ಗುರಿಯೆನ್ನುವ ಖಜಾನೆಯತ್ತ…
Team Udayavani, Jul 9, 2019, 5:30 AM IST
ತುಂಬ ಬುದ್ಧಿವಂತನಾಗಿದ್ದ ಆ ವೃದ್ಧ ಹಳ್ಳಿಯ ಮುಖ್ಯಸ್ಥ. ಆತನ ಸಲಹೆ ಸೂಚನೆಗಳಿಲ್ಲದೇ ಹಳ್ಳಿಯ ಯಾವ ಕೆಲಸಕಾರ್ಯಗಳೂ ನಡೆಯುತ್ತಿರಲಿಲ್ಲ. ಹಳ್ಳಿಗರಿಗೆ ಆತನ ಮಾತೆಂದರೆ ವೇದವಾಕ್ಯ. ತಮ್ಮ ಖಾಸಗಿ ಸಮಸ್ಯೆಗಳ ಕುರಿತಾದ ಸಲಹೆಗಳಿಗಾಗಿಯೂ ಹಳ್ಳಿಗರು ಅವನನ್ನು ಭೇಟಿಯಾಗುತ್ತಿದ್ದರು. ದುರಂತವೆಂದರೆ ಇಂಥ ಬುದ್ಧಿವಂತ ಅಪ್ಪನಿಗೆ ಇಲ್ಲೊಬ್ಬ ಮಗ ಭಯಂಕರ ಸೋಮಾರಿ. ಯಾವುದೇ ಕೆಲಸ ಮಾಡದೆ ಬೀದಿಬೀದಿ ಸುತ್ತುತ್ತ, ಕುಡಿಯುತ್ತ, ತಿನ್ನುತ್ತ, ಸ್ನೇಹಿತರೊಂದಿಗೆ ಕಾಲ ಕಳೆಯುವುದೊಂದೇ ಅವನ ಬದುಕಾಗಿತ್ತು. ಮೊದಮೊದಲು ಅಪ್ಪ ಅವನನ್ನು ಗದರಿಸುತ್ತಿದ್ದ. ಮಗ ಕೊಂಚ ದೊಡ್ಡವನಾಗುತ್ತಿದ್ದಂತೆಯೇ ಗದರಿಸುವುದನ್ನು ಬಿಟ್ಟು ಪ್ರೀತಿಯಿಂದ ಬುದ್ದಿವಾದ ಹೇಳಿ ನೋಡಿದ. ಆದರೆ ಅಪ್ಪನ ಗದರಿಕೆಯಾಗಲಿ, ಪ್ರೀತಿಯಾಗಲಿ ಮಗನ ವರ್ತನೆಯಲ್ಲಿ ಯಾವ ಬದಲಾವಣೆಯನ್ನೂ ತರಲಿಲ್ಲ. ಹೆಚ್ಚುತ್ತಿರುವ ತನ್ನ ವಯಸ್ಸಿನೊಂದಿಗೆ ಮಗನ ಭವಿಷ್ಯದ ಚಿಂತೆಯೂ ಹೆಚ್ಚಿತ್ತು ಊರ ಮುಖ್ಯಸ್ಥನಿಗೆ. ಹೇಗಾದರೂ ತಾನು ಸಾಯುವುದರೊಳಗಾಗಿ ಮಗನನ್ನು ಸರಿದಾರಿಗೆ ತರಲೇಬೇಕೆಂದು ನಿಶ್ಚಯಿಸಿಕೊಂಡ ಹಿರಿಯ, ಅದೊಂದು ದಿನ ಮಗನನ್ನು ಕರೆದು, “ಮಗು ನೀನಿನ್ನೂ ಚಿಕ್ಕ ಹುಡುಗನಲ್ಲ, ಬೆಳೆದು ನಿಂತಿರುವ ಯುವಕ. ಬದುಕನ್ನು