ಸುಳ್ಳೇ ನಮ್ಮನೆ ದೇವ್ರು
Team Udayavani, Feb 5, 2019, 12:30 AM IST
ಉಪನ್ಯಾಸಕನ ಪೀಠದಲ್ಲಿ ಕುಳಿತವರಿಗೆ ಸಮಸ್ಯೆಯಾಗುವುದೆಂದರೆ ಮಕ್ಕಳು ಕಟ್ಟುವ ನೂರು ಕಥೆಗಳಲ್ಲಿ ನೈಜ ಯಾವುದು, ಕಾಲ್ಪನಿಕ ಯಾವುದು ಎಂದು ತಿಳಿಯುವುದು. ಸತ್ಯವು ಇನ್ನೂ ಶೂ ಲೇಸ್ ಕಟ್ಟುವಷ್ಟರಲ್ಲಿ, ಸುಳ್ಳೆಂಬುದು ಅದಾಗಲೇ ಪ್ರಪಂಚ ಪರ್ಯಟನೆಯ ಅರ್ಧಸುತ್ತು ಮುಗಿಸಿರುತ್ತದಂತೆ. ಹಾಲ್ ಟಿಕೇಟಿಗಾಗಿ ದುಂಬಾಲು ಬೀಳುವ ವಿದ್ಯಾರ್ಥಿಗಳ ಕಥೆಗಳೂ ಹೀಗೆಯೇ…
“ಸಾರ್, ನಮ್ಮನೇಲಿ ನಾವು ನಾಲ್ಕು ಜನ ಇರೋದು. ನಮ್ಮಕ್ಕ, ನಮ್ಮಪ್ಪ, ಅಮ್ಮ. ಅಪ್ಪ ತುಂಬಾ ಕುಡೀತಾರೆ ಸಾರ್. ಅವ್ರು ದುಡಿದಿದ್ದೇನೂ ಮನೆಗೆ ಸಿಗೋಲ್ಲ. ಅಮ್ಮ ನಮ್ಮನ್ನು ನೋಡ್ಕೊತಿರೋದು. ಅವ್ರು ಕಷ್ಟಪಡೋದು ನೋಡೋಕಾಗೆªà ನಾನೂ ಏನಾದರೂ ದುಡಿದು ನಮ್ಮ ವಿದ್ಯಾಭ್ಯಾಸದ ದಾರಿ ನೋಡ್ಕೊಬೇಕು ಅಂತ ಅಂದ್ಕೊಡೆ ಸರ್. ಅಕ್ಕ ಗಾರ್ಮೆಂಟ್ಸಲ್ಲಿ ಕೆಲಸ ಮಾಡ್ತಾಳೆ. ಅವಳ ಮದ್ವೆ ಜವಾಬ್ದಾರೀನೂ ನಮ್ಮದೇ ಸರ್. ಅಮ್ಮ ದಿನಾಲೂ ಕಣ್ಣೀರು ಹಾಕ್ತಾರೆ ಸರ್. ಅದಕ್ಕೆ ನಾನೂ ಅಮ್ಮನಿಗೆ ಗೊತ್ತಾಗದ ಹಾಗೆ ಕೆಲಸಕ್ಕೆ ಹೋಗ್ತಿàನಿ. ಮೂಟೆ ಹೊರೋವಲ್ಲಿಂದ ತೊಡಗಿ ಗಾರೆ ಕೆಲಸದವರೆಗೂ ಸರ್. ಬೇರೆ ಎಲ್ಲಾದರೂ ನೋಡೋಣ ಅಂದ್ರೆ ವಿದ್ಯಾಭ್ಯಾಸ ಇಲ್ಲದೆಲೆ ಆಗಲ್ಲ ಅಲ್ವಾ ಸರ್? ಈಗ ನೀವು ಹಾಲ್ ಟಿಕೆಟ್ ಕೊಡೊಲ್ಲ ಅಂದ್ರೆ ನಮ್ಮಮ್ಮ ನನ್ನ ಮೇಲಿಟ್ಟಿರೋ ಆಸೆಗಳೆಲ್ಲ ಮಣ್ಣು ಪಾಲಾಗ್ತವೆ ಸರ್. ನಿಮ್ಮ ಕಾಲಿಗೆ ಬೀಳ್ತೀನಿ ಸರ್. ನಾನು ಕಾಲೇಜಿಗೆ ಅಂತ ಮನೆಯಿಂದ ಹೊರಟು ಕೆಲಸಕ್ಕೆ ಹೋಗ್ತಿದ್ದದ್ದನ್ನು ಅಮ್ಮಂಗೆ ಮಾತ್ರ ಹೇಳ್ಬೇಡಿ ಸರ್…’ ಒಂದೇ ಉಸಿರಲ್ಲಿ ಆ ವಿದ್ಯಾರ್ಥಿ ಬಡಬಡಿಸುತ್ತಿದ್ದರೆ ಅವನ ಕಣ್ಣಾಲಿಗಳಲ್ಲಿ ಮಾತ್ರವೇ ಏನು, ಹಾಲ್ ಟಿಕೆಟ್ ಕೊಡಬೇಕಾದವರ ಕಣ್ಣಲ್ಲೂ ತೆಳುವಾಗಿ ನೀರಪಸೆಯಿತ್ತು.
