ಮಣ್ಣಿನಂತಿದ್ದ ನನಗೆ ಆಕಾರ ಕೊಟ್ಟರು!
Team Udayavani, Apr 25, 2017, 3:45 AM IST
ಆರ್ಗನೈಸೇಷನ್’ ಪದ ಕಲಿತ ದಿನದಿಂದ ನಾನು ಗೋವಿಂದಯ್ಯ ಮೇಷ್ಟ್ರ ಅಚ್ಚುಮೆಚ್ಚಿನ ಶಿಷ್ಯನಾದೆ. ಶಬ್ದಕೋಶ ನೋಡುವ ವಿಧಾನವನ್ನು ನಮಗೆ ಐದನೇ ತರಗತಿಯಲ್ಲೇ ಕಲಿಸಿಕೊಟ್ಟಿದ್ದರು!
ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲಿ ಮುಗಿಸಿ ಮಾಧ್ಯಮಿಕ ಶಿಕ್ಷಣಕ್ಕಾಗಿ ಸಮೀಪದ ಮಂಡ್ಯ ಪಟ್ಟಣದ ಸರ್ಕಾರಿ ಶಾಲೆಗೆ ಸೇರಿಕೊಂಡೆ. ಅಂದಿನ ತಾಲೂಕು ಕಚೇರಿ ಪಕ್ಕದಲ್ಲಿ “ಟೌನ್ ಮಿಡ್ಲ್ ಸ್ಕೂಲ್’ ಎಂದೇ ಕರೆಯುತ್ತಿದ್ದ ಶಾಲೆ ಅದು. ಚಲುವಯ್ಯ ಎಂಬವರು ಆ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಶಿಸ್ತಿನಲ್ಲಿ ಸಿಪಾಯಿ.
ಆ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಇತ್ಯಾದಿಯಾಗಿ ಒಟ್ಟು ಆರು ಮಂದಿ ಶಿಕ್ಷಕರಿದ್ದರು. ಅವರಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದ ಗೋವಿಂದಯ್ಯ ಟೀಚರ್ ಮೊದಲ ದಿನವೇ ನನ್ನ ಮೇಲೆ ಪ್ರಭಾವ ಬೀರಿದರು. ಮೊದಲ ದಿನ ಅವರು ಪಾಠವನ್ನೇ ಮಾಡಲಿಲ್ಲ. ಅದಕ್ಕೆ ಬದಲಾಗಿ ನಮ್ಮನ್ನೆಲ್ಲಾ ಒಬ್ಬೊಬ್ಬರನ್ನೇ ನಿಲ್ಲಿಸಿ ಯಾವ ಊರು, ತಂದೆ- ತಾಯಿಗಳು ಏನು ಮಾಡುತ್ತಿದ್ದಾರೆ ಇತ್ಯಾದಿಯಾಗಿ ಪರಿಚಯ ಮಾಡಿಕೊಂಡರು. ನಮಗೆ ಅವರ ಪರಿಚಯ ಮಾಡಿಕೊಟ್ಟರು. ಅವರು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು. ಇಡೀ ಶಾಲೆಯಲ್ಲಿ ಅತ್ಯಂತ ಕಿರಿಯ ಶಿಕ್ಷಕರು ಮಾತ್ರವಲ್ಲ, ಸ್ಫೂರ್ತಿಯ ಚಿಲುಮೆಯೇ ಆಗಿದ್ದರು. ಹಾಸ್ಯ ಚಟಾಕಿ ಹಾರಿಸಿ ನಮ್ಮನ್ನು ನಗಿಸುತ್ತಿದ್ದರು. ಪಾಠ ಮಾಡುವ ಸಂದರ್ಭದಲ್ಲಿ ಪಾಠದತ್ತ ನಮ್ಮ ಗಮನ ಸೆಳೆದು ಪಾಠ ಆರಂಭಿಸುತ್ತಿದ್ದರು. ಸೊಗಸಾಗಿ ಭಾವಗೀತೆಗಳನ್ನು ಹಾಡಿ ನಮ್ಮನ್ನು ರಂಜಿಸುತ್ತಿದ್ದರು. ಅಂಥ ಶಿಕ್ಷಕರು ಇಂದು ವಿರಳರಲ್ಲೇ ವಿರಳ.
