ಗ್ರೂಪ್ ಫೋಟೊ ಕಳೆದುಹೋಗಿದೆ ಆದರೆ ನೆನಪು ಹಾಗೇ ಉಳಿದಿದೆ!
Team Udayavani, Mar 28, 2017, 3:50 AM IST
ಒಂದು ಬಾರಿ ನನ್ನ ಗೆಳೆಯನೊಬ್ಬ ಹೆಚ್ಚು ಚಪಾತಿ ತಿನ್ನುವ ಸವಾಲು ಸ್ವೀಕರಿಸಿ ಹದಿನೆಂಟು ಚಪಾತಿ ತಿಂದು ಎಂಟು ಜನರ ಅರೆಹೊಟ್ಟೆಗೆ ಕಾರಣನಾಗಿದ್ದ. ನಾವು ಪೆಚ್ಚುಮೋರೆ ಹಾಕಿಕೊಂಡು ನಿಂತಾಗ ನಮ್ಮನ್ನು ನೋಡಿ ಗೇಲಿ ಮಾಡಿದ್ದ. ಸ್ವಲ್ಪ ಹೊತ್ತಿನ ನಂತರ ಹೊಟ್ಟೆನೋವಿನಿಂದ ಒದ್ದಾಡಿದ್ದನ್ನು ಕಂಡು ನಗುವ ಸರದಿ ನಮ್ಮದಾಯಿತು.
ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ಮನೆಯಲ್ಲಿದ್ದುಕೊಂಡೇ ಶಾಲೆಗೆ ಹೋದವನು ನಾನು. ನಂತರ ಪಿಯುಸಿಯಿಂದ ಆರಂಭವಾದ ಹಾಸ್ಟೆಲ್ ಜೀವನ ಕಟ್ಟಿಕೊಟ್ಟ ನೆನಪುಗಳ ಬುತ್ತಿ ತುಂಬಾ ರುಚಿ ರುಚಿಯಾದದ್ದು. ಮನೆಯಲ್ಲಿದ್ದಾಗ ಹಾಲು ಅನ್ನ, ಮೊಸರನ್ನ, ಜೋಳದ ಮುದ್ದೆಗೆ ಬೆಲ್ಲ ಕಲಸಿಕೊಂಡು, ಪಲ್ಯದಲ್ಲಿ ತುಪ್ಪಹಾಕಿಕೊಂಡು ಉಣ್ಣುತ್ತಿದ್ದ ನನಗೆ ಖಾರದ ರುಚಿಯೇ ಗೊತ್ತಿರಲಿಲ್ಲ. ಹಾಸ್ಟೆಲ್‌ನ ಸಾರು ಅಂದರೆ ಬಿಸಿ ನೀರಿಗೆ ಖಾರದ ಪುಡಿ ಮಿಕ್ಸ್ ಮಾಡಿಟ್ಟಂತಿರುತ್ತಿತ್ತು. ಅನ್ನಕ್ಕೆ ಕಲಸಿಕೊಂಡು ಉಣ್ಣುವಾಗ ನಾಲಿಗೆಯೊಂದಿಗೆ ಕಣ್ಣು ಕೆಂಪಾಗಿ ಉರಿಯುತ್ತಿತ್ತು. ಬಿಟ್ಟು ಹೋಗಬೇಕೆಂದುಕೊಂಡರೆ ಓದಿಗೆ ಹಾಸ್ಟೆಲ್ ವಾಸ ಅನುಕೂಲಕರವಾಗಿದ್ದರಿಂದ ಅನಿವಾರ್ಯವಾಗಿ ಉಳಿದುಕೊಳ್ಳಲು ಗಟ್ಟಿ ಮನಸು ಮಾಡಿದೆ. ವಾರಕ್ಕೊಂದು ಮೊಟ್ಟೆ ಕೊಡುವುದು ಹಾಸ್ಟೆಲ್‌ನ ನಿಯಮ. ನಾನು ಮೊಟ್ಟೆ ತಿನ್ನುತ್ತಿರಲಿಲ್ಲ. ಆ ದಿನ ಮೊಟ್ಟೆ ತಿನ್ನುವ ಗೆಳೆಯ ನನ್ನ ಜೊತೆ ಕೂತಿರುತ್ತಿದ್ದ. ಅವನು ಮೊಟ್ಟೆ ತೆಗೆದುಕೊಂಡು ಅದರ ಬದಲಾಗಿ ನನಗೊಂದು ಚಪಾತಿ ಕೊಡುತ್ತಿದ್ದ. ಈ ನಿಯಮ ಭಾವನೆಗಳಿಗೆ ತಿರುಗಿ ಇಬ್ಬರೂ ಉತ್ತಮ ಸ್ನೇಹಿತರಾದೆವು. ನಂತರ ನನಗೆ ಮೊಟ್ಟೆ ತಿನ್ನುವುದನ್ನು ಕಲಿಸಿದ.
