ಹೋಂಡಾ ಆಕ್ಟೀವಾ ಬೈಕ್ ಲಾಕ್ ಆದಾಗ..!
Team Udayavani, Apr 14, 2020, 10:43 AM IST
ಒಮ್ಮೆ ನನ್ನ ಗೆಳೆಯನೊಬ್ಬ, ಬೇರೆಯವರ ಹೊಂಡಾ ಆಕ್ಟೀವ್ ಬೈಕ್ ಅನ್ನು ತೆಗೆದುಕೊಂಡು ಹೋಗಿದ್ದ. ಅವನು ಬರುವ ದಾರಿಯಲ್ಲಿ ಸುಂದರವಾದ ಚೆಕ್ ಡ್ಯಾಂ, ಮಳೆಗಾಲವಾದ್ದರಿಂದ ಸದಾ ತುಂಬಿ ಹರಿಯುತ್ತಿತ್ತು. ಅದು ರಸ್ತೆ ಪಕ್ಕದಲ್ಲಿಯೇ ಇತ್ತು. ಅದರ ಸೌಂದರ್ಯಕ್ಕೆ ಮಾರು ಹೋಗದ ಜನರೇ ಇರಲಿಲ್ಲ. ಗೆಳೆಯ, ಅದನ್ನ ನೋಡಿದ್ದೇ ತಡ, ಸಾಕಷ್ಟು ಸೆಲ್ಫಿಗಳನ್ನು ತೆಗೆದು ಫೇಸ್‌ಬುಕ್‌ಗೆ ಹಾಕೋಣವೆಂದರೆ ನೆಟ್‌ವರ್ಕ್ ಇಲ್ಲ.
ಮನೆಗೊಗಿ ಅಪ್‌ಲೋಡ್ ಮಾಡಿದರಾಯಿತು ಅಂದುಕೊಂಡು, ಬೈಕ್ ಹತ್ತಿರ ಬಂದು ಇಗ್ನೇಶನ್ನೊಳಗೆ ಕೀ ಹಾಕಿದರೆ ಹೋಗುತ್ತಿಲ್ಲ. ಏನಾಗಿದೆ ಎಂದು ನೋಡಿದರೆ, ಇಗ್ನೇಶನ್ ಲಾಕ್ ಆಗಿದೆ. ಎಷ್ಟೇ ಪ್ರಯತ್ನ ಪಟ್ಟರೂ, ಲಾಕ್ ತೆಗೆಯಲು ಆಗಲಿಲ್ಲ. ಯಾರಿಗಾದರೂ ಫೋನ್ ಮಾಡೋಣ ಅಂದುಕೊಂಡರೆ, ಅಲ್ಲಿ ನೆಟ್ ವರ್ಕ್ ಸಿಗುತ್ತಿಲ್ಲ. ಅವನ ದುರದೃಷ್ಟಕ್ಕೆ, ಸುಮಾರು ಐದಾರು ತಾಸು ಕಾದರೂ ಆವೊತ್ತು ಯಾವೊಬ್ಬ ದಾರಿಹೋಕರ ಸುಳಿವಿಲ್ಲ. ಕಡೆಗೆ, ಇಳಿ
ಸಂಜೆಯಲಿ ಟಾಟಾ ಏಸ್ ವಾಹನವೊಂದು ಬಂದಾಗ, ತುಂಬಾ ಖುಷಿಗೊಂಡು ಡ್ರೈವರ್ ಬಳಿ ಎಲ್ಲಾ ವಿಷಯ ಹೇಳಿದ್ದಾನೆ. ಡ್ರೈವರ್ ಸಹ ಸಾಕಷ್ಟು ಪ್ರಯತ್ನಿಸಿದರೂ ಲಾಕ್ ಓಪನ್ ಆಗಲೇ ಇಲ್ಲ. “ಸಾರ್, ಇನ್ನೊಂದ್ ಸ್ವಲ್ಪಹೊತ್ತು ಇಲ್ಲಿಯೇ ಇದ್ದರೆ, ಕರಡಿಗಳು ಬಂದು ನಿಮ್ಮ ಬೈಕ್ ಲಾಕ್ ಓಪನ್ ಮಾಡುತ್ತವೆ, ಇಲ್ಲಿ ಕರಡಿಗಳ ಕಾಟ ಜಾಸ್ತಿ. ಬನ್ನಿ, ನಮ್ಮ ಗಾಡಿ ಮೇಲೆ ಬೈಕ್ ಹಾಕ್ಕೊಂಡು ಹೋಗೋಣ’ ಎಂದಾಗ, ಟಾಟಾ ಏಸ್‌ಮೇಲೆ ಬೈಕ್
ಹೇರಿಕೊಂಡು ಬಂದು ನಮ್ಮ ಮನೆಯ ಮುಂದೆ ನಿಲ್ಲಿಸಿದ.
ವಿಷಯ ತಿಳಿದು ನಾನು ಕೂಡ ಪ್ರಯತ್ನಿಸಿದೆ, ಆಗಲಿಲ್ಲ. ನನಗೂ ಸಹ, ಹೇಗೆ ಲಾಕ್ ಓಪನ್ ಹೇಗೆ ಮಾಡಬೇಕು ಎಂಬುದು ಗೊತ್ತಿರಲಿಲ್ಲ. ಅಲ್ಲಿಗೆ ಆಗಮಿಸಿದ ಎಲ್ಲರೂ, ತಮ್ಮ ಕೌಶಲ್ಯ ಪ್ರದರ್ಶಿಸಿ ವಿಫಲರಾದರು. ಅಷ್ಟರಲ್ಲಿ, ಈ ವಿಷಯ ತಿಳಿದು ಹತ್ತು ವರ್ಷದ ಹುಡುಗನೊಬ್ಬ- “ಈ ಕೀಯನ್ನ ಉಲ್ಟಾ ಮಾಡಿ ತಿರುವಿದರೆ ಲಾಕ್ ಓಪನ್ ಆಗುತ್ತೆ, ನೆನಪಿಟ್ಟುಕೊಳ್ಳಿ’ ಎಂದಾಗ, ಅಲ್ಲಿದ್ದ ಜನ ನಮ್ಮನ್ನು ನೋಡಿ ಮುಸಿಮುಸಿ ನಗುತ್ತಿದ್ದರು. ಈಗ ಯಾವುದೇ ಹೋಂಡಾ ಆಕ್ಟೀವಾ ಬೈಕ್‌ಕಂಡರೂ, ಈ ಲಾಕ್ ರಾಮಾಯಣ ಕಣ್ಣ ಮುಂದೆ ಬಂದು, ನಗುಬರುತ್ತದೆ.
ವೀರೇಶ್ ಮಾಡ್ಲಾಕನಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.