ಎಪ್ಪತ್ತೈದು ಶೇಕಡಾ ಹಾಜರಾತಿ ಕಡ್ಡಾಯ. ಅದರ ಹೊರತಾಗಿ ಪರೀಕ್ಷೆ ಬರೆಯುವುದಕ್ಕೆ ಅನುಮತಿ ಕೊಡಲಾಗದು ಎಂಬ ನಿಯಮವಿದ್ದರೂ, ಅದನ್ನು ಪ್ರತಿವರ್ಷವೂ ಮರೆಯದಂತೆ ವಿದ್ಯಾರ್ಥಿಗಳ ಗಮನಕ್ಕೆ ತಂದು ತಿಂಗಳಿಗೊಂದಾವರ್ತಿಯಂತೆ ನೋಟೀಸು ಬೋರ್ಡಿನ ಮೇಲೆ ಹಾಜರಾತಿ ಕಡಿಮೆ ಇರುವವರ ಪಟ್ಟಿ ಪ್ರಕಟಿಸಿ ಮುಂದಿನ ದಿನಗಳಲ್ಲಿ ಆದರೂ ಅವರು ಪ್ರತಿದಿನ ಬಿಡದಂತೆ ಕಾಲೇಜಿಗೆ ಬರುವಂತೆ ಮಾಡುವುದು ಕಾಲೇಜಿನ ಹೊಣೆಗಾರಿಕೆ! ಆಯಾ ತರಗತಿಗಳ ಕ್ಲಾಸ್ ಟೀಚರ್ ಎಂಬ ಹಣೆಪಟ್ಟಿ ಹೊತ್ತವರಿಗಂತೂ ದಿನಬೆಳಗಾದರೆ ಅದೊಂದು ಹೆಚ್ಚುವರಿ ಕೆಲಸ, ವಿದ್ಯಾರ್ಥಿಗಳು ಎಷ್ಟು ಮಂದಿ ಬಂದಿದ್ದಾರೆ, ಎಷ್ಟು ಮಂದಿ ಗೈರುಹಾಜರಿ ಎಂಬುದನ್ನು ಲೆಕ್ಕವಿಡುವುದು. ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು. ಇಷ್ಟೆಲ್ಲದರ ನಡುವೆಯೂ ಕಾಲೇಜಿಗೆ, ಕ್ಲಾಸಿಗೆ ತಪ್ಪಿಸಿಕೊಂಡು ಒಂದಲ್ಲ ಒಂದು ಕಾರಣಗಳನ್ನು ನೀಡಿ ಪರೀûಾ ಸಂದರ್ಭ ಚಡಪಡಿಸುವವರ ಕಥೆ ಇಂದು ನಿನ್ನೆಯದಲ್ಲ.
