ಸಂಘದಿಂದ ಸಮಾಜಕ್ಕೆ
Team Udayavani, Mar 3, 2020, 6:02 AM IST
ಶಿಕ್ಷಕರು ಅಂದರೆ ಬರೀ ಪಾಠ ಮಾಡುವುದು. ಮೀಟಿಂಗ್‌ಗೆ ಹೋಗುವುದು. ರಜೆಯಲ್ಲಿ ಮಜಾ ಮಾಡುವುದು. ಒಟ್ಟಾರೆ ವರ್ಷ ಪೂರ್ತಿ ಆರಾಮಕ್ಕೆ ಇರುವುದು ಅನ್ನೋ ಮನೋಭಾವ ಸುಮಾರು ಜನರಲ್ಲಿ ಇದೆ. ಆದರೆ, ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಕೊಪ್ಪಳದ ಈ ಶಿಕ್ಷಕರ ಸಂಘವೇ ಉದಾಹರಣೆ. ತಾವೇ ನಾಟಕವಾಡಿ, ಬಂದ ಮೊತ್ತಕ್ಕೆ ಕೈಯಿಂದ ಮತ್ತಷ್ಟು ಹಣ ಹಾಕಿ ಸಮಾಜ ಸೇವೆ ಮಾಡುತ್ತಿದ್ದಾರೆ.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವಂತೆ ಸಮಾಜಕ್ಕೆ ಏನಾದರೂ ಅಳಿಲು ಸೇವೆ ಮಾಡಬೇಕು ಎಂಬ ಹಂಬಲವನ್ನು ಹಾಗೇ ಮನಸ್ಸಲ್ಲಿ ಇಟ್ಟುಕೊಳ್ಳಲಿಲ್ಲ ಈ ಕೊಪ್ಪಳ ಜಿಲ್ಲೆಯ ಸಮಾನ ಮನಸ್ಕ ಶಿಕ್ಷಕರು. ಬದಲಾಗಿ, ಒಟ್ಟುಗೂಡಿ ಶಿಕ್ಷಕ ಕಲಾ ಸಂಘ ಕಟ್ಟಿ, ಅದರಿಂದಲೇ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಕಾಯಕದಲ್ಲೇ ಕೈಲಾಸ ಕಾಣುವಂಥ ಮನಸ್ಸುಗಳನ್ನು ಗುರುತಿಸಿ, ಅವರನ್ನು ಕರೆ ತಂದು ಸನ್ಮಾನಿಸಿ, ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದೆ. ಅದಕ್ಕಾಗಿ ಆಯ್ಕೆ ಮಾಡಿಕೊಂಡದ್ದು ರಂಗಭೂಮಿ ಕಲಾಪ್ರಾಕಾರವನ್ನು. ಸದಸ್ಯರೆಲ್ಲರೂ ಸೇವಾ ಮನೋಭಾವನೆಯಿಂದ ಸ್ವಂತ ಖರ್ಚಿನಲ್ಲಿ ಒಂದು ನಾಟಕ ಆಡುತ್ತಾರೆ. ಅದರಿಂದ ಬಂದ ಹಣವನ್ನು ಸಾಧಕರಿಗೆ, ಬಡವರಿಗೆ, ಅನಾರೋಗ್ಯಕ್ಕೀಡಾದವರಿಗೆ, ಸಂತ್ರಸ್ತ ಕುಟುಂಬಗಳಿಗೆ ನೀಡುವುದು ಕಳೆದ ಹತ್ತು ವರ್ಷಗಳಿಂದ ಇಂಥದೊಂದು, ರೂಢಿ ಸಮಾಜಮುಖೀ ಕಾರ್ಯದಲ್ಲಿ ತಲ್ಲಿನವಾಗಿರುವ ಈ ಸಂಘ, ರಂಗಭೂಮಿ, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಪರಿಸರ ಕಾಳಜಿಯ ಜೊತೆಗೆ ಮಕ್ಕಳಿಗೆ ರಂಗಭೂಮಿಯ ತರಬೇತಿ ನೀಡುತ್ತಿದೆ. ಈ ಶಿಕ್ಷಕರು, ಬೇಸಿಗೆ ರಜೆ ಬಂದರೆ ಸಮ್ಮನೆ ಕೂರಲ್ಲ. ಎಲ್ಲರೂ ಒಟ್ಟುಗೂಡಿ, ಸಭೆ ನಡೆಸಿ, ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿ ಅಣಿಗೊಳ್ಳುತ್ತಾರೆ.
ಸಂಘ ಕಟ್ಟಲು ಪ್ರೇರಣೆ
ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದಾಗ, ಅವರ ಅಂತ್ಯಸಂಸ್ಕಾರಕ್ಕೆ ರಾಮಣ್ಣ ಶ್ಯಾವಿ, ಶಿವನಗೌಡ, ಪ್ರಾಣೇಶ ಪೂಜಾರ ಎಂಬ ಶಿಕ್ಷಕರು ಹೋಗಿದ್ದರು. ಅಲ್ಲಿ ವಿರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ಸಂಗೀತ ಕಲೆ ನೋಡಿ, ಈ ಮಕ್ಕಳೆಲ್ಲ ಜಗತ್ತು ನೋಡದೇ ಇದ್ದರೂ ಇಷ್ಟೆಲ್ಲ ಸಾಧನೆ ಮಾಡಿದ್ದಾರೆ. ದೇಹದ ಎಲ್ಲಾ ಅಂಗಗಳು ಸರಿಯಾಗೇ ಇರುವ ನಾವು ಏಕೆ ಈ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬಾರದು ಎಂದು ಆಲೋಚಿಸಿದರು. ಕೂಡಲೇ ಅವರಿಗೆ ಪುಟ್ಟಜ್ಜನ ಸ್ಮರಣಾರ್ಥ ಕಲಾ ಸಂಘ ಕಟ್ಟೋಣ ಎಂಬ ಐಡಿಯಾ ಹೊಳೆಯಿತು. ಊರಿಗೆ ಮರಳಿ, ಸಮಾನ ಮನಸ್ಕ ಶಿಕ್ಷಕರಾದ ರಮೇಶ ಪೂಜಾರ, ಮಹೇಶ್ವರಿ, ಪರುಶುರಾಮ, ದೇವರಾಜ್, ಗವಿಸಿದ್ದಪ್ಪ ಕೊನಸಾಗರ, ಮುನಿರಾಜ ಮತ್ತಿತರ ಸುಮಾರು 25ಕ್ಕೂ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿಕೊಂಡು 2010 ರಲ್ಲಿ ಶಿಕ್ಷಕರ ಕಲಾ ಸಂಘ ಆರಂಭಿಸಿದರು.
ಈಗಾಗಲೇ ಗಂಡುಗಲಿ ಕುಮಾರರಾಮ, ರಕ್ತರಾತ್ರಿ, ಟಿಪ್ಪು ಸುಲ್ತಾನ್, ಸಿಂಧೂರ ಲಕ್ಷ್ಮಣ, ಎಚ್ಚೆಮ ನಾಯಕ, ಸಂಗೊಳ್ಳಿ ರಾಯಣ್ಣ, ಸಿಂಹಾಸನ ಖಾಲಿ ಇದೆ, ಶಿವರಾತ್ರಿ, ರಾವಿ ನದಿಯ ದಂಡೆಯ ಮೇಲೆ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ನಾಟಕದಿಂದ ಆದ ಕಲೆಕ್ಷನ್‌ನಿಂದ ಬಂದ ಹಣದಲ್ಲಿ ಇದುವರೆಗೆ ವಿರೇಶ್ವರ ಪುಣ್ಯಾಶ್ರಮಕ್ಕೆ 35 ಸಾವಿರ, ಸಾಲುಮರದ ತಿಮ್ಮಕ್ಕನಿಗೆ 80 ಸಾವಿರ, ಕಷ್ಟದಲ್ಲಿದ್ದ ಶಿಕ್ಷಕರ ಕುಟುಂಬಕ್ಕೆ, ವಿಕಲ ಚೇತನ ಮಕ್ಕಳಿಗೆ ಹೀಗೆ ಹಲವು ಮಂದಿಗೆ ಈ ಶಿಕ್ಷಕ ಸಂಘ ಧನಸಹಾಯ ಮಾಡಿದೆ.
ಮಕ್ಕಳಿಗಾಗಿ ರಂಗಭೂಮಿ
ಮಕ್ಕಳಿಗೆ ಶಾಲೆಯಲ್ಲಿ ಪ್ರಯೋಗಾತ್ಮಕವಾಗಿ ರಂಗಭೂಮಿಯ ತರಬೇತಿ ನೀಡುತ್ತಾ, ಮಕ್ಕಳಿಂದ ಹೋರಾಟದ ಹಾದಿಯಲ್ಲಿ, ಬಬ್ರುವಾಹನ, ಕಿತ್ತೂರು ರಾಣಿ ಚೆನ್ನಮ್ಮ, ಕರುಳಿನ ಕೂಗು, ಸಂಗೊಳ್ಳಿ ರಾಯಣ್ಣದಂಥ ಕಿರು ನಾಟಕಗಳನ್ನು ಪ್ರದರ್ಶಿಸಿ ಮಕ್ಕಳಲ್ಲೂ ರಂಗಾಸಕ್ತಿ ಹೆಚ್ಚಿಸಿದ್ದಾರೆ. ಸಂಘದ ಸಾಮಾಜಿಕ, ಶೈಕ್ಷಣಿಕ, ಪರಿಸರ ಕಾರ್ಯಗಳನ್ನ ಮೆಚ್ಚಿ ಅಜೀಂ ಪ್ರೇಮಿj ಫೌಂಡೇಷನ್ ಕೂಡಾ ಕೈ ಜೋಡಿಸಿದೆ.ಈ ಶಿಕ್ಷಕ ಸಂಘದ ನಾಟಕಗಳು ರಾಷ್ಟ್ರೀಯ ನಾಟಕೋತ್ಸವ, ಕನಕಗಿರಿ ಉತ್ಸವ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ದಸರಾ ಉತ್ಸವದಲ್ಲಿ ಪ್ರದರ್ಶನಗೊಂಡಿವೆ. “ಶೈಕ್ಷಣಿಕ ಚಟುವಟಿಕೆಗಳನ್ನ ರಂಗಭೂಮಿಯ ಮೂಲಕ ಪ್ರಚುರ ಪಡಿಸಿ, ಅದರಿಂದಲೇ ಸಮಾಜಕ್ಕೊಂದು ಸಂದೇಶ ಕೊಡುವುದು, ಸೇವೆ ಮಾಡುವುದನ್ನು ನೋಡಿ ಆಶ್ಚರ್ಯವಾಯಿತು. ರಾಜ್ಯದಲ್ಲಿಯೇ ಇದೊಂದು ಅತ್ಯುತ್ತಮ ಹವ್ಯಾಸಿ ರಂಗ ತಂಡ ಎಂದು ರಂಗಕರ್ಮಿ, ನಟ ಮಂಡ್ಯ ರಮೇಶ್ ಗುಣಗಾನ ಮಾಡಿದ್ದೂ ಇದೆ.
