ ಆಗುವುದು ಅಂತೇನಿಲ್ಲ.
ನಾಲ್ಕು
ತುಂಬಾ ಇಂಪಾರ್ಟೆಂಟು. ತಪ್ಪು ಬೇರೆಯವರದು ಅನ್ನೋ ನಂಬಿಕೆ.
ಒಂದೊಳ್ಳೆ ಐಡಿಯಾ ಇತ್ತು. ಆದರೆ ಯಾರೂ ದುಡ್ಡು ಹಾಕೋಕೆ ಮುಂದೆ ಬರಲಿಲ್ಲ. ಒಳ್ಳೆ ಪ್ರೊಡಕ್ಟ್ ತಯಾರಿಸಿದ್ವಿ. ಆದರೆ ಮಾರ್ಕೆಟ್ ಡೌನ್ ಇತ್ತು. ಹೀಗೆ ಮಾತಾಡೋರು ಎಲ್ಲಾ ಕಡೆ ಇರ್ತಾರೆ. ನಿಮ್ಮ ಕನಸು ಅಂತಾದರೆ ಆ ಕನಸನ್ನು ನನಸು ಮಾಡುವುದು ನಿಮ್ಮ ಜವಾಬ್ದಾರಿ. ಯಾರೂ ದುಡ್ಡು ಹಾಕಿಲ್ಲ ಅಂದ್ರೆ, ಯಾರೂ ಉತ್ಪನ್ನ ತೆಗೆದುಕೊಂಡಿಲ್ಲ ಅಂದ್ರೆ ಎಲ್ಲೋ ಒಂದು ಕಡೆ ನಿಮ್ಮದೇ ತಪ್ಪಾಗಿರಬಹುದು. ಯಾರೂ ಕೂಡ ಒಬ್ಬರೇ ನಿಂತು ಯುದ್ಧ ಗೆಲ್ಲಕಾಗಲ್ಲ. ಅದಕ್ಕಾಗಿ ದುಡಿಯಬೇಕು. ನಿಮ್ಮ ಕನಸಿಗೆ ನೀವೇ ಹೊಣೆ.
ಐದು
ಒಂದೇ ಕನಸು ಒಳ್ಳೆಯದು.
ಒಂದು ಜಾಹೀರಾತು ನೋಡಿದೆ. ಅದರಲ್ಲಿ ಒಂದಷ್ಟು ಜನ ಫ್ರೆಂಡುÕ ಬೆಟ್ಟ ಹತ್ತುತ್ತಿದ್ದಾರೆ. ಕಡಿದಾದ ಬೆಟ್ಟ. ಸುಲಭವಾಗಿ ಹತ್ತಲಾಗದ ಬೆಟ್ಟ. ಎದ್ದು ಬಿದ್ದು ಹೇಗೋ ಬೆಟ್ಟದ ತುದಿಗೇ ತಲುಪಿಯೇ ಬಿಟ್ಟರು. ಈಗ ಸಂಭ್ರಮಿಸಬೇಕು ತಾನೇ? ನಾವು ಸಾಧಿಸಿಬಿಟ್ಟೆವು ಅಂತ ಕುಣಿದು ಕುಪ್ಪಳಿಸಿದರು. ಒಂದು ಕ್ಷಣದ ನಂತರ ಒಬ್ಬ ಮತ್ತೂಬ್ಬನನ್ನು ನೋಡಿದೆ. ಓಕೆ ಲೆಟ್ಸ್ ಗೋ ಡೌನ್.
ಬದುಕಲ್ಲಿ ಬರೀ ಗುರಿಗಳೇ ಎಲ್ಲಾ ಅಲ್ಲ. ಬದುಕು ಒಂದು ಪಯಣ. ಒಂದು ಗುರಿ ಇಟ್ಟುಕೊಂಡರೆ ಅದನ್ನು ಸಂಭ್ರಮಿಸಬೇಕು. ಜನ ತಮ್ಮ ಆಸೆಯನ್ನು ಕನಸುಗಳು ಅಂದೊRàತಾರೆ. ಅದನ್ನು ಸಾಧಿಸಿದಾಗ ಜೀವನ ಎಲ್ಲಾ ಸಂತೋಷ, ಖುಷಿಗಳು ಅಲ್ಲಿ ಸಿಗುತ್ತವೆ ಅಂದೊRàತಾರೆ. ಹಾಗೆಲ್ಲಾ ಅಲ್ಲ. ಕನಸು ನನಸಾಗಿಸಿದ ಕ್ಷಣ ಕಡೇತನಕ ನೆನಪಲ್ಲಿ ಉಳಿಯುತ್ತದೆ ಅಷ್ಟೇ. ಅದೇ ಬದುಕಲ್ಲ, ಮತ್ತೂಂದು ಕನಸು ಶುರುವಾಗಬೇಕು. ಪ್ರತೀ ಹೆಜ್ಜೆ ಇಟ್ಟಾಗಲೂ ಖುಷಿಯಾಗಬೇಕು.
ಬದುಕಿನ ಪಯಣ ಸಿಂಪಲ್ ಆದದ್ದು. ಒಂದೊಂದು ಹೆಜ್ಜೆಗಳಿಂದ ಆ ಪಯಣ ಸುಂದರವಾಗುತ್ತದೆ. ಪ್ರತಿಯೊಂದು ಹೆಜ್ಜೆಯಲ್ಲೂ ಕಲಿಯೋದು ಏನೋ ಇರುತ್ತದೆ. ಕಲಿತಾಗಲೆಲ್ಲಾ ಸಂಭ್ರಮಿಸುವುದನ್ನು ಕಲಿಯಿರಿ. ಪಯಣವನ್ನು ನೀವು ಎಂಜಾಯ್ ಮಾಡುತ್ತೀರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.