ಬದುಕು ಕಲಿಸಿದ ಗಾಡ್‌ಮದರ್; ನೀನು ಶಿಸ್ತು ಹೇರುವ ಪಿ.ಟಿ ಮಾಸ್ಟರ್
Team Udayavani, Mar 21, 2017, 3:45 AM IST
ಮಕ್ಕಳಿಗೆ ಅಮ್ಮನ ಬಗ್ಗೆ ಅಪಾರ ಪ್ರೀತಿಯಿರುತ್ತದೆ. ಕೆಲವೊಂದು ಸಂದರ್ಭದಲ್ಲಿ ಸಾಕಷ್ಟು ದೂರುಗಳೂ ಇರುತ್ತವೆ. ಥೇಟ್ ಪಿ.ಟಿ ಟೀಚರ್ ಥರಾ ಅಮ್ಮ ಒಂದರ ಹಿಂದೊಂದು ಶಿಸ್ತಿನ ಪಾಠ ಹೇಳುತ್ತಾ ಸುಸ್ತು ಹೊಡೆಸ್ತಾಳೆ ಎಂಬುದು ಹೆಚ್ಚಿನ ಮಕ್ಕಳ ಮಾತಾಗಿರುತ್ತದೆ. ವಾಸ್ತವ ಹೀಗಿರುವಾಗ, ಅಮ್ಮನ ಮಮತೆ, ಅವಳ ದೂರದೃಷ್ಟಿ, ಎಲ್ಲರೊಳಗೊಂದಾಗಿ ಬಾಳುವ ಆಪ್ತ ಮನೋಭಾವ, ಬೆಲೆ ಕಟ್ಟಲಾಗದ ತ್ಯಾಗ… ಇಂಥ ಗುಣಗಳನ್ನು ಮೆಚ್ಚಿದ ಮಗಳೊಬ್ಬಳು, ಅಮ್ಮನಿಗೆ ಬರೆದ ಮೆಚ್ಚುಗೆಯ ಪತ್ರವೊಂದು ಇಲ್ಲಿದೆ. ಅಮ್ಮಂದಿರನ್ನು ಎಲ್ಲಾ ಮಕ್ಕಳೂ ಇದೇ ರೀತಿ ಪ್ರೀತಿಸುವಂತಾಗಲಿ ಎಂಬ ಸದಾಶಯದೊಂದಿಗೆ ಈ ಬರಹವನ್ನು ಪ್ರಕಟಿಸುತ್ತಿದ್ದೇವೆ.
ಯಾರಾದ್ರೂ, ನಿನ್ನ ಜೀವನದಲ್ಲಿ ತುಂಬಾ ಮುಖ್ಯವಾದ ವ್ಯಕ್ತಿ ಯಾರು ಅಂತ ಕೇಳಿದ್ರೆ ನಿಸ್ಸಂದೇಹವಾಗಿ ಹೇಳ್ತೀನಿ, ಅದು ನೀನೇ ಕಣೆ ಅಮ್ಮ. ನನ್ನ ಕೋಪ, ಪ್ರೀತಿ ಎರಡರಲ್ಲೂ ದೊಡ್ಡ ಪಾಲು ನಿಂದೇನೆ. ನಂಗೆ ಖುಷಿಯಾದ್ರೂ, ಬೇಜಾರಾದ್ರೂ ಹಂಚಿಕೊಳ್ಳೋದಕ್ಕೆ ನೀನೇ ಬೇಕು. ನಾನು ಮನೆಗೆ ಬಂದ ತಕ್ಷಣ ನೀನು ನನ್ನ ಕಣ್ಣಿಗೆ ಕಾಣ ಸಿಗ್ಬೇಕು. ಇಲ್ಲ ಅಂದ್ರೆ ಏನೋ ಒಂಥರಾ ಗಲಿಬಿಲಿ. ನಂಗೆ ನೀನಂದ್ರೆ ತುಂಬಾ ಇಷ್ಟ. ಯಾಕಿಷ್ಟ? ಎಷ್ಟು ಇಷ್ಟ? ಅಂತೆಲ್ಲಾ ಯಾವತ್ತೂ ಹೇಳೇ ಇಲ್ಲ ನಿಂಗೆ. ಇವತ್ತು ಮದರ್ ಡೇ ಏನಲ್ಲ, ಆದ್ರೂ ಹೇಳ್ಬೇಕು ಅನ್ನಿಸ್ತಿದೆ…
ಅಪ್ಪನನ್ನು ಮಾತಾಡಿಸುವಂತೆಯೇ ನಿನ್ನನ್ನೂ ಬಹುವಚನದಲ್ಲಿ- ನೀವು, ಹೋಗಿ, ಬನ್ನಿ… ಅಂತೆಲ್ಲ ಮಾತಾಡಿÕದ್ರೆ ಹೇಗಿರತ್ತೆ ..?! ಛಿ ಚೆನ್ನಾಗಿರಲ್ಲ ಕಣೆ. ಅದಕ್ಕೇ ನೀನು ಎಷ್ಟೇ ಹೇಳಿದ್ರೂ, ನಿನ್ನನ್ನು ಹೋಗೇ, ಕುಳ್ಳು, ಏನೇ… ಹೀಗೇ ಮಾತಾಡಿಸುತ್ತೀನಿ. ನಿನ್ನನ್ನು ಹಾಗೆ ಮಾತಾಡಿದ್ರೇನೇ ಸಮಾಧಾನ ನಂಗೆ. ಯಾಕಂದ್ರೆ ನೀನು “ನನ್ನಮ್ಮ’. ಚಿಕ್ಕೋಳಿದ್ದಾಗ ಹೀಗೆಲ್ಲಾ ಇರ್ಲಿಲ್ಲ ಬಿಡು. ಆಗ ಎಲ್ಲ ಹುಡ್ಗಿàರ ಥರ ನಂಗೆ ಅಪ್ಪ ಜಾಸ್ತಿ ಇಷ್ಟ ಆಗ್ತಿದ್ರು. ಯಾಕಂದ್ರೇ, ಅಪ್ಪ ನಾನು ಏನು ಹೇಳಿದ್ರೂ “ಸರಿ ಮಗಳೇ’ ಅನ್ನೋರು.ನೀನು ಅಮ್ಮನಿಗಿಂತ ಹೆಚ್ಚಾಗಿ, ಮಾತಿಗೊಮ್ಮೆ ಪನಿಶೆ¾ಂಟ… ಕೊಡೋ ರಿಂಗ್ ಮಾಸ್ಟರ್ ಥರ ಅನ್ನಿಸ್ತಿದ್ದೆ. ಅದು ಮಾಡ್ಬೇಡ, ಇದು ಮಾಡ್ಬೇಡ, ದೊಡ್ಡ ದನಿಯಲ್ಲಿ ನಗ್ಬೇಡ, ತುಂಡು ಬಟ್ಟೆ ಹಾಕಿ ಹೊರಗೆ ಹೋಗ್ಬೇಡ, ಹುಡುಗರ ಹತ್ರ ಮಾತಾಡ್ಬೇಡ, ನೀನು ದಿನೇ ದಿನೇ ಚಿಕ್ಕೋಳಾಗಲ್ಲ, ಗಂಭೀರವಾಗಿ ಇರು… ಉಫ್, ನೀನು ಹಾಕುತ್ತಿದ್ದ ಕಂಡೀಷನ್‌ಗಳು ಒಂದಾ ಎರಡಾ… ನಾನು ಬೆಳೆದಂತೆಲ್ಲಾ “ಡೋಂಟ್ ಡು’ ಲಿಸ್ಟ್ ಬೆಳೀತಾನೆ ಹೋಯ್ತು.
ಆಗೆಲ್ಲ ಕೋಪ ಬರೋದು ನಿನ್ಮೆàಲೆ. ನಿಂಗೆ ನಂಗಿಂತ ಅಣ್ಣಾನೇ ಜಾಸ್ತಿ ಇಷ್ಟ ಅಂತನೂ ದೂರುತ್ತಿದ್ದೆ. ಅದಿಕ್ಕೆ ಅಣ್ಣಂಗೆ ಇಲ್ದಿರೋ ರೆಸ್ಟ್ರಿಕ್ಷನ್ಸ್ ಎಲ್ಲ ನನ್ನ ಮೇಲೆ ಹೇರೋದು ಅಂತ ಅನ್ನಿಸ್ತಿತ್ತು. ನಿನ್ಹತ್ರ ಅದೇ ಕಾರಣಕ್ಕೆ ತುಂಬಾ ಸಲ ಜಗಳ ಕೂಡ ಮಾಡಿದ್ದೀನಿ, ನೆನಪಿದ್ಯಾ..?! ನಂಗಂತೂ ಪ್ರತಿಯೊಂದೂ ಚೆನ್ನಾಗಿ ನೆನಪಿದೆ. ಆದರೆ ನನ್ನಂಥ ಪೆದ್ದು, ಮೊಂಡು ಹುಡುಗಿಯನ್ನು ಹಂತ ಹಂತವಾಗಿ ತಿದ್ದಿ, ತೀಡಿ ಒಬ್ಬಳು ಪ್ರಬುದ್ಧ ವ್ಯಕ್ತಿಯನ್ನಾಗಿ ಹೇಗೆ ರೂಪಿಸಿದೆ ನೀನು? ನಾನು ಬೆಳೆದಂತೆಲ್ಲಾ ಅರ್ಥವಾಗುತ್ತಾ, ಅರ್ಥವಾದಂತೆಲ್ಲಾ ಹೆಚ್ಚು ಹೆಚ್ಚು ಆಪ್ತವಾಗುತ್ತಾ ಹೋದೆ ನೀನು. ನನ್ನ ಓದು ಮುಗಿದ ತಕ್ಷಣ ಅಜ್ಜಿ ನನಗೆ ಮದುವೆ ಮಾಡ್ಬೇಕು ಅಂದಾಗ, ನನ್ನ ಮಗಳಿಗೇನಿಷ್ಟ ಇದೆಯೋ ಅವಳು ಅದೇ ಮಾಡ್ಬೇಕು ಅಂತ ತಿರುಗಿ ಬಿದ್ಯಲ್ಲ, ಆಗ ಅಚ್ಚರಿಯಿಂದ ನೋಡಿದ್ದೆ ನಿನ್ನನ್ನ.
ಎಷ್ಟೇ ಚೆಂದ ನೋಡ್ಕೊಂಡ್ರೂ ಎಲ್ಲದರಲ್ಲೂ ಹುಳುಕು ಹುಡುಕೋ ಅಜ್ಜಿಯ ವಿರುದ್ಧ ಒಂದೂ ಮಾತಾಡದೆ ಸಹಿಸ್ಕೊಂಡಿರೋ ನೀನು, ನನ್ನ ವಿಷಯ ಬಂದಾಗ ಮಾತ್ರ ಯಾವುದೇ ರಾಜಿಗೆ ತಯಾರಿರದೆ ನನ್ನ ಬೆನ್ನಿಗೆ ನಿಂತಿದ್ದೆ. ನಂಗೆ ಬೇಕಾದಷ್ಟು ಸ್ವಾತಂತ್ರ್ಯಕೊಟ್ಟು, ಅದನ್ನ ಸರಿಯಾದ ರೀತಿಯಲ್ಲಿ ಹೇಗೆ ಬಳಸ್ಕೋಬೇಕು ಅನ್ನೋದನ್ನ ಕಲಿಸಿಕೊಟ್ಟೆ. ನಿನ್ನ ವಿಚಾರವಂತಿಕೆ ನನಗಿಷ್ಟ. ಅಪ್ಪ ಗೇಟಿನ ಹತ್ರ ಬಂದು ಹಾರ್ನ್ ಮಾಡೋದೇ ತಡ, ಎಲ್ಲೇ ಇದ್ರೂ ತಡಬಡಾಯಿಸಿಕೊಂಡು ಹೊರಗೆ ಓಡಿಬಂದು ಬ್ಯಾಗ್ ಇಸ್ಕೊಳ್ತೀಯಲ್ಲ, ನನಗೆ ಅದಿಷ್ಟ. ಮನೆಗೇ ಎಷ್ಟೇ ಜನ ಬಂದ್ರೂ, ಎಷ್ಟೇ ಸುಸ್ತಾಗಿದ್ರೂ ನಗ್ತಾ ನಗ್ತಾ ಅವರ ಊಟೋಪಚಾರ ಮಾಡ್ತೀಯಲ್ಲ ಆ ಸೌಜನ್ಯ ಇಷ್ಟ. ಅವರು ಆಳುಗಳೇ ಆಗಿರಲಿ, ಶ್ರೀಮಂತರೇ ಆಗಿರಲಿ ಎಲ್ಲರ ಜೊತೇನೂ ಒಂದೇ ರೀತಿ, ಗೌರವದಿಂದ ನಡ್ಕೊàತೀಯಲ್ಲ ಆ ಸಂಸ್ಕಾರ ಇಷ್ಟ.