ಹಾಸ್ಟೆಲ್‌ನಲ್ಲಿ ಒಂದು ದಿನ ಯಾರಾದರೂ ಗೈರು ಹಾಜರಾದರೆ ಗೆಳೆಯರ ನಡುವೆ ಗೈರಾದವರ ಪಾಲಿನ ಮೊಟ್ಟೆ ಮತ್ತು ಚಪಾತಿಗಾಗಿ ಪೈಪೋಟಿ ಇರುತ್ತಿತ್ತು. ಅವು ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿಗಳ ಪಾಲಾಗುತ್ತಿದ್ದ ಸಂಭವವೇ ಹೆಚ್ಚಾಗಿತ್ತು. ಇದನ್ನು ಒಂದು ರೀತಿಯಲ್ಲಿ ರ್ಯಾಗಿಂಗ್ ಅನ್ನಬಹುದಾಗಿತ್ತು. ಇದರ ಸೇಡು ತೀರಿಸಿಕೊಳ್ಳಲು ಅಡುಗೆಯವರೊಡನೆ ಒಪ್ಪಂದ ಮಾಡಿಕೊಂಡು ಹಿರಿಯ ವಿದ್ಯಾರ್ಥಿಗಳಿಗೆ ನಮ್ಮ ಸ್ನೇಹಿತರ ಪಾಲು ಸಿಗದಂತೆ ಮಾಡಲು ಹಲವಾರು ಉಪಾಯಗಳನ್ನು ನಾವು ಹೆಣೆಯುತ್ತಿದ್ದವು.
ಚಪಾತಿಯನ್ನು ಹೆಚ್ಚು ಪಡೆಯಲು ನಾವು ಮಾಡುತ್ತಿದ್ದ ಟೆಕ್ನಿಕ್‌ಗಳು ಅಸಾಧಾರಣವಾಗಿರುತ್ತಿದ್ದವು. ಅಡುಗೆಯವರು ತಟ್ಟೆಗೆ ಹಾಕಿ ತಿರುಗುವಷ್ಟರಲ್ಲಿಯೇ ಹಿಂದೆ ಇದ್ದ ಗೆಳೆಯನಿಗೆ ಪಾಸ್ ಮಾಡಿ “ಒಂದೇ ಹಾಕಿದ್ದೀರಾ?’ ಎಂಬ ಮೊಂಡು ವಾದ ಮಾಡಿ ಮತ್ತೂಂದು ಚಪಾತಿ ಗಿಟ್ಟಿಸಿಕೊಳ್ಳುವುದು ಮತ್ತು “ಅಡುಗೆ ಸರಿ ಮಾಡಲ್ಲ ಅಂತ ವಾರ್ಡನ್‌ಗೆ ಹೇಳ್ತೀವಿ’ ಎಂದು ಬ್ಲ್ಯಾಕ್‌ವೆುàಲ್ ಮಾಡುವುದು… ಇನ್ನೂ ಏನೇನೋ… ಒಂದು ಬಾರಿ ನನ್ನ ಗೆಳೆಯನೊಬ್ಬ ಹೆಚ್ಚು ಚಪಾತಿ ತಿನ್ನುವ ಸವಾಲು ಸ್ವೀಕರಿಸಿ ಹದಿನೆಂಟು ಚಪಾತಿ ತಿಂದು ಎಂಟು ಜನರ ಅರೆಹೊಟ್ಟೆಗೆ ಕಾರಣನಾಗಿದ್ದ. ನಾವು ಪೆಚ್ಚುಮೋರೆ ಹಾಕಿಕೊಂಡು ನಿಂತಾಗ ನಮ್ಮನ್ನು ನೋಡಿ ಗೇಲಿ ಮಾಡಿದ್ದ. ಸ್ವಲ್ಪ ಹೊತ್ತಿನ ನಂತರ ಹೊಟ್ಟೆನೋವಿನಿಂದ ಒದ್ದಾಡಿದ್ದನ್ನು ಕಂಡು ನಗುವ ಸರದಿ ನಮ್ಮದಾಯಿತು.