ಅಥೆìçಸಿಕೊಂಡು, ನನ್ನ ಸಹಾಯವಿಲ್ಲದೇ ನಿನ್ನ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುವ ನೈಪುಣ್ಯತೆಯನ್ನು ನೀನೀಗ ಕಲಿಯಬೇಕಿದೆ’ ಅಂದ. ಅಸಲಿಗೆ ಬದುಕೆಂದರೆ ಏನೆಂದೇ ತಿಳಿಯದ ಉಂಡಾಡಿಗುಂಡ ಮಗ ಅಪ್ಪನ ಮಾತುಗಳನ್ನು ಕೇಳಿ ಕ್ಷಣಕಾಲ ಬೆಚ್ಚಿಬಿದ್ದ. ‘ಏನು ಹೇಳುತ್ತಿರುವಿರಿ ಅಪ್ಪಾ? ಬದುಕಿನ ಪ್ರತಿಕ್ಷಣದಲ್ಲಿಯೂ ನೀವು ನನ್ನ ಜೊತೆಗಿರುತ್ತಿರಿ ಎಂದು ನಾನು ನಂಬಿದ್ದೆ. ಹೀಗೆ ಏಕಾಏಕಿ ನೀವು ನನ್ನ ಕೈಬಿಟ್ಟರೆ ಬಾಳಿನ ಜಂಜಡಗಳನ್ನು ನಿಭಾಯಿಸಲಾಗದೆ ನಾನು ಸತ್ತೇ ಹೊಗಬಹುದೇನೋ’ ಎಂದು ನುಡಿದ ಮಗನ ದನಿಯಲ್ಲೊಂದು ಆತಂಕದ ಛಾಯೆ. ಮಗನ ಕಳೆಗುಂದಿದ ಮೊಗವನ್ನೊಮ್ಮೆ ನೋಡಿದ ವೃದ್ಧ, ಅವನನ್ನೊಮ್ಮೆ ಗಟ್ಟಿಯಾಗಿ ಆಲಂಗಿಸಿಕೊಂಡು, ‘ಮಗು,ನಿನ್ನ ಬಾಳಿನ ನಿಜವಾದ ಉದ್ದೇಶವೇನು ಎಂಬುದನ್ನು ನೀನು ಕಂಡುಕೊಳ್ಳಲಿ ಎನ್ನುವುದು ನನ್ನ ಆಶಯ. ಹಾಗೆ, ನಿನ್ನ ಬಾಳಿನ ಸಂಕಲ್ಪವನ್ನು ನೀನು ಕಂಡುಕೊಂಡು, ಬದುಕಿನ ಪಾಠಗಳನ್ನು ಸದಾಕಾಲ ನೆನಪಿಟ್ಟುಕೊಂಡು ಬದುಕಿದ್ದೇ ಆದರೆ, ಸಂತಸ ತುಂಬಿದ ಸುಖಮಯ ಭವಿಷ್ಯ ನಿನ್ನದಾಗುತ್ತದೆ’ ಎಂದು ನುಡಿದ. ಅಪ್ಪನ ಮಾತುಗಳನ್ನು ಕೇಳಿದ ಮಗನ ಮನಸ್ಸಿನಲ್ಲಿ ಸಂತಸ ಮತ್ತು ಆಶ್ಚರ್ಯಗಳ ಮಿಶ್ರಭಾವ. ತನ್ನನ್ನು ಸದಾಕಾಲ ಸುಖವಾಗಿಡಬಲ್ಲ ಪಾಠಗಳ ಬಗ್ಗೆ ಕುತೂಹಲ. ರಾತ್ರಿಯ ನಿದ್ದೆಯಲ್ಲಿ ಶಾಶ್ವತ ಸುಖದ ಕನವರಿಕೆ.
