ಇಲ್ಲಿದೆ ಆರೋಗ್ಯಕಾರಿ ಅವಕಾಶ!
Team Udayavani, Feb 25, 2020, 6:00 AM IST
ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸೇವಾ ಉದ್ಯಮವೆಂದರೆ ಆರೋಗ್ಯ ಸೇವಾ ಉದ್ಯಮ. ಅರ್ಥಾತ್ ಆಸ್ಪತ್ರೆ, ರೋಗ ಶುಶ್ರೂಷೆ. ಕೇವಲ ಕಟ್ಟಡ, ಉಪಕರಣ, ದಾದಿಯರು ಇದ್ದರೆ ಆಸ್ಪತ್ರೆ ನಡೆಯದು. ಇವೆಲ್ಲವನ್ನೂ ಸಮರ್ಥವಾಗಿ ಹೊಂದಿಸಿ ನಿಭಾಯಿಸುವ ಕೌಶಲ್ಯವುಳ್ಳವರು ಬೇಕು. ಇದನ್ನು ಕೈಗೊಳ್ಳುವವರೇ ಆಸ್ಪತ್ರೆ ನಿರ್ವಹಣಾ ಸಿಬ್ಬಂದಿ (ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಸ್ಟಾಫ್). ಭಾರತದ ಅರ್ಥವ್ಯವಸ್ಥೆಯಲ್ಲಿ ಗಮನಾತ್ಮಕ ಕೊಡುಗೆ ನೀಡುತ್ತಿರುವುದು, ವೈದ್ಯಕೀಯ ಕ್ಷೇತ್ರ. ವಿಮೆಯನ್ನೂ ಒಳಗೊಂಡಂತೆ ಆರೋಗ್ಯ ರಕ್ಷಣೆಯ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಪತ್ರೆ-ಕಂಪೆನಿಗಳ ನಡುವೆ ಒಪ್ಪಂದಗಳು, ವಿಲೀನಗಳು, ಸಹಭಾಗಿತ್ವಗಳು ಆಗುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಗುಣಾತ್ಮಕ ಸ್ಪರ್ಧೆಯ ಜೊತೆಗೆ ಉತ್ತಮ ಸೇವೆ ದೊರೆಯುತ್ತಿದೆ. ಇದಕ್ಕಾಗಿ ನುರಿತ ಸಿಬ್ಬಂದಿಯ ಅವಶ್ಯಕತೆಯಿದೆ. ಈ ಕಾರಣದಿಂದಲೂ ಇಲ್ಲಿ ವಿಪುಲ ಅವಕಾಶಗಳಿವೆ.
ವಿದ್ಯಾರ್ಹತೆ
ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದು ಈ ಕ್ಷೇತ್ರವನ್ನು ಪ್ರವೇಶಿಸಬಹುದು. ಆದರೆ, ಈ ಎಲ್ಲ ಹಂತದ ಶಿಕ್ಷಣಕ್ಕೂ ಪ್ರವೇಶ ಪರೀಕ್ಷೆ ಇರುತ್ತದೆ ಎಂಬುದನ್ನು ಗಮನಿಸಬೇಕು. ಅದರಲ್ಲೂ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಪ್ರವೇಶ ಪರೀಕ್ಷೆ ಕಡ್ಡಾಯ. 10 + 2 ಮುಗಿಸಿದ ಬಳಿಕ ಒಂದು ವರ್ಷದ ಆಸ್ಪತ್ರೆ ನಿರ್ವಹಣೆ ಡಿಪ್ಲೊಮಾ ಪಡೆಯಬಹುದು. ಪದವಿ ಹಂತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಬಿ.ಎಸ್‌ಸಿ ಪದವಿ ಪಡೆಯಬಹುದು. ಮುಂದುವರೆದು ಎಂ.ಬಿ.ಎ ಅಥವಾ ಎಂ.ಎಸ್.ಸಿ ಸ್ನಾತಕೋತ್ತರ ಪದವಿಯನ್ನು ಎರಡು ವರ್ಷಗಳ ಅಧ್ಯಯನದ ಮೂಲಕ ಪಡೆಯಬಹುದು.