ಅವರು ಪಾಠ ಮಾಡುತ್ತಿದ್ದ ವಿಧಾನ ನಮಗೆಲ್ಲಾ ತುಂಬಾ ಹಿಡಿಸಿತ್ತು. ಇಡೀ ಪಾಠವನ್ನು ಓದಿ ಕಠಿಣ ಪದಗಳನ್ನು ಬಿಡಿಸಿ, ಬಿಡಿಸಿ ಹೇಳುತ್ತಿದ್ದರು. ಅವುಗಳಿಗೆ ಸಮಾನಾಂತರ ಕನ್ನಡ ಅರ್ಥ ಹೇಳಿ ಪ್ರತಿ ಸ್ಪೆಲ್ಲಿಂಗ್‌ಗಳನ್ನು ಮನದಟ್ಟಾಗುವಂತೆ ಒತ್ತಿ ಹೇಳುತ್ತಿದ್ದರು. ಅಂದು ಮಾಡಿದ ಪಾಠದ ಹೊಸ ಪದಗಳನ್ನು ಸ್ಪೆಲ್ಲಿಂಗ್ ಸಮೇತ ಮಾರನೇ ದಿನವೇ ಒಪ್ಪಿಸಬೇಕು. ಇಲ್ಲವಾದರೆ ಬೆತ್ತದ ಏಟು ತಪ್ಪುತ್ತಿರಲಿಲ್ಲ.
ಐದನೇ ತರಗತಿ ಮುಗಿಸಿ ಆರನೇ ತರಗತಿಗೆ ಬಂದಾಗ ಇಂಗ್ಲಿಷ್ ಪಠ್ಯದಲ್ಲಿ ವಿಶ್ವಸಂಸ್ಥೆ ಬಗ್ಗೆ ಪಾಠವಿತ್ತು. ಪಾಠ ಮುಗಿಸಿ ಒಂದು ಕಡೆಯಿಂದ ಓದಿಸಿಕೊಂಡು ಬಂದರು. ನನ್ನ ಸರದಿಯೂ ಬಂತು. ಒಂದು ಪದ ಆರ್ಗನೈಸೇಷನ್ ಉಚ್ಛಾರಣೆಯನ್ನು ತಪ್ಪಾಗಿ ಅಂದರೆ “ಆರ್ಗಜನೇಷನ್’ ಎಂದು ಉತ್ಛರಿಸಿದೆ. ಪುನಃ ಓದಿಸಿದರೂ ಅದೇ. ಅವರು ಎಷ್ಟೇ ಪ್ರಯತ್ನಪಟ್ಟರೂ ನನ್ನನ್ನು ತಿದ್ದಲಾಗಲಿಲ್ಲ. ನನ್ನ ಹತ್ತಿರ ಬಂದು ಪ್ರೀತಿಯಿಂದ ಕಿವಿ ಹಿಂಡಿ ಆ ಪದವನ್ನು ಬಿಡಿಸಿ, “ಆ… ರ್… ಗ… ನೈ… ಸೇ… ಷ… ನ್…’ ಎನ್ನುವ ಮಟ್ಟಕ್ಕೆ ನನ್ನನ್ನು ತಿದ್ದಿದರು. ಮುಂದೆ ಎಂದೆಂದಿಗೂ ಆ ಪದವನ್ನು ನಾನು ಮರೆಯಲಿಲ್ಲ. ಹೊಸ ಹೊಸ ಪದಗಳನ್ನು ಅವರು ಹಾಗೆಯೇ ತಿದ್ದಿ ತೀಡಿ ಕಲಿಸುತ್ತಿದ್ದರು. ಶಿಸ್ತಿಗೆ ಹೆಸರಾಗಿದ್ದ ಅವರು, ನಾವು ಅಶಿಸ್ತಿನಿಂದ ನಡೆದುಕೊಂಡಾಗ ವಜ್ರದಂತೆ ಕಠೊರವಾಗುತ್ತಿದ್ದರು. ಶಿಕ್ಷೆಯೂ ಇರುತ್ತಿತ್ತು. ಅದರಲ್ಲಿ ವಾತ್ಸಲ್ಯವೂ ಇರುತ್ತಿತ್ತು. ನಾವು ಸರಿಯಾಗಿ ಪಾಠ ಒಪ್ಪಿಸಿದಾಗ, ಬೆಣ್ಣೆಯಂತೆ ಕರಗುತ್ತಿದ್ದರು. ಬೆನ್ನುತಟ್ಟಿ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ನನ್ನ 32 ವರ್ಷಗಳ ಕಾಲದ ಉಪನ್ಯಾಸಕ ವೃತ್ತಿಯಲ್ಲಿ ನನ್ನ ಗುರುಗಳ ಛಾಯೆಯೇ ವ್ಯಾಪಿಸಿತ್ತು.