ಬೆಳಗಾಗುತ್ತಲೇ ಕೈಯಲ್ಲೊಂದು ಸಣ್ಣ ಚೀಲವನ್ನಿಡಿದು ಮಗನೆದುರು ಪ್ರತ್ಯಕ್ಷನಾದ ಹಿರಿಯ. ನಾಲ್ಕು ಜೊತೆ ಬಟ್ಟೆಗಳು, ಸ್ವಲ್ಪ ದವಸ ಧಾನ್ಯ, ಕೊಂಚ ಹಣ ಮತ್ತೂಂದು ನಕ್ಷೆಯನ್ನು ಹೊಂದಿದ್ದ ಚೀಲವನ್ನು ಮಗನ ಕೈಗಿಡುತ್ತ, “ನಿಧಿಯೊಂದನ್ನು ಹುಡುಕುವ ಕೆಲಸವನ್ನು ನಿನಗೆ ವಹಿಸುತ್ತಿದ್ದೇನೆ. ಚೀಲದಲ್ಲಿರುವ ನಕ್ಷೆಯಲ್ಲಿ, ನಿಧಿಯನ್ನು ಹೂತಿಟ್ಟಿರುವ ಸ್ಥಳದ ವಿವರಗಳಿವೆ. ಅದನ್ನು ಹುಡುಕಿ ನಿನ್ನದಾಗಿಸಿಕೊಳ್ಳುವುದಷ್ಟೇ ನಿನ್ನ ಕೆಲಸ’ ಎಂದು ಮುಗುಳ್ನಕ್ಕ. ಅಪ್ಪನ ಮಾತುಗಳನ್ನು ಕೇಳಿದ ಮಗನಲ್ಲೊಂದು ಅವ್ಯಕ್ತ ಸಂತಸದ ಕಾರಂಜಿ. ‘ಓಹೋ..! ಹಾಗಿದ್ದರೆ ಅಪ್ಪ ನಿನ್ನೇ ಹೇಳುತ್ತಿದ್ದ ಶಾಶ್ವತ ಸಂತೋಷದ ಕತೆ ಈ ನಿಧಿಯ ಕುರಿತಾಗಿಯೇ ಅಂತಾಯ್ತು. ಇದೊಂದು ನಿಕ್ಷೇಪವನ್ನು ಹುಡುಕಿಕೊಂಡು ಬಿಟ್ಟರೆ, ಬಾಳೆಲ್ಲ ಬಂಗಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದುಕೊಂಡ ಮಗ ಅತ್ಯುತ್ಸಾಹದಿಂದ ಗುಪ್ತ ನಿಧಿಯನ್ನು ಹುಡುಕುತ್ತ ಮನೆಬಿಟ್ಟು ಹೊರನಡೆದ.
ನಕ್ಷೆಯ ಪ್ರಕಾರ, ನಿಧಿಯನ್ನು ಅಡಗಿಸಿಟ್ಟಿರುವ ಸ್ಥಳ ಸಾಕಷ್ಟು ದೂರವಿತ್ತು. ಹತ್ತಾರು ನದಿಗಳು, ಬೆಟ್ಟಗುಡ್ಡಗಳು, ದಟ್ಟಾರಣ್ಯಗಳನ್ನು ದಾಟಿ ತಾನು ನಿಧಿಯನ್ನು ಶೋಧಿಸಿ ತರುವವರೆಗೂ ತನ್ನ ಅಪ್ಪ ಆರೋಗ್ಯವಾಗಿರಲಿ ಎನ್ನುವ ಆಶಯ ಮಗನದ್ದು. ಹಾಗೆ ಮನೆಬಿಟ್ಟು ಹೊರನಡೆದ ಮಗನ ಪ್ರಯಾಣ ದಿನಗಳಿಂದ ವಾರಗಳಿಗೆ, ವಾರಗಳಿಂದ ತಿಂಗಳುಗಳವರೆಗೆ ಸಾಗಿತು. ತನ್ನ ಪಯಣದ ನಡುವೆ ಆತನಿಗೆ ಹತ್ತು ಹಲವು ಬಗೆಯ ಅನುಭವಗಳಾದವು. ಆತ ವಿಭಿನ್ನ ಜನರನ್ನು ಭೇಟಿಯಾಗುತ್ತ ಸಾಗಿದ. ಕೆಲವರು ಆತನಿಗೆ ಆಶ್ರಯ ನೀಡಿದರೆ, ಹಲವರು ಆತನಿಗೆ ಅನ್ನದಾತರಾದರು. ಮಾರ್ಗಮಧ್ಯದಲ್ಲಿ ಸಿಕ್ಕ ಕಳ್ಳರು ಆತನ ವಸ್ತುಗಳನ್ನು ಕದಿಯಲೂ ಸಹ ಪ್ರಯತ್ನಿಸಿದರು. ಅನೇಕ ಸಂದರ್ಭಗಳಲ್ಲಿ ಆತ ದಿಕ್ಕೆಟ್ಟು ಹೋದಂತಾಗಿದ್ದನಾದರೂ ಎಲ್ಲವನ್ನೂ ಸಹಿಸಿಕೊಂಡು ತನ್ನ ಪ್ರಯಾಣವನ್ನು ಆತ ಮುಂದುವರೆಸಿದ್ದ. ನಿಧಾನವಾಗಿ ಋತುಗಳು ಬದಲಾಗಲಾರಂಭಿಸಿದ್ದವು. ಮಳೆಗಾಲ ಚಳಿಗಾಲವಾಗಿ ಬದಲಾಗಿದ್ದರೆ, ವಸಂತ ಕಾಲ ಗ್ರೀಷ್ಮವಾಗಿ ಮಾರ್ಪಾಡಾಗಿತ್ತು. ತನಗಿಂತ ಮುಂಚೆಯೇ ಯಾರಾದರೂ ನಿಧಿಯನ್ನು ಕದ್ದುಬಿಟ್ಟಾರೆನ್ನುವ ಭಯ ಅವನಿಗೆ. ಬರೋಬ್ಬರಿ ಒಂದು ಸಂವತ್ಸರದ ಪಯಣದ ನಂತರ ತನ್ನ ಗಮ್ಯವನ್ನು ತಲುಪಿಕೊಂಡಾಗ ಆತನ ಮನದಲ್ಲಿ ವರ್ಣಿಸಲಸದಳ ಆನಂದ. ನಕ್ಷೆಯಲ್ಲಿ ಅಪ್ಪ ಗುರುತು ಹಾಕಿದ್ದ ಮರದ ಬುಡದತ್ತ ಸಾಗಿದ ಅವನು ಅವಸರವಸರವಾಗಿ ನಿಧಿಗಾಗಿ ಹುಡುಕಾಡತೊಡಗಿದ. ನೆಲದ ಮೇಲೆ ನಿಧಿ ಕಾಣದಾದಾಗ ಬಹುಶ: ಅಪ್ಪ ನೆಲದಾಳದಲ್ಲಿ ನಿಕ್ಷೇಪವನ್ನು ಹುದುಗಿಸಿಟ್ಟಿರಬೇಕು ಎಂದುಕೊಂಡು ನೆಲವನ್ನು ಅಗೆಯತೊಡಗಿದ.
ಸತತ ಎರಡು ದಿನಗಳ ಪರಿಶೋಧನೆಯ ನಂತರವೂ ಚಿನ್ನದ ಸಣ್ಣಲ್ಲೊಂದು ತುಣುಕು ಸಹ ಅವನ ಕಣ್ಣಿಗೆ ಕಾಣದಂತಾದಾಗ ಅವನು ಸೋತು ಹೋದ. ಭಯಂಕರ ನಿರಾಸೆಯಿಂದ ವಾಪಸ್ಸಾಗುವ ನಿರ್ಧಾರಕ್ಕೆ ಬಂದ ಅವನ ಮನಸ್ಸಿನ ತುಂಬೆಲ್ಲ ಸುಳ್ಳು ಹೇಳಿದ ಅಪ್ಪನ ಬಗೆಗೊಂದು ಆಕ್ರೋಶ. ವಾಪಸ್ಸು ಹೊರಟ ಆತನಿಗೆ ಹಿಂದಿರುಗುವ ಮಾರ್ಗದ ನಡುವೆ, ಋತುಗಳ ಬದಲಾವಣೆ, ಹವಾಮಾನದ ವೈಪರಿತ್ಯದಂತಹ ಮತ್ತದೇ ಹಳೆಯ ಅನುಭವಗಳಾಗತೊಡಗಿದವು. ಆದರೆ ಈ ಬಾರಿ ಆತ ಮುಂಚಿನಂತೆ ಧೃತಿಗೆಡಲಿಲ್ಲ. ವಸಂತದಲ್ಲರಳುವ ಹೂವುಗಳ ಸುವಾಸನೆಯನ್ನು ಆತ ಆಸ್ವಾದಿಸಿದ್ದ. ಜಡಿಮಳೆಯಲ್ಲಿ ನರ್ತಿಸುವ ನವಿಲುಗಳ ನರ್ತನಕ್ಕೆ ಮನ ಸೋತಿದ್ದ. ಅದ್ಭುತವಾದ ಸೂರ್ಯಾಸ್ತವನ್ನು, ಪ್ರಶಾಂತವಾದ ಬೇಸಗೆಯ ಸಂಜೆಗಳನ್ನು ಆತ ಅನುಭವಿಸಿದ್ದ. ಹೊಟ್ಟೆಪಾಡಿಗಾಗಿ ಬೇಟೆಯಾಡುವುದನ್ನು ಕಲಿತಿದ್ದ ಆತನಿಗೆ ತನ್ನ ಬಟ್ಟೆಗಳನ್ನು ತಾನೇ ಹೊಲಿದುಕೊಳ್ಳುವುದೂ ಸಹ ರೂಢಿಯಾಗಿತ್ತು. ಪ್ರತಿಕೂಲ ಹವಾಮಾನವನ್ನು ಎದುರಿಸುತ್ತಲೇ ಸೂರ್ಯರಶ್ಮಿಯ ಸಹಾಯದಿಂದ ಕಾಲಮಾನವನ್ನು ಕಂಡುಕೊಳ್ಳುವ ವಿದ್ಯೆಯನ್ನು ಸಹ ಆತ ಕಲಿತ. ಅಪಾಯಕಾರಿ ವಿಷಜಂತುಗಳಿಂದ ರಕ್ಷಿಸಿಕೊಳ್ಳುವ ಚಾಣಾಕ್ಷತೆ ಅವನಿಗೆ ತಾನಾಗಿಯೇ ಅಭ್ಯಾಸವಾಗಿ ಹೋಗಿತ್ತು. ವಿಷಕಾರಿ ಸಸ್ಯಗಳ ಬಗ್ಗೆ ಆತ ತನ್ನ ಪಯಣದುದ್ದಕ್ಕೂ ಅರಿತುಕೊಳ್ಳುತ್ತಲೇ ಎಚ್ಚರಿಕೆಯಿಂದ ಸಾಗಿದ. ಪ್ರಯಾಣದ ಆರಂಭದಲ್ಲಿ ತನಗೆ ಅನ್ನದಾತರಾಗಿದ್ದ, ಆಶ್ರಯದಾತರಾಗಿದ್ದ ಜನರನ್ನು ಮತ್ತೂಮ್ಮೆ ಭೇಟಿಯಾದ. ಕೃತಜ್ಞತೆ ಸಲ್ಲಿಸಿದ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಆಗಂತುಕರಾದ ಅಲೆಮಾರಿಗಳಿಗೆ ಸಹಾಯ ಮಾಡುವ ಆ ಜನರ ಗುಣವನ್ನು ಅರಿತ ಆತ ನಿಜಕ್ಕೂ ಮೂಕವಿಸ್ಮಿತನಾಗಿದ್ದ.