ಹಲವು ಖಾಸಗಿ ಕಾಲೇಜುಗಳಲ್ಲಿ ದಿನನಿತ್ಯವೂ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮನೆಗಳಿಗೆ ಕರೆಮಾಡಿ “ನಿಮ್ಮ ಹುಡುಗ/ ಹುಡುಗಿ ಇಂದು ಕಾಲೇಜಿಗೆ ಬಂದಿಲ್ಲ’ ಎಂಬುದನ್ನು ತಿಳಿಸಿ, ಕಾರಣಗಳನ್ನು ತಿಳಿಯುವ ವ್ಯವಸ್ಥೆಯಿದೆ. ಹಾಜರಾತಿಯ ಸಲುವಾಗಿ ತಂದೆಯ ಅಥವಾ ತಾಯಿಯ ನಂಬರಿಗೆ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಆದರೆ, ಕಾಲೇಜಿನ ವ್ಯವಸ್ಥೆ ಚಾಪೆಯ ಕೆಳಗೆ ತೂರಿದರೆ ಮಕ್ಕಳು ರಂಗೋಲಿಯ ಕೆಳಗೆ ತೂರುತ್ತಾರೆ. ದಾಖಲಾತಿಯ ಸಂದರ್ಭ ಪೋಷಕರ ನಂಬರ್ ಕೊಡುವುದರ ಬದಲಾಗಿ ಮತ್ತಾವುದೋ ಅನಾಮಧೇಯರ ನಂಬರ್ ಕೊಡುತ್ತಾರೆ. ಅಥವಾ ಪೋಷಕರ ನಂಬರಿನಲ್ಲಿ ಕಾಲೇಜಿನ ಸಂದೇಶಗಳು ಬಾರದಂತೆ ಬ್ಲಾಕ್ ಮಾಡಿಬಿಡುತ್ತಾರೆ. ಯಾವತ್ತೋ ಒಂದು ದಿನ ಪೋಷಕರಿಗೆ ತಮ್ಮ ಮಕ್ಕಳ ಅಂಕಗಳು ಮತ್ತು ಹಾಜರಾತಿಯ ಕುರಿತು ಅನುಮಾನ ಕಾಡಿದಾಗ ಕಾಲೇಜಿಗೆ ಬರುತ್ತಾರೆ. ಕೆಲವರು ಉಪನ್ಯಾಸಕರ ಮೇಲೆ ಸಿಟ್ಟು ಮಾಡಿಕೊಳ್ಳುವುದಿದೆ. “ಏನ್ ಸಾರ್, ಅಷ್ಟೊಂದು ಫೀಸು ತೆಗೊಳ್ತೀರಾ…? ಮಕ್ಕಳ ಮೇಲೆ ಕೊಂಚಾನೂ ನಿಗಾ ಬೇಡ್ವರಾ? ಒಂದು ದಿನಾನಾರಾ ನಮಗೆ ತಿಳಿಸ್ಬೇಕೋ ಬೇಡ್ವೋ?’ ಎಂದು ಕೂಗಾಡುತ್ತಾರೆ. ನಿಜವಾದ ತಪ್ಪಿತಸ್ಥರು ಅವರ ಮಗನೋ, ಮಗಳ್ಳೋ ಆಗಿರುತ್ತಾರೆ. “ಇಷ್ಟು ದಿನ ನಮ್ಮ ಗಮನಕ್ಕೇ ತಂದಿಲ್ಲ’ ಎಂಬ ಅವರ ಆಕ್ರೋಶ, ಗಮನಕ್ಕೆ ಬರದಂತೆ ಮಾಡಿರುವುದು ಅವರ ಮಕ್ಕಳದೇ ಸಾಧನೆ! ಇನ್ನೂ ಕೆಲವರು ಉಪನ್ಯಾಸಕರೆದುರೇ ತಮ್ಮ ಮಕ್ಕಳಿಗೆ ರಪರಪನೆ ಬಾರಿಸುವುದೂ ಇದೆ. ಇಲ್ಲಿ ದೂರಬೇಕಾದದ್ದು ಯಾರನ್ನು?
