ಒಂದು ಚಾನ್ಸ್ ಕೊಡಿ ಸಾರ್!
ಹಳ್ಳಿ ಹುಡುಗರ ಒಂದು ರಿಕ್ವೆಸ್ಟು
Team Udayavani, Jun 18, 2019, 5:00 AM IST
ಸಿಟಿ ವಿದ್ಯಾರ್ಥಿಗಳ ಡ್ರೆಸ್ಸು, ಅವರ ಇಂಗ್ಲಿಷು, ಅವರ ಕೈಯಲ್ಲಿನ ಸ್ಮಾರ್ಟ್‌ಫೋನು, ಅವರ ಶೋಕಿ- ಇವೆಲ್ಲವನ್ನೂ ಕಣ್‌ಕಣ್ ಬಿಟ್ಕೊಂಡು ನೋಡುತ್ತಾ, ತನ್ನ ಖಾಲಿ ಜೇಬಿಗೆ ಕೈಹಾಕುತ್ತಾನೆ, ಹಳ್ಳಿ ಹುಡುಗ. ಆಗಷ್ಟೇ ನಗರವನ್ನು ಕಂಡ ಅವನಲ್ಲಿ ಒಂದು ಭಯ. ಇವರ ನಡುವೆ ಇದ್ದು, ಓದಿ, ತಾನು ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಅವನ ಕಣ್ಣಲ್ಲಿ. ಸಿಟಿ ಮತ್ತು ಹಳ್ಳಿ ಹುಡುಗರ ನಡುವಿನ ಅಂತರ ಕಾಲೇಜು ಲೈಫಿನಲ್ಲಿ ಈಗಲೂ ಎದ್ದು ಕಾಣತ್ತದೆ…
ಅಣ್ಣನ ದೊಗಳೆ ದೊಗಳೆ ಪ್ಯಾಂಟು, ಕಾಲಿಗೆ ಪ್ಲಾಸ್ಟಿಕ್ ಚಪ್ಲಿ ಹಾಕ್ಕೊಂಡು ಮೊದಲ ದಿನ ಕಾಲೇಜಿಗೆ ಹೋದಾಗ ಅಲ್ಲಿ ನನ್ನ ನೋಡಿ ಗೊಳ್ಳೆಂದು ನಕ್ಕವರೇ ಜಾಸ್ತಿ. ಅವರ ನಗು ನನಗಿನ್ನೂ ನೆನಪಿದೆ. ಅಷ್ಟೇ ಅಲ್ಲ, ನನ್ನಂತೆ ಬಂದ ಹಳ್ಳಿಯ ಅನೇಕರು ಇಂಥದ್ದೇ ಗೇಲಿಗೆ ಒಳಗಾಗಿದ್ದರು. ನಮ್ಮದೇ ಹಳ್ಳಿಯ ಶಾಲೆಗಳಲ್ಲಿ ರಾಜರಂತಿದ್ದ ನಾವು, ಕಾಲೇಜು ಅಂದ್ರೆ ಭಯ ಪಡುವಂಥ ವಾತಾವರಣ ಸೃಷ್ಟಿಯಾಗಿಬಿಟ್ಟಿತ್ತು. ಕಾಲೇಜು ಬಿಡುವ ವೇಳೆಗೆ ಅದೇ ಕಾಲೇಜಿಗೆ ನಾವೇ ರಾಜರಾಗಿ ಬಿಟ್ಟೆವು. ಬಿಡಿ, ಅದು ಬೇರೆ ವಿಷಯ!