ನಾನು ಪ್ರತೀ ಸಲ ಊರಿಗೆ ಬಂದಾಗ್ಲೂ “ನಿಂಗಿಷ್ಟ ಆಗಿರೋ ತಿಂಡಿ ಮಾಡೋದಕ್ಕೆ ಆಗ್ಲಿಲ್ಲ, ಇನ್ನೊಂದಿನ ಇದ್ದುಬಿಡೇ’ ಅಂತ ಕಣ್ತುಂಬಿಕೊಳ್ತೀಯಲ್ಲ, ನನ್ನ ಮೇಲಿರೋ ಅಷ್ಟೂ ಪ್ರೀತಿ ಆ ಕ್ಷಣ ನಿನ್ನ ಕಣ್ಣಲ್ಲಿ ಕಾಣುತ್ತಮ್ಮ. ಆ ನಿನ್ನ ಮುಗ್ಧ, ನಿಸ್ವಾರ್ಥ ಮನಸ್ಸು ನಂಗೆ ತುಂಬಾ ಇಷ್ಟ. ಎಲ್ಲಕ್ಕೂ ಮೀರಿ, ಚಿಕ್ಕವಯಸ್ಸಲ್ಲೇ ದೊಡ್ಡ ಕುಟುಂಬವೊಂದಕ್ಕೆ ಹಿರಿಯ ಸೊಸೆಯಾಗಿ ಬಂದು ಮನೆಯ ಅಷ್ಟೂ ಜವಾಬ್ದಾರಿಯನ್ನು ನೀನು ನಿಭಾಯಿಸಿದೆಯಲ್ಲ, ನನಗದುವೇ ಮಾದರಿ.
ಮನೆಗೆ ಬರುವವರೆಲ್ಲಾ, “ನಿನ್ನ ಮಾತು, ನಡೆ- ನುಡಿ, ನಗು ಎಲ್ಲಾ ಥೇಟ… ನಿನ್ನಮ್ಮನ ಥರಾನೇ’ ಅನ್ನೋವಾಗ ಎಷ್ಟು ಖುಷಿಯಾಗತ್ತೆ ಗೊತ್ತಾ ನಂಗೆ. ನಾನೇನೆಂದು ಅರ್ಥಮಾಡಿಕೊಳ್ಳುವುದಕ್ಕೆ ಮುಂಚಿನಿಂದಲೇ ನಿನ್ನನ್ನು ಅನುಕರಿಸುತ್ತಾ ಬೆಳೆದವಳು ನಾನು. ನಾನು ನಿನ್ನದೇ ಪ್ರತಿರೂಪ(ಆದ್ರೆ ನಿಂಗಿಂತ ಉದ್ದ ಇದೀನಿ ಅಷ್ಟೇ, ಅದಕ್ಕೇ ನೀನು ಕುಳ್ಳಮ್ಮ… ). ನನ್ನಲ್ಲಿನ ಆದರ್ಶಗಳು, ಎಷ್ಟು ಮೊಗೆದರೂ ಬತ್ತದ ಜೀವನ ಪ್ರೀತಿ, ಆತ್ಮವಿಶ್ವಾಸ, ಎಲ್ಲವನ್ನೂ ನಗುತ್ತಲೇ ಎದುರಿಸುವ ಸ್ಥೈರ್ಯವನ್ನು ನನ್ನ ಸುತ್ತಲೂ ಇರೋ ಜನ ಗುರುತಿಸಿ ಮಾತಾಡೋವಾಗೆಲ್ಲ ನಿಂಗೆ ಮನಸಲ್ಲೇ ಥ್ಯಾಂಕ್ಸ್ ಹೇಳ್ತೀನಮ್ಮಾ.