“ಮಿಸ್, ನಮ್ಮಮ್ಮನಿಗೆ ಟೈಫಾಯ್ಡ ಬಂದು ಆಸ್ಪತ್ರೆಲಿ ಇದ್ರು. ಅವರನ್ನು ನೋಡ್ಕೊಳ್ಳೋದಕ್ಕೆ ಯಾರೂ ಇರಲಿಲ್ಲ. ಅಪ್ಪ ಕೆಲಸಕ್ಕೆ ಹೋಗಿಲ್ಲ ಅಂದ್ರೆ ಅಮ್ಮನ ಔಷಧಿಗೂ ಕಾಸಿರಲ್ಲ. ನಮಗೆ ಅಮ್ಮನ ಕಡೆಯಿಂದಾಗ್ಲೀ ಅಪ್ಪನ ಕಡೆಯಿಂದ ಆಗ್ಲೀ ಯಾರೂ ಇಲ್ಲ ಮಿಸ್. ನಾವು ಬಡವರು ಅಂತ ನಮ್ಮನ್ನು ದೂರ ಇಟ್ಟಿದ್ದಾರೆ… ಹಾಲ್ ಟಿಕೆಟ್ ಕೊಡಲ್ಲ ಅಂತ ಮಾತ್ರ ಹೇಳ್ಬೇಡಿ. ನನ್ನ ಜೀವನದ ಪ್ರಶ್ನೆ ಮಿಸ್…’ ಎಂದು ಅಲವತ್ತುಕೊಳ್ಳುವ ಹುಡುಗನ ಮಾತಿಗೆ ಕರಗಿ ಹಾಲ್ ಟಿಕೆಟ್ ಕೊಟ್ಟು ಕಳಿಸಿ ಕುಳಿತಲ್ಲಿಂದ ಎದ್ದು ಬಂದು ನೋಡಿದರೆ, ಕಾಣುವ ದೃಶ್ಯವೇ ಬೇರೆ. ತನ್ನ ಗೆಳೆಯರೊಂದಿಗೆ ನಿಂತುಕೊಂಡು “ಮಿಸ್ಸು ಭಾಳ ಎಮೋಷನಲ್ ಮಗಾ, ಅವ್ರ ಮುಂದೆ ನಮ್ಮಮ್ಮಂಗೆ ಆರಾಮಿರಲಿಲ್ಲ ಅಂದೆ ನೋಡು, ಹಾಲ್ ಟಿಕೆಟ್ ಕೊಡಿÕದ್ರು. ಈಗ ನೀನು ಏನು ಮಾಡ್ತೀಯಾ ನೋಡು ಮಚ್ಚಾ…’ ಎಂದು ಹೊಸ ನಟನೆಗೆ ನಿರ್ದೇಶನ ಮಾಡುತ್ತಿರುತ್ತಾನೆ! ಈ ನಾಟಕದಲ್ಲಿ ನಿಜಕ್ಕೂ ಸೋತವರಾರು? ಗೆದ್ದವರಾರು?
ಕನಸು ಕಾಣುವ ವಯಸ್ಸೇ ಆದರೂ ಕೆಲವು ಮಕ್ಕಳ ಕಣ್ಣ ಮುಂದೆ ಕೇವಲ ಬಣ್ಣಗಳಿರುವುದಿಲ್ಲ. ಬದುಕಿನ ಭಾರಕ್ಕೆ ಹೆಗಲು ಕೊಡಬೇಕಾದ ಹೊಣೆಗಾರಿಕೆ ಅವರನ್ನು ಬಣ್ಣಗಳ ಸಂತೆಯಿಂದ ಹೊರಗೆ ತಂದಿರುತ್ತದೆ. ಅವರೆದುರು ಇರುವುದು ಏನಿದ್ದರೂ ಕಪ್ಪುಬಿಳುಪಿನ ಬದುಕಿನ ಭಾವಚಿತ್ರಗಳು ಮಾತ್ರ. ಅಷ್ಟನ್ನಾದರೂ ಅವರು ಉಳಿಸಿಕೊಳ್ಳಬೇಕಾದರೆ ದುಡಿಮೆ ಅನಿವಾರ್ಯ. ಆದರೆ, ಎದೆಗೆ ಗುದ್ದುವ ಅಕ್ಷರಗಳನ್ನು ಮರೆಯಲಾದೀತೇ? ಓದಿನ ಹಂಬಲ ಅವರಲ್ಲಿ ಉಂಟುಮಾಡುವ ತಲ್ಲಣಗಳನ್ನು ಪದಗಳು ಕಟ್ಟಿ ಹಾಕಿಯಾವೇ? ಹಾಗೆಂದು, ಇರುವ ಸಣ್ಣ ಜಮೀನಿನಲ್ಲಿ ಬೆಳೆ ತೆಗೆಯಬೇಕಾದರೆ ಆಳುಗಳನ್ನಿಟ್ಟುಕೊಂಡು ಮಾಡಲಾಗದ ಅಪ್ಪ- ಅಮ್ಮನ ಸಂಕಷ್ಟ ತನ್ನದೂ ಎಂದು ಅರ್ಥಮಾಡಿಕೊಂಡ ಹುಡುಗ ಕೃಷಿ ಚಟುವಟಿಕೆಗಳು ಚುರುಕಾಗಿರಬೇಕಾದ ಸಮಯದಲ್ಲಿ ಕಾಲೇಜಿಗೆ ಬರಲೊಲ್ಲ. ತರಗತಿಯೆಂಬುದು ತನ್ನನ್ನು ಕಷ್ಟದ ಬದುಕಿನಿಂದ ಇನ್ನೊಂದು ಮಗ್ಗುಲಿಗೆ ಹೊರಳಿಸಬಲ್ಲ ರಂಗಮನೆ ಎಂಬುದು ತಿಳಿದಿದ್ದರೂ ಅವನು ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ರಂಗಮನೆಯಿಂದ ಕೊಂಚ ದೂರವೇ ಇರುತ್ತಾನೆ.