ಹಳ್ಳಿಯೆಂದರೆ ಬಡತನ, ರೈತಾಪಿ ಕೆಲಸ, ಬಣ್ಣ ಬಣ್ಣದ ಶೋಕಿ ಗೊತ್ತಿಲ್ಲದ ಬದುಕು. ನಡೆ ನುಡಿಗೂ ಬದುಕಿಗೂ ವ್ಯತ್ಯಾಸವಿಲ್ಲದೆ ಎರಡೂ ಒಂದೇ ಎಂಬಂಥ ಬದುಕು! ಏಕಾಏಕಿ ಅಂಥ ಬದುಕಿನಿಂದ ನಗರದ ಥಳುಕು ಬಳುಕಿಗೆ ಬಿದ್ದಾಗ ಹಳ್ಳಿಯ ಹುಡುಗರಿಗೆ ಮುಜುಗರ ಮತ್ತು ಕೀಳರಿಮೆ. ನಮ್ಮನ್ನು ಎಲ್ಲಿ ಆಡಿಕೊಂಡು ನಗುವರೋ ಎಂಬ ದಿಗಿಲು. ಅಲ್ಲಿಯ ಎಲ್ಲವೂ ಹೊಸತು. ಊರಿನ ಹೈಸ್ಕೂಲ್ ತಮ್ಮದೇ ಮನೆಯಂತಿರುತ್ತಿತ್ತು. ಮೇಷ್ಟ್ರುಗಳೂ ಅಪ್ಪ- ಅವ್ವರಿಗೆ ಹೊಲಕ್ಕೆ ಹೋಗುವಾಗ ಸಿಕ್ಕು ಮಾತಾಡಿಸುತ್ತಿದ್ದರು. ಅಲ್ಲಿಗೆ ಬರುವ ಎಲ್ಲರೂ ತಮ್ಮದೇ ಹಳ್ಳಿಯವರಾಗಿರುತ್ತಿದ್ದರು. ಅದಕ್ಕಾಗಿಯೇ ಶಾಲೆ ಮನೆಯಷ್ಟೇ ಸಲೀಸು ಅಂತನ್ನಿಸುತ್ತಿತ್ತು.
ಬಂಗಲೆಯಂಥ ಕಟ್ಟಡಗಳು, ಇಪ್ಪತ್ತು ಮೂವತ್ತು ಸಂಖ್ಯೆಗಳ ಕ್ಲಾಸ್ ರೂಮುಗಳು, ಪ್ರಿನ್ಸಿಪಾಲ್ ಎಂಬ ಭಯ ಹುಟ್ಟಿಸುವ ವ್ಯಕ್ತಿತ್ವ, ಲೆಕ್ಚರರ್‌ಗಳ ಬೀಗು, ಏನೊಂದೂ ಗೊತ್ತಿಲ್ಲದ ಓರಗೆಯ ಹುಡುಗರು, ಬೈಕ್- ಕಾರುಗಳಲ್ಲಿ ಕಾಲೇಜಿಗೆ ಬರುವ ಹುಡುಗ- ಹುಡುಗಿಯರು, ಅವರ ಬಟ್ಟೆಬರೆ, ಮಾತಿನ ಗತ್ತು ಗೈರತ್ತುಗಳು ಹಳ್ಳಿಯಿಂದ ಬಂದ ಹುಡುಗನನ್ನು ಕಂಗಾಲಾಗಿಸುತ್ತವೆ. ಅದೇ ಭಯಕ್ಕೆ, ಮುಜುಗರಕ್ಕೆ, ಕೀಳರಿಮೆಗೆ ಕಾಲೇಜಿಗೆ ಕಾಲಿಟ್ಟ ತಿಂಗಳಿಗೆಲ್ಲಾ ಕಾಲೇಜು ಬಿಟ್ಟು ಬಿಡುವ ಅಥವಾ ಕಾಲೇಜಿಗೆ ಹೋಗ್ತಿನಿ ಅಂತ ಮನೆಯಿಂದ ಹೊರಟು ಎಲ್ಲೋ ಇದ್ದು ಬಂದು ಬಿಡುವ ಅಡ್ಡ ವರ್ತನೆಗಳು ಶುರುವಾಗುತ್ತವೆ.
ಅಂತರ ಇನ್ನೂ ಉಳಿದೇ ಇದೆ..!