ನಾನು ಚಿಕ್ಕೋಳಿದ್ದಾಗ ನೀನು “ದೊಡ್ಡೋಳಾದ್ಮೇಲೆ ಏನಾಗ್ತಿàಯೇ?’ ಅಂದ್ರೆ ಒಮ್ಮೆ ಡಾಕ್ಟರ್ ಅಂತಿದ್ದೆ, ಮತ್ತೂಮ್ಮೆ ಸಿಂಗರ್ ಅಂತಿದ್ದೆ. ಈಗ ಹೇಳ್ತೀನಿ ಕೇಳು, ನಾನು ನಿನ್ನ ಹಾಗೆ ಒಬ್ಬ ಪರಿಪೂರ್ಣ ವ್ಯಕ್ತಿಯಾಗ್ಬೇಕು. ನನ್ನ ಬದುಕನ್ನು ಹೇಗೆ ಜೀವಿಸುತ್ತೀನಿ ಅನ್ನೋದರ ಬಗ್ಗೆ ನಂಗೆ ಆತ್ಮತೃಪ್ತಿ ಇರಬೇಕು. ನನ್ನ ಪಾಲಿನ ಆದರ್ಶ ವ್ಯಕ್ತಿ, ನನ್ನ ಶಕ್ತಿ, ನನ್ನ ಸ್ಪೂರ್ತಿ ಎಲ್ಲಾ ನೀನೆ. ನನ್ನ ಅಮ್ಮನಾಗಿರೋದಕ್ಕೆ ನಿನಗೆ ಎಷ್ಟು ಹೆಮ್ಮೆಯಿದೆಯೋ ಗೊತ್ತಿಲ್ಲಮ್ಮ, ಆದ್ರೆ ನಿನ್ನ ಮಗಳಾಗಿರೋದಕ್ಕೆ ನಂಗೆ ತುಂಬಾನೇ ಹೆಮ್ಮೆಯಿದೆ.ನೀನು “ನನ್ನಮ್ಮ’ ಆಗಿರೋದಕ್ಕೆ ದೊಡ್ಡದೊಂದು ಥ್ಯಾಂಕ್ಸ್ ಕಣೆ ನಿಂಗೆ…
ನಿನ್ನ ಬಗ್ಗೆ ಹೇಳು ಅಂದ್ರೆ ದಿನಗಟ್ಟಲೆ ಮಾತಾಡ್ತೀನಿ. ಆದ್ರೆ ಹೇಳ್ಬೇಕು ಅಂದುಕೊಂಡಿದ್ದೆಲ್ಲಾನೂ ಪದಗಳಲ್ಲಿ ಹಿಡಿದಿಡೋದು ಕಷ್ಟ. ಪದಗಳು, ಮಾತುಗಳು ಎಲ್ಲಕ್ಕೂ ಮೀರಿದ ಅದ್ಭುತ ವ್ಯಕ್ತಿತ್ವ ನಿಂದು ಅಮ್ಮ. ಒಂದಂತೂ ನಿಜ, ದಿನೇ ದಿನೇ ನಿನ್ನ ಮೇಲಿನ ಪ್ರೀತಿ, ಗೌರವ ಜಾಸ್ತಿಯಾಗ್ತಾನೇ ಹೋಗ್ತಿದೆಯೇ ಹೊರತು ಯಾವತ್ತೂ ಕಡಿಮೆಯಾಗಲ್ಲ. ಹೀಗೆ ಯಾವಾಗ್ಲೂ ನನ್ನ ಜೊತೇನೆ ಇರು. ಲವ್ ಯು ಫಾರೆವರ್ ಕುಳ್ಳಮ್ಮ…
– ಮೀರಾ ಮಡಿಕೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.