ಕಲಿಕಾ ವಿಷಯಗಳು
ಆಸ್ಪತ್ರೆ ನಿರ್ವಹಣೆ ಕುರಿತಂತೆ ಬಹಳ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಮುಖ್ಯವಾಗಿ, ಆರೋಗ್ಯ ಕ್ಷೇತ್ರದ ಕಾನೂನುಗಳು ಅಂದರೆ ಆಸ್ಪತ್ರೆಯ ಜವಾಬ್ದಾರಿ, ರೋಗಿಯ ಹಕ್ಕುಗಳು, ಕಾನೂನು ವಿರುದ್ಧದ ವೈದ್ಯಕೀಯ ಸೇವೆ ಮತ್ತು ಚಿಕಿತ್ಸೆ (ಅಂದರೆ ಅಪರಾಧ ಎನಿಸಿಕೊಳ್ಳುವ ಸಂದರ್ಭಗಳು), ಆರೋಗ್ಯ ಸೇವಾ ಕ್ಷೇತ್ರದ ನೈತಿಕ ನಿಯಮಗಳು, ಗೌಪ್ಯತೆಯ ನಿಯಮಗಳು ಇವೆಲ್ಲವನ್ನೂ ಇಲ್ಲಿ ಕಲಿಸಲಾಗುವುದು. ಫೈನಾನ್ಸ್ (ಹಣಕಾಸು) ಮತ್ತು ಆಯವ್ಯಯಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಆಸ್ಪತ್ರೆಯ ಸಿಬ್ಬಂದಿ ನಿರ್ವಹಣೆಯನ್ನೂ ಕೂಡ ಇವರಿಗೆ ಕಲಿಸಲಾಗುವುದು. ಮಾನವ ಸಂಪನ್ಮೂಲಗಳ ಸಮರ್ಥ ಬಳಕೆ ಯಾವುದೇ ಆಸ್ಪತ್ರೆಯ ಯಶಸ್ಸಿಗೆ ಕಾರಣವಾಗುತ್ತದೆ. ಅಲ್ಲಿನ ವೈದ್ಯಕೀಯ ಸಿಬ್ಬಂದಿ, ಶುಶ್ರೂಷಾ ಸಿಬ್ಬಂದಿ, ಸಹಾಯಕ ಸಿಬ್ಬಂದಿ – ಇವರೆಲ್ಲರನ್ನು ತೂಗಿಸಿಕೊಂಡು ಹೋಗುವ ತಂತ್ರವನ್ನೂ ಈ ಅಧ್ಯಯನದಲ್ಲಿ ಕಲಿಯಬೇಕಾಗುತ್ತದೆ. ರೋಗಿಗಳ ಸೇವೆ ದಿನಾನುಕ್ರಮದಲ್ಲಿ ಸಮರ್ಥವಾಗಿ ನಡೆಯಬೇಕಾದರೆ ಸಿಬ್ಬಂದಿ ಸಂಖ್ಯೆ, ಸೇವಾ ವಿಭಾಗಗಳಿಗೆ ಅಗತ್ಯವಾದ ಸಿಬ್ಬಂದಿ, ತಾಂತ್ರಿಕ ವರ್ಗ, ಯಂತ್ರೋಪಕರಣಗಳ ಉಸ್ತುವಾರಿ ಇವೆಲ್ಲವನ್ನೂ ಇವರು ಗಮನಿಸಲು ಕಲಿತಿರಬೇಕು. ಇವಿಷ್ಟೇ ಅಲ್ಲದೆ ಹಲವು ಸಂದರ್ಭಗಳಲ್ಲಿ ಎದುರಾಗುವ ಕಾನೂನಿನ ತೊಡಕು ಅಂದರೆ ವೈದ್ಯಕೀಯ ನಿರ್ಲಕ್ಷ್ಯ, ಗ್ರಾಹಕ ರಕ್ಷಣಾ ಕಟ್ಟಳೆಗಳು ಮತ್ತು ಮಾನವ ಸಂವೇದಿ ಸವಾಲುಳ್ಳ ಅಂಗಾಂಗ ದಾನ, ದಯಾಮರಣ, ಬಾಡಿಗೆ ತಾಯ್ತನ, ಭ್ರೂಣ ಲಿಂಗ ಪತ್ತೆ ಕುರಿತ ಕಾನೂನುಗಳ ಪೂರ್ಣ ಅರಿವನ್ನು ಇವರು ಹೊಂದಿರಬೇಕು. ಸಂವಿಧಾನದಡಿಯಲ್ಲಿ ರೋಗಿಯ ರೋಗಪತ್ತೆ ಮತ್ತು ಅದರ ಕುರಿತ ಗೌಪ್ಯತಾ ನಿಯಮಗಳಿವೆ. ಅದನ್ನೂ ಒಂದು ವಿಷಯವಾಗಿ ಇಲ್ಲಿ ಬೋಧಿಸಲಾಗುವುದು.