ತಾನು ಮನೆಬಿಟ್ಟು ಎರಡು ವರ್ಷಗಳಷ್ಟು ಸಮಯವಾಯಿತು ಎಂದು ಅವನಿಗರಿವಾಗಿದ್ದು ಮನೆಯ ಹೊಸ್ತಿಲಿಗೆ ಬಂದು ನಿಂತಾಗಲೇ. ಮನೆ ತಲುಪಿದ ತಕ್ಷಣವೇ ಅಪ್ಪನ ಕೋಣೆಯತ್ತ ಧಾವಿಸಿದ ಆತನಿಗೆ ಅಪ್ಪ ನೆಮ್ಮದಿಯಿಂದ ನಿದ್ರಿಸುತ್ತಿದ್ದದ್ದನ್ನು ಕಂಡು ಕೊಂಚ ನಿರಾಳವಾಯಿತು. ಮಲಗಿಕೊಂಡಿದ್ದ ಅಪ್ಪನ ಪಕ್ಕದಲ್ಲಿ ಕುಳಿತುಕೊಂಡ ಆತ ಪಿಸುದನಿಯಲ್ಲಿ ‘ಅಪ್ಪ’ಎಂದ. ಅಪ್ಪನನ್ನು ನಿದ್ರೆಯಿಂದೆಬ್ಬಿಸಬಾರದೆಂಬ ಕಾಳಜಿ ಅವನದ್ದಾಗಿತ್ತಾದರೂ ಮಗನ ಮೆಲುದನಿಯನ್ನು ಕೇಳಿದ ವೃದ್ಧ ಎದ್ದು ಕುಳಿತ. ಮಗನನ್ನು ಕಂಡ ಕ್ಷಣವೇ ಸಂತಸದಿಂದ ಅವನನ್ನು ಬಿಗಿದಪ್ಪಿಕೊಂಡು, ‘ನಿನ್ನ ಪ್ರಯಾಣ ಹೇಗಿತ್ತು ಮಗು’ ಎಂದು ಪ್ರೀತಿಯಿಂದ ಕೇಳಿದ. ‘ಪ್ರಯಾಣ ನಿಜಕ್ಕೂ ಅದ್ಭುತವಾಗಿತ್ತು ಅಪ್ಪ’ ಎಂದವನು ನುಡಿದ. ಮಾತು ಮುಂದುವರೆಸುತ್ತ ‘ಆದರೆ ಕ್ಷಮಿಸಿ ಅಪ್ಪ, ನೀವು ಅಡಗಿಸಿಟ್ಟಿದ್ದ ನಿಧಿಯನ್ನು ಗಳಿಸಿಕೊಳ್ಳುವಲ್ಲಿ ನಾನು ವಿಫಲನಾದೆ, ನನಗದು ನಿಶ್ಚಿತ ಸ್ಥಳದಲ್ಲಿ ಸಿಗಲೇ ಇಲ್ಲ. ಬಹುಶ: ಇನ್ಯಾರೋ ನನಗಿಂತಲೂ ಮೊದಲೇ ಅದನ್ನು ಹೊತ್ತೂಯ್ದಿರಲಿಕ್ಕೂ ಸಾಕು’ ಎಂದು ಹೇಳಿದ ಮಗನ ಧ್ವನಿಯಲ್ಲೊಂದು ತಪ್ಪಿತಸ್ಥ ಭಾವ.
‘ಅಲ್ಲಿ ಖಜಾನೆ ಇದ್ದಿದ್ದರೆ ತಾನೇ ನಿನಗೆ ಸಿಗುವುದಕ್ಕೆ,ಅಲ್ಲಿ ಯಾವ ಖಜಾನೆಯೂ ಇರಲಿಲ್ಲ ಮಗನೇ..’ ಎಂದ ಅಪ್ಪನ ಮುಖದಲ್ಲೊಂದು ಸಣ್ಣ ಮಂದಹಾಸ. “ಖಜಾನೆಯೇ ಇರಲಿಲ್ಲವಾ..?? ಹಾಗಿದ್ದರೆ ನೀವು ನನ್ನನ್ನಲ್ಲಿ ಕಳುಹಿಸಿದ್ದೇಕೆ ಅಪ್ಪ’ ಎಂಬ ಕುತೂಹಲ ತುಂಬಿದ ಮರುಪ್ರಶ್ನೆ ಪುತ್ರನದ್ದು.’ ನಿನ್ನ ಪ್ರಶ್ನೆಗೆ ನಾನು ಉತ್ತರವನ್ನು ಹೇಳುವ ಮುನ್ನ ನನ್ನ ಪ್ರಶ್ನೆಗೆ ನೀನು ಉತ್ತರಿಸು ಮಗು, ಇಲ್ಲಿಂದ ಹೊರಬಿದ್ದ ನಂತರ ನಿನ್ನ ಆರಂಭಿಕ ಪ್ರಯಾಣ ಹೇಗಿತ್ತು ಎಂದು ಮೊದಲು ವಿವರಿಸು. ದಾರಿಯಲ್ಲಿ ನಿನಗೆ ಸಿಕ್ಕ ವಿಭಿನ್ನ ಪ್ರದೇಶಗಳು, ಬದಲಾಗುತ್ತ ಸಾಗಿದ ಋತುಗಳು ನಿನ್ನ ಮನಸ್ಸಿಗೆ ಮುದ ನೀಡಿದವೇ..? ದಾರಿಯಲ್ಲಿ ಸಿಕ್ಕ ಹೊಸಹೊಸ ಜನರ ಸ್ನೇಹವನ್ನು ನೀನು ಸಂಪಾದಿಸಿದೆಯಾ’? ಎಂದು ಪ್ರಶ್ನಿಸಿದ ಹಿರಿಯ. “ಇಲ್ಲಿಂದ ಹೊರಟ ಕ್ಷಣದಿಂದ ನನ್ನ ಗಮನವೆಲ್ಲ ನಿಧಿಯ ಗಳಿಕೆಯ ಮೇಲೆಯೇ ಇದ್ದುದರಿಂದ ನಾನು ಪಯಣವನ್ನು ಎಳ್ಳಷ್ಟೂ ಅನುಭವಿಸಲಿಲ್ಲ. ಆದರೆ ವಾಪಸ್ಸು ಬರುವಾಗಿನ ಕತೆ ಬೇರೆ. ದಾರಿಯಲ್ಲಿ ನಾನು ಅನೇಕ ಸ್ನೇಹಿತರನ್ನು ಸಂಪಾದಿಸಿಕೊಂಡೆ. ಹತ್ತಾರು ಹೂವುಗಳ ಅರಳುವಿಕೆಯನ್ನು ಕಂಡು ಸಂತಸಪಟ್ಟೆ. ಪಯಣವನ್ನು ಅದೆಷ್ಟು ಉತ್ಕಟವಾಗಿ ಅನುಭವಿಸಿದೆನೆಂದರೆ ನಿಧಿ ಸಿಗಲಿಲ್ಲವೆನ್ನುವ ನನ್ನ ನಿರಾಸೆಯೂ ಮಾಯವಾಗಿ ಹೋಗಿತ್ತು’ ಎಂದುತ್ತರಿಸಿದ ಮಗ. ಮಗನ ಮಾತುಗಳಿಗೆ ಮುಗುಳ್ನಕ್ಕು ಮಗನ ಮೈದಡವಿದ ಅಪ್ಪ, ‘ಬದುಕೂ ಸಹ ನಿನ್ನ ಪಯಣದಂತೆಯೇ ಮಗು. ನಿನ್ನ ಬಾಳಿನ ಗುರಿಯೆನ್ನುವ ಅಗೋಚರ ನಿಧಿಯತ್ತ ಸಾಗುತ್ತ ಬದುಕಿನ ಅನುಕ್ಷಣವನ್ನು ಅನುಭವಿಸದಂತಾಗಿಬಿಟ್ಟರೇ ಬಾಳಿನಲ್ಲಿ ಸಂತಸವನ್ನು ಕಂಡುಕೊಳ್ಳಲಾಗದು. ಗುರಿಯೆನ್ನುವ ಖಜಾನೆಯತ್ತ ಲಕ್ಷವಿಡುತ್ತ ಸಾಗುವ ನಾವುಗಳು ಬದುಕಿನ ಅದೆಷ್ಟೂ ಸಂತೋಷಗಳನ್ನು ಕಳೆದುಕೊಂಡುಬಿಡುತ್ತೇವೆ’ ಎಂದು ನುಡಿದು ಸುಮ್ಮನಾದ. ಅವರಿಬ್ಬರ ನಡುವ ಒಂದು ಕ್ಷಣದ ನೆಮ್ಮದಿಯ ಮೌನ. ಮಗನಿಗದು ಜ್ಞಾನೋದಯದ ಕಾಲ.
-ಗುರುರಾಜ್ ಕೋಡ್ಕಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.