![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jul 16, 2019, 5:06 AM IST
ನನ್ನ ಫೋನು ರಿಂಗಣಿಸತೊಡಗಿತು.ನೋಡಿದರೆ ಅದು ಅಪ್ಪಾಜಿಯ ನಂಬರ್.ಸ್ವಲ್ಪ ಹೊತ್ತಿಗೆ ಮೊದಲು ನನ್ನ ಹತ್ತಿರ ಮಾತನಾಡಿದ್ದರು.ಈಗ ಮತ್ತೆ ಫೋನು.ಮರೆತ ವಿಷಯ ನೆನಪಾಗಿರಬೇಕು ಅಂದುಕೊಂಡು ಫೋನು ರಿಸೀವ್ ಮಾಡಿ, ಏನಪ್ಪಾ ಅಂದೆ. ಆ ಕಡೆಯಿಂದ “ಹಲೋ, ಅಕ್ಕಾರೇ ಈ ಸ್ವಾಮ್ಯಾರು ಇಲ್ಲಿ ಬಿದ್ದಾರ್ರೀ, ಎಚ್ಚರ ಇಲ್ಲ ಅವ್ರಿಗೆ, ಎಲ್ಲಿಗೆ ಕರೆದುಕೊಂಡು ಹೋಗಬೇಕು ಅಂತ ಗೊತ್ತಾಗ್ತಿಲ್ಲ, ನಿಮ್ಮ ನಂಬರ್ ಮೊದಲು ಇತ್ರೀ, ಅದಕ್ಕಾ ಫೋನು ಮಾಡಿದೆ’ ಅಂದಿತು ಆ ಅಪರಿಚವಾದ ದನಿ. ಇದನ್ನು ಕೇಳಿ ಗಾಬರಿಯಾಯಿತು. ಹೃದಯ ಬಡಿದುಕೊಳ್ಳಲು ಶುರುವಾಯಿತು. ತಲೆಯಲ್ಲಿ ಏನೋನೋ ಯೋಚನೆ. ನಾನೇ ಅಲ್ಲಿಗೆ ಹೋಗಿಬಿಡಲೇ ಅಂತ ಯೋಚಿಸಿದೆ. ಆದರೆ, ಅಸಾಧ್ಯ ಅಂತ ಆಮೇಲೆ ತಿಳಿಯಿತು.
ಏಕೆಂದರೆ, ನಾನಿರುವುದು ಧಾರವಾಡದಲ್ಲಿ, ಅವರಿರುವುದು ಚಿತ್ರದುರ್ಗದಲ್ಲಿ. ತಕ್ಷಣ ಐಡಿಯಾ ಹೊಳೆಯಿತು. ಮತ್ತೆ ಅಪ್ಪನ ಮೊಬೈಲ್‌ಗೆ ಕರೆ ಮಾಡಿದೆ. ಅತ್ತ ಕಡೆ ಆಟೋ ಚಾಲಕನೇ ಫೋನ್ ರಿಸೀವ್ ಮಾಡಿದರು. ನಮ್ಮ ಮನೆಯ ಅಡ್ರೆಸ್ ಹೇಳಿ, “ನಮ್ಮ ತಂದೆಯನ್ನು ದಯವಿಟ್ಟು ಆ ವಿಳಾಸಕ್ಕೆ ಬಿಡಿ, ಆಟೋ ಚಾರ್ಜ್ ನಾನು ಕೊಡುತ್ತೇನೆ’ ಎಂದು ವಿನಂತಿಸಿಕೊಂಡೆ. “ಅಯ್ಯೋ, ಅದ್ಯಾಕಮ್ಮಾ ಅಷ್ಟು ಕೇಳ್ಕೊತೀಯಾ, ಬಿಡ್ತೀನಿ ಬಿಡು. ದುಡ್ಡಿನ ವಿಷಯ ಹಾಗಿರಲಿ’ ಎಂತ ಹೇಳುತ್ತಲೇ ಪಕ್ಕದಲ್ಲಿದ್ದ ಯಾರನ್ನೋ, “ಇವ್ರನ್ನ ಸ್ವಲ್ಪ ಎತ್ತಿ ಆಟೋದಾಗ್ ಕೂಡಿಸ್ರಿ ಬರ್ರಪ್ಪಾ ‘ ಅಂದಾಗ ಕರೆ ಕಟ್ಟಾಯಿತು. ತಳಮಳ ಹೆಚ್ಚಾಯಿತು. ಮನೆಯಲ್ಲಿದ್ದ ತಮ್ಮನಿಗೆ ಫೋನ್ ಮಾಡಿದಾಗ “ಆಟೋದವರು ಬಂದಿದ್ದರು. ಅಪ್ಪಾಜಿಯನ್ನು ಒಳಗೆ ಕರೆತರಲು ನನ್ನ ಜೊತೆ ಹೆಗಲು ಕೊಟ್ಟು ಸಹಾಯ ಮಾಡಿದರು’ ಎಂದು ಹೇಳಿದಾಗ ಕಣ್ಣಲ್ಲಿ ನೀರು ಬಂದು, ಮನಸ್ಸು ಧನ್ಯವಾದ ಹೇಳಿತು. ಬೇಡಿದವರಿಗೆ ದೇವರು ಯಾವುದಾದರೊಂದು ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ ಅನ್ನುವ ಮಾತು ನಿಜ ಎನಿಸಿತು.
-ನಳಿನಿ. ಟಿ. ಭೀಮಪ್ಪ ಧಾರವಾಡ
You seem to have an Ad Blocker on.
To continue reading, please turn it off or whitelist Udayavani.