ಹಸಿರೀಕರಣ
ಶಿಕ್ಷಕರ ಸಂಘದ ಘನ ಉದ್ದೇಶಗಳಲ್ಲಿ ಒಂದು ಹಸಿರೀಕರಣ. ಈ ಕಾರ್ಯಕ್ಕೆ ಸಾಲುಮರದ ತಿಮ್ಮಕ್ಕರನ್ನು ಕರೆಸಿ, ಅವರಿಂದಲೇ ಸಸಿ ನೆಡಿಸುವ ಮೂಲಕ ಚಾಲನೆ ನೀಡಿದ್ದರು. ಸದಸ್ಯರು ಮೊದಲು ತಮ್ಮ ತಮ್ಮ ಶಾಲೆಗಳನ್ನು ಸಂಪೂರ್ಣ ಹಸಿರೀಕರಣ ಮಾಡಿಕೊಂಡು, ನಂತರ ಪ್ರತಿವರ್ಷ ಸರಕಾರಿ ಶಾಲೆಗಳನ್ನು ದತ್ತು ಪಡೆದು, ಅಲ್ಲಿ ಗಿಡನೆಟ್ಟು ಪೋಷಿಸುತ್ತಿದ್ದಾರೆ. ಜಿಲ್ಲೆಯ ಕಿಡದಾಳ, ಹ್ಯಾಟಿ, ಗಬ್ಬೂರು, ಬೂದಗುಂಪಾ, ಹನುಮನಹಳ್ಳಿ, ಕುಣಿಕೇರಾ, ಚಿಕ್ಕಸೂಳೆಕೆರೆ ತಾಂಡಾ, ಕವಳಿ ಶಾಲೆಗಳನ್ನು ದತ್ತು ಸ್ವೀಕರಿಸಿ ನೂರಾರು ಸಸಿಗಳನ್ನು ನೆಟ್ಟು ಬಂದಿದ್ದಾರೆ. ಇದರಲ್ಲಿ ಎಷ್ಟೋ ಶಾಲೆಗಳು ಈಗಾಗಲೇ ಸಂಪೂರ್ಣ ಹಸಿರೀಕರಣವಾಗಿವೆ. ಗಿಡಗಳ ಉಸ್ತುವಾರಿಯನ್ನು ಆಯಾ ಶಾಲೆಯ ವಿದ್ಯಾರ್ಥಿಗಳ ಸುಪರ್ದಿಗೆ ಕೊಡುವುದರಿಂದ ಅವರಲ್ಲಿ ಪರಿಸರ ಕಾಳಜಿ ಕೂಡ ಮೂಡುತ್ತದೆ. ಹಸಿರೀಕರಣವಾದ ಶಾಲೆಗಳ ಪೈಕಿ ಒಂದು ಶಾಲೆಯನ್ನು ಆಯ್ಕೆಮಾಡಿ “ವರ್ಷದ ಅತ್ಯುತ್ತಮ ಶಾಲೆ’ ಎಂಬ ಪ್ರಶಸ್ತಿಯನ್ನೂ ಈ ಸಂಘ ನೀಡುತ್ತಿದೆ. ಅಷ್ಟೇ ಅಲ್ಲದೆ, ನಗರಿಕರಣದಿಂದ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ, ಇನ್ನಿತರ ಸಣ್ಣ ಪಕ್ಷಿ ಸಂಕುಲದ ಉಳಿವಿಗಾಗಿ ಕೃತಕ ಗುಬ್ಬಚ್ಚಿ ಗೂಡುಗಳನ್ನು ತಯಾರಿಸಿ, 30 ಹಸಿರು ಶಾಲೆಗಳಿಗೆ ನೀಡಿದ್ದಾರೆ. ಬೇಸಿಗೆ ಸಮಯದಲ್ಲಿ ಗಿಡಗಳಿಗೆ ಪಾತ್ರೆಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕೆಲಸ ಕೂಡ ಈ ಶಿಕ್ಷಕರ ಸಂಘದ ಜವಾಬ್ದಾರಿಯಾಗಿದೆ. ಜೊತೆಗೆ ಆದರ್ಶ ರೈತರನ್ನು ಗುರುತಿಸಿ ಅವರಿಂದ ಕೃಷಿಯಲ್ಲಿ ಬಳಸಿದ ತಂತ್ರಜ್ಞಾನ, ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರದ ಕುರಿತು ಹಳ್ಳಿಗಳಲ್ಲಿ ರೈತರಿಗೆ ಉಪನ್ಯಾಸ ಕೊಡಿಸುತ್ತಿದ್ದಾರೆ.
ಶಾಲಾ ಶಿಕ್ಷಕರು, ಮನಸ್ಸು ಮಾಡಿದರೆ ಹೇಗೆಲ್ಲ ಸಮಾಜ ಸೇವೆ ಮಾಡಬಹುದು ಅನ್ನೋದಕ್ಕೆ ಇವರೇ ಉದಾಹರಣೆ.
ಬಸವರಾಜ ಎನ್ ಬೋದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.