ಹಳ್ಳಿಗಳೆಲ್ಲ ಅರ್ಧಂಬರ್ಧ ನಗರಗಳಾಗಿವೆ ಅನ್ನುವ ಮಾತಿದೆ! ಅಂತಹ ಹಳ್ಳಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಎಂಬುದೇ ಸತ್ಯ. ಇನ್ನೂ ಬಸ್ಸೇ ಹೋಗದ ಹಳ್ಳಿಗಳಿವೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹಳ್ಳಿ ಮತ್ತು ನಗರದ ಅಂತರ ಇನ್ನೂ ಉಳಿದಿದೆ. ಎಲ್ಲಾ ವಿಚಾರಗಳಲ್ಲೂ ಅಂತರವನ್ನು ಉಳಿಸಿಕೊಂಡಿದೆ. “ಕನ್ನಡ ಹಳ್ಳಿಗೆ; ಇಂಗ್ಲಿಷ್ ನಗರಕ್ಕೆ’ ಅನ್ನುವ ಅಲಿಖೀತ ನಿಯಮ ಯಶಸ್ವಿಯಾಗಿ ಜಾರಿಯಲ್ಲಿದೆ. ಹಳ್ಳಿ ವಿದ್ಯಾರ್ಥಿಗಳು ಇಂದಿಗೂ ಕಾಲೇಜಿನಲ್ಲಿ ಇಂಗ್ಲಿಷ್ ಪಿರಿಯಡ್‌ನಲ್ಲಿ ಬೆವೆತು ಹೋಗುತ್ತಾರೆ. ಅಲ್ಲದೇ, ಪರೀಕ್ಷೆಯಲ್ಲಿ ಕೈ ಕೊಡುವ ಸಬ್ಜೆಕ್ಟ್ ಕೂಡ ಅದೇ. ಹಳ್ಳಿಗಳಿನ್ನೂ ಬಡತನದ ಶಾಪದಿಂದ ವಿಮೋಚನೆಯಾಗಿಲ್ಲ. ಒಂದೊಳ್ಳೆ ಬ್ಯಾಗು, ಬಣ್ಣಬಣ್ಣದ ಬಟ್ಟೆ, ಕಾಲು ಬಯಸುವಂಥ ಚಪ್ಪಲಿ ಬೂಟುಗಳನ್ನು ಹೊಂದಲು ಮಕ್ಕಳು ಪರದಾಡುತ್ತಾರೆ. ನಗರದ ವಿದ್ಯಾರ್ಥಿಗಳ ಮಟ್ಟಕ್ಕೆ ತಮ್ಮನ್ನು ತಂದು ನಿಲ್ಲಿಸಿಕೊಳ್ಳಲು ನಿತ್ಯ ಅವರ ಹೋರಾಟವಿರುತ್ತದೆ. ಬರೀ ಪಿಯುಗೆಲ್ಲಾ ಕಾರು, ಬೈಕಿನಲ್ಲಿ ಬರುವ ತಮ್ಮ ಓರಗೆಯವರನ್ನು ಬೆರಗು ಕಣ್ಣುಗಳಿಂದ ನೋಡುತ್ತಾರೆ. ಇಡೀ ಕಾಲೇಜಿನಲ್ಲಿ ಹಳ್ಳಿ ಹುಡುಗರ ಸಂಖ್ಯೆಯೇ ಜಾಸ್ತಿ ಇದ್ದರೂ ನಗರದ, ಉಳ್ಳವರ ಮನೆಯಿಂದ ಬಂದ ಅಲ್ಪ ಸಂಖ್ಯೆಯ ವಿದ್ಯಾರ್ಥಿಗಳೇ ಎಲ್ಲದರಲ್ಲೂ ಮೇಲುಗೈ ಸಾಧಿಸುತ್ತಾರೆ.