“ಆರ್ಗನೈಸೇಷನ್’ ಪದ ಕಲಿತ ದಿನದಿಂದ ನಾನು ಅವರ ಅಚ್ಚುಮೆಚ್ಚಿನ ಶಿಷ್ಯನಾದೆ. ರಜಾದಲ್ಲಿ ಒಮ್ಮೆ ಅವರ ಊರಾದ ನಾಗಮಂಗಲ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಹೊನ್ನಾವರಕ್ಕೆ ಕರೆದುಕೊಂಡು ಹೋಗಿದ್ದರು. ಅವರ ಊರಿನ ಪರಿಸರ ತುಂಬಾ ಚೆನ್ನಾಗಿತ್ತು. ನೀರಾವರಿ ಸೌಲಭ್ಯ ಇಲ್ಲದಿದ್ದರೂ ಹಸಿರು ತೆಂಗಿನ ತೋಟದ ಮಧ್ಯದಲ್ಲಿ ತುಂಬಾ ಪ್ರಶಾಂತ ಹಾಗೂ ಸುಂದರ ಪರಿಸರದಲ್ಲಿದ್ದ ಗ್ರಾಮವದು. ಅದೊಂದು ಅತ್ಯಂತ ಹಿಂದುಳಿದ ಗ್ರಾಮವಾಗಿತ್ತು. ಆ ಗ್ರಾಮದ ಸುತ್ತಮುತ್ತಲಿನ ರೈತರಿಗೆ ತೆಂಗಿನ ತೋಟ ಬಿಟ್ಟರೆ ಬೇರೆ ಆದಾಯದ ಮೂಲವಿರಲಿಲ್ಲ. ಆದಕಾರಣ ರೈತರ ಪರಿಶ್ರಮದ ಫಲದಿಂದ ತೆಂಗಿನ ತೋಟಗಳು ಕಂಗೊಳಿಸುತ್ತಿದ್ದವು. ಐದು, ಆರು, ಏಳು- ಈ ತರಗತಿಗಳಿಗೆ ಗೋವಿಂದಯ್ಯ ಮೇಷ್ಟ್ರೇ ಇಂಗ್ಲೀಷ್ ಬೋಧಿಸುತ್ತಿದ್ದ ಕಾರಣ, ಗ್ರಾಮೀಣ ಪ್ರದೇಶದ ನನ್ನಂಥ ಅನೇಕ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ತುಂಬಾ ಸುಲಭವಾಗಿ ಪರಿಣಮಿಸಿತ್ತು.
ಇದರಿಂದಾಗಿ ಜಿಲ್ಲಾ ಮಟ್ಟದ ಪಬ್ಲಿಕ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗಿತ್ತು. ಹೀಗಾಗಿ ನನ್ನ ಮುಂದಿನ ವ್ಯಾಸಂಗದ ಪಥವೇ ಬದಲಾಯಿತು. ಪಾಠದಲ್ಲಿ ಬರುವ ಹೊಸ ಹೊಸ ಪದಗಳಿಗೆ ಮನೆಯಲ್ಲಿ ಶಬ್ದಕೋಶದ ಸಹಾಯದಿಂದ ಅರ್ಥ ತಿಳಿದು ಸ್ಪೆಲ್ಲಿಂಗ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದನ್ನು ಕಲಿಸಿಕೊಟ್ಟರು. ಇದರಿಂದಾಗಿ ಇಂಗ್ಲಿಷ್ ಕಲಿಯಲು ಸುಲಭ ಸಾಧ್ಯವಾಯ್ತು. ಶಬ್ದಕೋಶ ನೋಡುವ ವಿಧಾನವನ್ನು ನಮಗೆ ಐದನೇ ತರಗತಿಯಲ್ಲೇ ಕಲಿಸಿಕೊಟ್ಟಿದ್ದರು ಗೋವಿಂದಯ್ಯ ಮೇಷ್ಟ್ರು
ಅವರಿಗೆ ಒಬ್ಬ ಮಗಳು, ಗಂಡುಮಕ್ಕಳಲ್ಲಿ ಒಬ್ಬ ಡಾಕ್ಟರ್ ಮತ್ತೂಬ್ಬ ಎಂಜಿನಿಯರ್ ವೃತ್ತಿಯಲ್ಲಿ ಇದ್ದಾರೆ. ಮಡದಿಯನ್ನು ಕಳೆದುಕೊಂಡ ನನ್ನ ಗುರುಗಳು ಗಂಡು ಮಕ್ಕಳು ಮತ್ತು ಮೊಮ್ಮಕ್ಕಳೊಡನೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ನಾನು ಮೈಸೂರಿಗೆ ಹೋದಾಗಲೆಲ್ಲ ಅವರನ್ನು ತಪ್ಪದೇ ಭೇಟಿ ಮಾಡಿ ಆರೋಗ್ಯ ವಿಚಾರಿಸಿಕೊಂಡು ಬರುತ್ತಿರುತ್ತೇನೆ. ಸುಮಾರು 6 ದಶಕಗಳ ನಮ್ಮ ಸಂಬಂಧ ಅಚ್ಚಳಿಯದೆ ಇನ್ನೂ ಜೀವಂತವಾಗಿದೆ.
-ಡಾ. ಕೆ. ಸಿ. ಮರಿಯಪ್ಪ, ಹೊಳೆನರಸೀಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.