ಒಂದು ದಿನ ಸಾಂಬಾರು ಚೆನ್ನಾಗಿರಲಿಲ್ಲ. ಸಮಯಾವಕಾಶಕ್ಕೆ ಕಾಯುತ್ತಿದ್ದ ಹುಡುಗರು ಇಡೀ ಸಾಂಬಾರು ಪಾತ್ರೆಯೊಂದಿಗೆ ಬಿ.ಸಿ.ಎಂ ಆಫೀಸಿನ ಮುಂದೆ ಮುಷ್ಕರ ಹೂಡಿದ್ದು ಇವತ್ತಿಗೊಂದು ಸಿಹಿನೆನಪು. ಇವತ್ತಿನ ಯಾವುದೇ ಅವ್ಯವಸ್ಥೆಗಳು ಕಂಡುಬಂದರೂ ಮುಲಾಜಿಲ್ಲದೇ ಪ್ರತಿಭಟಿಸುವ ಛಾತಿಯನ್ನು ಹುಟ್ಟಿಸಿದ ಹಾಸ್ಟೆಲ್, ಕ್ರಾಂತಿಕಾರರನ್ನು ಹುಟ್ಟು ಹಾಕುವ ತೊಟ್ಟಿಲೆಂದರೆ ಉತ್ಪ್ರೇಕ್ಷೆಯಲ್ಲ.
ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದ ನಮ್ಮಲ್ಲಿ ಓದಿನಲ್ಲೊಂದು ಅರೋಗ್ಯಕರ ಸ್ಪರ್ಧೆ ಇರುತ್ತಿತ್ತು. ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿದ್ದರೂ ವಿಷಯ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಗುಂಪು ಅಧ್ಯಯನದ ಲಾಭ ಎಲ್ಲರಿಗೂ ದಕ್ಕುತ್ತಿತ್ತು. ಹಾಸ್ಟೆಲ್‌ನಿಂದ ಸ್ವಲ್ಪ$ದೂರವಿದ್ದ ಮಠ ಮತ್ತು ತೋಟಕ್ಕೆ ಓದಲು ಹೋಗುತ್ತಿದ್ದೆವು. ಈ ರೀತಿಯ ಅಭ್ಯಾಸದಿಂದ ಸಹಜವಾಗಿಯೇ ಉತ್ತಮ ಫಲಿತಾಂಶ ಬರುತ್ತಿತ್ತು. ಕೆಲವು ಸ್ನೇಹಿತರು ಕಾಂಪಿಟೇಶನ್‌ನಿಂದಾಗಿ ಯಾರಿಗೂ ಕಾಣದಂತೆ ಕದ್ದು ಓದುವ ರೂಢಿಯಿಟ್ಟುಕೊಂಡಿದ್ದರು. ಎಲ್ಲರೆದುರಿಗೆ ಬೇಗ ಮಲಗಿ, ಎಲ್ಲರೂ ಮಲಗಿದ ಮೇಲೆ ಎದ್ದು ಓದುತ್ತಿದ್ದರು! ಒಬ್ಬ ಸ್ನೇಹಿತನಿದ್ದ. ಆತ ಯಾರೊಂದಿಗೂ ಓದಿನ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ತಾನು ಓದುವವವನೇ ಇಲ್ಲ ಎಂಬಂತಿರುತ್ತಿದ್ದ ಆತನ ದಿಂಬಿನ ಕೆಳಗೆ ಸದಾ ಪುಸ್ತಕವಿರುತ್ತಿತ್ತು. ಎಲ್ಲರೂ ಮಲಗಿದಾಗ ಓದುತ್ತಿದ್ದ. ಯಾರಾದರೂ ನೋಡಿದೊಡನೆ ಪುಸ್ತಕವನ್ನು ದಿಂಬಿನ ಕೆಳಗೆ ಅಡಗಿಸಿಟ್ಟು ಮಲಗಿದಂತೆ ನಟಿಸುತ್ತಿದ್ದ. ಇದರ ಮಜಾ ತೆಗೆದುಕೊಳ್ಳುತ್ತಿದ್ದ ನಾವು ಬೇಕಂತಲೇ ಅವನನ್ನು ಆಟ ಆಡಿಸುತ್ತಿದ್ದುದು ಆತನಿಗೆ ಗೊತ್ತೇ ಆಗಿರಲಿಲ್ಲ.