ಇಂಥ ವಾತಾವರಣದಲ್ಲಿ ಓದುವ ಹಳ್ಳಿ ಮಕ್ಕಳ ಓದಿನ ಭವಿಷ್ಯ ಹಳ್ಳ ಹಿಡಿಯುತ್ತದಾ? ಉತ್ತರ, “ಕಡಿಮೆ ಹೌದು; ಹೆಚ್ಚು ಅಲ್ಲ’. ಇಂದಿಗೂ ಕಾಲೇಜಿನಲ್ಲಿ ಹಳ್ಳಿ ಹುಡುಗರ ಪಾಲಿನ ಫಲಿತಾಂಶವೇ ಹೆಚ್ಚು. ಸಕಲ ಸೌಲಭ್ಯಗಳ ಮಧ್ಯೆ ತೇಲಿ ತೇಲಿ ಓದುವ ನಗರದ ಹುಡುಗರ ಮಟ್ಟಕ್ಕೆ ತಮ್ಮ ಸಾಧನೆಯನ್ನು ಹಳ್ಳಿ ಹುಡುಗರು ತಂದು ನಿಲ್ಲಿಸಿಕೊಳ್ಳುತ್ತಾರೆ. ಅದೆಲ್ಲಾ ಹಳ್ಳಿಯ ಬಡತನ ಹೇಳಿಕೊಟ್ಟ ಪಾಠ ಮತ್ತು ನಗರ ಮಾಡುವ ಕೆಲವು ಅವಮಾನಗಳ ಸೇಡು. ಈ ಮಧ್ಯೆ ಹಳ್ಳಿಯ ಕೆಲವು ವಿದ್ಯಾರ್ಥಿಗಳು ನಗರದ ಬಣ್ಣಬಣ್ಣದ ಆಕರ್ಷಣೆಗೆ ಬಿದ್ದು ಓದನ್ನು ಕೈ ಚೆಲ್ಲುವ ವಿಷಯವನ್ನೂ ಅಲ್ಲಗೆಳೆಯಲಾಗದು!
ಆಕರ್ಷಣೆಗೆ ಒಳಗಾಗುವ ಅಪಾಯ ಜಾಸ್ತಿ!
ಹೊಲ, ಮನೆ, ಹಸಿರು ಇವುಗಳ ಮಧ್ಯೆ ಬೆಳೆದವರಿಗೆ ನಗರ ಆಕರ್ಷಣೀಯವೆನಿಸುತ್ತದೆ. ಕಾಲೇಜುಗಳು ಇರುವುದು ನಗರದಲ್ಲೇ ಹೆಚ್ಚಲ್ಲವೇ!? ಕಾಲೇಜಿಗೆ ಹೋಗುತ್ತಾ ಹೋಗುತ್ತಾ ನಗರದ ಶೋಕಿ ಅವರನ್ನು ಹೆಚ್ಚು ಸೆಳೆಯುತ್ತದೆ. ಎಷ್ಟೊ ಬಾರಿ, ದೀಪದ ಸೆಳೆತಕ್ಕೆ ಒಳಗಾದ ಚಿಟ್ಟೆಯಂತಾಗುತ್ತದೆ ಅವರ ಬದುಕು! ಕಾಲೇಜು ಅಂಗಳಕ್ಕೆ ಕಾಲಿಟ್ಟಾಗಲೇ, ಯೌವನವೂ ಅವರ ಒಡಲಿಗೆ ಅದ್ಧೂರಿಯಾಗಿ ಕಾಲಿಟ್ಟಿರುತ್ತದೆ. ಹೇಳಿ ಕೇಳಿ, ಯೌವನವೆಂಬುದು ಚಂದ ಬಯಸುವ ಕಾಲ. ಇಲ್ಲಿ ಹುಡುಗ- ಹುಡುಗಿಯರು ಎನ್ನುವ ಬೇಧವಿಲ್ಲದೆ ಎಲ್ಲರೂ ಆಕರ್ಷಣೆಗೆ ಒಳಗಾಗುತ್ತಾರೆ. ಒಂಚೂರು ಯಾಮಾರಿದರೂ ದಾರಿ ತಪ್ಪುವ ಹಂತ. ಲವ್ವು, ಸಿನಿಮಾದಂಥ ಕೆಲವು ಅಡ್ಡ ಚಟಗಳು ಅವರನ್ನು ಬೇಗನೆ ಸೆಳೆಯುತ್ತವೆ. ಓದು ಕಾಲೇಜು ಎರಡನೇ ಆಯ್ಕೆಯಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ, ಮನೆಯಿಂದ ದೂರ ಬಂದು ಬಿಡುವುದರಿಂದ ಮನೆಯವರ ಭಯವೂ ಕಾಡುವುದಿಲ್ಲ. ಮನೆಯವರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡು ಏನೇನೋ ಕಾರಣವೊಡ್ಡಿ ದುಡ್ಡು ಪೀಕುತ್ತಾರೆ.