ಇಂತಹ ಮಕ್ಕಳಿಗೆ ಹಾಜರಾತಿಯ ಕೊರತೆಯ ನೆವ ಹಿಡಿದು ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂಬ ಕಟು ನಿರ್ಧಾರಕ್ಕೆ ಉಪನ್ಯಾಸಕನೂ ಬರಲೊಲ್ಲ. ನಿಯಮಗಳು ಇರುವುದು ಮುರಿಯುವುದಕ್ಕೇ ಎಂಬ ತತ್ವ ಅರಳಿಕೊಳ್ಳುವುದೇ ಇಲ್ಲಿ! ಯಾಕೆಂದರೆ ತನ್ನ ಶಿಕ್ಷಣ ಪಥವೂ ಕಲ್ಲುಮುಳ್ಳುಗಳ ದಾರಿಯಾಗಿದ್ದನ್ನು ಅವನೂ ಮರೆತಿರುವುದಿಲ್ಲವಲ್ಲ! ತಾನು ಸ್ವತಃ ನೊಂದವನಿಗೆ ಇತರರ ಕಂಬನಿ ಬಹುಬೇಗ ಕಾಣಿಸುತ್ತದೆ.
ಸುಳ್ಳು ಹೇಳುವುದಿದ್ದರೆ ನಂಬುವಂಥ ಸುಳ್ಳು ಹೇಳಬೇಕು ಎಂಬುದನ್ನು ವಿದ್ಯಾರ್ಥಿಗಳಷ್ಟು ಚೆನ್ನಾಗಿ ಅರಿತುಕೊಂಡವರು ಯಾರೂ ಇಲ್ಲ. ಈ ದಾರಿಯಲ್ಲಿ ಸಾಗುತ್ತಿರುವ ಹೆಣ್ಣುಮಕ್ಕಳಿಗೂ ಏನೂ ಕೊರತೆಯಿಲ್ಲ. ತಂತ್ರಜ್ಞಾನ ಮುಂದುವರಿದಷ್ಟೂ ಪ್ರಯೋಜನವಾಗುವುದಕ್ಕಿಂತ ತೊಂದರೆಯೇ ಹೆಚ್ಚು ಎಂಬುದಕ್ಕೆ ಇಂದಿನ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ.
ಉಪನ್ಯಾಸಕನ ಪೀಠದಲ್ಲಿ ಕುಳಿತವರಿಗೆ ಸಮಸ್ಯೆಯಾಗುವುದೆಂದರೆ ಮಕ್ಕಳು ಕಟ್ಟುವ ನೂರು ಕಥೆಗಳಲ್ಲಿ ನೈಜ ಯಾವುದು, ಕಾಲ್ಪನಿಕ ಯಾವುದು ಎಂದು ತಿಳಿಯುವುದು. ಸತ್ಯವು ಇನ್ನೂ ಶೂ ಲೇಸ್ ಕಟ್ಟುವಷ್ಟರಲ್ಲಿ, ಸುಳ್ಳೆಂಬುದು ಅದಾಗಲೇ ಪ್ರಪಂಚ ಪರ್ಯಟನೆಯ ಅರ್ಧಸುತ್ತು ಮುಗಿಸಿರುತ್ತದಂತೆ. ಹಾಲ್ ಟಿಕೇಟಿಗಾಗಿ ದುಂಬಾಲು ಬೀಳುವ ವಿದ್ಯಾರ್ಥಿಗಳ ಕಥೆಗಳೂ ಹೀಗೆಯೇ. ಹತ್ತು ಮಕ್ಕಳು ವಾಸ್ತವದ ಮಾತಾಡಿದರೆ ಇನ್ನು ತೊಂಭತ್ತು ಮಂದಿ ಮಿಥ್ಯೆಗೇ ನಿಜವೆಂಬ ಸುಣ್ಣ ಬಳಿದಿರುತ್ತಾರೆ. ಸತ್ಯಾಸತ್ಯತೆಯನ್ನು ವಿವೇಚಿಸಿ ಅರಿಯಬೇಕಾದದ್ದು ಉಪನ್ಯಾಸಕರಿಗಿರುವ ಸವಾಲು. “ವಜ್ರಾದಪಿ ಕಠೊರಾನಿ ಮೃದೂನಿ ಕುಸುಮಾದಪಿ’ ಎಂಬಂತಿರಬಲ್ಲ ಶಿಕ್ಷಕ ಮಾತ್ರ ಇಲ್ಲಿ ಗೆಲ್ಲುತ್ತಾನೆ, ಸಲ್ಲುತ್ತಾನೆ!