ಕಲಿಕಾ ಸಂಸ್ಥೆಗಳು
ಡಿಪ್ಲೊಮಾ ಪಡೆಯಲು ಸರ್ಕಾರದಿಂದ ಮಾನ್ಯತೆ ಪಡೆದ ರಾಜ್ಯಗಳ ಪ.ಪೂ ಶಿಕ್ಷಣ ಮಂಡಳಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಬಹುದು. ಉನ್ನತ ಶಿಕ್ಷಣಕ್ಕೆ ಬೆಂಗಳೂರು, ಅಹಮದಾಬಾದ್ ಮತ್ತು ಕೋಲ್ಕತ್ತದ ಐಐಎಂಗಳು, ದೆಹಲಿಯ ಎಐಎಂಎಸ್, ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜು (ಪುಣೆ), ಡಾ|| ಎಂ.ಜಿ.ಆರ್. ಮೆಡಿಕಲ್ ಕಾಲೇಜು (ಚೆನ್ನೈ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್ (ಜೈಪುರ), ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸರ್ವಿಸಸ್ (ಮುಂಬೈ), ಅಪೋಲೊ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಷನ್ ಮತ್ತು ಸಿಂಬಯಾಸಿಸ್ ಸೆಂಟರ್ ಆಫ್ ಹೆಲ್ತ್ ಕೇರ್ (ಪುಣೆ) ಇವುಗಳನ್ನ ಸಂಪರ್ಕಿಸಬಹುದು.
ಕೆರಿಯರ್
ಹಾಸ್ಪಿಟಲ್ ಬ್ಯುಸಿನೆಸ್ ಮ್ಯಾನೇಜರ್ ಇಂದ ಆರಂಭಗೊಂಡು ಆಪರೇಷನ್ ಎಕ್ಸಿಕ್ಯೂಟಿವ್‌ವರೆಗೆ ವಿಭಿನ್ನ ಮಟ್ಟದ ಜವಾಬ್ದಾರಿಗಳನ್ನು ನಿರ್ವಹಿಸುವವರು ಆಸ್ಪತ್ರೆ ನಿರ್ವಹಣೆ ಪದವೀಧರರೇ. ಫುಡ್ ಅಂಡ್ ಬಿವರೇಜ್ ಮ್ಯಾನೇಜರ್, ಗೆಸ್ಟ್ ರಿಲೇಷನ್ ಮ್ಯಾನೇಜರ್, ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್, ಫ್ಲೋರ್ ಮ್ಯಾನೇಜರ್, ಸೆಂಟರ್ ಮ್ಯಾನೇಜರ್, ಪೇಷಂಟ್ ರಿಲೇಷನ್ ಎಕ್ಸಿಕ್ಯೂಟಿವ್, ಫ್ರಂಟ್ ಆಫೀಸ್ ಅಡ್ಮಿನಿಸ್ಟ್ರೇಟರ್ ಈ ಎಲ್ಲ ಹುದ್ದೆಗಳನ್ನು ಅವರು ನಿರ್ವಹಿಸಬಲ್ಲರು. ಎಲ್ಲ ಆಸ್ಪತ್ರೆಗಳಿಗೂ, ಆಸ್ಪತ್ರೆ ನಿರ್ವಹಣೆಯನ್ನು ಮಾಡಬಲ್ಲ, ಅದನ್ನೇ ಅಧ್ಯಯನ ಮಾಡಿದ ನುರಿತ ಸಿಬ್ಬಂದಿಯ ಅಗತ್ಯವಿದ್ದೇ ಇರುತ್ತದೆ. ಆರಂಭದಲ್ಲಿ ಸಣ್ಣಪುಟ್ಟ ಆಸ್ಪತ್ರೆಗಳಲ್ಲಿ ಸೇವೆಯನ್ನು ಆರಂಭಿಸಿ ಮುಂದೆ ರಿಲಯನ್ಸ್ ಲೈಫ್ ಸೈನ್ಸಸ್, ಖಖಐ ಡಯಾಗ್ನಾಸ್ಟಿಕ್ಸ್, ಫೊರ್ಟಿಸ್ ಹೆಲ್ತ್ ಕೇರ್, ಮ್ಯಾಕ್ಸ್ ಹೆಲ್ತ್ ಕೇರ್, ಅಪೊಲೊ ಹಾಸ್ಪಿಟಲ್ಸ್, ಕೇರ್ ಹಾಸ್ಪಿಟಲ್ಸ್ ಗ್ರೂಪ್, ಫಿಲಿಪ್ಸ್ ಹೆಲ್ತ್‌ಕೇರ್, ಡಾ|| ಲಾಲ್ ಪಾತ್‌ಲ್ಯಾಬ್ ಮೊದಲಾದ ಪ್ರತಿಷ್ಠಿತ ಆರೋಗ್ಯಸೇವಾ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಬಹುದು. ಒಟ್ಟಿನಲ್ಲಿ ಇದು ಈ ಶತಮಾನದ ಒಂದು ಪ್ರಮುಖ ಉದ್ಯೋಗ ಕ್ಷೇತ್ರ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ರಘು ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.