ಇನ್ನೊಬ್ಬ ಪಿಯುಸಿ ಸೈನ್ಸ್ ವಿಭಾಗದ ಒಬ್ಬ ಸ್ನೇಹಿತನಿದ್ದ ನಮ್ಮ ಜೊತೆ. ಆತ ಲೋಟದಲ್ಲಿ ಮರಳು ತುಂಬಿ ಅದರಲ್ಲೊಂದು ಧ್ವಜ ಸಿಕ್ಕಿಸಿ ಕುಳಿತನೆಂದರೆ ಓದಲು ಆರಂಭಿಸಿದನೆಂದರ್ಥ. ಮತ್ತೆ ಎದ್ದಾಗ ಧ್ವಜ ತೆಗೆಯುತ್ತಿದ್ದ. ರಾತ್ರಿಯೆಲ್ಲಾ ಓದಿ ಕಾಲೇಜಿನಲ್ಲಿ ನಿದ್ದೆ ಮಾಡಿ ಲೆಕ್ಚರರ್‌ರಿಂದ ಬೈಸಿಕೊಳ್ಳುತ್ತಿದ್ದ ಮತ್ತು ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆ ಬಂದಾಗ ಮಾತ್ರ ಓದುತ್ತಿದ್ದ ಸ್ನೇಹಿತರಿಗೇನೂ ಕೊರತೆಯಿರಲಿಲ್ಲ.
ಸಂತಸದ ಸಂಗತಿಯೇನೆಂದರೆ ಇವತ್ತು ಬಹುಪಾಲು ಸ್ನೇಹಿತರು ಉತ್ತಮ ಉದ್ಯೋಗದಲ್ಲಿದ್ದಾರೆ. ಹಾಸ್ಟೆಲ್‌ನ ಋಣ ತುಂಬಾ ದೊಡ್ಡದು. ಹಾಸ್ಟೆಲ್‌ನಿಂದ ಪ್ರವಾಸಕ್ಕೆ ಹೋದಾಗ ವಿದೇಶಿಯರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೋಗಿ ಅವರು ಹೊಡೆಯಲು ಅಟ್ಟಿಸಿಕೊಂಡು ಬಂದಿದ್ದು ತಂಪು ತಂಪಾದ ನೆನಪು. ಟ್ರಂಕ್‌ಗಳ ಬೀಗ ಮುರಿದು ಊರಿನಿಂದ ತಂದಿದ್ದ ತಿಂಡಿಗಳನ್ನು ತಿನ್ನುವುದೆಂದರೆ ಎಲ್ಲಿಲ್ಲದ ಖುಷಿ. ಯಾರ ಪ್ಯಾಂಟ್ ಶರ್ಟ್‌ಗಳನ್ನು ಯಾರ್ಯಾರು ಹಾಕಿಕೊಳ್ಳುತ್ತಿದ್ದರೋ… ಅದು ಆ ಬಟ್ಟೆಗಳಿಗಷ್ಟೇ ಗೊತ್ತಿರುತ್ತಿತ್ತು. ಎಲ್ಲರ ಮೈಮೇಲೆ ಓಡಾಡುತ್ತಿದ್ದ ಸೋಪು ಸವೆದು ಹೋಗಿದೆ, ಆದರೆ ನೆನಪಿನ ಘಮಘಮ ಇನ್ನೂ ಇದೆ. ಪೇಸ್ಟುಗಳ ಬಾಯಿಗೆ ಒಡ್ಡುತ್ತಿದ್ದ ಬ್ರಶ್‌ಗಳದೆಷ್ಟೋ… ಕ್ರಿಕೆಟ್ ಮತ್ತು ಕೇರಂ ಆಡುವಾಗ ಹುಟ್ಟುತ್ತಿದ್ದ ದ್ವೇಷ- ವೈಷಮ್ಯಗಳು ಬೆಳಗಾಗುವ ಹೊತ್ತಿಗೆ ಮುಗಿದೇ ಹೋಗಿರುತ್ತಿದ್ದವು. ವರ್ಷದ ಕೊನೆಗೆ ತೆಗೆಸಿಕೊಂಡಿದ್ದ ಗ್ರೂಫ್ ಫೋಟೋ ಈಗ ಕಳೆದು ಹೋಗಿದೆ. ಆದರೆ ನೆನಪು ಹಾಗೆಯೇ ಉಳಿದಿದೆ.
ಸೋಮು ಕುದರಿಹಾಳ, ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.