ಒಂದು ಸಮಾಧಾನದ ಸಂಗತಿಯೆಂದರೆ, ಇಂಥವರ ಮಧ್ಯೆಯೇ, ಚೆನ್ನಾಗಿ ಓದದೆ ಹೋದರೆ, ಜೀವನವಿಡೀ ಬಡವರಾಗಿಯೇ ಉಳಿಯಬೇಕಾಗುತ್ತದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡ ಮಕ್ಕಳೂ ಇರುತ್ತಾರೆ. ಅವರು, ಅರೆ ನಿಮಿಷವನ್ನೂ ಪೋಲು ಮಾಡದೆ, ಚೆನ್ನಾಗಿ ಓದಿ, ಹಳ್ಳಿ- ನಗರಗಳೆರಡೂ ಬೆರಗಾಗುವಂಥ ಫಲಿತಾಂಶ ಪಡೆದು, ಒಂದಷ್ಟು ಮಕ್ಕಳಿಗೆ ಮಾದರಿಯೂ ಆಗುತ್ತಾರೆ.
ಕಾಲೇಜು ಕಷ್ಟದ ಹಾದಿ…
ಹಳ್ಳಿಯಿಂದ ಸರಿಯಾದ ಸಮಯಕ್ಕೆ ಬಸ್ಸುಗಳಿರುವುದಿಲ್ಲ. ಬೆಳಗ್ಗೆ ಆರಕ್ಕೆ ಮನೆ ಬಿಟ್ಟರೆ, ತೀರಾ ಸಂಜೆಗೇ ಮನೆ ತಲುಪಲು ಸಾಧ್ಯವಾಗುತ್ತದೆ. ಎರಡೇ ಬಸ್ಸುಗಳ ಜೀವನ. ಎಷ್ಟೋ ಹುಡುಗರು ಮಧ್ಯಾಹ್ನ ಊಟವನ್ನೂ ಮಾಡುವುದಿಲ್ಲ. ನಗರದಲ್ಲೇ ಇದ್ದು ಬಿಡುವುದಕ್ಕೆ ಹಣದ ಸಮಸ್ಯೆ. ಎಲ್ಲಾ ಮಕ್ಕಳಿಗೂ ಹಾಸ್ಟೆಲ್ ಲಭ್ಯವಾಗುವುದಿಲ್ಲ. ಹೆಣ್ಣು ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಡಲು ಹಳ್ಳಿಯ ತಂದೆ- ತಾಯಿಯರು ಅಷ್ಟು ಸುಲಭಕ್ಕೆ ಒಪ್ಪುವುದಿಲ್ಲ. ಇಂಥ ಕಾರಣಗಳಿಂದ ಹಳ್ಳಿ ಹುಡುಗರಿಗೆ ಕಾಲೇಜು ಕಷ್ಟದ ಹಾದಿಯೇ ಆಗಿ ಬಿಡುತ್ತದೆ.
ಪೋಷಕರಿಗೆರಡು ಮಾತು…
ನಿಮ್ಮ ಮಗ, ಮಗಳು ಕಾಲೇಜಿಗೆ ಹೋಗುತ್ತಿದ್ದಾರೆ ಎಂಬ ವಿಚಾರವನ್ನು ಒಂದು ಕ್ಷಣ ಸಂಭ್ರಮಿಸಿ ಸಾಕು. ಅದೇ ಗುಂಗಿನಲ್ಲಿದ್ದು ಬಿಡಬೇಡಿ. ನಿಮ್ಮ ಊರಿಂದ ಆಚೆ ಹೋಗುವ ನಿಮ್ಮ ಮಗ, ಮಗಳ ಬಗ್ಗೆ ನಿಗಾಯಿಡಿ. ಅವರಿಗೆ ನಿಮ್ಮದೊಂದು ನೈತಿಕ ಭಯವಿರಲಿ. ಅವರ ಓದಿನ ಬಗ್ಗೆ ಆಗಾಗ್ಗೆ ಕೇಳುತ್ತೀರಿ. ಸಾಧ್ಯವಾದರೆ, ಕಾಲೇಜಿನ ಕಡೆ ಹೋಗಿ ಬನ್ನಿ. ಅವರ ಓದಿನ ಬಗ್ಗೆ ಒಂದು ಶುದ್ಧ ಕಾಳಜಿ ಇಟ್ಟುಕೊಳ್ಳುವುದು ಅತಿಮುಖ್ಯ.
– ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.