ಮಗಳು ಹೇಳಿದ ಸುಳ್ಳು
ಇತ್ತೀಚೆಗೆ ತಾಯಿಯೊಬ್ಬರು ಕಾಲೇಜಿಗೆ ಬಂದಿದ್ದರು. ಬಹಳ ಕಂಗಾಲಾಗಿ ಸೊರಗಿದಂತೆ ಇದ್ದ ಅವರನ್ನು ನೋಡಿದರೇ ಏನೋ ಎಡವಟ್ಟಾಗಿದೆ ಎಂಬುದು ಸರ್ವವಿದಿತವಾಯ್ತು. ಆಕೆ ತಳಮಳಿಸಿಕೊಂಡು “ಮೇಡಮ್ಮೊàರೇ, ದಯವಿಟ್ಟು ನಮ್ಮ ಮಗಳಿಗೆ ಇದೊಂದು ಸಲ ಪರೀಕ್ಷೆ ಬರೆಯೋದಕ್ಕೆ ಅವಕಾಶ ಮಾಡ್ಕೊಡಿ. ಪರೀಕ್ಷೆ ಬರೆಯೋದಕ್ಕೆ ಹಾಲ್ ಟಿಕೆಟ್ಟು ಕೊಡಲ್ಲ. ಕೊಡಬೇಕಾದರೆ ಮೊಬೈಲ್ ಕೊಡಿಸಬೇಕು ಅಂತೇನೋ ಹೇಳಿದ್ದೀರಂತಲ್ಲ… ಸದ್ಯ ಇವಳ ಕಾಲೇಜು ಫೀಸು ಪೂರ್ತಿ ಕಟ್ಟಿಬಿಡ್ತೀನಿ. ನಮ್ಮನೆಯೋರು ಹೋದಾಗಿನಿಂದ ಇವಳಿಗಾಗಷ್ಟೇ ನಾನು ಜೀವ ಹಿಡಿದಿರೋದು… ನಿಮ್ಮ ಕೈನೇ ಕಾಲು ಅಂತ ಹಿಡ್ಕೊತೀನಿ. ದಯವಿಟ್ಟು ಆಗಲ್ಲ ಅನ್ನಬೇಡಿ’ ಎಂದ ಆ ತಾಯಿಗೆ ಮಗಳು ಹೇಳಿದ್ದ ಸುಳ್ಳು ತಾನು ಬಯಸಿದ ಮೊಬೈಲ್ ಕೊಡಿಸದಿದ್ದರೆ (ಅವಳ ಪ್ರಕಾರ, ಕಾಲೇಜಿನಿಂದ ಸೂಚಿಸಿದಂತೆ) ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೊಡುವುದಿಲ್ಲ ಎಂಬುದು! ಕೊರಳಿಗೊಂದು ಕರಿನೂಲನ್ನಷ್ಟೇ ಕಟ್ಟಿಕೊಂಡ ಆ ತಾಯಿಯ ಸಂಕಟವನ್ನು ಅರಿಯದಷ್ಟರ ಮಟ್ಟಿಗೆ ಮಗಳನ್ನು ಮೊಬೈಲ್ ಸೆಳೆದಿದೆ ಎಂದರೆ ಏನು ಮಾಡೋಣ?
ಆರತಿ ಪಟ್ರಮೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.